Categories
ಸಿನಿ ಸುದ್ದಿ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ನಾಮ ನಿರ್ದೇಶನ ಅನೌನ್ಸ್: ದರ್ಶನ್, ರಕ್ಷಿತ್ ಚಿತ್ರಗಳಿಗೆ ಸಿಂಹಪಾಲು -ಕಾಟೇರ ಚಿತ್ರ 15, ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ 13…

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು.
ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು, ನಟ ಶರಣ್ ಅನಾವರಣ ಮಾಡಿದರು.

ದರ್ಶನ್ ನಟನೆಯ ಕಾಟೇರ ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಅತ್ಯುತ್ತಮ ನಟ (ದರ್ಶನ್) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ಕಾಟೇರ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ಸಪ್ತ ಸಾಗರದಾಚೆ ಎಲ್ಲೋ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡು ಪೈಪೋಟಿ ನಡೆಸಿವೆ.

ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ನಾನೂ ಒಬ್ಬ ಪತ್ರಕರ್ತನಾಗಿ ಅಕಾಡಮಿ ಮತ್ತು ವಿಮರ್ಶಕರ ಪ್ರಶಸ್ತಿಗಳು ನಿಷ್ಪಕ್ಷಪಾತವಾಗಿ ಮತ್ತು ವಿಶ್ವಾಸ ಮೂಡಿಸುವಂತಹ ಆಯ್ಕೆಗಳು ಆಗಿವೆ. ಈ ಕುರಿತು ನನಗೆ ಹೆಮ್ಮೆ ಅನಿಸುತ್ತದೆ. ಕನ್ನಡದ ಅತ್ಯುತ್ತಮ ಮನರಂಜನೆಯನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲ್ಯಾಘಿಸಿದರು.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ, ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದರು ನಟಿ ಅಮೂಲ್ಯ.

ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜೊತೆ ಪ್ರಶಸ್ತಿ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದ್ದು ಗೊತ್ತೇ ಇದೆ. ಈ ಬಾರಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಜೊತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ನಮ್ಮ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಮಾತನಾಡಿದ್ದಾರೆ.

ಅಂಗಾಂಗ ದಾನ ಅಭಿಯಾನಕ್ಕೆ ಅಕಾಡಮಿ ಜೊತೆ ಬೆಂಗಳೂರಿನ ಕಾವೇರಿ ಆಸ್ಪತ್ರೆ ಕೂಡ ಜೊತೆಯಾಗಿದ್ದು, ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್, ‘ಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣು ದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆ ಎಂದರು ಕಾವೇರಿ ಹಾಸ್ಪಿಟಲ್ ವಿಪಿ ವೆಲ್ ಫ್ರೆಡ್ ಸ್ಯಾಮ್ಸನ್.

ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆ ಎಂದರು.
ಪ್ರತಿ ವರ್ಷದಂತೆ ಈ ಬಾರಿಯೂ ಅಚ್ಚರಿ ಹೆಸರುಗಳು ನಾಮ ನಿರ್ದೇಶನ ಪಟ್ಟಿಯಲ್ಲಿದ್ದು, ಜನವರಿ 28 ರವಿವಾರದಂದು ಸಂಜೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಅತ್ಯುತ್ತಮ ಚೊಚ್ಚಲ ನಿರ್ಮಾಣ

ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿ

೧. ಸ್ವಾತಿ ಮುತ್ತಿನ ಮಳೆ ಹನಿಯೇ (ರಮ್ಯ – ಆಪಲ್ ಬಾಕ್ಸ್ ಸ್ಟುಡಿಯೋಸ್)

೨. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ (ವರುಣ್ ಸ್ಟುಡಿಯೋಸ್)

೩. ಡೇರ್‌ಡೆವಿಲ್ ಮುಸ್ತಫಾ (ಸಿನೆಮಾ ಮರ)

೪. ಸೌತ್ ಇಂಡಿಯನ್ ಹೀರೋ (ಶಿಲ್ಪಾ ಎಲ್.ಎಸ್)

೫. ಮಂಡಲ (ಅಜಯ್ ಸರ್ಪೆಷ್ಕರ್)

