Categories
ಸಿನಿ ಸುದ್ದಿ

ಬಂಧಮುಕ್ತ ಗಿಣಿ, ಹೊರ ಬರ್ತಾರೆ ರಾಗಿಣಿ, 140 ದಿನಗಳ ಕಾಲ ಜೈಲಿನಲ್ಲಿದ್ದ ತುಪ್ಪದ ಬೆಡಗಿಗೆ ಆದ ಅನುಭವ ಏನು?

ಜೈಲಿನಿಂದ ಹೊರಬಂದ ನಂತರ‌ ಸಿನಿಮಾ ಮಂದಿಗೆ ದರ್ಶನ ಕೊಡ್ತಾರಾ ರಾಗಿಣಿ….


ತುಪ್ಪ ಬೇಕಾ ತುಪ್ಪ ಎನ್ಜುವ ಐಟಂ ಸಾಂಗ್ ಮೂಲಕ ತುಪ್ಪದ ಬೆಡಗಿ ಅಂತಲೇ ಖ್ಯಾತಿ ಪಡೆದ ನಟಿ ರಾಗಿಣಿ ದ್ವಿವೇದಿ ಇಂದು ಜೈಲಿನಿಂದ ಹೊರ ಬರುತ್ತಿದ್ದಾರೆ. ಮೊನ್ನೆಯಷ್ಟೇ ಸುಪ್ರಿಂ ಕೊರ್ಟ್ ನಲ್ಲಿ ಸಿಕ್ಕ ಜಾಮೀನಿ ನೊಂದಿಗೆ ರಾಗಿಣಿ ಬಂಧ ಮುಕ್ತಗೊಂಡಿದ್ದಾರೆ.
ಕೊನೆಗೂ 146 ದಿನಗಳ ಅವರ ಜೈಲುವಾಸ ಇಂದಿಗೆ ಮುಕ್ತಾಯ ಗೊಳ್ಳುತ್ತಿದೆ. ಅವರೊಂದಿಗೆ ಜೈಲು ಪಾಲಾಗಿದ್ದ ಗ್ಲಾಮರಸ್ ನಟಿ ಸಂಜನಾ ಈಗಾಗಲೇ ಹೊರ ಬಂದು ಹಲವು ದಿನ ಕಳೆದಿವೆ‌. ಅನಾರೋಗ್ಯದ ಕಾರಣದೊಂದಿಗೆ ಕೊರ್ಟ್ ಸಂಜನಾ ಅವರಿಗೆ ಷರತ್ತುಬದ್ದ ಜಾಮೀನು‌ನೀಡಿದೆ. ಇದಾದ ಬಳಿಕ ಈಗ ರಾಗಿಣಿ ಹೊರ ಬರುತ್ತಿದ್ದಾರೆ.‌


ಡ್ರಗ್ಸ್ ಕೇಸ್ ಪ್ರಕರಣ ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಜತೆಗೆ ನಟಿಯರಾದ ಸಂಜನಾ ಹಾಗೂ ರಾಗಿಣಿ ಯವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ ನಂತರ ಕೋರ್ಟ್ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿತ್ತು. ಇದರ ಪರಿಣಾಮ ಇಬ್ಬರು ನಟಿಯರೂ, ಜೈಲು ಪಾಲಾಗಿದ್ದರು.

Categories
ಸಿನಿ ಸುದ್ದಿ

ಮರ್ಧನಿ ಎಂಬ ಥ್ರಿಲ್ಲರ್ – ಹೊಸ ಹುಡುಗನ ರಗಡ್ ಲುಕ್

ಪ್ರತಿಭಾವಂತರ ಸಸ್ಪೆನ್ಸ್ ಸ್ಟೋರಿ!

ಕನ್ನಡದಲ್ಲಿ ದಿನ‌ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಈಗಾಗಲೇ ಕೆಲವು ಚಿತ್ರಗಳು ಸದ್ದಿಲ್ಲದೆ ಸೆಟ್ಟೇರಿವೆ. ಆ ಸಾಲಿಗೆ “ಮರ್ಧನಿ” ಚಿತ್ರವೂ ಸೇರಿದೆ.ಅಂದಹಾಗೆ, ಕಿಚ್ಷ‌ ಸುದೀಪ್‌ ಅವರ ಸಹಕಾರದೊಂದಿಗೆ ಅಂಕಿತ ಫಿಲಂಸ್ ಬ್ಯಾನರಲ್ಲಿ ಭಾರತಿ ಜಗ್ಗಿ ನಿರ್ಮಿಸುತ್ತಿರುವ “ಮರ್ಧನಿ” ಚಿತ್ರಕ್ಕೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಹತ್ತು ದಿನಗಳ ಚಿತ್ರೀಕರಣ ಮಾಡಲಾಗಿದೆ.
ಇನ್ನೂ ಇಪ್ಪತ್ತೈದು ದಿನಗಳ ಚಿತ್ರೀಕರಣ ಬಾಕಿಯಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ನಡೆಸಿದೆ.


ಈ ಹಿಂದೆ “ದೇವರಂಥ ಮನುಷ್ಯ” ಸಿನಿಮಾ ನಿರ್ದೇಶಿಸಿದ್ದ, ಕಿರಣ್‌ ಕುಮಾರ್ ವಿ‌. ಈ ಚಿತ್ರವನ್ನು ನಿರ್ದೇಶಿದ್ದಾರೆ.
ಇನ್ನು , ಈ ಚಿತ್ರಕ್ಕೆ ಅಕ್ಷಯ್ ಹೀರೋ. ಇವರು ಹೋಟೆಲ್ ಮ್ಯಾನೆಜ್‌ಮೆಂಟ್‌ ನಲ್ಲಿ ಗೋಲ್ಡ್ ಮೆಡಲ್, ಕರಾಟೆಯಲ್ಲಿ‌ ಬ್ಲ್ಯಾಕ್ ‌ಬೆಲ್ಟ್ ಹಾಗೂ ಗೋಲ್ಡ್ ಮೆಡಲ್ ಪಡೆದಿದ್ದಾರೆ. ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅಕ್ಷಯ್ , ಈ ಚಿತ್ರದ ಮೂಲಕ ‌ನಾಯಕನಟರಾಗಿ‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಕ್ಷಯ್ ಅವರೇ ಇದಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಹಿತನ್ ಗೌಡ, ಮನೋಹರ್, ಭಾಗ್ಯಲಕ್ಷ್ಮೀ ಗೌಡ, ಮೈಸೂರು ಮಾಲತಿ, ಮಧು, ಸಂತೋಷ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹಿತನ್ ಹಾಸನ್ ಸಂಗೀತ ನೀಡಲಿದ್ದಾರೆ.

ಶಿವಸಾಗರ್ ಛಾಯಾಗ್ರಹಣ ಮಾಡಿದರೆ, ಎಂ.ಎನ್.ವಿಶ್ವ ಸಂಕಲನವಿದೆ. ಪ್ರೇಂ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಗಜೇಂದ್ರ ಸಂಭಾಷಣೆ ಬರೆದಿದ್ದಾರೆ.
ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.

Categories
ಸಿನಿ ಸುದ್ದಿ

ಫ್ಯಾಮಿಲಿ ಪ್ಯಾಕ್ ನೋಡಲು ಬಂದ ಪವರ್ ಸ್ಟಾರ್ , ಚಿತ್ರ ತಂಡಕ್ಕೆ ಶುಭ ಕೋರಿ, ನಿರ್ದೆಶಕರ ಬೆನ್ನುತಟ್ಟಿದ ಪುನೀತ್ ರಾಜ್ ಕುಮಾರ್

ಇದು ಪಕ್ಕಾ ಮನರಂಜನೆಯ ಫ್ಯಾಮಿಲಿ ಪ್ಯಾಕ್ 

ಪಿಆರ್ ಕೆ ಪ್ರೊಡಕ್ಣನ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ತಲುಪಿದೆ. ಒಂದು ಸಾಂಗ ಹಾಗೂ ಆ್ಯಕ್ಣನ್ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿ ಇದೆ. ಗುರುವಾರ( ಜ.21) ದಂದು‌ ಚಿತ್ರದ ನಿರ್ಮಾಪಕರೂ ಆದ ಪುನೀತ್ ರಾಜ್ ಕುಮಾರ್ , ಪತ್ನಿ ಅಶ್ವಿನಿ‌ ಅವರೊಂದಿಗೆ ಚಿತ್ರೀಕರಣ ಸ್ಥಳಕ್ಜೆ ಭೇಟಿನೀಡಿ, ಚಿತ್ರೀಕರಣ ವೀಕ್ಷಿಸಿ ದರು‌. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಅರ್ಜುನ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಸಂಭಾಷಣೆ ಬರೆದಿರುವ ಮಾಸ್ತಿ ಹಾಗೂ ಕಲಾವಿದರಾದ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾ ರಾವ್, ಶರ್ಮಿತಾ ಗೌಡ ಉಪಸ್ಥಿತರಿದ್ದರು. ಪಕ್ಕಾ ಮನರಂಜನೆಯನ್ನೇ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ನಿರ್ಮಾಪಕರು.ಹಾಗೆಯೇ ಅರ್ಜುನ್ ಕುಮಾರ್ ನಿರ್ದೇಶಕ.

ನಟ‌ ಲಿಖಿತ್ ಶೆಟ್ಟಿ ನಿರ್ಮಾಣದ ಜತೆಗೆ ಈ ಚಿತ್ರದ ನಾಯಕ‌ನಟ ಕೂಡ. ಅಮೃತ ಅಯ್ಯಂಗಾರ್ ನಾಯಕಿ.
ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಚಿತ್ರಕ್ಕೆ ಮಾತು ಬರೆದಿದ್ದು ಮಾಸ್ತಿ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಇಲ್ಲಿ ತನಕ ಯಶಸ್ವಿಯಾಗಿ ಸಾಗಿ ಬಂದಿದ್ದು ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ.

Categories
ಸಿನಿ ಸುದ್ದಿ

ಫೆ.5ಕ್ಕೆ ವಿನೋದ್‌ ಪ್ರಭಾಕರ್ ಅವರ‌ ಶ್ಯಾಡೊ ರಿಲೀಸ್

 

ಕೊರೊನಾ ಬಳಿಕ ರಿಲೀಸ್ ಆಗಲಿರುವ ಮೊದಲ ಸ್ಟಾರ್‌ ಚಿತ್ರ

ಕೊರೊನಾ ಹಾವಳಿ ನಂತರ ಅತ್ತ, ಚಿತ್ರರಂಗದ ಚಟುವಟಿಕೆಗಳು ಜೋರಾಗಿವೆ. ಈಗಾಗಲೇ ಸಿನಿಮಾಗಳ ಬಿಡುಗಡೆ ಪರ್ವ ಶುರುವಾಗಿದೆ. ಫೆಬ್ರವರಿ 5ಕ್ಕೆ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ” ಚಿತ್ರ ತೆರೆ ಕಾಣುತ್ತಿದೆ ಎಂಬುದು ವಿಶೇಷ. ಕೊರೊನಾ ಬಳಿಕ ರಿಲೀಸ್ ಆಗುತ್ತಿರುವ ಸ್ಟಾರ್ ನಟನ‌ ಮೊದಲ‌ ಸಿನಿಮಾ ಇದು ಎಂಬುದು ಸುದ್ದಿ.


