ನಾಡಪ್ರಭು ಕೆಂಪೇಗೌಡ ಸಿನಿಮಾ ಅನೌನ್ಸ್: ಇದು ದಿನೇಶ್ ಬಾಬು ನಿರ್ದೇಶನದ‌ ಚಿತ್ರ; ಕಿರಣ್ ತೋಟಂಬೈಲ್ ನಿರ್ಮಾಣ

ಕನ್ನಡ ಸಿನಿಮಾ ರಂಗದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ.

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಸಾಹಸ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿರುವುದು ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ದಿನೇಶ್ ಬಾಬು.

ಇನ್ಸ್‌ಪೆಕ್ಟರ್‌ ವಿಕ್ರಂ, ಅಭಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್ ಬಾಬು ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಿದ್ರೆ ನಾಡಪ್ರಭು ಕೆಂಪೇಗೌಡರಾಗಿ ಬಣ್ಣ ಹಚ್ಚುತ್ತಿರುವವರು ಯಾರು ಅನ್ನೋದನ್ನು ಸದ್ಯಕ್ಕೆ ಚಿತ್ರತಂಡ ರಿವೀಲ್ ಮಾಡಿಲ್ಲ. ಜನಪ್ರಿಯ ನಟರೊಬ್ಬರು ಕೆಂಪೇಗೌಡರಾಗಿ ರಾರಾಜಿಸಲಿದ್ದಾರೆ ಎನ್ನುತ್ತದೆ ಚಿತ್ರತಂಡ. ಸದ್ಯ ಆ ನಟ ತಮ್ಮ ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ನಿಮ್ಮ ಮುಂದೆ ಪರಿಚಯಿಸುವುದಾಗಿ ಚಿತ್ರತಂಡ ತಿಳಿಸಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅದರಂತೆ ಇಂದು ಧರ್ಮಬೀರು ನಾಡಪ್ರಭು ಕೆಂಪೇಗೌಡರ ಸಿನಿಮಾ ನಿಮ್ಮ ಮುಂದೆ ತರಲು ಸಜ್ಜಾಗಿದ್ದಾರೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದು, ಉಜ್ವಲ್ ಕುಲಕರ್ಣಿ ಸಂಕಲನ, ನಿರ್ಮಾಪಕರಾದ ಕಿರಣ್ ತೋಟಂಬೈಲ್ ಸಂಗೀತ ಒದಗಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಹಾಡುಗಳಿಗಿದ್ದು, ಮಾಸ್ತಿ ಹಾಗೂ ರಘು‌ ನಿಡುವಳ್ಳಿ ಸಂಭಾಷಣೆ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕಿದ್ದು, ಚೇತನ್ ರಾಜ್ ನಿರ್ಮಾಣ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಕನ್ನಡ ಹಾಗೂ‌‌‌ ಇಂಗ್ಲೀಷ್ ಭಾಷೆಯಲ್ಲಿ ಚಿತ್ರ‌ ನಿರ್ಮಾಣವಾಗಲಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ‌ ಮುಹೂರ್ತ ನಡೆಯಲಿದೆ. ಮುಹೂರ್ತ ಮುಗಿಸಿಕೊಂಡು ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Related Posts

error: Content is protected !!