Categories
ಸಿನಿ ಸುದ್ದಿ

ತಮ್ಮ ಸುಖಾಗಮನ ಬಯಸುವ ಗಣೇಶ್!

ಮಹಾ ಶಿವರಾತ್ರಿಯ ಶುಭ ದಿ‌ನ ಶುರುವಾಯಿತು ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಸೆಳೆದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹಾಗೂ “ಹೊಂದಿಸಿ ಬರೆಯಿರಿ”, “ತೀರ್ಥರೂಪ ತಂದೆಯವರಿಗೆ” ಅಂತಹ ಉತ್ತಮ ಚಿತ್ರಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ”ತಮ್ಮ ಸುಖಾಗಮನ ಬಯಸುವ” ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ಅವರು ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಹಾಗೂ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ “ತಮ್ಮ ಸುಖಾಗಮನ ಬಯಸುವ” ಚಿತ್ರದ ಮುಹೂರ್ತ ಸಮಾರಂಭ ಮಾಹಾ ಶಿವರಾತ್ರಿಯ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣೇಶ್ ಅವರ ಸಾಕಷ್ಟು ಅಭಿಮಾನಿಗಳು ಹಾಗೂ ಸ್ನೇಹಿತರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇಂದು ನನ್ನ “ಗೋಲ್ಡನ್” ದಿನ ಎಂದು ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ, 2006 ರಲ್ಲಿ “ಮುಂಗಾರು ಮಳೆ” ತೆರೆ ಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಇಂದು ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ ಇಪ್ಪತ್ತು ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ. “ತೀರ್ಥರೂಪ ತಂದೆಯವರಿಗೆ” ಚಿತ್ರದ ಚಿತ್ರೀಕರಣ ಸಮಯದಲ್ಲಿ ನನ್ನ ಸ್ನೇಹಿತನ ಮೂಲಕ ಗಣೇಶ್ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಿದೆ. ಇದು ಗಣೇಶ್ ಅವರಿಗಾಗಿಯೇ ಬರೆದಿರುವ ಕಥೆ. ಈ ಕಥೆಗೆ ಅವರೆ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮ. ವೈಷ್ಣವಿ ಫಿಲಂಸ್ ಲಾಂಛನದಲ್ಲಿ ವಿಜಯ್ ಲೋಹಿತ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಇನ್ನೂ, ಶೀರ್ಷಿಕೆಯ ಬಗ್ಗೆ ಹೇಳುವುದಾದರೆ, ಶೀರ್ಷಿಕೆ ಬಳಕೆಗೆ ಹತ್ತಿರವಾಗಿರಬೇಕು. ಜನರಿಗೆ ಆಪ್ತವಾಗಬೇಕು. ನನ್ನ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಹಾಗೆ ಇತ್ತು. ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ ಜೊತೆಗೆ ಕಥೆಗು ಹಾಗೂ ಪಾತ್ರಗಳಿಗೂ ಪೂರಕವಾಗಿದೆ ಎಂದರು.

“ಮುಂಗಾರು ಮಳೆ” 2006 ರಲ್ಲಿ ಬಿಡುಗಡೆಯಾಗಿದ್ದು, ಈಗ 2026. ಇಪ್ಪತ್ತು ವರ್ಷಗಳಾಗಿದೆ. ಇಪ್ಪತ್ತು ವರ್ಷಗಳು ಹೇಗೆ ಕಳೆಯಿತು ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ. ಇನ್ನೂ, ಒಂದು ದಿನ ಸ್ನೇಹಿತರೊಬ್ಬರು ಫೋನ್ ಮಾಡಿ ನನ್ನ ಸ್ನೇಹಿತ ಒಂದು ಸ್ಕ್ರಿಪ್ಟ್ ಮಾಡಿಕೊಂಡಿದ್ದಾನೆ. ಅದು ನಿಮಗಾಗಿಯೇ ಮಾಡಿರುವ ಕಥೆಯಂತೆ ಎಂದರು. ನಾನು ಯಾರು ಅಂತ ಕೇಳಿದೆ. ರಾಮೇನಹಳ್ಳಿ ಜಗನ್ನಾಥ. “ಹೊಂದಿಸಿ ಬರೆಯಿರಿ” ನಿರ್ದೇಶಕರು ಎಂದರು. ಹೌದಾ. ನಾನು ಆ ಸಿನಿಮಾ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಅವರೊಬ್ಬ ಸೆನ್ಸಿಬಲ್ ರೈಟರ್. ಮನುಷ್ಯನ ಭಾವನೆಗಳನ್ನು ಆ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ ಅಂದೆ. ಆನಂತರ ಜಗನ್ನಾಥ ಅವರು ಬಂದು ಕಥೆ ಹೇಳಿದರು.

ಕಥೆ ಕೇಳುವಾಗಲೇ ಸಂತೋಷದಲ್ಲಿ ಅಳು ಬಂತು. ಅಂತಹ ಅಪರೂಪದ ಕಥೆ ಇದು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಬಹಳ ಚೆನ್ನಾಗಿತ್ತು. ನಮ್ಮ ಚಿತ್ರಕ್ಕೂ ಇಂತಹ ಶೇರ್ಷಿಕೆಯನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದೆ. “ತಮ್ಮ ಸುಖಾಗಮನ ಬಯಸುವ” ಎಂದು ಎಲ್ಲರಿಗೂ ಪ್ರಿಯವಾಗುವ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆ ಇದೆ. ಅದಕ್ಕೆ ನಿರ್ಮಾಪಕರು ಸಹಕಾರ ನೀಡುತ್ತಾರೆ. ಇನ್ನೂ, ಅರ್ಜುನ್ ಜನ್ಯ ಹಾಗೂ ನನ್ನ ಕಾಂಬಿನೇಶನ್ ನಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳು ಬಂದಿದೆ. ಈ ಚಿತ್ರದಲ್ಲೂ ಸುಮಧುರ ಹಾಡುಗಳಿರಲ್ಲಿದೆ ಎಂದು ನಾಯಕ ಗಣೇಶ್ ತಿಳಿಸಿದರು.

ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ಮೊದಲ ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಿರ್ಮಾಪಕ ವಿಜಯ್ ಲೋಹಿತ್. ಸಹ ನಿರ್ಮಾಪಕ ಸತೀಶ್ ಎಚ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಸೀತಾಳ ವಂಡರ್ ಫುಲ್ ಜರ್ನಿ!

ಚಿತ್ರ ವಿಮರ್ಶೆ: ವಿಭ

ಚಿತ್ರ: ಸೀತಾ ಪಯಣ
ನಿರ್ದೇಶನ: ಅರ್ಜುನ್ ಸರ್ಜಾ
ನಿರ್ಮಾಣ: ಅರ್ಜುನ್ ಸರ್ಜಾ
ತಾರಾಗಣ: ಐಶ್ವರ್ಯ ಅರ್ಜುನ್ ಸರ್ಜಾ, ನಿರಂಜನ್ ಸುಧೀಂದ್ರ, ಪ್ರಕಾಶ್ ರೈ, ಸತ್ಯರಾಜ್, ಸುಮಿತ್ರ, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಇತರರು.

ಏನಾದ್ರು ಹೇಳಬೇಕಾ..?
ಸಿನಿಮಾ ಶುರುವಿಗೆ ಈ
ಡೈಲಾಗ್ ಬರುತ್ತೆ. ಈ ಡೈಲಾಗ್ ಬರುವ ಹಿಂದೆ ಸಾಕಷ್ಟು ಘಟನೆಗಳು ನಡೆದು ಹೋಗಿರುತ್ತೆ. ಆ ಕಥೆಯ ಜರ್ನಿ ನಡುವಿನ ಸ್ವಾರಸ್ಯಕರ ಸಂಗತಿಗಳು ಏನು ಅಂತ ತಿಳಿಯುವ ಕುತೂಹಲವಿದ್ದರೆ, ಜಾಲಿಯಾಗಿ ಸೀತಾಪಯಣ ನೋಡಬಹುದು.

ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ. ಒಂದೊಳ್ಳೆಯ ಕಥೆ ಮೂಲಕ ನೋಡುಗರ ಮನಸ್ಸು ಖುಷಿಪಡಿಸುವಲ್ಲಿ ನಿರ್ದೇಶಕ ಅರ್ಜುನ್ ಸರ್ಜಾ ಅವರು ಯಶಸ್ವಿಯಾಗಿದ್ದಾರೆ.

ಇಲ್ಲಿ ಮಧುರ ಭಾವನೆಗಳಿವೆ. ಮರೆಯಲಾರದ ಸಂಬಂಧಗಳ ಮೌಲ್ಯಗಳಿವೆ. ಅಲ್ಲಲ್ಲಿ ಕಚಗುಳಿಯ ದೃಶ್ಯಾವಳಿಗಳಿವೆ. ಆಗಾಗ ಎದೆಭಾರವೆನಿಸುವ ಸನ್ನಿವೇಶಗಳೂ ಇವೆ. ಮುಖ್ಯವಾಗಿ ಇಲ್ಲಿ ಅನಗತ್ಯ ದೃಶ್ಯವಾಗಲಿ, ಕಥೆಯಾಗಲಿ ಇಲ್ಲ. ಸ್ವಾರ್ಥ ಇರದ ಪಯಣದ ಕಥೆ ಇಲ್ಲಿದೆ. ಹಾಗಾಗಿ ಇದೊಂದು ಫೀಲ್ ಗುಡ್ ಮೂವಿ.

ನಿರ್ದೇಶಕರ ಕಥೆಯಲ್ಲಿ ಸ್ಪಷ್ಟತೆ ಇದೆ. ಮೇಕಿಂಗ್ ಕೂಡ ಕಥೆಗೆ ಪೂರಕವಾಗಿದೆ. ಏನು ಹೇಳಬೇಕು, ಎಷ್ಟು ಹೇಳಬೇಕು ಎಂಬುದರ ಅರಿವು ಇದೆ. ಆ ಕಾರಣಕ್ಕೆ ಈ ಸೀತೆಯ ಜರ್ನಿ ಇಷ್ಟವಾಗುತ್ತೆ.

ಇಲ್ಲಿ ಅಪ್ಪ ಮಗಳ ಬಾಂಧವ್ಯ ಇದೆ. ನಿಷ್ಕಲ್ಮಷ ಪ್ರೀತಿ ಇದೆ. ಕೂಡು ಕುಟುಂಬದ ಒಗ್ಗಟ್ಟಿನ ಒಲವಿದೆ. ಮುಗ್ಧತೆಯ ಭಾವ ಇದೆ. ಈ ಎಲ್ಲಾ ಕಾರಣಕ್ಕೂ ಸಿನಿಮಾ ರುಚಿಸುತ್ತೆ. ನೀಟ್ ಅಂಡ್ ಕ್ಲೀನ್ ನರೇಷನ್ ಇಲ್ಲಿರುವುದರಿಂದ ಎಲ್ಲೂ ಬೋರ್ ಅನಿಸದೆ ಸರಾಗವಾಗಿ ಸೀತಾ ಪಯಣ ನೋಡಿಸಿಕೊಂಡು ಹೋಗುತ್ತೆ.

ಮೊದಲರ್ಧ ಜರ್ನಿಯ ಸನ್ನಿವೇಶ ಎಲ್ಲೂ ಗೊಂದಲವಿಲ್ಲದೆ ಸಾಗುತ್ತೆ. ದ್ವಿತಿಯಾರ್ಧ ಸಾಕಷ್ಟು ತಿರುವುಗಳಿವೆ. ಒಂದೇ ಒಂದು ಜರ್ನಿಗೆ ಮನಸ್ಸುಗಳನ್ನು ಬೆಸೆಯುವ, ಸಂಬಂಧಗಳನ್ನು ಸೇರಿಸುವ ತಾಕತ್ತು ಇದೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ.

ಎಲ್ಲೋ ಒಂದು ಕಡೆ ಸಿನಿಮಾದ ಅವಧಿ ಕೊಂಚ ಹೆಚ್ಚಾಯ್ತು ಅನಿಸುತ್ತೆ. ಮಧ್ಯೆ ಬರುವ ಹಾಡು, ಫೈಟು ಅದನ್ನು ಮರೆಸುತ್ತೆ. ಉಳಿದಂತೆ ಚಿತ್ರಕಥೆಯಲ್ಲೂ ಹಿಡಿತವಿದೆ. ಪಾತ್ರ ಆಯ್ಕೆ ಕೂಡ ವೇಗ ಹೆಚ್ಚಿಸಿದೆ. ಅರ್ಜುನ್ ಸರ್ಜಾ ಅವರು ಎಲ್ಲಾ ವರ್ಗದವರೂ ನೋಡುವಂತಹ ಅಂದದ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿ ಎನ್ನಬಹುದು.

ಕಥೆ ಏನು?

ನಾಯಕಿ ಸೀತಾ (ಐಶ್ವರ್ಯ) ಪ್ರಾಜೆಕ್ಟ್ ವೊಂದನ್ನು ಅಟೆಂಡ್ ಮಾಡಲು ಬೆಳಗಾವಿಗೆ ತನ್ನ ಕಾರಲ್ಲಿ ಹೊರಡುತ್ತಾಳೆ. ದಾರಿ ನಡುವೆ ಅಭಿಷೇಕ್ ಕೂಡ ( ನಿರಂಜನ್) ಡ್ರಾಪ್ ಕೇಳ್ತಾನೆ. ಕಾರು ಹತ್ತಿಸಿಕೊಳ್ಳುವ ಮುನ್ನ ಅವನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ ಎಲ್ಲವನ್ನೂ ಪಡೆದು ಕೆಲ ಕಂಡೀಷನ್ಸ್ ಹಾಕಿ ಕಾರಲ್ಲಿ ಕೂರಿಸಿಕೊಳ್ಳುತ್ತಾಳೆ. ಅಲ್ಲಿಗೆ ಇಬ್ಬರ ಪಯಣ ಬೆಳಗಾವಿಯತ್ತ ಸಾಗುತ್ತೆ. ದಾರಿಯುದ್ದಕ್ಕೂ ಒಂದಷ್ಟು ಘಟನೆ ನಡೆದು ಹೋಗುತ್ತವೆ. ಒಂದಷ್ಟು ಮಾತುಕತೆ ನಂತರ ಸೀತಾಪುರ ಬಳಿ ಅವನು ಇಳಿಯುತ್ತಾನೆ. ಆಕೆ ಬೆಳಗಾವಿಗೆ ಹೋದಾಗ ಒಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಇಬ್ಬರು ಮತ್ತೆ ಒಂದಾಗ್ತಾರ? ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತಾ? ಅಪ್ಪನಲ್ಲಿ ಅಮ್ಮನನ್ನೂ ಕಾಣುವ ಆಕೆ ಲೈಫಲ್ಲಿ ಏನೆಲ್ಲ ಆಗುತ್ತೆ ಅನ್ನೊದನ್ನು ರೋಚಕವಾಗಿ ತೋರಿಸಲಾಗಿದೆ. ಮುಂದೆ ಏನಾಗುತ್ತೆ ಎಂಬ ಕುತೂಹಲ ಇದ್ದರೆ ಸಿನಿಮಾ ನೋಡಿ.

ಯಾರು ಹೇಗೆ?

ಇಲ್ಲಿ ಐಶ್ವರ್ಯ ಮುದ್ದಾಗಿ ಕಾಣಿಸಿಕೊಂಡಿರುವುದರ ಜೊತೆಗೆ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಭಾವುಕ ಸನ್ನಿವೇಶದಲ್ಲಿ ನೋಡುಗರನ್ನೂ ಭಾವುಕತೆಗೆ ದೂಡುತ್ತಾರೆ. ಡ್ಯಾನ್ಸ್, ಬಾಡಿ ಲಾಂಗ್ವೇಜಲ್ಲಿ ಇಷ್ಟ ಆಗ್ತಾರೆ.

