Categories
ಸಿನಿ ಸುದ್ದಿ

ಏಪ್ರಿಲ್‌ 16 ಕ್ಕೆ ಗೋವಿಂದ ಗೋವಿಂದ – ಇದು ಸುಮಂತ್‌ ಶೈಲೇಂದ್ರ ಅಭಿನಯದ ಚಿತ್ರ

ಸುಮಂತ್‌ ಶೈಲೇಂದ್ರ ಅಭಿನಯದ” ಗೋವಿಂದ ಗೋವಿಂದ ʼ ಚಿತ್ರ ಏಪ್ರಿಲ್‌ ಕ್ಕೆ16 ತೆರೆಗೆ ಬರುತ್ತಿದೆ. ಚಿತ್ರ ತಂಡ ಅಧಿಕೃತವಾಗಿಯೇ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ ಜೋರಾಗಿದೆ. ಇನ್ನೇನು ಲಾಕ್‌ ಡೌನ್‌ ಆಗುತ್ತೆ ಎನ್ನುವ ಭಯಕ್ಕೆ ತೆರೆ ಬಿದ್ದಿದೆ. ಲಾಕ್‌ ಡೌನ್‌ ಇಲ್ಲ ಅಂತ ಸರ್ಕಾರ ಸ್ಪಷ್ಟ ಪಡಿಸಿದೆ. ಈ ನಡುವೆಯೇ “ರಾಬರ್ಟ್‌ʼ ರಾರಾಜಿಸುತ್ತಿದೆ. ಇನ್ನೇನು “ಯುವ ರತ್ನʼ ಆಗಮನಕ್ಕೆ ವೇದಿಕೆ ಭರ್ಜರಿ ಆಗಿ ರೆಡಿ ಆಗಿದೆ.” ಯುವ ರತ್ನʼ ಚಿತ್ರ ತಂಡ ರಾಜ್ಯದಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಇದು ತೆರೆ ಕಂಡ ನಂತರದ ದಿನಗಳಲ್ಲಿ ಸುಮಂತ್‌ ಶೈಲೇಂದ್ರ ಅಭಿನಯದ ” ಗೋವಿಂದ ಗೋವಿಂದʼ ಚಿತ್ರ ತೆರೆಗೆ ಬರುತ್ತಿದೆ.


ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್ ಹಾಗೂ ರವಿ ಗರಣಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾದ ಚಿತ್ರ ಇದು. ತಿಲಕ್‌ ಇದರ ನಿರ್ದೇಶಕರು. ಇಷ್ಟು ದಿನ ಕಿರುತೆರೆಯಲ್ಲಿ ದೊಡ್ಡ ಸುದ್ದಿಯಲ್ಲಿದ್ದರು. ಇದೀಗ “ಗೋವಿಂದ ಗೋವಿಂದʼ ಅಂತ ಹಿರಿತೆರೆಗೆ ಎಂಟ್ರಿ ಆಗಿದ್ದಾರೆ. ದೇವ್‌ ರಂಗಭೂಮಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಸುಮಂತ್‌ , ರೂಪೇಶ್‌, ಭಾವನಾ ಮೆನನ್‌ , ಕವಿತಾ ಗೌಡ ಸೇರಿದಂತೆ ಚಿತ್ರದಲ್ಲಿ ದೊಡ್ಡ ತೃಾಗಣವೇ ಇದೆ. ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ‌ ಆರ್. ಗರಣಿ ಈ ಚಿತ್ರದ ನಿರ್ಮಾಪಕರು.

ಸದ್ಯಕ್ಕೀಗ ಈ ಚಿತ್ರದ ಆಡಿಯೋ ಜೂಕ್‌ ಬಾಕ್ಸ್‌ ಲಾಂಚ್‌ ಮೂಲಕ ಸದ್ದ ಮಾಡಿದೆ. ಪುಷ್ಕರ್‌ ಫಿಲಂಸ್‌ ಮೂಲಕ ಹಾಡುಗಳು ಹೊರಬಂದಿದ್ದು, ಈಗಾಗಲೇ “ಗೋವಿಂದ ಗೋವಿಂದʼ ಹಾಡಿಗೆ ಯೂಟ್ಯೂಬ್‌ ಮೂಲಕ ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆಯಂತೆ. ಇದೊಂದು ಪಕ್ಕಾ ಕಾಮಿಡಿ ಹಾಗೂ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾವಂತೆ. 2021ಕ್ಕೆ ಇದು ದೊಡ್ಡ ಹಿಟ್‌ ಆಗಲಿದೆ ಎನ್ನುವ ಭರವಸೆ ಚಿತ್ರ ತಂಡದ್ದು. ಆ ದಿನ ಚಿತ್ರದ ಆಡಿಯೋ ಜೂಕ್‌ ಬಾಕ್ಸ್‌ ಲಾಂಚ್‌ ಗೆ ರಾಜಕಾರಣಿ ಕೆ.ಎನ್.‌ ರಾಜಣ್ಣ ಬಂದಿದ್ದರು. ಅವರೊಂದಿಗೆ ಹಿರಿಯ ನಿರ್ದೇಶಕ ಲಿಂಗದೇವರು ಇದ್ದರು. ಆಡಿಯೋ ಜೂಕ್‌ ಬಾಕ್ಸ್‌ ಲಾಂಚ್‌ ಅವರು ಚಿತ್ರ ತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಮಂಜೇಶ್ವರ ಗೋವಿಂದ ಪೈ ಜನ್ಮದಿನಕ್ಕೆ ಶುರುವಾಯ್ತು ಮಹಾಕವಿ ಚಿತ್ರದ ಸ್ಕ್ರಿಪ್ಟ್‌ ಪೂಜೆ ಗಣೇಶ್‌ ಕಾಸರಗೋಡು ಕಥೆಗೆ ಸಿನಿಮಾ ಸ್ಪರ್ಶ

ಈ ಸಿನಿಮಾ ರಂಗವೇ ಹಾಗೆ. ಅದರಲ್ಲೂ ಇಲ್ಲಿ ಬಹುತೇಕ ಉತ್ಸಾಹಿ ಯುವಕರು ಸಾಕಷ್ಟು ಕನಸು ಹೊತ್ತು ಬರುವ ಜಾಗವಿದು. ನೂರಾರು ಆಸೆ-ಆಕಾಂಕ್ಷೆ ಹೊತ್ತು ಬರುವ ಯುವ ಉತ್ಸಾಹಿಗಳಿಗೆ ಇಲ್ಲಿ ಬರವಿಲ್ಲ. ಅಂತಹ ಉತ್ಸಾಹಿಗಳ ಸಾಲಿಗೆ ಈಗ ರಘುಭಟ್‌ಸಜ್ಜಾಗಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ಮಹಾಕವಿ ಗೋವಿಂದ ಪೈ ಅವರ ಬದುಕಿನ ಚಿತ್ರಣ ಕಟ್ಟಿಕೊಡಲು ಮುಂದಾಗಿದ್ದಾರೆ.

ಬಹಳಷ್ಟು ಮಂದಿಗೆ ಗೋವಿಂದ ಪೈ ಅವರು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಅನ್ನೋದು ಗೊತ್ತಿಲ್ಲ. ಬಹುಭಾಷಾ ಪಂಡಿತರು ಎನಿಸಿಕೊಂಡಿದ್ದ ಗೋವಿಂದ ಪೈ ಅವರ ಬದುಕಿನ ಘಟನೆಗಳನ್ನು ಪೋಣಿಸಿರುವ ಕಥೆಯನ್ನು ಇದೀಗ ಸಿನಿಮಾ ಮಾಡಲು ಅಣಿಯಾಗಿದ್ದಾರೆ ರಘುಭಟ್.‌
ಅವರ ಕನಸಿನ ಚಿತ್ರಕ್ಕೆ “ಮಹಾಕವಿ” ಎಂದು ನಾಮಕರಣ ಮಾಡಲಾಗಿದೆ. ವಿಶೇಷವೆಂದರೆ, ಮಾರ್ಚ್‌೨೩ರಂದು ಗೋವಿಂದ ಪೈ ಅವರ ಜನ್ಮದಿನ. ಹಾಗಾಗಿ ಅಂದೇ “ಮಹಾಕವಿ” ಚಿತ್ರದ ಸ್ಕ್ರಿಪ್ಟ್‌ಪೂಜೆಗೂ ಚಾಲನೆ ಸಿಕ್ಕಿದೆ. ಮಂಜೇಶ್ವರದ “ಗಿಳಿವಿಂಡು ಬಳಿ ಇರುವ ಗೋವಿಂದ ಪೈ ನಿವಾಸದಲ್ಲಿ ಸಿನಿಮಾ ಹಬ್ಬವನ್ನು ಜೋರಾಗಿಯೇ ನಡೆಸಿದ್ದಾರೆ ರಘುಭಟ್‌ ಮತ್ತು ತಂಡ.

