ಅಂತಾರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಅವರು ಮೊಟ್ಟ ಮೊದಲ ಬಾರಿಗೆ “ಹಂಟರ್” ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಬೀರ್ ಬೇಡಿ ಅಲ್ಲಿ ಜೇಮ್ಸ್ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ನಾಮರೊಂದಿಗೆ ಅಭಿನಯಿಸಿದ್ದಾರೆ ಕೂಡ.
ಇದೀಗ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ರವರು ನಮ್ಮ ಭಾಷೆಯ ಚಿತ್ರಕ್ಕೂ ಅವರನ್ನು ಪರಿಚಯಿಸಿರುವುದು ಚಿತ್ರದ ಕುತೂಹಲ ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಮಾದರಿಯ ಈ ಸಿನಿಮಾದಲ್ಲಿ ನಿರಂಜನ್ ಮತ್ತು ಸೌಮ್ಯ ಮೆನನ್ ನಾಯಕ-ನಾಯಕಿಯರಾಗಿದ್ದು ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಯುರೋಪ್ ನಾದ್ಯಂತ ಧೂಳೆಬ್ಬಿಸಿದ್ದ ನಂಬರ್ 1 ಟಿವಿ ಸೀರಿಸ್ “ಸಂದೋಕನ್” ನಲ್ಲಿ ನಟಿಸಿದ್ದ ಬೇಡಿಯವರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಇಟೆಲಿಯ ವೆನಿಸ್ ನಲ್ಲಿ “Life time achievement award” ಬಂದ ನಂತರ, ಇದೇ ಮೊದಲ ಬಾರಿಗೆ ಚಿತ್ರ ವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅದೂ ಕನ್ನಡ ಭಾಷೆಯ ಚಿತ್ರ ಎಂಬುದು ವಿಶೇಷ.
ಇದಲ್ಲದೆ ಕಬೀರ್ ಬೇಡಿಯವರು ತ್ರಿವಿಕ್ರಮ ಸಾಪಲ್ಯರವರ ಮತ್ತೊಂದು ಚಿತ್ರದಲ್ಲೂ ಅಭಿನಯಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಪಿರಿಯಾಡಿಕ್ ಸಿನಿಮಾದಲ್ಲಿ ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿದ್ದು, ಕನ್ನಡದ ಖ್ಯಾತ ಹಿರಿಯ ನಟಿಯರಾದ ಶ್ರುತಿ ಹಾಗೂ ಭವ್ಯ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಒಟ್ಟಿನಲ್ಲಿ ತ್ರಿವಿಕ್ರಮ ರವರು ಎರಡು ಸಿನಿಮಾಗಳನ್ನು ಜಂಟಿಯಾಗಿ ಚಿತ್ರೀಕರಿಸಿ, ಅದೆರಡರಲ್ಲೂ ಕಬೀರ್ ಬೇಡಿಯಂತಹ ವಿಶ್ವದ ಪ್ರಖ್ಯಾತ ನಟನನ್ನು ಕರೆತಂದು ಚಿತ್ರರಂಗದಲ್ಲಿ ಹೊಸ ಸಂಚಲನ ಸ್ರಷ್ಟಿಸಿರುತ್ತಾರೆ. ಅವರೊಬ್ಬ ದಿಟ್ಟ ನಿರ್ಮಾಪಕ ಎನ್ನುವುವುದಕ್ಕೆ ಇದು ಸಾಕ್ಷಿ.