Categories
ಸಿನಿ ಸುದ್ದಿ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಅವಮಾನ; ‘ಅಗ್ರಜ’ ಸೆಟ್ ನಲ್ಲಿ ಆನಂದ್ ಭವಿಷ್ಯ ನಿರ್ಧಾರ ಜಗ್ಗೇಶ್ ನುಡಿದ ಮಾತು ನಿಜವಾಯ್ತು !

ಸಂತೋಷ್ ಆನಂದ್ ರಾಮ್ ಇವತ್ತು ಸ್ಯಾಂಡಲ್ ವುಡ್ನ ಸ್ಟಾರ್ ಡೈರೆಕ್ಟರ್. ಸೌತ್ ಸಿನಿಮಾ ಇಂಡಸ್ಟ್ರಿ ತಿರುಗಿ ನೋಡುವಂತಹ ಸಿನಿಮಾ ಕೊಟ್ಟಿದ್ದಾರೆ. ಗಂಧದಗುಡಿಯ ಇಬ್ಬರು ಸ್ಟಾರ್ ನಟರಿಗೆ ಬಿಗ್ ಬ್ರೇಕ್ ಕೊಟ್ಟಿದ್ದಾರೆ. ತಮ್ಮ ಸಿನಿಕರಿಯರ್ ನ ಮೈಲೇಜ್ ಹೆಚ್ಚಿಸಿಕೊಂಡಿದ್ದಾರೆ. ಯುವನಟರಿಂದ ಹಿಡಿದು ಸ್ಟಾರ್ ನಟರು ಕೂಡ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಅಭಿನಯಿಸೋಕೆ ಕಾತರಿಸುತ್ತಿದ್ದಾರೆ. ಇಂತಿಪ್ಪ ಜನಪ್ರಿಯ ಹಾಗೂ ಬಹುಬೇಡಿಕೆಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭಾರೀ ಅವಮಾನ ಎದುರಿಸಿದ್ದಾರೆ. ಅವತ್ತು ಸ್ಟಾರ್ ನಿರ್ದೇಶಕರೊಬ್ಬರಿಂದ ಬಾಯಿಗೆ ಬಂದ ಹಾಗೇ ತೆಗಳಿಸಿಕೊಂಡ ಸಂತೋಷ್ ಆನಂದ್ ರಾಮ್ ಇವತ್ತು ಆ ನಿರ್ದೇಶಕರಿಗೆ ಸೆಡ್ಡು ಹೊಡೆಯುವ ರೇಂಜ್ಗೆ ಬೆಳೆದು ನಿಂತಿದ್ದಾರೆ.

ಅವಮಾನ- ಅಪಮಾನ- ನಿಂದನೆ-ನೋವು- ಕಷ್ಟ-ದುಃಖ- ಸೋಲು-ತುಳಿತ ಇದ್ಯಾವುದನ್ನು ನೋಡದೇ ಯಶಸ್ಸಿನ ಉತ್ತುಂಗಕ್ಕೇರುವುದಕ್ಕೆ ಸಾಧ್ಯವಿಲ್ಲ. ಗೆಲುವಿನ ಗದ್ದುಗೆ ಏರಿ ಗಹಗಹಿಸೋದಕ್ಕೆ ಅವಕಾಶ ಸಿಕ್ಕುವುದಿಲ್ಲ. ಒಂದ್ವೇಳೆ ಸಿಕ್ಕರೂ ಕೂಡ ಅದು ಅವರುಗಳ ಸಕ್ಸಸ್ ಆಗಿರುವುದಿಲ್ಲ‌ ಬದಲಾಗಿ ಗಾಡ್ ಫಾದರ್ ಗಳ ಯಶಸ್ಸಾಗಿರುತ್ತೆ. ಯಾಕಂದ್ರೆ, ಇವರುಗಳು ಬೆನ್ನೆಲುಬಾಗಿ ನಿಂತಿದ್ದರಿಂದಲೇ ಅವಮಾನ ಎದುರಿಸದೇ ಕೆಲವರು ಮೇಲಕ್ಕೇರುತ್ತಾರೆ ಬಿಡಿ. ಅವರನ್ನು ಪಕ್ಕಕಿಡೋಣ ನಾವು ಮಾತನಾಡ್ತಿರುವುದು ಕಷ್ಟಜೀವಿಗಳ ಬಗ್ಗೆ, ಹೋರಾಡಿ ಗೆದ್ದವರ ಬಗ್ಗೆ.

ಸಂತೋಷ್ ಆನಂದ್ ರಾಮ್ ಚಂದನವನದ ಸ್ಟಾರ್ ಡೈರೆಕ್ಟರ್. ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ನಿರ್ದೇಶಕ. ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಗೆ ಬಿಗ್ ಬ್ರೇಕ್ ಕೊಟ್ಟಂತಹ ಚಿತ್ರಬ್ರಹ್ಮ. ಯುವನಿರ್ದೇಶಕನನ್ನು ನಂಬಿ ಅವಕಾಶ ಕೊಟ್ಟ ಆ ಇಬ್ಬರು ಸ್ಟಾರ್ ಗಳು ಸಂತೋಷ್ ಆನಂದ್ ರಾಮ್ ಪಾಲಿಗೆ ರಿಯಲ್ ಗಾಡ್ ಫಾದರ್ ಗಳು. ಅಪಾರವಾದ ಪ್ರತಿಭೆ, ಸಿನಿಮಾನ ಪ್ರೀತ್ಸೋ ರೀತಿಗೆ ರಾಕಿ ಹಾಗೂ ಅಪ್ಪು ಇಬ್ಬರು ಕ್ಲೀನ್ ಬೋಲ್ಡ್. ಹೀಗಾಗಿಯೇ, ಸಂತೋಷ್ ಆನಂದ್ ರಾಮ್ ಗೆ ಕಾಲ್ ಶೀಟ್ ಕೊಟ್ಟರು. ಇಬ್ಬರು ಸ್ಟಾರ್ ನಟರುಗಳು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಆನಂದ್ ರಾಮ್ ಉಳಿಸಿಕೊಂಡರು. ಇದೆಲ್ಲಾ ನಿಮಗೆ ಗೊತ್ತಿರುವ ವಿಚಾರವೇ. ಆದರೆ, ಸಂತೋಷ್ ಆನಂದ್ ರಾಮ್ ಗೆ ಸೆಟ್ನಲ್ಲಿ ಅವಮಾನ ಮಾಡಿ, ಮನಬಂದಂತೆ ಮಾತನಾಡಿ ನಿಂದಿಸುತ್ತಿದ್ದ ಆ ನಿರ್ದೇಶಕರ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಜಗ್ಗೇಶ್ ಬಿಚ್ಚಿಟ್ಟಿದ್ದೇನು ಹೇಳ್ತೀವಿ‌ ನೋಡಿ.

ನವರಸನಾಯಕ ಜಗ್ಗೇಶ್ ಗೆ ಸಂತೋಷ್ ಆನಂದ್ ರಾಮ್ ಡೈರೆಕ್ಟ್ ಮಾಡ್ತಿರುವ ವಿಷ್ಯ ಈಗಾಗಲೇ ತಿಳಿದೇ ಇದೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೂಲಕ ಇಬ್ಬರು ಒಂದಾಗ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡ್ತಿದೆ. ಈ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡದ ಜಗ್ಗಣ್ಣ, ಮಗ ಗುರುರಾಜ್ ನಟನೆಯ ಕಾಗೆಮೊಟ್ಟೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಂತೋಷ್ ಆನಂದ್ ರಾಮ್ ಎದುರಿಸಿದ ಅವಮಾನ ಹಾಗೂ ಬೆಳೆದುನಿಂತ ಪರಿಯ ಬಗ್ಗೆ ಹೆಮ್ಮೆಪಟ್ಟರು. ಸಂತೋಷ್ ಆನಂದ್ ರಾಮ್ ದೊಡ್ಡ ಮಟ್ಟಕ್ಕೆ ಎದ್ದುನಿಲ್ತಾನೆ ಎಂದು ಅವತ್ತೇ ನಾನು ಹೇಳಿದ್ದೆ, ನನ್ನ ಮಾತು ಸತ್ಯವಾಗಿದೆ ಎನ್ನುತ್ತಾ ಖುಷಿಪಟ್ಟರು.

ಹೌದು, ಜಗ್ಗಣ್ಣ ನುಡಿದ ಭವಿಷ್ಯ ನಿಜವಾಗಿದೆ. ಸಂತೋಷ್ ಆನಂದ್ ರಾಮ್ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ. ಇದಕ್ಕೆ ಕಾರಣ ಸಂತೋಷ್ ಮೆದುಳೊಳಗೆ ಉದುಗಿರುವ ಅಘಾದವಾದ ಪ್ರತಿಭೆ. ಆದರೆ, ಆ ಪ್ರತಿಭೆಯ ಬಗ್ಗೆ ಅರಿಯದೇ ‘ ಅಗ್ರಜ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕ ಮನಬಂದಂತೆ ಮಾತನಾಡುತ್ತಿದ್ದರಂತೆ. ಇದನ್ನು ಖುದ್ದು ಕೇಳಿಸಿಕೊಂಡು ಮರುಗಿದ ಜಗ್ಗಣ್ಣ, ಎಲ್ಲರ ಮುಂದೆ ಸಂತೋಷ್ ಆನಂದ್ ರಾಮ್ ನ ನಿಲ್ಲಿಸಿ ಮುಂದೊಂದು ದಿನ ಯಾವ್ ಮಟ್ಟಕ್ಕೆ ಬೆಳೆದು ನಿಲ್ತಾನೆ‌ ನೋಡ್ತಾಯಿರಿ ಎಂದಿದ್ದರಂತೆ.

ಮೊದಲು ಅವಮಾನ ನಂತರ ಸನ್ಮಾನ ಎನ್ನುವ ಮಾತಿದೆ. ಸೋತ ಜಾಗದಲ್ಲೇ ಗೆಲ್ಲಬೇಕು, ಬಿದ್ದ ಜಾಗದಲ್ಲೇ ಎದ್ದು ನಿಲ್ಲಬೇಕು ಎನ್ನುವ ವಾಕ್ಯವಿದೆ. ಅದರಂತೇ, ಅವಮಾನಗೊಂಡ ಜಾಗದಲ್ಲೇ ಸಂತೋಷ್ ಸನ್ಮಾನ ಮಾಡಿಸಿಕೊಳ್ತಿದ್ದಾರೆ. ಸವಾಲುಗಳಿಗೆ ಸೆಡ್ಡುಹೊಡೆದು ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಕಾಲೆಳೆದು ಹೀಯಾಳಿಸಿದವರು ಕೂಡ ಸಂತೋಷ್ ಆನಂದ್ ರಾಮ್ ಪೋಟೋನ ಡಿಪಿಯಾಗಿಸಿಕೊಳ್ಳುವಷ್ಟು

ಗೆಲ್ಲಬೇಕು ನೀ ನಿಲ್ಲೋವರೆಗೂ, ನಿಲ್ಲಬೇಕು ನೀ ಗೆಲ್ಲೋವರೆಗೂ, ಛಲದಿಂದ ನಿಲ್ಲು, ನಗುವಲ್ಲೇ ಕೊಲ್ಲು, ಅವಮಾನ ಮಾಡಿದವರ ಪವರ್ ಆಫ್ ಯೂತ್ ಅಂತ ಯುವರತ್ನ ಚಿತ್ರದ ಹಾಡೊಂದಕ್ಕೆ ಲಿರಿಕ್ಸ್ ಬರೆದಿದ್ದಾರೆ. ಆ ಲಿರಿಕ್ಸ್ ನಂತೆಯೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಕಿ ಚಿತ್ರಕ್ಕೆ ಲಿರಿಕ್ಸ್ ಬರೆಯೋ ಮೂಲಕ ಸಿನಿಕರಿಯರ್ ಶುರುಮಾಡಿದರು. ಭಜರಂಗಿ ಹರ್ಷ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಂಗಾರಿ ಚಿತ್ರಕ್ಕೆ ಡೈಲಾಗ್ ಬರೆದುಕೊಟ್ಟರು ಜೊತೆಗೆ ಡೈರೆಕ್ಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿದರು. ಅಗ್ರಜ ಹಾಗೂ ಗಜಕೇಸರಿಗೆ ಮತ್ತೆ ಡೈಲಾಗ್ ಬಾಣಬಿಟ್ಟರು. ಸಂತೋಷ್ ಸಾಹಿತ್ಯಕ್ಕೆ ಮತ್ತು ಸಂಭಾಷಣೆಗೆ ಇದ್ದ ಪವರ್ ನ ಗುರ್ತಿಸಿದ ರಾಕಿಭಾಯ್ ಅವಕಾಶ ಕೊಟ್ಟರು.