ರಘುಭಟ್‌ ತುಂಬಾ ಕನಸು ಕಟ್ಟಿಕೊಂಡೇ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹಾಗೆ ನೋಡಿದರೆ, ಈ ಹಿಂದೆಯೇ “ಮಹಾಕವಿ” ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಕೊರೊನಾ ಹಾವಳಿ ಇದ್ದುದರಿಂದ ಅದು ಮುಂದಕ್ಕೆ ಹೋಗಿ, ಈಗ “ಮಹಾಕವಿ” ಚಿತ್ರದ ಸ್ಕ್ರಿಪ್ಟ್‌ಗೆ ಪೂಜೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಎಡನೀರು ಮಠದ ಮಹಾಸ್ವಾಮಿ ಶ್ರೀ ಸಚ್ಚಿದಾನಂದ ಭಾರತಿ ಅವರು ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದಾರೆ.

ಅಂದಹಾಗೆ, ಈ ‘ಮಹಾಕವಿ’ ಮಂಜೇಶ್ವರ ಗೋವಿಂದ ಪೈಗಳ ಪಾತ್ರಕ್ಕೆ ಕನ್ನಡದ ಜನಪ್ರಿಯ ನಾಯಕನಟರೊಬ್ಬರು ಆಯ್ಕೆಯಾಗಿದ್ದಾರೆ! ಇಷ್ಟರಲ್ಲೇ ಆ ನಟ ಯಾರೆಂಬುದನ್ನು ಚಿತ್ರತಂಡ ಹೇಳಲಿದೆ. ಇನ್ನು, ಲಕ್ಷ್ಮೀ ‌ಗಣೇಶ್ ಪ್ರೊಡಕ್ಷನ್‌ನಡೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಗೋಂವಿಂದ ಪೈ ಅವರ ಬದುಕಿನ ಕೆಲ ಘಟನೆಗಳನ್ನೆಲ್ಲಾ ಪೋಣಿಸಿ, ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶ ಅವರಿಗಿದೆ.

ಅವರೇ ಹೇಳುವಂತೆ, “ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬದುಕಿನ ಘಟನೆ ಪೋಣಿಸಿ ನೇಯ್ದ ಚಿತ್ರ ಮಾಲೆಯೇ “ಮಹಾಕವಿ”. ಇದು ಗೋವಿಂದ ಪೈಗಳ ಬದುಕಿನ ಡಾಕ್ಯುಮೆಂಟರಿ ಅಲ್ಲ, ಕಲಾತ್ಮಕ ಸಿನಿಮಾನೂ ಅಲ್ಲ. ಮನೆ ಮಂದಿ ಜತೆಯಾಗಿ ಕುಳಿತು ನೋಡಬಹುದಾದ ಮತ್ತು ಒಂದು ಅದ್ಬುತ ಅನುಭವ ಕಟ್ಟಿ ಕೊಡಬಹುದಾದ ಹೈದಯಂಗಮ ಸೆಲ್ಯೂಲಾಯಿಡ್‌ಕಾವ್ಯ” ಎನ್ನುತ್ತಾರೆ ಅವರು . ಇನ್ನು ಈ ಚಿತ್ರಕ್ಕೆ ಸುಗುಣ ರಘುಭಟ್ ಚಿತ್ರದ ನಿರ್ಮಾಪಕಿ. ನಿರ್ದೇಶಕರು, ಸೇರಿದಂತೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Categories
ಸಿನಿ ಸುದ್ದಿ

ಕರಾವಳಿಯ ಈ ಚೆಲುವೆಗೆ ನಟ ದರ್ಶನ್ ಅಂದ್ರೆ ಭರ್ಜರಿ ಇಷ್ಟವಂತೆ !

ಸಿನಿಮಾ ರಂಗಕ್ಕೆ ಕರಾವಳಿ ಹುಡುಗಿಯರು ಸರದಿಯಂತೆ ದಾಂಗುಡಿ ಇಡುತ್ತಿದ್ದಾರೆ. ಈಗಾಗಲೇ ಅಲ್ಲಿಂದ ಇಲ್ಲಿಗೆ ಬಂದು ಹೆಸರು ಮಾಡಿದವರದ್ದು ದೊಡ್ಡ ಪಟ್ಟಿಯಿದೆ. ಆ ಸಾಲಿಗೆ ಈಗ ಮತ್ತೊಬ್ಬರು ಕರಾವಳಿ ಚೆಲುವೆ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೆಸರು ವಿರಾನಿಕಾ ಶೆಟ್ಟಿ. “ಚಿ. ತು. ಯುವಕರ ಸಂಘʼ ಎನ್ನುವ ಚಿತ್ರದ ನಾಯಕಿ. ಇದು ಇವರ ಮೊದಲ ಚಿತ್ರ. ಸಿನಿಮಾ ರಂಗಕ್ಕೆ ಎಂಟ್ರಿಯಾದ ಬಗೆ, ಚಿತ್ರೀಕರಣದ ಅನುಭವ ಕುರಿತು ಸಿನಿಲಹರಿ ಜತೆಗೆ ನಟಿ ವಿರಾನಿಕಾ ಶೆಟ್ಟಿ ಮಾತನಾಡಿದ್ದು ಹೀಗೆ..

-ಎಂಥಾ ನೀವೂ ಕೂಡ ಕರಾವಳಿ ಕಡೆಯವ್ರಾ ?

ಮೂಲತಃ ನಾನು ಸಕಲೇಶಪುರ ಹುಡುಗಿ. ಹೈಸ್ಕೂಲ್‌ ತನಕ ಓದಿದ್ದೆಲ್ಲವೂ ಅಲ್ಲಿಯೇ. ಉನ್ನತ ಶಿಕ್ಷಣಕ್ಕೆ ಅಂತ ಮಂಗಳೂರಿಗೆ ಬಂದೆ. ಅಲ್ಲಿಂದ ಮಂಗಳೂರಿನಲ್ಲಿಯೇ ಉಳಿದುಕೊಂಡೆ. ಅದೇ ನಮ್ಮೂರಾಯ್ತು.

– ಅದು ಸರಿ, ಈ ಸಿನಿಮಾರಂಗದ ನಂಟು ಶುರುವಾಗಿದ್ದು ಹೆಂಗೆ?

ಸಿನಿಮಾ ಅಂದ್ರೆ ಎಲ್ಲರಿಗೂ ಆಸಕ್ತಿಯೇ. ಅಂತೆಯೇ ಬಾಲ್ಯದಿಂದಲೂ ನಂಗೂ ಸಿನಿಮಾ ಬಗೆಗೆ ಒಂದ್ರೀತಿಯ ಕುತೂಹಲ, ಆಸಕ್ತಿ ಇದ್ದೇ ಇತ್ತು. ಆನಂತರ ಕಾಲೇಜು ದಿನಗಳಲ್ಲಿ ಅದು ಇನ್ನಷ್ಟು ಆಕರ್ಷಿಸತೊಡಗಿತು. ನಟಿಯಾದ್ರೆ ಹೆಂಗೆ ಅಂತ ಯೋಚಿಸತೊಡಗಿದೆ. ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಅಭಿನಯಿಸೋಣ ಅಂತ ಕಾಯುತ್ತಿದ್ದೆ. ಆ ಟೈಮ್‌ ನಲ್ಲಿಯೇ ಜಾಹೀರಾತುಗಳಲ್ಲಿ ಕಾಣಸಿಕೊಂಡೆ. ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು.  ಅದೇ ವೇಳೆ ಪರಿಚಿತರೊಬ್ಬರು “ ಚಿ.ತು. ಯುವಕರ ಸಂಘʼ ಸಿನಿಮಾದ ಬಗ್ಗೆ ಹೇಳಿದ್ರು. ಅಲ್ಲಿಂದ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿ ಮಾಡಿದೆ. ಫೋಟೋ ಮತ್ತು ಪ್ರೊಪೈಲ್‌ ಕಳುಹಿಸಿದೆ. ಒಂದಷ್ಟು ದಿನಗಳ ನಂತರ ಟೀಮ್‌ ಕಡೆಯಿಂದ ಕರೆ ಬಂತು. ಕಥೆಯ ಜತೆಗೆ ನನ್ನ ಪಾತ್ರದ ಬಗ್ಗೆ ಕೇಳಿದೆ. ಚೆನ್ನಾಗಿತ್ತು. ಒಪ್ಪಿಕೊಂಡೆ.

– ಆಕ್ಟಿಂಗ್‌ ಬಗ್ಗೆ ಮೊದಲೇ ಗೊತ್ತಿತ್ತಾ ಅಥವಾ ಸಿನಿಮಾಕ್ಕೆ ಸೆಲೆಕ್ಟ್‌ ಆದ್ಮೇಲೆ ಕಲಿತುಕೊಂಡ್ರಾ?

