Categories
ಸಿನಿ ಸುದ್ದಿ

ಜನವರಿ 21ಕ್ಕೆ ಫ್ಯಾಂಟಮ್‌ ಹೊಸ ಸುದ್ದಿ! ಶೀರ್ಷಿಕೆ ಬದಲಾದೀತೆ?

ವಿಕ್ರಾಂತ್‌ ರೋಣ ಟೈಟಲ್‌ ಪಕ್ಕಾ ಆಗುವ ಸಾಧ್ಯತೆ ಇದೆ

ಕನ್ನಡದಲ್ಲೀಗ ಸಿನಿಮಾ ಸುದ್ದಿಗಳ ಸುರಿಮಳೆ. ಹೌದು, ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಅತ್ತ ಸಿನಿಮಾರಂಗದ ಚಟುವಟಿಕೆಗಳೂ ಜೋರಾಗಿವೆ. ಈಗ ಹೊಸ ಸುದ್ದಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ತಂಡದಿಂದ ಒಂದು ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಜೋರು ಸುದ್ದಿ ಮಾಡಿತ್ತು. ಚಿತ್ರದ ಟೀಸರ್‌, ಟ್ರೇಲರ್‌ ಬಗ್ಗೆಯೂ ಸಿನಿಮಾ ಮಂದಿಗೆ ಕುತೂಹಲವಿದೆ. ಸದ್ಯಕ್ಕೆ “ಫ್ಯಾಂಟಮ್‌” ಚಿತ್ರತಂಡದಿಂದ ಜನವರಿ 21ರಂದು ಹೊಸ ಪ್ರಕಟಣೆಯೊಂದು ಹೊರಬೀಳಲಿದೆ ಎಂಬ ಸುದ್ದಿ ಬಂದಿದೆ. ಈ ಕುರಿತಂತೆ, ಸ್ವತಃ ನಿರ್ದೇಶಕ ಅನೂಪ್‌ ಭಂಡಾರಿ ತಮ್ಮ ಟ್ವೀಟ್‌ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಜನವರಿ ೨೧ ಸಂಜೆ4.03ಕ್ಕೆ “ಫ್ಯಾಂಟಮ್‌” ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ವಿಷಯ ಹಂಚಿಕೊಂಡಿದ್ದಾರೆ.


ಅಂದಹಾಗೆ, ಆ ಮುಖ್ಯವಾದ ವಿಷಯ ಏನಿರಬಹುದು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಿನಿಮಾದ ಬಿಡುಗಡೆಯ ದಿನವನ್ನು ಘೋಷಣೆ ಮಾಡಬಹುದಾ? ಈ ಪ್ರಶ್ನೆ ಕೂಡ ಹರಿದಾಡುತ್ತಿದೆಯಾದರೂ, ಏನಿರಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಮೊದಲ ಪೋಸ್ಟರ್‌ ನೋಡಿದವರಿಗೆ ಸಾಕಷ್ಟು ಭರವಸೆ ಮೂಡಿಸಿತ್ತು. ಇನ್ನು, ಪ್ಯಾನ್‌ ಇಂಡಿಯಾ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಮಾಹಿತಿ ಇದ್ದರೂ, ಜನವರಿ 21ರಂದು ಹೊರಬರಲಿದೆ.


ಚಿತ್ರದ ಶೀರ್ಷಿಕೆ ಬದಲಾಗಬಹುದಾ?
ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಸುದ್ದಿಯೂ ಇದೆ. ಈಗಾಗಲೇ “ಫ್ಯಾಂಟಮ್” ಶೀರ್ಷಿಕೆ ಬೇರೆ ಬ್ಯಾನರ್‌ನಲ್ಲಿದೆ ಎನ್ನಲಾಗಿದ್ದು, ಹಾಗಾಗಿ ಚಿತ್ರಕ್ಕೆ ಬೇರೆ ಟೈಟಲ್‌ ಇಡುವ ಬಗ್ಗೆಯೂ ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಅಂದಹಾಗೆ, ಈ “ಫ್ಯಾಂಟಮ್” ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗೊಂದು ವೇಳೆ ಶೀರ್ಷಿಕೆ ಬದಲಾದರೆ, “ವಿಕ್ರಾಂತ್‌ ರೋಣ” ಎಂಬ ಶೀರ್ಷಿಕೆ ಪಕ್ಕಾ ಆದರೂ ಆಗಬಹುದು.

ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

ಈ ಹಿಂದೆಯೇ “ಸಿನಿಲಹರಿ” “ಫ್ಯಾಂಟಮ್‌” ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಫ್ಯಾಂಟಮ್‌” ಬದಲಾಗಿ “ವಿಕ್ರಾಂತ್‌ ರೋಣ” ಟೈಟಲ್‌ ಫಿಕ್ಸ್‌ ಆಗಬಹುದು ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಜಾಕ್‌ಮಂಜು ನಿರ್ಮಾಪಕರು.

 

Categories
ಸಿನಿ ಸುದ್ದಿ

ಓ ಮೈ ಲವ್‌ ಅಂದವರಿಗೆ ಸಾಥ್‌ ಕೊಟ್ಟ ಸಚಿವ ಶ್ರೀರಾಮುಲು

ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಗೆ ಸ್ಮೈಲ್‌ ಶೀನು ಆ್ಯಕ್ಷನ್‌ ಕಟ್

ಸದಾ ಕ್ರಿಯಾಶೀಲವಾಗಿ ಯೋಚಿಸುವ ನಿರ್ದೇಶಕ ಸ್ಮೈಲ್‌ ಶೀನು ಅವರೀಗ ಮತ್ತೊಂದು ಬಿಗ್‌ ಬಜೆಟ್‌ ಯೋಜನೆ ಯೊಂದಿಗೆ ಸುದ್ದಿಯಲ್ಲಿದ್ದಾರೆ. ʼತೂಫಾನ್‌ʼ, ʼಬಳ್ಳಾರಿ ದರ್ಬಾರ್‌ʼ ಹಾಗೂʼ 18 ಟು 25ʼ ಚಿತ್ರಗಳ ನಂತರವೀಗ ʼಓ ಮೈ ಲವ್‌ʼ ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವೂ ಮುಗಿದಿದೆ. ವಿಶೇಷ ಅಂದ್ರೆ, ಹಿರಿಯ ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿ ಕುಮಾರ್‌ ಈ ಚಿತ್ರದ ಹೀರೋ. ಹಾಗೆಯೇ ಹೊಸ ಪ್ರತಿಭೆಗಳಾದ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ಹಾಗೂ ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿಯರು. ಇನ್ನು ಬಳ್ಳಾರಿ ಮೂಲದ ಜಿ. ರಾಮಾಂಜನಿ ಈ ಚಿತ್ರದ ನಿರ್ಮಾಪಕರು.