ಯಸ್, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಗೆ ಸಂತೋಷ್ ಡೈರೆಕ್ಟರ್ ಹ್ಯಾಟ್ ತೊಟ್ಟರು. ಮೊದಲ ಪ್ರಯತ್ನದಲ್ಲೇ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು. ರಾಕಿಂಗ್ ಜೋಡಿಗೆ ಬಿಗ್ ಬ್ರೇಕ್ ಸಿಕ್ಕಂತೆ ಸಂತೋಷ್ ಕರಿಯರ್ ನೇ ಚೇಂಜ್ ಮಾಡ್ತು. ಅಲ್ಲಿಂದ, ದೊಡ್ಮನೆ ರಾಜಕುಮಾರನಿಗೆ ಆಕ್ಷನ್ ಕಟ್ ಹೇಳಿ ಗೆಲುವಿನ ಕೇಕೆ ಹಾಕಿದರು. ಯುವರತ್ನ ಚಿತ್ರದ ಮೂಲಕ ಗಡಿದಾಟಿದರು. ಈಗ ಮತ್ತೊಮ್ಮೆ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುವ ಚಾನ್ಸ್ ಸಿಕ್ಕಿದೆ. ಅದಕ್ಕೂ ಮುನ್ನನವರಸನಾಯಕನನ್ನು ನಿರ್ದೇಶನ ಮಾಡಲಿದ್ದಾರೆ.ಒಟ್ನಲ್ಲಿ ಸಂತೋಷ್ ಆನಂದವಾಗಿದ್ದಾರೆ. ವೃತ್ತಿಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂತೋಷ‌ ಕಂಡಿರುವ ಆನಂದ್ ರಾಮ್, ಗಡಿದಾಟಿ ಘರ್ಜಿಸಲಿ, ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಹೊರಹೊಮ್ಮಲಿ ಎನ್ನುವುದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ಸಿನಿಲಹರಿ

Categories
ಸಿನಿ ಸುದ್ದಿ

ಒಡೆಯನ ಶಪಥದ ಕಥನವಿದು;ಕೊಟ್ಟ ಮಾತಿಗೆ ಬದ್ದರಾಗಿದ್ದರು ದಾಸ ! ಅನ್ನದಾತನಿಗೋಸ್ಕರ ಸಾರಥಿ ಮಾಡಿದ್ದೇನು ಗೊತ್ತಾ ?

ಮಾತ್- ಯಾರ್ ಬೇಕಾದರೆ ಕೊಡಬಹುದು, ಹೇಳಿಕೆ ಯಾರ್ ಬೇಕಾದರೂ ಕೊಡಬಹುದು. ಆದರೆ, ಕೊಟ್ಟ ಮಾತಿಗೆ ಬದ್ದರಾಗಿರೋರು, ನೀಡಿದ ಹೇಳಿಕೆಯಂತೆ ನಡೆದುಕೊಳ್ಳುವವರು ಕೆಲವೇ ಕೆಲವು ಮಂದಿ ಮಾತ್ರ. ಆ ಕೆಲವೇ ಕೆಲವರಲ್ಲಿ ಮೊದಲ ಸಾಲಿನಲ್ಲಿ ಚಾಲೆಂಜಿಂಗ್‌ಸ್ಟಾರ್ ದರ್ಶನ್ ನಿಲ್ತಾರೆ ಅಂದ್ರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಈಗ ಯಾಕ್ ಈ ಮಾತು ಅಂತೀರಾ ಅದಕ್ಕೆ ಕಾರಣವಿದೆ. ಸ್ಯಾಂಡಲ್‌ವುಡ್ ಯಜಮಾನ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಒಂದು ತೀರ್ಮಾನಕ್ಕೆ ಬಂದರು. ಆದರೆ, ತಮ್ಮ ನಿರ್ಧಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅದ್ಹೇಗೋ ಗೊತ್ತಿಲ್ಲ ಗಾಂಧಿನಗರಕ್ಕೆ ವಿಷ್ಯ ಗೊತ್ತಾಯ್ತು, ರ‍್ತುಂಬಾ ಸುದ್ದಿಯೂ ಆಯ್ತು. ಆ ಸುದ್ದಿಗೆ ಹೀಗೊಂದು ಬೆಲೆಬಂದಿದೆ. ಕಟೌಟ್‌ಗೆ ಬೆಲೆತಂದುಕೊಟ್ಟ ದಚ್ಚು ನಡೆ-ನುಡಿಯ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಹಾಗಾದ್ರೆ, ದಾಸನ ಆ ನಿರ್ಧಾರ ಯಾವುದು? ಅದ್ಯಾವ ಹೇಳಿಕೆಗೆ ಅವರು ಬದ್ದರಾಗಿದ್ದರು? ಒಡೆಯನ ಶಪಥದ ಕಥನದ ಜೊತೆಗೆ ಕಣಕ್ಕಿಳಿಯೋ ಕಹಾನಿಯ ಕಿಕ್‌ಸ್ಟಾರ್ಟ್ ಸ್ಟೋರಿ ಇಲ್ಲಿದೆ.

ಇದು ಕಲಿಯುಗ ಕಣ್ರೀ, ಕೊಟ್ಟ ಮಾತಿಗೆ ತಲೆಬಾಗುವವರಿಗಿಂತ ತಲೆ ಅಲ್ಲಾಡಿಸುವವರೇ ಹೆಚ್ಚು. ತಾವುಗಳು ಕೊಟ್ಟ ಸ್ಟೇಟ್‌ಮೆಂಟ್ನೇ ನಂದಲ್ಲ, ಅದು ಹಂಗಲ್ಲ, ಹಿಂಗೆ ಅಂತ ಕ್ಲ್ಯಾರಿಟಿ ಕೊಡೋರೇ ಶ್ಯಾಣೆಮಂದಿಯಿದ್ದಾರೆ ಆ ಕಥೆ ಇಲ್ಲಿ ಬೇಡ. ಸದ್ಯಕ್ಕೆ, ಕೊಟ್ಟ ಮಾತಿಗೆ ಬದ್ದರಾಗಿರುವ ಚಕ್ರವರ್ತಿಯ ಹೆಮ್ಮೆಯ ಕಥೆ ನೋಡೋಣ. ಗಂಧದಗುಡಿಯ ಯಜಮಾನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ದಾಸ ದರ್ಶನ್ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಇದನ್ನ ಬರೀ ತೀರ್ಮಾನ ಅನ್ನೋಕಾಗಲ್ಲ. ಇದು ದಾಸನ ಶಪಥ ಅಂದ್ರೆ ಅತಿಶಯೋಕ್ತಿ ಆಗಲ್ಲ.

ಚೀನಿ ಕ್ರಿಮಿ ಕೊರೊನಾದಿಂದ ಭೂಮಂಡಲ ನಡುಗಿದ್ದು, ಒಂದು ರೀತಿ ನರಕ ಅನುಭವಿಸಿದ್ದು ನಿಮ್ಮೆಲ್ಲರಿಗೂ ತಿಳಿದೇಯಿದೆ. ಇದಕ್ಕೆ ಚಿತ್ರೋದ್ಯಮವೂ ಹೊರತಾಗಿಲ್ಲ. ಕೊರೊನಾ ರಣಕೇಕೆಗೆ ಭೂಮಂಡಲ ಹೇಗೇ ನಡುಗಿತೋ, ಹಾಗೆಯೇ ಬಣ್ಣದ ಲೋಕವೂ ಶೇಕ್ ಆಯ್ತು. ಚಿತ್ರಮಂದಿರಗಳು ಮುಚ್ಚಿದವು, ಬೆಳ್ಳಿಪರದೆಗಳು ಬಣ್ಣ ಕಳೆದುಕೊಂಡವು, ಕಾರ್ಮಿಕರು ಕಣ್ಣೀರಾಕಿದರು, ಥಿಯೇಟರ್ ಮಾಲೀಕರು-ಪ್ರದರ್ಶಕರು-ವಿತರಕರು ಕಂಗಾಲಾದರು, ನಿರ್ಮಾಪಕರು ಆಕಾಶ ನೋಡಿದರು, ಕಲಾವಿದರು ಆತಂಕಕ್ಕೆ ಜಾರಿದರು. ಹೀಗೆ, ಸಿನಿಮಾವನ್ನೇ ನಂಬಿ ಬದುಕುತ್ತಿದ್ದವರು ಅಕ್ಷರಶಃ ಚಿಂತಾಕ್ರಾಂತರಾದರು. ಎರೆಡೆರಡು ಭಾರಿ ಕರುನಾಡು ಲಾಕ್ ಆಗಿ, ಅನ್‌ಲಾಕ್ ಆಯ್ತು. ಸರ್ಕಾರ ಒಂದಿಷ್ಟು ಸಡಿಲಿಕೆ ನೀಡ್ತು. ಮುನ್ನೆಚರಿಕೆ ಕ್ರಮಗಳೊಂದಿಗೆ ಚಿತ್ರೀಕರಣ ಮಾಡ್ಬೋದು, ಥಿಯೇಟರ್ ಓಪನ್ ಮಾಡ್ಕೊಳ್ಳಿ ಅಂತ ಅವಕಾಶ ಕೊಡ್ತು. ಈ ಹೊತ್ತಲ್ಲಿ ಕೆಲವು ಸ್ಟಾರ್ಸ್ ಗಳು ಶೂಟಿಂಗ್ ಅಖಾಡಕ್ಕೆ ಧುಮ್ಕಿದರು. ಇನ್ನೂ ಕೆಲವರು ತಮ್ಮ ತಮ್ಮ ಸಿನಿಮಾನ ರಿಲೀಸ್ ಕೂಡ ಮಾಡಿಕೊಂಡರು. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಸೈಲೆಂಟಾಗಿ ಉಳಿದುಬಿಟ್ಟರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯದೇ ಇದ್ದಿದಕ್ಕೆ ಕಾರಣ ಚೀನಿ ಕ್ರಿಮಿ ಕೊರೊನಾ ಬಗೆಗಿನ ಆತಂಕವಲ್ಲ. ಬದಲಾಗಿ ಅನ್ನದಾತರ ಮೇಲಿರುವ ಕಾಳಜಿ. ಯಸ್, ಒಂದರ-ನಂತರ ಒಂದು ಸಿನಿಮಾ ಒಪ್ಪಿಕೊಳ್ಳಬಹುದಾಗಿತ್ತು, ಡೇ ಅಂಡ್ ನೈಟ್ ಶೂಟಿಂಗ್ ಮಾಡ್ಬೋದಾಗಿತ್ತು, ಎರಡ್ಮೂರು ತಿಂಗಳಲ್ಲಿ ಡಬ್ಬಿಂಗ್ ಮುಗಿಸಿ ಥಿಯೇಟರ್‌ಗೆ ರ‍್ಬೋದಾಗಿತ್ತು. ಆದರೆ, ಬರೋಬ್ಬರಿ ಎರಡು ವರ್ಷ ಕೊರೊನಾ ಕೊಟ್ಟ ಹೊಡೆತದಿಂದ ಅನ್ನದಾತರು ಚೇತರಿಸಿಕೊಂಡಿಲ್ಲದ ಕಾರಣಕ್ಕೆ, ಕೇವಲ ೫೦ ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಪರಿಸ್ಥಿತಿ ಇದ್ದ ಕಾರಣಕ್ಕೆ ಸ್ಯಾಂಡಲ್‌ವುಡ್ ಯಜಮಾನರು ಶಪಥಗೈದಿದ್ದರು. ಸರ್ಕಾರ ೧೦೦ ಪರ್ಸೆಂಟ್ ಅಕ್ಯೂಪೆನ್ಸಿ ಕೊಡುವ ತನಕ ಬಣ್ಣ ಹಚ್ಚೋದು ಬೇಡ, ಶೂಟಿಂಗ್ ಹೋಗೋದು ಬೇಡವೆಂದು ನಿರ್ಧರಿಸಿದ್ದರು. ಅದರಂತೇ ಇಲ್ಲಿವರೆಗೂ ನಡೆದುಕೊಂಡಿದ್ದಾರೆ. ಹೊಸ ಸಿನಿಮಾ `ಕ್ರಾಂತಿ’ ಅನೌನ್ಸ್ ಆದರೂ ಕೂಡ ಶೂಟಿಂಗ್ ಹೋಗದೇ ಸರ್ಕಾರದ ಆದೇಶಕ್ಕಾಗಿ ಕಾದಿದ್ದರು. ಫೈನಲೀ, ಸೆ.೨೪ ರಂದು ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ ನೂರರಷ್ಟು ಆಸನಭರ್ತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಕ್ರಾಂತಿ'ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಯಜಮಾನ ಟೀಮ್ ಮತ್ತೆ ಒಂದಾಗಿರುವ ಮಹಾಮೂವೀ.ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ `ಕ್ರಾಂತಿ’ ಮಾಡೋದಕ್ಕೆ ನಿರ್ದೇಶಕ ವಿ. ಹರಿಕೃಷ್ಣ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಮೇಡಂ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ನಿಂದ ಅಖಾಡಕ್ಕೆ ಇಳಿಯೋದಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಇತ್ತ ದಚ್ಚು ಕೂಡ `೧೦೦’ ಅನುಮತಿಯಿಂದ ಖುಷಿಯಾಗಿದ್ದಾರೆ. ಸದಾ ಅನ್ನದಾತರ ನಟರಾಗಿರುವ ಸಾರಥಿ, ಆದಷ್ಟು ಬೇಗ ಮೈಕೊಡವಿಕೊಂಡು ಫೀಲ್ಡಿಗಿಳಿಯುತ್ತಾರೆ. ಒಡೆಯ ಅಖಾಡಕ್ಕೆ ಇಳಿಯೋದ್ರಿಂದ ಸಹಸ್ರಾರು ಮಂದಿಗೆ ಸಹಾಯವಾಗುತ್ತೆ. ದಿನಗೂಲಿ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗುತ್ತೆ, ಸಣ್ಣ-ಪುಟ್ಟ ಕಲಾವಿದರು, ಪೋಷಕ ನಟರು, ತಂತ್ರಜ್ಞರು ಸೇರಿದಂತೆ ಬಣ್ಣ ನಂಬಿಕೊಂಡವರಿಗೆ ಯಜಮಾನರಿಂದ ಸಿಕ್ಕಾಪಟ್ಟೆ ಹೆಲ್ಪ್ ಆಗುತ್ತೆ.

