ಮೊದಲರ್ಧ ಜಾಲಿ! ಆಮೇಲೆ ಖಾಲಿ!! ಇದು ‘ಮದ್ವೆ ಭಾಗ್ಯ’ ಕಾಣದ ಬ್ಯಾಚ್ಯುಲರ್ ಹುಡುಗನ ನಗು ತುಂಬಿದ ಬೇಸರ…

ಚಿತ್ರ ವಿಮರ್ಶೆ- ವಿಜಯ್ ಭರಮಸಾಗರ

ರೇಟಿಂಗ್: 2.5 / 5

ಚಿತ್ರ : ಮಿಸ್ಟರ್ ಬ್ಯಾಚ್ಯುಲರ್
ನಿರ್ದೇಶನ : ನಾಯ್ಡು
ನಿರ್ಮಾಣ : ಶ್ರೀನಿವಾಸ್, ಹನುಮಂತ ರಾವ್, ಸ್ವರ್ಣಲತ
ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ನಿಮಿಕಾ ರತ್ನಾಕರ್, ಚಿಕ್ಕಣ್ಣ, ಗಿರಿ, ಅಯ್ಯಪ್ಪ, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಇತರರು.

ಇದೊಂದು ಮದುವೆ ಆಗಬೇಕು ಅಂತ ಚಿಕ್ಕಂದಿನಿಂದಲೂ ಮೂರು ಹೊತ್ತು ಹಪಹಪಿಸುವ ಹುಡುಗನ ಕಥೆ ಮತ್ತು ವ್ಯಥೆ. ಮದುವೆ ಅಂದರೆ ಬದುಕಿನ ದೊಡ್ಡ ಹಬ್ಬ ಅಂದುಕೊಂಡ ಅವನು ವಯಸ್ಸಿಗೆ ಬಂದಮೇಲೆ, ಹುಡುಗಿ ನೋಡಿ ಮದ್ವೆ ಆಗೋ ಕನಸು ಕಾಣ್ತಾನೆ , ಒಂದಲ್ಲ, ಎರಡಲ್ಲ, ಬರೋಬ್ಬರಿ ಮುವತ್ತು ಹುಡುಗಿಯರೂ ಅವನನ್ನು ರಿಜೆಕ್ಟ್ ಮಾಡ್ತಾರೆ! ಮುವತ್ತೊಂದನೇ ಹುಡುಗಿ ಕೈ ಹಿಡಿಯದೇ ಹೋದರೆ, ಲೈಫಲ್ಲಿ ‘ಮದುವೆ ಭಾಗ್ಯ’ವೇ ಇಲ್ಲ. ಅಂಥಾ ಹೊತ್ತಲ್ಲಿ ಏನೆಲ್ಲಾ ಪ್ರಯಾಸ ಪಡುತ್ತಾನೆ ಅನ್ನೋದು ಕಥೆ ಮತ್ತು ವ್ಯಥೆ.

