Categories
ಸಿನಿ ಸುದ್ದಿ

ರತ್ನನಿಗೆ ಅಪ್ಪು ಆಪ್ತರ ಸಾಥ್: ಹಾಡು ಹೊರಬಂತು

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಇತ್ತೀಚಿಗೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಒಂದೊಂದು ಹಾಡನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳು ಬಿಡುಗಡೆ ಮಾಡಿದ್ದು ವಿಶೇಷ. “ಅಪ್ಪು” ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅವರ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಳಳಿಯಿಂದ ಬಂದಿದ್ದ ರಘುಪತಿ ಹಾಗೂ ಮಾರುತಿ ಅವರು “ರತ್ನ” ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.

“ರತ್ನ” ಕೂಡ ಅಪ್ಪು ಅಭಿಮಾನಿಯ ಕುರಿತಾದ ಚಿತ್ರವಾಗಿದೆ. ಹಾಡುಗಳನ್ನು ಬಿಡುಗಡೆ ಮಾಡಿದ್ದ ಅಷ್ಟು ಜನ ಜನ ಅಭಿಮಾನಿಗಳು ಹಾಗೂ ಒಡನಾಡಿಗಳು ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು. ಪುನೀತ್ ರಾಜಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ತಪ್ಪದೇ ನೋಡಿ ಎಂದರು‌.

ಪುನೀತ್ ರಾಜಕುಮಾರ್ ಅವರು ನನಗೆ ಮಾಡಿರುವ ಸಹಾಯ ಹಾಗೂ ಸಹಕಾರ ಅಷ್ಟಿಷ್ಟಲ್ಲ. ಅವರ ಒಳ್ಳೆಯ ಗುಣಗಳೇ, ನನಗೆ ಈ ಚಿತ್ರ ಮಾಡಲು ಸ್ಪೂರ್ತಿ. ನಾನು ಕೂಡ ಅವರ ಅಪ್ಪಟ್ಟ ಅಭಿಮಾನಿ. ಅಪ್ಪು ಅವರನ್ನು ಜನ ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಚಿತ್ರ ನೋಡಬೇಕು. ಏಕೆಂದರೆ ಇದು ಅಪ್ಪು ಅವರ ಅಭಿಮಾನಿಯ ಕುರಿತಾದ ಚಿತ್ರ. “ರತ್ನ” ಚಿತ್ರದ ಹಾಡುಗಳನ್ನು ಅಪ್ಪು ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳಿಂದ ಬಿಡುಗಡೆ ಮಾಡಿಸುವ ಹಂಬಲವಿತ್ತು. ಸತೀಶ್ ಬಾಬು ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಅಭಿಮಾನಿಗಳಿಗೆ ನನ್ನ ಧನ್ಯವಾದ. ಏಪ್ರಿಲ್ 19 ಚಿತ್ರ ಬಿಡುಗಡೆಯಾಗಲಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಬಸವರಾಜ್ ಬಳ್ಳಾರಿ.

ನಾಯಕ ವರ್ಧನ್, ಸಂಕಲನ ಕಾರ ಹಾಗೂ ನಟ ನಾಗೇಂದ್ರ ಅರಸ್, ನಟ ಅಮಿತ್ ರಾವ್, ವಿತರಕ ವಿಜಯ್ ಕುಮಾರ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್,ಕಲ್ಕೆರೆ ರಾಘವೇಂದ್ರ ಕರೂರ್ “ರತ್ನ” ಚಿತ್ರದ ಕುರಿತು ಮಾತನಾಡಿದರು.

ಹರ್ಷಲ ಹನಿ ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್,ವಿಜಯ್ ಚಂಡೂರ್. ಮಹೇಶ್ ಬಾಬು.ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ.ಜಗದೀಶ್ ಕೊಪ್ಪ ಮುಂತಾದವರು “ರತ್ನ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ನಾಡಪ್ರಭು ಕೆಂಪೇಗೌಡ ಸಿನಿಮಾ ಅನೌನ್ಸ್: ಇದು ದಿನೇಶ್ ಬಾಬು ನಿರ್ದೇಶನದ‌ ಚಿತ್ರ; ಕಿರಣ್ ತೋಟಂಬೈಲ್ ನಿರ್ಮಾಣ

ಕನ್ನಡ ಸಿನಿಮಾ ರಂಗದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ.

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಸಾಹಸ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿರುವುದು ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ದಿನೇಶ್ ಬಾಬು.

ಇನ್ಸ್‌ಪೆಕ್ಟರ್‌ ವಿಕ್ರಂ, ಅಭಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್ ಬಾಬು ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಿದ್ರೆ ನಾಡಪ್ರಭು ಕೆಂಪೇಗೌಡರಾಗಿ ಬಣ್ಣ ಹಚ್ಚುತ್ತಿರುವವರು ಯಾರು ಅನ್ನೋದನ್ನು ಸದ್ಯಕ್ಕೆ ಚಿತ್ರತಂಡ ರಿವೀಲ್ ಮಾಡಿಲ್ಲ. ಜನಪ್ರಿಯ ನಟರೊಬ್ಬರು ಕೆಂಪೇಗೌಡರಾಗಿ ರಾರಾಜಿಸಲಿದ್ದಾರೆ ಎನ್ನುತ್ತದೆ ಚಿತ್ರತಂಡ. ಸದ್ಯ ಆ ನಟ ತಮ್ಮ ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ನಿಮ್ಮ ಮುಂದೆ ಪರಿಚಯಿಸುವುದಾಗಿ ಚಿತ್ರತಂಡ ತಿಳಿಸಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅದರಂತೆ ಇಂದು ಧರ್ಮಬೀರು ನಾಡಪ್ರಭು ಕೆಂಪೇಗೌಡರ ಸಿನಿಮಾ ನಿಮ್ಮ ಮುಂದೆ ತರಲು ಸಜ್ಜಾಗಿದ್ದಾರೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದು, ಉಜ್ವಲ್ ಕುಲಕರ್ಣಿ ಸಂಕಲನ, ನಿರ್ಮಾಪಕರಾದ ಕಿರಣ್ ತೋಟಂಬೈಲ್ ಸಂಗೀತ ಒದಗಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಹಾಡುಗಳಿಗಿದ್ದು, ಮಾಸ್ತಿ ಹಾಗೂ ರಘು‌ ನಿಡುವಳ್ಳಿ ಸಂಭಾಷಣೆ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕಿದ್ದು, ಚೇತನ್ ರಾಜ್ ನಿರ್ಮಾಣ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಕನ್ನಡ ಹಾಗೂ‌‌‌ ಇಂಗ್ಲೀಷ್ ಭಾಷೆಯಲ್ಲಿ ಚಿತ್ರ‌ ನಿರ್ಮಾಣವಾಗಲಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ‌ ಮುಹೂರ್ತ ನಡೆಯಲಿದೆ. ಮುಹೂರ್ತ ಮುಗಿಸಿಕೊಂಡು ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Categories
ಸಿನಿ ಸುದ್ದಿ

ಕನ್ನಡದ ಈ ಬಚ್ಚನ್ ಈಗ ಬಹು ಭಾಷೆಯ ಅಚ್ಚೇ ವಿಲನ್!