ಚಿತ್ರವನ್ನು ರವಿಗೌಡ್ರು ನಿರ್ದೇಶನ ಮಾಡಿದರೆ, ಚಕ್ರಿ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಧೀರಜ್ ಎಂಟರ್ ಪ್ರೈಸಸ್ ಮೂಲಕ ಮೋಹನ್‌ದಾಸ್‌ ಪೈ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.‌
ಸಿನಿಮಾ ರಿಲೀಸ್ ಬಗ್ಗೆ ಮಾತನಾಡುವ ಮೋಹನ್ ದಾಸ್ ಪೈ, “ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಎಲ್ಲೆಡೆಯಿಂದಲೂ
ಒಳ್ಳೆಯ ಮೆಚ್ಚುಗೆ ಬರುತ್ತಿದೆ. ಹೀಗಾಗಿ ಈ ಚಿತ್ರ ಬಿಡುಗಡೆ ಬಗ್ಗೆ ಸಡನ್‌ ತೀರ್ಮಾನ ಮಾಡಿಕೊಂಡು ರಿಲೀಸ್ ಮಾಡುತ್ತಿದ್ದೇವೆ. ಲೀಡಿಂಗ್‌ ಸ್ಟಾರ್ ಸಿನಿಮಾ ಇದು. ಹಾಗಾಗಿ ರಿಲೀಸ್ ವಿಚಾರದಲ್ಲೂ ಲೀಡಿಂಗ್ ನಲ್ಲೇ ಇರಬೇಕು.ಬೆಂಬ ಕಾರಣಕ್ಕೆ ಸುಮಾರು 250ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ.


ಎಬಿಸಿಡಿ ಕೆಟಗರಿಯ ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್‌ ಆಗಲಿದೆ. ನಿರ್ಮಾಪಕರಿಗೆ ಸಾಕಷ್ಟು ಸಮಸ್ಯೆ ಇದೆ. ಹಾಗಾಗಿ ಈಗ ಚಿತ್ರವನ್ನು ಸಡನ್ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಶೇ.100ರಷ್ಟು ಗೆಲುವು ಪಡೆಯಲಿದೆ ಎಂಬ ನಂಬಿಕೆ ಇದೆ.
ಸಣ್ಣ ಸೆಂಟರ್‌ಗಳಲ್ಲೂ ಚಿತ್ರ ರಿಲೀಸ್ ಆಗಲಿದೆ.
ಈಗಾಗಲೇ ಚಿತ್ರಮಂದಿರಗಳ ಮಾಲೀಕರ ಜೊತೆ ಮಾತಾಡಿದ್ದೇನೆ. ನಮ್ಮ ನಡುವೆ ಒಳ್ಳೆಯ ಗೆಳೆತನವಿದೆ. ಹಾಗಾಗಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

ಜನರಿಗೆ ಕೋವಿಡ್‌ನಿಂದ ತಲೆ ಕೆಟ್ಟೋಗಿದೆ. ಅವರಿಗೆ ಮನರಂಜನೆ‌ ಬೇಕು. ಶೇ.50ರಷ್ಟು ಅನುಮತಿ ಇದ್ದರೂ, ಜನರು ಬರುತ್ತಾರೆ ಎಂಬ ವಿಶ್ವಾಸ ಇದೆ. ಈ ಚಿತ್ರವನ್ನು
ಕೋಲಾರ, ಮುಳುಬಾಗಿಲು, ಹೊಸೂರು ಕಡೆಯಲ್ಲೂ ಹಾಕ್ತೀನಿ” ಎಂದು ವಿವರ ಕೊಟ್ಟರು ಮೋಹನ ದಾಸ್ ಪೈ.
ನಟ ವಿನೋದ್‌ ಪ್ರಭಾಕರ್ ಅವರಿಗೆ “ಶ್ಯಾಡೊ” ಬಿಡುಗಡೆ ಆಗುತ್ತಿರುವುದು ಖುಷಿ ಕೊಟ್ಟಿದೆ. ಆ ಬಗ್ಗೆ ಹೇಳುವ ಅವರು, ರಿಲೀಸ್ ಓಕೆ ಆದರೆ ಎಲ್ಲವೂ ಹರಿಬಿರಿಯಲ್ಲಿದೆ. ಇಂಡಸ್ಟ್ರಿ ಈಗಷ್ಟೇ ಸ್ಟಡಿಯಾಗುತ್ತಿದೆ. ಇಂತಹ ಸಮಯದಲ್ಲಿ ಪ್ರಚಾರವೂ ಅಗತ್ಯ. ಆದರೆ ಬಿಡುಗಡೆ ಸ್ವಲ್ಪ ಬೇಗ ಆಗುತ್ತಿದೆ. ಸ್ವಲ್ಪ ಅವಧಿಯಲ್ಲೇ ಪ್ರಚಾರ ಮಾಡಬೇಕಿದೆ. ಮಾಧ್ಯಮದ ಸಹಕಾರ ಜಾಸ್ತಿ ಬೇಕು ಎಂದು ಮನವಿ ಇಟ್ಟರು.


ಸಿನಿಮಾ ಬಗ್ಗೆ ಮಾತನಾಡಿದ ವಿನೋದ್, “ಮೊದಲ ಸಲ ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ರವಿಗೌಡ್ರು ಚೆನ್ನಾಗಿ ಮಾಡಿದ್ದಾರೆ. ಶರತ್‌ ಲೋಹಿತಾಶ್ವ ಅವರು ಸಿನಿಮಾದ ಉದ್ದಕ್ಕೂ ಪೋಲಿಸ್‌ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ನನ್ನ ಜೊತೆ ಶೋಬಿತಾ ರಾಣಾ ನಾಯಕಿಯಾಗಿದ್ದಾರೆ.
ಚೋಟಾ ಪ್ರಸಾದ್‌ ಎಡಿಟಿಂಗ್‌ ಮಾಡಿದ್ದಾರೆ. ಇಲ್ಲಿ‌ ವಿನೋದ್ ಮಾಸ್ಟರ್ ಅದ್ಭುತ ಸಾಹಸ‌ ಮಾಡಿಸಿದ್ದಾರೆ. ನನಗೆ ರೆಗ್ಯುಲರ್‌ ಆಕ್ಷನ್‌ ಅನಿಸಲಿಲ್ಲ. ಇಡೀ ಸಿನಿಮಾ ಹೈದರಾಬಾದ್‌ನಲ್ಲಿ ಮಾಡಲಾಗಿದೆ.
ಫೈಟ್ ಸೀನ್ ಗೆ ನಿರ್ದೇಶಕರು ಒಂದೇ ಕ್ಯಾಮೆರಾ ತಂದರು. ಕೇಳಿದ್ದಕ್ಕೆ, “ಇದು ಫೈಟ್‌ ಅಂತ ಮಾಡ್ತಾ ಇಲ್ಲ. ಸೀನ್‌ ರೀತಿ ಮಾಡ್ತಾ ಇದೀವಿ” ಅಂದ್ರು ಅವರ ಪ್ಲಾನಿಂಗ್ ಚೆನ್ನಾಗಿತ್ತು.


ಚಿತ್ರದಲ್ಲಿ ಎರಡು ಸಾಂಗ್‌ ಇದೆ. ಜೊತೆಗೆ ಆಕ್ಷನ್‌ ಪ್ಯಾಕ್‌, ಮನರಂಜನೆ ಹೆಚ್ಚು ಇದೆ. ಫೆ.5ಕ್ಕೆ ರಿಲೀಸ್ ಅಂದಾಗ, ಆಡಿಯನ್ಸ್‌ ಬರ್ತಾರಾ? ಎಂಬ ಅನುಮಾನ ಬಂತು. ಆದರೂ ಅಭಿಮಾನಿಗಳು ಸಿನಿಮಾ ನೋಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.
ಈ ಚಿತ್ರ ನೋಡುಗರಿಗೆ ಬೇರೆ ಫೀಲ್ ಸಿಗುತ್ತೆ. ನೋಡೋಕೆ ಬಂದವರು ಶೇ.100 ರಷ್ಟು ಖುಷಿ ಪಡುತ್ತಾರೆ. ಈ ಸಿನಿಮಾಗೆ ಮಾಲ್‌ ಆಡಿಯನ್ಸ್‌ ಜಾಸ್ತಿ ಆಗ್ತಾರೆ, ಯಾಕೆಂದರೆ ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ ಇದು. ಹಾಗಾಗಿ ಯಾರಿಗೂ ನಿರಾಶೆ ಆಗೋದಿಲ್ಲ ಎನ್ನುತ್ತಾರೆ ವಿನೋದ್.
ಚಿತ್ರದಲ್ಲಿ ಕಾಮಿಡಿ ನಟ ಲೋಕೇಶ್ ಕೂಡ‌ ನಟಿಸಿದ್ದು ಸಿನಿಮಾ ರಿಲೀಸ್ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಡಾ : ರಾಜ್‌ ಲೈಬ್ರರಿಯಲ್ಲಿ ಕಳವು ಮಾಡಿದ ಧ್ರುವ ಸರ್ಜಾ!

ಕದ್ದ ಮಾಲು ಏನು ಅಂತ ಗೊತ್ತಾಗುವುದಿಕ್ಕೆ ಇನ್ನಷ್ಟು ದಿನ ಬೇಕಂತೆ…!!

ನಟ ಧ್ರುವ ಸರ್ಜಾ ಮೇಲೆ ಕಳತನದ ಆರೋಪ ಬಂದಿದೆ. ವರನಟ ಡಾ. ರಾಜ್‌ಕುಮಾರ್‌ ಅವರ ಕಲಾ ಲೈಬ್ರರಿಯಿಂದ ಅವರು ಆಮೂಲ್ಯವಾದ ಒಂದು ವಸ್ತುವನ್ನು ಕಳವು ಮಾಡಿದ್ದಾರಂತೆ. ಅದನ್ನವರು ಕಾಪಿ ಮಾಡಿದ್ದು ಅಂತಾರೆ. ಆದರೆ ಹಾಗೆ ಮಾಡಿದ್ದು ಏನನ್ನು? ಸದ್ಯಕ್ಕೆ ಅದನ್ನವರು ರಿವೀಲ್‌ ಮಾಡಲು ರೆಡಿ ಇಲ್ಲ. ಅದು ಬೇರೆಯವರಿಗೂ ಗೊತ್ತಿಲ್ಲ. ಯಾಕಂದ್ರೆ, ಡಾ. ರಾಜ್‌ ಕಲಾ ಲೈಬ್ರರಿಯಿಂದ ಏನನ್ನು ಕದ್ದು ತಂದಿದ್ದೀಯಾ ಅಂತಲೂ ಯಾರು ವಿಚಾರಣೆ ನಡೆಸಿಲ್ಲ. ಹಾಗಾಗಿ ಅದೇನು ಅಂತ ಯಾರಿಗೂ ಗೊತ್ತಾಗಿಲ್ಲ. ಆದರೂ ʼಪೊಗರುʼ ಚಿತ್ರದಲ್ಲಿನ ಪಾತ್ರಕ್ಕಾಗಿ ತಾವೊಂದು ಅಮೂಲ್ಯವಾದ ವಸ್ತುವನ್ನು ಡಾ. ರಾಜ್‌ ಕುಮಾರ್‌ ಅವರ ಕಲಾ ಲೈಬ್ರರಿಯಿಂದ ಕಳವು ಮಾಡಿದ್ದೇನೆ ಅಂತ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಅದೇನು ಅಂತ ಗೊತ್ತಾಗುವುದಕ್ಕೆ ಇನ್ನಷ್ಟು ದಿನ ಕಾಯಬೇಕು ಅಂತಲೂ ಅವರು ಹೇಳುತ್ತಾರೆ. ಹಾಗಾದ್ರೆ, ನಟ ಧ್ರುವ ಸರ್ಜಾ ಕದ್ದಿದ್ದು ಏನನ್ನು ? ಯಾಕಾಗಿ ? ಆ ಬಗೆಗಿನ ವಿಷಯ ಇಷ್ಟು….


