Categories
ಸಿನಿ ಸುದ್ದಿ

ನನ್‌ ಮದ್ವೆಗೆ ದುನಿಯಾ ವಿಜಯ್‌ ಬರಲೇಬೇಕು! ಬರದಿದ್ದರೆ ಮದ್ವೆ ಆಗಲ್ಲ!! ದಾವಣಗೆರೆ ಅಭಿಮಾನಿಯೊಬ್ಬಳ ಹಠವಿದು…

ಅಭಿಮಾನಿಗಳ ಪ್ರೀತಿಯೇ ಹಾಗೆ. ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದರಂತೂ ಅಭಿಮಾನಿಗಳ ಅಭಿಮಾನ ಕೊಂಚ ಜಾಸ್ತಿಯೇ ಇರುತ್ತೆ. ಅದೆಷ್ಟೋ ಸಿನಿಮಾ ನಟರ ಅಭಿಮಾನಿಗಳು ತಮ್ಮ ಹೀರೋ ಮುಂದೆ ಅನೇಕ ಬೇಡಿಕೆಗಳನ್ನಿಡುವುದು ಗೊತ್ತೇ ಇದೆ. ಅದು ಹೊಸದಲ್ಲ ಬಿಡಿ. ಅಂತಹ ಪಟ್ಟು ಹಿಡಿದ ಅಭಿಮಾನಿಗಳ ಆಸೆಯನ್ನೂ ಈಡೇರಿಸಿರುವ ಅದೆಷ್ಟೋ ಸ್ಟಾರ್‌ ನಟರು ನಮ್ಮ ಕನ್ನಡದಲ್ಲಿದ್ದಾರೆ. ಈಗಲೂ ಅಭಿಮಾನಿಗಳೇ ನಮ್ಮ ಪ್ರೀತಿ ಅಂದುಕೊಂಡವರಿದ್ದಾರೆ. ಈಗ ವಿಷಯ ಏನಪ್ಪಾ ಅಂದ್ರೆ, ನಟ ದುನಿಯಾ ವಿಜಯ್‌ ಅವರ ಅಭಿಮಾನಿಯೊಬ್ಬರು ತನ್ನ ಮದುವೆಗೆ ದುನಿಯಾ ವಿಜಯ್‌ ಬರಬೇಕು. ಬರದೇ ಹೋದರೆ, ತಾಳಿ ಕಟ್ಟಿಸಿಕೊಳ್ಳುವುದೇ ಇಲ್ಲ ಎಂದು ಪಟ್ಟು ಹಿಡಿದ ಸುದ್ದಿ ಹೊರಬಿದ್ದಿದೆ.


ಹೌದು, ದಾವಣಗೆರೆ ಮೂಲದ ಅಭಿಮಾನಿ ಹೆಸರು ಅನುಷಾ. ಇವರು ಅಪ್ಪಟ ದುನಿಅ ವಿಜಯ್‌ ಅವರ ಅಭಿಮಾನಿ. ಈಗ ಈ ಅಭಿಮಾನಿಯ ಮದುವೆ ನಡೆಯಲಿದೆ. ಹಾಗಾಗಿ, ತನ್ನ ಮದುವೆಗೆ ದುನಿಯಾ ವಿಜಯ್‌ ಅವರು ಬರಬೇಕು ಎಂಬುದು ಈ ಅಭಿಮಾನಿಯ ವಿಶೇಷವಾದ ಬೇಡಿಕೆ. ಈ ಕಾರಣಕ್ಕೆ ದಕ್ಕೆ ಕಾರಣ ನಟ ದುನಿಯಾ ವಿಜಯ್. ಅದು ಹೇಗೆ ಅಂದರೆ ದಾವಣಗೆರೆ ಮೂಲಕ ಈ ಯುವತಿ ನಟ ದುನಿಯಾ ವಿಜಯ್‌ ಅವರ ಅಪ್ಪಟ್ಟ ಅಭಿಮಾನಿ. ಹಾಗಾಗಿ ಅವರಿಗೆ ಮದುವೆ ಆಹ್ವಾನ ನೀಡಿದ್ದಾಳೆ. ದುನಿಯಾ ವಿಜಯ್‌ ಅವರಿಗೆ ಮದುವೆ ಆಹ್ವಾನ ನೀಡಿರೋದು ಮಾತ್ರವಲ್ಲ, ಆಕೆ ದುನಿಯಾ ವಿಜಯ್‌ ಮದುವೆಗೆ ಬರಲೇಬೇಕು ಎಂದು ಪಟ್ಟು ಹಿಡಿದ್ದಾಳೆ.


ಅನುಷಾ ದುನಿಯಾ ವಿಜಯ್‌ ಅವರ ಅಭಿಮಾನಿ. ಹಾಗಾಗಿ ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದಿ. ದುನಿಯಾ ವಿಜಯ್​ ಬರುವವರೆಗೂ ತಾಳಿ ಕಟ್ಟಿಸಿ ಕೊಳ್ಳುವುದಿಲ್ಲ ಅಂತ ಹಠ ಹಿಡಿದಿದ್ದಾಳೆ. ತನ್ನ ಮದುವೆಗೆ ದುನಿಯಾ ವಿಜಯ್ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾಳೆ. ಮದುವೆಗೆ ಯಾರು ಬರದಿದ್ದರೂ ಪರವಾಗಿಲ್ಲ. ಆದರೆ, ದುನಿಯಾ ವಿಜಯ್ ಬರಬೇಕು. ಇಲ್ಲದಿದ್ದರೆ ಮದುವೆ ಆಗುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾಳಂತೆ! ಇನ್ನೊಂದು ವಿಶೇಷವೆಂದರೆ, ಅನುಷಾ ಮಾತ್ರವಲ್ಲ, ಅವರ ಕುಟುಂಬ ಕೂಡ ದುನಿಯಾ ವಿಜಯ್‌ ಅವರ ಅಭಿಮಾನಿಯಾಗಿದೆ. ಅವರ ಮನೆಗೆ “ದುನಿಯಾ ಋಣ” ಎಂದೇ ಹೆಸರಿಟ್ಟಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಮನೆ ಕಟ್ಟಿದ್ದು ಗೃಹ ಪ್ರವೇಶಕ್ಕೆ ನಟ ದುನಿಯಾ ವಿಜಯ್ ಬರಬೇಕೆಂದು ಆಗಲೂ ಮನೆಯನ್ನು ಹಾಗೆಯೇ ಬಿಟ್ಟಿದ್ದರು. ನಂತರ ವಿಷಯ ತಿಳಿದ ದುನಿಯಾ ವಿಜಯ್‌, ಅವರ ಮನೆಯ ಗೃಹ ಪ್ರವೇಶಕ್ಕೆ ಹೋಗಿ ಶುಭ ಕೋರಿ ಬಂದಿದ್ದರು.


ಅಂದಹಾಗೆ, ನವೆಂಬರ್‌ 29ಕ್ಕೆ ಅನುಷಾ ಮದುವೆ ಇದೆ. ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ ಪ್ರಕಾಶ್‌ ಎಂಬ ಯುವಕನ ಜೊತೆ ಮದುವೆಯಾಗುತ್ತಿದ್ದಾರೆ. ವಿಶೇಷವೆಂದರೆ, ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ದುನಿಯಾ ವಿಜಯ್ ಅವರ ಫೋಟೊವನ್ನು ಮುದ್ರಿಸಿದ್ದಾರೆ. ಜೊತೆಗೆ ‘ಒಂಟಿ ಸಲಗ’ ಎಂದು ತಮ್ಮ ಕೈಗೆ ಅನುಷಾ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದೇನೆ ಇರಲಿ, ದುನಿಯಾ ವಿಜಯ್‌ ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮಾಡಿದವರಲ್ಲ. ಈ ಅಭಿಮಾನಿಯ ಮದುವೆಗೆ ಹೋಗಿ, ಅವರ ಆಸೆ ಪೂರೈಸುತ್ತಾರಾ ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಜಮಾಲಿ ಗುಡ್ಡದಲ್ಲಿ ಶ್ಯಾನೆ ಟಾಪಾಗಿರೋ ಹುಡ್ಗಿ ಜೊತೆ ಮಿಠಾಯಿ ಸೂರಿ ! ಗುಡ್ಡದ ಮೇಲೊಂದು ಸಸ್ಪೆನ್ಸ್ ಕಮ್‌ ರೊಮ್ಯಾನ್ಸ್ !!

