ಓ ಮನಸೇ ಎಂಬ ತ್ರಿಕೋನ ಪ್ರೇಮಕಥೆ: ಹಾಡು ಹೊರಬಂತು…

ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ನಟಿಸಿರುವ ‘ಓ ಮನಸೇ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಯೂಟ್ಯೂಬ್ ನಲ್ಲೂ ಸದ್ಯ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡಿವೆ.’ ಶ್ರೀ ಫ್ರೆಂಡ್ಸ್ ಮೂವಿ ಮೆಕರ್ಸ್’ ಲಾಂಛನದಲ್ಲಿ ಎಂ.ಎನ್ ಭೈರೆಗೌಡ, ಕೆ.ಹೆಚ್. ಧನಂಜಯ, ಕೆ.ವೆಂಕಟೇಶ್, ಸು.ಕಾ ರಾಮು, ಯುವರಾಜ್ ಕೆ.ಎ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಿರ್ಮಾಪಕರು ಮಾತನಾಡಿ, ‘ಇದು ನಮ್ಮ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ. ಮುಂದೆಯೂ ಜನರಿಗೆ ಸದಭಿರುಚಿ ಸಿನಿಮಾ ಕೊಡುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ. ಒಂದು ಒಳ್ಳೆ ಸಿನಿಮಾ ಮಾಡಿದ ಖುಷಿ ನಮಗೆಲ್ಲಾ ಇದೆ. ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಜೊತೆ ನಾಯಕಿಯಾಗಿ ಸಂಚಿತ ಪಡುಕೋಣೆ ಅದ್ಬುತವಾಗಿ ನಟಿಸಿದ್ದಾರೆ. ಟ್ರೇಲರ್ ಗೆ ಯೂಟ್ಯೂಬ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈಗ ಹಾಡುಗಳು ಬಿಡುಗಡೆಯಾಗಿದೆ. ನಮ್ಮ ಬ್ಯಾನರ್ ನಿಂದ ಇನ್ನು ಹತ್ತಾರು ಸಿನಿಮಾ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ಈ ಮೊದಲು ‘ನವರಂಗಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದ ಉಮೇಶ್ ಗೌಡ, ಈಗ ಮೂರನೇ ಪ್ರಯತ್ನವಾಗಿ ‘ಓ ಮನಸೇ’ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಒಳ್ಳೆ ಪ್ರಶಂಸೆ ಸಿಕ್ಕಿದ್ದು, ಈಗ ಹಾಡುಗಳಿಗೂ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಇದೊಂದು ನೈಜಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ’ ಎಂದು ಹೇಳಿದರು.

ವಿಜಯರಾಘವೇಂದ್ರ ಮಾತನಾಡಿ, ‘ಸಿನಿಮಾ ಪ್ರಮೋಷನ್‌ನಲ್ಲಿ ಆಡಿಯೋ ಬಿಡುಗಡೆ ಎಂಬುದು ಮುಖ್ಯವಾದ ಹಂತ. ಸಿನಿಮಾ ಮಾಡೋದು ಮುಖ್ಯವಲ್ಲ ಜನರಿಗೆ ಅದನ್ನು ತಲುಪಿಸುವುದು ಮುಖ್ಯ. ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ.ಇದರಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದು, ಚಿತ್ರದಲ್ಲಿ ಕಾಮಿಡಿ. ಆ್ಯಕ್ಷನ್, ಲವ್ ಹೀಗೆ ಎಲ್ಲಾ ಅಂಶಗಳಿವೆ. ಇದು ನನಗೆ ಸ್ಪೆಷಲ್ ಸಿನಿಮಾ ಎನ್ನಬಹುದು’ ಎಂದರು.

‘ಕೊರೋನಾ ಟೈಮ್‌ನಲ್ಲಿ ನನಗೆ ಈ ಸಿನಿಮಾ ಸಿಕ್ಕಿದ್ದು, ಕಮ್ ಬ್ಯಾಕ್ ಜರ್ನಿ ಎನ್ನಬಹುದು. ನಾನು ಈ ಚಿತ್ರದಲ್ಲಿ ಲವರ್ ಬಾಯ್ ಹಾಗೂ ನೆಗಟಿವ್ ಸೈಡ್ ಪಾತ್ರ ಮಾಡಿದ್ದೇನೆ’ ಎಂದು ನಾಯಕ ಧರ್ಮ ಕೀರ್ತಿರಾಜ್ ತಿಳಿಸಿದರು.

‘ಇದು ತ್ರಿಕೋನ ಪ್ರೇಮ ಕಥೆ” ಒಳಗೊಂಡ ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು ನಾಯಕಿ ಸಂಚಿತಾ ಪಡುಕೋಣೆ.

ಎ2 ಮ್ಯೂಸಿಕ್‌ ಮೂಲಕ ಬಿಡುಗಡೆ ಆಗಿರುವ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್, ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ, ನಟಿ ಶಾನ್ವಿ ಶ್ರೀವಾತ್ಸವ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಣಜಿ ನಾಗರಾಜ್, ಪುಟ್ಟಣ್ಣ ಇತತರು ಅಥಿತಿಗಳಾಗಿ ಆಗಮಿಸಿದ್ದರು.

ಕವಿರಾಜ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವಾಗಿ ಎರಡು ಗೀತೆಗಳನ್ನು ಥೈಲ್ಯಾಂಡ್‌ನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಬಂಡೆ ಚಂದ್ರು, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಂ.ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿದೆ.

Related Posts

error: Content is protected !!