ನಾನೊಬ್ಬಳು ಥಿಯೇಟರ್‌ ಆರ್ಟಿಸ್ಟ್.‌ ಕಾಲೇಜು ದಿನಗಳಲ್ಲೇ ರಂಗಭೂಮಿ ನಂಟಿತ್ತು. ಆಗಲೇ ನಟನೆ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಒಂದೆರೆಡು ನಾಟಕಗಳಲ್ಲೂ ಅಭಿನಯಿಸಿದ್ದೆ. ಅದೇ ಅನುಭವದಲ್ಲಿ ಸಿನಿಮಾ ನಟಿ ಆಗಲು ಬಯಸಿದ್ದೆ. ಅದಕ್ಕೆ ಪೂರಕವಾಗಿಲೇ ಒಂದಷ್ಟು ಸಿದ್ಧತೆ ನಡೆಸಿದ್ದೆ. ಅದೇ ಈ ಸಿನಿಮಾಕ್ಕೆ ಅನುಕೂಲವಾಯಿತು. ಹಾಗೆಯೇ ಇಲ್ಲಿಗೆ ಬಂದ ನಂತರ ರಿಹರ್ಸಲ್‌ ಮಾಡಿಕೊಂಡು, ಶೂಟಿಂಗ್‌ ಹೊರಟೆವು.

-ಏಜುಕೇಷನ್‌ ಏನ್‌ ಮಾಡ್ಕೊಂಡಿದ್ದೀರಿ, ಮುಂದೆ ಹೇಗೆ ?

ಏವಿಯೇಷನ್‌ ಅಂಡ್‌ ಹೋಟೆಲ್‌ ಮ್ಯಾನೆಜ್‌ಮೆಂಟ್‌ ಕೋರ್ಸ್‌ ಮುಗಿದಿದೆ. ನಂಗೆ ಅದರಲ್ಲಿಯೇ ಏನಾದ್ರೂ ಸಾಧಿಸಬೇಕು ಅನ್ನೋ ಆಸೆ ಇದೆ. ಆದ್ರೆ ನಂಗೀಗ ಸಿನಿಮಾದ ಮೇಲೆ ಹೆಚ್ಚಿನ ಆಸಕ್ತಿ ಇದೆ. ಸದ್ಯಕ್ಕೆ ಇಲ್ಲಿಯೇ ಕಾಂಸ್ಟ್ರೇಷನ್ ಮಾಡಿದ್ದೇನೆ. ಮುಂದೆ ನೋಡ್ಬೇಕು ಹೇಗಾಗುತ್ತೋ ಅಂತ.

  • ಜಾಹೀರಾತುಗಳಲ್ಲಿನ ಅನುಭವ ಹೇಗಿತ್ತು ?

ಐಯಾನ್‌ ಎನ್ನುವ ಬ್ರಾಂಡ್‌ ಗೆ  ಕ್ರಿಸ್ ಗೇಲ್ ಜೊತೆ ಕಾಣಸಿಕೊಳ್ಳುವ ಅವಕಾಶ ಬಂತು.  ಅದರ ಜತೆಗೆ ಸಾಕಷ್ಟು ಬ್ರಾಂಡ್‌ ಗಳಿಗೆ ಅಂಬಾಸಿಡರ್ ಆಗಿದ್ದೆ. ನನ್ನ ಪ್ರಕಾರ ಇದೆಲ್ಲಾ ಅದ್ಭುತ ಅನುಭವ. ನೇಮ್‌ ಅಂಡ್‌ ಫೇಮ್‌ ಎರಡೂ ಅಲ್ಲಿ ಸಿಕ್ಕವು. ಜಾಹೀರಾತು ಪ್ರಪಂಚದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹಾಗೆಯೇ ಒಂದು ಆಲ್ಬಂ ಸಾಂಗ್‌ ವೊಂದರಲ್ಲಿ ನಟಿಸಿದ್ದೇನೆ. ಅದಿನ್ನು ರಿಲೀಸ್‌ ಆಗಿಲ್ಲ. ಶೂಟಿಂಗ್‌ ಮುಗಿದಿದೆ.  ಅಲ್ಲಿಂದ ಈಗ ಸಿನಿಮಾ ಪಯಣ.

-ಚಿ. ತು. ಯುವಕರ ಸಂಘದ ಸಿನಿಮಾ ಬಗ್ಗೆ ಹೇಳಿ ?

ಇದೊಂದು ಪಕ್ಕಾ ಕಾಮಿಡಿ ಜಾನರ್‌ ಸಿನಿಮಾ. ಟೈಟಲ್‌ ನಲ್ಲಿಯೇ ಅಂತಹದೊಂದು  ಇಂಡಿಕೇಷನ್‌ ಇರೋದು ನಿಮಗೂ ಗೊತ್ತು. ಹಾಗಂತ ಸಿನಿಮಾವೀಡಿ ಕಾಮಿಡಿ ಸಿನಿಮಾ ಅಲ್ಲ, ಅದರೊಳಗೊಂದು ನವೀರಾದ ಪ್ರೀತಿಯ ಕಥೆ ಇದೆ. ಹಾಗೆಯೇ ಒಂದಷ್ಟು ಸೆಂಟಿಮೆಂಟ್‌, ಆಕ್ಷನ್‌ ಎಲ್ಲವೂ ಇರುವಂತಹ ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದು. ಕಥೆ ತುಂಬಾ ಚೆನ್ನಾಗಿದೆ. ಗುಂಡಾಡಿ ಗುಂಡನಂತಿರುವ ನಾಯಕ. ಚಿಂತೆ ಇಲ್ಲದವ ಸಂತೆಯಲ್ಲೂ ನಿದ್ದೆ ಮಾಡುವಂತಿದ್ದವ.  ಆತನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟುತ್ತೆ. ಅಲ್ಲಿಂದ ಮುಂದೇನಾಗುತ್ತೆ ಅನ್ನೋದು  ಚಿತ್ರದ ಕಥೆ.

  • ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?

ಹೀರೋ ಗುಂಡಾಡಿ ಗುಂಡ ಅಂತದ್ಮೇಲೆ ನಾಯಕಿ ಆತನಿಗೆ ಕಾಂಟ್ರಾಸ್ಟ್‌ ಆಗಿರ್ತಾಳೆ ಅನ್ನೋದನ್ನ ವಿವರಿಸಿ ಹೇಳಬೇಕಿಲ್ಲ.  ತುಂಬಾ ಗಂಭೀರವಾದ ಹುಡುಗಿ. ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕೆಂದುಕೊಂಡವಳು. ಆದ್ರೆ ಗುಂಡಾಡಿ ಗುಂಡನಂತಿದ್ದ ಹೀರೋ ಆಕೆಯ ಜೀವನದಲ್ಲಿ ಎಂಟ್ರಿಯಾದ ನಂತ್ರ ಅವರಿಬ್ಬರ ಬದುಕಲ್ಲಿ ಏನಾಗುತ್ತೆ ಅನ್ನೋದು ನನ್ನ ಪಾತ್ರ.

  • ಚಿ .ತು. ಯುವಕರ ಸಂಘದ ಸದಸ್ಯರ ಬಗ್ಗೆ ಏನ್‌ ಹೇಳ್ತೀರಾ ?

ನನಗಿಲ್ಲಿ ಕೋ ಆರ್ಟಿಸ್ಟ್‌ ನಟ ಸನತ್. ಹಾಗೆಯೇ ನಿರ್ಮಾಪಕರು ಚೇತನ್‌ ರಾಜ್.‌  ತುಂಬಾ ಪ್ರೇಂಡ್ಲಿ ಆಗಿರ್ತಾರೆ. ಹಾಗೆಯೇ ಡೈರೆಕ್ಟರ್‌  ಶಿವು ಅವರಂತೂ ಪಕ್ಕಾ ಪ್ರಪೋಷನ್‌ ಆಗಿದ್ದಾರೆ. ಕಥೆಗೆ ತಾವು ಅನಿಸಿದ್ದೂ ಬರೋ ತನಕ ಶೂಟ್‌ ನಿಲ್ಲಿಸೋದಿಲ್ಲ. ಅವರ ಕಲಾವಿದರ ಆಯ್ಕೆಯೇ ಅದ್ಬುತವಾಗಿದೆ. ನಂಗಂತೂ ಎಂಟ್ರಿಯಲ್ಲೇ ಒಂದೊಳ್ಳೆಯ ತಂಡ ಸಿಕ್ಕಿದೆ. ಆ ಮಟ್ಟಿಗೆ ನಾನು ಲಕ್ಕಿ ಅಂತಲೇ ಹೇಳಬಹುದು.

  • ಸಿನಿಮಾ ಅಂದ್ರೆ ಒಂಥರ ಗಾಸಿಪ್‌ ಅಂಡ್‌ ಗ್ಲಾಮರ್.‌ ಈ ಬಗ್ಗೆ ನಿಮ್ಮ ನಿಲುವೇನು?

