Categories
ಸಿನಿ ಸುದ್ದಿ

ಹೊಸಬರ ಚಿತ್ರ ಜೋರು! ಕನ್ನಡದಲ್ಲಿ ಮತ್ತೊಂದು ಜೋರಾದ ಗ್ಯಾಂಗ್ ಸ್ಟರ್ ಸಿನಿಮಾಗೆ ಚಾಲನೆ…

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ‘ಜೋರು’ ಎಂಬ ಹೊಸಬರ ಚಿತ್ರವೂ ಸೇರಿದೆ. ಹೌದು, ಚಿತ್ರದ ಶೀರ್ಷಿಕೆ ಹೇಳುವಂತೆ, ಹೊಸಬರು ಕೊಂಚ ‘ಜೋರು’ ಸೌಂಡು ಮಾಡೋಕೆ ಸಜ್ಜಾಗುತ್ತಿದ್ದಾರೆ.

ಚಿತ್ರಕ್ಕೆ ನಾಗಭೂಷಣ್ ಎಸ್.ಆರ್. ನಿರ್ದೇಶಕರು. ಚಿತ್ರಕ್ಕೆ ಹಾಡುಗಳ ಸಂಯೋಜನೆಗೆ ಚಾಲನೆ ಕೊಡುವ ಮೂಲಕ ಚಿತ್ರದ ಕೆಲಸಗಳನ್ನು ಶುರುವಿಟ್ಟುಕೊಂಡಿದ್ದಾರೆ.
ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದಾರೆ.


‘ಜೋರು’ ಇದೊಂದು ಗ್ಯಾಂಗ್ ಸ್ಟರ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾವನ್ನು ಶ್ರೀ ಮಹೇಶ್ವತಿ ಕಂಬೈನ್ಸ್ ಮೂಲಕ ಸರಸ್ವತಿ ಆರ್. ನಾಗೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಮ್ ಪ್ರಸಾದ್ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನು ಈ ಸಿನಿಮಾಗೆ ಧನುಷ್ ಕುಮಾರ್ ಹೀರೋ ಆಗಿ ಕನ್ನಡ‌ ಚಿತ್ರರಂಗವನ್ನು ಸ್ಪರ್ಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಗಾಂಧಿನಗರದಲ್ಲಿ ಜೋರು ಸೌಂಡು ಮಾಡೋಕೆ ರೆಡಿಯಾಗಿದ್ದಾರೆ. ಇನ್ನು ಧನುಷ್ ಕುಮಾರ್ ಅವರಿಗೆ ನಾಯಕಿಯನ್ನು ಹುಡುಕಲಾಗುತ್ತಿದೆ. ಇಷ್ಟರಲ್ಲೇ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.


ಸಿನಿಮಾ ಚಿತ್ರೀಕರಣ ಬೆಂಗಳೂರು, ಉತ್ತರ ಕರ್ನಾಟಕ, ಕೋಲಾರ ಸುತ್ತ ಮುತ್ತ ನಡೆಯಲಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಅಂದಹಾಗೆ, ಜೇಮ್ಸ್ ಖ್ಯಾತಿಯ
ಚೇತನ್ ಕುಮಾರ್ ಅವರ ಸಾಹಿತ್ಯ ಚಿತ್ರಕ್ಕಿದೆ. ಜೊತೆಗೆ 4 ಭರ್ಜರಿ ಫೈಟ್ ಗಳಿವೆ.
ಚಿತ್ರಕ್ಕೆ ರಾಮ ರಾಮ ರೇ ಖ್ಯಾತಿಯ ಲವೀತ್ ಛಾಯಾಗ್ರಹಣವಿದೆ. ಎಮ್.ವಿಜಯ್ ಕುಮಾರ್ ಸಂಕಲನ ಮಾಡಿದರೆ, ಕೆಜಿಎಫ್ ಖ್ಯಾತಿಯ ಮೋಹನ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.


ಅರ್ಜುನ್ ರಾಜ್ ಅವರ ಸ್ಟಂಟ್ಸ್ ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ನಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ.