ಅತ್ಯುತ್ತಮ ಚೊಚ್ಚಲ ನಟಿ ~ ತ್ರಿಪುರಾಂಬ ಅವಾರ್ಡ್

೧. ಆರಾಧನಾ ರಾಮ್ (ಕಾಟೇರ)

೨. ನಿರೀಕ್ಷಾ ರಾವ್ (ರಾಜಯೋಗ)

೩. ಅಮೃತಾ ಪ್ರೇಮ್ (ಟಗರು ಪಲ್ಯ)

೪. ಚೈತ್ರ ಹೆಚ್.ಜಿ (ಮಾವು ಬೇವು)

೫. ಪ್ರೀತಿಕ ದೇಶಪಾಂಡೆ (ಪೆಂಟಗನ್)

ಅತ್ಯುತ್ತಮ ಚೊಚ್ಚಲ ನಟ ~ ಸಂಚಾರಿ ವಿಜಯ್ ಪ್ರಶಸ್ತಿ

೧. ಶಿಶಿರ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)

೨. ರಾಜೇಶ್ ಧ್ರುವ ( ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ)

೩. ಶಿವಣ್ಣ ಬೀರುಹುಂಡಿ (ದೊಡ್ಡಹಟ್ಟಿ ಬೋರೇಗೌಡ)

೪. ಕಿರಣ್ ನಾರಾಯಣ್ (ಸ್ನೇಹಶ್ರೀ)

೫. ಸಾರ್ಥಕ್ (ಸೌತ್ ಇಂಡಿಯನ್ ಹೀರೋ)

ಅತ್ಯುತ್ತಮ ಚೊಚ್ಚಲ ಬರಹಗಾರ ~ ಚಿ ಉದಯಶಂಕರ್ ಪ್ರಶಸ್ತಿ

೧. ರಾಮೇನಹಳ್ಳೀ ಜಗನ್ನಾಥ್ (ಹೊಂದಿಸಿ ಬರೆಯಿರಿ)

೨. ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

೩. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

೪. ಉಮೇಶ್ ಕೃಪಾ (ಟಗರು ಪಲ್ಯ)

೫. ಅಜಯ್ ಸರ್ಪೆಶ್ಕರ್ (ಮಂಡಲ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ
ಶಂಕರ್ ನಾಗ್ ಅವಾರ್ಡ್

೧. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

೨. ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

೩. ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಾಫಾ)

೪. ದೇವೇಂದ್ರ ಬಡಿಗೇರ್ (ರುದ್ರಿ)

೫. ಉಮೇಶ್ ಕೃಪಾ (ಟಗರು ಪಲ್ಯ)

ಅತ್ಯುತ್ತಮ ವಿಎಫ್‍ಎಕ್ಸ್

  1. ಸಪ್ತಸಾಗರದಾಚೆ ಎಲ್ಲೋ (ಎಮತ್ತುಬಿ) ಪಿಂಕ್ ಸ್ಟುಡಿಯೋಸ್ – ರಾಹುಲ್ ವಿ. ಗೋಪಾಲಕೃಷ್ಣ
  2. ಕಬ್ಜ – ಯೂನಿಫೈ ಮೀಡಿಯಾ
  3. ಗುರುದೇವ್ ಹೊಯ್ಸಳ – ಡಿಜಿಟಲ್ ಟರ್ಬೋ ಮೀಡಿಯಾ, ಖುಷ್
  4. ಕಾಟೇರ – ಗಗನ್ ಅಜೈ
  5. ಘೋಸ್ಟ್ – ಆಸೋ ಸ್ಟುಡಿಯೋಸ್ (ಟೆಹರನ್), ಮೊಹಮ್ಮದ್ ಅಬ್ಡಿ

ಅತ್ಯುತ್ತಮ ಕಲಾ ನಿರ್ದೇಶನ

  1. ಕಬ್ಜ, ಶಿವಕುಮಾರ್ ಜೆ
  2. ಸಪ್ತ ಸಾಗರದಾಚೆ ಎಲ್ಲೋ (ಎ ಮತ್ತು ಬಿ) ಉಲ್ಲಾಸ್ ಹೈದರ್)
  3. ಕಾಟೇರ – ಗುಣ
  4. ಘೋಸ್ಟ್ – ಮೋಹನ್ ಬಿ ಕೆರೆ
  5. ಕೈವ – ಧರಣಿ ಗಂಗೆಪುತ್ರ