ಸಿನಿಮಾ ಅಂದ್ಮೇಲೆ ಗ್ಲಾಮರ್‌ ಇರಲೇಬೇಕು. ಹಾಗೆಯೇ ಗಾಸಿಪ್‌ ಕೂಡ ಇರುತ್ತೆ.  ಅದೆಲ್ಲವನ್ನು ನಾವು ಹೇಗೆ ಸ್ವೀಕರಿಸುತ್ತೇವೋ ಅದರ ಮೇಲೆ ನಿಂತಿರುತ್ತದೆ. ನಂಗಂತೂ ಗಾಸಿಪ್‌ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಆ ಬಗ್ಗೆ ತಲೆ ಕೆಡಿಸಕೊಳ್ಳುವುದಿಲ್ಲ ಬಿಡಿ.

  •  ಸ್ಯಾಂಡಲ್‌ ವುಡ್‌ ನಲ್ಲಿ ನಿಮಗೆ ಯಾವ ನಟ ಅಂದ್ರೆ ಇಷ್ಟ ?

ನಟ ದರ್ಶನ್‌ ಅಂದ್ರೆ  ನಂಗೆ ತಂಬಾ ಇಷ್ಟ. ಅವರಗ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕರೆ ಕಣ್ಣ್ಮುಚ್ಚಿಕೊಂಡು ಓಕೆ ಹೇಳಿ ಬಿಡುವೆ.  ಅವರ ಜತೆಗೆ ತೆರೆಯಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ನನ್ನ ಕನಸು ಕೂಡ. ಅದು ನನಸಾಗುತ್ತಾ ಅಂತ ಕಾಯುತ್ತಿದ್ದೇನೆ.

  • ವರ್ಕೌಟ್‌ ಸ್ಟ್ರೈನ್‌ ಹೇಗಿರುತ್ತೆ ?

ನಿಜ ಹೇಳ್ತೀನಿ, ನಾನು ವರ್ಕೌಟ್‌ ಮಾಡೋದ್ರಿಂದಲೇ ಇಷ್ಟು ಸಣ್ಣ ಆಗಿದ್ದು. ನಾನು ತುಂಬಾ ದಪ್ಪ ಇದ್ದೆ. ವರ್ಕೌಟ್‌ ಮಾಡಿ ಅರ್ಧದಷ್ಟು ಸಣ್ಣ ಆದೆ. ನಾನು ಯೋಗ ಮಾಡಲ್ಲ‌. ಬೇಯಿಸಿದ ಮೊಟ್ಟೆ , ತರಕಾರಿ, ಚಿಕನ್ ತಿನ್ನುತ್ತೇನೆ. ಪ್ರತೀ ನಿತ್ಯ ಚೆನ್ನಾಗಿ ನೀರು ಕುಡಿಯುತ್ತೇನೆ‌‌ ಇದೇ ನನ್ನ ಆರೋಗ್ಯದ ಗುಟ್ಟು.

Categories
ಸಿನಿ ಸುದ್ದಿ

ಹೊನ್ನಾವರದಲ್ಲಿ‌ ತಾರಾ ದಂಡಿ ಸತ್ಯಾಗ್ರಹ: ವಿಶಾಲ್‌ರಾಜ್‌ ಕಾಂಬಿನೇಷನ್‌ನಲ್ಲಿ ಮತ್ತೆ ಶುರುವಾಯ್ತ ಹೊಸ ಸಿನಿಮಾ

ತಾರಾ ಈಗ ದಂಡಿ ಸತ್ಯಾಗ್ರಹ ಶುರುಮಾಡಿದ್ದಾರೆ! ಅರೇ, ಹೀಗಂದಾಕ್ಷಣ, ಇನ್ನೇನೋ ಅರ್ಥ ಮಾಡಿಕೊಳ್ಳಬೇಕಿಲ್ಲ. ಇದು ಸಿನಿಮಾ ವಿಷಯ. ಅವರೀಗ “ದಂಡಿ” ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಿದೆ. ಅವರೊಂದಿಗೆ ಪ್ರಮುಖವಾಗಿ ನಟ ಸುಚೀಂದ್ರ ಪ್ರಸಾದ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ವಿಶಾಲ್‌ ರಾಜ್‌ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು “ಸಾವಿತ್ರಿ ಬಾಯಿಪುಲೆ” ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲೂ ತಾರಾ ಹೈಲೈಟ್‌ ಆಗಿದ್ದರು. ಈಗ ಅದೇ ಕಾಂಬಿನೇಷನ್‌ನಲ್ಲಿ “ದಂಡಿ” ಶುರುವಾಗಿದೆ. ಇದು ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ (ಉಪ್ಪಿನ) ಸತ್ಯಾಗ್ರಹದ ಬಗ್ಗೆ ಶುರುವಾಗುತ್ತಿರುವ ಚಿತ್ರ. ಡಾ.ರಾಜಶೇಖರ್ ಮಠಪತಿ‌ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರದ ಮುಹೂರ್ತ ಇತ್ತೀಚೆಗೆ ಹೊನ್ನಾವರದ ಮೂಡಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

ಪದ್ಮಶ್ರೀ ಸುಕ್ರಿಗೌಡ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಹೊನ್ನಾವರ, ಸಿದ್ದಾಪುರ, ಅಂಕೋಲ ಸುತ್ತಮುತ್ತ ಮೂವತ್ತು ದಿನಗಳ‌‌ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.‌ ಕಲ್ಯಾಣಿ ‌ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉಷಾರಾಣಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ವಿಶಾಲ್ ರಾಜ್ ಅವರೆ ಚಿತ್ರಕಥೆ ಬರೆದಿದ್ದಾರೆ.

ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಹಿತ್ಯ ಹಾಗೂ ಸಂಭಾಷಣೆಯನ್ನು ರಾಗಂ ಅವರು ಬರೆದಿದ್ದು, ರಾಮ್ ಕ್ರಿಶ್ ಸಂಗೀತ ನೀಡುತ್ತಿದ್ದಾರೆ. ತಾರಾ ಹಾಗೂ ಸುಚೀಂದ್ರ ಪ್ರಸಾದ್‌ ಅವರೊಂದಿಗೆ ಯುವಾನ್ ದೇವ್, ಶಾಲಿನಿ ಭಟ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಾಮೋದರ್ ನಾಯ್ಡು ಕೂ‌ಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಉತ್ತರ ಕನ್ನಡ‌ದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರ ಸಮರ್ಪಣೆಯಾಗಲಿದೆ ಎಂಬುದು ಚಿತ್ರತಂಡದ ಮಾತು.‌ ಸ್ವತಂತ್ರ ಬಂದು 75 ವರ್ಷ‌ಗಳಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಈ‌ ಚಿತ್ರವನ್ನು ತೆರೆಗೆ ತರಲು‌ ನಿರ್ದೇಶಕರು ಸಜ್ಜಾಗಿದ್ದಾರೆ.

Categories
ಸಿನಿ ಸುದ್ದಿ

ತ್ರಿಕೋನ ಇದು ಮೂರು ತಲೆಮಾರಿನ ಕಥೆ ! ಕನ್ನಡ ತೆಲುಗು, ತಮಿಳಲ್ಲಿಯೂ ಬಿಡುಗಡೆಗೆ ರೆಡಿ

65ರ ಇಳಿವಯಸ್ಸಿನ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ. ಈ ಹಿಂದೆ 2014ರಲ್ಲಿ “143” ಸಿನಿಮಾ ಮಾಡಿದ್ದ ಚಂದ್ರಕಾಂತ್ ಇದೀಗ “ತ್ರಿಕೋನ” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಬಂದಿದ್ದಾರೆ. ಈ ಚಿತ್ರಕ್ಕೆ ರಾಜಶೇಖರ್ ಬಂಡವಾಳ ಹಾಕಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಮನುಷ್ಯ ಜೀವನದಲ್ಲಿ ತಾಳ್ಮೆ ಇದ್ರೆ ಏನೆಲ್ಲ ಸಂಪಾದನೆ ಮಾಡ್ತಾನೆ.. ತಾಳ್ಮೆ ಇಲ್ಲದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಾನೆ ಎಂಬುದೇ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಹೊರಟಿದ್ದಾರೆ. ಈಗಿನ ಪೀಳಿಗೆ ತಾಳ್ಮೆ ಇಲ್ಲದೆ ಸಾಕಷ್ಟು ಅನಾಹುತ ಮಾಡಿಕೊಳ್ಳುತ್ತಾರೆ. ಅದನ್ನು ಮನೆಯ ಇತರ ಸದಸ್ಯರಿಗೆ ನೀಡುತ್ತಾರೆ. ಇದಕ್ಕೆ ಸರಿಹೊಂದುವ ಮೂರು ತಲೆಮಾರುಗಳ ಮೂಲಕ ಅದನ್ನು ತೋರಿಸಲಿದ್ದೇವೆ ಎಂಬುದು ನಿರ್ದೇಶಕ ಚಂದ್ರಕಾಂತ್ ಮಾತು.
ಬೆಂಗಳೂರು, ತುಮಕೂರು, ಹಾಸನ, ಸಕಲೇಶಪುರ, ಗುಂಡ್ಯ, ಸುಬ್ರಮಣ್ಯ, ಮಂಗಳೂರು, ಚಾರ್ಮಾಡಿ ಘಾಟ್, ಶಿರಾಡಿಘಾಟ್​ನಲ್ಲಿ ಸಿನಿಮಾ ಚಿತ್ರೀಕರಣವಾಗಿದೆ.