Categories
ಸಿನಿ ಸುದ್ದಿ

ಕನ್ನಡದ ಎರಡು ಸಿನಿಮಾದಲ್ಲಿ ಕಬೀರ್ ಬೇಡಿ! ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ಅವರ ಎರಡು ಚಿತ್ರದಲ್ಲಿ ಬಾಲಿವುಡ್ ನಟನ ಎಂಟ್ರಿ…

ಅಂತಾರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಅವರು ಮೊಟ್ಟ ಮೊದಲ ಬಾರಿಗೆ “ಹಂಟರ್” ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಬೀರ್ ಬೇಡಿ ಅಲ್ಲಿ ಜೇಮ್ಸ್ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ನಾಮರೊಂದಿಗೆ ಅಭಿನಯಿಸಿದ್ದಾರೆ ಕೂಡ.

ಇದೀಗ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ರವರು ನಮ್ಮ ಭಾಷೆಯ ಚಿತ್ರಕ್ಕೂ ಅವರನ್ನು ಪರಿಚಯಿಸಿರುವುದು ಚಿತ್ರದ ಕುತೂಹಲ ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಮಾದರಿಯ ಈ ಸಿನಿಮಾದಲ್ಲಿ ನಿರಂಜನ್ ಮತ್ತು ಸೌಮ್ಯ ಮೆನನ್ ನಾಯಕ-ನಾಯಕಿಯರಾಗಿದ್ದು ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಯುರೋಪ್ ನಾದ್ಯಂತ ಧೂಳೆಬ್ಬಿಸಿದ್ದ ನಂಬರ್ 1 ಟಿವಿ ಸೀರಿಸ್ “ಸಂದೋಕನ್” ನಲ್ಲಿ ನಟಿಸಿದ್ದ ಬೇಡಿಯವರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಇಟೆಲಿಯ ವೆನಿಸ್ ನಲ್ಲಿ “Life time achievement award” ಬಂದ ನಂತರ, ಇದೇ ಮೊದಲ ಬಾರಿಗೆ ಚಿತ್ರ ವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅದೂ ಕನ್ನಡ ಭಾಷೆಯ ಚಿತ್ರ ಎಂಬುದು ವಿಶೇಷ.

ಇದಲ್ಲದೆ ಕಬೀರ್ ಬೇಡಿಯವರು ತ್ರಿವಿಕ್ರಮ ಸಾಪಲ್ಯರವರ ಮತ್ತೊಂದು ಚಿತ್ರದಲ್ಲೂ ಅಭಿನಯಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಪಿರಿಯಾಡಿಕ್ ಸಿನಿಮಾದಲ್ಲಿ ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿದ್ದು, ಕನ್ನಡದ ಖ್ಯಾತ ಹಿರಿಯ ನಟಿಯರಾದ ಶ್ರುತಿ ಹಾಗೂ ಭವ್ಯ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಒಟ್ಟಿನಲ್ಲಿ ತ್ರಿವಿಕ್ರಮ ರವರು ಎರಡು ಸಿನಿಮಾಗಳನ್ನು ಜಂಟಿಯಾಗಿ ಚಿತ್ರೀಕರಿಸಿ, ಅದೆರಡರಲ್ಲೂ ಕಬೀರ್ ಬೇಡಿಯಂತಹ ವಿಶ್ವದ ಪ್ರಖ್ಯಾತ ನಟನನ್ನು ಕರೆತಂದು ಚಿತ್ರರಂಗದಲ್ಲಿ ಹೊಸ ಸಂಚಲನ ಸ್ರಷ್ಟಿಸಿರುತ್ತಾರೆ. ಅವರೊಬ್ಬ ದಿಟ್ಟ ನಿರ್ಮಾಪಕ ಎನ್ನುವುವುದಕ್ಕೆ ಇದು ಸಾಕ್ಷಿ.