ಅತ್ಯುತ್ತಮ ಸಾಹಸ ನಿರ್ದೇಶನ

  1. ಸಪ್ತ ಸಾಗರದಾಚೆ ಎಲ್ಲೋ (ಬಿಸೈಡ್) ಚೇತನ್ ಡಿಸೋಜಾ, ವಿಕ್ರಮ್ ಮೋರ್
  2. ಗುರುದೇವ್ ಹೊಯ್ಸಳ – ದಿಲೀಪ್ ಸುಬ್ರಮಣ್ಯ, ಅರ್ಜುನ್ ರಾಜ್
  3. ಕಬ್ಜ – ರವಿ ವರ್ಮಾ, ವಿಕ್ರಮ್ ಮೋರ್
  4. ಕೈವ – ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ
  5. ಕಾಟೇರ –ರಾಮ್ ಲಕ್ಷ್ಮಣ

ಅತ್ಯುತ್ತಮ ಛಾಯಾಗ್ರಹಣ

  1. ಸಪ್ತ ಸಾಗರದಾಚೆ ಎಲ್ಲೋ ( ಸೈಡ್ ಬಿ) ಅದ್ವೈತ ಗುರುಮೂರ್ತಿ
  2. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಅರವಿಂದ್ ಕಶ್ಯಪ್
  3. ಸ್ವಾತಿ ಮುತ್ತಿನ ಮಳೆ ಹನಿಯೇ – ಪ್ರವೀಣ್ ಶ್ರೀಯಾನ್
  4. ಘೋಸ್ಟ್ _ ಮಹೇಂದ್ರ ಸಿಂಹ
  5. ಕಾಟೇರ – ಸುಧಾಕರ್ ಎಸ್. ರಾಜ್ ಅತ್ಯುತ್ತಮ ಸಂಕಲನ
  6. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಸುರೇಶ್ ಎಮ್.
  7. ಘೋಸ್ಟ್ – ದೀಪು ಎಸ್ ಕುಮಾರ್
  8. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ್
  9. ಕಾಟೇರ – ಕೆ.ಎಂ. ಪ್ರಕಾಶ್
  10. ಕೈವ – ಕೆ.ಎಂ. ಪ್ರಕಾಶ್

ಅತ್ಯುತ್ತಮ ನೃತ್ಯ ನಿರ್ದೇಶನ

  1. ಪುಷ್ಪವತಿ – ಕ್ರಾಂತಿ – ಗಣೇಶ್
  2. ಪಸಂದಾಗವ್ಳೆ – ಕಾಟೇರ – ಭೂಷಣ್
  3. ಬ್ಯಾಡ್ ಮ್ಯಾನರ್ಸ್ – ಬ್ಯಾಡ್ ಮ್ಯಾನರ್ಸ್ – ಬಿ. ಧನಂಜಯ್
  4. ನೈಂಟಿ ಹಾಕು ಕಿಟ್ಟಪ್ಪ – ಕೌಸಲ್ಯ ಸುಪ್ರಜಾ ರಾಮ – ಕಲೈ
  5. ಚುಮು ಚುಮು – ಕಬ್ಜ- ಜಾನಿ ಮಾಸ್ಟರ್

ಅತ್ಯುತ್ತಮ ಚಿತ್ರ ಸಾಹಿತ್ಯ

  1. ಟಗರು ಪಲ್ಯ – ಸಂಬಂಜ ಅಂದ್ರೆ – ಡಾಲಿ ಧನಂಜಯ್
  2. ಸಪ್ತ ಸಾಗರದಾಚೆ ಎಲ್ಲೋ – ನದಿಯೇ – ಧನಂಜಯ್ ರಂಜನ್
  3. ಕೌಸಲ್ಯ ಸುಪ್ರಜಾ ರಾಮ – ಪ್ರೀತಿಸುವೆ – ಜಯಂತ್ ಕಾಯ್ಕಿಣಿ
  4. ರಾಘವೇಂದ್ರ ಸ್ಟೋರ್ಸ್ – ಗಾಳಿಗೆ ಗಂಧ – ಗೌಸ್ ಪೀರ್
  5. ಸ್ವಾತಿ ಮುತ್ತಿನ ಮಳೆ ಹನಿಯೇ – ಮೆಲ್ಲಗೆ – ಪೃಥ್ವಿ