ಜಮಾಲಿ ಗುಡ್ಡದಲ್ಲಿ ಶ್ಯಾನೆ ಟಾಪಾಗಿರೋ ಹುಡ್ಗಿ ಜೊತೆ ಮಿಠಾಯಿ ಸೂರಿ ಎನ್ನುವ ಸುದ್ದಿ ನಿಮ್ಮ ಕಿವಿಗೆ ಬಿದ್ದಾಕ್ಷಣ ಲವ್ವು-ರೊಮ್ಯಾನ್ಸು-ಆಕ್ಷನ್ನು ಸೇರಿದಂತೆ ನೂರೆಂಟು ಕಲ್ಪನೆಗಳು ನಿಮ್ಮ ಕಣ್ಮುಂದೆ ಡ್ಯುಯೆಟ್ ಹಾಡೋದು ಖರ‍್ರೇ. ಆದರೆ, ಜಮಾಲಿ ಗುಡ್ಡದ ಖಬರ್ ಬ್ಯಾರನೇ ಐತಿ ಬಿಡ್ರಿಪಾ. ಹಾಗಾದ್ರೆ, ಮತ್ಯಾಕ್ ತಡ ಮಾಡೋಣು ತೋತಾಪುರಿ ಸುಂದರಿಯನ್ನು ಕರ‍್ಕೊಂಡು ಜಮಾಲಿ ಗುಡ್ಡ ಏರಿದ ನಟಭಯಂಕರನ ಸಸ್ಪೆನ್ಸ್ ವಿತ್ ರೊಮ್ಯಾನ್ಸ್ ಸ್ಟೋರಿನಾ ನೋಡಿಕೊಂಡು ಬರೋಣ ಬನ್ನಿ

ಶ್ಯಾನೆ ಟಾಪಾಗಿರೋ ಹುಡ್ಗಿ'ಹಾಗೂ ಮಿಠಾಯಿ ಸೂರಿ ಹೆಸರು ಕಿವಿಗೆ ಬಂದಾಕ್ಷಣ ನಟಿ ಅದಿತಿ ಪ್ರಭುದೇವ್ ಹಾಗೂ ಡಾಲಿ ಧನಂಜಯ್ ಇಬ್ಬರು ಕಣ್ಮುಂದೆ ಬಂದು ನಿಂತುಬಿಡ್ತಾರೆ.ಆದರೆ,ಜಮಾಲಿ ಗುಡ್ಡದ ಹೆಸರು ಕೇಳಿದ್ಮೇಲೆ ಎಲ್ಲಿದ್ದೀಯಪ್ಪ ಇದು? ಯಾವ ಭಾಗದಲ್ಲಿ ಬರುತ್ತೆ?ಈ ಹೆಸರನ್ನೂ ಕೇಳೇ ಇಲ್ಲವಲ್ಲ? ಹೀಗೆ ಪ್ರಶ್ನೆಗಳ ಸುರಿಮಳೆಯ ಜೊತೆ ‘ಜಮಾಲಿ ಗುಡ್ಡ’ ವನ್ನು ನೋಡುವ ಆಸೆ ಹುಟ್ಟುತ್ತೆ. ಆ ಗುಡ್ಡದಲ್ಲಿ ನಟ ರಾಕ್ಷಸ ಡಾಲಿಗೂ- ತೋತಾಪುರಿಯಂತಹ ಚೆಲುವೆ ಅದಿತಿಗೂ ಏನ್ ಕೆಲಸ? ಇಬ್ಬರು ಕೂಡಿ ಏನ್ಮಾಡಲಿದ್ದಾರೆ? ಇವರಿಬ್ಬರನ್ನೂ ಒಟ್ಟಿಗೆ ಸೇರಿಸಿರುವ ಜಮಾಲಿಗುಡ್ಡದ ವಿಶೇಷತೆ ಏನು? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಕೊಡುವ ಮೊದಲು ಡಾಲಿ-ಅದಿತಿ ಒಟ್ಟಾಗಿ `ಜಮಾಲಿ ಗುಡ್ಡ’ ಏರಿರುವುದು ಸಿನಿಮಾಗಾಗಿ ಎನ್ನುವುದು ಕ್ಲಿಯರ್ ಕಟ್ಟಾಗಿ ಹೇಳಿಬಿಡ್ತೇವೆ.

ಎಡಕಲ್ಲು ಗುಡ್ಡ'-ಜೋಗಿ ಗುಡ್ಡ’ ಸೇರಿದಂತೆ ಹಲವು ಗುಡ್ಡಗಳನ್ನು ಬಿಗ್‌ಸ್ಕ್ರೀ‌ನ್‌ ಮೇಲೆ ನೀವು ನೋಡರ‍್ತೀರಿ.ಕೆಲವು ಗುಡ್ಡಗಳಿಗೆ ಖುದ್ದಾಗಿ ನೀವೇ ಭೇಟಿಕೊಟ್ಟು ಪ್ರಕೃತಿ ಸೌಂದರ್ಯವನ್ನು ಸವಿದಿರುತ್ತೀರಿ.ಅದೇ ರೀತಿ "ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ” ದಲ್ಲಿ ಏನ್ ನಡೀತು ಎನ್ನುವುದನ್ನು ನಿರ್ದೇಶಕ ಕುಶಾಲ್‌ಗೌಡ್ರು ಬೆಳ್ಳಿತೆರೆ ಮೇಲೆ ಕಟ್ಟಿಕೊಡುವುದಕ್ಕೆ ಹೊರಟಿದ್ದಾರೆ. ಈ ಹಿಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ" ಹೆಸರಿನ ಸಿನಿಮಾ ಮಾಡಿ ಒಂದು ಹಂತದ ಸಕ್ಸಸ್ ಕಂಡಿದ್ದರು.ಇದೀಗ ಭೂಮಿ ಮೇಲೆ ಎಲ್ಲಿಯೂ ಸಿಗದ, ಕಲ್ಪನೆಗೆ ನಿಲುಕಿದ‘ಜಮಾಲಿ ಗುಡ್ಡ’ ವನ್ನು ಸಿನಿಮಾ ಪ್ರೇಕ್ಷಕರ ಕಣ್ಮುಂದೆ ತಂದು ನಿಲ್ಲಿಸೋದಕ್ಕೆ ಮನಸ್ಸು ಮಾಡಿದ್ದಾರೆ. ಹೀಗಾಗಿ, ಬಜಾರ್‌ನಲ್ಲಿ ಬಹುಬೇಡಿಕೆಯ ನಟ-ನಟಿಯಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ್ ಅವರನ್ನು ಸೆಲೆಕ್ಟ್ ಮಾಡಿಕೊಂಡು `ಜಮಾಲಿ ಗುಡ್ಡ’ವನ್ನು ಹತ್ತಿದ್ದಾರೆ.

ಮೇಲೆ ಹೇಳಿದಂತೆ ಜಮಾಲಿ ಗುಡ್ಡ ಕಾಲ್ಪನಿಕ ಗುಡ್ಡದ ಕಥೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಡಾಲಿ ಹಾಗೂ ಪುಟ್ಟ ಮಗುವಿನ ಚಿತ್ರಣವನ್ನು ನೋಡಿದರೆ ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆ ಎಂದೆನಿಸುತ್ತೆ. ಆದರೆ, ಕಥೆ ಬಗ್ಗೆ ಹೆಚ್ಚೇನನ್ನು ಬಿಟ್ಟುಕೊಡದ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಮಾಡಿ ಕೂತೂಹಲ ಕೆರಳಿಸಿದ್ದಾರೆ. ನಟ ಭಯಂಕರ ಡಾಲಿ ಹಾಗೂ ಧೈರ್ಯಂ ಚೆಲುವೆ ಸ್ಕ್ರೀನ್ ಶೇರ್ ಮಾಡಿರುವುದು ಕೂಡ `ಜಮಾಲಿ ಗುಡ್ಡ’ದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿಯಲ್ಲಿ ಡಾಲಿ ಹಾಗೂ ಅದಿತಿ ಅಭಿನಯಿಸಿದ್ದಾರೆ. ಆದರೆ ಜಮಾಲಿ ಗುಡ್ಡದಲ್ಲಿ ಫೇರ್ ಆಗಿ ಪಾಪ್‌ಕಾರ್ನ್ ತಿನ್ನಿಸಿ ಕೋಕ್ ಕುಡಿಸಲಿದ್ದಾರೆ. ಚಿಕ್ಕಮಂಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಟಗರು-ಸಲಗ ಸಿನಿಮಾ ಖ್ಯಾತಿಯ ಮಾಸ್ತಿಯವರು ಸಂಭಾಷಣೆ ಬರೆದುಕೊಟ್ಟಿದ್ದಾರೆ,ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ಪ್ರಕಾಶ್ ಬೆಳವಾಡಿ, ಸತ್ಯಣ್ಣ, ಭಾವನ ರಾಮಣ್ಣ, ನಂದಗೋಪಾಲ್, ಯಶ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

ಏನ್‌ ಸಖತ್‌ ಗುರು…! ಗಣಿ-ಪ್ರೇಮ್‌ ಸಖತ್‌ ಸಾಂಗು- ಗೋಲ್ಡ್‌ ಫ್ಯಾನ್ಸ್‌ಗೆ ಸಖತ್‌ ಗುಂಗು!!

