Categories
ಸಿನಿ ಸುದ್ದಿ

ಇದು ಕಡಲ ತೀರದ ಹಾಡು! ಸಮಯವೇ ಹಾಡಿಗೆ ಭರಪೂರ ಮೆಚ್ಚುಗೆ…

ಶೀರ್ಷಿಕೆಯ ಮೂಲಕವೇ ಮನೆಮಾತಾಗಿರುವ “ಕಡಲ ತೀರದ ಭಾರ್ಗವ” ಚಿತ್ರಕ್ಕಾಗಿ ನಾಗೇಂದ್ರಪ್ರಸಾದ್ ಬರೆದಿರುವ “ಸಮಯವೇ” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಹಾಡಿರುವ, ಕರಾವಳಿಯ ಅದ್ಭುತ ಪರಿಸರ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

“ಕಡಲ ತೀರದ ಭಾರ್ಗವ” ಎಂದು ಹಿರಿಯ ಸಾಹಿತಿ ಶಿವರಾಮ ಕಾರಂತರನ್ನು ಕರೆಯುತ್ತಾರೆ‌. ಅದರೆ ನಮ್ಮ ಚಿತ್ರದ ಕಥೆ ಅವರ ಬಗ್ಗೆ ಅಲ್ಲ. ಚಿತ್ರದಲ್ಲಿ ನಾಯಕನ ಹೆಸರು ಭಾರ್ಗವ. ನಾನು ಕಡಲತೀರವನ್ನು ಮನುಷ್ಯನ ಮನಸ್ಸಿಗೆ ಹೋಲಿಸುತ್ತೇನೆ. ಪಟೇಲ್ ವರುಣ್ ರಾಜು ಭಾರ್ಗವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಗೌಡ ನಾಯಕನಾಗಿ, ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್ ಸಿ.ಜೆ ಸಂಗೀತ ನೀಡಿರುವ ಆರು ಹಾಡುಗಳ ಪೈಕಿ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ, ಜನಪ್ರಿಯವಾಗಿದೆ. ಫೆಬ್ರವರಿ 13 ಟ್ರೇಲರ್ ಬರಲಿದೆ. ಅದೇ ದಿವಸ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ದೇಶಕ ಪನ್ನಗ ಸೋಮಶೇಖರ್.

ಮದವೆ ಮಾಡಿ ನೋಡು. ಮನೆ ಕಟ್ಟಿ ನೋಡು ‌ಎಂದು ಹೇಳುತ್ತಾರೆ. ಹಾಗೆ ಸಿನಿಮಾ ಮಾಡುವುದು ಸಹ ಅಷ್ಟು ಸುಲಭವಲ್ಲ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ, ನಾನು ಹಾಗೂ ವರುಣ್ ಪಟೇಲ್ ರಾಜು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ – ನಾಯಕ ಭರತ್ ಗೌಡ.

ಕೊರೋನ ಪೂರ್ವದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿದ್ದ ರೀತಿಗೂ ಹಾಗೂ ಈಗಿನ ರೀತಿಗೂ ಬದಲಾವಣೆ ಇದೆ. ಈಗ ವಾರಕ್ಕೆ ಸಾಕಷ್ಟು ಚಿತ್ರಗಳು ಬರುತ್ತಿದೆ. ಅದರ ನಡುವೆ ನಮ್ಮ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಜನರು ಬರುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಚಾರ ಆರಂಭಿಸಿದ್ದೇವೆ. ಉತ್ತಮ ಕಂಟೆಂಟ್ ವುಳ್ಳ ಚಿತ್ರ ಮಾಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಬೇಕು ಎನ್ನುತ್ತಾರೆ ನಿರ್ಮಾಪಕ ಹಾಗೂ ಭಾರ್ಗವ ಪಾತ್ರಧಾರಿ ಪಟೇಲ್ ವರುಣ್ ರಾಜು.

ಚಿತ್ರದ ಹಾಡುಗಳ ಬಗ್ಗೆ ಅನಿಲ್ ಸಿ ಜೆ ಮಾಹಿತಿ ನೀಡಿದರು. ಅನೇಕ ಕಲಾವಿದರು ಹಾಗೂ ತಂತ್ರಜ್ಞರು “ಕಡಲ ತೀರದ ಭಾರ್ಗವ” ಸಿನಿಮಾ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಮಾರ್ಚ್ ನಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್: ಇದು ಕಿರುತೆರೆ ಮಂದಿಯ ಕ್ರಿಕೆಟ್ ಆಟ…

ಹಿರಿಯ ಕಲಾವಿದರು, ತಂತ್ರಜ್ಞರ ಬದುಕಿಗೆ ಆಸರೆಯಾಗಬೇಕೆನ್ನುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಟೆಲಿವಿಷನ್ ಪ್ರಿಮಿಯರ್ ಲೀಗ್ -2 ಲೋಗೋ ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸಿ ಆ ಬಳಿಕ ಆ ತಂಡಗಳ ಮಾಲೀಕರು ಹಾಗೂ ಅಂಬಾಸಿಡರ್ ಗಳ ಸಮ್ಮುಖದಲ್ಲಿ ಲೋಗೋ ಬಿಡುಗಡೆ ಮಾಡಲಾಯಿತು.

ಎನ್ 1 ಕ್ರಿಕೆಟ್ ಅಕಾಡೆಮಿಯ, ಟೆಲಿವಿಷನ್ ಪ್ರಿಮಿಯರ್ ಲೀಗ್ ನ ಆಯೋಜಕರಾದ ಸುನೀಲ್ ಕುಮಾರ್ ಅವರು ಮಾತನಾಡಿ, “ಕಳೆದ ಸೀಸನ್ ನಂತೆ ಈ ಸೀಸನ್ ನಲ್ಲೂ ಎಲ್ಲಾ ಮಾಲೀಕರು ನಮ್ಮೊಂದಿಗೆ ಸಹಕರಿಸಿದ್ದಾರೆ. 4ನೇ ತಾರೀಖು ಆಟಗಾರರ ಹರಾಜು ಪ್ರಕ್ರಿಯೆ ಇರುತ್ತದೆ. ಆ ಬಳಿಕ ಜೆರ್ಸಿ ಲಾಂಚ್ ಇರುತ್ತದೆ.

4 ದಿನ ಪಂದ್ಯಾವಳಿ ನಡೆಯುತ್ತದೆ. ಫೈನಲ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ 4 ಲಕ್ಷ ನಗದು ಬಹುಮಾನ ಹಾಗೂ ‌ಮ್ಯಾನ್ ಆಫ್ ದಿ ಸಿರೀಸ್ ಗೆ ಬೈಕ್ ಇರುತ್ತದೆ. ಪ್ರತಿ ಪಂದ್ಯಕ್ಕೂ‌ ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪಡೆದವರಿಗೆ ಕ್ಯಾಶ್ ಪ್ರೈಸ್ ಕೂಡ ಇರುತ್ತದೆ. ಮುಂದಿನ ದಿನಗಳಲ್ಲಿ ಪಂದ್ಯಾವಳಿಯ ದಿನಾಂಕವನ್ನು ಹೇಳುತ್ತೇನೆ ಎಂದರು.

ಪ್ರತಿ ತಂಡದಲ್ಲೂ ಇಬ್ಬರು ಅಂಬಾಸಿಡರ್ ಗಳಿರುತ್ತಾರೆ. ರಿವ್ಯೂ ಸಿಸ್ಟಂ, ಎಲ್ ಬಿಡಬ್ಲ್ಯೂ ಇರುತ್ತದೆ.12 ಓವರ್ ನ ಮ್ಯಾಚ್ ಆಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗಿರುತ್ತದೆ ಹಾಗೆಯೇ ನಮ್ಮಲ್ಲೂ ಬಹುತೇಕ ಎಲ್ಲಾ ವ್ಯವಸ್ಥೆಗಳಿರುತ್ತದೆ ಎಂದರು.