ವೃತ್ತಿ ಬದುಕಿಗೆ ತಿರುವು ಕೊಟ್ಟ ಯುವ ಬುಕ್ಕಿ ಪಾತ್ರ
ಸ್ಯಾಂಡಲ್ವುಡ್ ಟು ಬಾಲಿವುಡ್ ಪಯಣ
ಸಖತ್ ಹೈಟು, ಖಡಕ್ ವಾಯ್ಸ್ ಬಚ್ಚನ್ ಜಿಂದಗಿಯ ಕಿಕ್

ಕನ್ನಡ ಚಿತ್ರರಂಗದಲ್ಲಿ ಖಳನಟರ ಸಂಖ್ಯೆಗೇನೂ ಕಮ್ಮಿ ಇಲ್ಲ. ದಿನ ಕಳೆದಂತೆ ಹೊಸ ಖಳನಟರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಪ್ಪಟ ಕನ್ನಡದ ಸಿನಿಮಾ ಪ್ರೇಮಿ ಎಂದೆನಿಸಿಕೊಂಡಿರುವ ಖಳನಟರೊಬ್ಬರು ಇದೀಗ ಶೈನ್ ಆಗುತ್ತಿದ್ದಾರೆ. ಹೌದು ಅದು ಬೇರಾರೂ ಅಲ್ಲ ಬಚ್ಚನ್.

ಅರೇ ಹೆಸರೇ ಬಚ್ಚನ್ ಅಂತಾನಾ ಎಂಬ ಪ್ರಶ್ನೆ ಬರಬಹುದು. ಯೆಸ್ ಇವರು ಆ ಅಮಿತಾಬ್ ಬಚ್ಚನ್ ಅಲ್ಲ, ಕನ್ನಡದ ಬಚ್ಚನ್. ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಟರಾಗಿದ್ದ ಇವರು ದೂರದ ಮುಂಬೈಗೂ ಜಿಗಿದವರು. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಒಂದಷ್ಟು ಸಿನಿಮಾ ಮಾಡಿದವರು. ಸದ್ಯ ಖಳನಟರಾಗಿಯೇ ಗುರುತಿಸಿಕೊಂಡಿರುವ ಬಚ್ಚನ್ ಈಗ ಸುದ್ದಿಯಲ್ಲಿದ್ದಾರೆ.

ಯಾರು ಈ ಬಚ್ಚನ್ ಎಂಬ ಪ್ರಶ್ನೆಗೆ ‘ಯುವ’ ಸಿನಿಮಾ‌ಉತ್ತರ. ಹೌದು ಆ ಸಿನಿಮಾ‌ ನೋಡಿದವರಿಗೆ ಇವರ ಪರಿಚಯ ಇದ್ದೇ ಇರುತ್ತೆ. ಯುವ ಚಿತ್ರದಲ್ಲಿ ಬುಕ್ಕಿ ಪಾತ್ರದ ಮೂಲಕ ಗಮನ ಸೆಳೆದ ಬಚ್ಚನ್ ಆ ಪಾತ್ರ ಮೂಲಕ ನನ್ನ ವೃತ್ತಿ ಬದುಕಿಗೊಂದು ತಿರುವು ಸಿಕ್ಕಿದೆ ಎಂಬ ಖುಷಿ ಹೊರಹಾಕುತ್ತಾರೆ.

ಬಚ್ಚನ್ ಆರಡಿ ಕಟೌಟ್. ಪಗರ್ ದಸ್ತಾದ ಮೈಕಟ್ಟು. ಖಡಕ್ ವಾಯ್ಸ್. ಆರಂಭದಲ್ಲಿ ಬಾಲಿವುಡ್ ಅಂಗಳದಲ್ಲೇ ಕಾಲೂರಿದ್ದ ಬಚ್ಚನ್ ಮತ್ತೆ ಅವಕಾಶ ಹುಡುಕಿ ಬಂದಿದ್ದರಿಂದ ಪುನಃ ಕನ್ನಡಕ್ಕೆ ಬಂದಿದ್ದಾರೆ. ಹಾಗೆ ನೋಡಿದರೆ, ಬಚ್ಚನ್ ಬರೀ ಕನ್ನಡಕ್ಕೆ ಸೀಮಿತವಾಗಿಲ್ಲ. ಅವರು ಪ್ಯಾನ್ ಇಂಡಿಯಾ ಸಿನಿಮಾಗಳ ವಿಲನ್.

ಕನ್ನಡದ ಸಿನಿಮಾಗಳ ಜೊತೆ ಧಾರಾವಾಹಿ, ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ರಿಲೀಸ್ ಯುವರಾಜ್‌ಕುಮಾರ್‌ ನಟನೆಯ ‘ಯುವ’ ಚಿತ್ರದಲ್ಲಿ ಬಚ್ಚನ್ ಅವರ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.

‘ಯುವ ಚಿತ್ರದಲ್ಲಿ ಅವರು ಬುಕ್ಕಿ ಪಾತ್ರ ಮಾಡಿದ್ದಾರೆ. ಅವರ ಪಾತ್ರದಿಂದಲೇ ಚಿತ್ರದ ನಾಯಕ ಕ್ರೀಡೆಯಿಂದ ದೂರ ಆಗುವ ದೃಶ್ಯವಿದೆ. ಈ ಪಾತ್ರದಲ್ಲಿ ಅವರನ್ನು ನೋಡಿ ತುಂಬಾ ಜನ ನಾನು ಉತ್ತರ ಭಾರತದವನು ಅಂದುಕೊಂಡಿದ್ದು ನಿಜ. ಆದರೆ ಬಚ್ಚನ್ ಅವರು ಪಕ್ಕಾ ಕನ್ನಡಿಗ. ಬಾಲಿವುಡ್ ಗೆ ಹೋಗುವ ಮುನ್ನ ಕನ್ನಡದ ಕಿರುತೆರೆಯಲ್ಲಿ ನಟಿಸುತ್ತಿದ್ದರು. ನಂತರ ಹಿರಿತೆರೆಗೂ ಕಾಲಿಟ್ಟರು. ಈಗ ಯುವ ಚಿತ್ರದಲ್ಲಿ ಅವರು ಮಾಡಿರುವ ಬುಕ್ಕಿ ಪಾತ್ರ ಅವರೇ ಹೇಳುವಂತೆ ಅವರ ವೃತ್ತಿ ಪಯಣಕ್ಕೊಂದು ಹೊಸ ತಿರುವು ಕೊಟ್ಟಿದೆ. ಈ ಸಿನಿಮಾ ನಂತರ ಅವರಿಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದೆ ಎಂಬುದು ಬಚ್ಚನ್‌ ಮಾತು.

ಅಂದಹಾಗೆ ಬಚ್ಚನ್ ಮೈಸೂರಿನ ಎಚ್‌ ಡಿ ಕೋಟೆ ಮೂಲದವರು. ಅವರು ಸಿನಿಮಾಗೆ ಕಾಲಿಟ್ಟಿದ್ದೇ ನಿರ್ಮಾಪಕ ಆಗಬೇಕೆಂದು. ಆದರೆ, ಅವರ ಹೈಟು ಮತ್ತು ದೇಹ ನೋಡಿದ ಕೆಲವರು ಕಿರುತೆರೆಯಲ್ಲಿ ನಟನೆಗೆ ಅಕಾಶಗಳು ಕೊಟ್ಟರು.