Categories
ಸಿನಿ ಸುದ್ದಿ

ಗಜರಾಮನಿಗೆ ಅಭಿಷೇಕ್ ಕ್ಲಾಪ್: ರಾಜವರ್ಧನ್ ಹೊಸ ಚಿತ್ರಕ್ಕೆ ಚಾಲನೆ…

‘ಮ್ಯಾಸಿವ್ ಸ್ಟಾರ್’ ರಾಜವರ್ಧನ್ ಬಿಚ್ಚುಗತ್ತಿ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕ‌ ನಟನಾಗಿ ಅಭಿನಯಿಸುತ್ತಿರುವ ಪ್ರಣಯಂ, ಹಿರಣ್ಯ ಸಿನಿಮಾ ಬಿಡುಗಡೆಗೆ ಮೊದಲೇ ಮಾಸ್ ಸಬ್ಜೆಕ್ಟ್ ಸಿನಿಮಾವೊಂದು ರಾಜವರ್ಧನ್ ಬತ್ತಳಿಕೆ ಸೇರಿದೆ. ಅದುವೇ ‘ಗಜರಾಮ’. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಟ್ಟ ಈ ಚಿತ್ರದ ಮುಹೂರ್ತ ಬುಧವಾರ ನೆರವೇರಿದೆ.

ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಹೆಣೆದ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್ ‘ಗಜರಾಮ’ನಾಗಿ ಅಬ್ಬರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಇಂದು ಚಿತ್ರದ ಮುಹೂರ್ತ ನೇರವೇರಿದೆ. ಚಿತ್ರಕ್ಕೆ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಮಾತನಾಡಿದ ಅಭಿಷೇಕ್ ಅಂಬರೀಶ್ ನಮ್ಮ ತಂದೆ ಗಜೇಂದ್ರ ಎನ್ನುವ ಸಿನಿಮಾ ಮಾಡಿದ್ರು ಈಗ ನನ್ನ ಸ್ನೇಹಿತ ಗಜರಾಮ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜವರ್ಧನ್ ಮೋಷನ್ ಪೋಸ್ಟರ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಒಂದೊಳ್ಳೆ ಫ್ಯಾಮಿಲಿ ಎಂಟಟೈನ್ಮೆಂಟ್ ಹಾಗೂ ಮಾಸ್ ಕಟೆಂಟ್ ಒಳಗೊಂಡ ಒಂದೊಳ್ಳೆ ಕಥೆ ಚಿತ್ರದಲ್ಲಿದೆ. ನನ್ನ ಪಾತ್ರದ ಬಗ್ಗೆ ಕೇಳಿ ಇಷ್ಟವಾಯ್ತು. ಒಳ್ಳೆ ಪ್ರೊಡಕ್ಷನ್ ಹೌಸ್, ಒಳ್ಳೆ ನಿರ್ಮಾಪಕರು, ಒಳ್ಳೆ ಚಿತ್ರ ಸಿಕ್ಕಾಗ ಕೈ ಬಿಡಬಾರದು. ನನಗೆ ಸ್ಟೋರಿ ಲೈನ್ ಪರ್ಸನಲಿ ಖುಷಿ ಕೊಟ್ಟಿದೆ ಎಂದು ನಾಯಕ ರಾಜವರ್ಧನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ರಾಜವರ್ಧನ್ ಗೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ನಂತರ ಇವರು ನಟಿಸುತ್ತಿರುವ ಎರಡನೇ ಸಿನಿಮಾವಿದು.

ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳ ಕಾಲ ದುಡಿದು ಅನುಭವವಿರುವ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ರಾಜವರ್ಧನ್ ಗಾಗಿ
ಆಕ್ಷನ್, ಮಾಸ್ ಎಂಟಟೈನರ್ ಕಥೆ ಹೆಣೆದಿರೋ ನಿರ್ದೇಶಕರು ಸಾಕಷ್ಟು ತಯಾರಿಯೊಂದಿಗೆ ನಾಳೆಯಿಂದ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ. ನಟ ದೀಪಕ್ ಪ್ರಿನ್ಸ್ ಈ ಚಿತ್ರದ ಸ್ಪೆಷಲ್ ರೋಲ್ ಒಂದರಲ್ಲಿ ಬಣ್ಣ ಹಚ್ಚುತ್ತಿರೋದು ಈ ಚಿತ್ರದ ಸ್ಪೆಷಲ್ ಸಂಗತಿಗಳಲ್ಲೊಂದು.