ಸರ್ಕಾರದ ಹಂಡ್ರೆಂಡ್ ಪರ್ಸೆಂಟ್ ಅಕ್ಯೂಪೆನ್ಸಿ ಆದೇಶದಿಂದ ಚಿತ್ರೋದ್ಯಮದಲ್ಲಿ ಸಂತೋಷ-ಸಂಭ್ರಮ ಮನೆಮಾಡಿದೆ. ಕೊರೊನಾ ಕೊಟ್ಟ ಹೊಡೆತದಿಂದ ಚೇತರಿಸಿಕೊಳ್ಳೋದಕ್ಕೆ ೧೦೦ರಷ್ಟು ಅನುಮತಿಯಿಂದ ಆನೆಬಲ ಸಿಕ್ಕಂತಾಗಿದೆ. ಇನ್ನೇನಿದ್ರೂ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ತೆರೆಗೆ ಅಪ್ಪಳಿಸುವ ಸಮಯ. ಬರೋಬ್ಬರಿ ೪೦೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಶಿವಣ್ಣ-ಸುದೀಪ್-ವಿಜಯ್ ನಟನೆಯ ಬಹುನಿರೀಕ್ಷೆಯ ಸಲಗ-ಕೋಟಿಗೊಬ್ಬ೩-ಭಜರಂಗಿ-೨ ಚಿತ್ರ ಅಖಾಡಕ್ಕೆ ಇಳಿಯುವ ಸಮಯ ಬಂದಾಗಿದೆ. ಕೊರೊನಾದಿಂದ ಉದ್ಯಮಕ್ಕಾದ ನಷ್ಟವನ್ನ ತುಂಬಿಕೊಡುವ ಜವಾಬ್ದಾರಿ ಸ್ಟಾರ್‌ನಟರುಗಳು ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರತಿಯೊಬ್ಬ ಕಲಾವಿದರ ಮೇಲಿದೆ. ಆ ಜವಬ್ದಾರಿಯನ್ನು ಎಲ್ಲರು ನಿಭಾಯಿಸ್ತಾರೆ, ಕನ್ನಡ ಚಿತ್ರರಂಗವನ್ನು ಉಳಿಸಿಬೆಳೆಸಿಕೊಂಡು ಹೋಗ್ತಾರೆ ಅದರಲ್ಲಿ ನೋ ಡೌಟ್ ಅಬೌಟ್ ಇಟ್.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘ಮಚ್ಚಾ ನಾನ್ ಇದಿನೋ’ ಎಂದಿದ್ದರು ಚಿರು; ಸೈಮಾ ಅಂಗಳದಲ್ಲಿ ಸಾಬೀತು- ಗೆಳೆಯ ಪನ್ನಗನಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್!

ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ ಹೀಗಂತ ಗೆಳೆಯ ಪನ್ನಗನಿಗೆ ಚಿರು ಸದಾ ಹೇಳ್ತಿದ್ದಂತಹ ಮಾತು. ಇದ್ದಷ್ಟು ದಿನ ಕೊಟ್ಟ ಮಾತಿಗೆ ಬದ್ದರಾಗಿದ್ದರು, ದೋಸ್ತಿಯ ಬೆನ್ನಿಗೆ ನಿಂತಿದ್ದರು. ಜೀವದ ಗೆಳೆಯ ಪನ್ನಗನ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆಹಾಕಿದರು. ಇದೀಗ ದೈಹಿಕವಾಗಿ ಇಲ್ಲದ ಕ್ಷಣಗಳಲ್ಲೂ ಸ್ನೇಹಿತ ಪನ್ನಗನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಯುವಸಾಮ್ರಾಟ್ ಚಿರಂಜೀವಿಯವರು. ಅದ್ಹೇಗೆ? ಎಂಥ? ಎಂಬುದರ ಕಥನ ಚಿಕ್ಕದಾಗಿ ನಿಮ್ಮ ಮುಂದೆ.

ಸ್ಯಾಂಡಲ್‌ವುಡ್‌ನ ಯುವಸಾಮ್ರಾಟ್ ಚಿರಂಜೀವಿ ಹಾಗೂ ಪನ್ನಗಭರಣ ಇಬ್ಬರು ಬೆಸ್ಟ್ ಫ್ರೆಂಡ್ಸ್. ಬರೀ ಬೆಸ್ಟ್ ಫ್ರೆಂಡ್ಸ್ ಅಲ್ಲ ಇಬ್ಬರು ಪ್ರಾಣಸ್ನೇಹಿತರು, ಜೀವದ ಗೆಳೆಯರು, ಕುಚುಕುಗಳು, ಚಡ್ಡಿದೋಸ್ತ್ ಗಳು ಎಲ್ಲಕ್ಕಿಂತ ಮಿಗಿಲಾಗಿ ಒಡಹುಟ್ಟಿದ ಅಣ್ಣತಮ್ಮಂದ್ರಿಗೆ ಸೆಡ್ಡು ಹೊಡೆದಂತೆ ಬಾಳಿ ತೋರಿಸಿದವರು. ರಕ್ತ ಹಂಚಿಕೊಂಡು ಹುಟ್ಟಿದವರಿಗಿಂತ ಮಿಗಿಲಾಗಿದ್ದ ಇವರಿಬ್ಬರನ್ನು ನೋಡಿ ಗೆಳೆತನ ಅಂದ್ರೆ ಹಿಂಗಿರಬೇಕು, ದೋಸ್ತಿ ಅಂದ್ರೆ ಹಿಂಗಿರಬೇಕು ಅಂತ ಮೆಚ್ಚುಗೆ ಪಡುತ್ತಿದ್ದರು. ಚಿರು ಹಾಗೂ ಪನ್ನಗ ಒಂದೇ ತಟ್ಟೆಯಲ್ಲಿ ತಿನ್ನುತ್ತಿದ್ದರು, ಕಷ್ಟ-ಸುಖ-ನೋವು-ನಲಿವಲ್ಲಿ ಜತೆಯಾಗಿದ್ದರು. ಸೋಲು-ಗೆಲುವು ಎಲ್ಲವನ್ನೂ ಕಂಡುಂಡು ಆಕಾಶದೆತ್ತರಕ್ಕೆ ಬೆಳೆದುನಿಲ್ಲೋಕೆ ಸಕಲ ತಯ್ಯಾರಿ ಮಾಡಿಕೊಂಡಿದ್ದರು. ವಾಯಪುತ್ರ ಚಿರು ಹಾಗೂ ಪ್ರಜ್ವಲ್ ಕಾಂಬಿನೇಷನ್‌ನಲ್ಲಿ ಮಹಾಸಿನಿಮಾ ಮಾಡೋದಕ್ಕೆ ನಿರ್ದೇಶಕ ಪನ್ನಗ ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಿರುವಾಗಲೇ ಹೇಳದೇ ಕೇಳದೇ ಚಿರು ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೆಹೋದರು.

ರಾಜಮಾರ್ತಾಂಡ ಚಿರು ದೈಹಿಕವಾಗಿ ಕಣ್ಮರೆಯಾಗಿರಬಹುದು, ಆದರೆ ಎಲ್ಲರ ಕಣ್ಣಲ್ಲೂ, ಮನಸ್ಸಲ್ಲೂ, ಹೃದಯದಲ್ಲೂ ಶಿವಾರ್ಜುನನಾಗಿ ಅಚ್ಚಳಿಯದೇ ಉಳಿದಿದ್ದಾರೆ. ಚಿರು ಕುಟುಂಬಸ್ತರು ಮಾತ್ರವಲ್ಲ ಕರುನಾಡ ಮಂದಿ ಚಿರು ಬಿಟ್ಟೋದ ನೆನಪುಗಳನ್ನು ಆಗಾಗ ಮೆಲುಕು ಹಾಕ್ತಾರೆ. ಈ ರೀತಿಯಾಗಿ ಎಲ್ಲರೂ ನೆನಪಿಸಿಕೊಳ್ಳುವಂತೆ ಬಾಳಿಬದುಕಿದ ವಾಯುಪುತ್ರ ಚಿರಂಜೀವಿ ಸರ್ಜಾ, ತನ್ನ ಜೀವದ ಗೆಳೆಯನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ದೈಹಿಕವಾಗಿ ಇಲ್ಲದ ಹೊತ್ತಲ್ಲೂ ಸ್ನೇಹಿತ ಪನ್ನಗಭರಣರ ಯಶಸ್ಸಿಗೆ ಬೆಂಗಾವಲಾಗಿ ನಿಂತಿದ್ದಾರೆ. ಬದುಕಿದ್ದಾಗ ಸದಾ ಹೇಳುತ್ತಿದ್ದ ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ'ಎನ್ನುವ ಮಾತಿಗೆ ಯುವಸಾಮ್ರಾಟ್ ಬದ್ದರಾಗಿದ್ದಾರೆ. ಸೈಮಾ ಅಂಗಳದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪನ್ನಗಭರಣ ಚಿರು ನನಗೆ ಲಕ್ಕಿಚಾರ್ಮ್’ ಅಂತ ಹೇಳಿಕೊಂಡಿದ್ದಾರೆ.

2021ರ ಅದ್ಧೂರಿ ಸೈಮಾಗೆ ತೆರೆಬಿದ್ದಿದೆ. ಕನ್ನಡದ ನಿರ್ದೇಶಕ ಪನ್ನಗಭರಣರ ‘ಫ್ರೆಂಚ್ ಬಿರಿಯಾನಿ’ ಚಿತ್ರದ ನಿರ್ದೇಶನಕ್ಕೆ 2020ರ ಸೈಮಾ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಕ್ಕಿದೆ. ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿ ಮುಡಿಗೇರಿಸಿಕೊಂಡ ಪನ್ನಗಭರಣ ಇಡೀ ಚಿತ್ರತಂಡಕ್ಕೆ ಅವಾರ್ಡ್‌ ಅನ್ನು ಡೆಡಿಕೇಟ್ ಮಾಡಿದರು. ನನ್ನ ಕನಸು ನನಸಾಯ್ತು ಅಂತ ಸಂತೋಷಪಟ್ಟು ಸಂಭ್ರಮಿಸಿದ ಪನ್ನಗಭರಣ ಜೀವದ ಗೆಳೆಯ ಹೊತ್ತುತಂದ ಅದೃಷ್ಟಕ್ಕೆ ಅಚ್ಚರಿಗೊಂಡರು ಜೊತೆಗೆ ಆಕಾಶಕ್ಕೆ ಕೈಮುಗಿದರು.