‘ಮುಕ್ತ ಮುಕ್ತ’, ‘ರಂಗೋಲಿ’, ‘ರಥಸಪ್ತಮಿ’, ‘ನಮ್ಮ ಲಚ್ಚಿ’, ‘ಜೋಗುಳ’ ಇತರೆ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲೆಲ್ಲ ಬಹುತೇಕ ವಿಲನ್ ಆಗುಯೇ ಅಬ್ಬರಿಸಿದರು.

‘ಜೋಗಯ್ಯ’ ಚಿತ್ರದಲ್ಲಿ ಪೊಲೀಸ್‌ ಪಾತ್ರ ಮಾಡುವ ಮೂಲಕ ಹಿರಿತೆರೆಗೂ ಕಾಲಿಟ್ಟರು. ಮುಂದೆ ‘ಬ್ರಹ್ಮ’, ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ಕಾಟೇರ’, ‘ಒಂದು ಸರಳ ಪ್ರೇಮ ಕತೆ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಈಗ ಬಚ್ಚನ್ ಒಂದಷ್ಟು ಸಿಮಾಗಳಲ್ಲಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಅವರ ‘ಜಡ್ಜ್‌ಮೆಂಟ್‌’ ಚಿತ್ರದಲ್ಲಿ ಇವರೇ ಮೇನ್ ವಿಲನ್‌. ಹಿಂದಿಯಲ್ಲಿ ವರುಣ್‌ ಧವನ್‌ ಜತೆಗೆ ‘ಭೇಡಿಯಾ 2’, ಮರಾಠಿಯಲ್ಲಿ ‘ಸುದಾಗಡ್‌ 07’ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಮೇಲೆ ಈಗಷ್ಟೆ ‘ಬಿಹು ಅಟ್ಯಾಕ್‌’ ಚಿತ್ರಕ್ಕೆ ವಿಲನ್‌ ಆಗಿದ್ದಾರೆ.

ಅದೇನೆ ಇರಲಿ ಬಚ್ಚನ್ ಅವರಿಗೆ ಅವರ ಹೈಟು ಮತ್ತು ವಾಯ್ಸ್ ವರವಾಗಿದೆ. ಅವರು ಮಾತನಾಡುವ ಶೈಲಿ, ಬಾಡಿ ಲಾಗ್ವೇಜ್‌ ಹಾಗೂ ಅವರ ಔಟ್‌ ಲುಕ್‌ ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಸಲೀಸಾಗಿ ಅವಕಾಶಗಳು ಸಿಗುತ್ತಿವೆ.
ತೆರೆಮೇಲೆ ವಿಲನ್ ಆಗಿ ನೋಡುಗರಿಗೆ ಕೋಪ ತರಿಸಿದರೂ ತೆರೆ ಹೀಮದೆ ಮೃದು ಸ್ವಭಾವದ ವ್ಯಕ್ತಿತ್ವ ಇರುವ ಬಚ್ಚನ್, ತಾನು ಖಳನಟನಾಗಿ ಗಟ್ಟಿನೆಲೆ ಕಾಣಬೇಕು ಎಂದಷ್ಟೇ ಹೇಳುತ್ತಾರೆ. ಅವರ ಕನಸುಗಳು ಸಾಕಾರವಾಗಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ವೆಂಕ್ಯಾ ಸಿನಿಮಾಗೆ ಶೀಮ್ಲಾ ಬೆಡಗಿ ಎಂಟ್ರಿ: ಪವನ್ ಒಡೆಯರ್ ನಿರ್ಮಾಣದ ಚಿತ್ರಕ್ಕೆ ರೂಪಾಲಿ ಸೂದ್ ಆಗಮನ

ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಹೊಸ ಸಿನಿಮಾ ವೆಂಕ್ಯಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಾರಿ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದು, ಇದೀಗ ವೆಂಕ್ಯಾ ಬಳಗಕ್ಕೆ ಯುವ ನಟಿಯರೊಬ್ಬರ ಆಗಮನವಾಗಿದೆ. ಶಿಮ್ಲಾ ಸುಂದರಿ ರೂಪಾಲಿ ಸೂದ್ ಸಾಗರ್ ಪುರಾಣಿಕ್ ಚಿತ್ರದಲ್ಲಿ ನಟಿಸ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಮೂಲತಃ ಶಿಮ್ಲಾದವರಾದ ರೂಪಾಲಿ ಕಾಲೇಜು ದಿನಗಳಲ್ಲಿದ್ದಾಗಲೇ ಮಾಡೆಲಿಂಗ್ ಅಖಾಡಕ್ಕೆ ಇಳಿದಿದ್ದರು. ಮಾಡೆಲಿಂಗ್ ಜೊತೆ ಜೊತೆಯಲಿ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಿರುವ ಈ ಶಿಮ್ಲಾ ಚೆಲುವೆ, ಹಾರ್ಡಿ ಸಂಧು ಅವರೊಂದಿಗಿನ ಸೂಪರ್ ಹಿಟ್ ಹಾಡು’ಹಾರ್ನ್ ಬ್ಲೋ’ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ವೆಂಕ್ಯಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೂಪಾಲಿ ಈಗಾಗಲೇ ವೆಂಕ್ಯಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅವರು ಹಿಮಾಚಲದ ಪಹಾಡಿ ಹುಡುಗಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಅನುಭವ ಹಂಚಿಕೊಂಡಿರುವ ರೂಪಾಲಿ, ‘ನಾವು ಇತ್ತೀಚೆಗೆ ಮನಾಲಿಯ ಮುಂದೆ ಕೈಲಾಂಗ್ನಲ್ಲಿ, ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಡೊಳ್ಳು ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ವೆಂಕ್ಯಾನಿಗೂ ಸಾಥ್ ಕೊಟ್ಟಿದ್ದಾರೆ. ಒಡೆಯರ್ ಫಿಲ್ಮ್ಸ್ ನಡಿ ತಯಾರಾಗ್ತಿರುವ ಈ ಚಿತ್ರಕ್ಕೆ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಕೂಡ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕವನ್ನು ಕಥೆ ಆಧಾರಿಸಿ ಮೂಡಿ ಬರ್ತಿರುವ ವೆಂಕ್ಯಾ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿಎಸ್ ಬರೆದಿದ್ದಾರೆ, ಪ್ರಣವ್ ಮುಲೆ ಅವರ ಛಾಯಾಗ್ರಹಣ ಮತ್ತು ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ನ್ಯಾಚುರಲ್ ಸ್ಟಾರ್ ನಾನಿ ಹೊಸ ಸಿನಿಮಾ: ಮತ್ತೆ ದಸರಾ ಜೋಡಿ ಮೋಡಿಗೆ ಸಜ್ಜು

ದಸರಾ ಮೂಲಕ ಧಮಾಕ ಎಬ್ಬಿಸಿದ್ದ ನ್ಯಾಚುರಲ್ ಸ್ಟಾರ್ ನಾನಿ ಮತ್ತೊಮ್ಮೆ ಅದೇ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ ಘೋಷಣೆಯಾಗಿದೆ. ದಸರಾಗೆ ಆಕ್ಷನ್ ಕಟ್ ಹೇಳಿ ಮೊದಲ ಚಿತ್ರದಲ್ಲೇ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಎರಡನೇ ಬಾರಿಗೆ ಒಂದಾಗಿದ್ದಾರೆ. ಈ ಕ್ರೇಜಿ ಕಾಂಬೋದ ಹೊಸ ಪ್ರಾಜೆಕ್ಟ್ ಫಸ್ಟ್ ಲುಕ್ ರಿವೀಲ್ ಆಗಿದೆ.