ನಿರಂಜನ್ ಗುರುತಿಸಿಕೊಳ್ಳೋಕೆ ಅರ್ಜುನ್ ಸರ್ಜಾ ನಿರ್ದೇಶನವೇ ಬೇಕಾಯ್ತು. ಇಲ್ಲಿ ಹಿಂದಿನ ಸಿನಿಮಾಗಿಂತಲೂ ಮಾಗಿದ್ದಾರೆ. ನಟನೆ, ಫೈಟು, ಡ್ಯಾನ್ಸ್ ನಲ್ಲಿ ಸೈ ಅನಿಸುತ್ತಾರೆ. ಸತ್ಯರಾಜ್ ಅಪ್ಪನಾಗಿ ಗಮನ ಸೆಳೆದರೆ, ಪ್ರಕಾಶ್ ರೈ ತಾತನಾಗಿ ಚಪ್ಪಾಳೆ ಗಿಟ್ಟಿಸುತ್ತಾರೆ. ಅರ್ಜುನ್ ಸರ್ಜಾ ಪಾತ್ರವೊಂದರ ಮೂಲಕ ಎಂಟ್ರಿಕೊಟ್ಟು ಶಿಳ್ಳೆ ತಗೋತ್ತಾರೆ. ಧ್ರುವ ಸರ್ಜಾ ಕೂಡ ಫೈಟ್ ಒಂದರಲ್ಲಿ ಜೈ ಭಜರಂಗಬಲಿ ಅಂತಾರೆ. ಉಳಿದಂತೆ ಬರುವ ಪಾತ್ರದಾರಿಗಳೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿವೆ. ಬಾಲಮುರುಗನ್ ಕ್ಯಾಮರಾ ಕೈಚಳಕದಲ್ಲಿ ಸೀತಾಳ ವಂಡರ್ ಫುಲ್ ಜರ್ನಿ ಇದೆ. ಅನೂಪ್ ರೂಬಿನ್ಸ್ ಸಂಗೀತದಲ್ಲಿ ಹಾಡು, ಹಿನ್ನೆಲೆ ಸಂಗೀತ ಪರವಾಗಿಲ್ಲ.

ಕೊನೆದಾಗಿ ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ
ಮನುಷ್ಯತ್ವದ ಪಾಠವಿದೆ. ಪ್ರಾಣಿಗಳ ಮೇಕಿನ ಪ್ರೀತಿ, ಕಾಳಜಿ ಇದೆ. ಮನೆ ಅಂದ್ರೆ ಗೋಡೆಗಳಲ್ಲ ಸಂಬಂಧಗಳು ಎಂಬ ವ್ಯಾಖ್ಯಾನವಿದೆ.

Categories
ಸಿನಿ ಸುದ್ದಿ

ದೈವ ನಂಬಿದ ದೇವನ ಗೆಲುವು!

ಚಿತ್ರ ವಿಮರ್ಶೆ: ವಿಭ

ಚಿತ್ರ: ದೈವ
ನಿರ್ದೇಶನ: ಮಂಜುನಾಥ್‌ ಜಯರಾಜ್‌
ನಿರ್ಮಾಣ: ಜಯಮ್ಮ ಪದ್ಮರಾಜ್‌
ತಾರಾಗಣ: ಮಂಜುನಾಥ್‌ ಜಯರಾಜ್‌, ಸುರಭಿ, ನೀತು ರಾಯ್‌, ಬಲ ರಾಜವಾಡಿ, ಅರುಣ್‌ ಬಚ್ಚನ್‌, ನಿಶ್ಚಿತ ಶೆಟ್ಟಿ, ಮಂಜುರಾಜ್‌ ಸೂರ್ಯ (ವಿಸಿಎನ್‌ ಮಂಜು) ಇತರರು.

“ಈ ಊರನ್ನು ಉದ್ಧಾರ ಮಾಡೋಕೆ ದ್ಯಾವರಂಗೆ ಬಂದ್ರಲ್ಲೋ, ಅಂಥವರನ್ನೂ ಈ ಜನ ಬಿಡಲಿಲ್ಲ…” ಜನರನ್ನು ಕಾಪಾಡೋಕೆ ಆ ದ್ಯಾವ್ರೇ ಬರಬೇಕು…” ಅಲ್ಲೊಂದು ಕೊಲೆಯಾದ ವ್ಯಕ್ತಿಯ ಶವ ಮುಂದೆ ಆ ಊರ ಜನರಲ್ಲೊಬ್ಬ ಹೇಳುವ ಡೈಲಾಗ್‌ ಇದು. ಈ ಡೈಲಾಗ್‌ ನಿಂದ ಸಿನಿಮಾದ ಕಥೆ ಶುರುವಾಗುತ್ತೆ. ಅಲ್ಲಿಗೆ ಇದೊಂದು ರಿವೇಂಜ್‌ ಸ್ಟೋರಿ ಅಂತ ಗೊತ್ತಾಗುತ್ತೆ. ಆದರೆ, ಸಿನಿಮಾದಲ್ಲಿ ರಿವೇಂಜ್‌ ಕಥೆ ಇದೆಯಾ? ಈ ಪ್ರಶ್ನೆಗೆ ಸಿನಿಮಾ ನೋಡಬೇಕು. ಕನ್ನಡಕ್ಕೆ ಈ ಕಥೆ ಹೊಸದೇನಲ್ಲ. ಇಂತಹ ಅದೆಷ್ಟೋ ಕಥೆಗಳು ಬಂದಿವೆ. ಆದರೆ, ಸಂಪೂರ್ಣ ಹಳ್ಳಿ ಸೊಗಡಿನ ಕಥೆಯಾದ್ದರಿಂದ ಇದು ಒಂದಷ್ಟು ಮಂದಿಗೆ ಇಷ್ಟವಾಗಬಹುದು. ಕೆಲವರಿಗೆ ಕಥೆ ಹಳೆಯದು ಅನ್ನಿಸಬಹುದು. ಅದೇನೆ ಇದ್ದರೂ, ಹೊಸಬರ ಪ್ರಯತ್ನ ಮೆಚ್ಚಲು ಅಡ್ಡಿಯಿಲ್ಲ.

ನಿರ್ದೇಶಕ ಮಂಜುನಾಥ್‌ ಜಯರಾಜ್‌ ಇಲ್ಲಿ ಮೂರು ಕೆಲಸ ನಿರ್ವಹಿಸಿದ್ದಾರೆ. ಒಂದು ಕಡೆ ನಿರ್ಮಾಣ, ಇನ್ನೊಂದು ಕಡೆ ನಿರ್ದೇಶನ ಮತ್ತೊಂದು ಕಡೆ ನಟನೆ. ಹಾಗಾಗಿ ಯಾವುದನ್ನೂ ಫುಲ್‌ಫಿಲ್‌ ಮಾಡೋಕೆ ಹೋಗಿಲ್ಲ. ಕಥೆಯ ಎಳೆ ಹಳೆಯದ್ದಾಗಿದ್ದರೂ, ನಿರೂಪಣೆಯಲ್ಲಿ ಅದನ್ನು ಇನ್ನಷ್ಟು ಬಿಗಿಯಾಗಿಡಬಹುದಿತ್ತು. ಆದರೆ, ಅಂತಹ ಪ್ರಯತ್ನ ಇಲ್ಲಿ ಆಗಿಲ್ಲ. ಕಥೆ ಸರಳವಾಗಿದೆ. ಆದರೆ, ಚಿತ್ರಕಥೆಯಲ್ಲಿನ್ನೂ ಹಿಡಿತ ಬೇಕಿತ್ತು. ಕೆಲವು ದೃಶ್ಯಗಳಲ್ಲಿ ಹೊಸತನವಿದೆ. ಇಂತಹ ಕಥೆಗಳಿಗೆ ವೇಗ ಬೇಕು. ಮೊದಲರ್ಧ ಅಷ್ಟಾಗಿ ರುಚಿಸುವುದಿಲ್ಲ. ದ್ವಿತಿಯಾರ್ಧದ ಮುಂದೇನಾಗುತ್ತೆ ಅನ್ನುವ ಕುತೂಹಲವಿದೆ. ಕ್ಲೈಮ್ಯಾಕ್ಸ್‌ ಚೆನ್ನಾಗಿದೆಯಾದರೂ, ಮತ್ತಷ್ಟು ಗಟ್ಟಿಯಾಗಿರಬೇಕಿತ್ತು. ಇಡೀ ಕಥೆ ನಾಯಕನ ಸುತ್ತವೇ ಸುತ್ತುತ್ತೆ. ಅಲ್ಲಲ್ಲಿ ಸ್ವಲ್ಪ ನಿಧಾನ ಅನಿಸುತ್ತೆ. ಹಾಡೊಂದು ಕಾಣಿಸಿಕೊಂಡು ನಿಧಾನಗತಿಯ್ನು ಮರೆಮಾಚುತ್ತೆ. ಇಡೀ ಸಿನಿಮಾದಲ್ಲಿ ಅನ್ಯಾಯ, ಕೊಲೆ, ದಬ್ಬಾಳಿಕೆ, ಬೆದರಿಕೆಯಲ್ಲೇ ಸಾಗುತ್ತೆ. ಇಲ್ಲಿ ಹೀರೋ ಅ ಎಲ್ಲದರ ವಿರುದ್ಧ ಹೋರಾಡುತ್ತಾನೆ. ಅಂತ್ಯದಲ್ಲಿ ಏನಾಗುತ್ತೆ ಅನ್ನೋದೇ ಸಿನಿಮಾದ ಸಸ್ಪೆನ್ಸ್.‌