ಅತ್ಯುತ್ತಮ ಹಿನ್ನೆಲೆ ಸಂಗೀತ

  1. ಘೋಸ್ಟ್ – ಅರ್ಜುನ್ ಜನ್ಯ
  2. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
  3. ಕಾಟೇರ – ವಿ. ಹರಿಕೃಷ್ಣ
  4. ವಿರಾಟಪುರದ ವಿರಾಟ – ಕದ್ರಿ ಮಣಿಕಾಂತ್
  5. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಬಿ ಅಜನೀಶ್ ಲೋಕನಾಥ್

ಅತ್ಯುತ್ತಮ ಹಿನ್ನೆಲೆ ಗಾಯಕಿ

  1. ಕಾಯೋಶಿವ ಕಾಪಾಡೋ ಶಿವ – ಪೆಂಟಾಗನ್ – ಸಂಗೀತಾ ಕಟ್ಟಿ
  2. ಕೌಸಲ್ಯ ಸುಪ್ರಜಾ ರಾಮ – 90 ಹಾಕು ಕಿಟ್ಟಪ್ಪ – ಐಶ್ವರ್ಯ ರಂಗರಾಜನ್
  3. ಪಸಂದಾಗವ್ನೆ – ಕಾಟೇರ – ಮಂಗ್ಲಿ
  4. ಚುಮು ಚುಮು ಚಳಿ – ಕಬ್ಜ- ಐರಾ ಉಡುಪಿ
  5. ಮೆಲ್ಲಗೆ – ಸ್ವಾತಿ ಮುತ್ತಿನ ಮಳೆ ಹನಿಯೇ – ಮಾಧುರಿ ಶೇಷಾದ್ರಿ

ಅತ್ಯುತ್ತಮ ಹಿನ್ನೆಲೆ ಗಾಯಕ

  1. ನೋಡಲಾಗದೆ – ವೀರಾಟಪುರ ವಿರಾಗಿ – ರವೀಂದ್ರ ಸೊರಗಾಂವಿ
  2. ಬೊಂಬೆ ಬೊಂಬೆ – ಕ್ರಾಂತಿ – ಸೋನು ನಿಗಂ
  3. ಸಿಂಗಲ್ ಸುಂದರಿ – ರಾಘವೇಂದ್ರ ಸ್ಟೋರ್ಸ್ – ವಿಜಯ ಪ್ರಕಾಶ್ ಮತ್ತು ನವೀನ್ ಸಜ್ಜು
  4. ನೊಂದುಕೋಬೇಡ – ಟಗರು ಪಲ್ಯ- ವಾಸುಕಿ ವೈಭವ್
  5. ಸಪ್ತ ಸಾಗರದಾಚೆ ಎಲ್ಲೋ – ಟೈಟಲ್ ಟ್ರ್ಯಾಕ್ – ಸಪ್ತ ಸಾಗರದಾಚೆ ಎಲ್ಲೋ- ಕಪೀಲ್‍ ಕಪೀಲನ್

ಅತ್ಯುತ್ತಮ ಸಂಗೀತ ನಿರ್ದೇಶನ

  1. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
  2. ಕೌಸಲ್ಯ ಸುಪ್ರಜಾ ರಾಮ – ಅರ್ಜುನ್ ಜನ್ಯ
  3. ಟಗರು ಪಲ್ಯ – ವಾಸುಕಿ ವೈಭವ್
  4. ಕ್ರಾಂತಿ – ವಿ. ಹರಿಕೃಷ್ಣ
  5. ಕೈವ – ಅಜನೀಶ್ ಲೋಕನಾಥ್

