ಸಿಂಪಲ್ ಸುನಿ ಸಿನಿಮಾಗೆ ವಿನಯ್ ರಾಜಕುಮಾರ್ ಹೀರೋ: ಸುನಿಯ ಸರಳ ಪ್ರೇಮಕಥೆಯಲ್ಲಿ ದೊಡ್ಮನೆ ಹುಡುಗ…

ನಿರ್ದೇಶಕ ಸುನಿ ಸಿನಿಮಾ ಮಾಡ್ತಾರೆ ಅಂದರೆ, ಅಲ್ಲೊಂದು ವಿಶೇಷತೆ ಇರುತ್ತೆ. ಸದಾ ಹೊಸ ವಿಷಯವನ್ನೇ ಆಯ್ಕೆ ಮಾಡಿಕೊಂಡು ತಮ್ಮದೇ ಶೈಲಿಯ ಸಿನಿಮಾ ಮಾಡುತ್ತ ಬಂದಿರುವ ಸುನಿ, ಈಗಾಗಲೇ ಸಕ್ಸಸ್ ಫುಲ್ ನಿರ್ದೇಶಕ. ಸ್ಟಾರ್ ನಟರಿಗೂ ಸೈ ಹೊಸಬರಿಗೂ ಸೈ ಸಿನಿಮಾ ಮೂಲಕ ಹೊಸತನ ಕಟ್ಟಿಕೊಡಲು ಸದಾ ಹಪಹಪಿಸುವ ನಿರ್ದೇಶಕ. ಈ ಬಾರಿಯೂ ಅವರು ಮತ್ತೊಂದು ಸರಳ ಪ್ರೇಮಕಥೆ ಜೊತೆ ಬರುತ್ತಿದ್ದಾರೆ. ಅವರ ಸಿನಿಮಾ ನಾಯಕರಾಗಿ ವಿನಯ್ ರಾಜಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕುರಿತು ಒಂದು ವರದಿ

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಿರ್ದೇಶಕ ಸಿಂಪಲ್ ಸುನಿ ಹೊಸದೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಿಂಪಲ್ ಸುನಿ ಮುಂದಿನ ಚಿತ್ರ ರೋಮ್ಯಾಂಟಿಕ್ ಸಬ್ಜೆಕ್ಟ್ ಒಳಗೊಂಡಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ವಿನಯ್ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಇಬ್ಬರ ಕಾಂಬಿನೇಶನ್ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಬರೆದು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಚಿತ್ರದ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳೋದಾಗಿ ತಿಳಿಸಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ ‘ಪೆಪೆ’, ‘ಗ್ರಾಮಾಯಣ’, ‘ಅದೊಂದಿತ್ತು ಕಾಲ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಬಾರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಉಡುಗೊರೆ ನೀಡೋಕೆ ವಿನಯ್ ರಾಜ್ ಕುಮಾರ್ ಕೂಡ ರೆಡಿಯಾಗಿದ್ದಾರೆ.

ಅಂದ್ಹಾಗೆ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ಮೊದಲ ಚಿತ್ರಕ್ಕೆ ಮೈಸೂರು ರಮೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಎಂದಿನಂತೆ ಸುನಿ ಈ ಸಿನಿಮಾದಲ್ಲೂ ನುರಿತ ತಂತ್ರಜ್ಞರ ಜೊತೆ ಕೆಲಸ ಮಾಡುತ್ತಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನವಿದೆ. ಇಲ್ಲಿ ವಿಶೇಷ ಹಾಡುಗಳು ಸಿನಿಮಾದ ಭಾಗ. ಇನ್ನು ಸಭಾ ಛಾಯಾಗ್ರಾಹಣವಿರಲಿದೆ.

Related Posts

error: Content is protected !!