ವಿಶೇಷವೆಂದರೆ ಹೆಬ್ರಿ ಮತ್ತು ಆಗುಂಬೆ ಮಧ್ಯೆ ಕೂಡ್ಲು ತೀರ್ಥ ಫಾಲ್ಸ್​ನಲ್ಲಿ ಶೂಟಿಂಗ್ ಮಾಡಿಕೊಂಡ ಮೊದಲ ಸಿನಿಮಾ ಇದು. ಇದೂ ಸಹ ಈ ಚಿತ್ರದ ವಿಶೇಷತೆಗಳಲ್ಲೊಂದು ಎನ್ನುತ್ತಾರೆ ಚಂದ್ರಕಾಂತ್.
ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ, ಹೀಗೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ರಾಜವೀರ್​ ಮತ್ತು ಮಾರುತೇಶ್ ಅನ್ನೋ ಹೊಸ ಪ್ರತಿಭೆಗಳು ಈ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.
ಶ್ರೀನಿವಾಸ್ ವಿನ್ನಕೋಟ್ ಛಾಯಾಗ್ರಹಣವಿದೆ. ಸುರೇಂದ್ರನಾಥ್ ಪಿ ಆರ್ ಸಂಗೀತ, ಹಿನ್ನಲೆ ಸಂಗೀತವಿದೆ.

ಜೀವನ್ ಪ್ರಕಾಶ್​ ಎನ್ ಸಂಕಲನ. ಹೈಟ್ ಮಂಜು ಕೋರಿಯೋಗ್ರಾಫಿ, ಚೇತನ್ ಡಿಸೋಜ್ ಮತ್ತು ಜಾನಿ ಮಾಸ್ಟರ್​ ಸಾಹಸ ನಿರ್ದೇಶನ ಮಾಡಿದ್ದಾರೆ.
ಕನ್ನಡದಲ್ಲಿ ತ್ರಿಕೋನ, ತೆಲುಗಿನಲ್ಲಿ ತ್ರಿಕೋನಂ ಮತ್ತು ತಮಿಳಿನಲ್ಲಿ ಗೋಸುಲೋ ಶೀರ್ಷಿಕೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಸೆನ್ಸಾರ್ ಮಂಡಳಿಯಿಂದಲೂ ಯಾವುದೇ ಕಟ್ ಇಲ್ಲದೆ ಯೂ/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪೀಪಲ್ಸ್ ಸಂಸ್ಥೆ ಪಡೆದುಕೊಂಡಿದೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಬ್ರಹ್ಮಗಂಟು ಖ್ಯಾತಿಯ ನಟಿ ಗುಂಡಮ್ಮ

ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಗೀತಾ ಭಾರತಿಭಟ್ ಮೂರನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ. ದಢೂತಿ ದೇಹದ ಗೀತಾ ಭಾರತಿಭಟ್‌ “ಬ್ರಹ್ಮಗಂಟು” ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಯಾಗಿ‌, ನಂತರದ ದಿನಗಳಲ್ಲಿ ಗುಂಡಮ್ಮ ಅಂತಾನೇ ಜನಪ್ರಿಯಗೊಂಡಿದ್ದರು.

ಮೂಲತಃ ಕಾರ್ಕಳದವರಾದ ಗೀತಾ ಭಾರತಿಭಟ್‌,‌ ನಟನೆ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಆ ಕಾರಣಕ್ಕೆ ಅವರು, ಬೆಂಗಳೂರಿನತ್ತ ಮುಖ ಮಾಡಿದ್ದರು. ಸಿಕ್ಕಾಪಟ್ಟೆ ಶ್ರಮಪಟ್ಟಿದ್ದ ಗೀತಾ ಭಾರತಿಭಟ್‌, ತನಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮನೆಮಾತಾದ ಈ ಗುಂಡಮ್ಮ, ಬಿಗ್‌ಬಾಸ್‌ ಮನೆಗೆ ಹೋಗುವ ಅವಕಾಶ ಪಡೆದಾಗ, ಎಲ್ಲರಿಗೂ ಅಚ್ಚರಿಯಾಗಿದ್ದು ನಿಜ. ಬಿಗ್‌ಬಾಸ್‌ ಮನೆ ಒಳ ನಡೆದ ಇವರು, ಬಹುತೇಕ ಅಳುಮೊಗದಲ್ಲಿ ಕಂಡಿದ್ದೇ ಹೆಚ್ಚು. ಬಿಗ್‌ಬಾಸ್‌ ಕೊಟ್ಟ ಟಾಸ್ಕ್ ಗಳನ್ನೆಲ್ಲಾ ಚೆನ್ನಾಗಿ ನಿಭಾಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ, ತೀರಾ ಮೃದು ಸ್ವಭಾವದ ಇವರಿಗೆ ಬಿಗ್‌ಬಾಸ್ ಮನೆಯಲ್ಲಿ ಬಹಳಷ್ಟು ದಿನಗಳ ಕಾಲ ಇರಲು ಸಾಧ್ಯವಾಗಲಿಲ್ಲ.

ಕಣ್ಣೀರೇ ಮುಳುವಾಯ್ತ?
ಬಿಗ್‌ಬಾಸ್‌ ಮನೆಯಲ್ಲಿ ಸದಾ ಕಣ್ಣೀರು ಹಾಕುತ್ತಲೇ ಇದ್ದ ಇವರು ಎಲ್ಲರಿಗೂ ಹತ್ತಿರವಾಗಿದ್ದರು. ಒಬ್ಬರ ಬಗ್ಗೆ ಕೇವಲವಾಗಿ ಮಾತನಾಡಿದ ಬಳಿಕ ಸ್ವತಃ ಅವರೇ ನಾ‌ನು ಯಾಕೆ ಹೀಗೆ ಅಂದೆ ಅಂತ ಪಶ್ಚಾತ್ತಾಪಪಡುತ್ತಿದ್ದರು. ಬಿಗ್‌ಬಾಸ್ ಮನೆಮಂದಿ ಇವರನ್ನು ಸಮಾಧಾನ ಮಾಡುವುದರಲ್ಲಿಯೇ ಸುಸ್ತಾಗಿ‌ ಹೋಗುತ್ತಿದ್ದರು. ಹೀಗೆ ಗೀತಾ ಭಾರತಿ‌ ಭಟ್ ದಿನದಿಂದ ದಿನಕ್ಕೆ ಆ ಮನೆಯಲ್ಲಿ ಮಂಕಾಗಿದ್ದರು. ಮೂರನೇ ವಾರಕ್ಕೆ ಅವರು ಬಿಗ್‌ಬಾಸ್ ಮನೆಯಿಂದಲೇ ಹೊರಬಂದಿದ್ದಾರೆ.

Categories
ಸಿನಿ ಸುದ್ದಿ

ಸೂಪರ್‌ ಹೀರೋ ಅದಿತಿ ಪ್ರಭುದೇವ – ಮಾರ್ಚ್‌ 24ಕ್ಕೆ ‘ಆನ’ ಟೀಸರ್‌ ಲಾಂಚ್‌

ಬೆಣ್ಣೆನಗರಿ ದಾವಣಗೆರೆಯ ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ನಟಿ. ಅವರೀಗ ಸಾಲು ಸಾಲು ಸಿನಿಮಾಗಳಿಗೆ ನಾಯಕಿ. ಅದರಲ್ಲೂ ಅವರೀಗ ಸೂಪರ್‌ ಹೀರೋ ಆಗಿಯೂ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಅದೇ ಕಾರಣಕ್ಕೆ ಅವರ ಸಿನಿ ಜರ್ನಿಯಲ್ಲೀಗ ತೀವ್ರ ಕುತೂಹಲ ಮೂಡಿಸಿದ ಚಿತ್ರ “ಆನʼ.

