ಸಕೂಚಿ ಎಂಬ ವಾಮಾಚಾರ ಕುರಿತ ಚಿತ್ರ: ಟ್ರೇಲರ್ ರಿಲೀಸ್ ವೇಳೆ ನಡೆದ ಘಟನೆ ವಿಚಿತ್ರ…

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಸಾಕಷ್ಟು ಮಾಟ-ಮಂತ್ರ ಕುರಿತಾದ ಸಿನಿಮಾಗಳು ಬಂದು ಹೋಗಿವೆ. ಇದೀಗ ಆ ಸಾಲಿಗೆ ಸೇರಲು ಸಿದ್ದವಾಗಿದೆ ‘ಸಕೂಚಿ’. ಹೌದು ಸಾವಿನ ಸೂಚಿ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಜೇಂಕಾರ್ ಮ್ಯೂಸಿಕ್‌ನಲ್ಲಿ ರಿಲೀಸ್ ಆದ ಟ್ರೇಲರ್‌ಗೆ ಜಾಲತಾಣದಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಇದೇ ಫೆಬ್ರವರಿ 17ರಂದು ಸಿನಿಮಾ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅಶೋಕ ಚಕ್ರವರ್ತಿ ‘ಇದು ನಾನು ನಿರ್ದೇಶನ ಮಾಡಿರುವ ಮೊದಲ ಸಿನಿಮಾ. ಚಿತ್ರದಲ್ಲೊಂದು ವಿಭಿನ್ನವಾದ ಪಾತ್ರವಿದೆ. ಹಾಗಾಗಿ ನಾನು ಈ ಗೆಟಪ್‌ನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದು ಮಂತ್ರವಾದಿ ಗೆಟಪ್‌ನಲ್ಲಿ ಬಂದ ಕಾರಣ ತಿಳಿಸಿದರು. ನಂತರ ಮಾತನಾಡಿದ ಅವರು ‘ನಾನು ಈ ‘ಸಕೂಚಿ’ ಎಂಬ ಶಬ್ದವನ್ನು ಒಂದಿಷ್ಟು ಕಡೆ ಕೇಳಿದ್ದೆ. ಆ ನಂತರ ‘ಸಕೂಚಿ’ಗೆ ಅರ್ಥ ಅತಿ ಗೋರವಾದ ವಾಮಾಚಾರ ಎಂದು ಗೊತ್ತಾಯ್ತು. ಈ ಬ್ಲಾಕ್ ಮ್ಯಾಜಿಕ್ ಕತೆಯನ್ನು ತೆಗೆದುಕೊಂಡು ಕಮರ್ಶಿಯಲ್ ಆಗಿ ಸಿನಿಮಾ ಮಾಡಲಾಗಿದೆ.

ಇದರಲ್ಲಿ ನಾಯಕ ಹೇಗೆ ಸಕೂಚಿಗೆ ಒಳಗಾಗುತ್ತಾನೆ ಎಂಬುದು ಮುಖ್ಯವಾದ ಅಂಶ. ಶೂಟಿಂಗ್ ಟೈಮ್‌ನಲ್ಲಿ ಒಂದಷ್ಟು ಘಟನೆಗಳು ನಡೆದಿದ್ದು, ನಮ್ಮಗಳ ಗಮನಕ್ಕೆ ಬಂದಿದೆ. ಸಾಕಷ್ಟು ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದು, ಎಲ್ಲಾ ಕಲಾವಿದರು ಚನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ನಾವು ಕತೆಯಾಗಿ ಬದುಕಿದ್ದೇವೆ. ಸಿನಿಮಾವನ್ನು ದೈವ ಬಬ್ಬುಸ್ವಾಮಿಗೆ ಅರ್ಪಣೆ ಮಾಡುತ್ತೇನೆ’ ಎನ್ನುವರು.

ನಾಯಕ ತ್ರಿವಿಕ್ರಮ ಸಾಮ್ರಾಟ್, ‘ನಾನು ನಟನೆ ಆರಂಭಿಸುವ ಮೊದಲೇ ಈ ಕಥೆ ಕೇಳಿದ್ದೆ. ಆಗಲೇ ನಂಗೆ ಕಥೆಯ ಬಗ್ಗೆ ಆಶ್ಚರ್ಯ ಆಗಿತ್ತು. ನಂತರ ಒಂದೆರಡು ಸಿನಿಮಾ ಆದ ಮೇಲೆ ಈ ಚಿತ್ರಕ್ಕೆ ನಾನು ಆಯ್ಕೆಯಾದೆ. ನಿರ್ದೇಶಕರು ತುಂಬಾ ಶ್ರಮ ಹಾಕಿ ಈ ಸಿನಿಮಾ ಮಾಡಿದ್ದಾರೆ. ನಾನಿಲ್ಲಿ ವಿಕ್ಕಿ ಮಾರ್ಟಿನ್ ಪಾತ್ರ ಮಾಡಿದ್ದು, ನನ್ನ ಪಾತ್ರದ ಮೂಲಕ ಸಂಬಂದ, ಸ್ನೇಹ, ಪ್ರೀತಿ ಎಲ್ಲಾ ತೋರಿಸಲಾಗಿದೆ. ಬ್ಲಾಕ್ ಮ್ಯಾಜಿಕ್ ಕುರಿತಾದ ಸಿನಿಮಾ ಇದಾಗಿದ್ದು, ಸಂಗೀತ ಚಿತ್ರದ ಹೈಲೈಟ್ ಎನ್ನಬಹುದು’ ಎಂದರು.