ಒಂದೇ ಮಾತಲ್ಲಿ ಹೇಳೋದಾದರೆ, ಮೊದಲರ್ಧ ಜಾಲಿ ಜಾಲಿ. ದ್ವಿತಿಯಾರ್ಧ ಖಾಲಿ ಖಾಲಿ! ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಯೋಚನಾಲಹರಿಯೂ ಸಖತ್. ಜಾಲಿಯಾಗಿಯೇ ಸಾಗುವ ಬ್ಯಾಚ್ಯುಲರ್ ಸ್ಟೋರಿ ದ್ವಿತಿಯಾರ್ಧ ಬಳಿಕ ಕೊಂಚ ವೇಗ ಕಳೆದುಕೊಳ್ಳುತ್ತದೆ. ಆರಂಭದಿಂದ ಮಧ್ಯಂತರವರೆಗೆ ಬ್ಯಾಚ್ಯುಲರ್ ಪಡುವ ಪರಿಪಾಟಿಲು ನೋಡುಗನಿಗೆ ನಗು ಎಬ್ಬಿಸುತ್ತಾದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಸೀಟಿಗೆ ಒರಗುವಂತೆ ಮಾಡುತ್ತೆ. ಮೊದಲರ್ಧದ ಬಿಗಿ ಹಿಡಿತ ಕೊನೆಯವರೆಗೂ ಇದ್ದಿದ್ದರೆ, ಬ್ಯಾಚ್ಯುಲರ್ ಗೆ ಜೈ ಎನ್ನಬಹುದಿತ್ತು. ಜಾಲಿಯಾಗಿ ಸಾಗುವ ಮಿಸ್ಟರ್ ಬ್ಯಾಚ್ಯುಲರ್ ಗೆ ನಿರ್ದೇಶಕರು ‘ರಾ’ ಫೀಲ್ ಕೊಡುವ ನೆಪದಲ್ಲಿ ಸ್ವಾದ ಹದಗೆಡಿಸಿದ್ದಾರೆ. ಕಥೆ ತೀರಾ ಹೊಸದೇನಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಈ ಬಗೆಯ ಸಿನಿಮಾಗಳು ಬಂದಿವೆ. ಆದರೂ ಕನ್ನಡಕ್ಕೆ ಫ್ರೆಶ್ ಥಾಟ್ ಎನಿಸುವಂತೆ ನಿರ್ದೇಶಕರ ಪ್ರಯತ್ನ ಅಷ್ಟಾಗಿ ರುಚಿಸಿಲ್ಲ.

ಮೊದಲರ್ಧದ ಸಿನಿಮಾದಲ್ಲಿ ಯಾವುದೇ ತಪ್ಪು ಕಾಣಸಿಗಲ್ಲ. ಕಥೆ ಸಾಗುವ ಪರಿ, ಘಟಿಸುವ ಹಾಸ್ಯ ಸನ್ನಿವೇಶ, ಮಾತು, ಹಾಡು, ಕುಣಿತ ಬರುವ ಪಾತ್ರಗಳ ತೊಳಲಾಟ, ಪೀಕಲಾಟವನ್ನು ತುಂಬಾ ಚೆನ್ನಾಗಿಯೇ ಕಟ್ಟಿಕೊಡಲಾಗಿದೆ. ಅದರೆ, ಅದೇ ವೇಗ ಕೊನೆಯವರೆಗೂ ಇದ್ದಿದ್ದರೆ ಬ್ಯಾಚ್ಯುಲರ್ ಕಷ್ಟವಾಗುವ ಬದಲು ಇಷ್ಟವಾಗುತ್ತಿದ್ದ. ಸರಾಗವಾಗಿ ಸಾಗುವ ಕಥೆ, ದ್ವಿತಿಯಾರ್ಧ ಟ್ರ್ಯಾಕ್ ಚೇಂಜ್ ಆಗಿ ಎಲ್ಲೆಲ್ಲೋ ಹೋಗಿರುವುದರಿಂದ ನಗಾಡಿಕೊಂಡಿದ್ದ ನೋಡುಗ ಆ ನಗುವ ಗುಂಗಿಂದ ಹೊರಬಂದು ಕೊಂಚ ಗೊಂದಲಕ್ಕೀಡಾಗುತ್ತಾನೆ. ಯಾಕೆ, ಏನು ಅಂತ ಸಿನಿಮಾದಲ್ಲೇ ನೋಡಬೇಕು.