ಕನ್ನಡ ಚಿತ್ರರಂಗದಲ್ಲಿ “ಚಮಕ್‌” ಮೂಲಕ ಒಂದೊಳ್ಳೆಯ ಚಮಕ್‌ ಕೊಟ್ಟಿದ್ದ ನಿರ್ದೇಶಕ ಸಿಂಪಲ್‌ ಸುನಿ ಮತ್ತು ನಟ ಗಣೇಶ್‌, ಈಗ ಮತ್ತೆ ಜೊತೆಯಾಟ ಮುಂದುವರೆಸಿದ್ದಾರೆ. ಮೊದಲ ಮ್ಯಾಚ್‌ನಲ್ಲೇ ಭರ್ಜರಿ ಸಿಕ್ಸು, ಬೌಂಡರಿಗಳನ್ನು ಬಾರಿಸಿದ್ದ ಈ ಜೋಡಿ ಮತ್ತದೇ ಉತ್ಸಾಹದಲ್ಲಿ ಫೀಲ್ಡ್‌ಗಿಳಿಯೋಕೆ ರೆಡಿಯಾಗಿದೆ. ಅಂದಹಾಗೆ, ಈ ಇಬ್ಬರು “ಸಖತ್‌” ಮೂಲಕ ಸಖತ್‌ ಮೋಡಿ ಮಾಡೋಕೆ ಬರುತ್ತಿದ್ದಾರೆ. ನವೆಂಬರ್‌ 26 ರಂದು “ಸಖತ್‌” ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಈಗಾಗಲೇ ಸಖತ್‌ ಸಿನಿಮಾ ಸಖತ್‌ ಸೌಂಡು ಮಾಡಿದೆ. ಅದು ಪೋಸ್ಟರ್‌ ಇರಲಿ, ಹಾಡಿರಲಿ, ಟೀಸರ್‌ ಇರಲಿ…. ಈಗ ಸಿನಿಮಾ ನೋಡೋಕೆ ಗಣೇಶ್‌ ಫ್ಯಾನ್ಸ್‌ ಮಾತ್ರವಲ್ಲ, ಕನ್ನಡಿಗರೂ ಕಾತುರರಾಗಿದ್ದಾರೆ. ಅದಕ್ಕೆ ಕಾರಣ, ಗಣೇಶ್‌ ಮತ್ತು ಸುನಿ ಕಾಂಬಿನೇಷನ್‌ನ ಸಿನಿಮಾ ಅನ್ನೋದು.
ಹೌದು, ಸಿನಿಮಾ ನವೆಂಬರ್‌ 26ಕ್ಕೆ ತೆರೆ ಕಾಣುತ್ತಿದೆ.

ಅದರ ಹಿನ್ನೆಲೆಯಲ್ಲಿ ಚಿತ್ರತಂಡ ಸಖತ್‌ ಆಗಿಯೇ ಪ್ರೀ-ರಿಲೀಸ್ ಇವೆಂಟ್ ನಡೆಸಿತು. ಆ ಕಲರ್‌ಫುಲ್‌ ವೇದಿಕೆಯಲ್ಲಿ ಸಖತ್‌ ಮಾತು ಕತೆ ಇತ್ತು, ಸಖತ್‌ ಖುಷಿಯೂ ಇತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ ಸಿನಿಮಾವಿದು. ಅಂದು ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಮತ್ತುಷ್ಟು ಕುತೂಹಲ ಮೂಡಿಸಿತು.

ಸಖತ್ ಅನ್ನೋದೇ ಸಖತ್‌ ಆಗಿದೆ ಅಂದಮೇಲೆ, ಅಲ್ಲಿರುವ ಎಲ್ಲವೂ ಸಖತ್‌ ಆಗಿರುತ್ತೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಆ ಕಲರ್‌ಫುಲ್‌ ವೇದಿಕಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದರ ರಂಗಾಯಣ ರಘು, ನಿರ್ದೇಶಕ ಕಂ ನಟ ಜೋಗಿ ಪ್ರೇಮ್, ನಟಿ ಶ್ರೀಲೀಲಾ ಸೇರಿದಂತೆ ಸ್ಯಾಂಡಲ್‌ವುಡ್‌ನ ಕಲಾವಿದರು ಭಾಗವಹಿಸಿದ್ದರು.

ಗಣೇಶ್ ಮತ್ತು ಪ್ರೇಮ್ ಒಟ್ಟಿಗೆ ವೇದಿಕೆ ಏರಿದರು. ಈ ವೇಳೆ ಗಣೇಶ್ ಪ್ರೇಮ್‌ ಅವರಿಗೆ ಒಂದು ಮನವಿ ಮಾಡಿಕೊಂಡರು. “ಎಕ್ಸ್ ಕ್ಯೂಸ್ ಮೀ” ಸಿನಿಮಾದ ಬ್ರಹ್ಮ ವಿಷ್ಣು ಹಾಡು ಹೇಳುವಂತೆ ಕೋರಿಕೊಂಡರು. ಅದಕ್ಕೆ ಅಕ್ಕರೆಯಿಂದ ಪ್ರತಿಕ್ರಿಯಿಸಿದ ಪ್ರೇಮ್, ಆ ಹಾಡು ಹೇಳುವ ಮೂಲಕ ಗಣೇಶ್‌ ಖುಷಿಗೆ ಕಾರಣರಾದರು. ಈ ವೇಳೆ ಗಣೇಶ್ ಕೂಡ ಧನಿಗೂಡಿಸಿ ಬ್ರಹ್ಮ ವಿಷ್ಣು ಹಾಡು ಹೇಳಿ ಅಭಿಮಾನಿಗಳ ಚಪ್ಪಾಳೆಗೆ ಕಾರಣರಾದರು.

ಇದಕ್ಕೂ ಮುನ್ನ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಅಗಲಿದ ಪವರ್‌ ಸ್ಟಾರ್‌ ಪುನೀತ್‌ ಅವರನ್ನು ನೆನಪಿಸಿಕೊಂಡರು. ಅವರನ್ನು ನಮಿಸಿದ ಗಣೇಶ್‌, ” ಪವರ್ ಸ್ಟಾರ್ ಕನ್ನಡ ಚಿತ್ರರಂಗ ಇರುವವರೆಗೂ ನಂಬರ್-1 ಸ್ಟಾರ್ ಅಂತ ಮನದ ಮಾತು ಬಿಚ್ಚಿಟ್ಟರು. ಬಳಿಕ ತಮ್ಮ ಚಂದದ ಮಾತಿನ ಮೂಲಕ ಎಲ್ಲರನ್ನೂ ನಕ್ಕು ನಲಿಸಿದ ಗಣಪ ಸಖತ್ ಸಿನಿಮಾ ಎಲ್ಲರೂ ನೋಡಿ ಎಂದು ಮನವಿ ಮಾಡಿಕೊಂಡರು.

ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಸ್ಯನಟ ಧರ್ಮಣ್ಣ ಕಡೂರು, ರಂಗಾಯಣ ರಘು ಸಖತ್ ಸಿನಿಮಾದಲ್ಲಿನ ಜರ್ನಿ ಬಗ್ಗೆ ಹೇಳಿಕೊಂಡರು. ಟಿವಿ ರಿಯಾಲಿಟಿ ಶೋ ಸುತ್ತ ಹೆಣೆದಿರುವ ಸಖತ್ ಸಿನಿಮಾಕ್ಕೆ ಸುಪ್ರಿತ್ ಹಾಗೂ ನಿಶಾ ಬಂಡವಾಳ ಹೂಡಿದ್ದು, ಈಗಾಗಲೇ ಸೆನ್ಸಾರ್ ಮುಗಿಸಿ ನವೆಂಬರ್‌ 26ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

Categories
ಸಿನಿ ಸುದ್ದಿ

ರೇಮೊ‌ ಟೀಸರ್ ರಿಲೀಸ್‌ಗೆ ಕ್ಷಣಗಣನೆ! ನ.25ಕ್ಕೆ ಸ್ಯಾಂಡಲ್‌ವುಡ್‌ ನಿರ್ಮಾಪಕ, ನಿರ್ದೇಶಕರಿಂದ ಬಿಡುಗಡೆ

ಕನ್ನಡದಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಸಿನಿಮಾ “ರೇಮೊ”. ಇದು ಪವನ್‌ ಒಡೆಯರ್‌ ನಿರ್ದೇಶನದ ಸಿನಿಮಾ. ಈ ಸಿನಿಮಾ ಈಗಾಗಲೇ ಶೀರ್ಷಿಕೆಯಿಂದ ಹಿಡಿದು, ತನ್ನ ಹಲವು ಪೋಸ್ಟರ್‌ ಝಲಕ್‌ನಿಂದಲೇ ಕುತೂಹಲ ಕೆರಳಿಸಿದೆ. ಈಗ ರೇಮೊ ರಿಲೀಸ್‌ಗೂ ಸಜ್ಜಾಗಿದೆ. ಅದಕ್ಕೂ ಮುನ್ನ ಮತ್ತೊಂದು ಜೋರಾದ ಸೌಂಡು ಮಾಡೋಕೆ ಚಿತ್ರತಂಡ ರೆಡಿಯಾಗಿದೆ…

ಹೌದು, ರೇಮೊ ಸಿನಿಮಾದ ಟೀಸರ್‌ ಬಿಡುಗಡೆಗೆ ಇಡೀ ತಂಡ ಕಾತುರಗೊಂಡಿದೆ. ನವೆಂಬರ್‌ 25ರಂದು ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ, ಟೀಸರ್‌ ರಿಲೀಸ್‌ಗೆ ವಿಶೇಷ ಅತಿಥಿಗಳು ಸಾಕ್ಷಿಯಾಗಲಿದ್ದಾರೆ. ಅಂದರೆ, ಅವರಿಂದಲೇ ಟೀಸರ್‌ ಬಿಡುಗಡೆ ಮಾಡಿಸುವ ಯೋಚನೆ ನಿರ್ದೇಶಕ ಪವನ್‌ ಒಡೆಯರ್‌ ಅವರದ್ದು.