ಎಂ.ಎಸ್‌.ಪಾಳ್ಯದ ಬಳಿಯಿರುವ ಅಶೋಕ್ ಇಂಟರ್ ನ್ಯಾಶನಲ್ ಮೈದಾನದಲ್ಲಿ ಪಂದ್ಯಗಳು ನಡೆಯುತ್ತದೆ. ಒಂದು ತಂಡದಲ್ಲಿ 13 ಸದಸ್ಯರಿರುತ್ತಾರೆ. ಪಂದ್ಯಗಳ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ‌ಇರುತ್ತದೆ ಎಂದರು.

ಫೈನಲ್ ದಿನ ಅಪ್ಪು ಅವರ ಹಾಡುಗಳ ಕಾರ್ಯಕ್ರಮವಿರುತ್ತದೆ. ಅದೇ ದಿನ ನಾವು ಈ ಬಾರಿ ಯಾವ ಕಲಾವಿದರಿಗೆ ಆರ್ಥಿಕವಾಗಿ ನೆರವಾಗುತ್ತೇವೆ ಎನ್ನುವುದನ್ನು ಹೇಳುತ್ತೇವೆ ಎಂದು ಆಯೋಜಕ ಸುನೀಲ್ ಕುಮಾರ್ ” ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2″ರ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.

Categories
ಸಿನಿ ಸುದ್ದಿ

ಖೆಯೂಸ್ ಫೆಬ್ರವರಿ 17ಕ್ಕೆ ರಿಲೀಸ್: ಇದು ಸಸ್ಪೆನ್ಸ್ ಥ್ರಿಲ್ಲರ್ ಕಥೆ…

ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ಯಶಸ್ವಿಯಾಗುತ್ತಿದೆ. ಉತ್ತಮ ಕಂಟೆಂಟ್ ವುಳ್ಳ “ಖೆಯೊಸ್” ಚಿತ್ರ ಕೂಡ ಇದೇ ಫೆಬ್ರವರಿ 17 ರಂದು ತೆರೆಗೆ ಬರುತ್ತಿದೆ.

ನಾನು ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. “ಖೆಯೊಸ್” ಅಂದರೆ ಮನುಷ್ಯ ಮನಸ್ಸಿನಲ್ಲಾಗುವ ಗೊಂದಲ. ಇದು ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ. ನಾಯಕ ಅನಿರೀಕ್ಷಿತವಾಗಿ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಆತ ತನ್ನ ಜಾಣ್ಮೆಯಿಂದ ಹೇಗೆ ಆ ಸಮಸ್ಯೆಯಿಂದ ಪಾರಾಗುತ್ತಾನೆ ಎಂಬುದು ಕಥಾಹಂದರ. ನಾಯಕನಾಗಿ ಅಕ್ಷಿತ್ ಶಶಿಕುಮಾರ್, ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.

THE BLACK PEBBLE ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೇ 17ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಜಿ.ವಿ.ಪ್ರಸಾದ್ ಮಾಹಿತಿ ನೀಡಿದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಕಥೆ ಹೇಳುವಾಗ ನಾನು ಗಡ್ಡ ಬಿಟ್ಡಿದೆ. ನಮ್ಮ ಪಾತ್ರಕ್ಕೆ ಈ ರೀತಿಯ ಗೆಟಪ್ ಬೇಕಿತ್ತು ಎಂದರು.‌ ಎಂ ಬಿ ಬಿ ಎಸ್ ಓದುತ್ತಿರುವ ಹುಡುಗನ ಪಾತ್ರ ನನ್ನದು. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಮ್ಮ ತಂದೆ ಕೂಡ ಇದರಲ್ಲಿ ನಟಿಸಿದ್ದಾರೆ ಎಂದು ಅಕ್ಷಿತ್ ಶಶಿಕುಮಾರ್ ತಿಳಿಸಿದರು.

“ಖೆಯೊಸ್” ಎಂದರೆ ಮನಸ್ಸಿನಲ್ಲಾಗುವ ಅಸ್ತವ್ಯಸ್ತ, ಗೊಂದಲ ಇತ್ಯಾದಿ. ನಾನು ಕೂಡ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಅಕ್ಷಿತ್ ಅವರು ದೊಡ್ಡ ಹೀರೊ ಮಗ ಅಂತ ಏನು ಇಲ್ಲದೆ, ಎಲ್ಲರೊಂದಿಗೆ ಬೆರೆಯುವ ಗುಣ ಇಷ್ಟವಾಯಿತು ಎಂದು ನಾಯಕಿ ಅದಿತಿ ಪ್ರಭುದೇವ ಹೇಳಿದರು.

ನಿರ್ದೇಶಕ ಜಿ.ವಿ.ಪ್ರಸಾದ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು ಎಂದರು ನಿರ್ಮಾಪಕರಾದ ಪಾರುಲ್ ಅಗರವಾಲ್ ಹಾಗೂ ಡಾ. ಹೇಮಚಂದ್ರ ರೆಡ್ಡಿ.

ಚಿತ್ರದಲ್ಲಿ ನಟಿಸಿರುವ ಆರ್.ಕೆ.ಚಂದನ್, ಶಿವಾನಂದ್ ತಮ್ಮ ಪಾತ್ರದ ಬಗ್ಗೆ ಹಾಗೂ ವಿಜಯ್ ಹರಿತ್ಸ ಸಂಗೀತದ ಬಗ್ಗೆ ಮಾತನಾಡಿದರು. ಬೆಂಗಳೂರು ಕುಮಾರ್ ಈ ಚಿತ್ರದ ವಿತರಕರು.

Categories
ಸಿನಿ ಸುದ್ದಿ

ಹೊಂದಿಸಿ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್: ಸಿನಿಮಾ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಕೆ-ಫೆ.10ಕ್ಕೆ ಚಿತ್ರ ಬಿಡುಗಡೆ…

ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನ ಹೊಂದಿಸಿ ಬರೆಯಿರಿ ಸಿನಿಮಾ ಫೆಬ್ರವರಿ 10ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ‘ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಇತರರು ಇದ್ದಾರೆ.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, ‘ಹೊಂದಿಸಿ ಬರೆಯಿರಿ’ ಎಂದಾಗ ನೆನಪಾಗೋದು ಬಾಲ್ಯ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐದು ಜನ ಸ್ನೇಹಿತರ ಹನ್ನೆರಡು ವರ್ಷದ ಜರ್ನಿ ಈ ಚಿತ್ರದಲ್ಲಿದೆ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಈ ಜರ್ನಿಯನ್ನು ಒಳಗೊಂಡಿದೆ. ತುಂಬಾ ಜನಕ್ಕೆ ಈ ಸಿನಿಮಾ ಕನೆಕ್ಟ್ ಆಗುತ್ತೆ. ಈ ಚಿತ್ರದ ಟೈಟಲ್ ನೀಡಿದ್ದು ಮಾಸ್ತಿ ಸರ್. ನನಗೆ ಈ ಚಿತ್ರ ಹೊಸತು. ಇಲ್ಲಿ ನಟಸಿರೋರೆಲ್ಲ ಅನುಭವಿಗಳು ಆದ್ದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ಕೆಲಸ ಆರಂಭಿಸಿದೆವು. ಫೆಬ್ರವರಿ10ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಟ ಪ್ರವೀಣ್ ತೇಜ್ ಮಾತನಾಡಿ, ನಮ್ಮ ಚಿತ್ರದ ನಿಜವಾದ ನಾಯಕ ನಿರ್ದೇಶಕ ಹಾಗೂ ನಿರ್ಮಾಪಕ ರಾಮೇನಹಳ್ಳಿ ಜಗನ್ನಾಥ್. ಒಂದೊಳ್ಳೆ ತಂಡವನ್ನು ಕಟ್ಟಿಕೊಂಡು ಎಲ್ಲರನ್ನೂ ನಿಭಾಯಿಸಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಅನುಭವವನ್ನು ಈ ಸಿನಿಮಾ ನೀಡಿದೆ ಎಂದರು.