ಮೆಲೋಡಿ ಹಾಡುಗಳ ಮಾಂತ್ರಿಕ
ಮನೋಮೂರ್ತಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.

ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಕಿರೀಟಿ ಹುಟ್ಟುಹಬ್ಬಕ್ಕೆ ಚಿತ್ರದ ಶೀರ್ಷಿಕೆ ಅನಾವರಣ: ಸೆಪ್ಟೆಂಬರ್ 29ಕ್ಕೆ ಟೈಟಲ್ ರಿಲೀಸ್…

ಚಂದನವನಕ್ಕೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್ ಎಸ್ ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದು ಗೊತ್ತೇ ಇದೆ. ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ಒಂದೇ ನೋಟಕ್ಕೆ ಎಲ್ಲರನ್ನು ಸೆಳೆದಿದ್ದಾರೆ. ಸ್ಯಾಂಡಲ್ ವುಡ್ ಅಂಗಳಕ್ಕೆ ಭರವಸೆಯ ನಾಯಕ ನಟನಾಗುತ್ತಾನೆ ಎಂಬ ಭವಿಷ್ಯ ವಾಣಿಯೂ ಕೇಳಿ ಬಂದಿವೆ. ಎಲ್ಲರ ಪ್ರೋತ್ಸಾಹದ ನುಡಿಗಳೊಂದಿಗೆ ಯಂಗ್ ಅಂಡ್ ಎನರ್ಜಿಟಿಕ್ ಕಿರೀಟಿ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕಿರೀಟಿ ಮೊದಲ ಚಿತ್ರದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಅದುವೇ ಚಿತ್ರದ ಟೈಟಲ್.

ಎಸ್. ಕಿರೀಟಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು ಚಿತ್ರೀಕರಣದಲ್ಲಿ ತೊಡಗಿದ್ರು ಕೂಡ ಇಲ್ಲಿವರೆಗೂ ಸಿನಿಮಾದ ಟೈಟಲ್ ಅನಾವರಣ ಆಗಿರಲಿಲ್ಲ. ಫೈನಲಿ ಸಿನಿಮಾ ತಂಡ ಟೈಟಲ್ ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅದು ಒಂದು ವಿಶೇಷ ದಿನದಂದು. ಹೌದು, ಸೆಪ್ಟೆಂಬರ್ 29 ಕಿರೀಟಿ ಹುಟ್ಟುಹಬ್ಬ. ಆ ದಿನವೇ ಚಿತ್ರದ ಟೈಟಲ್ ರಿವೀಲ್ ಮಾಡಬೇಕು ಅನ್ನೋದು ಚಿತ್ರತಂಡದ ಪ್ಲ್ಯಾನ್.
ಆದ್ರಿಂದ ಸೆಪ್ಟೆಂಬರ್ 29ರಂದು ಸಂಜೆ 6.39ಕ್ಕೆ ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗೋದು ಫಿಕ್ಸ್ ಆಗಿದೆ.

ರಾಧಾಕೃಷ್ಣ ರೆಡ್ಡಿ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾ ಕೂಡ ಆಗಿದ್ದು ಅಷ್ಟೇ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರದ ಮೂಲಕ ಕಿರೀಟಿ ಕನ್ನಡ ಮತ್ತು ತೆಲುಗು ಎರಡೂ ಇಂಡಸ್ಟ್ರಿಗೆ ಏಕಕಾಲದಲ್ಲಿ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ.

