ಪಿ ಆರ್ ಕೆ ನಿರ್ಮಾಣದ ಹೊಸ ಚಿತ್ರ 02: ಏಪ್ರಿಲ್ 19 ರಿಲೀಸ್

ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಮ್ಮೆ ಸಿನಿ ಪ್ರೇಕ್ಷಕರನ್ನು “O2” ಎಂಬ ಹೊಸ ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದೆ. ಏಪ್ರಿಲ್ 19ರಂದು ತೆರೆ ಕಾಣಲು ಸಜ್ಜಾಗಿರುವ “O2” , ಒಂದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್. ಈ ಕಥೆಯು ಕೇವಲ‌ ಥ್ರಿಲ್ಲರ್ ಅಂಶಗಳನ್ನಷ್ಟೇ ಅಲ್ಲದೆ, ಪ್ರೀತಿ-ಪ್ರೇಮದ ಅಂಶಗಳನ್ನೂ ಒಳಗೊಂಡಿದೆ. ಇದೊಂದು “ಲವ್ ಥ್ರಿಲ್ಲರ್” ಎನ್ನಬಹುದು.


ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿರುವ‌ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಿ‌ ನಿಸ್ಸೀಮರು. “O2” ಪಿ.ಆರ್.ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣದ ಹತ್ತನೇ ಚಿತ್ರ.
ಚಿತ್ರದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಗೂ ಚಿತ್ರವನ್ನು ಪ್ರಶಾಂತ್ ರಾಜ್ ಮತ್ತು ಚಿತ್ರದ‌ ನಾಯಕ ರಾಘವ್ ನಾಯಕ್ ನಿರ್ದೇಶನವಿದೆ.


“O2” ಬಹಳ ವಿಭಿನ್ನ ಕಥಾಹಂದರದ ಚಿತ್ರ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಆದ್ಯ ಕರ್ತವ್ಯ ಎಂದು ನಂಬುವ ಶ್ರದ್ಧಾ (ಆಶಿಕಾ ರಂಗನಾಥ್), ತನ್ನ ಸಂಶೋಧನೆಯ ಫಲವಾದ
“O2” ಎಂಬ ಡ್ರಗ್ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ.

ಈ ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವಾಗುವುದೋ ಇಲ್ಲವೋ ಎಂಬುದು ಕಥೆ. ಒಟ್ಟಾರೆ “O2” ಚಿತ್ರ ಮನರಂಜನೆ, ವಿಜ್ಞಾನ, ಪ್ರೀತಿ, ಅನಿರೀಕ್ಷಿತ ತಿರುವುಗಳ ಸಮಾಗಮ.

ನಿರ್ಮಾಪಕಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೇಳುವಂತೆ, “O2″ ಎಂಬ ವಿಭಿನ್ನವಾದ ಚಿತ್ರವನ್ನು ನಿರ್ಮಿಸಿರುವುದು ನಮಗೆ ಹೆಮ್ಮೆ ತಂದಿದೆ. ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಸಂಸ್ಥೆಯಿಂದ ಮೂಡಿಬರುತ್ತಿರುವ ಈ‌ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ಭಾರಿ‌ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ನಂಬಿದ್ದೇನೆ” ಎನ್ನುತ್ತಾರೆ.

Related Posts

error: Content is protected !!