ಹೌದು, ಸೈಮಾ ಅಂಗಳಕ್ಕೆ ಹೋಗುವಾಗ ಪನ್ನಗ ಚಿರುನಾ ಜೊತೆಗೆ ಕರ್ಕೊಂಡು ಹೋಗಿದ್ದರು. ಅದ್ಹೇಗೆ ಅಂದರೆ ಪನ್ನಗ ತೊಟ್ಟಿದ್ದ ಬ್ಲೇಜರ್ ಕಾಲರ್ ನಲ್ಲಿ ಚಿರು ಕಂಗೊಳಿಸುತ್ತಿದ್ದರು. ಪನ್ನಗರ ಪತ್ನಿ ನಿಖಿತಾ ಪ್ರಿಯಾಭರಣಗೆ ಚಿರು ಹಾಗೂ ಪನ್ನಗರ ನಡುವಿದ್ದ ಪ್ರೀತಿ ಬಾಂದವ್ಯದ ಬಗ್ಗೆ ಚೆನ್ನಾಗಿಯೇ ಗೊತ್ತು ಹಾಗೇ ಹತ್ತಿರದಿಂದ ನೋಡಿದ್ದಾರೆ. ಹೀಗಾಗಿಯೇ, ಬ್ಲೇಜರ್ ನ ಕಾಲರ್ ನಲ್ಲಿ ಯುವಸಾಮ್ರಾಟ್ ಫೋಟೋ ಪ್ರಿಂಟ್ ಹಾಕಿಸಿದರು. ಇದನ್ನೆಲ್ಲಾ ನೋಡಿ ಸ್ವತಃ ಪನ್ನಗ ಕೂಡ ಅಚ್ಚರಿಗೊಂಡರು. ಸೈಮಾ ಅಂಗಳದಲ್ಲಿ ದೋಸ್ತಿ ಜೊತೆ ಧಗಧಗಿಸಿದರು. ಅಲ್ಲಿಂದ ವಾಪಾಸ್ ಬರುವಾಗ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದುಕೊಂಡು, ಕಾಲರ್ ಪಟ್ಟಿ ಎಗರಿಸುತ್ತಲೇ ಹೊರಬಂದರು ಪನ್ನಗ.

ಇದನ್ನೆಲ್ಲಾ ನೋಡಿದಾಗ ಪನ್ನಗ ಯಶಸ್ಸಿಗೆ ಚಿರು ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ಸುತ್ತೆ. ಸ್ವರ್ಗದಿಂದಲೇ ಗೆಳೆಯನ ಈ ಸೈಮಾ ಸಕ್ಸಸ್ ಗೆ ಆಶೀರ್ವಾದ ಮಾಡಿದ್ದಾರೆ ಎನಿಸುತ್ತೆ. ಎನಿವೇ, ನಿರ್ದೇಶಕ ಪನ್ನಗ ಚಿರುನಾ ಲಕ್ಕಿ ಚಾರ್ಮ್ ಎಂದು‌ ನಂಬಿದ್ದಾರೆ. ಅವರ ನಂಬಿಕೆಗೆ ಸೈಮಾ ಕೊಟ್ಟಿರುವ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಾಕ್ಷಿ . ಒಟ್ಟಿನಲ್ಲಿ ನಂಬಿಕೆಯೇ ದೇವರು, ಆ ದೇವರು ನಾವು ನಂಬಿದವರು ಅಲ್ಲವೇ.

ವಿಶಾಲಾಕ್ಷಿ , ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ರಿಯಲ್‌ಸ್ಟಾರ್‌ಗೆ ರಚ್ಚು ಮತ್ತೆ ಜೊತೆಯಾಗುತ್ತಾರಾ? ಇಬ್ಬರು ಕೂಡಿ`ನಾನು-ನೀನು’ ಕಥೆ ಹೇಳ್ತಾರಾ ?

ಸ್ಟಾರ್ ಸಿನಿಮಾಗಳು ಅನೌನ್ಸ್ ಆದಾಗ ಸಹಜವಾಗಿ ಹೀರೋಯಿನ್ ಯಾರಿರಬಹುದು ಅಂತ ಚರ್ಚೆಯಾಗುತ್ತೆ.ಅವರು ಬರ್ತಾರೆ, ಇವರು ಇರ್ತಾರೆ ಅಂತ ಗಾಸಿಪ್ ಟೋಪಿ ಹಾಕಿಕೊಂಡಿರುವ ಸುದ್ದಿ, ಇಡೀ ಗಾಂಧಿನಗರದ ತುಂಬೆಲ್ಲಾ ಡಂಕಣಕ ಡಂಕಣಕ ಅಂತ ನಾಲ್ಕು ಸ್ಟೆಪ್ ಹಾಕಿಕೊಂಡು ಓಡಾಡಿಕೊಂಡು ಬರುತ್ತೆ. ಆದರೆ, ಉಪ್ಪಿಯ ಹೊಸ ಚಿತ್ರ ಎನ್ನಲಾದ, ನಾಮದ ಸಿಂಬಲ್‌ನಿಂದಲೇ ಕರ್ನಾಟಕ ರೌಂಡ್ ಹೊಡೆಯುತ್ತಿರುವ ಸೂಪರ್‌ಸ್ಟಾರ್ ಚಿತ್ರಕ್ಕೆ, ಗುಳಿಕೆನ್ನೆ ಸುಂದರಿ ರಚಿತರಾಮ್ ಹೀರೋಯಿನ್ ಆಗ್ಬೋದು ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮೂಲಕ ಧೂಳೆಬ್ಬಿಸುತ್ತಿದೆ.

ರಿಯಲ್‌ಸ್ಟಾರ್ ಹೊಸ ಚಿತ್ರಕ್ಕೆ ರಚ್ಚುನೇ ಹೀರೋಯಿನ್ನ್ ಎನ್ನುವುದಕ್ಕೆ ಏಕೈಕ ಕಾರಣ ನಾಮದ ಸಿಂಬಲ್. ಬುದ್ದಿವಂತ ಉಪ್ಪಿಯವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡ್ತಾರೆ ಎನ್ನಲಾದ ಪೋಸ್ಟರ್ ಲೀಕ್ ಆಗಿದೆ. `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನ ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ, ರಚ್ಚು ಮೇಡಂ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗ್ತಿರೋದ್ರಿಂದ ಟ್ರೋಲ್‌ಹೈಕ್ಳು ಉಪ್ಪಿದಾದನ ಮಹಾಮೂವೀಗೆ ಬುಲ್‌ಬುಲ್‌ಬೆಡಗಿ ಜೊತೆಯಾಗಬಹುದು ಅಂತ ಟ್ರೋಲ್ ಮಾಡ್ತಿದ್ದಾರೆ.

ಇತ್ತೀಚೆಗೆ ಡಿಂಪಲ್ ಬೆಡಗಿ ರಚಿತ ಮನೆದೇವರ ದರ್ಶನ ಪಡೆದಿದ್ದರು. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸನ್ನಿಧಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದ ರಚಿತಾ, ಹಣೆಗೆ ನಾಮ ಹಾಕಿಸಿಕೊಂಡು ಬಂದಿದ್ದರು. ಫೋಟೋ ಸಮೇತ ಸೋಷಿಯಲ್ ಪೇಜ್‌ಗೆ ಅಪ್‌ಲೋಡ್ ಮಾಡಿದ್ರು. ಅದೇ ಫೋಟೋನಾ ಇಟ್ಕೊಂಡು ಟ್ರೋಲ್ ಎಕ್ಸ್ ಪರ್ಟ್ ಗಳು ಈಗ ರಿಯಲ್‌ಸ್ಟಾರ್ ಅಪ್‌ಕಮ್ಮಿಂಗ್ ಡೈರೆಕ್ಷನ್ ಸಿನಿಮಾಗೆ ರಚ್ಚು ನಾಯಕಿಯಾಗ್ತಾರೆ ಅಂತ ಸುದ್ದಿ ಹಬ್ಬಿಸುತ್ತಿದ್ದಾರೆ. ಇತ್ತ, ಸೂಪರ್‌ರಂಗನ ಫ್ಯಾನ್ಸ್ ಟ್ರೋಲ್ ನಿಜ ಆಗಲಿ ಬಿಡಿ, ಮತ್ತೆ ನಮ್ಮ ಬಾಸ್ ಜೊತೆ ರಚ್ಚು ಕುಣಿಯಲಿ ಎನ್ನುತ್ತಿದ್ದಾರೆ.

ಈಗಾಗಲೇ ಉಪ್ಪಿ ಹಾಗೂ ರಚ್ಚು ಜೋಡಿ ಕಿಕ್ಕೇರಿಸಿದೆ. ಇವರಿಬ್ಬರ ಕೆಮಿಸ್ಟ್ರಿ ಎಕ್ಕಾಮಕ್ಕಾ ವರ್ಕೌಟ್ ಆಗಿದೆ. ಐ ಲವ್ ಯೂ' ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟ ಈ ಜೋಡಿಗೆ ಫ್ಯಾನ್ಸ್ ಮುತ್ತಿನಹಾರ ಹಾಕಿದ್ದರು.ಬಂಗಾರದಲ್ಲಿ ಬೊಂಬೆ ಮಾಡಿದ, ಆ ರಂಭೆಗಿಂತ ರಂಗು ನೀಡಿದ, ಭೂಮಿಗೆ ತಂದು ನಿನ್ನ ನಂಗೆ ನೀಡಿದ’. ಸೌಂದರ್ಯವೆಲ್ಲಾ ಒಟ್ಟುಗೂಡಿಸಿ, ಶೃಂಗಾರದಲ್ಲಿ ನಿನ್ನ ರೂಪಿಸಿ, ಆ ಬ್ರಹ್ಮ ಭಾರೀ ರಸಿಕ ನಿನ್ನ ಮಾಡಿದ.. ಹೀಗೆ ಬುಲ್‌ಬುಲ್ ಬ್ಯೂಟಿನಾ ಉಪ್ಪಿ ವರ್ಣಿಸುತ್ತಾ ಪಡ್ಡೆಹೈಕ್ಳಿಗೆ ನಶೆಯೇರಿಸಿದ್ದಲ್ಲದೇ, ಬಾಕ್ಸ್ಆಫೀಸ್ ಹೆಡ್‌ಆಫೀಸ್ನೇ ಶೇಕ್ ಶೇಕ್ ಮಾಡಿದ್ದರು. ಈಗ ಮತ್ತೆ ಇವರಿಬ್ಬರು ಒಂದಾಗಿ `ನಾನು-ನೀನು’ ಕಥೆ ಹೇಳಿದರೆ ಸುನಾಮಿ-ಸುಂಟರಗಾಳಿ ಎಲ್ಲಾ ಒಟ್ಟೊಟ್ಟಿಗೆ ಏಳುತ್ತೆ

ಸೂಪರ್‌ಸ್ಟಾರ್ ಉಪ್ಪಿ ಸಿನಿಮಾಗೆ ರಚಿತಾ ಜೊತೆಯಾಗುವ ಚಾನ್ಸನ್ ಕೊಂಚ ಕಮ್ಮಿನೇ. ಯಾಕಂದ್ರೆ, `ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರರ ಜೊತೆ ರಚಿತಾ ಮೇಡಂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಹಿಂದೆಂದೂ ಕಾಣದ ಹಸಿಬಿಸಿ ದೃಶ್ಯಗಳಲ್ಲಿ ಮಿಂದೆದ್ದ ಮೇಲೆ ನಾನು ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಾರದಿತ್ತು ಎಂದು ರಚಿತಾ ಬೇಸರಪಟ್ಟುಕೊಂಡಿದ್ದರು ಮಾತ್ರವಲ್ಲ ಕಣ್ಣೀರಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ ಮೇಡಂ ಆಕ್ಟ್ ಮಾಡಬೇಕಾದರೆ ಗೊತ್ತಿರಲಿಲ್ಲವಾ? ಉಪ್ಪಿ ಮೇಲೆ ಬ್ಲೇಮ್ ಮಾಡ್ತಾರಲ್ಲ ಇದು ಸರೀನಾ ಅಂತ ಕೊಂಚ ಗರಂ ಆಗಿದ್ದರು. ಹೀಗಾಗಿ, ದುಬೈ ಬಾಬುಗೆ ಜಗ್ಗುದಾದನ ಸುಂದರ ಜೊತೆಯಾಗೋದು ಡೌಟೇಯಾ.