ಮೊನ್ನೆಯಷ್ಟೇ ಚಿತ್ರಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಷಣ್ಮುಖ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆಯಿತು. ಸಚಿವ ಶ್ರೀರಾಮು ಚಿತ್ರದ ಫ್ರಥಮ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ಚಿತ್ರದ ನಿರ್ಮಾಪಕ ರಾಮಾಂಜಿನಿ ಅವರೇ ಚಿತ್ರಕ್ಕೆ ಕತೆ ಬರೆದಿದ್ದಾರಂತೆ. ಜೆಸಿಬಿ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರವು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಮಿಯಾಗಿದ್ದ ರಾಮಾಂಜಿನಿ ಅವರು, ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ಹೇಳಿಕೊಂಡರು.” ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರ. ಚಿಕ್ಕಂದಿನಿಂದಲೂ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸೆ ಇತ್ತು. ಹಾಗೆಯೇ ತೆರೆ ಮೇಲೆ ಬರಬೇಕೆನ್ನುವ ತುಡಿತ ಇತ್ತು. ಅದೇ ನಾನಿಲ್ಲಿಗೆ ಬರಲು ಕಾರಣ. ಜತೆಗೆ ಕತೆ ಬರೆಯೂ ಹುಚ್ಚು ಕೂಡ ನನ್ನನ್ನು ಇಲ್ಲಿಗೆ ಸೆಳೆಯಿತು. ಚಿತ್ರದ ಶೀರ್ಷಿಕೆ ನೋಡಿದಾಗ ಇದೊಂದು ಬರೀ ಪ್ರೇಮಕತೆಯ ಚಿತ್ರ ಅತಂದುಕೊಂಡರೂ, ಇದು ಎಲ್ಲಾ ಅಂಶಗಳು ಇರುವಂತಹ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌, ರೋಮಾನ್ಸ್‌ ಜತೆಗೆ ಕಾಮಿಡಿ ಕೂಡ ಚಿತ್ರದಲ್ಲಿದೆʼ ಎನ್ನುತ್ತಾ ತಾವು ಇಲ್ಲಿಗೆ ಬಂದಿರುವುದರ ಕತೆ ಬಿಚ್ಚಿಟ್ಟರು.


ಚಿತ್ರಕತೆ ಜತೆಗೆ ಸಂಭಾಷಣೆ ಬರೆದಿರುವ ನಿರ್ದೇಶಕ ಸ್ಮೈನ್‌ ಶೀನು, ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಇದೊಂದು ಲವ್‌ ಸಬ್ಜೆಕ್ಟ್‌ ಸಿನಿಮಾ ಮಾತ್ರವಲ್ಲ, ಕತೆಯಲ್ಲೊಂದು ಒಳ್ಳೆಯ ಮೆಸೇಜ್‌ ಕೂಡ ಇದೆ. ಈ ಕಾಲದ ಹುಡುಗ-ಹುಡುಗಿಯರೆಲ್ಲ ವೈಫೈ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಮೊಬೈಲ್‌, ಇಂಟರ್ನೆಟ್‌ ಅಂತ ಮಾನವೀಯ ಸಂಬಂಧ ಮರೆಯುತ್ತಿದ್ದಾರೆ. ಅದೆಲ್ಲಕ್ಕಿಂತ ನಮ್ಮ ನಡುವಿವ ಸಂಬಂಧ , ಪ್ರೀತಿಯೇ ಮುಖ್ಯ ಎನ್ನುವುದನ್ನು ಕತೆ ಹೇಳುತ್ತದೆʼ ಎಂದರು ಸ್ಮೈಲ್‌ ಶೀನು.

ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯಕ್ಕೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಹಾಡುಗಳಿಗೆ ವಿದೇಶಕ್ಕೂ ಹೋಗುವ ಆಲೋಚನೆ ಚಿತ್ರ ತಂಡದಲ್ಲಿದೆ. ಟಾಲಿವುಡ್‌ ನ ಹೆಸರಾಂತ ನಟ ದೇವ್‌ ಗಿಲ್‌ ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಂತೆ. ಚಿತ್ರದ ಆರು ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದು, ಚರಣ್‌ ಅರ್ಜುನ್‌ ಸಂಗೀತ ನೀಡಿದ್ದಾರೆ. ಇಸ್ಮಾರ್ಟ್‌ ಶಂಕರ್‌, ಅಲಾ ವೈಕುಂಠಪುರಂಲೂ ಖ್ಯಾತಿಯ ರಿಯಲ್‌ ಸತೀಶ್‌ ಅ್ಯಕ್ಷನ್‌ ಡೈರೆಕ್ಷನ್‌ ಮಾಡುತ್ತಿರುವುದಾಗಿ ಚಿತ್ರ ತಂಡ ಹೇಳಿದೆ.

Categories
ಸಿನಿ ಸುದ್ದಿ

ಕಲರ್‌ಫುಲ್‌ ಫೀಲ್ಡ್‌ಗೆ ಮತ್ತೆ ಬಂದ ಬಿಂದು – ಬಾಲನಟಿಯಿಂದ ನಾಯಕಿಯವರೆಗೆ

ನಮ್ಮ ಸಂಸ್ಕೃತಿ ಬಿಂಬಿಸುವ ಪಾತ್ರಕ್ಕೆ ಬಿಂದುಶ್ರೀ ಹುಡುಕಾಟ

ಈ ಬಣ್ಣದ ಲೋಕದ ಸೆಳೆತವೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಮತ್ತೆ ಮತ್ತೆ ಬಣ್ಣ ಹಚ್ಚಲೇಬೇಕೆನಿಸುವುದು ಸಹಜ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಮಿಂದೆದ್ದಿದ್ದಾರೆ. ಆ ಸಾಲಿಗೆ ಬಿಂದುಶ್ರೀ ಎಂಬ ನವನಟಿ ಕೂಡ ಈಗ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೌದು, ಬಿಂದುಶ್ರೀ ಚನ್ನಗಿರಿ ಮೂಲದ ಹುಡುಗಿ. ಈ ಹುಡುಗಿಗೆ ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”,”ಶಿವಪ್ಪ ನಾಯಕ”,”ಪ್ರೀತ್ಸೋದ್‌ ತಪ್ಪಾ” ಸೇರಿದಂತೆ ಈವರೆಗೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಇವರ ಪ್ರಯಣ ಸಾಗಿದೆ. “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ನಟನೆ ಜೊತೆಗೆ ಓದು ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್‌ ಎಂಜಿನಿಯರ್.‌ ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ‍್ಯಾಂಕ್.