” ಈ ಚಿತ್ರಕ್ಕೆ ನಾನೊಂದು ಕಳವು ಮಾಡಿದ್ದೇನೆ. ಅದೇನು ಅಂತ ನಾನು ಈಗಲೇ ಹೇಳುವುದಿಲ್ಲ. ಆದರೆ ಅದು ನನಗಾಗಿ ಅಲ್ಲ. ಪಾತ್ರಕ್ಕಾಗಿ. ಕತೆಯಲ್ಲಿನ ಪಾತ್ರಕ್ಕಾಗಿ ಸಣ್ಣಗಾಗಿದ್ದು, ಮತ್ತೆ ಅದೇ ಪಾತ್ರಕ್ಕಾಗಿ ದಪ್ಪ ಆಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಹೇಳೋದಿಕ್ಕೆ, ಹಾಗೆಯೇ ಕೇಳೋದಿಕ್ಕೆ ಇದು ಸುಲಭ. ಆದರೆ ಆ ಪ್ರೊಸೆಸ್‌ ಮುಗಿಯೋದಿಕ್ಕೆ ಒಂದು ವರ್ಷ ಆಗಿದೆ. ಅದು ಹೈಸ್ಕೂಲ್‌ ಹುಡುಗನ ಗೆಟಪ್. ಸಣ್ಣ ಆಗಬೇಕು ಅಂತಲೇ ಮೂರು ತಿಂಗಳು ಆದವು. ಅಷ್ಟು ದಿನ ಯಾವುದೇ ರೀತಿಯಲ್ಲಿ ಗಟ್ಟಿ ಪದಾರ್ಥ ತಿನ್ನದೇ ಬರೀ ಜ್ಯೂಸ್‌ ಕುಡಿದುಕೊಂಡೆ ಇದ್ದೆ. ಆ ಮೇಲೆ ಅಂದುಕೊಂಡಂತೆ 62 ಕೆ. ಜಿ ಕಡಿಮೆ ಆದೆ. ಹಾಗೆ ಆಗುವುದಕ್ಕೆ ಮಾಡಿದ ಸರ್ಕಸ್‌ ಅಷ್ಟಿಷ್ಟಲ್ಲ, ಡಯಟ್‌ ಹಾಗೂ ವರ್ಕೌಟ್‌ ಜತೆಗೆ ಯೋಗಾ ಕೂಡ ಮಾಡಿದೆ. ಯೋಗ ಪ್ರಾಕ್ಟಿಸ್‌ ಗೆ ನಂಗೆ ಪ್ರೇರಣೆ ವರನಟ ಡಾ. ರಾಜ್‌ ಕುಮಾರ್‌ . ಅವರ ಮಾಡುತ್ತಿದ್ದ ಯೋಗಾಸನಗಳ ಒಂದು ಕಲೆಯನ್ನು ಅವರಿಂದ ಸ್ಪೂರ್ತಿ ಪಡೆದು ಪ್ರಾಕ್ಟಿಸ್‌ ಮಾಡಿದೆ. ಮುಂದೆ ಅಷ್ಟೇ ದಿನಗಳಲ್ಲಿ ನನಗಿದ್ದ ಸವಾಲು ದಪ್ಪ ಆಗಿವುದು ಸಣ್ಣ ಆಗಿ ೬೨ ಕೆಜೆ ಇದ್ದವನು ಮುಂದೆ 100 ಕೆ.ಜಿ ಯಷ್ಟು ತೂಕ ಹೆಚ್ಚಿಸಿಕೊಂಡೆ. ನನಗಲ್ಲಿ ಸಣ್ಣಗಾಗಲು ಪ್ರಮುಖವಾಗಿ ಕಾರಣವಾಗಿದ್ದ ಡಾ. ರಾಜ್‌ ಅವರು ಮಾಡುತ್ತಿದ್ದ ಒಂದು ಯೋಗದ ಸ್ಪೂರ್ತಿ. ಸದ್ಯಕ್ಕೆ ಅದೇನು ಅಂತ ನಾನು ಹೇಳೋದಿಲ್ಲ. ಅದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ ” ಅಂದ್ರು ನಟ ಧ್ರುವ ಸರ್ಜಾ.

ಫೆ. 19 ಕ್ಕೆ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೊಗರು ರಿಲೀಸ್‌ ಆಗುತ್ತಿದೆ. ಚಿತ್ರೋದ್ಯಮದಿಂದ ಇದಕ್ಕೆ ಬಹುದೊಡ್ಡ ಬೆಂಬಲ ಸಿಕ್ಕಿದೆ, ಸರಿ ಸುಮಾರು 1 ಸಾವಿರ ಸ್ಕ್ರೀನ್‌ ಮೇಲೆ ಈ ಚಿತ್ರ ತೆರೆ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರ ತಂಡ ಆಯೋಜಿಸಿದ್ದ ಪ್ರಚಾರದ ಮೊದಲ ಸುದ್ದಿ ಗೋಷ್ಠಿಯಲ್ಲಿ ಧ್ರುವ ಸರ್ಜಾ ಈ ವಿಷಯ ಹಂಚಿಕೊಂಡರು.

Categories
ಸಿನಿ ಸುದ್ದಿ

ಅಭಿಮಾನಿಗಳ ಜತೆ ನಿಖಿಲ್‌ ಕುಮಾರ್‌ ಹುಟ್ಟು ಹಬ್ಬ, ಕೊರೋನಾ ನಡುವೆ ಇದೆಲ್ಲ ಬೇಕಿತ್ತಾ ಎಂದ ನೆಟ್ಟಿಗ

ನಿಖಿಲ್ ಬರ್ತ್ ಡೇ ಗೆ ಟೀಸರ್‌ ಗಿಫ್ಟ್‌ ನೀಡಿದ ರೈಡರ್‌ ಚಿತ್ರ ತಂಡ, ಟೀಸರ್‌ ತುಂಬಾ ಆಕ್ಷನ್‌ ಸೀನ್‌ ಗಳದ್ದೇ ಅಬ್ಬರ

ʼಜಾಗ್ವಾರ್‌ʼ ಖ್ಯಾತಿಯ ನಟ ನಿಖಿಲ್‌ಕುಮಾರ್‌ ಅವರಿಗೆ ಇಂದು (ಜ.22) ಹುಟ್ಟು ಹಬ್ಬದ ಸಂಭ್ರಮ. ಆದರೆ ಕೊರೋನಾ ಕಾರಣದಿಂದ ಪ್ರತಿ ವರ್ಷದಂತೆ ಈ ವರ್ಷ ಅವರ ಹುಟ್ಟು ಹಬ್ಬ ಇರಲಾರದು ಅಂತ ಸಿನಿಮಾ ಪ್ರೇಕ್ಷಕರು ಅಂದುಕೊಂಡಿದ್ದರ ನಡುವೆಯೇ ಅವರಿಂದು ತಮ್ಮ ನಿವಾಸದಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳ ಜತೆಗೆ ಅದ್ದೂರಿಯಾಗಿಯೇ ಹುಟ್ಟು ಹಬ್ಬ ಆಚರಿಸಿಕೊಂಡರು.

ಈ ವರ್ಷದ ಮಟ್ಟಿಗೆ ಎಲ್ಲಾ ಸ್ಟಾರ್‌ಗಳು ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿಯೇ ಆಚರಿಸಿಕೊಂಡಿದ್ದು ಎಲ್ಲರಿಗೂ ಗೊತ್ತು. ಅದಕ್ಕೆ ಕೊರೋನಾ ಕಾರಣ. ಇದರ ನಡುವೆಯೇ ನಟ ನಿಖಿಲ್‌ ಕುಮಾರ್‌ , ಅಭಿಮಾನಿಗಳ ಜತೆಗೆ ಕೇಕ್‌ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಸೋಷನ್‌ ಮೀಡಿಲಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ನಟ ನಿಖಿಲ್‌ ಕುಮಾರ್‌ ಹುಟ್ಟ ಹಬ್ಬಕ್ಕೆ ಬಹು ನಿರೀಕ್ಷಿತ ರೈಡರ್‌ ಚಿತ್ರ ತಂಡ ಟೀಸರ್‌ ಗಿಫ್ಟ್‌ ನೀಡಿದೆ.

46 ಸೆಂಕೆಡುಗಳ ಅವದಿಯ ʼರೈಡರ್‌ʼ ಚಿತ್ರದ ಟೀಸರ್‌ ಜಬರ್ದಸ್ತ್‌ ಆಗಿದೆ. ಟೀಸರ್‌ನಲ್ಲಿ ಯಾವುದೇ ಡೈಲಾಗ್‌ ಇಲ್ಲ, ಬರೀ ಆಕ್ಷನ್‌ ಸೀನ್ ಗಳನ್ನು ಟೀಸರ್‌ನಲ್ಲಿ ಕಟ್‌ ಮಾಡಿದೆ ಚಿತ್ರ ತಂಡ. ಸದ್ಯಕ್ಕೆ ನಿಖಿಲ್‌ ಕುಮಾರ್‌ ಸಿನಿ ಜರ್ನಿಯಲ್ಲಿ ಇದು ಭಾರೀ ಕುತೂಹಲ ಕೆರಳಿಸಿದ ಚಿತ್ರ. ಟೀಸರ್ ತುಂಬಾ ಬರೀ ನಿಖಿಲ್ ಕುಮಾರಸ್ವಾಮಿ ತುಂಬಿಕೊಂಡಿದ್ದಾರೆ. ಟೀಸರ್‌ ನ ಆರಂಭದಿಂದ ಅಂತ್ಯದ ವರೆಗೂ ದುಷ್ಟರನ್ನು ಡಿಸೈನ್-ಡಿಸೈನ್ ಆಗಿ ಹೊಡೆಯುತ್ತಿದ್ದಾರೆ ನಿಖಿಲ್. ಸಿನಿಮಾದ ಟೈಟಲ್ ಹಾಗೂ ಟೀಸರ್ ನೋಡಿದರೆ ಗೊತ್ತಾಗುತ್ತಿದೆ ಇದೊಂದು ಪಕ್ಕಾ ಹೊಡಿ-ಬಡಿ ಸಿನಿಮಾ ಎಂದು. ಪೂರ್ಣ ಪ್ರಮಾಣದ ಆಕ್ಷನ್ ಹೀರೋ ಆಗುವತ್ತ ನಿಖಿಲ್ ಕುಮಾರಸ್ವಾಮಿ ಗಮನ ಹರಿಸಿದಂತಿದೆ. ಟೀಸರ್‌ ನಲ್ಲಿ ತೋರಿಸಲಾಗಿರುವ ಆಕ್ಷನ್ ದೃಶ್ಯಗಳು ತುಂಬಿಕೊಂಡಿವೆ.ಟಿ ಸಿರೀಸ್‌ ಹಾಗೂ ಲಹರಿ ಮ್ಯೂಜಿಕ್‌ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಬರುತ್ತಿದೆ.