ಕಥೆ ಏನು?
ಒಂದೂರಲ್ಲಿ ಒಬ್ಬ ಗೌಡ. ಅವನಿಗೆ ಆ ಊರ ಜನರ ಜಮೀನಿನ ಮೇಲೆಯೇ ಆಸೆ. ಆ ಜನರಿಗೆ ಬಡ್ಡಿಗೆ ಹಣ ಕೊಟ್ಟು, ವಸೂಲಿ ಮಾಡೋದು ಅವನ ಕಾಯಕ. ಹಣ ಕೊಡದವರ ಜಮೀನು ಪತ್ರಕ್ಕೆ ಬಲವಂತದ ಸಹಿ ಮಾಡಿಸಿಕೊಂಡು ಕಬಳಿಸುವ ಗೌಡನಿಗೆ ಊರ ಜನ ಹಿಡಿಶಾಪ ಹಾಕುತ್ತಿರುತ್ತಾರೆ. ಜನರ ಪರ ಇರಬೇಕಾದ ಹೀರೋ ದೇವ ಆ ಗೌಡನ ಜೊತೆ ಕೂಲಿ ಮಾಡಿಕೊಂಡಿರುತ್ತಾನೆ. ಮೊದಲರ್ಧ ಹೀರೋ ಕೂಡ ಗೌಡ ಹೇಳಿದಂತೆಯೇ ಕೇಳುತ್ತಾನೆ. ದ್ವಿತಿಯಾರ್ಧ ಆ ಗೌಡನ ವಿರುದ್ಧವೇ ತಿರುಗಿ ಬೀಳುತ್ತಾನೆ. ಅದಕ್ಕೆ ಒಂದು ತಿರುವು ಇದೆ. ಆ ಟ್ವಿಸ್ಟ್‌ ಏನು ಅನ್ನುವ ಕುತೂಹಲವಿದ್ದರೆ ಒಮ್ಮೆ ನೋಡುವ ಪ್ರಯತ್ನ ಮಾಡಬಹುದು. ಇಲ್ಲಿ ದೈವದ ಮೊರೆ ಹೋಗುವ ಜನರಿಗೆ ಆ ಹೀರೋ ಕೂಡ ದೇವನಂತೆಯೇ ಕಾಣುತ್ತಾನೆ. ಅದು ಕ್ಲೈಮ್ಯಾಕ್ಸ್‌ನಲ್ಲಿ ರಿವೀಲ್‌ ಆಗುತ್ತೆ. ಒಟ್ಟಾರೆ, ಒಂದು ಸರಳ ಕಥೆ ಜೊತೆಗೆ ಕಮರ್ಶಿಯಲ್‌ ಅಂಶ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇಲ್ಲಿ ಫೈಟ್ಸ್‌ಗೇನೂ ಕೊರತೆ ಇಲ್ಲ. ಅಲ್ಲಲ್ಲಿ ಹೊಡೆದಾಟದ ದೃಶ್ಯಗಳು ಕಾಣಸಿಗುತ್ತವೆ. ಮಾಸ್‌ ಪ್ರಿಯರಿಗೆ ಫೈಟ್‌ ರುಚಿಸಬಹುದು. ಕೇಳುಗರಿಗೆ ಹಾಡೂ ಇದೆ. ಗುನುಗುವಂತಹ ಹಾಡೇನೂ ಇಲ್ಲ. ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದ.

ಯಾರು ಹೇಗೆ?
ನಾಯಕ ಮಂಜುನಾಥ್‌ ಜಯರಾಜ್‌ ಪಾತ್ರಕ್ಕೆ ಮೋಸ ಮಾಡಿಲ್ಲ. ನಟನೆಯಲ್ಲಿನ್ನೂ ಒಂದಷ್ಟು ಪಟ್ಟುಗಳನ್ನು ಹಿಡಿಯಬೇಕು. ಆದರೂ ಕೆಲವೊಂದು ದೃಶ್ಯಗಳಲ್ಲಿ ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ಫೈಟ್‌ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅಲ್ಲಲ್ಲಿ ಮಿಸ್ಟೇಕ್‌ ಇದ್ದರೂ, ಅವರ ಬಾಡಿಲಾಂಗ್ವೇಜ್‌ ಅದನ್ನು ಪಕ್ಕಕ್ಕಿಡುವಂತೆ ಮಾಡುತ್ತೆ. ಇನ್ನು, ಸುರಭಿ, ನೀತು ರಾಯ್‌ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬಲರಾಜವಾಡಿ ಅವರಿಲ್ಲಿ ದುಷ್ಟ ಗೌಡನಾಗಿ ಸ್ಕೋರ್‌ ಮಾಡಿದ್ದಾರೆ. ಪತ್ರಕರ್ತ ಮಂಜುರಾಜ್‌ ಸೂರ್ಯ ಸಿಕ್ಕ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದಂತೆ ತೆರೆಮೇಲೆ ಬರುವ ಪಾತ್ರಗಳು ಸಿಕ್ಕ ಪಾತ್ರಕ್ಕೆ ಜೀವ ತುಂಬಿವೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನ ಪರವಾಗಿಲ್ಲ. ಸಿದ್ಧಾರ್ಥ್‌ ಅವರ ಕ್ಯಾಮೆರಾ ಕೈಚಳಕದಲ್ಲಿ ದೈವದ ಸೊಬಗಿದೆ. ವಿಜೇತ ಮಂಜಯ್ಯ ಅವರ ಸಂಗೀತ ಪೂರಕವಾಗಿದೆ.

Categories
ಸಿನಿ ಸುದ್ದಿ

ಚೇಂಬರ್ ಅಧ್ಯಕ್ಷೆ ಜಯಮಾಲಗೆ ಸನ್ಮಾನ: ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ಮನವಿ

ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಡಾ.ಜಯಮಾಲ ಅವರನ್ನು ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ನಿಮ್ಮ ನಾಯಕತ್ವದ ಸಂದರ್ಭದಲ್ಲೆಲ್ಲಾ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆಗಳು ಮತ್ತು ಸಕಾರಾತ್ಮಕ ಕಾರ್ಯಕ್ರಮಗಳು ನಡೆದಿವೆ.

ಈ ಬಾರಿ ಸಹ ಅದೇ ರೀತಿಯ ಉತ್ತಮ ಕಾರ್ಯಗಳು ನೆರವೇರಲಿ ಮತ್ತು ಕನ್ನಡ ಚಿತ್ರರಂಗದ ಪ್ರಸ್ತುತ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರಗಳನ್ನು ಕಂಡುಕೊಳ್ಳುವಂತಾಗಲೆಂದು ಆಶಯ ವ್ಯಕ್ತಪಡಿಸಿದ ವೀರಕಪುತ್ರ ಶ್ರೀನಿವಾಸ ಅವರು, ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದಂತೆ ಈ ಎರಡು ಮನವಿಗಳನ್ನು ಅವರಿಗೆ ಸಲ್ಲಿಸಿದರು.