ಪ್ರತಿಷ್ಠಿತ ಕಂಪೆನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತಾಯಿ ಶಾಸ್ತ್ರೀಯ ಸಂಗೀತ ಕಲಿತವರ. ವೃತ್ತಿಪರ ಗಾಯಕಿಯೇನಲ್ಲ. ಆದರೆ, ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ಮರಳಲು ರೆಡಿಯಾಗಿದ್ದಾರೆ.  ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್‌ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ಕೆಲಸ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಮಾತ್ರ ಮಾಡುತ್ತೇನೆ. ವಿನಾಕಾರಣ ಬೇರೆ ರೀತಿಯ ಪಾತ್ರ ಮಾಡಲಾರೆ” ಎಂಬುದು ಬಿಂಬಶ್ರೀ ಮಾತು.
ಇತ್ತೀಚೆಗೆ ಬಿಂದುಶ್ರೀ ಅಭಿನಯದ “ಮಹಿಷಾಸುರ” ಚಿತ್ರ ರಿಲೀಸ್‌ ಆಗಿತ್ತು. ಈ ಚಿತ್ರದಲ್ಲಿ ಬಿಂದುಶ್ರೀ ನಟಿಸಿದ್ದಾರೆ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಷ್ಟರಲ್ಲೇ ಬಿಡುಗಡೆಯಾಗಲಿದೆ. “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಬಿಂದುಶ್ರೀ ಮೂರು ಕಥೆ ಗಳನ್ನು ಕೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಬಿಂದಶ್ರೀ. ಅದೇನೆ ಇರಲಿ, ಕೈತುಂಬ ಸಂಬಳ ಸಿಗುವ ಕೆಲಸಕ್ಕೆ ಗುಡ್‌ಬೈ ಹೇಳಿ, ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಬಿಂದುಶ್ರೀ ಅವರಿಗೆ ಹೆಮ್ಮೆ ಇದೆ. ಟ್ರೆಡಿಷನಲ್‌ ಪಾತ್ರ ನನಗಿಷ್ಟ. ಅಪ್ಪನಿಗೂ ಅಂಥದ್ದೇ ಪಾತ್ರ ಮಾಡಬೇಕು ಎಂಬ ಬಯಕೆ. ಆ ಕುರಿತು ಸಲಹೆ, ಸೂಚನೆಯನ್ನೂ ನೀಡಿದ್ದಾರೆ. ಸದ್ಯ ನಾನು ನಾಯಕಿ ಆಗಿರವುದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ. ಸದ್ಯ ಇಬ್ಬರು ತಂಗಿಯರಿಗೆ ಅಭಿನಯದಲ್ಲಿ ಆಸಕ್ತಿ ಇಲ್ಲ. ಅಂದು ರವಿಚಂದ್ರನ್, ಸೌಂದರ್ಯ ಅವರಿಗೆ ಅಭಿಮಾನಿಯಾಗಿದ್ದ ಬಿಂದುಶ್ರೀ, ಇಂದು ರಾಧಿಕಾಪಂಡಿತ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಅದೇನೆ ಇರಲಿ, ಪಕ್ಕಾ ಕನ್ನಡದ ಹುಡುಗಿಯಾಗಿರುವ ಬಿಂದುಶ್ರೀ ಇದೀಗ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಇದು ನಿಮ್ಮೂರು, ಹಳ್ಳಿ ಸೊಗಡಿನ ಬೆಳ್ಳಿತೆರೆಯ ಊರು !

ಹಠವಾದಿ ಕ್ರಿಯೇಷನ್ಸ್‌ ಮೂಲಕ ರಾಜಶೇಖರ್ ಚಂದ್ರಶೇಖರ್‌ ನಿರ್ಮಿಸಿದ ಸಿನಿಮಾ

ಇದು ನಿಮ್ಮೂರು ಅಂದ್ರೆ, ನಮ್ಮೂರು ಕೂಡ. ನಿಮ್ಮೂರು ಆಗಲಿ, ನಮ್ಮೂರು ಆಗಲಿ ಎರಡು ಹಳ್ಳಿ. ಆ ಹಳ್ಳಿಯೊಳಗೆ ಏನೀರಲ್ಲ ಹೇಳಿ? ಹಾಸ್ಯ, ರಾಜಕೀಯ, ವಿಡಂಬನೆ, ಗಲಾಟೆ, ಗೂಂಡಾಗಿರಿ, ತಮಾಷೆ ಎಲ್ಲವೂದರ ಮಿಕ್ಸರ್‌ ಹಳ್ಳಿ. ಆ ಹಳ್ಳಿಯೊಳಗಿನ ಹಾಸ್ಯ ಹೇಗಿರುತ್ತೆ ಅನ್ನೋದನ್ನೇ ಪ್ರಧಾನವಾಗಿಟ್ಟುಕೊಂಡು “ನಿಮ್ಮೂರು ʼ ಹೆಸರಲ್ಲೊಂದು ಸಿನಿಮಾ ರೆಡಿ ಆಗಿದೆ. ದಾವಣಗೆರೆ ಮೂಲದ ರಾಜಶೇಖರ್‌ ಚಂದ್ರಶೇಖರ್‌ ಇದರ ನಿರ್ಮಾಪಕರು. ಹಠವಾದಿ ಕ್ರಿಯೇಷನ್ಸ್‌ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.

ವಿಜಯ್‌.ಎಸ್‌ ಈ ಚಿತ್ರದ ನಿರ್ದೇಶಕ. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ತಲಕಾಡು, ಹಾಸನ, ಸಕಲೇಶಪುರ ಹಾಗೂ ರಾಣಿಬೆನ್ನೂರು ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿಜಯ್‌ ಎಸ್.‌ ಅವರ ಪ್ರಕಾರ ಇದೊಂದು ಹಳ್ಳಿ ಸೊಗಡಿನ ಕತೆ. ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕತೆಯ ಹೈಲೈಟ್ಸ್‌ ಅಂತೆ.
” ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯ ಪ್ರಜ್ನೆ ಹೇಗಿರುತ್ತೆ ಎನ್ನುವುದು ಚಿತ್ರದ ಪ್ರಮುಖ ಅಂಶ. ಜತೆಗೆ ಒಂದು ಉತ್ತಮ ಸಂದೇಶ ಚಿತ್ರದಲ್ಲಿದೆ. ಅಲ್ಲದೇ ಗ್ರಾಮೀಣ ಭಾಗದ ಜನರಿಗೆ ಇದು ತಿಳಿದುಕೊಳ್ಳಲೇಬೇಕಾದ ಸಂದೇಶʼ ಎನ್ನುತ್ತಾರೆ ನಿರ್ದೇಶಕ ವಿಜಯ್.‌ ಸದ್ಯಕ್ಕೀಗ ಚಿತ್ರಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿದಿದೆ. ಹಾಗೆಯೇ ಚಿತ್ರದ ಫಸ್ಟ್‌ ಕಾಪಿ ಹೊರ ಬಂದಿದೆ. ಹಾಗೆಯೇ ಚಿತ್ರವನ್ನು ಶೀಘ್ರವೇ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ.

ಚಿತ್ರದ ತಾರಾಗಣದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇದ್ಧಾರೆ. ಲಕ್ಕಿರಾಮ್‌, ವೀಣಾ ಗಂಗಾರಾಮ್‌, ತ್ರಿವಿಕ್ರಮ್‌, ಸಿದ್ದು ಮಂಡ್ಯ, ಮಂಜುನಾಥ್‌, ಅಂಜಿನಪ್ಪ, ಸುಧಾ, ಶ್ರೀಕಾಂತ್‌ ಹೊನ್ನವಳ್ಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಹಾಗೆಯೇ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್‌ ಕಶ್ಯಪ್‌ ಮಧು ಸುದಂಡಿ ಸಂಗೀತ ಸಂಯೋಜನೆ, ಹನುರಾಜ್‌ ಮಧುಗಿರಿ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸವಿದೆ.

Categories
ಸಿನಿ ಸುದ್ದಿ

ಕೆಂಡ‌ ಸಂಪಿಗೆಯ ಹುಡುಗನ ‘ ಕಾಲಾ ಪತ್ಥರ್ ‘ ,’ಕಾಲೇಜ್ ಕುಮಾರ್’ ವಿಕ್ಕಿ ಈಗ ಪಕ್ಕಾ ಕಮರ್ಷಿಯಲ್ !