ಬಾಯಲ್ಲಿ ಸಿಗರೇಟ್, ಸಖತ್ ರಗಡ್ ಲುಕ್ ನಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಪೋಸ್ಟರ್ ನಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ಕೂಡ ತೋರಿಸಲಾಗಿದೆ. ಕ್ರಾಂತಿಯು ಪ್ರಾರಂಭವಾಗುವ ಮೊದಲು ಹಿಂಸಾಚಾರವು ಅದರ ಸರಿಯಾದ ರೂಪವನ್ನು ಪಡೆಯುತ್ತದೆ. ಮತ್ತೊಂದು ಪವರ್ ಪ್ಯಾಕ್ಡ್ ಆಕ್ಷನ್ ನೊಂದಿಗೆ ನಾನಿ ಪರಿಚಯ ಎಂದು ಶ್ರೀಕಾಂತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ (SLV ಸಿನಿಮಾಸ್) ನಡಿ ಸುಧಾಕರ್ ಚೆರುಕುರಿ ನಾನಿ 33ನೇ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ನಾನಿ ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2025ಕ್ಕೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

‘ದಸರಾ’ ಸಿನಿಮಾ ತೆರೆಕಂಡು ಒಂದು ವರ್ಷವಾಗಿದೆ. ಈ ಖುಷಿಯಲ್ಲಿ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಸದ್ಯ ನಾನಿ 33 ಎಂದು ಟೈಟಲ್ ಇಡಲಾಗಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಮಾಸ್ ಆಕ್ಷನ್ ಎಂಟರ್ ಟೈನರ್ ದಸರಾ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿತ್ತು.

Categories
ಸಿನಿ ಸುದ್ದಿ

ಪಿ ಆರ್ ಕೆ ನಿರ್ಮಾಣದ ಹೊಸ ಚಿತ್ರ 02: ಏಪ್ರಿಲ್ 19 ರಿಲೀಸ್

ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಮ್ಮೆ ಸಿನಿ ಪ್ರೇಕ್ಷಕರನ್ನು “O2” ಎಂಬ ಹೊಸ ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದೆ. ಏಪ್ರಿಲ್ 19ರಂದು ತೆರೆ ಕಾಣಲು ಸಜ್ಜಾಗಿರುವ “O2” , ಒಂದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್. ಈ ಕಥೆಯು ಕೇವಲ‌ ಥ್ರಿಲ್ಲರ್ ಅಂಶಗಳನ್ನಷ್ಟೇ ಅಲ್ಲದೆ, ಪ್ರೀತಿ-ಪ್ರೇಮದ ಅಂಶಗಳನ್ನೂ ಒಳಗೊಂಡಿದೆ. ಇದೊಂದು “ಲವ್ ಥ್ರಿಲ್ಲರ್” ಎನ್ನಬಹುದು.


ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿರುವ‌ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಿ‌ ನಿಸ್ಸೀಮರು. “O2” ಪಿ.ಆರ್.ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣದ ಹತ್ತನೇ ಚಿತ್ರ.
ಚಿತ್ರದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಗೂ ಚಿತ್ರವನ್ನು ಪ್ರಶಾಂತ್ ರಾಜ್ ಮತ್ತು ಚಿತ್ರದ‌ ನಾಯಕ ರಾಘವ್ ನಾಯಕ್ ನಿರ್ದೇಶನವಿದೆ.


“O2” ಬಹಳ ವಿಭಿನ್ನ ಕಥಾಹಂದರದ ಚಿತ್ರ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಆದ್ಯ ಕರ್ತವ್ಯ ಎಂದು ನಂಬುವ ಶ್ರದ್ಧಾ (ಆಶಿಕಾ ರಂಗನಾಥ್), ತನ್ನ ಸಂಶೋಧನೆಯ ಫಲವಾದ
“O2” ಎಂಬ ಡ್ರಗ್ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ.

ಈ ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವಾಗುವುದೋ ಇಲ್ಲವೋ ಎಂಬುದು ಕಥೆ. ಒಟ್ಟಾರೆ “O2” ಚಿತ್ರ ಮನರಂಜನೆ, ವಿಜ್ಞಾನ, ಪ್ರೀತಿ, ಅನಿರೀಕ್ಷಿತ ತಿರುವುಗಳ ಸಮಾಗಮ.

ನಿರ್ಮಾಪಕಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೇಳುವಂತೆ, “O2″ ಎಂಬ ವಿಭಿನ್ನವಾದ ಚಿತ್ರವನ್ನು ನಿರ್ಮಿಸಿರುವುದು ನಮಗೆ ಹೆಮ್ಮೆ ತಂದಿದೆ. ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಸಂಸ್ಥೆಯಿಂದ ಮೂಡಿಬರುತ್ತಿರುವ ಈ‌ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ಭಾರಿ‌ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ನಂಬಿದ್ದೇನೆ” ಎನ್ನುತ್ತಾರೆ.

Categories
ಸಿನಿ ಸುದ್ದಿ

ಬದಲಾವಣೆಯಿಂದ ಬೆಳವಣಿಗೆ ಸಾಧ್ಯ: ನಟ ರಮೇಶ್ ಅರವಿಂದ್

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯಕ್ರಮ ‘ಸಿನಿಮಾ ಮಾಧ್ಯಮ ಸ್ಥಿತಿ-ಗತಿ’ ಕುರಿತ ವಿಚಾರ ಸಂಕಿರಣ
• ರಮೇಶ್‍ ಅರವಿಂದ್,‍ ಪಿ. ಶೇಷಾದ್ರಿ, ಜೋಗಿ ಉಪಸ್ಥಿತಿ
• ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ

‘ಮಾಡುವ ಕೆಲಸದಲ್ಲಿ ಬದಲಾವಣೆ ಇದ್ದಾಗ ಮಾತ್ರ ಫಲಿತಾಂಶದಲ್ಲೂ ಬದಲಾವಣೆ ಬರಲು ಸಾಧ್ಯ’ ಎಂದು ನಟ, ನಿರೂಪಕ, ನಿರ್ದೇಶಕ ರಮೇಶ್ ಅರವಿಂದ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
‘ಯಾವುದೇ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನೇ ಮಾಡುತ್ತಾ ಅದರಲ್ಲಿ ಬದಲಾವಣೆ ಬಯಸಿದರೆ ಎಂದಿಗೂ ಸಾಧ್ಯವಿಲ್ಲ. ಹೀಗಾಗಿ ಫಲಿತಾಂಶ ಬೇಕಾದರೆ ಪ್ರಸ್ತುತ ದಿನಮಾನಗಳಲ್ಲಿ ಬದಲಾವಣೆ ಅಗತ್ಯ ಮತ್ತು ಅನಿವಾರ್ಯ’ ಎಂದು ಅವರು ತಿಳಿಸಿದರು.


ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ ಮಾಧ್ಯಮ ಸ್ಥಿತಿ-ಗತಿ’ ಎಂಬ ವಿಚಾರ ಸಂಕಿರಣ ಹಾಗೂ ಸದಸ್ಯರಿಗೆ ಗುರಿತನ ಚೀಟಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಆಸೆ ಮತ್ತು ಗುರಿ ಇರುವವರು ಬದಲಾವಣೆಗೆ ಒಗ್ಗಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.


‘ಇತ್ತೀಚಿನ ದಿನಗಳಲ್ಲಿ ಒಟಿಟಿ ಮೂಲಕ ಚಿತ್ರಗಳು ಕೈಗೆಟುಕುತ್ತಿವೆ. ಹೀಗಾಗಿ ನಿಗದಿತ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ನಾವು ಇರುವ ಕಡೆಯಲ್ಲಿ ಸಿನಿಮಾ ನೋಡುವ ಪರಿಪಾಠ ಹೆಚ್ಚಾಗಿದೆ. ಪ್ರೇಕ್ಷಕನ ಸಮಯಕ್ಕೆ ಗೌರವ ಕೊಡುವ ಕೆಲಸ ಆಗಬೇಕು. ಆಗ ಮಾತ್ರ ಜನರನ್ನ ಚಿತ್ರಮಂದಿರದ ಕಡೆ ಕರೆತರಲು ಸಾಧ್ಯ. ಅದೇ ರೀತಿ ಪ್ರತಿಯೊಬ್ಬ ನಟನಲ್ಲಿ, ಮಾಧ್ಯಮದವರಲ್ಲಿ ಒಂದೊಂದು ವಿಶೇಷತೆಗಳಿವೆ ನಮ್ಮ ಸಾಮರ್ಥ್ಯವನ್ನ ಅರಿತು ವಿಭಿನ್ನ ಮತ್ತು ವಿಶೇಷವಾಗಿ ಕಾಣಿಸಬೇಕು. ಏನೇ ಬದಲಾವಣೆಗೆ ನಾವು ಒಗ್ಗಿಕೊಂಡರೂ, ಆತ್ಮವನ್ನು ಮಾತ್ರ ಮಾರಾಟ ಮಾಡಿಕೊಳ್ಳಬಾರದು. ಅದೊಂದನ್ನು ಜೋಪಾನವಾಗಿ ಇಟ್ಟುಕೊಂಡರೆ ಅಲ್ಲಿ ನಮ್ಮ ಉಳಿಗಾಲ ಇದೆ’ ಎಂದು ಕಿವಿಮಾತು ಹೇಳಿದರು.


ಹಿರಿಯ ನಿರ್ದೇಶಕ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಮಾತನಾಡಿ, ‘ಚಿತ್ರರಂಗ ಇಂದು ಉದ್ಯಮವಾಗಿ ಮಾರ್ಪಟ್ಟಿದೆ .ಇದೇ ವಿಷಯಕ್ಕಾಗಿ ಹಿರಿಯ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಚಿತ್ರರಂಗವನ್ನು ಕಲೋದ್ಯಮ ಎಂದು ಕರೆದಿದ್ದಾರೆ ಅದು ಪ್ರಸ್ತುತವೂ ಕೂಡ. ಕನ್ನಡ ಚಿತ್ರರಂಗಕ್ಕೆ 90 ವರ್ಷಗಳಾಗಿವೆ. ಈ ಒಂಬತ್ತು ದಶಕಗಳ ಅವಧಿಯಲ್ಲಿ ಬರೋಬ್ಬರಿ ಐದೂವರೆ ಸಾವಿರ ಚಿತ್ರಗಳು ತೆರೆಗೆ ಬಂದಿವೆ. ಚಿತ್ರರಂಗ ಸರಿ ಇಲ್ಲ, ನಷ್ಟ ಹೆಚ್ಚು ಎಂದಿದ್ದರೆ ಪ್ರತಿವರ್ಷವೂ ಸುಮಾರು 250ಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗುತ್ತಿರಲಿಲ್ಲ. ಚಿತ್ರರಂಗದ ಸ್ಥಿತಿ ಚೆನ್ನಾಗಿಯೇ ಇದೆ. ಇದಕ್ಕೆ ಪೂರಕವಾಗಿ ಇದುವರೆಗೂ ನಾನು ನಿರ್ದೇಶಿಸಿದ ಚಿತ್ರಗಳ ಪೈಕಿ ಒಂದನ್ನು ಹೊರತುಪಡಿಸಿದರೆ, ಮಿಕ್ಕಂತೆ ಎಲ್ಲಾ ಚಿತ್ರಗಳು ನಿರ್ಮಾಪಕರಿಗೆ ಹಾಕಿದ ಬಂಡವಾಳವನ್ನು ತಂದುಕೊಟ್ಟಿದೆ’ ಎಂದು ಅವರು ಹೇಳಿದರು.


‘ಸಾಮಾನ್ಯವಾಗಿ ನಾವು ಪರಭಾಷೆಯ ಚಿತ್ರಗಳು ಚೆನ್ನಾಗಿವೆ, ಅವರಂತೆ ನಾವು ಚಿತ್ರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾತಾಡುವುದನ್ನು ಕೇಳುತ್ತಿರುತ್ತೇವೆ. ಇತ್ತೀಚೆಗೆ ನನಗೆ ಮಲಯಾಳಂ, ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ಅದೇ ರಾಜ್ಯಗಳಿಗೆ ಹೋಗಿ, ಅಲ್ಲಿನವರ ಜೊತೆಗೆ ನೋಡುವ ಅವಕಾಶ ಸಿಕ್ಕಿತ್ತು. ಆ ಸಮಯದಲ್ಲಿ ಅಲ್ಲಿನ ನಟ-ನಟಿಯರು, ತಂತ್ರಜ್ಞರ ಜೊತೆ ಮಾತನಾಡುವಾಗ, ಅವರು ನಮ್ಮ ಚಿತ್ರರಂಗಕ್ಕಿಂತ ನಿಮ್ಮ ಚಿತ್ರರಂಗ ಚಂದ ಎಂದು ಹೇಳುತ್ತಿದ್ದರು. ಇದನ್ನೆಲ್ಲಾ ಗಮನಿಸಿದರೆ ಎಲ್ಲಾ ಚಿತ್ರರಂಗಗಳಲ್ಲೂ ತನ್ನದೇ ಆದ ಸಮಸ್ಯೆಗಳಿವೆ ಮತ್ತು ಇದರ ನಡುವೆಯೇ ಚಿತ್ರಗಳು ನಿರ್ಮಾಣವಾಗುತ್ತಿವೆ’ ಎಂದು ಅವರು ತಿಳಿಸಿದರು.