ಹಾಗಾದ್ರೆ, ಉಪ್ಪಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ನಾಯಕಿ ಯಾರಾಗಬಹುದಾ? ಪ್ಯಾನ್ ಇಂಡಿಯಾ ಲೆವೆಲ್ ಪ್ರಾಜೆಕ್ಟ್ ಗೆ ಕೈಹಾಕಿರುವ ಸಿನಿಮಾಗೆ ಪರಭಾಷೆಯ ನಾಯಕಿ ಬರಬಹುದಾ ಅಥವಾ ಹೋಮ್‌ಮಿನಿಸ್ಟರ್ ಪ್ರಿಯಾಂಕ ಅವರೇ ಬಣ್ಣ ಹಚ್ಚಬಹುದಾ? ಈ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ‘ಪಂಗನಾಮದ'ಪೋಸ್ಟರ್‌ಗೆ ಬುದ್ದಿವಂತ ಇನ್ನೂ ಅಧಿಕೃತ ಮುದ್ರೆ ಹೊತ್ತಿಲ್ಲ.ಇನ್ನೆರಡು ದಿನದಲ್ಲಿ ಉಪ್ಪಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ.ಬಹುಷಃ ಅದೇ ದಿನ ಅದ್ಧೂರಿಯಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕಂಪ್ಲೀಟ್ ಅಪ್‌ಡೇಟ್ ಕೊಡಬಹುದು.ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ನಿರ್ಮಾಣದ ಜೊತೆಗೆ ಅವರೇ ನಾಯಕನಾಗುತ್ತಾರಾ ಅಥವಾ ಅಣ್ಣನ ಮಗ ನಿರಂಜನ್‌ಗೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಕೂತೂಹಲವೂ ಮೂಡಿದೆ.ಜಸ್ಟ್ ಒಂದೇ ಒಂದು ಸಿಂಬಲ್ ಇಷ್ಟೆಲ್ಲಾ ಕೌತುಕಕ್ಕೆ ಕಾರಣವಾಗಿದೆ.ದೇವನೊಬ್ಬ ನಾಮಹಲವು ಎನ್ನುವಂತೆ ಎರಡು ವೈಟ್ ಒಂದು ರೆಡ್ಡು ಇರುವ ಸಿಂಬಲ್’ ಹಲವು ಸುದ್ದಿಮಾಡುವಂತೆ ಮಾಡಿದೆ. ಎಲ್ಲದಕ್ಕೂ ೧೮ರಂದು ಬ್ರೇಕ್ ಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

`ಜನಪ್ರಿಯ ನಿರೂಪಕಿ’ ಕನ್ನಡಿಗರು ತೊಡಿಸಿದ ಕಿರೀಟ; ಧಕ್ಕೆ ತಂದಿಲ್ಲ-ತರಲ್ಲ; ಉಳಿಸಿಕೊಳ್ತಾರಾ ಅನುಶ್ರೀ ?

ಖ್ಯಾತ ನಿರೂಪಕಿ ಪಟ್ಟ ಅನುಶ್ರೀಗೆ ಸುಲಭಕ್ಕೆ ದಕ್ಕಿರುವುದಲ್ಲ. ಅನುಶ್ರೀ ಕೈಗೆ ಸಡನ್ನಾಗಿ ಮೈಕ್ ಸಿಕ್ಕಿಲ್ಲ. ಸಲೀಸಾಗಿ ಸ್ಟೇಜ್ ಹತ್ತುವ ಚಾನ್ಸ್ ಕೂಡ ದಕ್ಕಿಲ್ಲ. ಲಂಗ-ದಾವಣಿಯಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಲೆಹೆಂಗಾ ಹಾಕಿಕೊಂಡು ಶೋ ನಡೆಸುವುದಕ್ಕೆ, ಬಹುಬೇಡಿಕೆ ನಿರೂಪಕಿ ಪಟ್ಟಕ್ಕೇರಿ ರಾರಾಜಿಸ್ತಿರುವುದಕ್ಕೆ, ಆಕೆ ಪಟ್ಟ ಶ್ರಮ ಎಷ್ಟು ಎನ್ನುವುದು ಆಕೆಗಷ್ಟೇ ಗೊತ್ತು.

ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ಗೆ ಸಂಬಂಧಪಟ್ಟಂತೆ ಆಂಕರ್ ಅನುಶ್ರೀ ಹೆಸರು ಮತ್ತೆ ಕೇಳಿಬಂದಿದೆ. ಪ್ರಕರಣದ ಎ೨ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆಗಳನ್ನ ಕೊಟ್ಟಿದ್ದು, ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಹೀಗಾಗಿ, ಕಳೆದೊಂದು ವರ್ಷದ ಹಿಂದೆ ಕ್ಯಾಮೆರಾ ಮುಂದೆ ಅನುಶ್ರೀ ಕಣ್ಣೀರಿಟ್ಟ ದೃಶ್ಯಗಳು ಕಣ್ಮುಂದೆ ಬರುತ್ತಿವೆ. ಜೊತೆಗೆ ಕನ್ನಡಿಗರಿಗೆ ಅನುಶ್ರೀ ಪ್ರಮಾಣದ ರೀತಿಯಲ್ಲಿ ಕೊಟ್ಟಂತಹ ಮಾತುಗಳು ನೆನಪಿಗೆ ಬರುತ್ತಿವೆ. ಕನ್ನಡಿಗರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸ ಹಾಗೂ ನಂಬಿಕೆಯನ್ನ ಎಂದೆಂದಿಗೂ ಕಳೆದುಕೊಳ್ಳಲ್ಲ. ಯಾವುದೇ ಕಾರಣಕ್ಕೂ ಕನ್ನಡಿಗರು ಕೊಟ್ಟಿರುವ ಹೆಸರು ಹಾಗೂ ಕನ್ನಡಿಗರು ತೊಡಿಸಿದಂತಹ ಕಿರೀಟಕ್ಕೆ ಧಕ್ಕೆ ತಂದಿಲ್ಲ ಮತ್ತು ತರುವುದು ಇಲ್ಲ. ಈ ರೀತಿ ಕ್ಯಾಮೆರಾ ಮುಂದೆ ಲೈವ್ ಬಂದು ಹೇಳಿಕೊಂಡಿದ್ದರು ಆಂಕರ್ ಕಮ್ ನಟಿ ಅನುಶ್ರೀಯವರು

ಅನುಶ್ರೀ ಕೊಟ್ಟ ಮಾತಿಗೆ ಬದ್ದರಾಗಿದ್ದಾರಾ? ಬದ್ದರಾಗಿರುತ್ತಾರಾ? ಈ ಮಾತಿಗೆ ಹೌದು ಇರ್ತಾರೆ ಅಂತ ನಾವು ಹೇಳೋದಕ್ಕೆ ಆಗೋದಿಲ್ಲ. ಮಾತು ಯಾರೇ ಕೊಟ್ಟಿರಲಿ ಉಳಿಸಿಕೊಂಡು ಹೋದರೆ ಬೆಳೆಯುತ್ತಾರೆ ಇಲ್ಲವಾದಲ್ಲಿ ಕೆಳಕೆಳಕ್ಕೆ ಕುಸಿಯುತ್ತಾರೆ. ಅದೇನೇ ಇರಲಿ ಅನುಶ್ರೀ `ಜನಪ್ರಿಯ ನಿರೂಪಕಿ’ ಪಟ್ಟ ಹಾಗೂ ಕನ್ನಡಿಗರು ತೊಡಿಸಿದ ಕಿರೀಟವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗ್ಬೇಕು. ಅಷ್ಟಕ್ಕೂ, ಖ್ಯಾತ ನಿರೂಪಕಿ ಪಟ್ಟ ಅನುಶ್ರೀಗೆ ಸುಲಭಕ್ಕೆ ದಕ್ಕಿರುವುದಲ್ಲ. ನಮ್ಮ ಕರುನಾಡ ಮಂದಿ ಸುಮ್‌ಸುಮ್ಮನೇ ಮಂಗಳೂರು ಚೆಲುವೆಗೆ ಕಿರೀಟ ತೊಡಿಸಿಲ್ಲ. ಕನ್ನಡಿಗರು ಪ್ರೀತಿ ತರ‍್ಸೋದಕ್ಕೂ-ತಲೆಮೇಲೆ ಹೊತ್ತು ಮೆರೆಸುವುದಕ್ಕೂ ಕಾರಣಯಿದೆ, ಕಾರಣ ಎನ್ನುವುದಕ್ಕಿಂತ ಆಕೆಯ ಕಠಿಣ ಪರಿಶ್ರಮ-ಶ್ರದ್ದೆ-ಕೆಲಸದ ಮೇಲಿರುವ ಭಕ್ತಿ-ಮಾತುಗಾರಿಕೆ-ಸಾಧಿಸುವ ಹುಮ್ಮಸ್ಸು ಜೊತೆಗೆ ಕಲಾ ತಪ್ಪಸ್ಸು ಇವತ್ತು ಅನುಶ್ರೀಯವರನ್ನು ಬೇಡಿಕೆಯ ನಿರೂಪಕಿ ಸ್ಥಾನದಲ್ಲಿ ಕೂರಿಸಿದೆ. ನಟಿಯಾಗಿ ಬೆಳ್ಳಿತೆರೆಯನ್ನೂ ಬೆಳಗುವ ಅವಕಾಶವನ್ನು ಕೊಡಿಸಿದೆ.

ಅಂದ್ಹಾಗೇ, ಒಂದು ನೆನಪಿಡಬೇಕು ಅನುಶ್ರೀ ಕೈಗೆ ಸಡನ್ನಾಗಿ ಮೈಕ್ ಸಿಕ್ಕಿಲ್ಲ. ಸಲೀಸಾಗಿ ಸ್ಟೇಜ್ ಹತ್ತುವ ಚಾನ್ಸ್ ಕೂಡ ದಕ್ಕಿಲ್ಲ. ಲಂಗ-ದಾವಣಿಯಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಲೆಹೆಂಗಾ ಹಾಕಿಕೊಂಡು ಶೋ ನಡೆಸುವುದಕ್ಕೆ ಆಂಕರ್ ಅನುಶ್ರೀ ಪಟ್ಟ ಶ್ರಮ ಎಷ್ಟು ಎನ್ನುವುದು ಆಕೆಗಷ್ಟೇ ಗೊತ್ತು. ಬರಿಗೈನಲ್ಲಿ ಬೆಂಗಳೂರಿಗೆ ಬಂದು ಇವತ್ತು ಸ್ವಂತ ಮನೆಮಾಡಿಕೊಂಡಿರುವುದಕ್ಕಿಂತ ಬೆಲೆಕಟ್ಟಲಾಗದ ಜನರ ಮನದಲ್ಲಿ ಮನೆಮಾಡಿದ್ದಾರೆ. ಟೆಲಿ ಅಂತ್ಯಾಕ್ಷರಿಯಿಂದ ಶುರುವಾದ ಆಂಕರಿಂಗ್ ಜರ್ನಿ, ಜೀ ಕನ್ನಡದ ಹೆಮ್ಮೆಯ ಶೋಗಳಾದ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವರೆಗೂ ತಂದುನಿಲ್ಲಿಸಿದೆ. ಟಿವಿ ಲೋಕದಲ್ಲಿ ಮಾತ್ರವಲ್ಲ ಕರುನಾಡಿನ ಅಂಗಳದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಅನುಶ್ರೀಯೇ ಫಿಕ್ಸು. ಅಷ್ಟರ ಮಟ್ಟಿಗೆ ಅನುಶ್ರೀ ತಮ್ಮ ಛಾಪನ್ನ ಮೂಡಿಸಿದ್ದಾರೆ. ಬಹುಬೇಡಿಕೆಯ ನಿರೂಪಕಿಯಾಗಿ ಮುನ್ನುಗುತ್ತಿದ್ದಾರೆ. ಇಂತಹ ಹೊತ್ತಲ್ಲೇ ಅನುಶ್ರೀಗೆ ಡ್ರಗ್ಸ್ ಕಂಟಕ ಎದುರಾಗಿದೆ.

ಮಾದಕ ಲೋಕದ ಜೊತೆಗೆ ತನ್ನ ಹೆಸರು ತಳುಕು ಹಾಕಿಕೊಳ್ಳುತ್ತೆ ಅಂತ ಅನುಶ್ರೀ ಕನಸು-ಮನಸಲ್ಲೂ ಊಹಿಸಿಕೊಂಡಿರಲಿಲ್ಲ. ಕನ್ನಡಿಗರು ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಹರಳು ಉರಿದಂತೆ ಮಾತನಾಡುವ, ಮಾತಲ್ಲೇ ಮೋಡಿ ಮಾಡುವ ಚಿನಕುರಳಿ ಅನುಶ್ರೀಗೂ, ಡ್ರಗ್ಸ್ ಲೋಕಕ್ಕೂ ನಂಟಿದೆ ಅಂದರೆ ಅನುಶ್ರೀಗೆ ಮಾತ್ರವಲ್ಲ ಆಕೆಯನ್ನ ಕೈಹಿಡಿದು ನಡೆಸಿದವರಿಗೂ ಹಾಗೂ ಬೆಳೆಸಿದವರಿಗೂ ಅಚ್ಚರಿಯಾಗುತ್ತೆ. ಈಗ ಆಗಿರುವುದು ಅದೇ. ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಎ೨ ಆರೋಪಿಯಾಗಿರುವ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ ಎನ್ನಲಾದ ಹಾಗೂ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಪಟ್ಟಿಯನ್ನ ನೋಡಿ ಎಲ್ಲರೂ ಬೆಚ್ಚಿಬೆರಗಾಗಿದ್ದಾರೆ. ಈ ನಡುವೆ ಆರೋಪಿ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ನಲ್ಲಿ ಸುಳ್ಳು ಹೇಳಿಕೆ ದಾಖಲೆ ಮಾಡಲಾಗಿದೆ ಎಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡ್ತಿದ್ದಾರೆ.