ರೇಮೊ ಸಿನಿಮಾದ ಟೀಸರ್‌ ಬಿಡುಗಡೆಯನ್ನು ಚಂದನವನದ ನಿರ್ದೇಶಕರು ಮತ್ತು ನಿರ್ಮಾಪಕರಿಂದಲೇ ಮಾಡಿಸಬೇಕು ಎಂಬ ನಿರ್ಧಾರ ಚಿತ್ರತಂಡದ್ದು. ಹಾಗಾಗಿ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿರುವ ಯೋಗರಾಜ ಭಟ್‌, ಜೋಗಿ ಪ್ರೇಮ್‌, ಚೇತನ್‌ ಕುಮಾರ್‌, ಎ.ಹರ್ಷ,ತರುಣ್ ಸುಧೀರ್, ಎಪಿ ಅರ್ಜುನ್ ಹಾಗು ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್, ಕಾರ್ತಿಕ್, ಕೆ.ಮಂಜು, ಜಯಣ್ಣ ಭೋಗೇಂದ್ರ ಅವರಿಂದ ಟೀಸರ್‌ ಬಿಡುಗಡೆ ಮಾಡಿಸಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಪವನ್‌ ಒಡೆಯರ್.


ಜಯಾದಿತ್ಯ ಫಿಲಂಸ್ ಬ್ಯಾನರ್‌ ಮೂಲಕ ಈಗಾಗಲೇ ಅದ್ಧೂರಿ ಸಿನಿಮಾಗಳನ್ನು ನಿರ್ಮಿಸಿರುವ ಸಿ.ಆರ್ ಮನೋಹರ್ ಅವರ ನಿರ್ಮಾಣದ ಸಿನಿಮಾ ಇದು. ಹೀಗಾಗಿ ನವೆಂಬರ್‌ 25ರಂದು ದೊಡ್ಡ ಮಟ್ಟದಲ್ಲೇ ಟೀಸರ್‌ ಲಾಂಚ್‌ ಆಗಲಿದೆ. ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಅಶಿಕಾ ರಂಗನಾಥ್ ಜೊತೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಶರತ್ ಕುಮಾರ್, ಮಧುಬಾಲ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈದಿ ಛಾಯಾಗ್ರಹಣವಿದೆ. ಸದ್ಯ, ರೇಮೊ ಸಿನಿಮಾ ಮೇಲೆ ಸಿನಿಮಾ ಇಂಡಸ್ಟ್ರಿ ಮಂದಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಅಂದಹಾಗೆ, ಇತ್ತೀಚೆಗಷ್ಟೇ, ಚಿತ್ರೀಕರಣ ಮುಗಿಸಿ ಕುಂಬಳ ಕಾಯಿ ಹೊಡೆದು ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ, ಹೊಸ ವರ್ಷಕ್ಕೆ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರುವ ಉತ್ಸಾಹದಲ್ಲಿದೆ.

ಈಗ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲು ಸಜ್ಜಾಗಿದ್ದು, ಈ ಟೀಸರ್ ಅನ್ನು ಚಿತ್ರರಂಗದ ಟಾಪ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಲಾಂಚ್ ಮಾಡ್ತಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

ಮನೆ ಮಂದಿಯೆಲ್ಲ ನೋಡುವ ಸಿನಿಮಾ : ಗೋವಿಂದ ಗೋವಿಂದ ಕುರಿತು ರವಿ ಆರ್.ಗರಣಿ ಮನದ ಮಾತು

ನಿರ್ಮಾಪಕ ರವಿ ಗರಣಿ ಅವರಿಗೆ ‌ಸಿನಿಮಾ‌ ನಿರ್ಮಾಣ ಹೊಸದಲ್ಲ, ಸಾಕಷ್ಟು ಸಿರಿಯಲ್ ಹಾಗು ಸಿನಿಮಾ‌ನಿರ್ಮಾಣದ ಅನುಭವದ ಮೂಲಕ’ ಗೋವಿಂದ ಗೋವಿಂದ’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ‌.‌ ಅವರು‌ ಸಿನಿಮಾ‌ ಬಗ್ಗೆ ದೊಡ್ಡ ನಿರೀಕ್ಷೆ ಇದೆ..

‘ನಮ್ಮದು ಒಳ್ಳೆಯ ಸಿನಿಮಾ, ಹೆಚ್ಚು ಜನರಿಗೆ ನಮ್ಮ ಸಿನಿಮಾ ವಿಚಾರ ತಲುಪಿಸಬೇಕು’ ಎನ್ನುವ ಅವರು, ಪ್ರೇಕ್ಷಕರು ಈ ಸಿನಿಮಾ‌ ಯಾಕೆ ನೊಡ್ಬೇಕು ಅಂದ್ರೆ, ಕೋರೋನಾ ಕಾಲದಲ್ಲಿ ಅವರಿಗೂ ಮನೆಯಲ್ಲಿಯೇ ಇದ್ದು ಬೇಜಾರಾಗಿದೆ. ಅವರಿಗೆ ಈಗ ಒಂದು ಮನರಂಜನೆ ಬೇಕು. ಅಂತಹ ಜನರಿಗೆ ಮನೆಯವರೆಲ್ಲ ಕುಳಿತು ಎಂಜಾಯ್ ಮಾಡಬಹುದಾದ ಸಿನಿಮಾ. ವಿತೌಟ್ ಕಟ್ಸ್, ಬಿಪ್ಸ್ ಕೂಡ ಇಲ್ಲ. ಶುದ್ದವಾದ ಮನರಂಜನೆ ಕೊಡುವಂತಹ ಸಿನಿಮಾ. ಹಾಗಾಗಿ‌ ಪ್ರೇಕ್ಷಕರು ಈ ಸಿನಿಮಾ ನೋಡ್ಬೇಕು ಅನ್ನೋದು ನನ್ನಮನವಿ ಅಂತಾರೆ ನಿರ್ಮಾಪಕ‌ ರವಿ.ಆರ್.‌ಗರಣಿ.

ಚಿತ್ರಕ್ಕೆ ಬಂಡವಾಳ ಹಾಕಿರುವ ಮೂವರು ನಿರ್ಮಾಪಕರ ಪೈಕಿ‌ನಿರ್ಮಾಪಕ ಕಿಶೋರ್‌ ಮಧುಗಿರಿ, 30 ವರ್ಷದಿಂದ ವಿತರಣೆ ವಲಯದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಗೋವಿಂದ ಗೋವಿಂದ ಮೂಲಕ‌ ಸಿನೆಮಾ ನಿರ್ಮಾಣಕ್ಕೆ‌ ಬಂದಿದ್ದಾರೆ. ಅವರ ಪ್ರಕಾರ ಇದುಪಕ್ಕಾ ಪ್ಯಾಮಿಲಿ‌ ನೋಡುವಂತಹ ಸಿನಿಮಾ.’

ಇಲ್ಲಿ ಫಸ್ಟ್‌ ನೈಟ್‌ ಇಲ್ಲ-ಕಾಂಟ್ರವರ್ಸಿಯೂ ಇಲ್ಲ!
ಹಾಗೆಯೇ ಶೈಲೇಂದ್ರಬಾಬು, ‘ನಮ್ಮ ಸಿನಿಮಾದಲ್ಲಿ ಫಸ್ಟ್‌ನೈಟ್‌ ಇಲ್ಲ. ಕಾಂಟ್ರವರ್ಸಿ ಇಲ್ಲ. ಒಳ್ಳೆಯ ಕತೆ ಇರುವ ಸುಂದರ ಸಿನಿಮಾ’ ಎನ್ನುತ್ತಾರೆ.’ಗೋವಿಂದ ಗೋವಿಂದ’ ಒಂದೊಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಒಂದು ಸಂಪೂರ್ಣ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ತುಂಬಾ ಗ್ಯಾಪ್‌ ನಂತರ ನನ್ನ ನಟನೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಹಾಗೂ ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ ಎನ್ನುತ್ತಾರೆ ಶೈಲೇಂದ್ರ ಬಾಬು

Categories
ಸಿನಿ ಸುದ್ದಿ

ಕಾಸೂ ನಿಮ್ದು…ಭರಪೂರ ಮನರಂಜನೆಯೂ‌ ನಿಮ್ದು… ನಗಿಸಲು ಬರುತ್ತಿದ್ದಾನೆ ಗೋವಿಂದ ಗೋವಿಂದ!

ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ಸುಮನ್ ಶೈಲೇಂದ್ರ ಇದೇ ಮೊದಲು ಪಕ್ಕಾ ಹಾಸ್ಯ ಪ್ರಧಾನ ಕಥಾ ಹಂದರ ‘ ಗೋವಿಂದ ಗೋವಿಂದ ‘ ಚಿತ್ರದ ಮೂಲಕ‌ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವಾರ ಅಂದರೆ, ನವೆಂಬರ್ 26ಕ್ಕೆ ಈ ಚಿತ್ರ ‌ರಾಜ್ಯಾ ದ್ಯಂತ ನೂರಾರು ಚಿತ್ರ ಮಂದಿರಗಳಿಗೆ ಬಲಗಾಲಿಟ್ಟು ಆಗಮಿಸುತ್ತಿರುವ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ….

ತಿಲಕ್‌ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಸುಮಂತ್‌ ಶೈಲೇಂದ್ರ, ಭಾವನಾ, ರೂಪೇಶ್‌ ಶೆಟ್ಟಿ, ಕವಿತಾ ಗೌಡ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.‌ತಿಳಿ ಹಾಸ್ಯದ ಕಥೆಯೊಂದಿಗೆ ನೋಡುಗನ ಮನಸನ್ನೇ ಹಗುರಗೊಳಿಸುವ ಈ ಚಿತ್ರಕ್ಕೆ ನಿರ್ಮಾಪಕರು ಮಾತ್ರ ಭರ್ಜರಿ ತೂಕದವರೇ ಹೌದು. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು, ಹಿರಿಯ ನಿರ್ದೇಶಕ ರವಿ ಗರಣಿ ಮತ್ತು ಮಧುಗಿರಿಯ ಶಾಂತಲಾ ಚಿತ್ರಮಂದಿರದ ಮಾಲೀಕರಾದ ಕಿಶೋರ್‌ ಮಧುಗಿರಿ ಅವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದವರು.

‌‌ಎಂಟ್ರಿಯೇ ಬೆಸ್ಟ್ ಎನ್ನುವಂತೆ ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಶೇಷ. ಗೋವಿಂದ ಗೋವಿಂದ ಎನ್ನುವ ಟೈಟಲ್ ಗೆ ‘ಹುಂಡಿ ನಮ್ದು, ಕಾಸು ನಿಮ್ದು’ ಎನ್ನುವ ಟ್ಯಾಗ್ ಲೈನ್ ನೀಡಿದೆ ಚಿತ್ರ ತಂಡ . ಒಂದು ಹಾಸ್ಯ ಪ್ರಧಾನ ಕಂಥಾ ಹಂದರದ ಕಥೆಯ ಜತೆಗೆ ನಿರ್ಮಾಣ , ನಿರ್ದೇಶನ ಹಾಗೂ ಕಲಾವಿದರ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಈ ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅದೇ ನಂಬಿಕೆ ಮೇಲೆ ಚಿತ್ರ ನೋಡಲು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಭರಪೂರ ಮನರಂಜನೆ‌ ನೀಡುವುದು ಅಷ್ಟೇ ಖಚಿತ ಎನ್ನುವ ವಿಶ್ವಾಸ ಚಿತ್ರ ತಂಡದ್ದು.

ಬಿಡುಗಡೆಯ ಈ ಸಂದರ್ಭದಲ್ಲಿ ಚಿತ್ರದ ವಿಶೇಷತೆ ಕುರಿರು ಮಾತನಾಡುವ ನಿರ್ದೇಶಕ ತಿಲಕ್‌, ‘ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ, ಒಪ್ಪಿಸಿಕೊಳ್ಳಿ’ ಎಂದರು.
ಮುಂದಿನ ಅವರ ಮಾತು, ಚಿತ್ರದ ಕಥೆಯ ವಿಶೇಷತೆ ಕುರಿತದ್ದು..’ ಗೋವಿಂದ ಗೋವಿಂದ ಅಂದಾಕ್ಷಣ ಇದೊಂದು ಭಕ್ತಿಯ ಕುರಿತ ಕಥೆಯೇ ಅಂತೆಂದುಕೊ ಳ್ಳುವುದು ಸಹಜ. ಆದರೆ ಇದು ಪಕ್ಕಾ ಹಾಸ್ಯ ಪ್ರಧಾನ ಚಿತ್ರ. ಎಲ್ಲೂ ಆಶ್ಲೀಲ ಎನಿಸುವ ದೃಶ್ಯಗಳಿಲ್ಲ, ಅಂತಹ ಸಂಭಾಷಣೆಯೂ ಇಲ್ಲ. ಫ್ಯಾಮಿಲಿ ಸಮೇತ ಕುಳಿತುಕೊಂಡು ನೋಡುವ ಪಕ್ಕಾ ಫ್ಯಾಮಿಲಿ ಕಥಾ ಹಂದರದ ಚಿತ್ರ. ಪ್ರತಿಯೊಂದು ದೃಶ್ಯ, ಪ್ರತಿಯೊಂದು ಪಾತ್ರವೂ ಇಲ್ಲಿ ಅಷ್ಟೇ ಮುಖ್ಯ. ಯಾವುದು ಅನವಶ್ಯಕ ಎಂದೆಸೊದಿಲ್ಲ. ಈಗಿನ ಯಂಗರ್ ಜನರೇಷನ್ ಗೆ ಏನೆಲ್ಲಮನರಂಜನೆ ಬೇಕೋ‌ ಅದೆಲ್ಲ ಇಲ್ಲಿದೆ. ಪೈಸಾ ವಸೂಲ್ ಅಂತಾರಲ್ಲ ಅಂತಹ ಸಿನಿಮಾ ಇದು’ ಎನ್ನುತ್ತಾರೆ ತಿಲಕ್.

ನಾಯಕ ನಟ ಸುಮಂತ್‌ ಶೈಲೇಂದ್ರ ಈಗ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿದ್ದಾರೆ. ದಿಲ್‌ವಾಲಾ’ ಸಿನಿಮಾ ಸೇರಿದಂತೆ ಯಂಗ್‌ ಆಂಡ್‌ ಎನರ್ಜಿಟಿಕ್‌ ಆ್ಯಕ್ಷನ್‌ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಬಂದ ಸುಮಂತ್‌ ಶೈಲೇಂದ್ರ ಈಗ ರೊಮ್ಯಾಂಟಿಕ್‌ ಥ್ರಿಲ್ಲರ್‌, ಕಾಮಿಡಿ ‘ಗೋವಿಂದ ಗೋವಿಂದ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ‘ನನ್ನ ಸಿನಿ ಜರ್ನಿಯಲ್ಲಿ ಇದೊಂದು ವಿಶೇಷ ವಾದ ಸಿನಿಮಾ. ಅದಕ್ಕೆ ಕಾರಣ ಈ ಚಿತ್ರದ ಕಥಾ ಹಂದರ. ಇದುವರೆಗೂ ಆ್ಯಕ್ಷನ್, ಥ್ರಿಲ್ ಎಲಿಮೆಂಟ್ಸ್ ಒಳಗೊಂಡ ಸಿನಿಮಾ‌ಮಾಡಿದ್ದೆ . ಫಸ್ಟ್ ಟೈಮ್ ಪಕ್ಕಾ ಕಾಮಿಡಿ ಕಿಕ್ ಸಿನಿಮಾ‌ ಮಾಡಿದ್ದೇನೆ. ಸಾಮಾನ್ಯವಾಗಿ ಕುಣಿಯೋದು, ಆ್ಯಕ್ಷನ್ ಮಡೋದು ಸುಲಭ. ಆದರೆ ನಗಿಸೋದು ತುಂಬಾ ಕಷ್ಟ. ಅಂತಹ ಕಷ್ಟದ ಕೆಲಸವನ್ನು ಫಸ್ಟ್ ಟೈಮ್ ನಾನಿಲ್ಲಿ ನಿಭಾಯಿಸಿದ್ದೇನೆ ಎಂದರು.

ಹಾಗೆಯೇ ಪ್ರತೀ ಸಿನಿಮಾ ಬಿಡುಗಡೆಯಾ ಗುವಾಗಲೂ ಜೊತೆಗೊಂದು ದೊಡ್ಡ ಸಿನಿಮಾ ರಿಲೀಸ್‌ ಆಗುತ್ತದೆ. ಆದರೂ ಜನ ನನ್ನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಲವೂ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಸುಮನ್ ಶೈಲೇಂದ್ರ.ಚಿತ್ರದಲ್ಲಿ ಸುಮಂತ್‌ ಕಾಲೇಜ್‌ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ರೂಪೇಶ್‌ ಶೆಟ್ಟಿ ಇಲ್ಲೊಂದು ವಿಶೇಷ ಪಾತ್ರಕ್ಮೆ ಬಣ್ಣ ಹಚ್ವಿದ್ದಾರಂತೆ, ‘ಇದು ಒತ್ತಡ ಮರೆಸುವ ಸಿನೆಮಾ. ಕುಟುಂಬ ಸಮೇತರಾಗಿ ನೋಡಿ ಆನಂದಿಸಬಹುದು’
ಎಂದರು. ಹಾಗೆಯೇ ನಟಿ ಕವಿತಾ, ಕಲಾವಿದರಾದ ಪವನ್‌, ವಿಜಯ್‌ ಚೆಂಡೂರ್‌, ಕಾರ್ಯಕಾರಿ ನಿರ್ಮಾಪಕ ಜನಾರ್ದನ್‌ ಚಿತ್ರದ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಹಿತನ್‌ ಹಾಸನ್‌, ‘ಈ ಸಿನೆಮಾ ನೋಡುತ್ತಾ ನಿರಾಳರಾಗಬಹುದು’ ಎಂದು ಭರವಸೆ ನೀಡುತ್ತಾರೆ.