ಹಿರಿಯ ಪತ್ರಕರ್ತ ಮತ್ತು ಸಾಹಿತಿ ಜೋಗಿ ಮಾತನಾಡಿ, ‘ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ನೋಡುವ ರೀತಿಯೇ ಬೇರೆಯಾಗಿದೆ. ಚಿತ್ರವೊಂದರ ಟೀಸರ್ ಬಿಡುಗಡೆಯಾದರೆ ಆ ಕ್ಷಣವೇ ಅದರ ಸುದ್ದಿ ಬರಬೇಕು. ಪತ್ರಿಕೆಯಲ್ಲಿ ಮರುದಿನ ಆ ಸುದ್ದಿ ಪ್ರಕಟವಾಗುವಷ್ಟರಲ್ಲಿ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಂಡಿರುತ್ತದೆ. ಆ ಟೀಸರ್‍ ಹೇಗಿದೆ ಎನ್ನುವುದಕ್ಕಿಂತ, ಟೀಸರ್‍ ಎಷ್ಟು ವೀಕ್ಷಣೆ ಕಂಡಿದೆ ಎಂದು ಬರೆಯುವ ಒತ್ತಡವು ನಮ್ಮ ಮೇಲೆ ಇರುತ್ತದೆ .ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಕರ್ತರನ್ನು ನೋಡುವ ಸ್ಥಿತಿಯೇ ಬೇರೆಯಾಗಿದೆ’ ಎಂದು ಅವರು ಹೇಳಿದರು.


‘ಸಿನಿಮಾ ನೋಡಿ ಹೊರ ಬಂದಾಗ ಕಥೆ ಹೇಗಿದೆ, ಚಿತ್ರ ಹೇಗಿದೆ ಎನ್ನುವುದನ್ನು ಕೇಳುವ ಬದಲು ಚಿತ್ರಕ್ಕೆ ಎಷ್ಟು ಸ್ಟಾರ್ ಕೊಡುತ್ತೀರಿ ಎಂದು ಕೇಳುವ ಪರಿಪಾಠ ಹೆಚ್ಚಾಗಿದೆ. ಕನಿಷ್ಠ ಮೂರು ಸ್ಟಾರ್ ಕೊಡಲೇಬೇಕು. ವಿಮರ್ಶೆ ಮಾಡುವುದನ್ನು ಅರಗಿಸಿಕೊಳ್ಳುವ ಮನಸ್ಥಿತಿಯೇ ಇಲ್ಲ. ಎಲ್ಲವೂ ಪರವಾಗಿಯೇ ಬರಬೇಕು ಎನ್ನುವ ಉದ್ದೇಶ ಚಿತ್ರ ತಂಡದ್ದು’ ಎಂದು ತಿಳಿಸಿದರು.
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಾ.ನಾ ಸುಬ್ರಹ್ಮಣ್ಯ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

Categories
ಸಿನಿ ಸುದ್ದಿ

ಆರ್ ಸಿ ಸ್ಟುಡಿಯೋಸ್ ನಿರ್ಮಾಣದ 6ನೇ ಚಿತ್ರಕ್ಕೆ ಶಿವಣ್ಣ ಹೀರೋ: ಬಿಗ್ ಕಾಂಬೋ ಹೆಚ್ಚಿಸಿದ ನಿರೀಕ್ಷೆ

ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿರುವ ಆರ್ ಚಂದ್ರು, ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಐದು ಚಿತ್ರಗಳಿಗೆ ಚಾಲನೆ ನೀಡಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅರ್ ಸಿ ಸ್ಟುಡಿಯೋಸ್ ಗೆ ಚಾಲನೆ ನೀಡುವುದರ ಜೊತೆಗೆ ಶೀರ್ಷಿಕೆ ಅನಾವರಣ ಮಾಡಿದ್ದರು.

ಈಗ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಆರನೇ ಚಿತ್ರದ ಘೋಷಣೆಯಾಗಿದೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಆರನೇ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಆರ್ ಚಂದ್ರು ಅವರು ಟ್ವಿಟರ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಈ ಸಿನಿಮಾದ ನಿರ್ದೇಶನ ಬೇರೆಯವರು ಮಾಡಲಿದ್ದಾರೆ. ಚಂದ್ರು ಅವರು ತಮ್ಮ ಆರ್.ಸಿ ಸ್ಟುಡಿಯೋಸ್ ಮೂಲಕ ಬಿಗ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ‌ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಡಿಲವರಿ ಬಾಯ್ ಬಾರಿಸಿದ ಭರ್ಜರಿ ಬೌಂಡರಿ!

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ರೇಟಿಂಗ್: 3/5

ನಿರ್ದೇಶಕ: ಸಂತೋಷ್ ಆನಂದ್ ರಾಮ್
ನಿರ್ಮಾಣ : ಹೊಂಬಾಳೆ ಫಿಲಂಸ್
ತಾರಾಗಣ: ಯುವರಾಜಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್, ಹಿತ ಮತ್ತು ಇತರರು.

ಒಬ್ಬನಿಗೋಸ್ಕರ ಒಂದು ಗುಂಪು.
ಒಂದು ಗುಂಪಿಗೋಸ್ಕರ ಒಬ್ಬ…’
ಇಷ್ಟು ಹೇಳಿದ ಮೇಲೆ ಯುವ ಒಂದು ಸ್ಟೂಡೆಂಟ್ ಗ್ಯಾಂಗ್ ವಾರ್ ಸಿನಿಮಾ ಅನ್ನೋದು ಗೊತ್ತಾಗದೇ ಇರದು.
ಹೌದು ಯುವ ಒಂದು ಕಾಲೇಜ್ ಬ್ಯಾಕ್ ಗ್ರೌಂಡ್ ನಲ್ಲಿ ಸಾಗುವ ಸಿನಿಮಾ. ಪಕ್ಕಾ ಯೂತ್ಸ್ ಟಾರ್ಗೆಟ್ ಮಾಡಿ ಮಾಡಿರುವ ಚಿತ್ರ. ಕಥೆಯಲ್ಲಿ ಹೇಳಿಕೊಳ್ಳದ ‘ಪವರ್ ‘ ಇರದಿದ್ದರೂ ಹೀರೋ ಮಾಡುವ ಫೈಟು ಮತ್ತು ಡ್ಯಾನ್ಸ್ ನಲ್ಲಿ ಆ ‘ಪವರ್’ ಕಾಣಬಹುದು.

ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಸಿನಿಮಾ ನಿರಾಸೆ ಮಾಡಲ್ಲ. ನಿರ್ದೇಶಕರು ಇಲ್ಲಿ ಸೆಕೆಂಡ್ ಹಾಫ್ ನಲ್ಲಿರುವ ಹಿಡಿತವನ್ನು ಫಸ್ಟ್ ಹಾಫ್ ನಲ್ಲಿ ಇಟ್ಟುಕೊಂಡಿದ್ದರೆ ಯುವ ಇನ್ನಷ್ಟು ಇಷ್ಟವಾಗುತ್ತಿದ್ದ. ಆದರೂ ಮಾಸ್ ಮತ್ತು ಕ್ಲಾಸ್ ಗೇನೂ ಇಲ್ಲಿ ಕಮ್ಮಿ ಇಲ್ಲ. ಇಲ್ಲಿ ಹೀರೋ ಹೊಡೆದಾಡುವ ಎನರ್ಜಿ ಇದೆ. ಹೋರಾಡುವ ಫೋರ್ಸ್ ಇದೆ. ಸಣ್ಣ ದ್ವೇಷವಿದೆ, ಬದುಕಿನ ಪ್ರೀತಿ ತುಂಬಿದೆ, ಗುರಿ ಇದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ಅಪ್ಪ ಮಗನ ಬಾಂಧವ್ಯ ಮೇಳೈಸಿದೆ. ಇವೆಲ್ಲವನ್ನೂ ಅಷ್ಟೇ ಚೆನ್ನಾಗಿ ಕಟ್ಟಿಕೊಡಲಾಗಿದೆ.