ನಟಿ ಭಾವನ ರಾವ್ ಮಾತನಾಡಿ, ಹೊಂದಿಸಿ ಬರೆಯಿರಿ ಕಥೆ ಕೇಳಿದಾಗ ಸಿಂಪಲ್ ಕಥೆ ಬಟ್ ಇದರಲ್ಲಿ ಬರುವ ಪಾತ್ರಗಳು ತುಂಬಾ ಕಾಂಪ್ಲಿಕೇಟ್ ಅನಿಸ್ತು. ನಮ್ಮ ಜೀವನದ ಹಾಗೆ ಕೆಲವು ಸನ್ನಿವೇಶಗಳಿಂದ ನಾವು ಜೀವನವನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆ. ಚಿತ್ರದಲ್ಲಿ ನಾನು ಭೂಮಿಕ ಪಾತ್ರ ನಿರ್ವಹಿಸಿದ್ದೇನೆ. ಈ ಸಿನಿಮಾ ತುಂಬಾ ಜನಕ್ಕೆ ಕನೆಕ್ಟ್ ಆಗುತ್ತೆ. ನಿರ್ದೇಶಕರು ಈ ಸಿನಿಮಾ ಬಗ್ಗೆ ಆರಂಭದಿಂದಲೂ ತುಂಬಾ ಕ್ಲಿಯರ್ ಆಗಿದ್ದರು ಇಂತಹ ಬ್ಯೂಟಿಫುಲ್ ಸಿನಿಮಾ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಎಂದರು.

ನಟ ಶ್ರೀ ಮಹದೇವ್ ಮಾತನಾಡಿ ಹೊಂದಿಸಿ ಬರೆಯಿರಿ ಎಂದಾಗ ಬಾಲ್ಯ ನೆನಪಾಗುತ್ತೆ. ಆದ್ರೆ ಕೇವಲ ಬಾಲ್ಯ ಅಲ್ಲ ಜೀವನ ಹೇಗೆ ನಡೀತಿದೆ, ನಾವು ಹೇಗಿರಬೇಕು. ಚಿಕ್ಕ ತಪ್ಪು ಎಷ್ಟು ದೊಡ್ಡದಾಗುತ್ತೆ ಎಲ್ಲವೂ ಈ ಸಿನಿಮಾದಲ್ಲಿ ರಿಯಲೈಜ್ ಆಗುತ್ತೆ. ಇಡೀ ಸಿನಿಮಾವನ್ನು ಮಾತಲ್ಲಿ ಹೇಳೋಕಾಗಲ್ಲ ಅಷ್ಟು ಡೆಪ್ತ್ ಆಗಿದೆ ಈ ಚಿತ್ರದ ಕಾನ್ಸೆಪ್ಟ್. ನನಗೆ ಈ ಚಿತ್ರ ತುಂಬಾ ಸ್ಪೆಶಲ್ ಎಂದರು.

ನಟಿ ಐಶಾನಿ ಶೆಟ್ಟಿ ಮಾತನಾಡಿ ಹೊಂದಿಸಿ ಬರೆಯಿರಿ ಸಿನಿಮಾ ಒಪ್ಪಿಕೊಳ್ಳಲು ಮೊದಲ ಕಾರಣ ಈ ಸಿನಿಮಾ ಕಥೆ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಈ ಚಿತ್ರದ ಪಾತ್ರಗಳು ಬದುಕಿಗೆ ತುಂಬಾ ಹತ್ತಿರವಾಗುತ್ತೆ. ಮೊದಲ ಸಿನಿಮಾದಲ್ಲೇ ಇಷ್ಟೊಳ್ಳೆ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಸನಿಹ ಪಾತ್ರ ಮಾಡಿದ್ದೇನೆ. ಈ ಪಾತ್ರ ಹಾಗೂ ಈ ಸಿನಿಮಾ ಭಾಗವಾಗಿರೋದಕ್ಕೆ ನನಗೆ ತುಂಬಾ ಹೆಮ್ಮೆಯಿದೆ. ಫೆಬ್ರವರಿ 10ರಂದು ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಂತಸ ಹಂಚಿಕೊಂಡರು.

ನವೀನ್ ಶಂಕರ್ ಮಾತನಾಡಿ ಈ ಸಿನಿಮಾ ಒಪ್ಪಿಕೊಳ್ಳಲು ಮೂಲ ಕಾರಣ ಈ ಚಿತ್ರದ ಆಶಯ. ಸಂಬಂಧಗಳ ಸುತ್ತ, ಸ್ನೇಹದ ಸುತ್ತ, ಬಾಂದವ್ಯದ ಸುತ್ತ ಈ ಸಿನಿಮಾ ಹೇಳ ಹೊರಟ ವಿಷಯ ಬಹಳ ಇಷ್ಟವಾಯ್ತು ಎಂದರು.

ನಟಿ ಅರ್ಚನಾ ಕೊಟ್ಟಿಗೆ, ನಟಿ ಅರ್ಚನಾ ಜೋಯೀಸ್, ಅನಿರುದ್ದ್ ಆಚಾರ್ಯ ಮಾತಾಡಿದರು. ಸಾಗರ್ ಹೆಚ್.ಜಿ ಕ್ಯಾಮೆರಾ ಹಿಡಿದರೆ, ಜೋ ಕೋಸ್ಟ ಸಂಗೀತವಿದೆ. ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಸಕೂಚಿ ಎಂಬ ವಾಮಾಚಾರ ಕುರಿತ ಚಿತ್ರ: ಟ್ರೇಲರ್ ರಿಲೀಸ್ ವೇಳೆ ನಡೆದ ಘಟನೆ ವಿಚಿತ್ರ…

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಸಾಕಷ್ಟು ಮಾಟ-ಮಂತ್ರ ಕುರಿತಾದ ಸಿನಿಮಾಗಳು ಬಂದು ಹೋಗಿವೆ. ಇದೀಗ ಆ ಸಾಲಿಗೆ ಸೇರಲು ಸಿದ್ದವಾಗಿದೆ ‘ಸಕೂಚಿ’. ಹೌದು ಸಾವಿನ ಸೂಚಿ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಜೇಂಕಾರ್ ಮ್ಯೂಸಿಕ್‌ನಲ್ಲಿ ರಿಲೀಸ್ ಆದ ಟ್ರೇಲರ್‌ಗೆ ಜಾಲತಾಣದಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಇದೇ ಫೆಬ್ರವರಿ 17ರಂದು ಸಿನಿಮಾ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅಶೋಕ ಚಕ್ರವರ್ತಿ ‘ಇದು ನಾನು ನಿರ್ದೇಶನ ಮಾಡಿರುವ ಮೊದಲ ಸಿನಿಮಾ. ಚಿತ್ರದಲ್ಲೊಂದು ವಿಭಿನ್ನವಾದ ಪಾತ್ರವಿದೆ. ಹಾಗಾಗಿ ನಾನು ಈ ಗೆಟಪ್‌ನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದು ಮಂತ್ರವಾದಿ ಗೆಟಪ್‌ನಲ್ಲಿ ಬಂದ ಕಾರಣ ತಿಳಿಸಿದರು. ನಂತರ ಮಾತನಾಡಿದ ಅವರು ‘ನಾನು ಈ ‘ಸಕೂಚಿ’ ಎಂಬ ಶಬ್ದವನ್ನು ಒಂದಿಷ್ಟು ಕಡೆ ಕೇಳಿದ್ದೆ. ಆ ನಂತರ ‘ಸಕೂಚಿ’ಗೆ ಅರ್ಥ ಅತಿ ಗೋರವಾದ ವಾಮಾಚಾರ ಎಂದು ಗೊತ್ತಾಯ್ತು. ಈ ಬ್ಲಾಕ್ ಮ್ಯಾಜಿಕ್ ಕತೆಯನ್ನು ತೆಗೆದುಕೊಂಡು ಕಮರ್ಶಿಯಲ್ ಆಗಿ ಸಿನಿಮಾ ಮಾಡಲಾಗಿದೆ.