ಚಿತ್ರದಲ್ಲಿ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರದ ತಾಂತ್ರಿಕ ವರ್ಗ ಕೂಡ ಶ್ರೀಮಂತವಾಗಿದ್ದು ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ಡೈರೆಕ್ಟರ್ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಅಜೇಯ್ ರಾವ್ ಮತ್ತೆ ನಿರ್ಮಾಣದ ಸಾಹಸ! ಕಟಿಂಗ್ ಶಾಪ್ ನಿರ್ದೇಶಕನ ಸಿನಿಮಾಗೆ ಸಿಗ್ನಲ್…

ನಟ ಅಜಯ್ ರಾವ್ ಹೊಸದೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಪವನ್ ಭಟ್ ನಿರ್ದೇಶನದ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದು, ಈ ಚಿತ್ರದ ನಿರ್ಮಾಣವನ್ನು ಅಜಯ್ ರಾವ್ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ ನಟ ಅಜಯ್ ರಾವ್.

ನಿರ್ದೇಶಕ ಪವನ್ ಭಟ್ ಕಥೆ ಕೇಳಿ ಇಂಪ್ರೆಸ್ ಆಗಿರುವ ಅಜಯ್ ರಾವ್ ತಮ್ಮದೇ ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಲು ಡಿಸೈಡ್ ಮಾಡಿದ್ದಾರೆ.

‘ಕಟಿಂಗ್ ಶಾಪ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್ ಭಟ್ ಎರಡನೇ ಸಿನಿಮಾವಿದು.

ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಸುತ್ತಿದೆ. ಸದ್ಯದಲ್ಲೇ ಟೈಟಲ್ ಹಾಗೂ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಆಸ್ಕರ್ ಜ್ಯೂರಿಯಾಗಿ ಕನ್ನಡ ನಿರ್ದೇಶಕ: ಪವನ್ ಒಡೆಯರ್ ಗೆ ಸಿಕ್ಕ ಅನನ್ಯ ಅವಕಾಶ…

ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಯಾರ ಯಾರ ಪಾಲಾಗುತ್ತೆ ಎಂಬ ಲೆಕ್ಕಾಚಾರಗಳು ಜೋರಾಗಿದೆ. ಭಾರತದಿಂದ ಬೇರೆ ಬೇರೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಹಲವಾರು ಸಿನಿಮಾಗಳು ನಾಮ ನಿರ್ದೇಶನವಾಗಿ ಗಮನ ಸೆಳೆಯುತ್ತಿವೆ.

ಸದ್ಯ ಲೇಟೆಸ್ಟ್ ಸಮಾಚಾರವೇನಪ್ಪ ಅಂದರೆ, ಆಸ್ಕರ್ ಅವಾರ್ಡ್ ಜ್ಯೂರಿ ಸದಸ್ಯರಾಗಿ ಕನ್ನಡದ ನಿರ್ದೇಶಕರು ಪಾಲ್ಗೊಂಡಿರೋದು. ಹೌದು, ಕನ್ನಡದ ಪ್ರತಿಭಾವಂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿಯ ಸದಸ್ಯರಾಗಿ ಭಾಗಿಯಾಗಿದ್ದಾರೆ. ಈ ಖುಷಿಯ ಕ್ಷಣವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪವನ್ ಒಡೆಯರ್, ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿಯಾಗಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಸಾರ್ಥಕತೆ ನೀಡಿದೆ. ನನ್ನ ನಿರ್ಮಾಣದ ‘ಡೊಳ್ಳು’ ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ ಎಂದು ಪವನ್ ಒಡೆಯರ್ ಹರುಷ ವ್ಯಕ್ತಪಡಿಸಿದ್ದಾರೆ.

ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳಿಂದ ಸಿನಿಮಾಗಳು ಆಸ್ಕರ್ ಗೆ ಆಯ್ಕೆಯಾಗಿದ್ವು. ನಮ್ಮ ಭಾಷೆಯಿಂದ ಯಾವ ಸಿನಿಮಾಗಳು ಆಸ್ಕರ್ ಗೆ ಆಯ್ಕೆ ಆಗಿಲ್ಲದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್ ಗೆ ನಾಮ ನಿರ್ದೇಶನವಾಗಲಿವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ಪವನ್ ಒಡೆಯರ್.

ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಡೊಳ್ಳು’ ಸಿನಿಮಾ ಜನ ಮೆಚ್ಚುಗೆ ಗಳಿಸಿಕೊಂಡಿದ್ದು, ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸದ್ಯ ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಸಿನಿಮಾ ಬಿಡುಗಡೆಯಾಗಬೇಕಿದೆ.

Categories
ಸಿನಿ ಸುದ್ದಿ

ಪೂರ್ಣಚಂದ್ರರ ಅದ್ವಿತೀಯ ಚಿತ್ರ! ಬ್ರಹ್ಮಕಮಲ ಹಿಡಿದ ಅದ್ವಿತಿ ಶೆಟ್ಟಿ…

“ದಾರಿ ಯಾವುದಯ್ಯಾ ವೈಕುಂಠಕೆ” ಖ್ಯಾತಿಯ ನಿರ್ದೇಶಕ “ಸಿದ್ದು ಪೂರ್ಣಚಂದ್ರ” ಅವರು ಕಥೆ, ಚಿತ್ರಕಥೆ ಬರೆದು ಹೊಸ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅ ಸಿನಿಮಾಗೆ “ಬ್ರಹ್ಮಕಮಲ” ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ.

ರಾತ್ರಿ ಹುಟ್ಟಿ ರಾತ್ರಿಯ ಬಾಡುವಂತಹ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ.

ಈ ಚಿತ್ರದಲ್ಲಿ ಅಧ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್, ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ಛಾಯಾಗ್ರಹಣ ಲೋಕೇಂದ್ರ ಸೂರ್ಯ, ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಮಾಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಎ.ಕೆ. ಪುಟ್ಟರಾಜು. ನಿರ್ಮಾಣ ನಿರ್ವಹಣೆ ಮತ್ತು ವಸ್ತ್ರ ವಿನ್ಯಾಸ ಋತು ಚೈತ್ರ ನಿರ್ವಹಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು ಗೊತ್ತಾ? ತಮಿಳು ನಿರ್ಮಾಪಕರ ಜೊತೆ ಹೊಸ ಸಿನಿಮಾ ಮಾಡ್ತಾರೆ ಬಾದ್ ಷಾ…

ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಎಲ್ಲರಿಗೂ ಕುತೂಹಲ ಇದೆ. ಮತ್ತೆ ಸುದೀಪ್ ಅವರು ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಂತೆ ಹೀಗಂತೆ ಎಂಬ ಮಾತುಗಳು ಎಷ್ಟರ‌ಮಟ್ಟಿಗೆ ಸರಿಯೋ ತಪ್ಪೋ ಗೊತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ, ಸುದೀಪ್ ಅವರು ಈಗ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುವ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.