ಸದ್ಯಕ್ಕೆ ಫಸ್ಟ್ ಲುಕ್ ಮೂಲಕ ಸುದ್ದಿ ಮಾಡಿ ವಿಕ್ಕಿ ವರುಣ್ ಹೊಸ ಸಿನಿಮಾ

ಕೆಂಡ ಸಂಪಿಗೆಯ ಹುಡುಗ ವಿಕ್ಕಿ ವರುಣ್ ಮತ್ತೆ ಬಂದಿದ್ದಾರೆ. ‘ ಕಾಲೇಜ್ ಕುಮಾರ್ ‘ ಚಿತ್ರದ ಒಂದಷ್ಟು ಗ್ಯಾಪ್ ನಂತರವೀಗ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದೊಂದಿಗೆ ಹೊಸ ಅವತಾರ ತಾಳಿದ್ದಾರೆ‌ ‌‌. ಅಂದ ಹಾಗೆ ಆ ಹೊಸ ಅವತಾರದ ಚಿತ್ರ ಕಾಲಾ ಪತ್ಥರ್. ಇಂದು ಅದರ ಫಸ್ಟ್ ಲುಕ್ ಹೊರ ಬಂದಿದೆ. ವಿಕ್ಕಿಯ ಹೊಸ ಅವತಾರದ ದರ್ಶನವಾಗಿರುವುದು ವಿಶೇಷ.

ಇನ್ನು ‘ಕಾಲ ಪತ್ಥರ್’ ಅಂದಾಕ್ಷಣ ಎಲ್ಲೋ ಕೇಳಿದ ನೆನಪು ಅಂತ ನಿಮಗನಿಸಿದರೂ ಅಚ್ಚರಿ ಇಲ್ಲ. ಯಾಕಂದ್ರೆ ಹಿಂದಿಯಲ್ಲಿ ಇದೇ ಹೆಸರಲ್ಲೊಂದು ಸಿನಿಮಾ ಬಂದಿತ್ತು. ಅದು ಯಶ್ ಚೋಪ್ರಾ ನಿರ್ದೇಶನದ ಚಿತ್ರ. ಶಶಿ ಕಪೂರ್, ಅಮಿತಾಬ್ ಬಚ್ಚನ್, ರಾಖೀ ಗುಲ್ಜಾರ್, ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡ ತಾರಾಗಣ ಅಲ್ಲಿತ್ತು. ಸಹಜವಾಗಿ ಇದು ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗೆಲುವು ಕಂಡಿತು. ಅದೇ ಚಿತ್ರದ ಶೀರ್ಷಿಕೆ ಈಗ ಕನ್ನಡಕ್ಕೂ‌ಬಂದಿದೆ. ಹಾಗಂತ‌ ಇದು ಆ ಚಿತ್ರದ ಮುಂದುವರೆದ ಕತೆಯಲ್ಲ.‌ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅದು ಹಿಂದಿ ಕಾಲಾ ಪತ್ತರ್, ಇದು ಕನ್ನಡದ ಕಾಲಾ‌ಪತ್ಥರ್!

ವಿಕ್ಕಿಯ ಕಮರ್ಷಿಯಲ್ ಎಂಟ್ರಿಗೆ ಈ ಟೈಟಲ್ ಸಿಕ್ಕಿದ್ದೇ ವಿಶೇಷಾಗಿದೆ. ಯಾಕಂದ್ರೆ ‘ಕಾಲಾ ಪತ್ಥರ್’ ಎನ್ನುವ ಟೈಟಲ್ ನಲ್ಲೇ ಒಂದು ಪೋರ್ಸ್ ಇದೆ, ಗತ್ತು ಇದೆ.ಅದಕ್ಕೆ ತಕ್ಕಂತೆಯೇ ಅದರ ಫಸ್ಟ್ ಲುಕ್ ಕೂಡ ಹೊರ ಬಂದಿದೆ‌. ಲವರ್ ಬಾಯ್, ಕಾಲೇಜು ಹುಡುಗ ಎನ್ನುವ ಇದುವರೆಗಿನ ಅವರ ಕ್ಯಾರೆಕ್ಟರ್, ಔಟ್ ಲುಕ್ ಹಾಗೂ ಆ ಮ್ಯಾನರಿಸಂ ಆಚೆ, ಪಕ್ಕ ಮಾಸ್ ಹೀರೋ ಆಗಿ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಆ ದೃಷ್ಟಿಯಲ್ಲಿ ಯುವ ಕಲಾವಿದ ವಿಕ್ಕಿ ವರುಣ್ ಅವರಿಗೆ ಇದು ಬಹುದೊಡ್ಡ ನಿರೀಕ್ಷೆ ಯ ಚಿತ್ರ. ಉಳಿದಂತೆ ಎಸ್ ಅಂಡ್ ಎಸ್ ಎಂಟರ್ ಪ್ರೈಸ್ ಸ್ ಮೂಲಕ ನವೀನ್ ಎನ್ನುವವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದು, ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೇ ಚಿತ್ರದ ಸಾಹಿತ್ಯ ಕ್ಕೆ ಯೋಗರಾಜ್ ಭಟ್, ಹರಿ ಸಂತೋಷ್, ಜಯಂತ್ ಕಾಯ್ಕಿಣಿ ಸಾಥ್ ನೀಡಿದ್ದಾರೆ. ಕೆ.ಎಂ. ಪ್ರಕಾಶ್‌ ಸಂಕಲನ ಮಾಡುತ್ತಿದ್ದಾರೆ.‌ಸದ್ಯಕ್ಕೆ ಇಷ್ಟು ಮಾಹಿತಿ ರಿವೀಲ್ ಆಗಿದೆ.

Categories
ಸಿನಿ ಸುದ್ದಿ

ಗೆದ್ದವರ ಹೊಸ ಭರವಸೆಯ ಚಿತ್ರ ! ಕಮರೊಟ್ಟು ಕಡೆಯಿಂದ ಹೊಸ ಚೆಕ್ ಪೋಸ್ಟ್ ಕಡೆಗೆ

ಕಮರೊಟ್ಟು ಜೋಡಿಯ ಹೊಸ ಚಿತ್ರಕ್ಕೆ ಪೂಜೆ

ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಕೊರೊನೊ ಭಯ ದೂರವಾಗುತ್ತಿದ್ದಂತೆಯೇ ಅತ್ತ ಸಿನಿಮಾ ಮಂದಿಯ ಮೊಗದಲ್ಲಿ ಮಂದಹಾಸ ಮೂಡಿದೆ. ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಒಂದಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದೇ ಉತ್ಸಾಹದಲ್ಲೇ ಸಿನಿ ಮಂದಿ ಅಖಾಡಕ್ಕಿಳಿದಿದ್ದಾರೆ.

ಈಗ ಅಂಥದ್ದೇ ಹೊಸ ಹುಮ್ಮಸ್ಸು, ಹುರುಪಿನೊಂದಿಗೆ ಚಿತ್ರತಂಡವೊಂದು ಸ್ಕ್ರಿಪ್ಟ್ ಪೂಜೆ ನೆರವೇರಿಸಿದೆ.
ಹೌದು, ಈ ಹಿಂದೆ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಯಶಸ್ಸಿನ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಪರಮೇಶ್ ಈಗ ಹೊಸ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.


ವಿಶೇಷವೆಂದರೆ, “ಕಮರೊಟ್ಟು ಚೆಕ್ ಪೋಸ್ಟ್” ಯಶಸ್ಸಿನ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಉತ್ಪಲ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತದೇ ಯಶಸ್ಸಿನ ಜೋಡಿ ಹೊಸ ಮೋಡಿ ಮಾಡಲು ಹೊರಟಿದೆ.


