ಕನ್ನಡದಲ್ಲೊಂದು ಜೈ ಭೀಮ್ ರೀತಿಯ ಕಥೆ! ಪಾಲಾರ್ ಎಂಬ ದಲಿತರ ಮೇಲಿನ ದೌರ್ಜನ್ಯ ಕುರಿತ ಚಿತ್ರ…

‌‌‌‌‌ ಯುವ ನಿರ್ದೇಶಕ ಜೀವಾ ನವೀನ್ ಅವರು ಕನ್ನಡದಲ್ಲೊಂದು ಜೈ ಭೀಮ್, ಅಸುರನ್, ಕರ್ನನ್, ನಾರಪ್ಪ ರೀತಿಯ ಸಿನೆಮಾ ನಿರ್ದೇಶನ ಮಾಡಿದ್ದಾರೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹೋರಾಡುವ ಕಥಾಹಂದರ ಇಟ್ಟುಕೊಂಡು ಪಾಲಾರ್ ಸಿನೆಮಾಗೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಜೀವಾ ನವೀನ್ ” ಅವಿಭಜಿತ ಕೋಲಾರ ಜಿಲ್ಲೆ ಮತ್ತು ದೇವನಹಳ್ಳಿ ಭಾಗದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಅದೇ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ ಕಥೆ, ತಮಗೂ ಬದುಕಲು ಹಕ್ಕಿದೆ ಎಂದು ತೋರಿಸಿದ ದಲಿತರ ಹೋರಾಟದ ಕಥನ ಎಂದು ಹೇಳಿದರು.

ತೆಲುಗಿನ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಕೋಲಾರ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಪಾಲಾರ್‌’ ತನ್ನ ವಿಶಿಷ್ಟ ಹೆಸರಿನ ಮೂಲಕ ಗಮನ ಸೆಳೆದಿದೆ. ನೀನಾಸಂನಲ್ಲಿ ತರಬೇತಿ ಪಡೆದಿರುವ ಉಮಾ ಜೊತೆ ನಾಯಕನಾಗಿ ರಾಷ್ಟ್ರೀಯ ನಾಟಕ ಶಾಲೆಯ ತಿಲಕ್ ರಾಜ್ ಬಣ್ಣ ಹಚ್ಚಿದ್ದಾರೆ.

ಜೊತೆಗೆ ಈ ಸಿನಿಮಾದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಆಸಿಫ್ ರೆಹಾನ್, ಅವರ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನವಿದೆ. ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ 4 ಹಾಡುಗಳನ್ನು ರಚಿಸಿದ್ದಾರೆ. ಸುಬ್ರಮಣ್ಯ ಆಚಾರ್ಯ ಅವರ ಸಂಗೀತವಿದ್ದು, ಶ್ವೇತಾ ದೇವನಹಳ್ಳಿ, ಸುಪ್ರೀತ್ ಪಲ್ಗುಣ, ಸುಬ್ರಮಣ್ಯ ಆಚಾರ್ಯ ಜೊತೆಗೆ ಉಮಾ ವೈ ಜಿ ಕೋಲಾರ ಹಾಡುಗಳಿಗೆ ದನಿಯಾಗಿದ್ದಾರೆ.

ಪಾಲಾರ್ ಟೈಟಲ್‌ನ ವಿಶೇಷತೆಯನ್ನು ವಿವರಿಸಿದ ನಿರ್ದೇಶಕರು, “ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್‌ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿಯುತ್ತದೆ. ಆ ನಂತರ ಆಂದ್ರಪ್ರದೇಶ, ತಮಿಳು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ಈ ನದಿ ಭೂಮಿಯ ಒಳಗಡೆ ಇದ್ದಾಗ ಬಿಸಿಯಾಗಿರುತ್ತದೆ. ಇದೇರೀತಿಯ ಕುದಿತ ದಲಿತರ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬಂದು, ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ಪಾಲಾರ್‌ ಚಿತ್ರದ ಕಥೆ. ಪಾಲಾರ್ ನದಿಗೂ ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಅದನ್ನು ಬಳಸಿದ್ದೇವೆ. ಅಲ್ಲದೆ ಪಾಲಾರ್‌ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಮ್ಮ ಕಥೆ ನಡೆಯುತ್ತದೆ” ಎಂದು ವಿವರಿಸಿದರು.

ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು ಸದ್ಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ.
ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್ ಕುಮಾರ್ ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸದ್ಯದಲ್ಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ, ನವಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

Related Posts

error: Content is protected !!