Categories
ಸಿನಿ ಸುದ್ದಿ

ದಶಾವತಾರದಲ್ಲಿ ಶರಣ್!‌ ಡಿಸೆಂಬರ್‌ 10ಕ್ಕೆ ಅವತಾರ ಪುರುಷನ ಗ್ರ್ಯಾಂಡ್ ಎಂಟ್ರಿ!!

ಶರಣ್‌ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ಹೌದು, ಪುಷ್ಕರ್ ಫಿಲಂಸ್ ಬ್ಯಾನರ್‌ನಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ “ಅವತಾರ ಪುರುಷ” ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಸಿಂಪಲ್‌ ಸುನಿ ನಿರ್ದೇಶಕರು. ಈಗಾಗಲೇ ಜೋರು ಸದ್ದು ಮಾಡಿರುವ ಚಿತ್ರ, ನೋಡುವ ಕುತೂಹಲವನ್ನು ಮೂಡಿಸಿದೆ…

ನಾಯಕ ಶರಣ್‌ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರಂತೆ. ಅವರು ಆ ಕುರಿತು ಹೇಳುವುದಿಷ್ಟು. “ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ. ನನ್ನ ಈವರೆಗಿನ ಸಿನಿ ಪಯಣದಲ್ಲೇ ದೊಡ್ಡ ಬಜೆಟ್ ನ‌ ಚಿತ್ರವಿದು. ಇಂತಹ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ‌ ಸಿಂಪಲ್ ಸುನಿ‌, ಅವರ ಹೆಸರಿನಲ್ಲ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ‌ ಸೊಗಸಾಗಿ ‌ಮೂಡಿಬಂದಿದೆ. ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಡಿಸೆಂಬರ್ ಹತ್ತರಂದು “ಅವತಾರ ಪುರುಷ” ನ ಆಗಮನವಾಗಲಿದೆ ನೋಡಿ ಹಾರೈಸಿ ಎಂದರು ಶರಣ್.

ನಟಿ ಆಶಿಕಾ ರಂಗನಾಥ್‌ ಅವರಿಗೆ ಈ ಸಿನಿಮಾ ವಿಶೇಷವಂತೆ. ಇದು ಎಲ್ಲರ ಜೊತೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ. ಈ ತಂಡದಲ್ಲಿ ಎಲ್ಲರೂ ಒಂದೇ ಕುಟುಂಬದವರ ಹಾಗೆ ಇದ್ದೆವು. ಶರಣ್ ಹಾಗೂ ಸುನಿ ಅವರ ಕಾಂಬಿನೇಶನಲ್ಲಿ ಈ ಚಿತ್ರ ಹೇಗೆ ಬರಬಹುದು? ಎಂಬ ಕುತೂಹಲ ಇದೆ. ನಾನು ಚಿತ್ರ ನೋಡುವ ಕಾತುರದಲ್ಲಿದ್ದೀನಿ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಜನರು ಕೂಡ ಮೆಚ್ಚಿ ಕೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದರು ಆಶಿಕಾ ರಂಗನಾಥ್.

ನಿರ್ದೇಶಕ ಸುನಿ ಕೂಡ ಅವತಾರ ಕುರಿತು ಮಾತಿಗಿಳಿದರು. “ನಾನು ವೆಬ್ ಸಿರೀಸ್ ಗೆ ಅಂತಾ ಮಾಡಿದ ಕಥೆಯಿದು. ಪುಷ್ಕರ್ ಅವರು ಈ ಕಥೆ ಕೇಳಿ, ವೆಬ್ ಸಿರೀಸ್ ಬೇಡ . ಸಿನಿಮಾ ಮಾಡೋಣ ಅಂದರು. ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಕಲ್ಪನೆ ಇರುತ್ತದೆ. ಆದರೆ ಆ ಕಲ್ಪನೆಗೂ ಮೀರಿ ” ಅವತಾರ ಪುರುಷ ” ಚಿತ್ರ ಬಂದಿದೆ. ಶರಣ್ – ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ ಸೇರಿದಂತೆ ಇತರರು ನಟಿಸಿದ್ದಾರೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್ ನಲ್ಲೂ ನೆರವಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ “ಅವತಾರ ಪುರುಷ” ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಿರ್ದೇಶಕ ಸಿಂಪಲ್ ಸುನಿ.

ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನ್‌ ಮಾತನಾಡಿ, “ನನ್ನ ಪ್ರಕಾರ “ಆಪ್ತಮಿತ್ರ” ನಂತರ ಕನ್ನಡದಲ್ಲಿ ಬರುತ್ತಿರುವ ಸಿನಿಮಾ “ಅವತಾರ ಪುರುಷ”. ಹತ್ತು, ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಡಿಸೆಂಬರ್ ಹತ್ತರಂದು ಸುಮಾರು 350 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಭಾಗ 1 ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ.

Categories
ಸಿನಿ ಸುದ್ದಿ

ಅಪಾರ್ಟ್‌ಮೆಂಟ್ಸ್‌ನಲ್ಲಿ ರೋಚಕತೆ! ಇದು ಬೆಂಗಳೂರಿಗರ ಕಥೆ-ವ್ಯಥೆಯ ಚಿತ್ರಣ; ನ.26ಕ್ಕೆ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾ!!

ಗುರುರಾಜ ಕುಲಕರ್ಣಿ ನಿರ್ಮಾಪಕರು ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗಾಗಲೇ, ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಎಂಬ ಸದಭಿರುಚಿಯ ಸಿನಿಮಾಗಳನ್ನು ಕೊಟ್ಟವರು. ಸಿನಿಮಾ ಮೇಲಿನ ಪ್ರೀತಿ ಇರುವುದರಿಂದಲೇ ಅವರೀಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಬಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೌದು, ಇದೇ ಮೊದಲ ಸಲ ಗುರುರಾಜ ಕುಲಕರ್ಣಿ ಅವರು ನಿರ್ದೇಶಕರಾಗಿದ್ದಾರೆ. ಅವರೊಂದಿಗೆ ಜಿ 9 ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ಒಂದಷ್ಟು ಸಮಾನ ಗೆಳೆಯರ ಜೊತೆಗೂಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಂದಹಾಗೆ, ಅವರ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ ಅಪಾರ್ಟ್‌ಮೆಂಟ್ಸ್‌” ನವೆಂಬರ್‌ ೨೬ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಈಗಾಗಲೇ “ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರ ಶೀರ್ಷಿಕೆಯಿಂದ ಹಿಡಿದು, ಹಾಡು ಮತ್ತು ಟ್ರೇಲರ್‌ ಮೂಲಕ ಭರ್ಜರಿ ಕುತೂಹಲ ಮೂಡಿಸಿದೆ. “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಂದಹಾಗೆ, ಚಿತ್ರದ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುತ್ತದೆ. ಬಹುತೇಕರಿಗೆ ಅದೊಂದು ಅಪಾರ್ಟ್‌ಮೆಂಟ್‌ನಲ್ಲಿ ನಡೆಯೋ ಕಥೆ ಇರಬಹುದಾ ಎಂಬ ನೂರೆಂಟು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಆದರೆ, ಅದು ನಿಜಾನಾ ಎಂಬ ಪ್ರಶ್ನೆಗೆ ಸಿನಿಮಾ ನೋಡಲೇಬೇಕು. ಇದೊಂದು ಬೆಂಗಳೂರಿಗರ ಕಥೆ. ಅದರಲ್ಲೂ ಐಟಿಬಿಟಿ ಕಂಪೆನಿಯಲ್ಲಿ ಕೆಲಸ ಮಾಡುವ ಮಂದಿಯ ತಳಮಳ, ತೊಳಲಾಟ ಮತ್ತು ಒಂದಷ್ಟು ಗೊಂದಲಗಳ ನಡುವೆ ಸಾಗುವ ಕಥೆ. ಸಿನಿಮಾ ಸಸ್ಪೆನ್ಸ್‌ ಜೊತೆ ಥ್ರಿಲ್ಲರ್‌ ಆಗಿಯೂ ಸಾಗುತ್ತದೆ. ಇಲ್ಲಿ ಹಲವು ಪಾತ್ರಗಳಿದ್ದರೂ, ಪ್ರತಿ ಪಾತ್ರಗಳಿಗೂ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಮಾತು.