ಅಂದಹಾಗೆ, ಅವರ ಕನಸಿನ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. “ಕಮರೊಟ್ಟು ಚೆಕ್ ಪೋಸ್ಟ್” ಕೊಟ್ಟ ಗೆಲುವು ಪುನಃ ಈ ಚಿತ್ರ ಮಾಡೋಕೆ ಕಾರಣವಾಗಿದೆ.
ಈ ಬಾರಿ‌ ನಿರ್ದೇಶಕ ಪರಮೇಶ್, ಒಂದೊಳ್ಳೆಯ ಕಥೆ ಹೆಣೆದು ಚಿತ್ರಕ್ಕೆ ಅಣಿಯಾಗಿದ್ದಾರೆ. ಸದ್ಯಕ್ಕೆ ತೀರ್ಥಹಳ್ಳಿಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

ಈ ಚಿತ್ರದ ತೆರೆಯ ಮೇಲೆ ಯಾರೆಲ್ಲ ಇದ್ದಾರೆ, ತೆರೆಯ ಹಿಂದೆ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಇನ್ನೂ ಮಾಹಿತಿ ಇಲ್ಲ. ಒಳ್ಳೆಯ ದಿನ‌ ಸ್ಕ್ರಿಪ್ಟ್ ಪೂಜೆ ಮಾಡಿರುವ ಪರಮೇಶ್ ಮತ್ತು ಉತ್ಪಲ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಸಿನಿಮಾ ಕಟ್ಟಿಕೊಡಲು ಉತ್ಸುಕರಾಗಿದ್ದಾರೆ.


ಅದೇನೆ ಇರಲಿ, ಒಂದು ಚಿತ್ರ ಆಗುತ್ತಿದ್ದಂತೆಯೇ, ನಿರ್ದೇಶಕ ಮತ್ತು ಹೀರೋ ಮಧ್ಯೆ ಮಾತುಕತೆಯೆ ನಿಂತು ಹೋಗುವ ಈ ಕಾಲದಲ್ಲಿ, ಪುನಃ ಒಟ್ಟಾಗಿ ಒಂದು ಹೊಸ ಸಿನಿಮಾ ಮಾಡಲು ಅಣಿಯಾಗುವುದು ನಿಜಕ್ಕೂ ಅವರಿಬ್ಬರ ನಡುವಿನ ಬಾಂಡಿಂಗ್ ಮುಖ್ಯ. ಇಲ್ಲಿ ಇಬ್ಬರು ಪರಸ್ಪರ ಇಟ್ಟುಕೊಂಡಿರುವ ನಂಬಿಕೆ ಇದಕ್ಕೆ‌ ಬಲವಾದ ಕಾರಣ.


ಇದು ಕೂಡ ಮತ್ತೊಂದು ದೊಡ್ಡ ಗೆಲುವು ಕೊಡುವ ಸಿನಿಮಾ ಆಗಿ ಹೊರಬರಲಿ ಅನ್ನೋದೇ “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ಗೋವಾ ಚಿತ್ರೋತ್ಸವದಲ್ಲಿ ಸುದೀಪ್ ಶೈನಿಂಗ್ – ಕನ್ನಡದಲ್ಲೇ ಮಾತು ಶುರು ಮಾಡಿದ ಕಿಚ್ಚ

ಪಣಜಿ ಚಿತ್ರೋತ್ಸವದಲ್ಲಿ ಸುದೀಪ್ ಗೆ ಗೌರವ

ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡದ ಖ್ಯಾತ ನಟ ಸುದೀಪ್ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ಅಪರೂಪದ ಅವಕಾಶಕ್ಕೆ ಸಾಕ್ಷಿಯಾದ ಸುದೀಪ್, ಆ ಸಮಾರಂಭದ ವೇದಿಕೆಯಲ್ಲಿ ಕನ್ಮಡದಲ್ಲೇ ಮಾತು ಆರಂಭಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ.

ಪಣಜಿಯಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವ
ಜ.16ರಿಂದ ಜ.24ರವರೆಗೆ ನಡೆಯುತ್ತಿದೆ.
ಪ್ರತಿಷ್ಠಿತ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (IFFI) 51ನೇ ಆವೃತ್ತಿಯು ಜ.16ರಿಂದ ಆರಂಭವಾಗಿದ್ದು, ಉದ್ಘಾಟನೆಗೆ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ವಿಶೇಷ.

ಈ ಚಿತ್ರೋತ್ಸವದಲ್ಲಿ ಹಲವಾರು ವಿದೇಶಗಳಿಂದ ಸಿನಿಮಾ‌ ಗಣ್ಯರು, ಸಿನಿ ಪ್ರೇಮಿಗಳು ಆಗಮಿಸಿದ್ದರು.
ಆ ಕಾರ್ಯಕ್ರಮದಲ್ಲಿ ಸುದೀಪ್ ಕನ್ನಡ ಮಾತನಾಡುವ ಅಲ್ಲಿ ನೆರೆದಿದ್ದವರ ಮನ ಗೆದ್ದಿದ್ದಾರೆ ಸುದೀಪ್.
‘ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್‌ ಮಾತು ಶುರು ಮಾಡಿ ಭಾಷೆ ಪ್ರೀತಿ ತೋರಿದ್ದಾರೆ.

‘ಸಿನಿಮಾ ಮತ್ತು ಕ್ರೀಡೆ ಎಂಬುದು ನಮ್ಮೆಲ್ಲರನ್ನೂ ಬೆಸೆದಿದೆ. ಆ ಕಾರಣಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಸಿನಿಮಾ ಎಂಬುದು ಈ ಬಾರಿ ಎಲ್ಲೆಲ್ಲೂ ಹಬ್ಬಲಿ. ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಎರಡನ್ನೂ ಸಿನಿಮಾ ಒದಗಿಸುತ್ತದೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್‌.

Categories
ಸಿನಿ ಸುದ್ದಿ

ರಮೇಶ್‌ ಸುರೇಶ್‌ ಚಿತ್ರಕ್ಕೆ ಕುಂಬಳಕಾಯಿ – ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಚಿತ್ರತಂಡ

ಸಂಭ್ರಮದಲ್ಲಿ ಮಿಂದೆದ್ದ ರಮೇಶ್‌ ಸುರೇಶ್‌ ತಂಡ

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹೊಸಬರ “ರಮೇಶ್‌ ಸುರೇಶ್”‌ ಸುದ್ದಿಯಲ್ಲಿದೆ. ಈ ಸುದ್ದಿಗೆ ಕಾರಣ, ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರಕ್ಕೆ ಕಾಲಿಟ್ಟಿರುವುದು ಒಂದಾದರೆ, ರಂಗಭೂಮಿಯ ಗುಬ್ಬಿವೀರಣ್ಣ ಅವರ ಮರಿಮೊಮ್ಮಗ ಈ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು.

“ರಮೇಶ್‌ ಸುರೇಶ್‌” ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಸರಘಟ್ಟ ಸುತ್ತಮುತ್ತಲಿರುವ ಕಾಡಿನಲ್ಲಿ ಭರ್ಜರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರತಂಡ ಚಿತ್ರಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣ ಪೂರೈಸಿದೆ.

ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ‌ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.

ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು.

ಯಶ್ ರಾಜ್, ಚಂದನಾ, ಬೆನಕ

ಆರ್. ಕೆ. ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಪಿ. ಹಾಗೂ ಶಂಕರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಮಾತಿನ ಭಾಗವನ್ನೂ ಬಹುತೇಕ ಮುಗಿಸಿದೆ. ಈ ಚಿತ್ರದ ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ‌ ಖ್ಯಾತ ನಟ ಸತ್ಯ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನ್ ಜುನೇಜಾ ಮತ್ತು ಅನೇಕ ರಂಗಪ್ರತಿಭೆಗಳು ನಟಿಸಿದ್ದಾರೆ.

ಕೃಷ್ಣ, ಪಿ. ನಿರ್ಮಾಪಕರು

“ರಮೇಶ್‌ ಸುರೇಶ್‌” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ಇದೊಂದು ಹಾಸ್ಯಮಯ ಚಿತ್ರ ಎಂಬುದನ್ನು ಸಾರುತ್ತದೆ. ಕಥೆ ಕೂಡ‌ ಹಾಸ್ಯವಾಗಿಯೇ ಸಾಗಲಿದೆ ಎಂಬುದು ನಿರ್ದೇಶಕದ್ವಯರ ಮಾತು. ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ.

ಮಾಸ್ಟರ್ ರಕ್ಷಿತ್ ಕೃಷ್ಣ

ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಚಿತ್ರದಲ್ಲಿದೆ. ಸಿನಿಮಾ‌ ಅಪ್ಟಟ‌ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು. ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ‌ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೂಡ ತಮ್ಮ ಕೆಲಸ ಮಾಡಿ ಮುಗಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಪ್ರಮೋದ್‌ ಮರವಂತೆ ಇತರರು ಹಾಡು ಬರೆದಿದ್ದಾರೆ. ವಿಶ್ವಜಿತ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ‌ ಎಂಟ್ರಿಯಾಗಿದ್ದಾರೆ.

ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ‌ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ‌ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ‌ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿ‌ನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಇರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್‌ರಾಜ್.
ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ‌ ಇಂಡಸ್ಟ್ರಿಯಲ್ಲಿ ಅವಕಾಶ‌ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ‌ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ.

ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ರಿಲೀಸ್‌ಗೆ ರೆಡಿಯಾಗುತ್ತಿದೆ. ಇಷ್ಟರಲ್ಲೇ ಚಿತ್ರದ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.

Categories
ಸಿನಿ ಸುದ್ದಿ

ಗಾಜನೂರಿಗೆ ಮುಹೂರ್ತ-ಕಂಠೀರವದಲ್ಲಿ ರಂಗೇ ರಂಗು, ಹೊಸಬರ ಸಿನಿಮಾಕ್ಕೆ ಬಂದು ಹರಸಿದ ಅನುಭವಿಗಳ ದಂಡು !

ಅವತಾರ್‌, ಇದು  ನಟ ಅದ್ವೈತ ಅವರ ಹೊಸ ಅವತಾರ

ಬಹುದಿನಗಳ ನಂತರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮತ್ತೆ ಸಿನಿಮಾ ಕಳೆಯ ರಂಗು ತುಂಬಿಕೊಂಡಿತು. ʼಗಾಜನೂರುʼ ಹೆಸರಿನ ಚಿತ್ರದ ಮುಹೂರ್ತ ಕಾರ್ಯಕ್ರಮ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ರಂಗು ಕಳೆ ಗಟ್ಟುವಂತೆ ಮಾಡಿತು. ಚಿತ್ರೋದ್ಯಮದ ಹಲವು ಗಣ್ಯರು ಈ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಅಂದ ಹಾಗೆ , “ಗಾಜನೂರುʼ ಹೊಸಬರ ಸಿನಿಮಾ. ನಿರ್ದೇಶಕ ನಂದಕಿಶೋರ್‌ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಜಯ್‌ ಇದೇ ಮೊದಲು ಆಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ. ಹಾಗೆಯೇ ಕಲಬುರಗಿ ಮೂಲದ ಅವಿನಾಶ್‌ ಈ ಚಿತ್ರದ ನಿರ್ಮಾಪಕ. ಮೂಲತಃ ಉದ್ಯಮಿಯಾಗಿರುವ ಅವಿನಾಶ್‌ ಅವರಿಗೆ  ಇದು ಚೊಚ್ಚಲ ಸಿನಿಮಾ. ಅವತಾರ್‌ ಹಾಗೂ ಸೋನಲ್‌ ಮಾಂತೆರೋ ಈ ಚಿತ್ರದ ನಾಯಕ-ನಾಯಕಿ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ್‌ ಕಿಶೋರ್‌ ಅತಿಥಿಗಳಾಗಿ ಬಂದಿದ್ದರು.

ಧ್ರುವ ಸರ್ಜಾ ಕ್ಲಾಪ್‌ ಮಾಡಿದರೆ, ನಂದ್‌ ಕಿಶೋರ್‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ʼಗಾಜನೂರುʼಚಿತ್ರದ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದರು. ಸದ್ಯಕ್ಕೆ ಮುಹೂರ್ತ ಮುಗಿಸಿಕೊಂಡಿರುವ ಚಿತ್ರ ತಂಡ ಫೆಬ್ರವರಿ ಎರಡನೇ ವಾರದಿಂದ ಚಿತ್ರೀಕರಣ ಶುರುಮಾಡಲಿದೆಯಂತೆ. ಮಂಗಳೂರು, ಬೆಂಗಳೂರು , ಸಕಲೇಶಪುರ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮಾತಿನ ಭಾಗದ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದೆ. ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್‌ ಕೂಡ ಚಿತ್ರ ತಂಡದ್ದು. ಮುಹೂರ್ತದ ನಂತರ ಮಾಧ್ಯಮದ ಮುಂದೆ ಬಂದಿದ್ದ ಚಿತ್ರದ ನಿರ್ದೇಶಕ ವಿಜಯ್‌, ಚಿತ್ರ ತಂಡವನ್ನು ಪರಿಚಯಿಸುವ ಮೂಲಕ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.