ಶೀರ್ಷೀಕೆಯೇ ತೀರಾ ಡಿಫೆರೆಂಟ್‌ ಎನಿಸುವ ಈ ಚಿತ್ರ ಹಾರರ್‌ ಕಥಾ ಹಂದರದ್ದು. ಅಷ್ಟು ಮಾತ್ರವೇ ಅಲ್ಲ, ಭಾರತದಲ್ಲೇ ಇದೇ ಮೊದಲು ನಟಿ ಅದಿತಿ ಪ್ರಭುದೇವ ಸೂಪರ್‌ ಹೀರೋ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ” ಜಾಗ್ವಾರ್‌ ‘ಚಿತ್ರದಲ್ಲಿ ನಟ ನಿಖಿಲ್‌ ಕುಮಾರ್‌ ಕೂಡ ಇಂತಹದೊಂದು ಲುಕ್‌ ನಲ್ಲಿ ಕಾಣಸಿಕೊಂಡಿದ್ದರು. ಅದೇ ತರಹ ನಟಿಯಾಗಿ ಅದಿತಿ ಪ್ರಭುದೇವ ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲು ಇಂತಹದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದೇ ಕಾರಣಕ್ಕೆ ಆನ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದ್ದು, ಇದೀಗ ಟೀಸರ್‌ ಲಾಂಚ್‌ ಮೂಲಕವೂ ಮತ್ತಷ್ಟು ಕ್ರೇಜ್‌ ಸೃಷ್ಟಿಸಲು ಮುಂದಾಗಿದೆ. ಮಾರ್ಚ್‌ 24 ರಂದು ಈ ಚಿತ್ರದ ಟೀಸರ್‌ ಲಾಂಚ್‌ ಆಗುತ್ತಿದೆ. ಹಾಗಂತ ಚಿತ್ರ ತಂಡ ಅನೌನ್ಸ್‌ ಮಾಡಿದೆ. ನಟಿ ಅದಿತಿ ಪ್ರಭುದೇವ ಕೂಡ ಸೋಷಲ್‌ ಮೀಡಿಯಾದ ತಮ್ಮ ಖಾತೆಗಳಲ್ಲಿ ರಿವೀಲ್‌ ಮಾಡಿದ್ದಾರೆ. ಇದೊಂದು ಹೊಸಬರ ಸಿನಿಮಾ. ಮನೋಜ್ ಪಿ. ನಡಲುಮನೆ ನಿರ್ದೇಶನ ಮಾಡಿದ್ದು, ಪೂಜಾ ವಸಂತ್‌ ಕುಮಾರ್‌ ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಚಿತ್ರದ ಪೋಸ್ಟರ್‌ ಕೂಡ ಹೊರ ಬಂದಿವೆ. ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಡಿಫೆರೆಂಟ್‌ ಲುಕ್‌ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹಾರರ್‌ ಸಿನಿಮಾ ಆಗಿದ್ದರಿಂದ ಅದಿತಿ ಅವರ ಹಾರರ್‌ ಲುಕ್‌ ಕೂಡ ಭರ್ಜರಿ ಆಗಿ ಮೂಡಿ ಬಂದಿದೆ. ಈಗ ಟೀಸರ್‌ ಮೂಲಕ ಮತ್ತೆ ಬೆಚ್ಚಿ ಬೀಳಿಸಲು ಬರುತ್ತಿದ್ದಾರಂತೆ.

Categories
ಸಿನಿ ಸುದ್ದಿ

ನೂತನ್‌ ಉಮೇಶ್‌ ಅವರ ವಿನೂತನ ಪ್ರಯತ್ನ! ನಾಲ್ವರು ನಿರ್ದೇಶಕರು, ನಾಲ್ಕು ಕಥೆ, ನಾಲ್ಕು ಭಾಷೆ, ಒಂದೇ ಸಿನಿಮಾ!! ಇದು ಫಸ್ಟ್‌ ನಿರ್ಮಾಣದ ಚಿತ್ರ

ನಿರ್ದೇಶಕ ನೂತನ್‌ ಉಮೇಶ್‌ ಇದೀಗ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ! ಹೌದು,‍ “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ” ಸಿನಿಮಾ ಮೂಲಕ ಸೌಂಡು ಮಾಡಿದ ನೂತನ್‌ ಉಮೇಶ್‌, ಆ ನಂತರದ ದಿನಗಳಲ್ಲಿ “ಅಸ್ತಿತ್ವ” ಮೂಲಕ ಸುದ್ದಿಯಾದರು. ಆ ಚಿತ್ರ ಹೊರಬಂದ ಬಳಿಕ ವಿನೋದ್‌ ಪ್ರಭಾಕರ್‌ ಅಭಿನಯದ “ಫೈಟರ್‌”ಗೆ ಆಕ್ಷನ್-ಕಟ್‌ ಹೇಳಿದ್ದಾರೆ. ಆ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಈ ಬೆನ್ನಲ್ಲೇ ನೂತನ್‌ ಉಮೇಶ್‌ ಹೊಸದೊಂದು ಪ್ರಯೋಗಕ್ಕಿಳಿದಿರುವುದು ವಿಶೇಷ. ಹಾಗಾದರೆ, ನೂತನ್‌ ಉಮೇಶ್‌ ಅವರ ನೂತನ ಪ್ರಯೋಗವೇನು? ವಿಷಯವಿಷ್ಟೇ. ಇಲ್ಲಿಯವರೆಗೆ ನಿರ್ದೇಶಕರಾಗಿದ್ದ ಅವರು, ಈಗ ನಿರ್ಮಾಪಕರೂ ಆಗಿದ್ದಾರೆ ಅನ್ನೋದೂ ವಿಶೇಷ.‌

“ಮೋಹಕ್‌ ಸಿನಿಮಾಸ್”‌ ಎಂಬ ಬ್ಯಾನರ್‌ ಶುರುಮಾಡಿ, ಆ ಮೂಲಕ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಇದಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಅವರು ತಮ್ಮ ಹೊಸ ಬ್ಯಾನರ್‌ ಮೂಲಕ ವಿಶೇಷ, ವಿಭಿನ್ನ ಎನ್ನುವ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಾಲ್ಕು ಜನ ನಿರ್ದೇಶಕರು, ನಾಲ್ಕು ಭಾಷೆ ಸಿನಿಮಾ, ನಾಲ್ಕು ಕಥೆಗಳು ಆದರೆ ಸಿನಿಮಾ ಮಾತ್ರ ಒಂದೇ. ಈಗಾಗಲೇ ಅವರು ಸದ್ದಿಲ್ಲದೆಯೇ, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ತಯಾರಾಗಬೇಕಿದೆ. ಸದ್ಯಕ್ಕೆ ಶೀರ್ಷಿಕೆ ಅನೌನ್ಸ್‌ ಮಾಡದ ನೂತನ್‌ ಉಮೇಶ್‌, ಇಷ್ಟರಲ್ಲೇ ಕನ್ನಡ ಸಿನಿಮಾ ಮುಹೂರ್ತ ನೆರವೇರಿಸಿ, ವಿಭಿನ್ನವಾಗಿಯೇ ಘೋಷಣೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ.
ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಗ್ಗೆ “ಸಿನಿಲಹರಿ” ಜೊತೆ ಹಂಚಿಕೊಂಡ ನೂತನ್ ಉಮೇಶ್‌, “ಇದು ನನ್ನ ಮೊದಲ ಪ್ರಯತ್ನ. ನಿರ್ಮಾಣ ಸಂಸ್ಥೆ ಹುಟ್ಟು ಹಾಕೋದು ಸುಲಭವಲ್ಲ. ತುಂಬಾನೇ ಕಷ್ಟ. ಆ ಕಷ್ಟದಲ್ಲೇ ನಾನೊಂದು ಕನಸು ಕಟ್ಟಿಕೊಂಡು “ಮೋಹಕ್‌ ಸಿನಿಮಾಸ್‌” ಹೆಸರಿನ ಬ್ಯಾನರ್‌ ಮಾಡಿದ್ದೇನೆ. ಈ ಮೂಲಕ ಹೊಸ ಬಗೆಯ ಚಿತ್ರ ಮಾಡಿದ್ದು, ಅದು ನಾಲ್ವರು ನಿರ್ದೇಶಕರು ಸೇರಿ ಮಾಡುತ್ತಿರುವ ಚಿತ್ರ. ಚಿತ್ರ ಕೂಡ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ತಮಿಳು ಭಾಷೆಯಲ್ಲಿ ಸೂರ್ಯ ನಿರ್ದೇಶಿಸಿದರೆ, ಮಲಯಾಲಂ ಭಾಷೆಯ ಸಿನಿಮಾಗೆ ಶಿಬು ಗಂಗಾಧರ್‌ ನಿರ್ದೇಶಕರು. ತೆಲುಗಿನ ಚಿತ್ರಕ್ಕಿನ್ನೂ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ.

ಕನ್ನಡದಲ್ಲಿ ತಯಾರಾಗುವ ಚಿತ್ರಕ್ಕೆ ನಾನೇ ನಿರ್ದೇಶನ ಮಾಡಲಿದ್ದೇನೆ. ನಾಲ್ಕು ಭಾಷೆಯ ಈ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇದು ಒಂದೇ ಸಿನಿಮಾ ಅನ್ನೋದು ವಿಶೇಷ. ಒಂದೇ ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದರೂ, ಇಂಟರ್‌ ಲಿಂಕ್‌ ಇರಲಿದೆ. ಓಪನಿಂಗ್‌ನಲ್ಲೇ ಇಂಟರ್ಲಿಂಕ್‌ ಕಥೆ ಇರಲಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಭಾಷೆಗಳನ್ನೂ ಕೇಳಬಹುದು. ಅವು ಆಗಾಗ ಪ್ಲೇ ಆಗುತ್ತಿರುತ್ತವೆ. ಅದು ಹೇಗೆ ಅನ್ನೋದೇ ವಿಶೇಷ. ಇನ್ನು, ಲಾಕ್‌ಡೌನ್‌ ಸಮಯದಲ್ಲಿ ನಡೆದ ರಿಯಲ್‌ ಇನ್ಸಿಡೆಂಟ್‌ ಇಟ್ಟುಕೊಂಡು ಕಥೆ ಮಾಡಲಾಗಿದೆ.