ಇಲ್ಲಿ ಎಲ್ಲಾ ವರ್ಗಕ್ಕೂ ತಲುಪುವ ಒಂದು ಸಂದೇಶವಿದೆ ಎನ್ನುವ ನಿರ್ದೇಶಕರು, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇಲ್ಲಿವೆ. ತಾರಕ್‌ ಪೊನ್ನಪ್ಪ ಅವರಿಲ್ಲಿ ಹೀರೋ ಆಗಿದ್ದಾರೆ. ಬಾಲಾಜಿ ಮನೋಹರ್‌ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಊರ್ವಶಿ ಗೋರ್ವಧನ್‌ ನಾಯಕಿ. ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್‌ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ಸಂಪತ್‌ ಕುಮಾರ್‌, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ಕೂಡ ಚಿತ್ರದ ಹೈಲೈಟ್‌ ಎಂದು ವಿವರ ಕೊಡುತ್ತಾರೆ ಗುರುರಾಜ ಕುಲಕರ್ಣಿ.

ಸಿನಿಮಾದಲ್ಲಿ ಗಟ್ಟಿ ಕಥೆ ಇದೆ. ಅದಕ್ಕೆ ತಕ್ಕಂತಹ ನಟರೂ ಇದ್ದಾರೆ. ಎಲ್ಲರೂ ಸಿಕ್ಕಾಪಟ್ಟೆ ಹೈಟ್‌ ಇರೋ ಕಲಾವಿದರೇ. ಕ್ಯಾಮೆರಾಮೆನ್‌ಗೆ ಚಿತ್ರೀಕರಣ ವೇಳೆ ಕೊಂಚ ಸಮಸ್ಯೆ ಕಾಡಿದ್ದಂತೂ ನಿಜ. ಯಾಕೆಂದರೆ, ಒಬ್ಬರಿಗಿಂತ ಒಬ್ಬರು ಹೈಟ್‌ ಆಗಿದ್ದರಿಂದ ಸ್ವಲ್ಪ ಸೆರೆ ಹಿಡಿಯೋಕೆ ಹರಸಾಹಸ ಮಾಡಬೇಕಾಯಿತು. ಅದೇನೆ ಇದ್ದರೂ, ಕೊಟ್ಟ ಪಾತ್ರವನ್ನು ನಿಜಕ್ಕೂ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಮಾಡುವಾಗ ಒಂದಷ್ಟು ತಯಾರಿ ಬೇಕು. ಅದರಲ್ಲೂ, ಒಳ್ಳೆಯ ಕಥೆ ಆಯ್ಕೆ ಮಾಡಿಕೊಳ್ಳಬೇಕು. ಅವೆಲ್ಲವನ್ನೂ ಈ ಚಿತ್ರಕ್ಕೆ ಅಳವಡಿಸಿಕೊಂಡಿದ್ದರಿಂದಲೇ ಚಿತ್ರ ನಾನು ನಿರೀಕ್ಷೆ ಮೀರಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ.
ಇದು ನಗರದ ಜೀವನ ಕಥೆ. “ಅಮೃತ್ ಅಪಾರ್ಟ್ ಮೆಂಟ್ಸ್” ಅಂದರೆ ಹಕ್ಕಿಗೆ ತಕ್ಕಂತ ಗೂಡು ಎನ್ನಬಹುದು. ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ಮಾತುಗಳಾಡಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಮನಮುಟ್ಟುವಂತ ಅಭಿಪ್ರಾಯ ನೀಡಿದ್ದಾರೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಹರಸಿ ಎಂದರು ಗುರುರಾಜ್ ಕುಲಕರ್ಣಿ.

ಚಿತ್ರದ ನಾಯಕ ತಾರಕ್‌ ಪೊನ್ನಪ್ಪ ಅವರಿಗೆ ಇಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇದು ಬೆಂಗಳೂರಿಗರ ಕಥೆ. ಪ್ರತಿಯೊಬ್ಬರೂ ಸಿನಿಮಾ ನೋಡಿದಾಗ, ಫೀಲ್‌ ಆಗುತ್ತೆ. ಅಂಥದ್ದೊಂದು ಕಂಟೆಂಟ್‌ ಇಲ್ಲುಂಟು. ನವೆಂಬರ್‌ ೨೬ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹರಸಿ ಎಂದ ಅವರು, ಇ ಎಂ ಐ ಮೂಲಕ ಮನೆಕೊಳ್ಳುವ ಮಧ್ಯಮವರ್ಗದ ದಂಪತಿಗಳ ಜೀವನದ ಕಥೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕ ತಾರಕ್ ಪೊನ್ನಪ್ಪ. ‌ ನಾಯಕಿ ಮಾನಸ ಜೋಷಿ ಅವರಿಗೂ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಸಿಕ್ಕಿದೆಯಂತೆ. ಬಹಳ ದಿನಗಳಿಂದ ನನಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿತ್ತು. ಆ ಆಸೆಯನ್ನು ನಿರ್ದೇಶಕ ಗುರುರಾಜ್ ಕುಲಕರ್ಣಿ ಪೂರ್ಣಗೊಳಿಸಿದ್ದಾರೆ. ಈ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟವಾಗುತ್ತೆ ಅಂದರು ಮಾನಸಿ.

ನಟ ಬಾಲಾಜಿ ಮನೋಹರ್‌ ಅವರಿಗೆ ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆಯಂತೆ. ಇದು ನಗರದಲ್ಲಿ ವಾಸಿಸುವ ದಂಪತಿಗಳ ಕಥೆ. ನಿರ್ದೇಶಕರು ಕಥೆ ಹೆಣೆದಿರುವ ರೀತಿ ಬಹಳ ಚೆನ್ನಾಗಿದೆ. ಎಲ್ಲರ ಅಭಿನಯವು ಸೊಗಸಾಗಿದೆ ಎಂದರು ಬಾಲಾಜಿ ಮನೋಹರ್.
ಸೀತಾಕೋಟೆ, ಮಹಂತೇಶ್, ರಾಜ್ ಹಾಗು ಸಂಕಲನಕಾರ ಬಿ.ಎಸ್.ಕೆಂಪರಾಜ್ ಸಿನಿಮಾ ಕುರಿತು ಮಾತಾನಾಡಿದರು. ಮುನ್ನೂರು ಸಿನಿಮಾಗಳಿಗೆ ಸಂಕಲನ ಕಾರ್ಯ ಪೂರೈಸಿದ ಹಿನ್ನೆಲೆಯಲ್ಲಿ ಸಂಕಲನಕಾರ ಕೆಂಪರಾಜ್ ಅವರಿಗೆ ಚಿತ್ರತಂಡ ಗೌರವಿಸಿತು.
ಚಿತ್ರಕ್ಕೆ ಎಸ್.ಡಿ.ಅರವಿಂದ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಇದು ಭಟ್ಟರ ಹೊಸ ಗರಡಿ! ಅಖಾಡದಲ್ಲಿ ಯಶಸ್‌ ಸೂರ್ಯ; ಬಿ.ಸಿ.ಪಾಟೀಲ್‌ ಫ್ಯಾಮಿಲಿ ನಿರ್ಮಾಣದ ಸಿನಿಮಾವಿದು…

ಯೋಗರಾಜ್‌ ಭಟ್‌ ಅಂದಾಕ್ಷಣ, ನೆನಪಾಗೋದೇ ಮಧುರ ಕಥೆಗಳು, ಅದರಲ್ಲೂ ಲವ್‌ಸ್ಟೋರಿಗೆ ಹೆಚ್ಚು ಒತ್ತು. ಸಣ್ಣದ್ದೊಂದು ಹೊಡೆದಾಟ ಬಡಿದಾಟ ಹೊರತುಪಡಿಸಿದರೆ, ಬರೀ ಮಾತು ಮತ್ತು ಪ್ರೀತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಈಗ ಭಟ್ಟರು ಹೊಸದೊಂದು ಸಿನಿಮಾಗೆ ನಿರ್ದೇಶಕರು. ಆ ಚಿತ್ರಕ್ಕೆ “ಗರಡಿ” ಎಂದು ನಾಮಕರಣ ಮಾಡಿದ್ದಾರೆ. ಶೀರ್ಷಿಕೆ ಕೇಳಿದೊಡನೆ, ಇದೊಂದು ಪಕ್ಕಾ ಕುಸ್ತಿಮಯ ಸಿನಿಮಾ ಅನಿಸಬಹುದು. ಆದರೆ, ಇಲ್ಲೂ ಸಹ ಪ್ರೀತಿ ಗೀತಿ ಇತ್ಯಾದಿಗೇನೂ ಕೊರತೆ ಇರೋದಿಲ್ಲ ಬಿಡಿ…

ಗಾಳಿಪಟ–2 ಚಿತ್ರದ ನಂತರ, ನಿರ್ದೇಶಕ ಯೋಗರಾಜ್ ಭಟ್ “ಗರಡಿ” ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದು. ಅಂದಹಾಗೆ, ಈ ಚಿತ್ರಕ್ಕೆ ಕೃಷಿ ಸಚಿವ ಬಿ. ಸಿ ಪಾಟೀಲ್ ಅವರ ಪತ್ನಿ ವನಜಾ ಬಿ. ಪಾಟೀಲ್ ಹಾಗು ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಪಕರು.