  1. ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಣೆಯಗಿದೆ. ಆದರೆ ಆರು ತಿಂಗಳು ಕಳೆದರೂ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಆದ್ದರಿಂದ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅದ್ಧೂರಿ ಸಮಾರಂಭವನ್ನು ಆಯೋಜಿಸುವಂತೆ ಸರ್ಕಾರವನ್ನು ವಿನಂತಿಸಬೇಕೆಂದು ಕೋರಿದರು. ಈ ಕಾರ್ಯಕ್ರಮವು ಕನ್ನಡ ಚಿತ್ರರಂಗಕ್ಕೆ ಹೊಸ ಉತ್ತೇಜನ ನೀಡುವ ರೀತಿಯಲ್ಲಿ ಆಯೋಜಿಸಬೇಕೆಂದು ವಿನಂತಿಸಿದ ಅವರು, ಆ ಕಾರ್ಯಕ್ರಮಕ್ಕೆ ಐವತ್ತು ಸಾವಿರದಷ್ಟು ಡಾ.ವಿಷ್ಣು ಸೇನಾನಿಗಳನ್ನು ಸಂಘಟಿಸುವ ಜವಬ್ದಾರಿಯನ್ನು ಹೊತ್ತುಕೊಂಡರು.
  2. ಅಭಿಮಾನ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ತೆರವುಗೊಳಿಸಲಾಗಿದೆ. ಅದು ಈ ನಾಡಿನ ಇತಿಹಾಸದಲ್ಲೊಂದು ಕಪ್ಪುಚುಕ್ಕೆಯಾಗಿ ದಾಖಲಾಗಿದೆ. ಸಾವಿನಲ್ಲೂ ಶಾಂತಿ ನೀಡದ ನಮ್ಮ ವ್ಯವಸ್ಥೆ ಬಗ್ಗೆ ನಮಗೆ ಅನುಕಂಪವಿದೆ. ಮೇರುನಟನ ಸ್ಮಾರಕವನ್ನೇ ತೆರುವುಗೊಳಿಸಿದ ಜಾಗದಲ್ಲಿ ಖಾಸಗಿ ಕಟ್ಟಡವೋ, ಮಾಲ್, ಕಾಂಪ್ಲೆಕ್ಸ್ ಬಂದರೆ ಅದು ಇನ್ನೂ ಅವಮಾನಕರ ಸಂಗತಿ. ಆದ್ದರಿಂದ ಆ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದೆ, ಮೂಲ ಉದ್ದೇಶಕ್ಕಾಗಿ ಮಾತ್ರವೇ ಬಳಸುವಂತೆ ಮಾಡಲು ವಾಣಿಜ್ಯ ಮಂಡಳಿಯು ಮುಂಜಾಗೃತೆಯನ್ನು ವಹಿಸಬೇಕೆಂದು ಕೋರಿದರು.

ಈ ಸಂದರ್ಭದಲ್ ಡಾ.ವಿಷ್ಣು ಸೇನಾ ಸಮಿತಿಯ ಆನಂದ ರಾಜ್, ಮಲ್ಲಿಕಾರ್ಜುನ್, ಎಸ್.ರಘು, ಮೂರ್ತಿ ಮೊದಲಾದವರು ಹಾಜರಿದ್ದರು.

Categories
ಸಿನಿ ಸುದ್ದಿ

ಪ್ರೇಮಿಗಳ ದಿನಕ್ಕೆ ಸೀತಾ ಪಯಣ: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರ ರಿಲೀಸ್

ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದ, ಶ್ರೀ ರಾಮ್ ಫಿಲಂಸ್ ಇಂಟರ್‌ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾಗೂ ಐಶ್ವರ್ಯ ಅರ್ಜುನ್ – ನಿರಂಜನ್ ನಾಯಕ – ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಸೀತಾ ಪಯಣ” ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನಮನ ಸೆಳೆದಿರುವ ಈ ಚಿತ್ರದ ಕಥೆ-ಚಿತ್ರಕಥೆ- ನಿರ್ಮಾಣ ಮತ್ತು ನಿರ್ದೇಶನ ಅರ್ಜುನ್ ಸರ್ಜಾ ಅವರದು. ಅನೂಪ್ ರೂಬೆನ್ಸ್ ಸಂಗೀತ ನಿರ್ದೇಶನ, ಜಿ.ಬಾಲಮುರುಗನ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ ನಿರ್ದೇಶನ ಹಾಗೂ ಶ್ರಸ್ತಿ ನೃತ್ಯ ನಿರ್ದೇಶನವಿದೆ.

ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಐಶ್ವರ್ಯ ಅರ್ಜುನ್, ನಿರಂಜನ್, ಅರ್ಜುನ್ ಸರ್ಜಾ, ಸತ್ಯರಾಜ್, ಪ್ರಕಾಶ್ ರೈ ಮತ್ತು ಕೋವೈ ಸರಳಾ ಮುಂತಾದವರಿದ್ದಾರೆ. ಅರ್ಜುನ್ ಅವರ ಸೋದರಳಿಯ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

Categories
ಸಿನಿ ಸುದ್ದಿ

ವೀರ ಕಂಬಳ ಚಿತ್ರಕ್ಕೆ ಬಣ್ಣ ಹಚ್ಚಿದ ವೀರೇಂದ್ರ ಹೆಗ್ಗಡೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ `ವೀರ ಕಂಬಳ’ ಚಿತ್ರ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಬಿಡುಗಡೆಯ ಕ್ಷಣಗಳು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ವೀರ ಕಂಬಳದ ಒಡಲಿನಲ್ಲಿರುವ ಒಂದೊಂದೇ ವೈಶಿಷ್ಟ್ಯಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ವೀರ ಕಂಬಳ ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಸರಿಸುಮಾರು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ.

ಇದರಲ್ಲಿನ ಅತ್ಯಂತ ಮಹತ್ವದ ಪಾತ್ರವೊಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿರೋದು ವಿಶೇಷ.
ವೀರೇಂದ್ರ ಹೆಗ್ಗಡೆ ಈ ಚಿತ್ರದಲ್ಲಿ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆಂಬ ವಿಚಾರ ವರ್ಷಗಳ ಹಿಂದೆಯೇ ಹೊರ ಬಂದಿತ್ತು. ಆದರೆ, ನಿರ್ದೇಶಕರಾಗಲಿ, ಚಿತ್ರತಂಡದವರಾಗಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೀಗ ವೀರೇಂದ್ರ ಹೆಗ್ಗಡೆ ನಿರ್ವಹಿಸಿರೋ ಪಾತ್ರದ ಚಹರೆಗಳನ್ನು ನಿರ್ದೇಶಕರೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಜೊತೆಗೆ, ಸದರಿ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದಿರೋ ಅಂಶಗಳನ್ನೂ ಹಂಚಿಕೊಂಡಿದ್ದಾರೆ. ಕಂಬಳದ ಇತಿಹಾಸ ಅರಿಯುತ್ತಾ ಹೋದಂತೆಲ್ಲ ಅದಕ್ಕೂ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಇರುವ ಅವಿನಾಭಾವ ನಂಟಿನ ವಿಚಾರ ರಾಜೇಂದ್ರ ಸಿಂಗ್ ಬಾಬು ಅವರನ್ನು ಬೆರಗುಗೊಳಿಸಿತ್ತಂತೆ.


ಅದುವರೆಗೆ ತುಳುನಾಡ ಸೀಮೆಯ ಖಾಸಗಿ ಮನೋರಂಜನೆಯ ಕ್ರೀಡೆಯಾಗಿದ್ದ ಕಂಬಳವನ್ನು ಎಪ್ಪತ್ತರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದವರು ವೀರೇಂದ್ರ ಹೆಗ್ಗಡೆ. ಆ ನಂತರ ಅದು ಬೇರೆ ಬೇರೆ ರೂಪಗಳಲ್ಲಿ ರೂಪಾಂತರ ಹೊಂದಿ ಇಡೀ ಕರುನಾಡನ್ನೇ ಸೆಳೆದುಕೊಂಡಿತ್ತು. ಈ ಕಾರಣದಿಂದಲೇ ವೀರೇಂದ್ರ ಹೆಗ್ಗಡೆ ಈ ಸಿನಿಮಾದಲ್ಲಿನ ಮಹತ್ವದ ಪಾತ್ರ ಮಾಡಬೇಕೆಂಬ ಆಸೆಯೊಂದು ಬಾಬು ಅವರೊಳಗೆ ಚಿಗಿತುಕೊಂಡಿತ್ತು. ಕಂಬಳದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಹೆಗ್ಗಡೆಯವರು ನಟಸಲು ಒಪ್ಪಿಗೆ ಸೂಚಿಸಿದ್ದರು. ಕಡೆಗೂ ಒಂದಿಡೀ ಸಿನಿಮಾದ ಆತ್ಮದಂಥಾ, ಮೌಲಿಕ ಸಂದೇಶವೊಂದನ್ನು ರವಾನಿಸುವ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಜೀವ ತುಂಬಿದ್ದಾರೆ. ಅವರ ಪಾತ್ರ ಕೂಡಾ ವೀರಕಂಬಳದ ಆಕರ್ಷಣೆಗಳಲ್ಲೊಂದಾಗಿದೆ ಎಂಬುದು ನಿರ್ದೇಸಕ ರಾಜೇಂದ್ರ ಸಿಂಗ್ ಬಾಬು ಅವರ ಅಭಿಪ್ರಾಯ.