ಕಥೆ ಇಷ್ಟು…

ಆ ಹುಡುಗ ಚಿಕ್ಕ ವಯಸ್ಸಲ್ಲಿ ಮದುವೆ ಅಂದ್ರೆ ಏನು ಅಂತ ತನ್ನ ತಾಯಿ ಬಳಿ ಕೇಳ್ತಾನೆ. ಅದೊಂದು ಹಬ್ಬ ಅಂತಾಳೆ ಅಮ್ಮ. ಯುಗಾದಿ, ದೀಪಾವಳಿ ರೀತಿಯ ಹಬ್ಬವೇ ಅಂತಾನೆ ಮಗ. ಅವು ವರ್ಷಕ್ಕೊಮ್ಮೆ ಬರುವ ಹಬ್ಬ.‌ಮದ್ವೆ ಬದುಕಿನದ್ದಕ್ಕೂ ಇರುವ ಹಬ್ಬ ಅಂತಾಳೆ ಅಮ್ಮ. ಇಷ್ಟು ಹೇಳಿದ್ದೇ ತಡ, ಅವನು ಮನೆಯಲ್ಲಿ ಮದ್ವೆ ಮಾಡಿಸಿ ಅಂತ ಸದಾ ಗಂಟು ಬೀಳ್ತಾನೆ. ಮದ್ವೆ ಅಗಬೇಕು ಅನ್ನೋದೇ ಅವನ ಕನಸು. ದೊಡ್ಡವನಾದ ಮೇಲೂ ಮದ್ವೆ ಕನಸು ಹೆಚ್ಚಾಗುತ್ತೆ. ಮನೇಲೂ ಹುಡುಗಿ ನೋಡಲು ಶುರು ಮಾಡ್ತಾರೆ. ಅವನನ್ನು ನೋಡಿದವರೆಲ್ಲ ರಿಜೆಕ್ಟ್ ಮಾಡ್ತಾರೆ. ಈ ನಡುವೆ ಒಬ್ಬ ಹುಡುಗಿ ಮದ್ವೆಗೂ ಮುನ್ನ ‘ಅನುಭವ’ ಪಡೆದು ಬಂದರೆ ಮದ್ವೆ ಆಗ್ತೀನಿ. ನಿನ್ನ ವರ್ಜಿನಿಟಿ ಕಳ್ಕೊಂಡ್ ಬಾ ಅಂತ ಸವಾಲು ಹಾಕ್ತಾಳೆ. ಅವಳು ಹಾಗೆ ಹೇಳೋದೇಕೆ, ಮುಂದೆ ಅವನು ವರ್ಜಿನಿಟಿ ಕಳ್ಕೋತ್ತಾನಾ, ಮದ್ವೆ ಆಗುತ್ತೋ ಇಲ್ವೋ ಅನ್ನೋದೇ ಸಸ್ಪೆನ್ಸ್.

ಯಾರು ಹೇಗೆ?

ಡಾರ್ಲಿಂಗ್ ಕೃಷ್ಣ, ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮದ್ವೆ ಗೂ ಮುನ್ನ ತಾನು ವರ್ಜಿನಿಟಿ ಕಳ್ಕೊಳ್ಳಲು ಪರದಾಡುವ ಹುಡುಗನಾಗಿ ಗಮನಸೆಳೆಯುತ್ತಾರೆ. ನಗಿಸುವಲ್ಲಿ ಸಫಲ. ಡ್ಯಾನ್ಸ್, ಫೈಟ್ ನಲ್ಲೂ ಓಕೆ.
ಮಿಲನ ನಾಗರಾಜ್ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ನಿಮಿಕಾ ರತ್ನಾಕರ್ ಅವರ ಅಂದವಷ್ಟೇ ಇಲ್ಲಿ ಹೈಲೆಟ್. ಚಿಕ್ಕಣ್ಣ, ಗಿರಿ ಇರುವ ಸಮಯದಲ್ಲಿ ಒಳ್ಳೇ ಸ್ಕೋರ್ ಮಾಡಿದ್ದಾರೆ. ಅಯ್ಯಪ್ಪ ರಗಡ್ ಲುಕ್ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಅಲ್ಪ ಸಮಯದಲ್ಲೂ ಅಬ್ಬರಿಸಿದ್ದಾರೆ. ಪವಿತ್ರಾ ಲೋಕೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿವೆ.

ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಒಂದು ಹಾಡು ಗಮನ ಸೆಳೆಯುತ್ತೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ರೇಜಿಮೈಂಡ್ಸ್ ಕತ್ತರಿ ಕೆಲಸ ಚಿತ್ರದ ವೇಗ ಹೆಚ್ಚಿಸಿದೆ. ಅವರ ಕ್ಯಾಮೆರಾ ಕೈಚಳಕ ಬ್ಯಾಚ್ಯಲರ್ ಲೈಫ್ ಗೆ ಸಾಥ್ ಕೊಟ್ಟಿದೆ.

Related Posts

error: Content is protected !!