ಇದರಲ್ಲಿ ನಾಯಕ ಹೇಗೆ ಸಕೂಚಿಗೆ ಒಳಗಾಗುತ್ತಾನೆ ಎಂಬುದು ಮುಖ್ಯವಾದ ಅಂಶ. ಶೂಟಿಂಗ್ ಟೈಮ್‌ನಲ್ಲಿ ಒಂದಷ್ಟು ಘಟನೆಗಳು ನಡೆದಿದ್ದು, ನಮ್ಮಗಳ ಗಮನಕ್ಕೆ ಬಂದಿದೆ. ಸಾಕಷ್ಟು ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದು, ಎಲ್ಲಾ ಕಲಾವಿದರು ಚನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ನಾವು ಕತೆಯಾಗಿ ಬದುಕಿದ್ದೇವೆ. ಸಿನಿಮಾವನ್ನು ದೈವ ಬಬ್ಬುಸ್ವಾಮಿಗೆ ಅರ್ಪಣೆ ಮಾಡುತ್ತೇನೆ’ ಎನ್ನುವರು.

ನಾಯಕ ತ್ರಿವಿಕ್ರಮ ಸಾಮ್ರಾಟ್, ‘ನಾನು ನಟನೆ ಆರಂಭಿಸುವ ಮೊದಲೇ ಈ ಕಥೆ ಕೇಳಿದ್ದೆ. ಆಗಲೇ ನಂಗೆ ಕಥೆಯ ಬಗ್ಗೆ ಆಶ್ಚರ್ಯ ಆಗಿತ್ತು. ನಂತರ ಒಂದೆರಡು ಸಿನಿಮಾ ಆದ ಮೇಲೆ ಈ ಚಿತ್ರಕ್ಕೆ ನಾನು ಆಯ್ಕೆಯಾದೆ. ನಿರ್ದೇಶಕರು ತುಂಬಾ ಶ್ರಮ ಹಾಕಿ ಈ ಸಿನಿಮಾ ಮಾಡಿದ್ದಾರೆ. ನಾನಿಲ್ಲಿ ವಿಕ್ಕಿ ಮಾರ್ಟಿನ್ ಪಾತ್ರ ಮಾಡಿದ್ದು, ನನ್ನ ಪಾತ್ರದ ಮೂಲಕ ಸಂಬಂದ, ಸ್ನೇಹ, ಪ್ರೀತಿ ಎಲ್ಲಾ ತೋರಿಸಲಾಗಿದೆ. ಬ್ಲಾಕ್ ಮ್ಯಾಜಿಕ್ ಕುರಿತಾದ ಸಿನಿಮಾ ಇದಾಗಿದ್ದು, ಸಂಗೀತ ಚಿತ್ರದ ಹೈಲೈಟ್ ಎನ್ನಬಹುದು’ ಎಂದರು.

ನಾಯಕಿ ಡಯಾನ ಮಾತನಾಡಿ ‘ಕಥೆ ಕೇಳಿದಾಗ ಥ್ರಿಲ್ ಆದೆ. ಮೂಲತಃ ನಂಗೆ ಹಾರರ್ ಸಿನಿಮಾ ಅಂದ್ರೆ ತುಂಬಾ ಇಷ್ಟ. ನಾನಿಲ್ಲಿ ಇನೋಸೆಂಟ್ ಕಾಲೇಜ್ ಹುಡುಗಿಯಾಗಿ ನಟಿಸಿದ್ದು, ನಂತರ ನನ್ನ ಪಾತ್ರ ಬೇರೆ ಬೇರೆ ತರ ತೆರೆದುಕೊಳ್ಳುತ್ತದೆ. ಮೂರು ವರ್ಷದ ಹಿಂದೆ ಶುರುವಾದ ಈ ಸಿನಿಮಾ ಜರ್ನಿ ಮರೆಯಲಾಗದು’ ಎಂದರು.

ಚಿತ್ರದ ಸಹ ನಿರ್ಮಾಪಕರಾದ ಮಹಾವೀರ್ ಪ್ರಸಾದ್ ‘ಈ ಚಿತ್ರದಲ್ಲಿ ವಾಮಾಚಾರ, ಸಸ್ಪೆನ್ಸ್ ಕಥೆ ಇದ್ದು ಚ್ಯಾಲೆಂಜ್ ಆಗಿ ತೆಗೆದುಕೊಂಡು ಸಿನಿಮಾ ಮಾಡಲಾಗಿದೆ. ಹೊಸ ತಂಡವನ್ನು ನಿವೆಲ್ಲಾ ಬೆಳಿಸಬೇಕು’ ಎಂದು ಹೇಳಿದರು.

ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಬಿಟ್ ಗುರು ಬ್ಯಾಂಡ್ ಖ್ಯಾತಿಯ ಗಣೇಶ್ ಗೋವಿಂದಸ್ವಾಮಿ. ಸಕೂಚಿ ಅವರ ಮೊದಲ ಸಂಗೀತ ನಿರ್ದೇಶನದ ಚಿತ್ರವಾಗಿದೆ. ಅಶ್ವಿನ್ ಬಿ.ಸಿ ನಿರ್ಮಾಣದ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಮಧುಕರ್ ಜೆ ಹಾಗೂ ಮಹಾವೀರ್ ಪ್ರಸಾದ್ ಸಾಥ್ ನೀಡಿದ್ದಾರೆ. ಸತ್ಯ ಸಿನಿ ಡಿಸ್ಟಿಬ್ಯೂಟರ್ಸ್ ನ ಸತ್ಯ ಪ್ರಕಾಶ್ ಹಾಗೂ ಮಂಜುನಾಥ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಆನಂದ್ ಸುಂದ್ರೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಹೇಶ್ ಸಂಕಲನ, ಕುಂಫು ಚಂದ್ರು ಸಾಹಸ, ಆನಂದ್ ನೃತ್ಯವಿದೆ. ಚಿತ್ರದಲ್ಲಿ ಸಂಜಯ್ ರಾಜ್ ನಟನೆಯ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ‘ನೈಜ ಘಟನೆಗಳನ್ನು ಹೆಕ್ಕಿಕೊಂಡು ಈ ಸಿನಿಮಾ ಮಾಡಲಾಗಿದ್ದು ನಿಜವಾದ 30-40 ಮಂಗಳ ಮುಖಿಯರು ಅಭಿನಯ ಮಾಡಿದ್ದು ಇದು ಮಹತ್ವದ ವಿಷಯವಾಗಿದೆ’ ಎಂದರು ಸಂಜಯ್ ರಾಜ್.