ಮೊದಲರ್ಧ ಕಾಲೇಜ್ ಸ್ಟೋರಿಯಲ್ಲೇ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಒಂದಷ್ಟು ತಿರುವುಗಳೊಂದಿಗೆ ನೋಡುವ ಕುತೂಹಲ ಹೆಚ್ಚಿಸುತ್ತೆ. ಆ ಕುತೂಹಲ ಏನು ಅನ್ನೋ ಪ್ರಶ್ನೆ ಇದ್ದರೆ ಒಮ್ಮೆ ಯುವ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಕಥೆ ಹೇಗೇ ಇರಲಿ, ಭರ್ಜರಿ ಮೇಕಿಂಗ್ ಮುಖ್ಯ. ಆ ಮೇಕಿಂಗ್ ಇಲ್ಲಿ ಹೈಲೆಟ್. ಚಿತ್ರ ಸ್ವಲ್ಪ ಲ್ಯಾಗ್ ಎನಿಸುತ್ತೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಕಥೆ ಎಲ್ಲೋ ಒಂದು ಕಡೆ ಟ್ರಾಕ್ ಬದಲಿಸಿತಾ ಅನ್ನುವಷ್ಟರಲ್ಲಿ ಬರುವ ಎರಡು ಹಾಡು ಮತಗತದೇ ಟ್ರಾಕ್ ಮೇಲೆ ಸಾಗುತ್ತದೆ. ಈಗಿನ ಟ್ರೆಂಡ್ ಇರೋದೇ ಮಾಸ್. ಆ ಮಾಸ್ ಫೀಲ್ ಕಟ್ಟಿಕೊಡಲು ನಿರ್ದೇಶಕರು ಹರಸಾಹಸ ಪಟ್ಟಿರೋದು ನಿಜ. ಸಿನಿಮಾದ ಹೈಲೆಟ್ ಅಂದರೆ ಫೈಟು. ಇನ್ನು ಇಲ್ಲೊಂದು ವಿಷಯ ಹೇಳಲೇಬೇಕು. ನಿರ್ದೇಶಕರು ಮೊದಲಾರ್ಧದ ಪ್ರತಿ ಫ್ರೇಮಲ್ಲೂ ಸಿಗರೇಟ್, ಡ್ರಿಂಕ್ಸ್ ಗೆ ಹೆಚ್ಚು ಜಾಗ ಕೊಟ್ಟಿದ್ದಾರೆ. ಅದು ಕೊಂಚ ಅತಿಯಾಯ್ತು ಅನಿಸೋದು ಬಿಟ್ಟರೆ ಹೀರೋಗೆ ಇನ್ನಷ್ಟು ಧಮ್ ಅನ್ನುವ ಕಥೆ ಕಟ್ಟಬಹುದಿತ್ತು. ಆ ಪ್ರಯತ್ನ ಇಲ್ಲಾಗಿಲ್ಲ.

ಏನದು ಕಥೆ?

ಮಂಗಳೂರು ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಓದುವ ಯುವ ಹಾಸ್ಟೆಲ್ ಹುಡುಗರ ಫೇವರೇಟ್. ಕಾಂಪ್ರಮೈಸ್ ಅನ್ನೋದು ಅವನ ಲೈಫಲ್ಲೂ ಇಲ್ಲ, ಲವ್ವಲ್ಲು ಇಲ್ಲ. ಅವನನ್ನು ತಡೆಯೋಕು ಆಗಲ್ಲ, ತಡ್ಕೋಳೋಕೂ ಆಗಲ್ಲ. ಅಲ್ಲಿನ ಲೋಕಲ್ ಹುಡುಗರ ಮಧ್ಯೆ ಆಗಾಗ ಕಿರಿಕ್ ಶುರುವಾಗುತ್ತೆ. ಈಗೋ ಸಮಸ್ಯೆಯಿಂದ ದೊಡ್ಡ ಹೊಡೆದಾಟವಾಗಿ ಸ್ಟುಡೆಂಟ್ ಗ್ಯಾಂಗ್ ವಾರ್ ಆಗುವಷ್ಟರಮಟ್ಟಿಗೆ ಡ್ರಾಮ ನಡೆಯುತ್ತೆ. ಆ ಹೊಡೆದಾಟದಲ್ಲೇ ಮೊದಲರ್ಧ ಮುಗಿಯುತ್ತೆ.

ಇತ್ತ ಅಪ್ಪನಿಗೆ ಹೊಡೆದಾಡೋ ಮಗ ಅಂದರೆ ಅಲರ್ಜಿ. ಅತ್ತ ತನ್ನ ಮಗಳ ಮದ್ವೆ ಮಾಡಲು ಹರಸಾಹಸ ಮಾಡುವ ಅಪ್ಪ ಸಾಲದ ಸುಳಿಯಲ್ಲಿ ಒದ್ದಾಡುತ್ತಾನೆ. ಅಲ್ಲೊಂದು ಘಟನೆ ನಡೆಯುತ್ತೆ. ಆ ಘಟನೆಯೇ ಸಿನಿಮಾದ ಮತ್ತೊಂದು ತಿರುವು. ಇನ್ನು ಯುವ ಅಪ್ಪ ಮಾಡಿದ ಸಾಲ ತೀರಿಸಲು ಮುಂದಾಗುತ್ತಾನೋ, ತನಗಿರುವ ಗುರಿಯೊಂದನ್ನು ಮುಟ್ಟಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾನೋ ಅನ್ನೋದು ಕಥೆ. ಅದನ್ನು ತಿಳಿಯುವ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಿ.

ಯಾರ ನಟನೆ ಹೇಗೆ?

ಯುವರಾಜಕುಮಾರ್ ಅವರ ಮೊದಲ ಸಿನಿಮಾ ಇದು. ಆದರೆ, ಪಕ್ಕಾ ಹೀರೋ ಮೆಟೀರಿಯಲ್ ಆಗಿ ಕಾಣುತ್ತಾರೆ. ಫೈಟು, ಡ್ಯಾನ್ಸ್ ನಲ್ಲಿ ಇಷ್ಟವಾಗುತ್ತಾರೆ. ಕಣ್ಣಲ್ಲಿ ಫೋರ್ಸ್ ಇದೆ. ಡೈಲಾಗ್ ಹರಿ ಬಿಡುವಲ್ಲಿ ಇನ್ನಷ್ಟು ಫೋರ್ಸ್ ಬೇಕು. ಮಾಸ್ ಹೀರೋಗೆ ಬೇಕಾದ ಎಲ್ಲಾ ಕ್ವಾಲಿಟೀಸ್ ಕೂಡ ಇದೆ. ಕನ್ನಡದಲ್ಲಿ ಹೀರೊಲೋ ಆಗಿ ಗಟ್ಟಿಯಾಗಿ ನಿಲ್ಲುವ ಎಲ್ಲ ಗುಣ ಲಕ್ಷಣಗಳು ಇವೆ. ಮೊದಲ ಬಾಲ್ ನಲ್ಲಿ ಸಿಕ್ಸರ್ ಬಾರಿಸದಿದ್ದರೂ ಭರ್ಜರಿ ಬೌಂಡರಿ ದಾಟಿಸಿದ ತೃಪ್ತಭಾವ ಅವರದು. ಸಣ್ಣಪುಟ್ಟ ಮಿಸ್ಟೇಕ್ಸ್ ಎಲ್ಲವೂ ಅವರ ಸ್ಟಂಟ್ ನಲ್ಲಿ ಮರೆಯಾಗುತ್ತವೆ.