ಹೌದು, ಸುದೀಪ್ ತಮಿಳಿನ ಹೊಸ ನಿರ್ದೇಶಕರೊಬ್ಬರ ಕಥೆ ಕೇಳಿದ್ದು, ಆ ಚಿತ್ರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ಸುದೀಪ್ ಅವರ ಹೊಸ ಸಿನಿಮಾ ನಿರ್ಮಿಸುತ್ತಿರೋದು ತಮಿಳಿನ ಹೆಸರಾಂತ ನಿರ್ಮಾಪಕ, ವಿತರಕ ಕಲೈಪುಲಿ ಎಸ್.ತಾನು. ತಮಿಳು ಚಿತ್ರರಂಗದಲ್ಲಿ ಇವರು ಅನೇಕ ಹಿಟ್ ಸಿನಿಮಾಗಳನ್ನು ವಿತರಣೆ ಕೂಡ ಮಾಡಿದ್ದಾರೆ. ರಜನಿಕಾಂತ್ ಅವರ ಕಬಾಲಿ, ಕಮಲ್ ಹಾಸನ್ ಅವರ ಆಲವಂತಾನ್, ವಿಜಯ್ ಅವರ ತುಪಾಕಿ, ಸೂರ್ಯ ಅವರ ಕಾಕ ಕಾಕ ಹಾಗು ಧನುಷ್ ಅವರ ಅಸುರನ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಸುದೀಪ್ ಅವರಿಗೆ ಇವರೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದು ಕನ್ನಡ ಹಾಗು ತಮಿಳು ಭಾಷೆಯಲ್ಲಿ ತಯಾರಾಗಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅ ಸಿನಿಮಾ ಕುರಿತು ಮಾತುಕತೆ ಮುಗಿದಿದ್ದು, ಹೊಸ ನಿರ್ದೇಶಕರ ಕಥೆಯಲ್ಲಿ ಸುದೀಪ್ ಹೀರೋ ಅವರು ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಅದೇನೆ ಇರಲಿ, ಸುದೀಪ್ ಅಭಿಮಾನಿಗಳಿಗೆ ತಮ್ಮ ಕಿಚ್ಚ ಬಾಸ್ ಮುಂದೆ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲಕ್ಕೆ ಈಗ ಈ ಸುದ್ದಿ ಉತ್ತರ ನೀಡಿದೆ. ಇದು ಯಾವಾಗ ಶುರುವಾಗುತ್ತೆ, ಯಾರೆಲ್ಲ ಇರುತ್ತಾರೆ ಎಂಬುದಕ್ಕೆ ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಕನ್ನಡದಲ್ಲೊಂದು ಜೈ ಭೀಮ್ ರೀತಿಯ ಕಥೆ! ಪಾಲಾರ್ ಎಂಬ ದಲಿತರ ಮೇಲಿನ ದೌರ್ಜನ್ಯ ಕುರಿತ ಚಿತ್ರ…

‌‌‌‌‌ ಯುವ ನಿರ್ದೇಶಕ ಜೀವಾ ನವೀನ್ ಅವರು ಕನ್ನಡದಲ್ಲೊಂದು ಜೈ ಭೀಮ್, ಅಸುರನ್, ಕರ್ನನ್, ನಾರಪ್ಪ ರೀತಿಯ ಸಿನೆಮಾ ನಿರ್ದೇಶನ ಮಾಡಿದ್ದಾರೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹೋರಾಡುವ ಕಥಾಹಂದರ ಇಟ್ಟುಕೊಂಡು ಪಾಲಾರ್ ಸಿನೆಮಾಗೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಜೀವಾ ನವೀನ್ ” ಅವಿಭಜಿತ ಕೋಲಾರ ಜಿಲ್ಲೆ ಮತ್ತು ದೇವನಹಳ್ಳಿ ಭಾಗದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಅದೇ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ ಕಥೆ, ತಮಗೂ ಬದುಕಲು ಹಕ್ಕಿದೆ ಎಂದು ತೋರಿಸಿದ ದಲಿತರ ಹೋರಾಟದ ಕಥನ ಎಂದು ಹೇಳಿದರು.

ತೆಲುಗಿನ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಕೋಲಾರ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಪಾಲಾರ್‌’ ತನ್ನ ವಿಶಿಷ್ಟ ಹೆಸರಿನ ಮೂಲಕ ಗಮನ ಸೆಳೆದಿದೆ. ನೀನಾಸಂನಲ್ಲಿ ತರಬೇತಿ ಪಡೆದಿರುವ ಉಮಾ ಜೊತೆ ನಾಯಕನಾಗಿ ರಾಷ್ಟ್ರೀಯ ನಾಟಕ ಶಾಲೆಯ ತಿಲಕ್ ರಾಜ್ ಬಣ್ಣ ಹಚ್ಚಿದ್ದಾರೆ.

ಜೊತೆಗೆ ಈ ಸಿನಿಮಾದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಆಸಿಫ್ ರೆಹಾನ್, ಅವರ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನವಿದೆ. ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ 4 ಹಾಡುಗಳನ್ನು ರಚಿಸಿದ್ದಾರೆ. ಸುಬ್ರಮಣ್ಯ ಆಚಾರ್ಯ ಅವರ ಸಂಗೀತವಿದ್ದು, ಶ್ವೇತಾ ದೇವನಹಳ್ಳಿ, ಸುಪ್ರೀತ್ ಪಲ್ಗುಣ, ಸುಬ್ರಮಣ್ಯ ಆಚಾರ್ಯ ಜೊತೆಗೆ ಉಮಾ ವೈ ಜಿ ಕೋಲಾರ ಹಾಡುಗಳಿಗೆ ದನಿಯಾಗಿದ್ದಾರೆ.