Categories
ಸಿನಿ ಸುದ್ದಿ

ಗಣರಾಜ್ಯೋತ್ಸವಕ್ಕೆ ಪ್ರಜಾರಾಜ್ಯ ಟ್ರೇಲರ್ ರಿಲೀಸ್…

‘ಆರ್ಥಿಕ ಸ್ವಾತಂತ್ರ‍್ಯಕ್ಕಾಗಿ ಹೋರಾಟ’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಪ್ರಜಾರಾಜ್ಯ’ ಚಿತ್ರ ಸದ್ಯ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ. ಪ್ರತಿಯೊಬ್ಬ ಭಾರತೀಯ ನೋಡಲೇ ಬೇಕಾದ ಸಿನಿಮಾ ಇದು ಎಂಬುದು ತಂಡದ ಮಾತು. ಯಾಕಂದರೆ ಪ್ರಜೆಗಳು ಮನಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ದವಾಗುತ್ತಿದ್ದು, ಈ ಸಂದರ್ಭದಲ್ಲೇ ಸಿನಿಮಾ ಇದೇ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ.

ಅಂದಹಾಗೆ, ಈ ಚಿತ್ರಕ್ಕೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾಕ್ಟರ್ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟನೆಯ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕರು , ‘ಉಪೇಂದ್ರ ಸಿನಿಮಾ ನೋಡಿ, ನಿಜ ಸಂಗತಿಯನ್ನು ಹೀಗೂ ತೋರಿಸಬಹುದು ಎಂದು ಗೊತ್ತಾಯ್ತು. ನಮಗೆ ಹೋರಾಟದ ಮೂಲಕ ಸ್ವಾತಂತ್ರ‍್ಯ ಬಂತು. ಸ್ವಾತಂತ್ರ್ಯ ಬಂದು 75 ವರ್ಷವಾದರೂ ನಾವೆಲ್ಲಾ ಆರ್ಥಿಕವಾಗಿ ಸ್ವಾತಂತ್ರ್ಯವಾಗಿದ್ದೇವಾ! ನಾವು ಸ್ವಾತಂತ್ರ್ಯವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸಲು ಈ ಸಿನಿಮಾ ಮಾಡಲಾಗಿದೆ. ಪ್ರಜಾಪ್ರಭುತ್ವ ಎಂದರೆ! ಜನರಿಂದ ಜನರಿಗಾಗಿ ಇರುವ ಸರ್ಕಾರ. ಆದರೇ ಇಂದು ಕೆಲವರಿಂದ ಕೆಲವರಿಗಾಗಿ ಸರ್ಕಾರ ಇದೆ. ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮ ಎಂದು ಹೇಳುತ್ತೇವೆ.

ಅದು ತನ್ನ ಕೆಲಸ ಮಾಡುತ್ತಿದೆಯಾ, ಸರಿಯಾಗಿ ಕೆಲಸ ಮಾಡಿದ್ರೆ ಎನೆಲ್ಲಾ ಮಾಡಬಹುದು ಎಂಬುದರ ಜೋತೆಗೆ ನಾವಿಂದು ಪ್ರತಿ ಮನುಷ್ಯ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ನಾವು ಕಟ್ಟುವ ಟ್ಯಾಕ್ಸ್ ಸರಿಯಾಗಿ ಬಳಕೆಯಾದರೆ, ನಾವೆಲ್ಲಾ ಆರ್ಥಿಕವಾಗಿ ಸ್ವಾತಂತ್ರ‍್ಯರಾಗುತ್ತೇವೆ. ಎಂಬುದನ್ನು ತೋರಿಸಲಾಗಿದ್ದು, ಒಟ್ಟಿನಲ್ಲಿ ಈ ಸಿನಿಮಾ ಪ್ರಜೆಗಳಿಗೆ ತಿಳುವಳಿಕೆ ಮೂಡಿಸಲು ಮಾಡಲಾಗಿದೆ. ಪ್ರತಿ ಪ್ರಜೆ ನೋಡಲೇ ಬೇಕಾದ ಸಿನಿಮಾ ಇದು. ಇದನ್ನು ಪ್ರತಿ ಮತದಾರ ನೋಡಿದ್ರೆ ಬದಲಾವಣೆ ಕಂಡಿತ ಆಗುತ್ತದೆ’ ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿ ‘ನಾನು ಇದರಲ್ಲಿ ನಟನೆ ಕೂಡ ಮಾಡಿದ್ದೇನೆ. ಇಂದಿನ ಸಮಾಜದಲ್ಲಿ ಆಗು ಹೋಗುಗಳನ್ನು ಹೇಳುವ ಸಿನಿಮಾ ಇದು. ನಮ್ಮ ಮತದ ಮಹತ್ವ ತೋರಿಸುವ ಜೊತೆಗೆ ಸಮಸ್ಯೆ ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತೋರಿಸಲಾಗಿದೆ. ಇಂದು ಕೆಲಸ ಮಾಡದವ ಮಾಡುವವ ಎಲ್ಲರು ಟ್ಯಾಕ್ಸ್ ಕಟ್ಟುತ್ತಾನೆ. ಆ ಹಣ ಎನಾಯ್ತು ಎಂದು ಕೇಳುವ ಅಧಿಕಾರ ಕೂಡ ಪ್ರಜೆಗಿದೆ. ನಮ್ಮ ಟ್ಯಾಕ್ಸ್ ಸರಿಯಾಗಿ ಬಳಕೆಯಾದ್ರೆ ದೇಶದ ಎಲ್ಲಾ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ನೀಡಬಹುದು. ಇವೆರಡಕ್ಕಾಗಿ ಮನುಷ್ಯ ಇಂದು ವರ್ಷವಿಡಿ ದುಡಿತಾ ಇರುತ್ತಾನೆ. ಇಂತಹ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಸಿನಿಮಾಗಳು ಗೆಲ್ಲಬೇಕು’ ಎಂದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ವಿ. ನಾಗೇಂದ್ರ ಪ್ರಸಾದ್, ‘ಆರ್ಥಿಕ ಸ್ವಾತಂತ್ರ‍್ಯದ ಕಲ್ಪನೆ ಎಷ್ಟರ ಮಟ್ಟಿಗೆ ತೆರೆಯ ಮೇಲೆ ಬಂದಿದೆ ಎಂಬುದು ಮುಖ್ಯ. ಸಮಾಜದಲ್ಲಿ ಸಿನಿಮಾ ಮಾದ್ಯಮ ಹಲವಾರು ಬದಲಾವಣೆ ಮಾಡುತ್ತಾ ಬಂದಿದೆ. ಅದಕ್ಕೆ ಉದಾಹರಣೆ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಹಲವಾರು ಯುವಕರು ನಗರದಿಂದ ಹಳ್ಳಿಗೆ ಹೋಗಿ ಕೃಷಿ ಮಾಡುತ್ತಿರುವುದು. ಇಂತಹ ಅದ್ಭುತ ಬದಲಾವಣೆ ಈ ಚಿತ್ರದ ಮೂಲಕ ಆಗಲಿ. ವಿಜಯ್ ಭಾರ್ಗವ್ ನಿರ್ದೇಶನದ ಜೊತೆ ನಟನೆ ಕೂಡ ಮಾಡಿದ್ದಾರೆ. ಹಾಡು, ಟ್ರೇಲರ್ ನೋಡಿದಾಗ ನಿರ್ದೇಶಕನ ಕೆಲಸದ ಜೋತೆ ಸಂಗೀತ, ಛಾಯಾಗ್ರಹಣ ಹೈಲೈಟ್ ಆಗುತ್ತದೆ ಎನಿಸಿದೆ. ಸದ್ಯ ರಾಜ್ಯದಲ್ಲಿ ಚುನಾವಣಾ ಕಾವು ಇರುತ್ತಿದ್ದು, ಇಂತ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಸಿನಿಮಾ ಮೂಲಕ ಬದಲಾವಣೆ ಆಗಲಿ’ ಎಂದರು.

