ಖ್ಯಾತ ನಿರೂಪಕಿ ಪಟ್ಟ ಅನುಶ್ರೀಗೆ ಸುಲಭಕ್ಕೆ ದಕ್ಕಿರುವುದಲ್ಲ. ಅನುಶ್ರೀ ಕೈಗೆ ಸಡನ್ನಾಗಿ ಮೈಕ್ ಸಿಕ್ಕಿಲ್ಲ. ಸಲೀಸಾಗಿ ಸ್ಟೇಜ್ ಹತ್ತುವ ಚಾನ್ಸ್ ಕೂಡ ದಕ್ಕಿಲ್ಲ. ಲಂಗ-ದಾವಣಿಯಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಲೆಹೆಂಗಾ ಹಾಕಿಕೊಂಡು ಶೋ ನಡೆಸುವುದಕ್ಕೆ, ಬಹುಬೇಡಿಕೆ ನಿರೂಪಕಿ ಪಟ್ಟಕ್ಕೇರಿ ರಾರಾಜಿಸ್ತಿರುವುದಕ್ಕೆ, ಆಕೆ ಪಟ್ಟ ಶ್ರಮ ಎಷ್ಟು ಎನ್ನುವುದು ಆಕೆಗಷ್ಟೇ ಗೊತ್ತು.
ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ಗೆ ಸಂಬಂಧಪಟ್ಟಂತೆ ಆಂಕರ್ ಅನುಶ್ರೀ ಹೆಸರು ಮತ್ತೆ ಕೇಳಿಬಂದಿದೆ. ಪ್ರಕರಣದ ಎ೨ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆಗಳನ್ನ ಕೊಟ್ಟಿದ್ದು, ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಹೀಗಾಗಿ, ಕಳೆದೊಂದು ವರ್ಷದ ಹಿಂದೆ ಕ್ಯಾಮೆರಾ ಮುಂದೆ ಅನುಶ್ರೀ ಕಣ್ಣೀರಿಟ್ಟ ದೃಶ್ಯಗಳು ಕಣ್ಮುಂದೆ ಬರುತ್ತಿವೆ. ಜೊತೆಗೆ ಕನ್ನಡಿಗರಿಗೆ ಅನುಶ್ರೀ ಪ್ರಮಾಣದ ರೀತಿಯಲ್ಲಿ ಕೊಟ್ಟಂತಹ ಮಾತುಗಳು ನೆನಪಿಗೆ ಬರುತ್ತಿವೆ. ಕನ್ನಡಿಗರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸ ಹಾಗೂ ನಂಬಿಕೆಯನ್ನ ಎಂದೆಂದಿಗೂ ಕಳೆದುಕೊಳ್ಳಲ್ಲ. ಯಾವುದೇ ಕಾರಣಕ್ಕೂ ಕನ್ನಡಿಗರು ಕೊಟ್ಟಿರುವ ಹೆಸರು ಹಾಗೂ ಕನ್ನಡಿಗರು ತೊಡಿಸಿದಂತಹ ಕಿರೀಟಕ್ಕೆ ಧಕ್ಕೆ ತಂದಿಲ್ಲ ಮತ್ತು ತರುವುದು ಇಲ್ಲ. ಈ ರೀತಿ ಕ್ಯಾಮೆರಾ ಮುಂದೆ ಲೈವ್ ಬಂದು ಹೇಳಿಕೊಂಡಿದ್ದರು ಆಂಕರ್ ಕಮ್ ನಟಿ ಅನುಶ್ರೀಯವರು
ಅನುಶ್ರೀ ಕೊಟ್ಟ ಮಾತಿಗೆ ಬದ್ದರಾಗಿದ್ದಾರಾ? ಬದ್ದರಾಗಿರುತ್ತಾರಾ? ಈ ಮಾತಿಗೆ ಹೌದು ಇರ್ತಾರೆ ಅಂತ ನಾವು ಹೇಳೋದಕ್ಕೆ ಆಗೋದಿಲ್ಲ. ಮಾತು ಯಾರೇ ಕೊಟ್ಟಿರಲಿ ಉಳಿಸಿಕೊಂಡು ಹೋದರೆ ಬೆಳೆಯುತ್ತಾರೆ ಇಲ್ಲವಾದಲ್ಲಿ ಕೆಳಕೆಳಕ್ಕೆ ಕುಸಿಯುತ್ತಾರೆ. ಅದೇನೇ ಇರಲಿ ಅನುಶ್ರೀ `ಜನಪ್ರಿಯ ನಿರೂಪಕಿ’ ಪಟ್ಟ ಹಾಗೂ ಕನ್ನಡಿಗರು ತೊಡಿಸಿದ ಕಿರೀಟವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗ್ಬೇಕು. ಅಷ್ಟಕ್ಕೂ, ಖ್ಯಾತ ನಿರೂಪಕಿ ಪಟ್ಟ ಅನುಶ್ರೀಗೆ ಸುಲಭಕ್ಕೆ ದಕ್ಕಿರುವುದಲ್ಲ. ನಮ್ಮ ಕರುನಾಡ ಮಂದಿ ಸುಮ್‌ಸುಮ್ಮನೇ ಮಂಗಳೂರು ಚೆಲುವೆಗೆ ಕಿರೀಟ ತೊಡಿಸಿಲ್ಲ. ಕನ್ನಡಿಗರು ಪ್ರೀತಿ ತರ‍್ಸೋದಕ್ಕೂ-ತಲೆಮೇಲೆ ಹೊತ್ತು ಮೆರೆಸುವುದಕ್ಕೂ ಕಾರಣಯಿದೆ, ಕಾರಣ ಎನ್ನುವುದಕ್ಕಿಂತ ಆಕೆಯ ಕಠಿಣ ಪರಿಶ್ರಮ-ಶ್ರದ್ದೆ-ಕೆಲಸದ ಮೇಲಿರುವ ಭಕ್ತಿ-ಮಾತುಗಾರಿಕೆ-ಸಾಧಿಸುವ ಹುಮ್ಮಸ್ಸು ಜೊತೆಗೆ ಕಲಾ ತಪ್ಪಸ್ಸು ಇವತ್ತು ಅನುಶ್ರೀಯವರನ್ನು ಬೇಡಿಕೆಯ ನಿರೂಪಕಿ ಸ್ಥಾನದಲ್ಲಿ ಕೂರಿಸಿದೆ. ನಟಿಯಾಗಿ ಬೆಳ್ಳಿತೆರೆಯನ್ನೂ ಬೆಳಗುವ ಅವಕಾಶವನ್ನು ಕೊಡಿಸಿದೆ.
ಅಂದ್ಹಾಗೇ, ಒಂದು ನೆನಪಿಡಬೇಕು ಅನುಶ್ರೀ ಕೈಗೆ ಸಡನ್ನಾಗಿ ಮೈಕ್ ಸಿಕ್ಕಿಲ್ಲ. ಸಲೀಸಾಗಿ ಸ್ಟೇಜ್ ಹತ್ತುವ ಚಾನ್ಸ್ ಕೂಡ ದಕ್ಕಿಲ್ಲ. ಲಂಗ-ದಾವಣಿಯಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಲೆಹೆಂಗಾ ಹಾಕಿಕೊಂಡು ಶೋ ನಡೆಸುವುದಕ್ಕೆ ಆಂಕರ್ ಅನುಶ್ರೀ ಪಟ್ಟ ಶ್ರಮ ಎಷ್ಟು ಎನ್ನುವುದು ಆಕೆಗಷ್ಟೇ ಗೊತ್ತು. ಬರಿಗೈನಲ್ಲಿ ಬೆಂಗಳೂರಿಗೆ ಬಂದು ಇವತ್ತು ಸ್ವಂತ ಮನೆಮಾಡಿಕೊಂಡಿರುವುದಕ್ಕಿಂತ ಬೆಲೆಕಟ್ಟಲಾಗದ ಜನರ ಮನದಲ್ಲಿ ಮನೆಮಾಡಿದ್ದಾರೆ. ಟೆಲಿ ಅಂತ್ಯಾಕ್ಷರಿಯಿಂದ ಶುರುವಾದ ಆಂಕರಿಂಗ್ ಜರ್ನಿ, ಜೀ ಕನ್ನಡದ ಹೆಮ್ಮೆಯ ಶೋಗಳಾದ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವರೆಗೂ ತಂದುನಿಲ್ಲಿಸಿದೆ. ಟಿವಿ ಲೋಕದಲ್ಲಿ ಮಾತ್ರವಲ್ಲ ಕರುನಾಡಿನ ಅಂಗಳದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಅನುಶ್ರೀಯೇ ಫಿಕ್ಸು. ಅಷ್ಟರ ಮಟ್ಟಿಗೆ ಅನುಶ್ರೀ ತಮ್ಮ ಛಾಪನ್ನ ಮೂಡಿಸಿದ್ದಾರೆ. ಬಹುಬೇಡಿಕೆಯ ನಿರೂಪಕಿಯಾಗಿ ಮುನ್ನುಗುತ್ತಿದ್ದಾರೆ. ಇಂತಹ ಹೊತ್ತಲ್ಲೇ ಅನುಶ್ರೀಗೆ ಡ್ರಗ್ಸ್ ಕಂಟಕ ಎದುರಾಗಿದೆ.
