ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಸಿನಿ ರಸಿಕರು ಮೆಚ್ಚುಗೆ ಸೂಚಿಸುವುದು ಹೊಸದೇನಲ್ಲ. ಈಗ ವಿಭಿನ್ನ ಕಥಾಹಂದರ ಹೊಂದಿರುವ “ಅನಿರೀಕ್ಷಿತ” ಸಿನಿಮಾಗೂ ಅಂಥದ್ದೊಂದು ಮೆಚ್ಚುಗೆ ಸಿಕ್ಕಿದೆ. ಹೌದು, ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಈಗ ತೆರೆಗೆ ಬರಲು ಚಿತ್ರ ಸಿದ್ದವಾಗಿದೆ. ಕೇವಲ ಎರಡೇ ಪಾತ್ರಗಳು ಈ ಚಿತ್ರದಲ್ಲಿದ್ದು, ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ ಎಂಬುದು ವಿಶೇಷ.
ಲಾಕ್ ಡೌನ್ ನಂತರ ಸುಮಾರು ಎರಡುವರೆ ತಿಂಗಳ ಬಳಿಕ ಆಯೋಜಿಸಿದ್ದ ಮೊದಲ ಪತ್ರಿಕಾಗೋಷ್ಠಿ ನಡೆಸಿದ್ದು ಈ ಚಿತ್ರತಂಡದ ಹೆಮ್ಮೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ದೇಶನವನ್ನು ಮಾಡಿರುವ ಮಿಮಿಕ್ರಿ ದಯಾನಂದ್, ತಮ್ಮ ಸಿನಿಮಾ ಅನುಭವ ಹಂಚಿಕೊಂಡಿದ್ದು ಹೀಗೆ. “ಮಿಮಿಕ್ರಿ ಕಲಾವಿದನಾದ ನಾನು ನಿರ್ದೇಶನಕ್ಕೆ ಬಂದದ್ದು “ಅನಿರೀಕ್ಷಿತ”. ಲಾಕ್ ಡೌನ್ ಸಮಯದಲ್ಲಿ ನಾವೊಂದಿಷ್ಟು ಜನ ಸಿನಿಮಾ ಮಾಡಬೇಕೆಂದು ಅಂದುಕೊಂಡೆವು. ಹದಿಮೂರು ಜನ ಪ್ರತಿಭಾವಂತರ ಪರಿಶ್ರಮದ ಫಲದಿಂದ ಈ ಚಿತ್ರ ನಿರ್ಮಾಣವಾಗಿದೆ. ಮಂಗಳೂರು ಹಾಗೂ ಕೇರಳದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಸಮುದ್ರ ತೀರದ ಮನೆಯೊಂದರಲ್ಲಿ ಹೆಚ್ಚು ದಿನದ ಚಿತ್ರೀಕರಣ ನಡೆದಿದ್ದು, ಲಾಕ್ ಡೌನ್ ಸಮಯ ಆಗಿದ್ದರಿಂದ ಯಾರು ಆಚೆ ಹೋಗುವಂತರಲಿಲ್ಲ. ಅಡುಗೆ ಕೆಲಸದಿಂದ ಹಿಡಿದು ಎಲ್ಲವನ್ನೂ ನಾವೇ ಮಾಡಿಕೊಂಡೆವು. ಎಲ್ಲಾ ಕಾರ್ಯಗಳು ಸುಲಲಿತವಾಗಿ ನಡೆಯಲು ಸಹಕರಿಸಿದ ಇಡೀ ತಂಡಕ್ಕೆ ಧನ್ಯವಾದ ಎಂದರು ದಯಾನಂದ್.
ನನ್ನನ್ನು ಬಿಟ್ಟು ಕೇರಳದವರೇ ಆದ ಭಾಮ ಅರುಣ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸರ್ಕಾರ ಬಿಡುಗಡೆಗೆ ಸೂಚಿಸಿದ ಮೇಲೆ ಚಿತ್ರವನ್ನು ತೆರೆಗೆ ತರುತ್ತೇವೆ. ನಮ್ಮ ಚಿತ್ರದ ಟ್ರೇಲರ್ ನೋಡಿ ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಅವರು ಮೆಚ್ಚುಗೆ ಸೂಚಿಸಿ ಶುಭ ಕೋರಿದ್ದಾರೆ ಎಂಬುದು ಮಿಮಿಕ್ರಿ ದಯಾನಂದ್ ಮಾತು. ನಿರ್ಮಾಣ ಕೆಲಸದಲ್ಲಿ ಕೈ ಜೋಡಿಸಿರುವ ಸಂತೋಷ್ ಕೊಡಂಕೇರಿ, ಚಿತ್ರಕಥೆ ಬರೆದಿರುವ ರಾಜಶೇಖರನ್ ಸೇರಿದಂತೆ ಚಿತ್ರತಂಡದ ಹಲವರು ಚಿತ್ರದ ಅನುಭವ ಹಂಚಿಕೊಂಡರು. ಎಸ್.ಕೆ.ಟಾಕೀಸ್ ಬ್ಯಾನರ್‌ನಲ್ಲಿ ಶಾಂತಕುಮಾರ್ ನಿರ್ಮಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.
ಅಂದಹಾಗೆ, ದಯಾನಂದ್ ಅವರೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಕೇವಲ ಎರಡು ಪಾತ್ರಗಳಿದ್ದು, ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ. ಸಹ ನಿರ್ಮಾಪಕ ಸಂತೋಷ್ ಕೊಡೆಂಕೇರಿ ಈ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.