ಚಿತ್ರಕ್ಕೆ ಯುವ ನಟ ಯಶಸ್ ಸೂರ್ಯ ಹೀರೋ. ಬಿ.ಸಿ ಪಾಟೀಲ್ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯ ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನುಳಿದಂತೆ, ಚಿತ್ರದ ಇತರೆ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಯುತ್ತಿದೆ.

ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗು ಯೋಗರಾಜ್ ಭಟ್ ಸಾಹಿತ್ಯವಿದೆ. ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಭಟ್ಟರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಭಟ್ಟರ ಜೊತೆಗೂಡಿ “ಡ್ರಾಮಾ” ಚಿತ್ರದ ಚಿತ್ರಕಥೆ ರಚಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ಭಟ್ಟರೊಡನೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಚಿತ್ರದ ‘ಮುಹೂರ್ತ’ ಹಾಗು ‘ಟೈಟಲ್ ಲಾಂಚ್’ ಕಾರ್ಯಕ್ರಮ ಇತ್ತೀಚೆಗೆ ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ನಡೆದಿದೆ.

Categories
ಸಿನಿ ಸುದ್ದಿ

ಮದಗಜ ಟ್ರೇಲರ್‌ ಹೊರಬಂತು; ಸಿಎಂ ಬಸವರಾಜ್‌ ಬೊಮ್ಮಾಯಿ ರಿಲೀಸ್‌ ಮಾಡಿ ಶುಭಕೋರಿದರು…

ಶ್ರೀ ಮುರಳಿ ನಾಯಕರಾಗಿ ನಟಿಸಿರುವ “ಮದಗಜ” ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮದಗಜ ಡಿಸೆಂಬರ್ 3 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶ್ರೀಮುರಳಿ ಪುನೀತ್ ರಾಜ್‍ಕುಮಾರ್ ಅವರಿಗೆ “ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ ನೀನೆ ರಾಜಕುಮಾರ” ಹಾಡು ಹೇಳಿ, ಗಾನನಮನ ಸಲ್ಲಿಸಿದರು….

ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಸಿಎಂ, ಹೇಳಿದ್ದಿಷ್ಟು. “ಟ್ರೇಲರ್ ಇಷ್ಟು ಚೆನ್ನಾಗಿದೆ ಎಂದರೆ, ಇನ್ನೂ ಸಿನಿಮಾ ಹೇಗೆ ಇರಬೇಡ? ಒಳ್ಳೆ ಹಾಲಿವುಡ್ ‌ ಸಿನಿಮಾ ಮಾಡಿದ ಹಾಗೆ ಮಾಡಿದ್ದೀರಿ ಎಂದು ಶ್ರೀ ಮುರಳಿ ಅವರನ್ನು ಶ್ಲಾಘಿಸಿದ‌ ಸಿಎಂ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪೀಳಿಗೆ‌ ನಿರ್ಮಾಣ, ನಿರ್ದೇಶನ ಹಾಗೂ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸುತ್ತಿರುವುದು ಸಂತಸದ ವಿಷಯ ಎನ್ನುತ್ತಲೇ, ಮಾತಿನುದ್ದಕ್ಕೂ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡರು.

ಸಚಿವರಾದ ಅಶ್ವತ್ ನಾರಾಯಣ್ ಹಾಗೂ ಮುನಿರತ್ನ ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ‌ ಚಿತ್ರತಂಡಕ್ಕೆ ಶುಭ ಕೋರಿದರು.

ಯಾವುದೇ ವ್ಯಕ್ತಿ ಮೊದಲು ತನ್ನ ಕುಟುಂಬವನ್ನು ಚೆನ್ನಾಗಿಟ್ಟುಕೊಳ್ಳಬೇಕು. ನಾನು ಆ ವಿಚಾರದಲ್ಲಿ ಅದೃಷ್ಟವಂತ. ನನ್ನ ಕುಟುಂಬ ತುಂಬಾ ಚೆನ್ನಾಗಿದೆ. ಮುಖ್ಯಮಂತ್ರಿಗಳು ಈ ಸಮಾರಂಭಕ್ಕೆ ಬರಲು ನನ್ನ ಕುಟುಂಬ ಕಾರಣ ಎಂದು ಮಾತು ಆರಂಭಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು, ಸಿನಿಮಾ ಎಂದರೆ ಮಾಯಾ ಬಜಾರ್ ಅಲ್ಲ. ಇಲ್ಲಿ ಸಾಕಷ್ಟು ಜನರ ಶ್ರಮವಿರುತ್ತದೆ. ಒಂದು ಒಳ್ಳೆಯ ಚಿತ್ರ ಮೂಡಿಬರಲು ಎಲ್ಲರು ಒಟ್ಟಾಗಿ ಶ್ರಮಿಸಬೇಕು.. ನಮ್ಮ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದೇ ಡಿಸೆಂಬರ್ 3 ರಂದು ಬಿಡುಗಡೆಯಾಗಿತ್ತಿದೆ.‌ ಎಲ್ಲರ ಪ್ರೋತ್ಸಾಹವಿರಲಿ ಎಂದರು ಉಮಾಪತಿ.

ನಮ್ಮ ಚಿತ್ರದ ಮೊದಲ ಹೀರೋ ನಿರ್ಮಾಪಕ ಉಮಾಪತಿ ಅವರು. ಅವರ ಸಹಕಾರದಿಂದ ಚಿತ್ರ ಇಷ್ಟು ಚೆನ್ನಾಗಿ ಬಂದಿದೆ. ನಿರ್ದೇಶಕ ಮಹೇಶ್ ಕುಮಾರ್ ಅವರ ಕಾರ್ಯ ವೈಖರಿ ಬಗ್ಗೆ ಎಷ್ಟು ಹೇಳಿದರು ಸಾಲದು. “ಮದಗಜ” ದ ಇಡೀ ತಂಡಕ್ಕೆ ನನ್ನ ಅಭಿನಂದನೆ. ನಿರ್ದೇಶಕರು ಹೇಳಿದಂತೆ ನಾನು ನಟಿಸಿದ್ದೇನೆ.‌ ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ . ನೋಡಿ. ಹಾರೈಸಿ ಅಂದರು ನಾಯಕ ಶ್ರೀಮುರಳಿ.

ಈ ಚಿತ್ರದಲ್ಲಿ ನನ್ನ ಫಸ್ಟ್ ಲುಕ್ ನೋಡಿದ ಎಷ್ಟೋ ಜನ ನೀವು ಚೆನ್ನಾಗಿ ಕಾಣುತ್ತಿದ್ದೀರಾ ಎಂದಿದ್ದಾರೆ. ನಾನಿಲ್ಲಿ ಪಲ್ಲವಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರ‌ ಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ವಂದನೆಗಳು ಎಂದರು ನಟಿ ಆಶಿಕಾ‌ ರಂಗನಾಥ್.

ನಮ್ಮ ತಂದೆ, ತಾಯಿ ಅಥವಾ ಬಳಗದವರು ನಾವು ಯಾವುದಾದರೂ ಒಂದು ವ್ಯಾಪಾರ ಆರಂಭಿಸುತ್ತೇನೆ ಎಂದರೆ, ಐದು,‌ ಹತ್ತು ಲಕ್ಷ ಸಹಾಯ ಮಾಡುತ್ತಾರೆ ಎಂದರೆ ಅದೇ ದೊಡ್ಡ ವಿಷಯ. ಅಂತದರಲ್ಲಿ ನಾವು ಹೇಳಿದ ಕಥೆ ಕೇಳಿ ಇಪ್ಪತ್ತು, ಮೂವತ್ತು ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಪಕರು ತಂದೆ, ತಾಯಿ ಇದ್ದ ಹಾಗೆ. ನಮಗೆ ಆ ರೀತಿ ಸಹಾಯ ಮಾಡಿದವರು ನಿರ್ಮಾಪಕ ಉಮಾಪತಿ ಅವರು. ನಂತರ ಕಥೆ ಕೇಳಿದ ತಕ್ಷಣ ಚೆನ್ನಾಗಿದೆ ಸಿನಿಮಾ ಮಾಡೋಣ ಎಂದ ನಾಯಕ ಶ್ರೀಮುರಳಿ ಅವರಿಗೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ನನ್ನ ಇಡೀ ತಂಡಕ್ಕೆ ಧನ್ಯವಾದ. ಡಿಸೆಂಬರ್ ಮೂರರಂದು
ತೆರೆಗೆ ಬರಲಿದೆ .. ನಿಮ್ಮೆಲ್ಲರ ಬೆಂಬಲವಿರಲಿ ಎಂಬುದು ನಿರ್ದೇಶಕ ಮಹೇಶ್ ಕುಮಾರ್ ಮಾತು.

ಚಿತ್ರದಲ್ಲಿ ಅಭಿನಯಿಸಿರುವ ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ ಆರ್ ಪೇಟೆ, ಗರುಡ ರಾಮ್ ಅನಿಲ್ ಹಾಗೂ ಚಿತ್ರದ ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು.

error: Content is protected !!