ಅತ್ಯುತ್ತಮ ಬಾಲ ಕಲಾವಿದ/ಕಲಾವಿದೆ

  1. ಅಂಬುಜಾ – ಆಕಾಂಕ್ಷ
  2. ಶಿವಾಜಿ ಸುರತ್ಕಲ್ 2 – ಆರಾಧ್ಯ
  3. ಗೌಳಿ – ನಮನ
  4. ಟೋಬಿ – ಸ್ನಿಗ್ಧ ಆರ್. ಶೆಟ್ಟಿ
  5. ಓ ನನ್ನ ಚೇತನ – ಪ್ರತೀಕ ಮಂಜುನಾಥ್

ಅತ್ಯುತ್ತಮ ಪೋಷಕ ನಟಿ

  1. ಹೇಮಾ ದತ್ತ – ತೋತಾಪುರಿ
  2. ಶ್ರುತಿ – ಕಾಟೇರ
  3. ತಾರಾ ಅನುರಾಧ – ಟಗರು ಪಲ್ಯ
  4. ಸುಧಾ ಬೆಳವಾಡಿ – ಕೌಸಲ್ಯ ಸುಪ್ರಜಾ ರಾಮ
  5. ಎಂ.ಡಿ. ಪಲ್ಲವಿ – 19.20.21

ಅತ್ಯುತ್ತಮ ಪೋಷಕ ನಟ

  1. ಪೂರ್ಣಚಂದ್ರ ಮೈಸೂರು – ಡೇರ್ ಡೆವಿಲ್ ಮುಸ್ತಾಫಾ
  2. ರಂಗಾಯಣ ರಘು – ಟಗರು ಪಲ್ಯ
  3. ರಾಘು ಶಿವಮೊಗ್ಗ – ಕೈವ
  4. ಮಹದೇವ ಹಡಪದ – 19.20.21
  5. ರಮೇಶ್ ಇಂದಿರಾ – ಸಪ್ತ ಸಾಗರದಾಚೆ ಎಲ್ಲೋ

ಅತ್ಯುತ್ತಮ ನಟಿ

  1. ರುಕ್ಮುಣಿ ವಸಂತ – ಸಪ್ತ ಸಾಗರದಾಚೆ ಎಲ್ಲೋ
  2. ಅಕ್ಷತಾ ಪಾಂಡವಪುರ – ಪಿಂಕಿ ಎಲ್ಲಿ?
  3. ಮಿಲನಾ ನಾಗರಾಜ್ – ಕೌಸಲ್ಯ ಸುಪ್ರಜಾ ರಾಮ
  4. ಸಿರಿ ರವಿಕುಮಾರ್ – ಸ್ವಾತಿ ಮುತ್ತಿನ ಮಳೆ ಹನಿಯೇ
  5. ಮೇಘಾ ಶೆಟ್ಟಿ – ಕೈವ

ಅತ್ಯುತ್ತಮ ನಟ

  1. ರಕ್ಷಿತ್ ಶೆಟ್ಟಿ – ಸಪ್ತ ಸಾಗರದಾಚೆ ಎಲ್ಲೋ
  2. ರಾಜ್ ಬಿ ಶೆಟ್ಟಿ, ಸ್ವಾತಿ ಮುತ್ತಿನ ಮಳೆ ಹನಿಯೇ
  3. ರಮೇಶ್ ಅರವಿಂದ್ – ಶಿವಾಜಿ ಸುರತ್ಕಲ್ 2
  4. ಶೃಂಗ ಬಿ.ವಿ – 19.20.21
  5. ದರ್ಶನ್ – ಕಾಟೇರ

ಅತ್ಯುತ್ತಮ ಸಂಭಾಷಣೆ

  1. ಕೈವ – ರಘು ನಿಡುವಳ್ಳಿ
  2. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ನಿತಿನ್ ಕೃಷ್ಣಮೂ‍ರ್ತಿ
  3. ಕೌಸಲ್ಯ ಸುಪ್ರಜಾ ರಾಮ – ಯದುನಂದನ್
  4. ಕಾಟೇರ – ಮಾಸ್ತಿ
  5. ಟಗರು ಪಲ್ಯ – ಉಮೇಶ್ ಕೆ ಕೃಪಾ