ಹೌದು, ಡ್ರಗ್ಸ್ ಆರೋಪ ಎದುರಿಸುತ್ತಿರುವ ಕಿಶೋರ್ ಶೆಟ್ಟಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಅನುಶ್ರೀ ವಿರುದ್ದ ಹೇಳಿಕೆ ಕೊಟ್ಟಿದ್ದೇನೆ ಎನ್ನುವ ಸುದ್ದಿಯೇ ಸುಳ್ಳು. ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ, ಅವರೊಟ್ಟಿಗೆ ನಾನು ಸಂಪರ್ಕವೂ ಇಟ್ಟುಕೊಂಡಿಲ್ಲ. ಅಂದ್ಹಾಗೇ, ಅನುಶ್ರೀಯವರು ಸ್ಪರ್ಧೆ ಮಾಡಿದ್ದ `ಕುಣಿಯೋಣ ಬಾರಾ’ ಶೋಗೆ ಕೊರಿಯಾಗ್ರಫಿ ಮಾಡಿದ್ದು ನಿಜ. ರಿಹರ್ಸಲ್ ಮಾಡಿ ಲೇಟ್‌ನೈಟ್ ಮನೆಗೆ ಬರುತ್ತಿದ್ದೆವು ಆದರೆ ನಾವು ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀಯವರು ತುಂಬಾ ಕಷ್ಟಪಟ್ಟು ಮೇಲೆಬಂದಿದ್ದಾರೆ. ಅವರ ಮೇಲೆ ನನಗೆ ತುಂಬಾ ಗೌರವವಿದೆ. ನನ್ನ ಡ್ಯಾನ್ಸ್ ಕ್ಲಾಸ್‌ನ ಅವರೇ ಉದ್ಘಾಟನೆ ಮಾಡಿಕೊಟ್ಟಿದ್ದರು. ಫೇಮಸ್ಸ್ ಕೊರಿಯಾಗ್ರಫರ್ ಆಗ್ಬೇಕು ಎನ್ನುವ ಕನಸಿದೆ. ಆ ಕನಸಿನ ಸಾಕಾರಕ್ಕಾಗಿ ಎದುರುನೋಡ್ತಿದ್ದೇನೆ. ನನ್ನ ಹೆಸರು ಕೆಡಿಸೋದಕ್ಕೆ ಯಾರೋ ಈ ರೀತಿ ಮಾಡುತ್ತಿದ್ದಾರೆ. ನಾನು ಎರಡು ಭಾರಿ ಡ್ರಗ್ಸ್ ಪಡೆದಿದ್ದು ನಿಜ ಆದರೆ ಪೆಡ್ಲಿಂಗ್-ಗಿಡ್ಲಿಂಗ್ ಎಲ್ಲಾ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಮಂಗಳೂರು ಪೊಲೀಸರು ನೋಡಿದ್ರೆ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ಕೊಟ್ಟಿದ್ದಾರೆ ಅಂತ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇತ್ತ ಆರೋಪಿ ಸ್ತಾನದಲ್ಲಿರುವ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿರುವ ಸ್ಟೇಟ್‌ಮೆಂಟ್ ನಾನು ಕೊಟ್ಟಿಲ್ಲ ಅಂತಿದ್ದಾರೆ. ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಸದ್ಯಕ್ಕಂತೂ ಸರಿಯಾದ ಉತ್ತರವಿಲ್ಲದ
ಉತ್ತರವೇ ಕಣ್ಮುಂದೆ ರುದ್ರತಾಂಡವವಾಡ್ತಿದೆ. ಅಸಲಿ ಸತ್ಯ ಬೆಳಕಿಗೆ ಬರಬೇಕಿದೆ. ಅಲ್ಲಿವರೆಗೂ ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ನ್ಯಾಯದೇವತೆ ತರ ಕಾಯೋಣ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

`ಪುಷ್ಪ’ ಜೊತೆ ಡಿಜೆ ವರ್ಕೌಟ್; ಫಿಟ್ನೆಸ್ ಫ್ರೀಕ್ ಚಕ್ರವರ್ತಿ ಚಂದ್ರಚೂಡ್ !

ಡಿ.ಜೆ ಚಕ್ರವರ್ತಿಯವರ ಹೊಸ ಜಿಮ್ ಪಾರ್ಟ್ನರ್ ಇವರು. ಇವರ ಹೆಸರು ಪುಷ್ಪ. ಇತ್ತೀಚೆಗೆ ಚಕ್ರವರ್ತಿ ಚಂದ್ರಚೂಡ್ ಅವರು ಪುಷ್ಪ ಜೊತೆ ವರ್ಕೌಟ್ ಮಾಡಿದ್ದಾರೆ. ಮೈ ಬೆವರಿಳಿಸಿ, ಕೊಬ್ಬು ಕರಗಿಸಿ ಇರೋಬರೋ ಪ್ಯಾಕ್ಸೆಲ್ಲಾ ಬರಿಸಿಕೊಂಡಿದ್ದಾರೆ. ಡಿಜೆ ಪ್ಲಸ್ ಪುಷ್ಪ ವರ್ಕೌಟ್ ಕಥೆ ಇಲ್ಲಿದೆ ನೋಡಿ

ಚಕ್ರವರ್ತಿ ಚಂದ್ರಚೂಡ್ ಸಾಮಾಜಿಕ ಹೋರಾಟಗಾರರು, ಬರಹಗಾರರು, ಪತ್ರಕರ್ತರು ಕಮ್ ಬಿಗ್‌ಬಾಸ್ ಸೀಸನ್ ೮ರ ಪ್ರಬಲ ಸ್ಪರ್ಧಿ. ದೊಡ್ಮನೆಯಲ್ಲಿ ಟಫ್ ಕಾಂಪಿಟೇಷನ್ ಕೊಟ್ಟು ಟಾಪ್ ಫೈವ್ ವರೆಗೂ ಬಂದಿದ್ದರು. ಕೊನೆಗೆ ಕಿಚ್ಚನ ಅಕ್ಕ-ಪಕದಲ್ಲಿ ನಿಲ್ಲೋದಕ್ಕೆ ಆಗಲಿಲ್ಲ. ಬಿಗ್‌ಬಾಸ್ ವಿನ್ನರ್-ರನ್ನರ್ ಅಪ್ ಕಿರೀಟ ಗೆಲ್ಲದೇ ಇದ್ದರೆ ಏನಂತೆ? ಬಾದ್ ಷಾ ಬರ್ತ್ಡೇಗೆ ಸುದೀಪಿಯನ್ಸ್'ಸಾಂಗ್‌ನ ಗಿಫ್ಟ್ ಮಾಡಿ ಕಿಚ್ಚನ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು.ಮಾಣಿಕ್ಯನ ಹೆತ್ತವರು ಮಾತ್ರವಲ್ಲ ಅಭಿನಯ ಚಕ್ರವರ್ತಿಯೂ ಖುಷಿಪಡುವಂತೆ ಮತ್ತು ಹೆಮ್ಮೆಪಡುವಂತೆ ಮಾಡಿದರು.ಈಗ ಪುಷ್ಪ’ ಜೊತೆ ವರ್ಕೌಟ್ ಮಾಡಿ ಚಕ್ರವರ್ತಿಯವರು ಸೌಂಡ್ ಮಾಡ್ತಿದ್ದಾರೆ.

ಪುಷ್ಪ ಅಂದಾಕ್ಷಣ ಯಾವ್ ಪುಷ್ಪ? ಏನ್ ಸಮಾಚಾರ? ಎನ್ನುವ ಕೂತೂಹಲ ಹೆಚ್ಚುತ್ತೆ. ಆ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಬೇಕು ಅಂದರೆ ಚಕ್ರವರ್ತಿ ವರ್ಕೌಟ್ ವಿತ್ ಪುಷ್ಪ' ಕಥೆನಾ ಹೇಳಲೆಬೇಕು.ಚಕ್ರವರ್ತಿ ಚಂದ್ರಚೂಡ್ ಅವರು ಫಿಟ್ನೆಸ್ ಫ್ರೀಕ್. ಜಿಮ್ಮು-ವರ್ಕೌಟ್-ಡಯಟ್ ಅಂತ ಕಟ್ಟುನಿಟ್ಟಾಗಿ ಪಾಲಿಸುತ್ತಾ ಫಿಟ್ ಅಂಡ್ ಫೈನ್ ಆಗಿರೋದಕ್ಕೆ ಬಯಸ್ತಾರೆ.ಇತ್ತೀಚೆಗೆ ಜಿಮ್‌ನಲ್ಲಿ ಮೈ ಬೆವರಿಳಿಸೋದಕ್ಕೆಪುಷ್ಪ’ ಸಪೋರ್ಟ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ, ಆ ಪುಷ್ಪ ಹುಡುಗನೂ ಅಲ್ಲ…ಹುಡುಗಿನೂ ಅಲ್ಲ… ಆಂಟಿನೂ ಅಲ್ಲ.. ಅಂಕಲ್ಲು ಅಲ್ಲ.. ಹಾಗಾದ್ರೆ ಮತ್ಯಾರು ಅಂತೀರಾ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ ಸಿನಿಮಾ ಗುರು

ಯಸ್, ಚಕ್ರವರ್ತಿ ಚಂದ್ರಚೂಡ್ ಅವರು ಇತ್ತೀಚೆಗೆ ಜಿಮ್ ಮಾಡುವಾಗ ಪುಷ್ಪ' ಸಪೋರ್ಟ್ ತೆಗೆದುಕೊಂಡಿದ್ದಾರೆ.ಬೆಳಕನು ತಿಂತದೆ ಎಲೆ. ಎಲೆಯನು ತಿಂತದೆ ಮೇಕೆ. ಮೇಕೆಯನು ತಿಂತದೆ ಹುಲಿ.ಇದು ಹಸಿವಿನ ಹಾವಳಿ.. ಇದು `ಪುಷ್ಪ’ ಸಿನಿಮಾದ ಕನ್ನಡ ವರ್ಷನ್ ಹಾಡು. ಈ ಸಾಂಗ್‌ನ ಪ್ಲೇ ಮಾಡಿಕೊಂಡು ಡಂಬಲ್ಸ್ ನ ಎತ್ತಿ-ಇಳಿಸಿದ್ದಾರೆ. ಫಿಟ್ ಅಂಡ್ ಫೈನ್ ಆಗಿರಲು ಹೀರೋಗಳು ವರ್ಕೌಟ್ ಮಾಡಿದಂತೆ, ಕಟ್ಟುಮಸ್ತಾದ ದೇಹವನ್ನು ಕಾಪಾಡಿಕೊಳ್ಳೋದಕ್ಕೆ ಚಂದ್ರಚೂಡ್ ಅವರು ಜಿಮ್‌ನಲ್ಲಿ ಕಸರತ್ತು ಶುರುವಿಟ್ಟುಕೊಂಡಿದ್ದಾರೆ.

ಅಂದ್ಹಾಗೇ, ವರ್ಕೌಟ್ ಮಾಡುವಾಗ ಬ್ಯಾಗ್ರೌಂಡ್‌ನಲ್ಲಿ ಯಾವುದಾದರೊಂದು ಸಾಂಗ್ ಪ್ಲೇ ಆಗ್ಬೇಕು. ಥ್ರೆಡ್ ಮಿಲ್ ಮೇಲೆ ಓಡುವಾಗ, ವೇಯ್ಟ್ ಲಿಫ್ಟಿಂಗ್ ಮಾಡುವಾಗ, ಬೈಸೆಪ್ ವರ್ಕೌಟ್ ಮಾಡುವಾಗ ಸಾಂಗ್ ಪ್ಲೇ ಆದರೆ ಅದರ ಕಿಕ್ಕೇ ಬೇರೆ. ಹೀಗಾಗಿ, ಜಿಮ್‌ನಲ್ಲಿ ಸಾಂಗ್ ಹವಾ ಜೋರಾಗಿರುತ್ತೆ. ಫಿಟ್ನೆಸ್ ಫ್ರೀಕ್‌ಗಳನ್ನ ಚಿಯರ್ ಅಪ್ ಮಾಡುತ್ತಿರುತ್ತೆ. ಸದ್ಯಕ್ಕೆ, ಡಿಜೆ ಚಕ್ರವರ್ತಿಯವರಿಗೆ ಪುಷ್ಪ ಸಾಂಗ್ ಚಿಯರ್ ಅಪ್ ಮಾಡ್ತಿದೆ.

Categories
ಸಿನಿ ಸುದ್ದಿ

ನಾಲಿಗೆ ತೊದಲಿದರೇನು ಎದೆತುಂಬಿ ಹಾಡ್ತಾರೆ; ಹಳ್ಳಿಹೈದ ಸೂರ್ಯಕಾಂತ್ ಕಂಠಕ್ಕೆ ದೇವರೇ ಶರಣು !