ಚಿತ್ರದ ಟ್ರೇಲರ್‌ಗೆ ಸಂತೋಷ ಹೆಗಡೆ ವಿಶೇಷ ಶುಭಾಶಯ ತಿಳಿಸಿದ್ದಾರೆ. ಯುವ ಪ್ರತಿಭೆ ವಿಜಯ್ ಭಾರ್ಗವ ನಿರ್ದೇಶದ ಈ ಚಿತ್ರದಲ್ಲಿ ದೇವರಾಜ್, ಸುಧಾರಾಣಿ, ಅಚ್ಚುತ್ ಕುಮಾರ್, ಟಿ.ಎಸ್ ನಾಗಬರನ್, ದಿವ್ಯಾ ಗೌಡ, ತಬಲಾ ನಾಣಿ, ಗಣೇಶ ರಾವ್ ಮುಂತಾದ ದೊಡ್ಡ ತಾರಾಗಣವಿದೆ. ಚಿತ್ರಕ್ಕೆ ವಿಜೇತ್ ಮಂಜಯ್ಯ ಸಂಗೀತ, ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ಅಂದಂಗೆ ಈ ಚಿತ್ರವನ್ನು ವೆಂಕಟ್ ಗೌಡ ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ರೊಮ್ಯಾಂಟಿಕ್ ಥ್ರಿಲ್ಲರ್ ಸ್ಟೋರಿಯ ಟ್ರೇಲರ್ ರಿಲೀಸ್: ಲಾಂಗ್ ಡ್ರೈವ್ ಬಿಡುಗಡೆಗೆ ರೆಡಿ…

ಹೆಸರೇ ಹೇಳುವಂತೆ ಲಾಂಗ್‌ಡ್ರೈವ್ ಒಂದು ಜರ್ನಿ ಕಥೆಯಾಗಿದ್ದು, ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿ ಬಂದಿದೆ. ಈ ಚಿತ್ರವನ್ನು ಗುಡ್‌ವೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಮಂಜುನಾಥ್‌ಗೌಡ ಬಿ.ಆರ್.(ಶಬರಿ ಮಂಜು) ಅವರು ನಿರ್ಮಿಸಿದ್ದಾರೆ. ಈಗಿನ ಕಾಲದ ಬಹುತೇಕ ಯುವಕ, ಯುವತಿಯರಲ್ಲಿ ಲಾಂಗ್‌ ಡ್ರೈವ್ ಹೋಗೋ ಕ್ರೇಜ್ ಇದ್ದೇ ಇರುತ್ತದೆ. ಈ ಕಂಟೆಂಟ್ ಇಟ್ಟುಕೊಂಡು ನಿರ್ದೇಶಕ ಶ್ರೀರಾಜ್ ಅವರು ಲಾಂಗ್‌ ಡ್ರೈವ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಫೆಬ್ರವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಅರ್ಜುನ್ ಯೋಗಿ, ಸುಪ್ರೀತಾ ಸತ್ಯನಾರಾಯಣ್, ತೇಜಸ್ವಿನಿ ಪ್ರಕಾಶ್ , ಬಲ ರಾಜವಾಡಿ ಸೇರಿದಂತೆ ಅನೇಕರು ನಟಿಸಿದ್ದಾರೆ. ನಿರ್ಮಾಪಕ ಶಬರಿ ಮಂಜು ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವೇಳೆ ಮಂಜು ಮಾತನಾಡಿ, ನನ್ನ ಮೊದಲ ಚಿತ್ರವಿದು, ಸಿನಿಮಾ‌ ಮಾಡಬೇಕೆನ್ನುವುದು ಬಹುದಿನಗಳ ಕನಸು. ಚಿತ್ರದಲ್ಲಿ ಮಣಿ ಎಂಬ ಪಾತ್ರ ಮಾಡಿದ್ದೇನೆ. ಆತ ರೌಡಿನೂ ಅಲ್ಲ, ಒಂಥರಾ ಸೋಂಬೇರಿ, ಆತನಿಗೆ ನಾಟಕದ ಹುಚ್ಚು, ನಾಯಕ‌ ನಾಯಕಿ‌ ಜೊತೆ ಇವನ ಪಾತ್ರ ಹೇಗೆ ಲಿಂಕ್ ಆಗುತ್ತೆ ಅನ್ನೋದು ಚಿತ್ರ ದಲ್ಲಿದೆ. 23ವರ್ಷದಿಂದ ಟ್ರಾವೆಲ್ ಬ್ಯುಸಿನೆಸ್ ಮಾಡುತ್ತಿದ್ದೇನೆ. ಈ ಥರದ ಘಟನೆ ಎಲ್ಲರ ಲೈಫ್ ನಲ್ಲೂ ಆಗಿರತ್ತೆ. ನಮ್ಮ ಸ್ನೇಹಿತನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ ಎಂದರು.

ನಾಯಕ ಅರ್ಜುನ್‌ ಯೋಗಿ, ಈ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಅಣ್ಣಾ ಬಾಂಡ್ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದೆ. ಇದು ನಾಯಕನಾಗಿ ನಟಿಸಿರುವ 3ನೇ ಚಿತ್ರ. ಈ ಥರದ ಘಟನೆ ಎಲ್ಲರ ಜೀವನದಲ್ಲಿ ನಡೆದಿರುತ್ತೆ, ತೊಂದರೆಯಾದರೆ ತಿರುಗಿ ಬೀಳುವ ಪಾತ್ರ ನನ್ನದು. ಕೆಲಸ ಹುಡುಕುತ್ತಿರುವ ಹುಡುಗ. ಲಾಂಗ್ ಡ್ರೈವ್ ಗೂ ಮುಂಚೆ ಮತ್ತು ನಂತರ ಏನಾಗಿತ್ತು ಎನ್ನುವುದು ಕಥೆ. ಸಿನಿಮಾ ದಿಂದ ಈಚೆ ಬಂದ ಮೇಲೆ ಮಹಿಳೆಯರ ಸುರಕ್ಷತೆ ಕುರಿತ ಸಂದೇಶವೂ ಚಿತ್ರದಲ್ಲಿದೆ ಎಂದರು.


ನಟಿ ತೇಜಸ್ವಿನಿ ಶೇಖರ್, ಅನಿರೀಕ್ಷಿತವಾಗಿ ಈ ಚಿತ್ರ ಸಿಕ್ಕಿತು. ಪ್ರತಿಯೊಬ್ಬರಿಗೂ ಇಷ್ಟವಾಗುವ ಕಥೆ. ಮೀರಾ ಎಂಬ ಮುಗ್ದ ಹುಡುಗಿಯ ಪಾತ್ರ ಎಂದರೆ, ಮತ್ತೊಬ್ಬ ನಟಿ‌ ಸುಪ್ರೀತಾ ಸತ್ಯನಾರಾಯಣ್ ಮಾತನಾಡಿ ನಾನೊಬ್ಬ ಡಾಕ್ಡರ್ ಪಾತ್ರ ಮಾಡಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣ ನಡೆಯಿತು ಎಂದು ಹೇಳಿದರು.

ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ಕಲಾವಿದ ಬಾಲ ರಾಜವಾಡಿ ಚಿತ್ರದ ಕುರಿತು ಮಾತನಾಡಿದರು.