” ಗಾಜನೂರು ಅಂದಾಕ್ಷಣ ಕನ್ನಡದ ಮೇರು ನಟ ರಾಜ್‌ ಕುಮಾರ್‌ ಅವರ ಊರು ನೆನಪಾಗುವುದು ಸಹಜ. ಆದರೆ ಅದಕ್ಕೂ ಈ ಚಿತ್ರಕ್ಕೂ ಸಂಬಂಧ ಇಲ್ಲ. ಬದಲಿಗೆ ಈ ಕತೆ ನಡೆಯುವುದು ಶಿವಮೊಗ್ಗ ಜಿಲ್ಲೆ ಗಾಜನೂರು ಎಂಬಲ್ಲಿ. ಹಾಗಾಗಿಯೇ ಚಿತ್ರಕ್ಕೆ ಗಾಜನೂರು ಅಂತ ಹೆಸರಿಟ್ಟಿದ್ದೇವೆʼ ಅಂತ ಚಿತ್ರದ ಶೀರ್ಷಿಕೆಯ ಬಗೆಗಿನ ಕುತೂಹಲಕ್ಕೆ ವಿವರ ನೀಡಿದರು ನಿರ್ದೇಶಕ ವಿಜಯ್.‌ ಇನ್ನು ಚಿತ್ರದ ಕತೆಯ ಬಗ್ಗೆಯೂ ಅವರು ವಿವರ ಕೊಟ್ಟರು.” ಇದೊಂದು ಥ್ರಿಲ್ಲರ್‌ ಕಥಾ ಹಂದರ ಕತೆ. ಸಾಮಾನ್ಯವಾಗಿ ಥ್ರಿಲ್ಲರ್‌ ಅಂದ್ರೆ ಅದೊಂದು ಮರ್ಡರ್‌ ಮಿಸ್ಟ್ರಿಯೇ ಆಗಿರಬೇಕು ಅಂತ ಅಂದುಕೊಳ್ಳುವುದು ಸಹಜ. ಆದರೆ ಇದು ಅದಕ್ಕೆ ಭಿನ್ನವಾದ ಸಿನಿಮಾ. ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ಒಂದು ಮಿಸ್ಸಿಂಗ್‌ ಕೇಸು ದಾಖಲಾಗುತ್ತದೆ. ಅದರ ಸುತ್ತಮುತ್ತ ಈ ಕಥೆ ಸಾಗುತ್ತದೆʼ ಎನ್ನುವುದು ನಿರ್ದೇಶಕ ವಿಜಯ್‌ ಮಾತು. ಚಿತ್ರದ ಕಥೆಗೆ ಬರಹಗಾರ ಕೀರ್ತಿ ಸಾಥ್‌ ನೀಡಿದ್ದಾರೆ.

ಚಿತ್ರದ ನಾಯಕ ನಟ ಅದ್ವೈತ ತಮ್ಮ ಹೆಸರನ್ನು ಈಗ ಅವತಾರ್‌ ಅಂತ ಬದಲಾಯಿಸಿಕೊಂಡಿದ್ದಾರೆ. ಅದ್ಯಾಕೆ ಎನ್ನುವ ಪ್ರಶ್ನೆಗೆ ಅವರು ಕೊಟ್ಟಿದ್ದು,  ಸುಮ್ನೆ ಅಂತ. ಆದರೆ ಚಿತ್ರದ ನಟ-ನಟಿಯರು ಹಾಗೆಲ್ಲ ಸುಮ್ನೆ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಅವರಿಗೂ ಗೆಲುವು ಬೇಕು. ಹಾಗಾಗಿ ಇಂತಹ ಸರ್ಕಸ್‌ ನಡೆಯುತ್ತಲೇ ಇರುತ್ತವೆ. ಇನ್ನು ಅದ್ವೈತ ಚಿತ್ರರಂಗಕ್ಕೆ ಹೊಸಬರಲ್ಲ. ಈಗಾಗಲೇ ʼಹ್ಯಾಪಿ ಜರ್ನಿʼ, ʼಕುಮಾರಿ ೨೧ʼ ಸೇರದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಇದು ಅವರ ಎರಡನೇ ಚಿತ್ರ. ಹಾಗೆಯೇ ತೆಲುಗಿನಲ್ಲೂ ಒಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಕನ್ನಡದಲ್ಲೀಗ ಅದೃಷ್ಟ ಪರೀಕ್ಷಿಸಿಕೊಳ್ಳಲು ಅವತಾರ್‌ ಎಂಬುದಾಗಿ ಹೊಸ ಅವತಾರ ತಾಳಿದ್ದಾರೆ. ಇವರಿಗೆ ಇಲ್ಲಿ ಜೋಡಿಯಾಗಿ ʼಬನಾರಸ್‌ʼಚೆಲುವೆ ಸೋನಲ್‌ ಮಾಂತೆರೂ ಇದ್ದಾರೆ. ಇದೇ ಮೊದಲು ಚಿತ್ರ ತಂಡ ಅವರ ಹೆಸರು ರಿವೀಲ್‌ ಮಾಡಿತು. ಹಾಗೆಯೇ ಅವರು ಕೂಡ ಮುಹೂರ್ತಕ್ಕೆ ಹಾಜರಿದ್ದು, ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದ ಪೋಷಕ ಪಾತ್ರಗಳಲ್ಲಿ ರವಿಶಂಕರ್‌, ತಬಲ ನಾಣಿ, ಕುರಿ ಪ್ರತಾಪ್‌, ತರಂಗ ವಿಶ್ವ ದೊಡ್ಡ ತಾರಾಬಳಗವೇ ಇದೆ. ಶ್ರೀಧರ್‌ ವಿ. ಸಂಭ್ರಮ್‌, ಕ್ಯಾಮೆರಾ ತನ್ವಿಕ್‌ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಅನುಬಂಧ ಎನ್ನುವ ಕರುಳುಬಳ್ಳಿ ಸಂಬಂಧ, ಕನ್ನಡ ಕಿರುತೆರೆಗೆ ಇದೊಂದು ದಾಖಲೆಯ ಚಂದ !

ಕನ್ನಡ ಅಂದ್ರೆ ಬರೀ ಭಾಷೆ ಯಲ್ಲ, ಹೆಸರು !

ಕಲರ್ಸ್‌ ಕನ್ನಡದ “ಅನುಬಂಧ ಅವಾರ್ಡ್ಸ್‌ʼ 2020 ಕಾರ್ಯಕ್ರಮ ಕನ್ನಡ ಕಿರುತೆರೆಯ ಇತಿಹಾಸಕ್ಕೆ ಒಂದು ದಾಖಲೆ. ಕನ್ನಡದ ಅಷ್ಟು ಮನರಂಜನಾ ವಾಹಿನಿಗಳ ಅವಾರ್ಡ್ಸ್‌ ಕಾರ್ಯಕ್ರಮಗಳಲ್ಲಿ ಇದೊಂದು ವಿಭಿನ್ನ, ವಿಶೇಷ.
ಅದಕ್ಕೆ ಕಾರಣವಾಗಿದ್ದು ಕನ್ನಡತಿಯಲ್ಲಿ ಕಂಡ ಕಂದ. ಅದು ಕಿರುತೆರೆಗೆ ಮೂಡಿಸಿತು ಅಂದ .ಕಲರ್ಸ್‌ ಕನ್ನಡದಲ್ಲೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಕನ್ನಡತಿ ಧಾರಾವಾಹಿ. ಕತೆಯ ಆಚೆ, ಇದು ಕನ್ನಡದ ಭಾಷೆಯ ಜತೆಗೆ ಬೆಸೆದುಕೊಂಡ ಭಾವನಾತ್ಮಕ ಸಂಬಂಧವೇ ಅದರ ಯಶಸ್ಸಿನ ಗುಟ್ಟು.