ನಿಖಿಲ್‌ ಹೀರೋ ಆಗಿ ಎಂಟ್ರಿಯಾದ ಚೊಚ್ಚಲ ಚಿತ್ರ ʼ ಜಾಗ್ವಾರ್‌ʼ ಕೂಡ ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತ್ತು. ಎರಡು ಕಡೆ ಅವರೇಜ್‌ ಸಕ್ಸಸ್‌ ಸಿಕ್ಕಿದ್ದು ನಿಮಗೂ ಗೊತ್ತು. ಆದಾದ ನಂತರ ಸೀತಾರಾಮ ಕಲ್ಯಾಣ ಹಾಗೂ ಕುರುಕ್ಷೇತ್ರ ಚಿತ್ರಗಳಲ್ಲಿ ನಿಖಿಲ್‌ ತೆರೆ ಮೇಲೆ ಕಾಣಿಸಿಕೊಂಡರು. ಅಲ್ಲಿಂದ ಒಂದಷ್ಟು ಸಮಯ ರಾಜಕಾರಣ ಅಂತ ಬ್ಯುಸಿ ಆಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಕಂಡ ನಂತರ ಮತ್ತೆ ಸಿನಿಮಾದತ್ತ ಮನಸ್ಸು ಮಾಡಿ,” ರೈಡರ್‌ʼ ಮೂಲಕ ಸುದ್ದಿಯಾದರು.

ಇದೇ ಚಿತ್ರ ತಂಡ ಈಗ ನಿಖಿಲ್‌ ಅವರ ಹುಟ್ಟು ಹಬ್ಬಕ್ಕೆ ಟೀಸರ್‌ ಗಿಫ್ಟ್‌ ನೀಡಿ ಭರ್ಜರಿ ಕುತೂಹಲ ಮೂಡಿಸಿದೆ. ಅದೀಗ ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದು ಲಾಂಚ್‌ ಆದ ನಾಲ್ಕು ಗಂಟೆಗಳಲ್ಲಿ 5 ಲಕ್ಷ ವೀಕ್ಷಣೆ ಪಡೆದಿತ್ತು. ಅದು ನಿಖಿಲ್‌ ಜನಪ್ರಿಯತೆಗೆ ಸಾಕ್ಷಿಯಾಯಿತು.ತೆಲುಗು ಚಿತ್ರ ರಂಗದ ಯುವ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ಆಕ್ಷನ್‌ ಕಟ್‌ ಹೇಳಿರುವ ಚಿತ್ರ ಇದು. ನಿಖಿಲ್ ಕುಮಾರಸ್ವಾಮಿ ಅವರಿಗೆ ಇಲ್ಲಿ ನಾಯಕಿಯಾಗಿ ಕಶ್ಮಿರಾ ಪರದೇಶಿ ಜೋಡಿ. ಉಳಿದಂತೆ ಸಂಪದಾ, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ಅನುಷಾ ರೈ ಇನ್ನೂ ಹಲವರು ನಟಿಸಿದ್ದಾರೆ.

ಟೀಸರ್‌ ಸದ್ದಿನ ಜತೆಗೀಗ ಅವಗು ಗ್ರಾಂಡ್‌ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಕೂಡ ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.ಇದೊಂದು ಸಲ ಸರಳವಾಗಿ ಅಚರಿಸಿಕೊಳ್ಳುವುದಕ್ಕೆ ನಿಖಿಲ್‌ ಅವರಿಗೇನಾಗಿತ್ತು ಅಂತ ಕೆಲವರು ಕಾಮೆಂಟ್‌ ಹಾಕಿದ್ದಾರೆ.ಮತ್ತೆ ಕೆಲವರು ಈಗೇನು ಕೊರೋನಾ ಇದೀಯಾ ಅಂತ ಕಾಮೆಂಟ್‌ ಹಾಕಿದವರನ್ನು ಪ್ರಶ್ನಿಸುವ ಮೂಲಕ ನಿಖಿಲ್‌ ಪರವಹಿಸಿರುವುದು ವಿಚಿತ್ರವಾಗಿದೆ.

Categories
ಸಿನಿ ಸುದ್ದಿ

ಇನ್ಮುಂದೆ ಬೇರ್‌ ಬಾಡಿ ತೋರಿಸಲ್ಲ ಅಂದ್ರು ವಿನೋದ್‌ ಪ್ರಭಾಕರ್

ಹೀಗೆ ಹೇಳಲು ಕಾರಣ ಇಲ್ಲಿದೆ…

ಕನ್ನಡದಲ್ಲಿ ಸದ್ಯದ ಮಟ್ಟಿಗೆ ಬೇರ್‌ಬಾಡಿ ಹೀರೋ ಅಂದಾಕ್ಷಣ, ನೆನಪಾಗೋದೇ ವಿನೋದ್‌ ಪ್ರಭಾಕರ್.‌ ಏಯ್ಟ್‌ ಪ್ಯಾಕ್‌ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿನೋದ್‌ ಪ್ರಭಾಕರ್‌, ತಮ್ಮ ಸಿನಿಮಾಗಳಲ್ಲಿ ಬೇರ್‌ಬಾಡಿ ಮೂಲಕವೇ ಸುದ್ದಿಯಾದವರು. ವಾವ್‌ ಎ ಬಾಡಿ ಎಂಬ ಉದ್ಘಾರಕ್ಕೂ ಕಾರಣರಾದವರು. ಇದೀಗ ಸುದ್ದಿಯೊಂದನ್ನು ಹೊರ ಬಿಟ್ಟಿದ್ದಾರೆ.

ಅದು ಬೇರೇನೂ ಅಲ್ಲ, ವಿನೋದ್‌ ಪ್ರಭಾಕರ್‌ ಇನ್ಮುಂದೆ ಬೇರ್‌ ಬಾಡಿ ಮಾಡೋದಿಲ್ಲ. ಇದೇ ಈ ಹೊತ್ತಿನ ಸುದ್ದಿ. ಹೌದು, ಈ ವಿಷಯವನ್ನು ಸ್ವತಃ ವಿನೋದ್‌ ಪ್ರಭಾಕರ್‌ ಅವರೇ ಹೇಳಿಕೊಂಡಿದ್ದಾರೆ. ಹೀಗೆ ಹೇಳಿದ್ದು “ಶ್ಯಾಡೊ” ಪತ್ರಿಕಾಗೋಷ್ಠಿಯಲ್ಲಿ. ಹಾಗಾದರೆ ವಿನೋದ್‌ ಪ್ರಭಾಕರ್‌ ಹೇಳಿದ್ದೇನು ಗೊತ್ತಾ?
ಅವರು “ರಗಡ್‌” ಚಿತ್ರಕ್ಕಾಗಿ ಏಯ್ಟ್‌ ಪ್ಯಾಕ್‌ ಮಾಡಿದ್ದರು. ತಮ್ಮ ಬೇರ್‌ ಬಾಡಿ ಮೂಲಕ ಜೋರು ಸುದ್ದಿಯಾಗಿದ್ದರು ಬಹುತೇಕ ಅವರ ಸಿನಿಮಾ ನಿರ್ದೇಶಕರು ವಿನೋದ್‌ ಪ್ರಭಾಕರ್ ಅವರ ಬೇರ್‌ ಬಾಡಿಯನ್ನೇ ತೋರಿಸಲು ಮುಂದಾದರು.

“ರಗಡ್‌” ಚಿತ್ರಕ್ಕೆ ಬೇರ್‌ ಬಾಡಿ ಮಾಡಿದ್ದ ವಿನೋದ್‌ ಪ್ರಭಾಕರ್‌, ಅವರಿಗೆ ನಮ್ಮ ಚಿತ್ರದಲ್ಲೂ ಮಾಡಿ ಅಂತ ಕೆಲ ನಿರ್ದೇಶಕರು ಹೇಳುತ್ತಿದ್ದಾರೆ. ಹಾಗೆ ಹೇಳಿದವರಲ್ಲಿ “ಶ್ಯಾಡೊʼ ಸಿನಿಮಾ ನಿರ್ದೇಶಕ ರವಿಗೌಡ್ರು ಕೂಡ. ಅವರ ಮಾತಿಗೆ ಓಕೆ ಅಂದ ವಿನೋದ್‌ ಪ್ರಭಾಕರ್‌ ಅವರು, ಅಲ್ಲೊಂದು ಸೀನ್‌ ಮಾಡಿದ್ದಾರೆ. ಆದರೆ, ಅದು ಬೇರ್‌ ಬಾಡಿ ಅಲ್ಲ, ಲೆನಿನ್‌ ಷರ್ಟ್‌ ಮೇಲೆಯೇ ತೋರಿಸುವ ಸೀನ್‌ ಅದು. ಈ ಕುರಿತು ಹೇಳುವ ವಿನೋದ್‌ ಪ್ರಭಾಕರ್‌, “ವರ್ಷಗಟ್ಟಲೆ ಅನ್ನ ನೀರು ಬಿಟ್ಟು, ವಾಟರ್‌ ಕಟ್‌ ಮಾಡಿ ದೇಹ ರೆಡಿಮಾಡಿಕೊಂಡಿದ್ದೇನೆ. ಉಪ್ಪು, ಖಾರ ಇಲ್ಲದೆ ನೀರಲ್ಲೇ ಜೀವಿಸಿದ್ದೇನೆ.

ಇದರಿಂದ ಬೋನ್ಸ್‌ಗೂ ಸಮಸ್ಯೆಯಾಗಿದ್ದುಂಟು. ನೋವು ಪಟ್ಟಿದ್ದುಂಟು. ವೈದ್ಯರು ಕೊನೆಗೆ ಚೆಕ್‌ ಮಾಡಿ, ಉಪ್ಪು-ಖಾರ ತಿನ್ನಿ ಅಂತ ಹೇಳಿದ್ರು. ನಮ್ಮದೂ ಹೊಟ್ಟೆ ಪಾಡಲ್ಲವೇ? ಕಷ್ಟ ಪಟ್ಟು ಹಾಗೆಲ್ಲಾ ಮಾಡಿಕೊಂಡಿದ್ದೇನೆ. ತುಂಬಾ ನೋವು ಅನುಭವಿಸಿದ್ದೂ ಇದೆ. “ವರದ” ಚಿತ್ರೀಕರಣ ಸಮಯದಲ್ಲಿ ಜಂಪ್‌ ಮಾಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದೇನೆ. ಹೀಗಾಗಿ ನಾನು ಇನ್ನು ಮುಂದೆ ಬೇರ್‌ ಬಾಡಿ ಮಾಡೋದಿಲ್ಲ ಎಂದು ತೀರ್ಮಾನಿಸಿದ್ದೇನೆ. ಬಾಡಿ ಫಿಟ್‌ ಆಗಿಟ್ಟುಕೊಂಡೇ ಕೆಲಸ ಮಾಡ್ತೀನಿ” ಎನ್ನುತ್ತಾರೆ ವಿನೋದ್‌ ಪ್ರಭಾಕರ್.‌


ಅವರ “ಶ್ಯಾಡೊ” ಚಿತ್ರ ಫೆಬ್ರವರಿ 5ರಂದು ರಿಲೀಸ್‌ ಆಗುತ್ತಿದೆ. ಈ ಕುರಿತು ಸಂತಸ ಪಡುವ ವಿನೋದ್‌ ಪ್ರಭಾಕರ್‌, ಹಾಗೆಯೇ ಬೇಸರವನ್ನೂ ಹೊರಹಾಕುತ್ತಾರೆ. “ಶ್ಯಾಡೊ” ಚಿತ್ರ 2018ರಲ್ಲಿ ಶುರುವಾಗಿದ್ದು, ರಿಲೀಸ್‌ ಈಗ ಆಗುತ್ತಿದೆ. ಸಿನಿಮಾ ಆಗೋಕೆ ಇಷ್ಟು ವರ್ಷ ಕಾದಿದ್ದೇವೆ. ಆದರೆ, ರಿಲೀಸ್‌ಗೆ ಕಾಯುತ್ತಿಲ್ಲ. ಸಡನ್‌ ಆಗಿ ಹದಿನೈದು ದಿನಗಳಲ್ಲೇ ರಿಲೀಸ್‌ ಮಾಡಿಬಿಟ್ಟರೆ ಹೇಗೆ? ಚಿತ್ರವನ್ನು ಪ್ರಚಾರ ಮಾಡಬಾರದೆ? ಈ ಪ್ರಶ್ನೆ ಅವರದು.