ಪಾಲಾರ್ ಟೈಟಲ್‌ನ ವಿಶೇಷತೆಯನ್ನು ವಿವರಿಸಿದ ನಿರ್ದೇಶಕರು, “ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್‌ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿಯುತ್ತದೆ. ಆ ನಂತರ ಆಂದ್ರಪ್ರದೇಶ, ತಮಿಳು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ಈ ನದಿ ಭೂಮಿಯ ಒಳಗಡೆ ಇದ್ದಾಗ ಬಿಸಿಯಾಗಿರುತ್ತದೆ. ಇದೇರೀತಿಯ ಕುದಿತ ದಲಿತರ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬಂದು, ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ಪಾಲಾರ್‌ ಚಿತ್ರದ ಕಥೆ. ಪಾಲಾರ್ ನದಿಗೂ ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಅದನ್ನು ಬಳಸಿದ್ದೇವೆ. ಅಲ್ಲದೆ ಪಾಲಾರ್‌ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಮ್ಮ ಕಥೆ ನಡೆಯುತ್ತದೆ” ಎಂದು ವಿವರಿಸಿದರು.

ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು ಸದ್ಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ.
ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್ ಕುಮಾರ್ ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸದ್ಯದಲ್ಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ, ನವಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

Categories
ಸಿನಿ ಸುದ್ದಿ

ಪ್ರೇಕ್ಷಕರ ಮುಂದೆ ಹೊಂದಿಸಿ ಬರೆಯಿರಿ: ನವೆಂಬರ್ 18ಕ್ಕೆ ರಿಲೀಸ್

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ನಿರೀಕ್ಷೆ ಮೂಡಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ನವೆಂಬರ್ 18ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಬಹು ದೊಡ್ಡ ಹಾಗೂ ಕಲರ್ ಫುಲ್ ತಾರಾಗಣ ಚಿತ್ರದಲ್ಲಿದ್ದು, ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀ ಮಹದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಎಳೆಯನ್ನು ಮೂಲವಾಗಿಟ್ಟುಕೊಂಡು ಅದರ ಸುತ್ತ ಹೆಣೆಯಲಾದ ಕಥಾಹಂದರವೇ ‘ಹೊಂದಿಸಿ ಬರೆಯಿರಿ’ ಸಿನಿಮಾ. ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಕಥೆಯಿದೆ. ಭಾವನಾತ್ಮಕ ಜರ್ನಿಯೂ ಇದೆ. ಈಗಾಗಲೇ ಚಿತ್ರದ ಸ್ಯಾಂಪಲ್ ಗಳ ಮೂಲಕ ಗಮನ ಸೆಳೆದಿರುವ ಈ ಚಿತ್ರ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು ನವೆಂಬರ್ 18ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಲು ಡೇಟ್ ಕನ್ಫರ್ಮ್ ಮಾಡಿದೆ ಚಿತ್ರತಂಡ.

ಚಿತ್ರದಲ್ಲಿ ಎಂಟು ಹಾಡುಗಳಿದ್ದು ಈಗಾಗಲೇ ಒಂದು ಸಾಂಗ್ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಕ್ಟೋಬರ್ ನಲ್ಲಿ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ನಿರ್ದೇಶಕ ಜಗನ್ನಾಥ್ ಗಿದು ಮೊದಲ ಸಿನಿಮಾ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ತಾವೇ ಮಾಡಿದ್ದಾರೆ.

ಶಾಂತಿ ಸಾಗರ್ ಹೆಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಟಗರು ಖ್ಯಾತಿಯ ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ಜಗನ್ನಾಥ್ ಮೂವರ ಸಂಭಾಷಣೆ ಚಿತ್ರಕ್ಕಿದೆ. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್ , ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

error: Content is protected !!