ಸಪ್ತಮಿ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ.. ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ.
ಅಚ್ಯುತ ಅವರಿಲ್ಲಿ ಅಪ್ಪನಾಗಿ ಆಪ್ತವಾಗುತ್ತಾರೆ. ಸುಧಾರಾಣಿ ಅಮ್ಮನಾಗಿ ಇಷ್ಟವಾಗುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ ಗಮನ ಸೆಳೆಯುತ್ತಾರೆ. ಹಾಗೆಯೆ ಕಿಶೋರ್ ಪಾತ್ರ ಕೂಡ ಯುವನ ಓಟಕ್ಕೆ ಸಾಥ್ ನೀಡಿದೆ.

ಸಂಗೀತ ನಿರ್ದೇಶಕ ಅಜನೀಶ್ ಅವರ ಎರಡು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಛಾಯಾಗ್ರಾಹಕ ಶ್ರೀಷ ಕೂದುವಳ್ಳಿ ಅವರ ಕ್ಯಾಮರಾ ಕೈಚಳಕ ಯುವ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಸಿಂಹಗುಹೆ ಹಾಡು ಹೊರಬಂತು ಬಿಡುಗಡೆ

ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ಅವರ ನಿರ್ದೇಶನದ ೩ನೇ ಚಿತ್ರ ಸಿಂಹಗುಹೆ. ರವಿ ಶಿರೂರು, ನಿವಿಶ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳಿಗೆ ಇತ್ತೀಚೆಗೆ ನಟ ಅನಿರುದ್ದ ಅವರು ಚಾಲನೆ ನೀಡಿದರು. ಎಸಿ ಮಹೇಂದರ್ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಈ ಸಂದರ್ಭದಲ್ಲಿ ನಿರ್ದೇಶಕ ಎಸ್‌ಜಿಆರ್ ಮಾತನಾಡುತ್ತ ಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಇರುವ ಚಿತ್ರವಾಗಿದ್ದು. ಜಾಗರಹಳ್ಳಿ ಎಂಬ ಊರಲ್ಲಿ ಮನೆಯೊಂದರ ಮುಂದೆ ಬಹುತೇಕ ಚಿತ್ರದ ಕಥೆ ನಡೆಯುತ್ತದೆ. ಸಿಂಹಗುಹೆ ಎನ್ನುವುದು ಆ ಮನೆಯ ಹೆಸರು, ನಾಯಕ ಕೂಡ ವಿಷ್ಣು ಅಭಿಮಾನಿ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ನನ್ನ ಹಿಂದಿನ ಚಿತ್ರಗಳಿಗೆ ಕೆಲಸಮಾಡಿದ ಮಹೇಂದರ್ ಅವರೇ ಈ ಚಿತ್ರಕ್ಕೂ ಸಿನಿಮಾಟೋಗ್ರಫಿ ಮಾಡಿದ್ದಾರೆ, ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಮೇ ಎಂಡ್ ಅಥವಾ ಜುಲೈ ಮೊದಲವಾರ ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

ಚಿತ್ರದ ನಾಯಕ ರವಿ ಶಿರೂರ್ ಮಾತನಾಡಿ ಇದೊಂದು ಚಿಕ್ಕ ಪ್ರಯತ್ನ, ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಒಂದು ಮರ್ಡರ್ ನಡೆದಾಗ ಅದು ಈ ಹುಡುಗನನ್ನು ಹೇಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಯಿತು ಎಂಬುದನ್ನು ಚಿತ್ರದ ಮೂಲಕ ಹೇಳಿದ್ದೇವೆ ಎಂದು ವಿವರಿಸಿದರು, ನಾಯಕಿ ನಿವಿಶ್ಕಾ ಪಾಟೀಲ್ ಮಾತನಾಡುತ್ತ ಇದೇ ನನ್ನ ಮೊದಲ ಚಿತ್ರ, ಇದರ ನಂತರ ನಾಲ್ಕು ಸಿನಿಮಾ ಆಯಿತು, ಹಾಗಾಗಿ ನನಗೆ ಈ ಚಿತ್ರ ತುಂಬಾ ಪ್ರಾಮುಖ್ಯ, ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದ ನನಗೆ ರವಿ ಸರ್ ಕರೆದು ಅವಕಾಶ ನೀಡಿದರು ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಅನುರಾಧಾ ಮಾತನಾಡಿ ನಾನೊಬ್ಬ ಡ್ಯಾನ್ಸರ್. ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಮಾಡಿದ್ದೇನೆ, ಇದರಲ್ಲಿ ಸೆಕೆಂಡ್ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ ಈ ಸಿನಿಮಾ ಪ್ರಾರಂಭವಾದಾಗ ನಾನಿರಲಿಲ್ಲ, ಮ್ಯೂಸಿಕ್ ಮಾಡಿಕೊಡಿ ಅಂತ ನಿರ್ದೇಶಕರು ನನ್ನ ಬಳಿ ಬಂದರು, ಮೊದಲು ೩ ಹಾಡು ಅಂತಿತ್ತು, ನಂತರ ಅದು ೪ ಆಯ್ತು. ನಾನೂ ಸಹ 2 ಹಾಡುಗಳನ್ನು ಹಾಡಿದ್ದೇನೆ ಎಂದರು.

ಸಾಹಿತಿ ಶಿವನಂಜೇಗೌಡ ಮಾತನಾಡಿ ಚಿತ್ರದಲ್ಲಿ ನಾನು ಭೂಮಿ ತಿರುಗುವುದು ಎಂಬ ಹಾಡನ್ನು ಬರೆದಿದ್ದೇನೆ ಎಂದರು, ಮುಖ್ಯ ಅತಿಥಿಯಾಗಿದ್ದ ಅನಿರುದ್ದ ಮಾತನಾಡಿ ಹೊಸ ತಂಡಕ್ಕೆ ಪ್ರೋತ್ಸಾಹ ನೀಡಲು ನಾನಿಲ್ಲಿ ಬಂದಿದ್ದೇನೆ, ಇವರ ಕೆಲಸ ನನಗೆ ಬಹಳ ಇಷ್ಟವಾಯ್ತು, ಹಾಡು ಚೆನ್ನಾಗಿ ಮೂಡಿಬಂದಿದೆ ಎಂದರು.

error: Content is protected !!