ಶಾಲಾ ಉಪನ್ಯಾಸಕಿಯಾದ ಧಾರಾವಾಹಿಯ ಕಥಾ ನಾಯಕಿ, ತನ್ನ ಬದುಕಿನ ಕತೆ ಹೇಳುವುದರ ಜತೆಗೆ ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾ ಸಾಗುತ್ತಾಳೆ. ತನ್ನ ಪ್ರೀತಿ ವಿದ್ಯಾರ್ಥಿಗಳಿಗೆ ಕನ್ನಡದ ಹೊಸ ಹೊಸ ಪದಗಳನ್ನು ಪರಿಚಯಿಸುತ್ತಾಳೆ. ವೀಕ್ಷಕ ಸಮೂಹದಲ್ಲಿ ಇದು ಕನ್ನಡದ ಜತೆಗಿನ ಭಾವನಾತ್ಮಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರೇರಣೆ ನೀಡಿದೆ.ಗಡಿ ಭಾಗದಲ್ಲಂತೂ ಕನ್ನಡತಿ ಧಾರಾವಾಹಿ ಅಂದ್ರೆ ಜನರು ಕನ್ನಡವೇ ಎಂಬಂತೆ ಪ್ರೀತಿಸುತ್ತಾರಂತೆ. ಇದು ಅಲ್ಲಿನ ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಹುಟ್ಟುವಂತೆ ಮಾಡಿದೆ. ಅದರ ಪ್ರಭಾವ ಈಗ ಅಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಅಥವಾ ಕನ್ನಡತಿ ಎಂಬುದಾಗಿ ನಾಮಕರಣ ಮಾಡಲು ಸ್ಪೂರ್ತಿ ನೀಡಿದೆ ಎನ್ನುವುದನ್ನು ಅಚ್ಚರಿ ಎನಿಸಿದರೂ ನಂಬಲೇಬೇಕು. ಯಾಕಂದ್ರೆ ಸಾಕ್ಷಿ ಕಣ್ಣೆದುರೇ ಇದೆ. ಅದನ್ನೇ ವೇದಿಕೆಗೆ ತಂದು ತೋರಿಸಿದ್ದು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ.

ಕಲರ್ಸ್‌ ಕನ್ನಡದ “ಅನುಬಂಧ ಅವಾರ್ಡ್ಸ್‌ʼ ೨೦೨೦ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಎರಡು ದಿನ ಕಳೆದಿದೆ. ಭಾನುವಾರ(ಜ.17) ಕ್ಕೆ ಸಮಾರೋಪ ಸಮಾರಂಭ. ಕೊರೋನಾ ಕಾರಣಕ್ಕೆ ಅನೇಕ ನಿರ್ಬಂಧಗಳ ನಡುವೆ ನಡೆಯುತ್ತಿದ್ದರೂ, ಆದರ ತಾರಾ ಮೆರಗಿಗೇನು ಕಮ್ಮಿ ಆಗಿಲ್ಲ. ಕಲರ್ಸ್ ಕನ್ನಡದ ಅಷ್ಟು ಕುಟುಂಬವೇ ಜಮಾಯಿಸಿಕೊಂಡಿದ್ದನ್ನು ನೀವು ನೋಡಿದ್ದೀರಿ. ಎಂದಿನಂತೆ ಈ ವರ್ಷ ಕೂಡ ಅದು ಅನೇಕ ವಿಶೇಷತೆಗಳ ಮೂಲಕ ನಡೆಯುತ್ತಿದೆ. ಬಿಗ್ ಬಾಸ್ ನಿರೂಪಕರಾಗಿದ್ದರೂ , ಇದುವರೆಗೂ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಾರದೆ ಇದ್ದ ನಟ ಕಿಚ್ಚ ಸುದೀಪ್ ಇದೇ ಮೊದಲು ಈ ವೇದಿಕೆಗೆ ಬಂದಿದ್ದಾರೆ. ಹಾಗೆಯೇ ನಾದ ಬ್ರಹ್ಮ ಹಂಸಲೇಕ ಹಾಜಾರಾಗಿದ್ದಾರೆ. ಲವ್ ಮಾಕ್ಟೆಲ್ ಖ್ಯಾತಿಯ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಬಂದಿದ್ದಾರೆ. ಅವರೆಲ್ಲರ ಜತೆಗೆ ಕರ್ಲಸ್ ಕನ್ನಡದ ಬಳಗ ಇದೇ ಅಂದ್ರೆ ಮನರಂಜನೆ ಇರಲ್ವಾ? ಅದಕ್ಕೇನು ಇಲ್ಲಿಕೊರತೆ ಇಲ್ಲ. ಅದರೊಳಗಡೆಯೇ ನಡೆದಿದೆ ನಾಮಕರಣದ ವಿಶೇಷ.

ಶುಕ್ರವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಇದೊಂದು ಅಚ್ಚರಿ ನಡೆದು ಹೋಯಿತು. ಗಡಿ ಜಿಲ್ಲೆ ಬೆಳಗಾವಿಯ ಅಥಣಿಯಿಂದ ಬಂದಿದ್ದ ಒಂದು ದಂಪತಿ ವೇದಿಕೆ ಮೇಲಿದ್ದರು. ಅವರು ಕನ್ನಡತಿ ಧಾರಾವಾಹಿಯ ಶುದ್ಧ ಅಭಿಮಾನಿಗಳು. ಅವರ ಡಿಮ್ಯಾಂಡ್ ಅಂದ್ರೆ, ತಮ್ಮ ಹಸುಗೂಸಿಗೆ ಇದೇ ವೇದಿಕೆಯಲ್ಲಿ ಕನ್ನಡ ಅಂತ ನಾಮಕರಣ ಮಾಡಬೇಕು ಎನ್ನುವುದು. ನಿಜಕ್ಕೂ ಇದೊಂದು ವಿಶೇಷ ಕಾರ್ಯಕ್ರಮ. ಕನ್ನಡದ ಭಾಷಾ ವಿಚಾರದಲ್ಲಿ ಚಿರಕಾಲ ನೆನಪಾಗಿ ಉಳಿಯುವಂತಹದು.ಆ ಪೋಷಕರ ಇಚ್ಚಾಶಕ್ತಿಯಂತೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲೇ ನಾಮಕರಣ ಕಾರ್ಯಕ್ರಮ ಆಯೋಜಿಸಿತ್ತು. ನಾಮಕರಣಕ್ಕೆ ನಾದಬ್ರಹ್ಮ ಹಂಸಲೇಖ ಮುಖ್ಯ ಅತಿಥಿ. ಅವರ ಜತೆಗೆ ಪಂಡಿತರಾದ ಹಿರೇಮಗಳೂರು ಕಣ್ಣನ್. ಪುಟ್ಟ ಮಗುವಿಗೆ ನಾದಬ್ರಹ್ಮ ಹಂಸಲೇಖ ಅವರು ಕನ್ನಡ ಅಂತ ನಾಮಕರಣ ಮಾಡಿದರು. ಭಾವುಕರಾಗಿ ಮಾತನಾಡುತ್ತಾ, ಇದು ನಮ್ಮನ್ನು ಆಳುವವರಿಗೆ ಇದು ಗೊತ್ತಾಗಬೇಕು. ಕನ್ನಡ ಅಂದ್ರೆ ಬರೀ ಮಾತು ಅಲ್ಲ ಬದುಕು ಅಂತ ಅವರಗೆ ತಿಳಿಯಬೇಕು ಅಂತ ಸೂಚ್ಯವಾಗಿ ಚುಚ್ಚಿದರು. ಇದು ಸಾಧ್ಯವಾಗಿದ್ದು ಒಂದು ಧಾರಾವಾಹಿ ಮೂಲಕ. ಕನ್ನಡ ಕಿರುತೆರೆಗೆ ಇದೊಂದು ದಾಖಲೆ. ಹಾಗೆಯೇ ಇದು ಕಲರ್ಸ್ ಕನ್ನಡದ ಹೆಗ್ಗಳಿಕೆ.

error: Content is protected !!