ಮೊದಲ ಸಲ ಪ್ರೊಡಕ್ಷನ್ಸ್‌ ಶುರುಮಾಡುತ್ತಿರುವುದರಿಂದ ಹೊಸದನ್ನು ಮಾಡಬೇಕು ಎಂಬ ಉದ್ದೇಶದಿಂದ ಈ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ತಿಂಗಳಲ್ಲಿ ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕನ್ನಡದಲ್ಲಿ ತಯಾರಾಗುವ ಸಿನಿಮಾಗಿನ್ನೂ ನಾಯಕ,ನಾಯಕಿಯ ಆಯ್ಕೆಯಾಗಬೇಕಿದೆ. ಸದ್ಯ ಹುಡುಕಾಟ ನಡೆದಿದೆ” ಎನ್ನುತ್ತಾರೆ ಉಮೇಶ್.
ಈಗಾಗಲೇ ಆಯಾ ಭಾಷೆಯ ಸಿನಿಮಾಗಳಲ್ಲಿ ನಾಲ್ಕೈದು ನಿರ್ದೇಶಕರು ಸೇರಿ ಒಂದು ಸಿನಿಮಾ ಮಾಡಿರುವ ಉದಾಹರಣೆ ಸಾಕಷ್ಟಿದೆ. ಆದರೆ, ಒಂದು ಸಿನಿಮಾವನ್ನು ನಾಲ್ಕು ಭಾಷೆಯ ನಿರ್ದೇಶಕರು ಮಾಡುತ್ತಿರುವುದು ಹೊಸ ಪ್ರಯತ್ನ. ಇದೊಂದು ಪ್ರಯೋಗವೂ ಹೌದು. ಇದು ಯುನಿವರ್ಸಲ್‌ ಸ್ಟೋರಿ ಆಗಿರುವುದರಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಉಮೇಶ್.‌

Categories
ಸಿನಿ ಸುದ್ದಿ

ಯುವರತ್ನ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್‌ , ಸೋಷಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ” ಯುವರತ್ನʼ ಚಿತ್ರದ ಟ್ರೇಲರ್‌ ಇಂದು ಲಾಂಚ್‌ ಆಗಿದೆ. ಲಾಂಚ್‌ ಆದ ಕೇವಲವೇ ಕ್ಷಣಗಳಲ್ಲಿ ಅದು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಪ್ಪು ಅಭಿನಯಗಳಂತೂ ಫುಲ್‌ ಖುಷ್‌ ಆಗಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಟ್ರೇಲರ್‌ನಲ್ಲಿ ಭರ್ಜರಿ ಆಗಿ ಘರ್ಜಿಸಿದ್ದು, ನೋಡುವುದಕ್ಕೆ ಸಖತ್‌ ಥ್ರಿಲ್‌ ಆಗಿದೆ. ಸಿನಿಮಾದ ಬಗೆಗೆ ಇನ್ನಷ್ಟು- ಮೊಗದಷ್ಟು ಕ್ರೇಜ್‌ ಹುಟ್ಟುವಂತೆ ಮಾಡಿದೆ ಈ ಟ್ರೈಲರ್.‌ ಚಿತ್ರದ ರಿಲೀಸ್‌ ಪೂರ್ವ ಪ್ರಚಾರಕ್ಕೆ ” ಯುವ ಸಂಭ್ರಮʼ ಪ್ರವಾಸದ ವೇಳಾಪಟ್ಟಿ ಪಟ್ಟಿ ಅನೌನ್ಸ್‌ ಮಾಡಿದ ಬೆನ್ನಲೇ ಇಂದು ಚಿತ್ರ ತಂಡವು ಚಿತ್ರದ ಟ್ರೈಲರ್‌ ಲಾಂಚ್‌ ಮಾಡಿತು. ಅದಕ್ಕಂತಲೇ ಬೆಂಗಳೂರಿನ ಪಂಚತಾರಾ ಹೋಟೆಲ್‌ ನಲ್ಲಿ ಗ್ರಾಂಡ್‌ ಕಾರ್ಯಕ್ರಮ ಆಯೋಜಿಸಿತ್ತು.

ಇವ್ರಿಗೆ ಕೊಟ್ಟಿರೋ ಸ್ಟಾರ್‌ ಇವ್ರು ಡ್ಯೂಟಿನಲ್ಲಿರೋ ತನಕ, ನಂಗೆ ಕೊಟ್ಟಿರೋ ಸ್ಟಾರ್‌ ನಾವ್‌ ಬದುಕಿರೋ ತನಕ…, ಎನ್ನುವ ಖಡಕ್‌ ಡೈಲಾಗ್‌ ಮೂಲಕ ಟ್ರೈಲರ್‌ ಲಾಂಚ್‌ ಆದ ಸರಿ ಸುಮಾರು 3 ಗಂಟೆಯ ಹೊತ್ತಿಗೆ ಸುಮಾರು 5ಲಕ್ಷ ವೀಕ್ಷಣೆಯೊಂದಿಗೆ ಅದು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಕನ್ನಡದ ಮಟ್ಟಿಗೆ ಯುವರತ್ನ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದ ಚಿತ್ರ. ಅದಕ್ಕೆ ಕಾರಣ ನಟ ಪುನೀತ್‌ ರಾಜ್‌ ಕುಮಾರ್‌ ಹಾಗೂ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಕಾಂಬಿನೇಷನ್.‌ ಹಾಗೆಯೇ ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಿರ್ಮಾಣದ ಚಿತ್ರ ಎನ್ನುವುದು ಕೂಡ ಅದಕ್ಕೆ ಕಾರಣ. ವಿಶೇಷವಾಗಿ ಪುನೀತ್‌ ರಾಜ್‌ ಕುಮಾರ್‌ ಇಲ್ಲಿ ಸಾಸರ್‌ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗಿನ ಅವರ ಲುಕ್‌ ಗಿಂತ ಇಲ್ಲಿ ಭಿನ್ನವಾದ ನೋಟವೇ ಇದೆ. ಹಾಗೆಯೇ ಅವರಿಗಿಲ್ಲಿ ಸೌತ್‌ ಇಂಡಸ್ಟ್ರಿಯ ಬಹು ಜನಪ್ರಿಯ ನಟಿ ಶಯೇಶಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಲಿರಿಕಲ್‌ ವಿಡಿಯೋಗಳಲ್ಲಿ ಈ ಜೋಡಿ ಸಾಕಷ್ಟು ಕ್ರೇಜ್‌ ಹುಟ್ಟಿಸಿದೆ.

ಇನ್ನು ಪ್ರಕಾಶ್‌ ರೈ, ಡಾಲಿ ಧನಂಜಯ್‌, ಅಚ್ಯುತ್‌ ಕುಮಾರ್‌, ಅವಿನಾಶ್‌, ಸಾಯಿಕುಮಾರ್‌, ರಂಗಾಯಣ ರಘು ಮತ್ತಿತರರು ಚಿತ್ರದಲ್ಲಿದ್ದಾರೆ. ಏಪ್ರಿಲ್‌ 1 ಕ್ಕೆ ಈ ಚಿತ್ರ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಏಕಕಾಲದಲ್ಲೇ ಬಿಡುಗಡೆ ಆಗುತ್ತಿದೆ. ಫಸ್ಟ್‌ ಟೈಮ್‌ ಈ ಚಿತ್ರದೊಂದಿಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಕನ್ನಡದಾಚೆಗೂ ಅಬ್ಬರಿಸಲಿದ್ದಾರೆ. ಚಿತ್ರದ ಪ್ರಚಾರಕ್ಕೆ ಈಗಾಗಲೇ ಹಲವು ತಂತ್ರಗಳನ್ನು ಪಳಗಿಸಿರುವ ಚಿತ್ರ ತಂಡ, ಈ ಯುವ ಸಂಭ್ರಮ ಕಾರ್ಯಕ್ರಮದೊಂದಿಗೆ ನಾಳೆ( ಮಾ.21 ) ಯಿಂದ ಪ್ರವಾಸ ಫಿಕ್ಸ್‌ ಮಾಡಿಕೊಂಡಿದೆ. ಮೈಸೂರಿನಲ್ಲಿ ಫಿಕ್ಸ್‌ ಯುವ ಸಂಭ್ರಮ ರದ್ದಾದ ಬೆನ್ನಲೇ ಚಿತ್ರ ತಂಡ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಿದೆ. ಗುಲ್ಬರ್ಗಾ, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಯುವ ಸಂಭ್ರಮ ಫಿಕ್ಸ್‌ ಆಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ , ಚಿಕ್ಕಮಗಳೂರು, ಕಾರವಾರ, ಮಂಗಳೂರು, ಹಾವೇರಿ , ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಮುಂದಾಗಿದೆ ಅಂತ ಚಿತ್ರ ತಂಡ ಹೇಳಿದೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಅರ್ಧ ಭರ್ತಿ ಶಾಕ್‌! ಸರ್ಕಾರ ವಿರುದ್ಧ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಗರಂ

ಚಿತ್ರರಂಗದಿಂದ ಬಿಎಸ್‌ವೈ ಭೇಟಿ ಮಾಡಲು ನಿರ್ಧಾರ:ಈ ಕುರಿತಂತೆ ನಾಳೆ (ಶನಿವಾರ) ಬೆಳಗ್ಗೆ ಸಿನಿಮಾರಂಗದ ಕಲಾವಿದರು ಸೇರಿ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರು ಸೇರಿ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಕೈ ಬಿಡಬೇಕು ಎಂದು ಮನವಿ ಮಾಡುವುದಾಗಿ ಹೇಳಿದ್ದಾರೆ

ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್‌ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಬೆಳವಣಿಗೆಯೊಂದರಲ್ಲಿ ಬಿಬಿಎಂಪಿ ಕಣ್ಣು ಈಗ ಸ್ಯಾಂಡಲ್‌ವುಡ್‌ ಮೇಲೆ ಬಿದ್ದಿದೆ.