ಇನ್ನು ನನ್ನ ಈ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಸಲ ನರ್ತಕಿ ಥಿಯೇಟರ್ ನಲ್ಲಿ ನನ್ನ “ಶ್ಯಾಡೊ” ಚಿತ್ರ ರಿಲೀಸ್ ಆಗುತ್ತಿದೆ. ಇದು ನನ್ನ 19 ವರ್ಷಗಳ ಸಾಧನೆ ಅನ್ನಬಹುದು. ನಾನು ಪ್ರತಿ ಸಿನಿಮಾ ರಿಲೀಸ್ ವೇಳೆಯೂ ಥಿಯೇಟರ್ ಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ ಬಂದಿದ್ದೇನೆ. ಈ ಚಿತ್ರದ ಬಿಡುಗಡೆ ಸಂದರ್ಭದಲ್ಲೂ ಥಿಯೇಟರ್ ವಿಸಿಟ್ ಕೊಡ್ತೀನಿ” ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ನಮ್ಮೂರ ಆಸ್ಪತ್ರೆ, ನಮ್ಮ ಹೆಮ್ಮೆ- ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಥ್ಯಾಂಕ್ಸ್‌ ಹೇಳಿದ ನಟಿ!

 ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿರುವ ನಟಿ ಅಕ್ಷತಾ ಪಾಂಡವಪುರ

ರಂಗಭೂಮಿ ಕಲಾವಿದೆ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಆಂದ್ರೆ, ಅವರು ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಆಗಿದ್ದಲ್ಲದೆ, ಅಲ್ಲಿನ ಸಿಬ್ಬಂದಿಯ ಸುರಕ್ಷಿತ ಆರೈಕೆಯಿಂದ ಮಗಳೊಂದಿಗೆ ಖುಷಿಯಿಂದ ಮನೆ ಸೇರಿದ್ದಾರೆ.

ಅದೇ ಸಂತೋಷದೊಂದಿಗೆ ಆಸ್ಪತ್ರೆ ಸಿಬ್ಬಂದಿಗಳಾದ ಡಾ. ಶಿಲ್ಪಾಶ್ರೀ, ಡಾ. ಪೃಥ್ವಿ, ಸಿಸ್ಟರ್‌ ಸೋಪಿಯಾ ರಾಣಿ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಕುಮಾರ್‌ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದೆಲ್ಲಕ್ಕಿಂತ ಇಂಪಾರ್ಟೆಂಟ್‌ ವಿಷಯ ಎನಂದ್ರೆ,  ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲರಿಗೂ ತಾತ್ಸರ. ಅದರಲ್ಲೂ ನಟ-ನಟಿಯರು, ಸೆಲಿಬ್ರಿಟಿಗಳು ಅತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅದಕ್ಕೆ ಕಾರಣ ಅಲ್ಲಿನ ಚಿಕಿತ್ಸಾ ಸೇವೆ ಸರಿಯಲ್ಲ ಎನ್ನುವ ಅಪನಂಬಿಕೆ. ಅದರಲ್ಲೂ ಹೆರಿಗೆ ವಿಷಯದಲ್ಲಾ…. ಅದೊಂದು ನರಕ ಅಂತಲೇ ಜನರ ಮಾತು.

ನಟಿ ಅಕ್ಷತಾ ಕೂಡ ಅವರದೇ ಊರಿನ ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಗೆ ದಾಖಲಾಗುವೆ ಅಂತ ಹೇಳಿದಾಗ ಅವರಿಗೆ ಕೇಳಿ ಮಾತು ಒಂದಲ್ಲ, ಹಲವಾರು ಅಂತೆ.

ಮಕ್ಕಳ ವಿಷಯದಲ್ಲಿ ತಮಾಷೆನಾ ? ನಿಜವಾಗೂ ಸರ್ಕಾರಿ ಅಸ್ಪತ್ರೆ ಯೋಚ್ನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿ, ಒಳ್ಳೆಯ ಹಾಸ್ಪಿಟಲ್‌ ನಲ್ಲಿಯೇ ತೋರಿಸಬೇಕು.. ಕಾಸು ಕೊಟ್ಟಂತೆ ಕಜ್ಜಾಯ, ಎನೋ ಮಾಡೋಕೆ ಹೋಗಿ ಇನ್ನೇನೋ ಆದೀತು… ಸರ್ಕಾರಿ ಆಸ್ಪತ್ರೆನಲ್ಲಿ ಅಡ್ಡ ದಿಡ್ಡಿ ನಾರ್ಮಲ್‌ ಮಾಡಿ ಕಳಿಸ್ತಾರೆ, ಅದು ತೆಡೆದುಕೊಳ್ಳೋ ಶಕ್ತಿ ಇರ್ಬೇಕು, ಡಿಲಿವರಿ ಏನೋ ಆಗುತ್ತೆ ಮುಂದೆ ಮಗುವಿನ ಆರೈಕೆ , ಫೀಡಿಂಗ್‌ ಬಗ್ಗೆ ಎಲ್ಲಾ ಏನೂ ಹೇಳಲ್ಲ, ರೋಗಗಳು ಅಂದ್ರೆ ಸ್ವಲ್ಪನೂ ಕೇರ್‌ ಇಲ್ಲ, ಎಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್‌ ಬೇಡ್ವಾ…..

ಅವರು ಪಾಂಡವಪುರ ಸರ್ಕಾರಿ ಆಸ್ಪತ್ರೆನಲ್ಲೇ ಹೆರಿಗೆ ಅಂತ ಅಂದಾಗ ಇಂತಹ ಸಾಕಷ್ಟು ಮಾತು ಅವರ ಕಿವಿಗೆ ಕೇಳಿದವಂತೆ. ಆದರೆ ಅದ್ಯಾವುದಕ್ಕೂ ಅವರು ಭಯ ಪಡದೆ, ಸರ್ಕಾರಿ ಆಸ್ಪತ್ರೆಗೇ ದಾಖಲಾದ್ರಂತೆ.  ಆದರೆ ಅಲ್ಲಿಗೆ ಹೋದಾಗ ಅವರಿಗೆ ಅಲ್ಲಿನ ಸಿಬ್ಬಂದಿ ಕಾಳಜಿ ಕಂಡು ಖುಷಿ ಆಯಿತ್ತಂತೆ. “ ಇವೆಲ್ಲದರ ಮದ್ಯೆ ಅಂತೂ ಇಂತೂ ನಮ್ಮ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಅಂತಾ ಹೇಳಬಲ್ಲೇ ಅಂದ್ರೆ ಅದಕ್ಕೆ ಇಡೀ ಸಿಬ್ಬಂದಿವರ್ಗವೇ ಕಾರಣ. ಅವರೆಲ್ಲರಿಗೂ ಧನ್ಯವಾದಗಳು ಅಂತ ಇದಿಷ್ಟು ಮಾಹಿತಿಯನ್ನು ನಟಿ ಅಕ್ಷತಾ ಪಾಂಡವಪುರ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಖುಷಿಗಾದರೂ, ಇತರ ಕಲಾವಿದರಿಗೂ  ಕೂಡ ಪ್ರೇರಣೆಯಾಗಲಿ. ಆ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿ.

Categories
ಸಿನಿ ಸುದ್ದಿ

ನಂಗೆ ಕ್ವಾಂಟಿಟಿಗಿಂತ ಕ್ವಾಲಿಟಿ  ಮುಖ್ಯ- 3 ವರ್ಷದ ಗ್ಯಾಪ್‌ಗೆ ಧ್ರುವ ಕೊಟ್ಟರು ಕಾರಣ

– ಧ್ರುವ ಅಂದವರಿಗೆ ನನ್‌ ಸಿನ್ಮಾ ನೆನಪಾಗಬೇಕು

– ಕಂಟೆಂಟ್‌ ಆಧಾರಿತ ಸಿನ್ಮಾ ಮಾಡ್ಬೇಕೆನ್ನೋದು ನನ್ನ ಟಾರ್ಗೆಟ್‌

– ನಂಗೆ ಯೂನಿವರ್ಷಲ್‌ ಆದ ಕಾಡಿಸುವ ಕತೆ ಬೇಕು

– ಪೊಗರು ಅಂದ್ರೆ ಬರೀ ಗಡ್ಡ ಬಿಟ್ಟ ಧ್ರುವ ಮಾತ್ರ ಇಲ್ಲ

– ಸಣ್ಣ ಆಗುವುದು, ದಪ್ಪ ಆಗುವುದಂದ್ರೆ ತಮಾಷೆ ಅಲ್ಲ

ʼಪೊಗರುʼ ರಿಲೀಸ್‌ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಜತೆಗೆ ಸಿನಿ ಲಹರಿ ನಡೆಸಿದ ಎಕ್ಸ್‌ ಕ್ಲೂಸಿವ್‌ ಸಂದರ್ಶನ ಇಲ್ಲಿದೆ..

– ಮೂರು ವರ್ಷದ ಬಳಿಕ ತೆರೆ ಮೇಲೆ ಬರ್ತೀದ್ದೀರಿ, ಆದ್ರೆ ಬೇಡಿಕೆಯುಳ್ಳ ಒಬ್ಬ ಸ್ಟಾರ್‌ ದೃಷ್ಟಿಯಲ್ಲಿ ಇದು ದೊಡ್ಡ ಗ್ಯಾಪ್‌ ಅಲ್ವಾ?

ನಿಜ, ಅದ್ರೆ ಅದಕ್ಕೆ ಸಾಕಷ್ಟು ಕಾರಣ ಇವೆ. ಒಬ್ಬ ಆಕ್ಟರ್ ಆಗಿ ನಾನೇನು ಹೇಳೋದಿಕ್ಕೆ ಬಯಸುತ್ತೇನೆಂದ್ರೆ, ‌ನಾವೇನು ಮಾಡ್ತೀವಿ ಅಂತಂದುಕೊಳ್ಳುತ್ತೇವೋ, ಅದಕ್ಕೆ ನಾನಿದ್ದೀನಿ ಅಂತ ಹೇಳೋ ತಂಡಬೇಕು. ಅಂತಹ ಸಪೋರ್ಟ್‌ ಈ ಸಿನಿಮಾ ಟೀಮ್‌ನಲ್ಲಿತ್ತು. ಮೇಲಾಗಿ, ನನ್ನ ಪಾತ್ರಕ್ಕಿಲ್ಲಿ ಸಾಕಷ್ಟು ಶೇಡ್ಸ್‌ ಇವೆ. ಸಣ್ಣ ಆಗಿದ್ದರಿಂದ ಹಿಡಿದು, ಮತ್ತೆ ದಪ್ಪ ಆಗುವುದಂದ್ರೆ ಅದು ಸುಮ್ನೆ ಅಲ್ಲ. ಅದಕ್ಕೆ ಒಂದಷ್ಟು ಟೈಮ್‌ ಹಿಡಿತು. ಜತೆಗೆ ಯಾರನ್ನಾದ್ರೂ ಆಚೆ ಕಡೆಯಿಂದ ಕರೆಸಿಕೊಳ್ಳುವುದಕ್ಕೂ ತುಂಬಾ ಪ್ರೊಸಿಜರ್‌ ಇದ್ವು. ಅದಕ್ಕೂ ಒಂಷ್ಟು ಸಮಯ ಬೇಕಾಯಿತು. ತುಂಬಾ ಎಕ್ಸ್‌ಕ್ಲೂಸಿವ್‌ ಸೀನ್ಸ್‌ ಈ ಸಿನಿಮಾದಲ್ಲಿದೆ. ಬರೀ ಗಡ್ಡ ಬಿಟ್ಕೊಂಡು ನಾನಿಲ್ಲಿ ಕಾಣಿಸಿಕೊಂಡಿಲ್ಲ, ಅದರಾಚೆ, ಆಡಿಯನ್ಸ್‌ಗೆ ಇಷ್ಟ ಆಗುವಂತಹ ಎಲಿಮೆಂಟ್ಸ್‌ ಸಾಕಷ್ಟಿವೆ. ಜತೆಗೆ ಕ್ವಾಂಟಿಟಿಗಿಂತ ಕ್ವಾಲಿಟಿ ಇಂಪಾರ್ಟೆಂಟ್ ನಂಗೆ.