ಜಗತ್ತು ಬೆಳಗುವ ಸೂರ್ಯ ಚಂದ್ರರೇ ತಮ್ಮ ಟೈಮ್ ಗೋಸ್ಕರ ಕಾಯ್ತಾರೆ. ಸೂರ್ಯನ ಶಿಫ್ಟ್ ಮುಗಿಯೋವರೆಗೂ ಚಂದ್ರ ಕಾಯಬೇಕು, ಚಂದ್ರ ಬಂದು ಹೋಗುವವರೆಗೂ ಸೂರ್ಯ ವೇಯ್ಟ್ ಮಾಡಬೇಕು. ಹೀಗಾಗಿ, ಎಲ್ಲರಿಗೂ ಒಂದು ಟೈಮ್ ಬರುತ್ತೆ ಆ ಟೈಮ್ ಗೋಸ್ಕರ ಕಾಯಬೇಕು ಅಷ್ಟೆ. ಈಗ ಸೂರ್ಯಕಾಂತ್ ಟೈಮ್

ಎದೆತುಂಬಿ ಹಾಡುವೆನು ಕಾರ್ಯಕ್ರಮ ನೋಡುಗರಿಗೆ ಸೂರ್ಯಕಾಂತ್ ಪರಿಚಯ ಆಗಿರುತ್ತೆ. ಈತನ ಹಿನ್ನಲೆಯ ಜೊತೆಗೆ ಈತನ ಕಂಠಕ್ಕಿರುವ ಶಕ್ತಿ ಎಂತಹದ್ದು ಎಂಬುದು ಕೂಡ ಗೊತ್ತಾಗಿರುತ್ತೆ. ಒಂದ್ವೇಳೆ, ಸೂರ್ಯಕಾಂತ್ ಸಂಗೀತ ಮಿಸ್‌ಮಾಡಿಕೊಂಡವರು ಈ ಸ್ಟೋರಿನಾ ನೋಡಿ.

ಭಗವಂತ ಎಲ್ಲರಿಗೂ ಎಲ್ಲಾನೂ ಕೊಡಲ್ಲ, ಏನಾದರೊಂದು ಕೊರತೆಯಿಟ್ಟೇ ಇಟ್ಟಿರುತ್ತಾನೆ. ಒಂದ್ವೇಳೆ, ಎಲ್ಲವನ್ನೂ ಕೊಟ್ಟು ಕರುಣಿಸಿದರೂ ಕೂಡ ಕೊರಗುವ ಮಂದಿಗೇನ್ ಕಮ್ಮಿಯಿಲ್ಲ. ತನ್ನ ಬಳಿ ಅದಿಲ್ಲ, ಇದಿಲ್ಲ ಅಂತ ಚಿಂತಿಸುತ್ತಾ ದೇವರಿಗೆ ಹಿಡಿಶಾಪ ಹಾಕುತ್ತಾರೆ. ಇವರುಗಳಲ್ಲಿ ಕೆಲವರು ಭಗವಂತ ಕೊಟ್ಟ ನ್ಯೂನತೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಭಗವಂತನಿಗೆ ಸೆಡ್ಡುಹೊಡೆಯುತ್ತಾರೆ. ಸಾಧನೆ ಮೂಲಕ ನ್ಯೂನತೆ ಕೊಟ್ಟು ಕಳುಹಿಸಿದ ಭಗವಂತ ಪಶ್ಚಾತಾಪ ಪಡುವಂತೆ ಮಾಡ್ತಾರೆ. ಸದ್ಯಕ್ಕೆ ಸೂರ್ಯಕಾಂತ್ ಭಗವಂತ ಪಶ್ಚಾತಾಪ ಪಡುವಂತೆ ಮಾಡಿದ್ದಾನೆ. ಯಾರು ಆ ಸೂರ್ಯಕಾಂತ್ ಅಂತೀರಾ. `ಎದೆತುಂಬಿ ಹಾಡುವೆನು'ಅಂಗಳದಲ್ಲಿ ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು’ ಅಂತ ಹಾಡಿ ಸ್ವರಸಾಮ್ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ, ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿರುವ ಗ್ರಾಮೀಣ ಗಾಯಕನೇ ಈ ಸೂರ್ಯಕಾಂತ್

ಸೂರ್ಯಕಾಂತ್ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದವರು. ಹೊಟ್ಟೆಗೆ ಹಿಟ್ಟಿಲ್ಲದ ಹೊತ್ತಲ್ಲೇ ಸಂಗೀತದ ಗೀಳು ಅಂಟಿಸಿಕೊಂಡ ಸೂರ್ಯಕಾಂತ್, ಹಸಿವನ್ನು ನುಂಗಿಕೊಂಡು ಕಲಬುರ್ಗಿಯ ಶ್ರೀ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತದ ಅ.ಆ.ಇ.ಈ ಅಕ್ಷರಾಭ್ಯಾಸ ಮಾಡಿದರು. ಕಣ್ಣಿಲ್ಲದ ಪಂಚಾಕ್ಷರಿ ಅಣ್ಣಿಗೇರಿ ಅಜ್ಜಯ್ಯನವರು ಸೂರ್ಯಕಾಂತ್‌ಗೆ ಶ್ರುತಿ-ಲಯ-ಸ್ವರ-ರಾಗ-ತಾಳ-ಮೇಳ ಹಿಡಿಯುವುದನ್ನು ಕಲಿಸಿಕೊಟ್ಟರು. ಇದೀಗ, ಸಂಗೀತ ಹೇಳಿಕೊಟ್ಟ ಗುರುವು ಮಾತ್ರವಲ್ಲ ಸಾಕ್ಷಾತ್ ದೇವರೆ ಮೆಚ್ಚುವಂತಹ ಗಾಯಕನಾಗಿ ಹೊರಹೊಮ್ಮಿದ್ದಾರೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.

ಹೌದು, ಸೂರ್ಯಕಾಂತ್ ಸಂಗೀತಕ್ಕೆ ಸಾಕ್ಷಾತ್ ದೇವರೆ ಶರಣಾಗಿದ್ದಾರೆ. ಮಾತು ಕಿತ್ಕೊಂಡು ಸೂರ್ಯನನ್ನು ಭೂಮಿಗೆ ಕಳುಹಿಸಿದ್ದಕ್ಕೆ ಇವತ್ತು ದೇವರು ಕೂಡ ಪಶ್ಚಾತಾಪ ಪಡುತ್ತಿರುತ್ತಾರೆ.ಆದರೆ ಮಾತು ಕಿತ್ತುಕೊಂಡ ಭಗವಂತ ಕಂಠಕ್ಕೆ ಬಲತುಂಬಿ ಕಳುಹಿಸಿದ್ದಾನೆ. ಹೀಗಾಗಿ, ಮಾತನಾಡುವಾಗ ತಡವರಿಸುವ ಸೂರ್ಯಕಾಂತ್, ಕಂಠಕ್ಕೆ ಕಿಚ್ಚು ಹಚ್ಚಿದಾಗ ತಡವರಿಸಲ್ಲ ಸಂಗೀತವನ್ನ ಅರ್ಧಕ್ಕೆ ನಿಲಿಸಲ್ಲ. ಇದನ್ನೆಲ್ಲಾ ನೋಡಿದಾಗ ಇದು ಹೇಗೆ ಸಾಧ್ಯ? ಇದೆಂತಾ ಪವಾಡನಪ್ಪಾ ಎಂದೆನಿಸುವುದು ಸಹಜ. ಆದರೆ ಇದಕ್ಕೆಲ್ಲಾ ಕಾರಣ ಸಂಗೀತ ಸರಸ್ವತಿ ಹಾಗೂ ಸೂರ್ಯಕಾಂತ್‌ಗೆ ಸಂಗೀತ ಮೇಲಿರುವ ಅತೀವವಾದ ಶ್ರದ್ದಾ-ಭಕ್ತಿ. ಆ ನಿಷ್ಟೆಗೆ- ಸಂಗೀತ ಸರಸ್ವತಿಯ ಆರಾಧನೆಗೆ `ಎದೆತುಂಬಿ’ ಹಾಡುವೆನು ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದೆ. ನಾಲಿಗೆ ತಡವರಿಸಿದರೇನಂತೆ ಆತನ ಕಂಠದೊಳಗಿನ ಕಸುವಿಗೆ ಬೆಲೆಕೊಡಬೇಕೆಂದು ಕಲರ್ಸ್ ಕನ್ನಡ ಸಂಸ್ಥೆ ಸೂರ್ಯಕಾಂತ್‌ಗೆ ರತ್ನಗಂಬಳಿ ಹಾಕಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ.

ಸೂರ್ಯಕಾಂತ್ ಅಪ್ಪಟ ದೇಸಿ ಪ್ರತಿಭೆ-ಕಡುಬಡತನದ ಕುಟುಂಬಕ್ಕೆ ಸೇರಿದವ. ಜನ್ಮಕೊಟ್ಟ ಹೆತ್ತವ್ವ ಬಿಟ್ಟರೆ ಸರಸ್ವತಿ ತಾಯಿಯೇ ಎಲ್ಲಾ. ಹೀಗಾಗಿ, ದೇವರು ಮಾತು ಕಿತ್ಕೊಂಡು ಕಳುಹಿಸಿದರೂ ಸಂಗೀತ ಸರಸ್ವತಿ ಕೈಬಿಡದೇ ಸಲುಹಿತ್ತಿದ್ದಾಳೆ. ಹಗಲಿರುಳು ತನ್ನ ಜಪ ಮಾಡುವ ಸೂರ್ಯಕಾಂತ್‌ಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದ್ದಾಳೆ. ದೇವರು ಎಲ್ಲಾ ಕೊಟ್ಟರೂ ಕೂಡ ತನಗೆ ಅದನ್ನ ಕೊಟ್ಟಿಲ್ಲ ಇದನ್ನ ಕೊಟ್ಟಿಲ್ಲ ಅಂತ ಭಗವಂತನ ಮೇಲೆ ದೂರು ಹೇಳುತ್ತಾ ಕುಳಿತಿರುವ ಸೋಮಾರಿಗಳಿಗೆ, ನೀನು ಒಂದು ಪಾಠ ಆಗಬೇಕು ಹೋಗು ಮಗನೇ ಅಂತ ಅದ್ಬುತ ವೇದಿಕೆಯ ಮೇಲೆ ತಂದು ನಿಲ್ಲಿಸಿದ್ದಾಳೆ. ವರವಾಗಿ ಸಿಕ್ಕಂತಹ ಅವಕಾಶವನ್ನ ಅದ್ಬುತವಾಗಿ ಬಳಸಿಕೊಂಡ ಸೂರ್ಯಕಾಂತ್, `ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯವನ್ನು ತಲ್ಲಣಗೊಳಿಸಿದ್ದಾರೆ. ಕಣ್ಣೀರ ಕಡಲಲ್ಲಿ ತೇಲಿಸುವುದರ ಜೊತೆಗೆ ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಯಾವುದೋ ಸಿನಿಮಾ ಹಾಡನ್ನು ತೆಗೆದುಕೊಂಡು ಧೂಳೆಬ್ಬಿಸೋದು ದೊಡ್ಡದಲ್ಲ. ತತ್ವಪದಗಳನ್ನು ಆಯ್ಕೆಮಾಡಿಕೊಂಡು ಸುನಾಮಿ ಎಬ್ಬಿಸೋದು ದೊಡ್ಡದು. ಯಸ್,
ಕಡಕೋಳ ಮಡಿವಾಳಪ್ಪಜ್ಜನವರು ರಚನೆ ಮಾಡಿದ, ರವೀಂದ್ರ ಹಂದಿಗನೂರ ರಾಗಸಂಯೋಜನೆ ಮಾಡಿ ಕಂಠಕುಣಿಸಿದ ತತ್ವಪದವನ್ನು ಆಯ್ಕೆಮಾಡಿಕೊಂಡ ಸೂರ್ಯಕಾಂತ್, ಸಂಗೀತ ಲೋಕದ ದಿಗ್ಗಜರನ್ನ ಮಂತ್ರಮುಗ್ದಗೊಳಿಸಿದರು. ಮಾತನಾಡುವಾಗಲೇ ತೊದಲಿಸುವ ಸೂರ್ಯಕಾಂತ್ ಇನ್ನೇನು ಹಾಡ್ತಾನ್ರಿ ಅಂತ ಎದುರುನೋಡ್ತಿದ್ದ ಮಂದಿಯನ್ನ ಎದ್ದುನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿಬಿಟ್ಟರು. ಅದಕ್ಕೆ ಹೇಳೋದು ಡೋಂಟ್ ಅಂಡರೆಸ್ಟಿಮೇಟ್ ಪವರ್ ಆಫ್ ಹಳ್ಳಿಮ್ಯಾನ್' ಅಂತ.ಎನಿವೇ,ಮೊದಲ ಹಾಡಿನಲ್ಲೇ ಗೆದ್ದುಬೀಗಿದ್ದಾರೆ. ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯಕ್ಕೆ ಕಳೆತಂದಿದ್ದಾರೆ. ವ್ಯಕ್ತಿತ್ವದಲ್ಲೂ ಹಾಗೂ ಸಂಗೀತದಲ್ಲೂ ಮುಗ್ದತೆಯನ್ನ ಕಾಪಾಡಿಕೊಂಡು ಬಂದಿರುವ ಸೂರ್ಯಕಾಂತ್‌ನ ಬೆಳೆಸಬೇಕು ಅಂತ ನಿರ್ಣಾಯಕರಾದ ರಾಜೇಶ್ ಕೃಷ್ಣನ್, ವಿ ಹರಿಕೃಷ್ಣ, ರಘುದೀಕ್ಷಿತ್ ನಿರ್ಧಾರ ಮಾಡಿದ್ದಾರೆ. ಸೂರ್ಯಕಾಂತ್ ಸಂಗೀತದ ಲಯ-ಶ್ರುತಿ-ಹಿಡಿದು ಎಷ್ಟರ ಮಟ್ಟಿಗೆ ಬೆಳೆಯುತ್ತಾರೆ ಕಾದುನೋಡೋಣ ಅಲ್ಲವೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆಕ್ಷನ್ ಪ್ರಿನ್ಸ್- ಶೋ ಮ್ಯಾನ್ ಪ್ರೇಮ್ಸ್ ‘ ಓಂಕಾರ’ ; ಯುದ್ಧಕ್ಕೆ ಡೆಡ್ಲಿ‌ ಕಾಂಬೋ ಶ್ರೀಕಾರ !