ಹೆಗ್ಗಡೆಯವರೂ ಕೂಡಾ ಅತ್ಯಂತ ಸಂಭ್ರಮದಿಂದಲೇ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆಂಬ ಧನ್ಯತಾ ಭಾವ ಚಿತ್ರತಂಡದಲ್ಲಿದೆ. ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸವಿರುವ ವೀರ ಕಂಬಳ ಫೆಬ್ರವರಿ 27ರಂದು ತೆರೆಗಾಣಲಿದೆ.

Categories
ಸಿನಿ ಸುದ್ದಿ

ಜವಾರಿ ಕಥೆ ಹುಬ್ಬಳ್ಳಿ ಹಂಟರ್ಸ್ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ಫಸ್ಟ್ ಶೆಡ್ಯುಲ್ಡ್ ಮುಗಿಸಿದ ಹುಬ್ಬಳ್ಳಿ ಹಂಟರ್ಸ್…ಇದು ಬೆಲ್ ಬಾಟಮ್ ನಿರ್ಮಾಪಕ ಹೊಸ ಸಿನಿಮಾ

ಕನ್ನಡದ ಸೂಪರ್ ಹಿಟ್ ಸಿನಿಮಾ ಬೆಲ್ ಬಾಟಮ್ ನಿರ್ಮಾಪಕ ಸಂತೋಷ್ ಕುಮಾರ್ ಕೆಸಿ ಹೊಸ ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ತಮ್ಮದೇ ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್‌ನಡಿ‌ ಹುಬ್ಬಳ್ಳಿ ಹಂಟರ್ಸ್ ಎಂಬ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಎಡಗೈ ಅಪಘಾತಕ್ಕೆ ಕಾರಣ ಚಿತ್ರ ನಿರ್ದೇಶಿಸಿದ್ದ ಸಮರ್ಥ್ ಬಿ‌ ಕಡ್ಕೋಲ್ ಹುಬ್ಬಳ್ಳಿ ಹಂಟರ್ಸ್ ನಿರ್ದೇಶಕರು.

ಹುಬ್ಬಳ್ಳಿಯಲ್ಲಿ ಮುಹೂರ್ತ ನೆರವೇರೆಸಿದ್ದ ಚಿತ್ರತಂಡ ಇದೀಗ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಹುಬ್ಬಳ್ಳಿ ನಗರದಲ್ಲಿ 14 ದಿನ ಶೂಟಿಂಗ್ ಚಿತ್ರೀಕರಣ ನಡೆಸಿದೆ. ಮಾರ್ಚ್ ತಿಂಗಳಲ್ಲಿ ಸೆಕೆಂಡ್ ಶೆಡ್ಯುಲ್ಡ್ ಶೂಟಿಂಗ್ ಶುರು ಮಾಡಲು ಯೋಜನೆ ಹಾಕಿಕೊಂಡಿದೆ.

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಪ್ರಮೋದ್ ಶೆಟ್ಟಿ,‌ಮಹಾನಟಿ‌ ಖ್ಯಾತಿಯ ಧನ್ಯಶ್ರೀ ಸುಜಿತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಭಾರತದಾದ್ಯಂತ ಇರುವ ಖ್ಯಾತ ಕಂಟೆಂಟ್ ಕ್ರಿಯೇಟರ್ಸ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.

ಸಿನಿಮಾದ ಟೈಟಲ್ ಹೇಳುವಂತೆ ಇದು ಉತ್ತರ ಕರ್ನಾಟಕ ಸೊಗಡಿನ ಕಥೆ. ಸಮರ್ಥ್ ಅವರ್ ಕಥೆ ಬರೆದು ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಸಂಭಾಷಣೆ ಜವಾಬ್ದಾರಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಪ್ರಸನ್ನ ಕೇಶವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಗಿಲ್ಲಿ ನಟನ ಸೂಪರ್ ಹಿಟ್’ ಚಿತ್ರ : ಫೆ. 27ಕ್ಕೆ ರಿಲೀಸ್!

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ನಾಯಕನಾಗಿ ನಟಿಸಿರುವ, ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಸೂಪರ್ ಹಿಟ್’. ತನ್ನ ಆಂತರ್ಯದ ಕಸುವಿನ ಸುಳಿವಿನಿಂದಲೇ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟು ಹಾಕಿದ್ದ ಈ ಸಿನಿಮಾಕ್ಕೀಗ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಜನಪ್ರಿಯತೆಯೂ ಕೂಡಾ ಮತ್ತಷ್ಟು ಶಕ್ತಿ ತುಂಬಿದೆ.

ಇತ್ತೀಚೆಗೆ ಟೀಸರ್ ಹೊರತರಲಾಗಿದೆ. ಈ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ ಉಮೇಶ್, ಸಾಧು ಕೋಕಿಲಾ, ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಇತರರು ಸಿನಿಮಾ ಬಗ್ಗೆ ಮಾತಾಡಿದರು.

ಈ ಚಿತ್ರ ಇದೇ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸೂಪರ್ ಹಿಟ್ ಬಗ್ಗೆ ಮಾತಾಡಿದ ಅವರು, ಕಥೆ ಬರೆಯಲು ಶುರು ಮಾಡಿದಾಗಿನಿಂದ ಈ ವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ ಎಂಬ ಧನ್ಯತಾ ಭಾವ ವ್ಯಕ್ತಪಡಿಸಿದರು.

ವಿಜಯಾನಂದ್, ಯಾವುದಕ್ಕೂ ಕೊರತೆಯಾಗದಂತೆ ಒಂದಿಡೀ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಜಿ ಉಮೇಶ್ ಅವರ ಸಿನಿಮಾ ಪ್ರೇಮವನ್ನು ಕೊಂಡಾಡಿದ್ದಾರೆ. ತನ್ನ ಸಿನಿಮಾ ಮೂಡಿ ಬಂದಿರುವ ರೀತಿ ಮತ್ತು ಅದರ ಕಂಟೆಂಟಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸದರಿ ಚಿತ್ರ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬ ಭರವಸೆ ವ್ಯಕ್ತಪಡಿಸಿದರು. ನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ನೀಡಲು ಅನುವು ಮಾಡಿಕೊಡುವಂತೆ ಪ್ರೇಕ್ಷಕ ಪ್ರಭುಗಳಲ್ಲಿ ವಿನಂತಿಸಿಕೊಂಡರು.