ಶ್ರೀರಾಜ್ ಮಾತನಾಡಿ, ನಾನೊಬ್ಬ ಡೈರೆಕ್ಟರ್ ಆಗಬೇಕೆಂದು 14 ವರ್ಷ ಗಳ ಹಿಂದೆ ಚಿತ್ರರಂಗಕ್ಕೆ ಬಂದೆ. ಕವಿರಾಜ್, ರವಿ ಶ್ರೀವತ್ಸ ಅವರಜೊತೆ ಡೈಲಾಗ್ ರೈಟರ್ ಆಗಿದ್ದೆ. 24ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದ್ದು, 18ರಿಂದ 70 ವರ್ಷಗಳವರೆಗೆ ಎಲ್ಲಾ ವಯೋಮಾನದವರೂ ಸಹ ನೋಡುವಂಥ ಕಂಟೆಂಟ್ ಚಿತ್ರದಲ್ಲಿದ್ದು, ಚಿತ್ರ ನೋಡುವ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ಅವರ ಜೀವನದಲ್ಲಿ ಹಿಂದೆ ಆಗಿ ಹೋಗಿರುವ ಘಟನೆಗಳು ನೆನಪಾಗುತ್ತದೆ. ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳೇ ಈ ಸಿನಿಮಾದಲ್ಲಿವೆ. ಬೆಂಗಳೂರು, ತಾವರೆಕೆರೆ, ಮೈಸೂರು ಹಾಗೂ ರಾಮನಗರದ ಸುತ್ತಮುತ್ತ 35ರಿಂದ 40 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರಕ್ಕೆ ಯು/ಎ ಸೆನ್ಸಾರ್ ಪ್ರಮಾಣ ಪತ್ರವೂ ಸಿಕ್ಕಿದೆ. ನಾವು ಎಲ್ಲೇ ಹೋದರೂ ಮನೆಯಲ್ಲಿ ತಿಳಿಸಿ ಹೋಗಬೇಕು ಎಂದು ಚಿತ್ರದ ಮೂಲಕ ಹೇಳಿದ್ದಾರೆ.

ಚಿತ್ರದ ಉಳಿದ ತಾರಾಗಣದಲ್ಲಿ ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮುಂತಾದವರಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು 2 ಹಾಡನ್ನು ಮಾತ್ರವೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆ, ರಾಮಿ ಶೆಟ್ಟಿ ಪವನ್ ಅವರ ಸಂಕಲನ, ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ, ಹಾಡುಗಳಿಗೆ ವಿಕಾಸ ವಸಿಷ್ಠ, ಶರತ್ ಆಸ್ಕರ್, ಜೀವನ್ ಅವರ ಸಾಹಿತ್ಯವಿದ್ದು, ರಾಜೇಶ್ ಕೃಷ್ಣನ್, ಮಾನಸ ಹೊಳ್ಳ, ಸ್ಪರ್ಶ ಆರ್.ಕೆ, ದನಿಯಾಗಿದ್ದಾರೆ.

Categories
ಸಿನಿ ಸುದ್ದಿ

ಕೋಟಿ ಮಂದಿಗೆ ಚಂದನ್ ಶೆಟ್ಟಿ ಡ್ಯಾಶ್! ಸೂತ್ರಧಾರಿ ಸಾಂಗು ಎಲ್ಲರಿಗೂ ಗುಂಗು…

ಹೊಸ ವರ್ಷದ ಸಂಭ್ರಮಕ್ಕಾಗಿ ಡಿಸೆಂಬರ್ ಕೊನೆಯಲ್ಲಿ ‘ಸೂತ್ರಧಾರಿ’ ಚಿತ್ರದ “ಡ್ಯಾಶ್” ‘ ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಡಿಮೆ ಸಮಯದಲ್ಲೇ ಈ ಹಾಡು 10 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಗೊಂಡು ದಾಖಲೆ ನಿರ್ಮಿಸಿದೆ.

ಇತ್ತೀಚೆಗೆ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ನವರಸನ್, ‘ನನಗೆ ಈ ಸಂಭ್ರಮ ವಿಶೇಷ. ನಾನು ಇಷ್ಟು ದಿನ ಮಾಡಿರುವ ಸಿನಿಮಾಗಳ ಪೈಕಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಯಾವ ಹಾಡಿಗೂ ಸಿಕ್ಕಿಲ್ಲ. ನನ್ನ ಚಿತ್ರದಲ್ಲಿ ಹಿಟ್ ಗೀತೆಯೊಂದು ಬರಬೇಕೆಂದು ಆಸೆಯಿತ್ತು. ಈಗ ಈಡೇರಿದೆ. ಹೊಸ ವರ್ಷಕ್ಕಾಗಿಯೇ ಈ‌‌ ಸಾಂಗ್ ಮಾಡಿದ್ದೆವು. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿದ್ದು, ಆ ಹಾಡುಗಳು ಅದ್ಭುತವಾಗಿದೆ. ಫೆಬ್ರವರಿಯಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಏಪ್ರಿಲ್, ಮೇನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದೇವೆ. ಈ ಒಂದು ಕೋಟಿ ವೀಕ್ಷಣೆಯ ಸಕ್ಸಸ್ ಚಿತ್ರತಂಡಕ್ಕೆ ಸಲ್ಲುತ್ತದೆ’ ಎಂದರು.

ಈ ಹಾಡನ್ನು ಬರೆದು, ಸಂಗೀತ ಸಂಯೋಜಿಸುವ ಜೊತೆಗೆ ನಾಯಕನಾಗೂ ನಟಿಸಿರುವ ಚಂದನ್ ಶೆಟ್ಟಿ ಮಾತನಾಡಿ, ‘ಸಾಂಗ್ ರಿಲೀಸ್ ಆದ ಮೂರು ವಾರದಲ್ಲೇ ಒಂದು ಕೋಟಿ ವೀಕ್ಷಣೆ ಆಗಿರುವುದು ಮಾಧ್ಯಮಗಳ ಸಹಕಾರದಿಂದ. ಈ ಗೀತೆಗೆ ನಾನು ಹಾಗೂ ಚೇತನ್ ಸೇರಿ ಸಾಹಿತ್ಯ ಬರೆದಿದ್ದೇವೆ’ ಎಂದರು.

‘ಪ್ರಾರಂಭದಲ್ಲಿ ನಿರ್ಮಾಪಕರಿಗೆ ಹಾಡು ಚೆನ್ನಾಗಿ ಬರಬೇಕು ಸರ್. ಇದೇ ಮೊದಲಬಾರಿ ನಾನು ಬೇರೆ ಸಿನಿಮಾವೊಂದರ ಹಾಡಿನಲ್ಲಿ ನಟಿಸುತ್ತಿದ್ದೆನೆ ಎಂದಿದ್ದೆ. ಇಂದು ಈ ಗೀತೆಯಲ್ಲಿ ನಾನಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಸಂಜನಾ ಆನಂದ್.

‘ಈ ಗೀತೆ ನಮ್ಮ ಸಿನಿಮಾಗೆ ಆಮಂತ್ರಣ ಆಗಿದ್ದು, ಹಾಡು ನೋಡಿ ಬಂದ ಜನರನ್ನು ಇಡೀ ಸಿನಿಮಾವನ್ನು ನೋಡುವ ಹಾಗೆ ಮಾಡುವ ಜವಾಬ್ದಾರಿ ನನ್ನದು ಎಂದು ನಿರ್ದೇಶಕ ಕಿರಣ್ ಕುಮಾರ್ ತಿಳಿಸಿದರು.

ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್ ಮಾತನಾಡಿ, ಈ ಹಾಡು ಕೇವಲ ಎರಡು ದಿನಗಳಲ್ಲಿ ಆಗಿದೆ. ನನ್ನ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್ ನ 2ನೇ ಹಿಟ್
ಗೀತೆ ಇದು ಎಂದರು.