– ಒಬ್ಬ ಆರ್ಟಿಸ್ಟ್‌ ಮೂರು ವರ್ಷ ಒಂದೇ ಪಾತ್ರದಲ್ಲೇ ತೊಡಗಿಸಿಕೊಳ್ಳುವುದಂದ್ರೆ, ಕಷ್ಟ ಅನಿಸೋದಿಲ್ವಾ?

ನಾನೇ ಅಂತಲ್ಲ, ಯಾವುದೇ ಆಕ್ಟರ್‌ಗೂ ಇರಬಹುದಾದ ಅಂತಿಮ ಉದ್ದೇಶ ಆಡಿಯನ್ಸ್‌ಗೆ ರೀಚ್‌ ಆಗ್ಬೇಕು ಅನ್ನೋದು. ಅದರಿಂದ ನಾನೂ ಕೂಡ ಹೊರತಾಗಿಲ್ಲ. ಜತೆಗೆ ಒಂದು ಪಾತ್ರ ಏನು ಕೇಳುತ್ತೋ, ಅದಕ್ಕೆ ತಕ್ಕಂತೆ ನಾವು ಕೂಡ ತೊಡಗಿಸಿಕೊಂಡಾಗಲೇ ಆ ಪಾತ್ರಕ್ಕೆ ಜೀವ ತುಂಬುವುದಕ್ಕೆ ಸಾಧ್ಯ. ಸಣ್ಣವರಿರಲಿ, ದೊಡ್ಡವರಿರಲಿ ಅದನ್ನು ತಲೆಯಲ್ಲಿ ಇಟ್ಕೊಂಡು ಸಿನಿಮಾ ಮಾಡಿದ್ರೇ ಅದೆಲ್ಲ ಕಷ್ಟ ಅಂತ ಎನಿಸುವುದೇ ಇಲ್ಲ.

ಅದು ಸರಿ, ಪಾತ್ರದಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದರ ಆಚೆ ನೀವು, ನಿಮ್ಮ ಖರ್ಚು-ವೆಚ್ಚಗಳ ಲಾಭ-ನಷ್ಟದ ಬಗ್ಗೆ ಯೋಚಿಸೋದಿಲ್ವಾ?

ನೀವು, ಏನೇ ಕಟ್ಟಬೇಕಾದ್ರೂ ಗಟ್ಟಿಯಾದ ಅಡಿಪಾಯ ಇಂಪಾರ್ಟೆಂಟ್.‌ ಯುಟಿಲಿಟಿ ಬಿಲ್ಡಿಂಗ್‌ ಕಟ್ಟಬೇಕಾದ್ರೂ ಅದಕ್ಕೆ ಗಟ್ಟಿ ಅಡಿಪಾಯ ಬೇಕು. ಆಗಲೇ ಗಟ್ಟಿಯಾದ ಒಂದು ಮಲ್ಟಿಸ್ಟೋರ್‌ ಬಿಲ್ಡಿಂಗ್‌ ಎದ್ದು ನಿಲ್ಲುತ್ತದೆ. ನಂಗೂ ಅಷ್ಟೆ. ಧ್ರುವ ಯಾರು ಅಂತ ಕೇಳಿದ್ರೆ ಅದು, ಇದು ಎನ್ನುವುದಕ್ಕಿಂತ ನಾನು ಮಾಡಿರುವ ಸಿನಿಮಾ ನೆನಪಾಗಬೇಕು. ಆ ಮೂಲಕ ಅವರಿಗೂ ಒಂದು ನಂಬಿಕೆ ಬರಬೇಕು. ಆ ಮೇಲೆ ಇದ್ದಿದ್ದೇ, ಹೈ ಸ್ಪೀಡ್‌ ಜರ್ನಿ! ಅದನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಇದು. ಇದು ಮಾತ್ರವಲ್ಲ ಹಿಂದಿನ ಸಿನಿಮಾಗಳು ಕೂಡ. ಕಂಟೆಂಟ್‌ ಅಧಾರಿತ ಸಿನಿಮಾ ಮಾಡ್ಬೇಕು ಅನ್ನೋದಿತ್ತು, ಅದಕ್ಕಾಗಿಯೇ ಈ ಟೈಮ್‌ ತಗೊಂಡೆ.

ಅಂದ್ರೆ ಕಂಟೆಂಟ್‌ ಆಯ್ಕೆ ಮಾಡಿಕೊಳ್ಳುವಾಗಲೇ ಇದು ಎರಡ್ಮೂರು ವರ್ಷ ಆಗುತ್ತೆ ಅಂತ ನೀವೇ ಫಿಕ್ಸ್‌ ಆಗಿರ್ತೀರಾ?

ಸರ್‌, ಇವಾಗ ನಾಗರ ಹಾವು ಸಿನಿಮಾವನ್ನೇ ತೆಗೆದುಕೊಳ್ಳಿ, ಆ ಸಿನಿಮಾ ಮಾಡಿದ ಬಹಳಷ್ಟು ಕಲಾವಿದರು ಈಗಿಲ್ಲ. ಆದ್ರೂ ಆ ಸಿನಿಮಾ ನೋಡೋ ಜನ ಇದ್ದಾರೆ.  ಯಾಕಂದ್ರೆ ಕತೆ, ಜತೆಗೆ ಕಲಾವಿದರ ಅಭಿನಯ. ಅಂದ್ರೆ ಆ ಸಿನಿಮಾವನ್ನು ಆ ಕಾಲದಲ್ಲೇ ಅಷ್ಟು ಕಷ್ಟಪಟ್ಟು, ಅಷ್ಟು ಮುದ್ದಾಗಿ ಮಾಡಿದ್ದರು. ಅಂದ್ರೆ ಸಿನಿಮಾ ಅಂದ್ರೆ ಕಷ್ಟ ಪಟ್ಟು ಮಾಡ್ಬೇಕು ಅನ್ನೋದನ್ನು ನಂಬಿದವನು ನಾನು. ಯಾರು ಇಲ್ಲ ಅಂದ್ರುನೂ ಸಿನಿಮಾ ಇರುತ್ತೆ. ಸಿನಿಮಾ ನೋಡುವ ಪ್ರೇಕ್ಷಕರು ಇರ್ತಾರೆ. ಅದ್ಕಸ್ಕೋರ ಕಷ್ಟಪಟ್ಟು ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಸಿದ್ದಾಂತ.

– ಅಂದ್ರೆ, ಒಂದು ಕಂಟೆಂಟ್‌ ಆಧಾರಿತ ಸಿನಿಮಾ ಮಾಡೋದಕ್ಕೆ  ಇಷ್ಟು ಟೈಮ್‌ ಬೇಕು ಅಂತೀರಾ?

ಒಂದು ಪಾತ್ರಕ್ಕೆ ಸಣ್ಣ ಆಗೋದು, ಮತ್ತೆ ದಪ್ಪ ಆಗೋದು ಅಷ್ಟು ಸುಲಭ ಅಲ್ಲ. ಇದೆಲ್ಲ ಲಾಂಗ್‌ ಪ್ರೊಸೆಸ್.‌ ಅದಕ್ಕೆ ಟೈಮ್‌ ಬೇಕು. ಹಾಗೆ ಟೈಮ್‌ ತಗೊಂಡು ಸಿನಿಮಾ ಮಾಡಿದ್ರೇ ಜನರಿಗೆ ಇಷ್ಟ ಆಗುತ್ತೆ. ಆ ರೀತಿಯಲ್ಲಿ ನಾನು ಟೈಮ್‌ ಬೇಕು ಅನ್ನೋದು.

– ನೀವೇನೋ, ಕಂಟೆಂಟ್‌ ಆಧಾರಿತ ಸಿನ್ಮಾ ಮಾಡ್ಬೇಕು ಅಂತ ಟೈಮ್‌ ಬೇಕು ಅಂತೀರಾ ಆದ್ರೆ ಫ್ಯಾನ್ಸ್‌ ಕೇಳ್ಬೇಕೆ, ವರ್ಷಕ್ಕೆ ಒಂದಾಂದ್ರೂ ಸಿನಿಮಾ ಮಾಡಿ ಅಂತಾರೆ…?

ಪ್ರಶ್ನೆ ಇದಿಷ್ಟೇ ಆಗಿದ್ದರೆ ಮುಗಿಯುತ್ತಿತ್ತು, ಅದ್ರೆ ಅದು ಮುಂದುವರೆಯುತ್ತೆ, ಹ್ಯಾಗೆ ಗೊತ್ತಾ? ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡಿ ಎನ್ನುವ ಫ್ಯಾನ್ಸ್‌, ಒಳ್ಳೆಯ ಸಿನಿಮಾ ಮಾಡಿ ಅಂತಲೂ ಹೇಳ್ತಾರೆ. ಅದು ಕೂಡ ಇಂಪಾರ್ಟೆಂಟ್‌ ಅಲ್ವಾ?  ಅದನ್ನು ನಾನು ತಲೆಯಲ್ಲಿ ಇಟ್ಕೊಂಡು ಸಿನಿಮಾ ಮಾಡ್ಬೇಕು ಅಲ್ವಾ?

– ಖರಾಬು ಹಾಡಿನ ಬಗ್ಗೆ ಕೆಲವು ಕಾಮೆಂಟ್‌ ಬಂದಿದ್ವು, ನಾಯಕಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಅನ್ನೋದು ಆರೋಪ..

ಅವರಿಗೆ ಹಾಗೆನಿಸಿರಬಹದು, ಆದ್ರೆ ನಮಗೆ ಅದು ಹಾಗೆನಿಸಿಲ್ಲ. ನೆಗೆಟಿವ್‌ ಕಾಮೆಂಟ್‌ ಹಾಕಿದವರೆಲ್ಲ ಆ ಹಾಡು ನೋಡಿದ್ದಾರೆ, ಇಷ್ಟ ಪಟ್ಟಿದ್ದಾರೆ. ಅದೇ ಕಾರಣದಿಂದ ಅಲ್ವಾ, ಅದು ಅಷ್ಟು ದೊಡ್ಡ ಸಕ್ಸಸ್‌ ಕಂಡಿದ್ದು. ನಾನು ಪಾಸಿಟಿವ್‌ ಆಗಿಯೇ ತೆಗೆದುಕೊಂಡಿದ್ದೇನೆ. ಯಾಕೆ ಗೊತ್ತಾ, ಸಿನಿಮಾ ನೋಡಿದಾಗ ಅದರ ವಾಸ್ತವ ಗೊತ್ತಾಗುತ್ತದೆ. ಅದೇನು ಅಂತ ನಮಗೆ ಗೊತ್ತಿದೆ, ಹಾಗಾಗಿ ನಾನೇನು ಬೇಸರ ಪಟ್ಟುಕೊಂಡಿಲ್ಲ.