ಹೌದು, ಬಿಬಿಎಂಪಿ ಶೇ.50ರಷ್ಟು ಥಿಯೇಟರ್‌ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟರೆ, ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸದ್ಯಕ್ಕೆ ಬಿಬಿಎಂಪಿ ಆಯುಕ್ತರು ಈ ಪ್ರಸ್ತಾವನೆ ಇಟ್ಟಿದ್ದಾರೆ. ಇದರ ವಿರುದ್ಧ ಚಿತ್ರರಂಗದ ಸ್ಟಾರ್‌ ನಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರಿಗೆ ಪ್ರತಿಭಟನೆ ಮಾಡಲು ರ್ಯಾಲಿ ನಡೆಸಲು ಅವಕಾಶ ಕೊಡಲಾಗುತ್ತಿದೆ. ಆದರೆ, ನಮಗೆ ಯಾಕೆ ಈ ರೀತಿಯ ಹೊಣೆ ಹೊರಿಸಲಾಗುತ್ತಿದೆ ಎಂದು ಗರಂ ಆಗಿದ್ದಾರೆ. ಈ ನಿಟ್ಟಿನಲ್ಲಿ ಪುನೀತ್‌ ರಾಜಕುಮಾರ್‌ ಕೂಡ ಬೇಸರ ವ್ಯಕ್ತಪಡಿಸಿದ್ದು, ಆ ಕುರಿತು ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. “ಶೇ. 100 ಇದ್ದರೆ ಒಳ್ಳೆಯದು. ಎಲ್ಲರ ಆರೋಗ್ಯ ಮುಖ್ಯ. ಮಾಸ್ಕ್‌ ಧರಿಸಿ, ಚಿತ್ರಮಂದಿರ ಮೇಂಟೈನ್‌ ಮಾಡುತ್ತಿದ್ದಾರೆ. ಶೇ.100 ಬೇಕು. ಶೇ.50 ಆಗಿಬಿಟ್ಟರೆ, ಸಿಕ್ಕಾಪಟ್ಟೆ ಎಫೆಕ್ಟ್‌ ಆಗುತ್ತೆ. ಈವೆಂಟ್‌ಗೆ ಬ್ರೇಕ್‌ ಇರಲಿ, ಆದರೆ, ಚಿತ್ರಮಂದಿರಗಳಿಗೆ ಈ ರೀತಿಯ ರೂಲ್ಸ್‌ ಬೇಡ. ಸಿನಿಮಾ ನೋಡಲು ಬರುವ ಜನರು ಭಯ ಬೇಡ. ತೊಂದರೆ ಆಗಲ್ಲ. ಎಲ್ಲರೂ ಮಾಸ್ಕ್‌ ಧರಿಸಿ” ಎಂದಿದ್ದಾರೆ.‌

ಧನಂಜಯ್‌, ಹಸಿವು ದೊಡ್ಡ ಡೇಂಜರ್‌, ಸಿನಿಮಾ ಅಲ್ಲ, ಎಲ್ಲಾ ಕ್ಷೇತ್ರ. ನಾರ್ಮಲ್‌ ಆಗಿ ಬದುಕು ಶುರುವಾಗುತ್ತಿದೆ. ವೈರಸ್‌ ಇದ್ದರೂ, ನಾವು ಬದುಕುತ್ತಿದ್ದೇವೆ. ವ್ಯಾಕ್ಸಿನ್‌ ಬಂದಿದೆ. ಆದರೂ ಚಿತ್ರಮಂದಿರಗಳಿಗೆ ಶೇ.೫೦ರಷ್ಟು ಅವಕಾಶ ಕೊಟ್ಟರೆ, ಸಮಸ್ಯೆ ಆಗುತ್ತೆ. ಎಷ್ಟೋ ಚಿತ್ರಗಳು ಈಗ ಶುರವಾಗಿವೆ. ಕುಟುಂಬಗಳು ಅವಲಂಬಿತಗೊಂಡಿವೆ. ನಿರ್ಮಾಪಕರು ಸಮಸ್ಯೆಗೆ ಸಿಲುಕುತ್ತಾರೆ. ಎಲ್ಲರೂ ಸೇರಿ ಮನವಿ ಮಾಡ್ತೀವಿ. ಜನರು ಈಗ ಬಂದು ಸಿನಿಮಾ ನೋಡುತ್ತಿದ್ದಾರೆ. ಮುಂಜಾಗ್ರತೆ ವಹಿಸಿದ್ದಾರೆ. ಸರ್ಕಾರ ಈ ಬಗ್ಗೆ ಗಮನಿಸಬೇಕು” ಎಂದಿದ್ದಾರೆ. ಇವರ ಮಾತಿಗೆ “ದುನಿಯಾ” ವಿಜಯ್‌, ಪ್ರೇಮ್‌, ಡಾಲಿ ಧನಂಜಯ್ ಕೂಡ ಧ್ವನಿಯಾಗಿದ್ದಾರೆ.

ಚಿತ್ರರಂಗದಿಂದ ಬಿಎಸ್‌ವೈ ಭೇಟಿ ಮಾಡಲು ನಿರ್ಧಾರ:ಈ ಕುರಿತಂತೆ ನಾವು ನಾಳೆ ಬೆಳಗ್ಗೆ ಸಿನಿಮಾರಂಗದ ಕಲಾವಿದರು ಸೇರಿ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರು ಸೇರಿ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಕೈ ಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ ಪುನೀತ್.

‌ಸದ್ಯಕ್ಕೆ ಈ ನಿರ್ಧಾರದಿಂದ ಸ್ಯಾಂಡಲ್‌ವುಡ್‌ ಅಸಮಾಧಾನಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯ್ತಕ್ತರು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಸರ್ಕಾರ ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಅದೇನೆ ಇರಲಿ, ಇಲ್ಲಿ ಕಾರ್ಮಿಕ ವರ್ಗ ದೊಡ್ಡದಿದೆ. ಸಿನಿಮಾರಂಗವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಪುನಃ‌ ಶೇ.೫೦ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟರೆ, ಖಂಡಿತವಾಗಿಯೂ ಇದು ದೊಡ್ಡ ಸಮಸ್ಯೆಗೆ ಕಾರಣವಾಗುವುದಂತೂ ನಿಜ.‌

ಈಗಾಗಲೇ ಹಲವು ಚಿತ್ರತಂಡಗಳು ಬಿಡುಗಡೆಯ ಲೆಕ್ಕಾಚಾರ ಹಾಕಿಕೊಂಡಿವೆ. ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆ ಅನೌನ್ಸ್‌ ಮಾಡಿದೆ. “ಕೋಟಿಗೊಬ್ಬ 3”, “ಕೆಜಿಎಫ್‌2”, “ಸಲಗ” ಚಿತ್ರಗಳ ಜೊತೆ ಸಾಕಷ್ಟು ಸಿನಿಮಾಗಳು ರೆಡಿಯಾಗಿವೆ. ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಶೇ.೫೦ರಷ್ಟು ಚಿತ್ರಮಂದಿರಗಳ ಭರ್ತಿಗೆ ಪ್ರಸ್ತಾವನೆ ಇಟ್ಟರೆ, ಸಿನಿಮಾರಂಗ ಮತ್ತಷ್ಟು ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು? ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್‌ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಸರ್ಕಾರ ಈ ಬಗ್ಗೆ ಗಮನಿಸಿ, ಈಗ ಇರುವ ಆದೇಶ ಮುಂದುವರೆಸಿದರೆ, ಸಿನಿಮಾರಂಗಕ್ಕೆ ಕೊಡುವ ದೊಡ್ಡ ಕೊಡುಗೆ.

error: Content is protected !!