ನಾಯಕಿ ಡಯಾನ ಮಾತನಾಡಿ ‘ಕಥೆ ಕೇಳಿದಾಗ ಥ್ರಿಲ್ ಆದೆ. ಮೂಲತಃ ನಂಗೆ ಹಾರರ್ ಸಿನಿಮಾ ಅಂದ್ರೆ ತುಂಬಾ ಇಷ್ಟ. ನಾನಿಲ್ಲಿ ಇನೋಸೆಂಟ್ ಕಾಲೇಜ್ ಹುಡುಗಿಯಾಗಿ ನಟಿಸಿದ್ದು, ನಂತರ ನನ್ನ ಪಾತ್ರ ಬೇರೆ ಬೇರೆ ತರ ತೆರೆದುಕೊಳ್ಳುತ್ತದೆ. ಮೂರು ವರ್ಷದ ಹಿಂದೆ ಶುರುವಾದ ಈ ಸಿನಿಮಾ ಜರ್ನಿ ಮರೆಯಲಾಗದು’ ಎಂದರು.

ಚಿತ್ರದ ಸಹ ನಿರ್ಮಾಪಕರಾದ ಮಹಾವೀರ್ ಪ್ರಸಾದ್ ‘ಈ ಚಿತ್ರದಲ್ಲಿ ವಾಮಾಚಾರ, ಸಸ್ಪೆನ್ಸ್ ಕಥೆ ಇದ್ದು ಚ್ಯಾಲೆಂಜ್ ಆಗಿ ತೆಗೆದುಕೊಂಡು ಸಿನಿಮಾ ಮಾಡಲಾಗಿದೆ. ಹೊಸ ತಂಡವನ್ನು ನಿವೆಲ್ಲಾ ಬೆಳಿಸಬೇಕು’ ಎಂದು ಹೇಳಿದರು.

ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಬಿಟ್ ಗುರು ಬ್ಯಾಂಡ್ ಖ್ಯಾತಿಯ ಗಣೇಶ್ ಗೋವಿಂದಸ್ವಾಮಿ. ಸಕೂಚಿ ಅವರ ಮೊದಲ ಸಂಗೀತ ನಿರ್ದೇಶನದ ಚಿತ್ರವಾಗಿದೆ. ಅಶ್ವಿನ್ ಬಿ.ಸಿ ನಿರ್ಮಾಣದ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಮಧುಕರ್ ಜೆ ಹಾಗೂ ಮಹಾವೀರ್ ಪ್ರಸಾದ್ ಸಾಥ್ ನೀಡಿದ್ದಾರೆ. ಸತ್ಯ ಸಿನಿ ಡಿಸ್ಟಿಬ್ಯೂಟರ್ಸ್ ನ ಸತ್ಯ ಪ್ರಕಾಶ್ ಹಾಗೂ ಮಂಜುನಾಥ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಆನಂದ್ ಸುಂದ್ರೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಹೇಶ್ ಸಂಕಲನ, ಕುಂಫು ಚಂದ್ರು ಸಾಹಸ, ಆನಂದ್ ನೃತ್ಯವಿದೆ. ಚಿತ್ರದಲ್ಲಿ ಸಂಜಯ್ ರಾಜ್ ನಟನೆಯ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ‘ನೈಜ ಘಟನೆಗಳನ್ನು ಹೆಕ್ಕಿಕೊಂಡು ಈ ಸಿನಿಮಾ ಮಾಡಲಾಗಿದ್ದು ನಿಜವಾದ 30-40 ಮಂಗಳ ಮುಖಿಯರು ಅಭಿನಯ ಮಾಡಿದ್ದು ಇದು ಮಹತ್ವದ ವಿಷಯವಾಗಿದೆ’ ಎಂದರು ಸಂಜಯ್ ರಾಜ್.

Related Posts

error: Content is protected !!