ಇದೇ ವೇದಿಕೆಯಲ್ಲಿ ಮತ್ತೊಂದು ಖುಷಿಯ ಸಂಗತಿಯನ್ನೂ ವಿಜಯಾನಂದ್ ಹಂಚಿಕೊಂಡರು. ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕು ಗಳನ್ನು ಹೊಸಾ ಸಂಸ್ಥೆಯೊಂದು ದೊಡ್ದ ಮೊತ್ತಕ್ಕೆ ಖರೀದಿಸಿರುವುದಾಗಿ ಮಾಹಿತಿ ನೀಡಿದರು. ಈ ಸಿನಿಮಾವನ್ನು ಪ್ರೀತಿಯಿಂದ ನಿರ್ಮಾಣ ಮಾಡಿರುವ ಜಿ ಉಮೇಶ್ ಚುಟುಕಾದ ಮಾತುಗಳಲ್ಲಿಯೇ ತಮ್ಮ ಸಿನಿಮಾ ಪ್ರೇಮ, ಸೂಪರ್ ಹಿಟ್ ಬಗೆಗಿನ ಭರವಸೆ ವ್ಯಕ್ತಪಡಿಸುತ್ತಲೇ, ತಮ್ಮ ಮೊದಲ ಹೆಜ್ಜೆಯಂಥಾ ಈ ಚಿತ್ರವನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

ಸಾಧು ಕೋಕಿಲಾ, ಸೂಪರ್ ಹಿಟ್ ಸಿನಿಮಾ ತಂಡದ ಮೇಲೆ ದೇವರ ಆಶೀರ್ವಾದ ಇದೆ ಎಂಬ ವಿಚಾರವನ್ನು ಹೇಳುತ್ತಲೇ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಪ್ರಚಾರದ ಪಟ್ಟುಗಳು ಈ ದಿನಮಾನದಲ್ಲಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಚಿತ್ರತಂಡಕ್ಕೆ ಮನವರಿಕೆ ಮಾಡಿ ಕೊಡುತ್ತಲೇ, ಜನಪ್ರಿಯತೆಯ ಭರಾಟೆಯಲ್ಲಿ ವಹಿಸಬೇಕಾದ ಎಚ್ಚರದ ಬಗ್ಗೆಯೂ ಗಿಲ್ಲಿಗೆ ಕಿವಿ ಮಾತು ಹೇಳಿದರು.


ಈ ಚಿತ್ರಕ್ಕೆ ಸಾಹಿತ್ಯ, ಸಂಗೀತದ ಜವಾಬ್ದಾರಿಯೊಂದಿಗೆ ಒಂದು ವಿಶೇಷವಾದ ಪಾತ್ರದಲ್ಲಿಯೂ ನಟಿಸಿರುವ ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಸೂಪರ್ ಹಿಟ್ ಮೂಡಿ ಬಂದಿರೋ ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೇ, ಗಿಲ್ಲಿಯ ಯಶದ ಪ್ರಭೆ ಸದರಿ ಚಿತ್ರಕ್ಕೆ ವರವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಲ್ಲದೇ, ಈ ಹಿಂದೆ ಯಾವುದೇ ಸಿನಿಮಾದಲ್ಲಿ ನಟಿಸಿದ್ದರೂ ಕೂಡಾ, ಅಂಥಾ ಚಿತ್ರಗಳಿಗೆ ಪ್ರಚಾರ ನೀಡಬೇಕಿರುವ ಕರ್ತವ್ಯದ ಬಗ್ಗೆಯೂ ಗಿಲ್ಲಿ ನಟನಿಗೆ ಪ್ರೀತಿಯಿಂದ ಕಿವಿ ಮಾತು ಹೇಳಿದರು.

ಗಿಲ್ಲಿ ಮಾತಾಡಿ, ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ನತೆ ಸಲ್ಲಿಸುತ್ತಲೇ ಒಟ್ಟಾರೆ ಚಿತ್ರೀಕರಣ ರಸಾನುಭವಗಳನ್ನು ಹಂಚಿಕೊಂಡರು. ಈ ಮಧ್ಯೆ ಇತ್ತೀಚೆಗೆ ಹೊತ್ತಿಕೊಂಡಿದ್ದ ವಿವಾದವೂ ಸೇರಿದಂತೆ ಒಂದಷ್ಟು ವಿಚಾರಗಳಿಗೆ ಸ್ಪಷ್ಟೀಕರಣ ಕೊಡುತ್ತಲೇ ಸೂಪರ್ ಹಿಟ್ ಚಿತ್ರವನ್ನು ನೋಡಿ ಹರಸುವಂತೆ ಕೇಳಿಕೊಂಡರು.


ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಇನ್ನೂರಕ್ಕು ಹೆಚ್ಚು ಚಿತ್ರಮಂದಿಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ.

Categories
ಸಿನಿ ಸುದ್ದಿ

ಗಿಲ್ಲಿ ನಟನ ಸೂಪರ್ ಹಿಟ್ ಚಿತ್ರ; ಫೆ.27ಕ್ಕೆ ರಿಲೀಸ್

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ನಾಯಕನಾಗಿ ನಟಿಸಿರುವ, ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಸೂಪರ್ ಹಿಟ್’. ತನ್ನ ಆಂತರ್ಯದ ಕಸುವಿನ ಸುಳಿವಿನಿಂದಲೇ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟು ಹಾಕಿದ್ದ ಈ ಸಿನಿಮಾಕ್ಕೀಗ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಜನಪ್ರಿಯತೆಯೂ ಕೂಡಾ ಮತ್ತಷ್ಟು ಶಕ್ತಿ ತುಂಬಿದೆ.

ಇತ್ತೀಚೆಗೆ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ ಉಮೇಶ್, ಸಾಧು ಕೋಕಿಲಾ, ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಸಿನಿಮಾ ಬಗ್ಗೆ ಮಾತಾಡಿದರು.

ಫೆ. 27ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆಗಾಣಲಿದೆ.
ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ವೇಳೆ ಮಾತಾಡಿದ ಅವರು, ಕಥೆ ಸಿದ್ಧವಾದ ಬಗೆಯಿಂದ ಮೊದಲ್ಗೊಂಡು ಈವರೆಗಿನ ಮಧುರ ಸ್ಮೃತಿಯನ್ನು ಮೆಲುಕು ಹಾಕಿದ್ದಾರೆ. ಕಥೆ ಬರೆಯಲು ಶುರು ಮಾಡಿದಾಗಿನಿಂದ ಈ ವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ ಎಂದ ಅವರು, ಯಾವುದಕ್ಕೂ ಕೊರತೆಯಾಗದಂತೆ ಒಂದಿಡೀ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಜಿ ಉಮೇಶ್ ಅವರ ಸಿನಿಮಾ ಪ್ರೇಮವನ್ನು ಕೊಂಡಾಡಿದ್ದಾರೆ.

ತನ್ನ ಸಿನಿಮಾ ಮೂಡಿ ಬಂದಿರುವ ರೀತಿ ಮತ್ತು ಅದರ ಕಂಟೆಂಟಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸದರಿ ಚಿತ್ರ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬ ಭರವಸೆ ವ್ಯಕ್ತಪಡಿಸಿದರು. ನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ನೀಡಲು ಅನುವು ಮಾಡಿಕೊಡುವಂತೆ ವಿನಂತಿಸಿಕೊಂಡರು.


ಇದೇ ವೇದಿಕೆಯಲ್ಲಿ ಮತ್ತೊಂದು ಖುಷಿಯ ಸಂಗತಿಯನ್ನೂ ವಿಜಯಾನಂದ್ ಹಂಚಿಕೊಂಡರು. ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕು ಗಳನ್ನು ಹೊಸಾ ಸಂಸ್ಥೆಯೊಂದು ದೊಡ್ದ ಮೊತ್ತಕ್ಕೆ ಖರೀದಿಸಿರುವುದಾಗಿ ಮಾಹಿತಿ ನೀಡಿದರು. ಈ ಸಿನಿಮಾವನ್ನು ಪ್ರೀತಿಯಿಂದ ನಿರ್ಮಾಣ ಮಾಡಿರುವ ಜಿ ಉಮೇಶ್ ಚುಟುಕಾದ ಮಾತುಗಳಲ್ಲಿಯೇ ತಮ್ಮ ಸಿನಿಮಾ ಪ್ರೇಮ, ಸೂಪರ್ ಹಿಟ್ ಬಗೆಗಿನ ಭರವಸೆ ವ್ಯಕ್ತಪಡಿಸುತ್ತಲೇ, ತಮ್ಮ ಮೊದಲ ಹೆಜ್ಜೆಯಂಥಾ ಈ ಚಿತ್ರವನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

ಸಾಧು ಕೋಕಿಲಾ, ಸೂಪರ್ ಹಿಟ್ ಸಿನಿಮಾ ತಂಡದ ಮೇಲೆ ದೇವರ ಆಶೀರ್ವಾದ ಇದೆ ಎಂಬ ವಿಚಾರವನ್ನು ಹೇಳುತ್ತಲೇ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಪ್ರಚಾರದ ಪಟ್ಟುಗಳು ಈ ದಿನಮಾನದಲ್ಲಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಚಿತ್ರತಂಡಕ್ಕೆ ಮನವರಿಕೆ ಮಾಡಿ ಕೊಡುತ್ತಲೇ, ಜನಪ್ರಿಯತೆಯ ಭರಾಟೆಯಲ್ಲಿ ವಹಿಸಬೇಕಾದ ಎಚ್ಚರದ ಬಗ್ಗೆಯೂ ಗಿಲ್ಲಿಗೆ ಕಿವಿ ಮಾತು ಹೇಳಿದರು.