ಮಾದಕ ಲೋಕದ ಜೊತೆಗೆ ತನ್ನ ಹೆಸರು ತಳುಕು ಹಾಕಿಕೊಳ್ಳುತ್ತೆ ಅಂತ ಅನುಶ್ರೀ ಕನಸು-ಮನಸಲ್ಲೂ ಊಹಿಸಿಕೊಂಡಿರಲಿಲ್ಲ. ಕನ್ನಡಿಗರು ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಹರಳು ಉರಿದಂತೆ ಮಾತನಾಡುವ, ಮಾತಲ್ಲೇ ಮೋಡಿ ಮಾಡುವ ಚಿನಕುರಳಿ ಅನುಶ್ರೀಗೂ, ಡ್ರಗ್ಸ್ ಲೋಕಕ್ಕೂ ನಂಟಿದೆ ಅಂದರೆ ಅನುಶ್ರೀಗೆ ಮಾತ್ರವಲ್ಲ ಆಕೆಯನ್ನ ಕೈಹಿಡಿದು ನಡೆಸಿದವರಿಗೂ ಹಾಗೂ ಬೆಳೆಸಿದವರಿಗೂ ಅಚ್ಚರಿಯಾಗುತ್ತೆ. ಈಗ ಆಗಿರುವುದು ಅದೇ. ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಎ೨ ಆರೋಪಿಯಾಗಿರುವ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ ಎನ್ನಲಾದ ಹಾಗೂ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಪಟ್ಟಿಯನ್ನ ನೋಡಿ ಎಲ್ಲರೂ ಬೆಚ್ಚಿಬೆರಗಾಗಿದ್ದಾರೆ. ಈ ನಡುವೆ ಆರೋಪಿ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ನಲ್ಲಿ ಸುಳ್ಳು ಹೇಳಿಕೆ ದಾಖಲೆ ಮಾಡಲಾಗಿದೆ ಎಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡ್ತಿದ್ದಾರೆ.
ಹೌದು, ಡ್ರಗ್ಸ್ ಆರೋಪ ಎದುರಿಸುತ್ತಿರುವ ಕಿಶೋರ್ ಶೆಟ್ಟಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಅನುಶ್ರೀ ವಿರುದ್ದ ಹೇಳಿಕೆ ಕೊಟ್ಟಿದ್ದೇನೆ ಎನ್ನುವ ಸುದ್ದಿಯೇ ಸುಳ್ಳು. ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ, ಅವರೊಟ್ಟಿಗೆ ನಾನು ಸಂಪರ್ಕವೂ ಇಟ್ಟುಕೊಂಡಿಲ್ಲ. ಅಂದ್ಹಾಗೇ, ಅನುಶ್ರೀಯವರು ಸ್ಪರ್ಧೆ ಮಾಡಿದ್ದ `ಕುಣಿಯೋಣ ಬಾರಾ’ ಶೋಗೆ ಕೊರಿಯಾಗ್ರಫಿ ಮಾಡಿದ್ದು ನಿಜ. ರಿಹರ್ಸಲ್ ಮಾಡಿ ಲೇಟ್‌ನೈಟ್ ಮನೆಗೆ ಬರುತ್ತಿದ್ದೆವು ಆದರೆ ನಾವು ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀಯವರು ತುಂಬಾ ಕಷ್ಟಪಟ್ಟು ಮೇಲೆಬಂದಿದ್ದಾರೆ. ಅವರ ಮೇಲೆ ನನಗೆ ತುಂಬಾ ಗೌರವವಿದೆ. ನನ್ನ ಡ್ಯಾನ್ಸ್ ಕ್ಲಾಸ್‌ನ ಅವರೇ ಉದ್ಘಾಟನೆ ಮಾಡಿಕೊಟ್ಟಿದ್ದರು. ಫೇಮಸ್ಸ್ ಕೊರಿಯಾಗ್ರಫರ್ ಆಗ್ಬೇಕು ಎನ್ನುವ ಕನಸಿದೆ. ಆ ಕನಸಿನ ಸಾಕಾರಕ್ಕಾಗಿ ಎದುರುನೋಡ್ತಿದ್ದೇನೆ. ನನ್ನ ಹೆಸರು ಕೆಡಿಸೋದಕ್ಕೆ ಯಾರೋ ಈ ರೀತಿ ಮಾಡುತ್ತಿದ್ದಾರೆ. ನಾನು ಎರಡು ಭಾರಿ ಡ್ರಗ್ಸ್ ಪಡೆದಿದ್ದು ನಿಜ ಆದರೆ ಪೆಡ್ಲಿಂಗ್-ಗಿಡ್ಲಿಂಗ್ ಎಲ್ಲಾ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮಂಗಳೂರು ಪೊಲೀಸರು ನೋಡಿದ್ರೆ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ಕೊಟ್ಟಿದ್ದಾರೆ ಅಂತ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇತ್ತ ಆರೋಪಿ ಸ್ತಾನದಲ್ಲಿರುವ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿರುವ ಸ್ಟೇಟ್‌ಮೆಂಟ್ ನಾನು ಕೊಟ್ಟಿಲ್ಲ ಅಂತಿದ್ದಾರೆ. ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಸದ್ಯಕ್ಕಂತೂ ಸರಿಯಾದ ಉತ್ತರವಿಲ್ಲದ
ಉತ್ತರವೇ ಕಣ್ಮುಂದೆ ರುದ್ರತಾಂಡವವಾಡ್ತಿದೆ. ಅಸಲಿ ಸತ್ಯ ಬೆಳಕಿಗೆ ಬರಬೇಕಿದೆ. ಅಲ್ಲಿವರೆಗೂ ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ನ್ಯಾಯದೇವತೆ ತರ ಕಾಯೋಣ ಅಲ್ಲವೇ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