– ಸಿನಿಮಾ ಜರ್ನಿ ಶುರುವಾಗಿ ಹತ್ತು ವರ್ಷ, ಇಷ್ಟು ವರ್ಷದಲ್ಲಿ ನೀವು ಮಾಡಿರೋ ಸಿನಿಮಾಗಳ ಸಂಖ್ಯೆ ತುಂಬಾ ಕಮ್ಮಿ, ಆದ್ರೆ, ಸಿನಿಮಾ ಮಾಡ್ಮೇಕು ಅಂತ ಇಷ್ಟು ವರ್ಷದಲ್ಲಿ ಎಷ್ಟು ಕತೆ ಕೇಳಿದ್ದೀರಿ, ಎಷ್ಟು ರಿಜೆಕ್ಟ್‌ ಮಾಡಿದ್ದೀರಿ?

ನಾನು ಲೆಕ್ಕ ಹೇಳೋದಿಲ್ಲ. ಯಾಕಂದ್ರೆ, ನಾನು ಕೇಳಿದ ಕತೆಗಳೆಲ್ಲವೂ ಅತ್ಯುತ್ತಮ ಕತೆಗಳೆ, ಯಾವುದು ಸರಿ ಇರಲಿಲ್ಲ ಅಂತ ನಂಗಂತೂ ಅನಿಸಿಲ್ಲ. ಆದ್ರೆ, ನನಗೆ ಕಾಡುವ ಕತೆ ಬೇಕು ಅಂತ ನಿರೀಕ್ಷೆ ಮಾಡುತ್ತಿದೆ. ಅಂತಹ ಕತೆಗಳು ಸಿಕ್ಕಾಗ ಸಿನಿಮಾ ಮಾಡ್ತಾ ಬಂದಿದ್ದೇನೆ. ಮುಂದೆ ಕೂಡ ನಂದು ಇದೇ ಪಾಲಿಸಿ.

– ಕತೆ ಕೇಳುವಾಗ ಈಗಲೂ ನಟ ಅರ್ಜುನ್‌ ಸರ್ಜಾ ಅವರು ಇರ್ತಾರಾ?

ಖಂಡಿತಾ, ಅವರ ಅನುಭವಕ್ಕೆ ನಾನೇನು ಅಲ್ಲ. ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಮೊದಲು ಅಂಕಲ್‌ ಜತೆಗೆ ಕುಳಿತು ಕತೆ ಕೇಳ್ತೀನಿ. ಆಮೇಲೆ ಸರಿ -ತಪ್ಪು ಯೋಚಿಸಿ ಡಿಸೈಡ್‌ ಮಾಡ್ತೀವಿ.

– ಮುಂದೆ ನೀವು ನಿರೀಕ್ಷೆ ಮಾಡುವ ಕತೆಗಳ ಆಯ್ಕೆ ಕೂಡ ಕಂಟೆಂಟ್‌ ಆಧಾರಿತವಾಗಿರುತ್ತಾ?

ಈಗ ಇರೋದೇ ಯೂನಿವರ್ಷನ್‌ ಸಬ್ಜೆಕ್ಟ್‌ ಆಧಾರಿತ ಕತೆಗಳು. ಯಾಕಂದ್ರೆ. ಕಾಲಕ್ಕೆ ತಕ್ಕಂತೆ ನಾವೇವಾದ್ರೂ ಮಾಡ್ಬೇಕು ಅಂದ್ರೆ ಅಂತಹ ಕತೆಗಳು ಬೇಕು. ಅಳೋದು, ನಗೋದು ಯುನಿವರ್ಷಲ್‌ ಅಲ್ವಾ? ಅದಕ್ಕೆ ಭಾಷೆ, ದೇಶದ ಗಡಿ ಇಲ್ಲ. ಅಂತಹ ಕತೆಗಳು ಬಂದ್ರೆ, ಬೇರೆ ಭಾಷೆಯ ಸಿನಿಮಾಗಳ ಹಾಗೆ ಬೇರೆ ಕಡೆ ಕೂಡ ಹೋಗಬಹುದು.

– ʼದುಬಾರಿʼ ಚಿತ್ರದ ಜತೆಗೆ ಮುಂದೆ ಯಾವೆಲ್ಲ ನಿರ್ದೇಶಕರ ಜತೆಗೆ ಸಿನಿಮಾ ಮಾಡ್ತಿದ್ದೀರಿ?

ಸದ್ಯಕ್ಕೀಗ ದುಬಾರಿ. ಮುಂದೆ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಜತೆಗೆ ಒಂದು ಪ್ರಾಜೆಕ್ಟ್‌ ಇದೆ. ಇದಿಷ್ಟು ಮಾತ್ರ.

– ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ನಿಮ್ಮ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ವಂತೆ ಯಾಕೆ?

ಅದೇನು ನಂಗೆ ಗೊತ್ತಿಲ್ಲ. ಅವರು ಅವರದೇ ಕೆಲಸಗಳಲ್ಲಿ ಬ್ಯುಸಿಯಾಗಿರಬಹುದು. ಮುಂದೆ ಬರಬಹುದು. ಅಷ್ಟೇ ನಂಗೆ ಗೊತ್ತು.

– ಪೊಗರು ಚಿತ್ರದ ಹೈಲೈಟ್ಸ್‌ ಏನು ?

ಮೊದಲಿಗೆ ಕತೆ. ಅದರ ಜತೆಗೆ ಮೇಕಿಂಗ್.‌ ಉಳಿದಂತೆ ತುಂಬಾ ವಿಷಯ ಇವೆ. ಅದೆಲ್ಲದ್ದಕ್ಕೂ ಸಿನಿಮಾ ನೋಡಿದ್ರೆ ಉತ್ತರ ಸಿಗುತ್ತೆ.

– ಕೊರೋನಾ ಭಯದ ನಡುವೆಯೇ ನಿಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ ಅಂದಾಗ ಹೇಗನಿಸಿತು?

ಮೊದಲಿಗೆ ಭಯ ಇತ್ತು. ಆಮೇಲೆ ಸಿನಿಮಾ ಮೇಲೆ ನಂಬಿಕೆ ಇತ್ತು. ಜನರಿ ಸಿನಿಮಾ ಇಷ್ಟವಾಗುತ್ತೆ ಎನ್ನುವ ಕಾನ್ಪೆಡೆನ್ಸ್‌ ಬಂತು. ಈಗ ಓಕೆ.

Categories
ಸಿನಿ ಸುದ್ದಿ

ಎ ವಿಲನ್‌ ಫ್ರಮ್‌ ಕುಂದಾಪುರ! ಭಲೇ ವಜ್ರಾಂಗ್

ಕನ್ನಡಕ್ಕೆ ಮತ್ತೊಬ್ಬ ವಜ್ರದಂತಹ ಖಳನಟ

ಹೀರೋನೇ ಆಗಬೇಕಿಲ್ಲ, ವಿಲನ್‌ ಪಾತ್ರಕ್ಕೂ ಸೈ

ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು.

ಮಾಡೆಲ್‌ನಿಂದ ಸಿನಿಮಾವರೆಗೂ…
ಕನ್ನಡ ಚಿತ್ರರಂಗಕ್ಕೆ ಮಾಡೆಲ್‌ ಕ್ಷೇತ್ರದಿಂದ ಬಂದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಮಾಡೆಲ್‌ನಿಂದ ಎಂಟ್ರಿಯಾದವರ ಪೈಕಿ, ಕೆಲವರಷ್ಟೇ ಇಲ್ಲಿ ಗಟ್ಟಿನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ. ಅಂತಹವರ ಸಾಲಿಗೆ ವಜ್ರಾಂಗ್‌  ಶೆಟ್ಟಿ ಕೂಡ ಒಬ್ಬರು. ಅಜಾನುಬಾಹುನಂತಿರುವ ವಜ್ರಾಂಗ್‌  ಶೆಟ್ಟಿ , ಕನ್ನಡ ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಗತಿಸಿವೆ. ಈ ಆರು ವರ್ಷಗಳಲ್ಲಿ ಅವರು ಹದಿನೈದು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರಿಂದ ಹಿಡಿದು ಸ್ಟಾರ್‌ ನಟರ ಸಿನಿಮಾಗಳಲ್ಲಿ ವಿಲನ್‌ ಆಗಿ ಮಿಂಚಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಜರ್ನಿ ಕುರಿತು ಸ್ವತಃ ವಜ್ರಾಂಗ್‌  ಶೆಟ್ಟಿ  “ಸಿನಿಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.

ಓವರ್‌ ಟು ವಜರಂಗ್‌ ಶೆಟ್ಟಿ…
“ನಾನು ಮೂಲತಃ ಕುಂದಾಪುರ ತಾಲೂಕಿನ ಟೆಕ್ಕಟ್ಟೆ ಗ್ರಾಮದ ಸಾಮಾನ್ಯ ಹುಡುಗ. ಬಿಸಿಎ ಓದು ಮುಗಿಸಿ, ನೇರವಾಗಿ ಬೆಂಗಳೂರಿಗೆ ಬಂದವನು. ಸಿನಿಮಾ ಎಂಬ ಕನಸೇ ಕಾಣದ ನನಗೆ ಸಿನಿಮಾ ಅನ್ನೋ ಅವಕಾಶ ತಾನಾಗಿಯೇ ಬಂತು. 2014ರಲ್ಲಿ ನಾನು ಈ ಬಣ್ಣದ ಲೋಕವನ್ನು ಪ್ರವೇಶ ಮಾಡಿದೆ. “ಸಿದ್ಧಾರ್ಥ” ನನ್ನ ಅಭಿನಯದ ಮೊದಲ ಚಿತ್ರ. ವಿನಯ್‌ರಾಜಕುಮಾರ್‌ ಎದುರು ವಿಲನ್‌ ಆಗಿ ನಟಿಸಿದ ಖುಷಿ ಆ ಸಿನಿಮಾ ಮೂಲಕ ಹೆಚ್ಚಿತು. ಖಳನಾಯಕನಾಗಿ ಮೊದಲ ಸಲ ತೆರೆ ಮೇಲೆ ರಾರಾಜಿಸಿದ ಆ ಕ್ಷಣ ನಿಜಕ್ಕೂ ಅದ್ಭುತ.