ಈ ಚಿತ್ರಕ್ಕೆ ಸಾಹಿತ್ಯ, ಸಂಗೀತದ ಜವಾಬ್ದಾರಿಯೊಂದಿಗೆ ಒಂದು ವಿಶೇಷವಾದ ಪಾತ್ರದಲ್ಲಿಯೂ ನಟಿಸಿರುವ ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಸೂಪರ್ ಹಿಟ್ ಮೂಡಿ ಬಂದಿರೋ ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೇ, ಗಿಲ್ಲಿಯ ಯಶದ ಪ್ರಭೆ ಸದರಿ ಚಿತ್ರಕ್ಕೆ ವರವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಲ್ಲದೇ, ಈ ಹಿಂದೆ ಯಾವುದೇ ಸಿನಿಮಾದಲ್ಲಿ ನಟಿಸಿದ್ದರೂ ಕೂಡಾ, ಅಂಥಾ ಚಿತ್ರಗಳಿಗೆ ಪ್ರಚಾರ ನೀಡಬೇಕಿರುವ ಕರ್ತವ್ಯದ ಬಗ್ಗೆಯೂ ಗಿಲ್ಲಿ ನಟನಿಗೆ ಪ್ರೀತಿಯಿಂದ ಕಿವಿ ಮಾತು ಹೇಳಿದರು.

ಗಿಲ್ಲಿ ಮಾತನಾಡಿ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ನತೆ ಸಲ್ಲಿಸುತ್ತಲೇ ಒಟ್ಟಾರೆ ಚಿತ್ರೀಕರಣ ರಸಾನುಭವಗಳನ್ನು ಹಂಚಿಕೊಂಡರು. ಈ ಮಧ್ಯೆ ಇತ್ತೀಚೆಗೆ ಹೊತ್ತಿಕೊಂಡಿದ್ದ ವಿವಾದವೂ ಸೇರಿದಂತೆ ಒಂದಷ್ಟು ವಿಚಾರಗಳಿಗೆ ಸ್ಪಷ್ಟೀಕರಣ ಕೊಡುತ್ತಲೇ ಸೂಪರ್ ಹಿಟ್ ಚಿತ್ರವನ್ನು ನೋಡಿ ಹರಸುವಂತೆ ಕೇಳಿಕೊಂಡರು.


ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಇನ್ನೂರಕ್ಕು ಹೆಚ್ಚು ಚಿತ್ರಮಂದಿಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ.

Categories
ಸಿನಿ ಸುದ್ದಿ

ನಾಗಬಂಧಂ’ ಚಿತ್ರದಲ್ಲಿ ‘ಫೈಟರ್’ ಖ್ಯಾತಿಯ ರಿಷಬ್ ಸಾಹ್ನಿ ಅಬ್ಬರ!

ಯುವ ನಟ ವಿರಾಟ್ ಕರ್ಣ ನಾಯಕನಾಗಿ ನಟಿಸುತ್ತಿರುವ, ಅಭಿಷೇಕ್ ನಾಮ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಆ್ಯಕ್ಷನ್ ಡ್ರಾಮಾ ‘ನಾಗಬಂಧಂ’ ಚಿತ್ರತಂಡದಿಂದ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ‘ಫೈಟರ್’ ಚಿತ್ರದ ಮೂಲಕ ಗಮನಸೆಳೆದಿದ್ದ ನಟ ರಿಷಬ್ ಸಾಹ್ನಿ ಅವರು ಆಫ್ಘನ್ ಸುಲ್ತಾನ್ ‘ಅಬ್ದಾಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ರಿಷಬ್ ಸಾಹ್ನಿ ಅವರು ರಕ್ತಸಿಕ್ತ ಕೊಡಲಿಯನ್ನು ಹಿಡಿದು, ಮಂಜುಗಡ್ಡೆಯ ಯುದ್ಧಭೂಮಿಯಲ್ಲಿ ಆಕ್ರಮಣಕಾರಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದೆ ಬೃಹತ್ ಸೈನ್ಯ, ಯುದ್ಧದ ಆನೆಗಳು ಮತ್ತು ಕೆಂಡದಂತಹ ಕಣ್ಣುಗಳಿರುವ ತೋಳಗಳ ಹಿಂಡು ಇರುವುದು ಪಾತ್ರದ ಕ್ರೌರ್ಯ ಮತ್ತು ಶಕ್ತಿಯನ್ನು ಬಿಂಬಿಸುತ್ತಿದೆ.

ಕ್ರಿಸ್ತ ಶಕ 1750ರ ಕಾಲಘಟ್ಟದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ, ಭಾರತದ ಮೇಲೆ ದಾಳಿ ಮಾಡಿ ದೇವಾಲಯಗಳನ್ನು ಲೂಟಿ ಮಾಡಿದ ಅಬ್ದಾಲಿಯ ಇತಿಹಾಸವನ್ನು ತೋರಿಸಲಾಗಿದೆ. ಹಿಮಾಲಯದಲ್ಲಿ ಅಡಗಿರುವ ರಹಸ್ಯ ‘ನಾಗಬಂಧಂ’ ಅನ್ನು ಭೇದಿಸಲು ಈತ ನಡೆಸುವ ಕ್ರೂರ ಹಾದಿ ಮತ್ತು ಆತನ ಮಹತ್ವಾಕಾಂಕ್ಷೆಯೇ ಈ ಪಾತ್ರದ ಜೀವಾಳ.

ನಿರ್ದೇಶಕ ಅಭಿಷೇಕ್ ನಾಮ ಮಾತನಾಡಿ, “ರಿಷಬ್ ಸಾಹ್ನಿ ಅವರು ಅಬ್ದಾಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತೆರೆಯ ಮೇಲೆ ಅವರು ನಿಜವಾದ ಇತಿಹಾಸದ ವ್ಯಕ್ತಿಯಂತೆಯೇ ಕಾಣುತ್ತಾರೆ” ಎಂದಿದ್ದಾರೆ. ನಟ ರಿಷಬ್ ಸಾಹ್ನಿ ಕೂಡ ಇಂತಹ ಸವಾಲಿನ ಪಾತ್ರ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ತಾರಾಗಣದ ವಿಚಾರಕ್ಕೆ ಬಂದರೆ, ವಿರಾಟ್ ಕರ್ಣ, ನಭಾ ನಟೇಶ್, ಐಶ್ವರ್ಯ ಮೆನನ್, ಜಗಪತಿ ಬಾಬು, ಮುರಳಿ ಶರ್ಮ, ಬಿ.ಎಸ್. ಅವಿನಾಶ್ ಮುಂತಾದವರು ನಟಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಸೌಂದರ್ ರಾಜನ್ (ಛಾಯಾಗ್ರಹಣ), ಅಶೋಕ್ ಕುಮಾರ್ (ಕಲಾ ನಿರ್ದೇಶನ), ಅಭೆ ಮತ್ತು ಜುನೈದ್ ಕುಮಾರ್ (ಸಂಗೀತ) ಇದ್ದಾರೆ. ಕಿಶೋರ್ ಅನ್ನಪೂರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ಈ ಸಿನಿಮಾದ ನಿರ್ಮಾಪಕರು. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ, ಅಂದರೆ ಮಾರ್ಚ್ 15ರಂದು ಈ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಲಿದೆ. ಈ ಚಿತ್ರವು ಈ ಬೇಸಿಗೆಯಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಕಾಣಲು ಸಜ್ಜಾಗಿದೆ.

error: Content is protected !!