ಈ ಸಂತಸದ ಸಮಾರಂಭದಲ್ಲಿ ನಟ ತಬಲಾನಾಣಿ, ಕಿರಣ್, ನಟಿ ಪಲ್ಲವಿ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಾಹಿತಿ ಕಿನ್ನಾಲ್ ರಾಜ್ ತಮ್ಮ ಅನುಭವ ಹಂಚಿಕೊಂಡರು.
ಸಸ್ಪೆನ್ಸ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಈ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಓ ಮನಸೇ ಎಂಬ ತ್ರಿಕೋನ ಪ್ರೇಮಕಥೆ: ಹಾಡು ಹೊರಬಂತು…

ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ನಟಿಸಿರುವ ‘ಓ ಮನಸೇ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಯೂಟ್ಯೂಬ್ ನಲ್ಲೂ ಸದ್ಯ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡಿವೆ.’ ಶ್ರೀ ಫ್ರೆಂಡ್ಸ್ ಮೂವಿ ಮೆಕರ್ಸ್’ ಲಾಂಛನದಲ್ಲಿ ಎಂ.ಎನ್ ಭೈರೆಗೌಡ, ಕೆ.ಹೆಚ್. ಧನಂಜಯ, ಕೆ.ವೆಂಕಟೇಶ್, ಸು.ಕಾ ರಾಮು, ಯುವರಾಜ್ ಕೆ.ಎ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಿರ್ಮಾಪಕರು ಮಾತನಾಡಿ, ‘ಇದು ನಮ್ಮ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ. ಮುಂದೆಯೂ ಜನರಿಗೆ ಸದಭಿರುಚಿ ಸಿನಿಮಾ ಕೊಡುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ. ಒಂದು ಒಳ್ಳೆ ಸಿನಿಮಾ ಮಾಡಿದ ಖುಷಿ ನಮಗೆಲ್ಲಾ ಇದೆ. ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಜೊತೆ ನಾಯಕಿಯಾಗಿ ಸಂಚಿತ ಪಡುಕೋಣೆ ಅದ್ಬುತವಾಗಿ ನಟಿಸಿದ್ದಾರೆ. ಟ್ರೇಲರ್ ಗೆ ಯೂಟ್ಯೂಬ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈಗ ಹಾಡುಗಳು ಬಿಡುಗಡೆಯಾಗಿದೆ. ನಮ್ಮ ಬ್ಯಾನರ್ ನಿಂದ ಇನ್ನು ಹತ್ತಾರು ಸಿನಿಮಾ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ಈ ಮೊದಲು ‘ನವರಂಗಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದ ಉಮೇಶ್ ಗೌಡ, ಈಗ ಮೂರನೇ ಪ್ರಯತ್ನವಾಗಿ ‘ಓ ಮನಸೇ’ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಒಳ್ಳೆ ಪ್ರಶಂಸೆ ಸಿಕ್ಕಿದ್ದು, ಈಗ ಹಾಡುಗಳಿಗೂ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಇದೊಂದು ನೈಜಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ’ ಎಂದು ಹೇಳಿದರು.

ವಿಜಯರಾಘವೇಂದ್ರ ಮಾತನಾಡಿ, ‘ಸಿನಿಮಾ ಪ್ರಮೋಷನ್‌ನಲ್ಲಿ ಆಡಿಯೋ ಬಿಡುಗಡೆ ಎಂಬುದು ಮುಖ್ಯವಾದ ಹಂತ. ಸಿನಿಮಾ ಮಾಡೋದು ಮುಖ್ಯವಲ್ಲ ಜನರಿಗೆ ಅದನ್ನು ತಲುಪಿಸುವುದು ಮುಖ್ಯ. ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ.ಇದರಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದು, ಚಿತ್ರದಲ್ಲಿ ಕಾಮಿಡಿ. ಆ್ಯಕ್ಷನ್, ಲವ್ ಹೀಗೆ ಎಲ್ಲಾ ಅಂಶಗಳಿವೆ. ಇದು ನನಗೆ ಸ್ಪೆಷಲ್ ಸಿನಿಮಾ ಎನ್ನಬಹುದು’ ಎಂದರು.

‘ಕೊರೋನಾ ಟೈಮ್‌ನಲ್ಲಿ ನನಗೆ ಈ ಸಿನಿಮಾ ಸಿಕ್ಕಿದ್ದು, ಕಮ್ ಬ್ಯಾಕ್ ಜರ್ನಿ ಎನ್ನಬಹುದು. ನಾನು ಈ ಚಿತ್ರದಲ್ಲಿ ಲವರ್ ಬಾಯ್ ಹಾಗೂ ನೆಗಟಿವ್ ಸೈಡ್ ಪಾತ್ರ ಮಾಡಿದ್ದೇನೆ’ ಎಂದು ನಾಯಕ ಧರ್ಮ ಕೀರ್ತಿರಾಜ್ ತಿಳಿಸಿದರು.

‘ಇದು ತ್ರಿಕೋನ ಪ್ರೇಮ ಕಥೆ” ಒಳಗೊಂಡ ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು ನಾಯಕಿ ಸಂಚಿತಾ ಪಡುಕೋಣೆ.

ಎ2 ಮ್ಯೂಸಿಕ್‌ ಮೂಲಕ ಬಿಡುಗಡೆ ಆಗಿರುವ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್, ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ, ನಟಿ ಶಾನ್ವಿ ಶ್ರೀವಾತ್ಸವ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಣಜಿ ನಾಗರಾಜ್, ಪುಟ್ಟಣ್ಣ ಇತತರು ಅಥಿತಿಗಳಾಗಿ ಆಗಮಿಸಿದ್ದರು.

ಕವಿರಾಜ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವಾಗಿ ಎರಡು ಗೀತೆಗಳನ್ನು ಥೈಲ್ಯಾಂಡ್‌ನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಬಂಡೆ ಚಂದ್ರು, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಂ.ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಕ್ರೀಮ್ ಶೂಟಿಂಗ್ ಮುಕ್ತಾಯ: ಇದು ಬೆಂಗಳೂರು ನೈಜ ಘಟನೆ‌ ಚಿತ್ರ…

ಖ್ಯಾತ ಲೇಖಕ ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ದೇವೇಂದ್ರ ಡಿ.ಕೆ ನಿರ್ಮಿಸಿರುವ ಹಾಗೂ ಅಭಿಷೇಕ್ ಬಸಂತ್ ನಿರ್ದೇಶನದ “ಕ್ರೀಮ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಬಹು ನಿರೀಕ್ಷಿತ ಈ ಚಿತ್ರದ ನಾಯಕಿಯಾಗಿ ಸಂಯುಕ್ತ ಹೆಗಡೆ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಅರುಣ್ ಸಾಗರ್ ಮುಂತಾದವರು ಇದ್ದಾರೆ.

ಕಳೆದವರ್ಷ ಈ ಚಿತ್ರ ಆರಂಭವಾಗಿದ್ದು, ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆನಂತರ ಚಿತ್ರತಂಡದಿಂದ ಈ ಚಿತ್ರದ ಕುರಿತು ಯಾವುದೇ ವಿಷಯ ಹೊರಬಂದಿರಲಿಲ್ಲ. ಅಂತಹ ವಿಷಯ ಚಿತ್ರದಲ್ಲಿ ಏನಿರಬಹುದು? ಎಂಬ ಕೌತುಕ ಎಲ್ಲರಲ್ಲೂ ಇದೆ.
ಬೆಂಗಳೂರಿನಲ್ಲಿ ನಡೆದ ನೈಜಘಟನೆ ಆಧರಿಸಿದ‌ ಚಿತ್ರವೆಂಬ ಮಾಹಿತಿ ಇದೆ.

ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗಡೆ ಅವರಿಗೆ ಪೆಟ್ಟು ಬಿದ್ದ ವಿಷಯ ಮಾತ್ರ ತಿಳಿದಿತ್ತು. ಸಂಯುಕ್ತ ಅವರು ಚೇತರಿಸಿಕೊಂಡ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.

ಸುನೋಜ್ ವೇಲಾಯುಧನ್ ಛಾಯಾಗ್ರಹಣ, ಶಿವು (ಕೆಜಿಎಫ್) ಕಲಾ ನಿರ್ದೇಶನ, ಆರ್ಯನ್ ಸಂಕಲನ ಹಾಗೂ ಪ್ರಭು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

error: Content is protected !!