ಆ ಸಿನಿಮಾ ಇನ್ನೇನು ಶೂಟಿಂಗ್‌ ನಡೆಯುತ್ತಿರುವಾಗಲೇ ನನಗೆ “ನಮಕ್‌ ಹರಾಮ್‌” ಚಿತ್ರದಲ್ಲೂ ಖಳನಟನಾಗಿ ನಟಿಸುವ ಅವಕಾಶ ಸಿಕ್ಕಿತು. ಆ ಚಿತ್ರದ ಚಿತ್ರೀಕರಣ ಇರುವಾಗಲೇ, “ಮಂತ್ರಂ” ಎಂಬ ಹೊಸ ಚಿತ್ರಕ್ಕೆ ನಾನು ಹೀರೋ ಆಗಿಯೂ ನಟಿಸಿದೆ. ಅದಾದ ಬಳಿಕ ವೆಂಕಟ್‌ ಭಾರಧ್ವಜ್‌ ಅವರ ನಿರ್ದೇಶನದ “ಬಬ್ಲೂಷ” ಚಿತ್ರದಲ್ಲಿ ಬಬ್ಲೂಷ ಎಂಬ ಮೇಜರ್‌ ಪಾತ್ರ ನಿರ್ವಹಿಸಿದೆ. ಆ ಸಿನಿಮಾದ ನಟನೆಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿತು. ನಂತರ “ಮಾದ ಮತ್ತು ಮಾನಸಿ” ಚಿತ್ರದಲ್ಲಿ ಸೆಕೆಂಡ್‌ ಲೀಡ್‌ ಮಾಡಿದೆ. ಅದರೊಂದಿಗೆ “ಕಿನಾರೆ” ಸಿನಿಮಾದಲ್ಲೂ ಸೆಕೆಂಡ್‌ ಲೀಡ್ ಪಾತ್ರ ಮಾಡಿದೆ. ಮಾಲಾಶ್ರೀ ಅವರ “ಉಪ್ಪು ಹುಳಿ ಖಾರ” ಚಿತ್ರದಲ್ಲಿ ಅವರ ಎದುರು ವಿಲನ್‌ ಆಗಿಯೂ ನಟಿಸಿದ್ದೇನೆ. ಉಳಿದಂತೆ ಹೊಸಬರ “ಕಿಸ್‌” ಚಿತ್ರದಲ್ಲೂ ವಿಲನ್.‌ ಅದೇನೋ ಗೊತ್ತಿಲ್ಲ. ಬಹುತೇಕ ಸಿನಿಮಾಗಳಲ್ಲಿ ಖಳನಟನ ಪಾತ್ರಗಳೇ ಹುಡುಕಿ ಬರುತ್ತಿವೆ” ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

ಪಾಸಿಟಿವ್-ನೆಗೆಟಿವ್‌ ಎರಡಕ್ಕೂ ಸೈ
ದರ್ಶನ್‌ ಜೊತೆ ಎರಡು ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿರುವ ವಜ್ರಾಂಗ್‌  ಶೆಟ್ಟಿ ಅವರಿಗೆ ಹೆಮ್ಮೆ ಇದೆ. “ಯಜಮಾನ” ಚಿತ್ರದಲ್ಲೊಂದು ಸಣ್ಣ ಪಾತ್ರ ನಿರ್ವಹಿಸಿದ ಬಳಿಕ ಪುನಃ, “ರಾಬರ್ಟ್‌” ಚಿತ್ರದಲ್ಲಿ ಒಂದು ನೆಗೆಟಿವ್‌ ರೋಲ್‌ ಮಾಡಿದ್ದೇನೆ. ಯಾವಾಗ “ಯಜಮಾನʼ ಸಿನಿಮಾದಲ್ಲಿ ಸಣ್ಣದ್ದಾಗಿ ಕಾಣಿಸಿಕೊಂಡೆನೋ, ಅಲ್ಲಿಂದ ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದುಂಟು. ಅವೆಲ್ಲವೂ ನೆಗೆಟಿವ್‌ ಪಾತ್ರಗಳೇ. ನನಗೆ ನೆಗೆಟಿವ್‌, ಪಾಸಿಟಿವ್‌ ಬಗ್ಗೆ ಗೊತ್ತಿಲ್ಲ. ಒಂದೊಳ್ಳೆಯ ಪಾತ್ರವಿದ್ದರೆ, ಅದು ನೆಗೆಟಿವ್‌ ಇರಲಿ, ಪಾಸಿಟಿವ್‌ ಆಗಿರಲಿ ಮಾಡ್ತೀನಿ. ಪಾತ್ರದಲ್ಲಿ ತೂಕವಿರಬೇಕಷ್ಟೇ.

ಯಾವುದೇ ಪಾತ್ರವಿದ್ದರೂ ಬ್ಯಾಲೆನ್ಸ್‌ ಮಾಡಿಕೊಂಡು ಕೆಲಸ ಮಾಡ್ತೀನಿ. ಸದ್ಯಕ್ಕೆ ರಿಲೀಸ್‌ಗೆ ಈಗ ನಾಲ್ಕು ಚಿತ್ರಗಳಿವೆ. ಈಗ ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ದಿಗಂತ್‌ ಅವರ “ಮಾರಿಗೋಲ್ಡ್‌” ಚಿತ್ರದಲ್ಲೂ ನೆಗೆಟಿವ್‌ ರೋಲ್.‌ “ರೂಮ್‌ಬಾಯ್‌” ಸಿನಿಮಾದಲ್ಲೂ ನೆಗೆಟಿವ್‌ ಶೇಡ್‌ ಇದೆ. ಉಳಿದಂತೆ ಎರಡು ಹೊಸ ಚಿತ್ರಗಳ ಮಾತುಕತೆ ನಡೆಯುತ್ತಿದೆ. ಆ ಪೈಕಿ ಒಂದು ಲೀಡ್‌ ಪಾತ್ರ, ಇನ್ನೊಂದು ದೊಡ್ಡ ಬ್ಯಾನರ್‌ನ ಚಿತ್ರ” ಎಂದು ವಿವರ ಕೊಡುತ್ತಾರೆ ವಜ್ರಾಂಗ್‌  ಶೆಟ್ಟಿ .‌

ಗಾಡ್‌ ಫಾದರ್‌ ಇಲ್ಲದೇ ಬಂದವನು
ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು. ನಿಜ ಹೇಳುವುದಾದರೆ, ನಾನಿಲ್ಲಿಗೆ ಬರುವ ಮುನ್ನ, ಸಿನಿಮಾ ಕನಸು ಕಂಡವನಲ್ಲ.

2014 ರಲ್ಲಿ ನಾನು “ಮಿಸ್ಟರ್‌ ‌ ಕುಂದಾಪುರ” ಆದವನು. ಅಲ್ಲಿಂದ ಬೆಂಗಳೂರು ಬರುವುದಕ್ಕೆ ಒಂದು ಕಾರಣ ಸಿಕ್ತು. ಇಲ್ಲಿಗೆ ಬಂದು ಒಂದು ಕಂಪೆನಿಯಲ್ಲಿ ವರ್ಷ ಕೆಲಸ ಮಾಡಿದೆ. ಆದರೆ, ಅದೇಕೋ ನನಗೆ ಇಂಟ್ರೆಸ್ಟ್‌ ಎನಿಸಲಿಲ್ಲ. ನನ್ನ ಕೆಲಸ ಇದಲ್ಲ ಅನ್ನಿಸತೊಡಗಿತು. ಮಾಡೆಲ್‌ ಕ್ಷೇತ್ರದಿಂದ ಬಂದವನಾಗಿದ್ದರಿಂದ ಕ್ರಮೇಣ ನನಗೂ ಎಲ್ಲೋ ಒಂದ ಕಡೆ ಸಿನಿಮಾ ಮೇಲೆ ಒಲವು ಮೂಡ ತೊಡಗಿತು. ಆದರೆ, ಗಾಡ್‌ಫಾದರ್‌ ಅನ್ನೋರು ನನಗೆ ಯಾರೂ ಇಲ್ಲ. ಹೇಗೆ ಸಿನಿಮಾರಂಗವನ್ನು ತಲುಪುವುದು ಎಂಬ ಪ್ರಶ್ನೆ ಕಾಡಿದ್ದು ನಿಜ. ಹೀಗಿರುವಾಗಲೇ ಗೆಳೆಯರೊಬ್ಬರ ಗೆಳೆಯರ ಮಗನ ಸಿನಿಮಾವೊಂದು ನಡೆಯುತ್ತಿತ್ತು. ಅಲ್ಲಿಗೆ ಕರೆದುಕೊಂಡು ಹೋದ ಗೆಳೆಯನಿಂದ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ನಂತರ “ಸಿದ್ಧಾರ್ಥ” ಸಿನಿಮಾದ ಆಡಿಷನ್‌ಗೆ ಹೋದೆ. ಸ್ವಲ್ಪ ದಿನಗಳ ಬಳಿಕ ಆ ತಂಡದಿಂದ ಆಯ್ಕೆಯಾದ ಬಗ್ಗೆ ಫೋನ್‌ ಬಂತು. ಆ ಸಿನಿಮಾದಲ್ಲಿ ನಟಿಸಿದ್ದೇ ತಡ, ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡಿಲ್ಲ. ಬಂದ ಪಾತ್ರಗಳನ್ನು ಇಷ್ಟಪಟ್ಟು, ಪ್ರೀತಿಯಿಂದ ಮಾಡುತ್ತಿದ್ದೇನೆ.

ಗಟ್ಟಿನೆಲೆ ಕಾಣೋ ಆಸೆ
ಈವರೆಗೆ ನನಗೆ ಸಿನಿಮಾ ಅತೀವ ತೃಪ್ತಿ ಕೊಟ್ಟಿದೆ. ಇಷ್ಟವಾದ ಕೆಲಸ ಬಿಟ್ಟು ಬಂದಿದ್ದಕ್ಕೂ ಈ ಕಲೆ ನನ್ನ ಕೈ ಹಿಡಿದಿದೆ. ಸಿನಿಮಾ ನನಗೆ ಅನ್ನ ಕೊಟ್ಟಿದೆ. ಒಳ್ಳೆಯ ಗೌರವವನ್ನೂ ಕೊಟ್ಟಿದೆ. ಅಪಾರ ಜನರ ಪ್ರೀತಿಯನ್ನೂ ನೀಡಿದೆ. ಇದಕ್ಕಿಂತ ಬೇರೇನು ಬೇಕು. ಸದ್ಯಕ್ಕೆ ಬೇರೆ ಭಾಷೆಯಿಂದ ಅವಕಾಶ ಬಂದಿಲ್ಲ. ಹಾಗೊಂದು ವೇಳೆ ಒಳ್ಳೆಯ ಪಾತ್ರ ಬಂದರೆ ಖಂಡಿತ ಮಾಡ್ತೀನಿ. ಆದರೆ, ಮೊದಲು ಕನ್ನಡಕ್ಕೆ ಆದ್ಯತೆ ನೀಡ್ತೀನಿ. ಇಲ್ಲೇ ಗಟ್ಟಿನೆಲೆಯೂರಬೇಕು ಎಂಬ ಮಹಾದಾಸೆ ನನ್ನದು. ಸಿನಿಮಾಗೆ ಬರುವ ಮುನ್ನ ಯಾವುದರಲ್ಲೂ ಪಕ್ವತೆ ಇರಲಿಲ್ಲ.

ಇಲ್ಲಿ ಅವಕಾಶಗಳು ಬರತೊಡಗಿದ ಮೇಲೆ, ನಟನೆ ಕಲಿತೆ, ಡ್ಯಾನ್ಸ್‌ ಕಲಿತೆ, ಸ್ಟಂಟ್‌ ಕೂಡ ಕಲಿತಿದ್ದೇನೆ. ಒಬ್ಬ ನಟನಿಗೆ ಬೇಕಾದ ಎಲ್ಲಾ ಕ್ವಾಲಿಟೀಸ್‌ ಬಗ್ಗೆಯೂ ತಿಳಿದುಕೊಂಡು ಅದನ್ನೇ ಫಾಲೋ ಮಾಡುತ್ತಿದ್ದೇನೆ. ರೆಗ್ಯುಲರ್‌, ವ್ಯಾಯಾಮ, ಜಿಮ್‌ ಮಾಡುತ್ತಿದ್ದೇನೆ. ಒಂದಷ್ಟು ಹೊಸ ಬಗೆಯ ಚಿತ್ರಗಳನ್ನು ನೋಡುತ್ತಲೇ ಕಲಿಯುತ್ತಿದ್ದೇನೆ. ಇವತ್ತು ನಾನೇನೆ ಆಗಿದ್ದರೂ, ಅದು ನನ್ನ ಅಪ್ಪ, ಅಮ್ಮ, ಅಕ್ಕಂದಿರ ಸಹಕಾರದಿಂದ. ಅವರ ಸಹಕಾರ ಇರದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ನಟ ಆಗುತ್ತಿರಲಿಲ್ಲ. ಹಾಗೆಯೇ ನನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಸಹಕಾರವನ್ನು ಎಂದಿಗೂ ಮರೆಯೋದಿಲ್ಲ ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

error: Content is protected !!