ಯುದ್ಧದಲ್ಲಿ ಹೋರಾಡಿ ಹುತಾತ್ಮರಾದರೆ ಸ್ವರ್ಗದ ಬಾಗಿಲು ತೆರೆದಿರುತ್ತೆ. ಅದೇ ರೀತಿ ಯುದ್ಧದಲ್ಲಿ ಕಾದಾಡಿ ಗೆದ್ದರೆ ಅಲಂಕರಿಸೋದಕ್ಕೆ ಸಿಂಹಾಸನ ರೆಡಿಯಾಗಿರುತ್ತೆ. ಹೀಗಾಗಿ, war is always good ಹೀಗಂತ ವಿಲನ್ ಡೈರೆಕ್ಟರ್ ಹೇಳಿದ್ದಾಗಿದೆ. ತೋಳ್ ತುಂಬಾ ತಾಕತ್ತಿದ್ರೂ ತಕರಾರ್ ಮಾಡಲ್ಲ. ಎದೆ ತುಂಬಾ ನಿಯತ್ತಿದ್ರೂ ಗುಲಾಮ ಆಗಿರಲ್ಲ. ಗೂಳಿ ಸೈಲೆಂಟಾಗಿದೆ ಅಂತ ಗಾಂಚಾಲಿ ಮಾಡೋಕೆ ಬಂದರೆ, ಗುದ್ದೋ ಏಟಿಗೆ ಗೂಗಲ್ ನಲ್ಲಿ ಹುಡುಕಿದರೆ ಸಿಗಲ್ಲ. ಏಯ್ ಐ ಆಮ್ ನಟೋರಿಯಸ್ ಹೀಗಂತ ಆಕ್ಷನ್ ಪ್ರಿನ್ಸ್ ಗುಡುಗಿದ್ದಾಗಿದೆ. ಇನ್ನೇನಿದ್ರೂ ಯುದ್ಧ ಶುರು ಮಾಡೋದಷ್ಟೇ ಬಾಕಿ.

ಯಸ್, ಈ ಕಾಂಬೋ ಬಗ್ಗೆ ಸೋಷಿಯಲ್ ಮೀಡಿಯಾನೇ ಗೆಸ್ ಮಾಡಿತ್ತು. ಯುದ್ಧ ಒಳ್ಳೆಯದೇ ಬಿಡಿ ಅಂತ ಪ್ರೇಮ್ ಸಾಹೇಬ್ರು ಸಾಮಾಜಿಕ ಜಾಲತಾಣದಲ್ಲಿ ಗೀಚಿದಾಗಲೇ ಪೊಗರು ಸ್ಟಾರ್ ಗೆ ಜೋಗಿ ಪ್ರೇಮ್ ಡೈರೆಕ್ಟ್ ಮಾಡ್ತಾರೆ ಅಂತ ಸುದ್ದಿಯಾಯ್ತು. ಈ ಮಧ್ಯೆ ‘ಗೆಟ್ ರೆಡಿ ಫಾರ್ ಡಿಎಸ್ 6’ ಅಂತ ಆಕ್ಷನ್ ಪ್ರಿನ್ಸ್ ಅನೌನ್ಸ್ ಮಾಡಿದಾಗ ವಿಲನ್ ಡೈರೆಕ್ಟರ್ ಹಾಗೂ ಬಹದ್ದೂರ್ ಹೀರೋ ಕಾಂಬೋ ಜೊತೆಯಾಗ್ತಿರುವುದು. ಬಹುತೇಕ ಪಕ್ಕಾ ಆಗಿತ್ತು. ಈಗ ಹಂಡ್ರೆಡ್ ಪರ್ಸೆಂಟ್ ಕ್ಲಿಯರ್ ಆಗಿದೆ. ಪ್ರೇಮ್ – ಧ್ರುವ ಜೋಡಿ ಫಸ್ಟ್ ಟೈಮ್ ಜೊತೆಯಾಗಿದೆ.

ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ ಹೀಗಂತ ಟ್ವೀಟ್ ಮಾಡಿ ಆಕ್ಷನ್ ಪ್ರಿನ್ಸ್ ಜೊತೆಗೆ ಸಿನಿಮಾ ಮಾಡ್ತಿರುವುದಾಗಿ ಪ್ರೇಮ್ ಅನೌನ್ಸ್ ಮಾಡಿದ್ದಾರೆ. ಲೆಜೆಂಡರಿ ಡೈರೆಕ್ಟರ್ ಹಾಗೂ ಪ್ರೆಸ್ಟೀಜಿಯಸ್ ಬ್ಯಾನರ್ ಜೊತೆಗಿನ ತಮ್ಮ ಸಿನಿಮಾದ ಬಗ್ಗೆ ಧ್ರುವ ಎಕ್ಸೈಟ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ನಟನೆಯಲ್ಲಿ ಧ್ರುವಾಗೆ ಆರನೇ ಸಿನಿಮಾ ಇತ್ತ ಪ್ರೇಮ್ ಗೆ ನಿರ್ದೇಶನದಲ್ಲಿ ಒಂಭತ್ತನೇ ಮೂವೀ.

ಯಸ್, ಕರಿಯ ಸಿನಿಮಾಗೆ ಡೈರೆಕ್ಟರ್ ಹ್ಯಾಟ್ ತೊಟ್ಟು ಮೊದಲ ಸಿನಿಮಾದಲ್ಲೇ ಹಿಟ್ ಕೊಟ್ಟ ಶೋಮ್ಯಾನ್ ಪ್ರೇಮ್, ಇಲ್ಲಿವರೆಗೂ ಎಂಟು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಎಕ್ಸ್ ಕ್ಯೂಸ್ ಮೀ, ಜೋಗಿ,ಜೋಗಯ್ಯದಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ಗಂಧದಗುಡಿಗೆ ಕೊಡುಗೆಯಾಗಿ‌ ನೀಡಿದಂತಹ ಮದ್ದೂರಿನ ಭೈರೇಗೌಡ್ರು ಸ್ಟಾರ್ ಡೈರೆಕ್ಟರ್ ಅಲ್ಲ ಸೆನ್ಸೇಷನಲ್ ಡೈರೆಕ್ಟರ್ ಆಗಿ ಸಂಚಲನ‌ ಸೃಷ್ಟಿಸಿದ್ದಾರೆ. ಸೌತ್ ಸಿನಿ ದುನಿಯಾ ಮಂದಿ ಹಿಂತಿರುಗಿ ನೋಡುವಂತಹ‌ ಮೂವಿಗಳನ್ನು ಕೊಡುತ್ತಾ ಬರ್ತಿದ್ದಾರೆ. ಅಲ್ಲದೇ ಸ್ವಂತ ಬ್ರ್ಯಾಂಡ್ ಆಗಿದ್ದಾರೆ. ಇದೀಗ ತಮ್ಮ ನಿರ್ದೇಶನದ ಒಂಭತ್ತನೇ ಸಿನಿಮಾದ ಮೂಲಕ ದಶದಿಕ್ಕುಗಳಲ್ಲೂ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಏಕ್ ಲವ್ ಯಾ ಸಿನಿಮಾ ರಿಲೀಸ್ ಗಾಗಿ ಎದುರು ನೋಡ್ತಿದ್ದಾರೆ.

ದಿ ವಿಲನ್ ಸಿನಿಮಾ ಮೂಲಕ ಪ್ರೇಮ್ ಕೂಡ ಗಡಿದಾಟಿದ್ದಾರೆ. ಪೊಗರು ಮೂಲಕ ಪರಭಾಷಾ ಅಂಗಳದಲ್ಲಿ ಧ್ರುವ ಕೂಡ ಖದರ್ ತೋರಿಸಿದ್ದಾರೆ. ಹೀಗೆ, ಗಡಿದಾಟಿ ಘರ್ಜಿಸಿರುವ ಇಬ್ಬರು ಮಾಸ್ ಸ್ಟಾರ್ಸ್ ಫಸ್ಟ್ ಟೈಮ್ ಕೈಜೋಡಿಸಿದ್ದಾರೆ. ಹೀಗಾಗಿ ಈ‌ ಡೆಡ್ಲಿ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ. ಯುದ್ದ ಒಳ್ಳೆಯದೇ ಅಂತ ಜೋಗಿ ನಿರ್ದೇಶಕರು ಹೇಳಿರೋದ್ರಿಂದ ಬಹದ್ದೂರ್ ಗಂಡು ಅಲಿಯಾಸ್ ಬೆಂಕಿಚೆಂಡನ್ನ ವಾರ್ ಫೀಲ್ಡಿಗಿಳಿಸೋದು ಪಕ್ಕಾ. ತೋಳ್ ತುಂಬಾ ತಾಕತ್ತು ತುಂಬಿಕೊಂಡಿರುವ ಪೊಗರು ಸ್ಟಾರ್ ಯುದ್ಧಕ್ಕೆ ಸಜ್ಜಾಗೋದು ಸತ್ಯಾ.

ಇನ್ಮೇಲೆ ಉದ್ದುದ್ದ ಡೈಲಾಗ್ ಹೊಡೆಯಲ್ಲ ಅಂತ ಬಹದ್ದೂರ್ ಹೀರೋ ಖಡಕ್ಕಾಗಿ ಹೇಳಿಬಿಟ್ಟಿದ್ದಾರೆ.ಅದ್ದೂರಿ ಸಾರಥಿ ಜೊತೆ ಮತ್ತೆ ಒಂದಾಗಿದ್ದು, ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಪ್ರೇಮ್ ಸಾಹೇಬ್ರಿಗೆ ಧ್ರುವ ಕಾಲ್ ಶೀಟ್ ಕೊಟ್ಟಿದ್ದಾರೆ.‌ ಮಾರ್ಟಿನ್ ಜೊತೆಜೊತೆಗೆ ದಿ ವಿಲನ್ ಸಾರಥಿಯ ಅಖಾಡಕ್ಕೆ ಧ್ರುವ ಧುಮುಕ್ತಾರಾ ಅಥವಾ ಮಾರ್ಟಿನ್ ಕಂಪ್ಲೀಟಾಗಿ ಮುಗಿದ್ಮೇಲೆ ಪ್ರೇಮ್ ಜೊತೆ ಯುದ್ಧಕ್ಕೆ ಸಜ್ಜಾಗ್ತಾರೋ ಗೊತ್ತಿಲ್ಲ. ಆದರೆ, ಯುದ್ದದ ಮೇಲಿನ ನಿರೀಕ್ಷೆಯಂತೂ ಲೋಡೆಡ್ ಗನ್ನಿನಂತಾಗಿದೆ.

ಆಕ್ಷನ್ ಪ್ರಿನ್ಸ್- ಪ್ರೇಮ್ ಕಾಂಬೋ‌ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ.ಆಗಸ್ಟ್ 09 ರಂದು ಪ್ರೇಮ್ ಅವರ ನಿವಾಸದಲ್ಲೇ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಶೀಘ್ರದಲ್ಲೇ ಟೈಟಲ್ ಅನೌನ್ಸ್ ಮಾಡುವುದಾಗಿ ಪ್ರೇಮ್ ಹೇಳಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮೂಡಿಬರಲಿದೆ. ಅತೀ ಶೀಘ್ರದಲ್ಲೇ ಹೆಚ್ಚಿನ ಅಪ್ ಡೇಟ್ಸ್ ಲಭ್ಯವಾಗಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!