ಅತ್ಯುತ್ತಮ ಚಿತ್ರಕಥೆ

  1. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ- ಅಭಿಜಿತ್‍ ವೈ.ಆರ್
  2. ಕೈವ – ಜಯತೀರ್ಥ
  3. ಸ್ವಾತಿ ಮುತ್ತಿನ ಮಳೆಹನಿಯೇ – ರಾಜ್ ಬಿ ಶೆಟ್ಟಿ
  4. ದೂರದರ್ಶನ – ಸುಕೇಶ್ ಶೆಟ್ಟಿ
  5. ಕಾಟೇರ – ತರುಣ್ ಕಿಶೋರ್ ಸುಧೀರ್ – ಜಡೇಶ್ ಕೆ. ಹಂಪಿ

ಅತ್ಯುತ್ತಮ ನಿರ್ದೇಶಕ

  1. ಜಯತೀರ್ಥ – ಕೈವ
  2. ತರುಣ್ ಕಿಶೋರ್ ಸುಧೀರ್ – ಕಾಟೇರ
  3. ನಿತೀನ್ ಕೃಷ್ಣಮೂರ್ತಿ _ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ
  4. ಮಂಸೋರೆ – 19.20.21
  5. ರಾಜ್ ಬಿ ಶೆಟ್ಟಿ – ಸ್ವಾತಿ ಮುತ್ತಿನ ಮಳೆಹನಿಯೇ

ಅತ್ಯುತ್ತಮ ಚಿತ್ರ

  1. ಸಪ್ತ ಸಾಗರದಾಚೆ ಎಲ್ಲೋ
  2. ಡೇರ್ ಡೆವಿ‍ಲ್ ಮುಸ್ತಾಫಾ
  3. 19.20.21
  4. ಕಾಟೇರ
  5. ಕೌಸಲ್ಯ ಸುಪ್ರಜಾ ರಾಮ
Categories
ಸಿನಿ ಸುದ್ದಿ

ನಾಗಭೂಷಣ್ ಈಗ ವಿದ್ಯಾಪತಿ: ಸಂಕ್ರಾಂತಿಗೆ ಡಾಲಿ ಪಿಕ್ಚರ್ಸ್ ನ ನಾಲ್ಕನೇ ಸಿನಿಮಾ ಅನೌನ್ಸ್

ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷದ ಮೊದಲ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ ಜೋರಾಗಿದೆ. ಸಂಕ್ರಾಂತಿ ವಿಶೇಷವಾಗಿ ಹೊಸ ಹೊಸ ಸಿನಿಮಾಗಳು ಘೋಷಣೆಯಾಗಿವೆ. ಅದರಂತೆ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ನ ನಾಲ್ಕನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಟಗರು ಪಲ್ಯ ಸಿನಿಮಾ ಮೂಲಕ ಕಳೆದ ವರ್ಷ ಡಾಲಿ ಪಿಚ್ಚರ್ಸ್ ಪ್ರೇಕ್ಷಕರಿಗೆ ಮನರಂಜನೆಯ ಬಾಡೂಟ ಬಡಿಸಿತ್ತು. ಹೊಸ ಹೊಸ ನಿರ್ದೇಶಕರಿಗೆ ವೇದಿಕೆಯಾಗಿರುವ ಡಾಲಿ ಪಿಕ್ಚರ್ಸ್ ಸದಾಭಿರುಚಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಹೆಜ್ಜೆ ಇಡ್ತಿದೆ. ಇದೀಗ ಡಾಲಿ ಪಿಕ್ಚರ್ಸ್ ನ ಮತ್ತೊಂದು ಕೊಡುಗೆ ವಿದ್ಯಾಪತಿ ಸಿನಿಮಾದ ಫಸ್ಟ್ ಲುಕ್ ನ್ನು ಸುಗ್ಗಿ ಸಂಭ್ರಮದ ವಿಶೇಷವಾಗಿ ಬಿಡುಗಡೆಯಾಗಿದೆ.

ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಸಾರಥಿ..ಈ ಚಿತ್ರವನ್ನು ಇವರಿಬ್ಬರು ರಚಿಸಿ ನಿರ್ದೇಶಿಸಿ ಸಂಕಲನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಫಸ್ಟ್ ಲುಕ್ ನಲ್ಲಿ ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.

ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಸಿನಿಮಾದ ಶೂಟಿಂಗ್ ಮುಂದಿನ ವಾರದಿಂದ ಚಾಲುವಾಗಲಿದೆ. ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಉಪಾಧ್ಯಕ್ಷ ಜನವರಿ 26ಕ್ಕೆ ಆಗಮನ: ಟ್ರೇಲರ್ ರಿಲೀಸ್ ಮಾಡಿದ ಶಿವಣ್ಣ

ಸ್ಮಿತಾ ಉಮಾಪತಿ ಅವರು ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶನದ ಹಾಗೂ ಚಿಕ್ಕಣ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ “ಉಪಾಧ್ಯಕ್ಷ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ ಎಂದು ಮಾತು ಶುರುಮಾಡಿದ ಶಿವರಾಜಕುಮಾರ್, ಚಿಕ್ಕಣ್ಣ ನನ್ನ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ.

ಹಾಡುಗಳನ್ನು ನೋಡಿದ್ದೇನೆ. ಚಿಕ್ಕಣ್ಣ ನಿಜಕ್ಕೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಉಮಾಪತಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ. ನಾನು ಕೂಡ ಈ ಚಿತ್ರವನ್ನು ಮೈಸೂರಿನಲ್ಲಿ ನೋಡುತ್ತೇನೆ ಎಂದರು.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಅನಂತ ಧನ್ಯವಾದ. ನಾವು “ಉಪಾಧ್ಯಕ್ಷ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿದಾಗ ಒಪ್ಪಿ ಬಂದಿದ್ದಾರೆ. ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನನಗೆ ಅವರ ಸಿನಿಮಾ ನಿರ್ಮಾಣ ಮಾಡುವ ಆಸೆಯಿದೆ. ಇನ್ನು “ಉಪಾಧ್ಯಕ್ಷ” ಚಿತ್ರವನ್ನು ನನ್ನ ಪತ್ನಿ ಸ್ಮಿತಾ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಉಮಾಪತಿ.

“ಉಪಾಧ್ಯಕ್ಷ”, ” ಅಧ್ಯಕ್ಷ” ಚಿತ್ರದ ಮುಂದುವರೆದ ಭಾಗ ಎಂದು ಮಾತು ಆರಂಭಿಸಿದ ನಿರ್ದೇಶಕ ಅನಿಲ್ ಕುಮಾರ್, “ಅಧ್ಯಕ್ಷ” ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೊ “ಉಪಾಧ್ಯಕ್ಷ” ಚಿತ್ರದ ಕಥೆ ಅಲ್ಲಿಂದ ಆರಂಭವಾಗುತ್ತದೆ. ಇದೊಂದು ಪಕ್ಕಾ ಮನೋರಂಜನಾ ಚಿತ್ರ. ಲಾಕ್ ಡೌನ್ ಸಮಯದಲ್ಲಿ ಚಂದ್ರ ಮೋಹನ್ ಅವರು ಈ ಚಿತ್ರದ ಕಥೆ ಹೇಳಿದರು. ಆನಂತರ ಸ್ನೇಹಿತರೆಲ್ಲಾ ಸೇರಿ ಈ ಚಿತ್ರದ ಕುರಿತು ಚರ್ಚಿಸಿ, ನಿರ್ಮಾಪಕ ಉಮಾಪತಿ ಅವರಿಗೆ ಕಥೆ ಹೇಳಿದೆವು.

ಅವರು ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಚಿತ್ರ ಚೆನ್ನಾಗಿ ಮೂಡಿಬರಲು ಸಹಕರಿಸಿದ ಚಿಕ್ಕಣ್ಣ ಸೇರಿದಂತೆ ಎಲ್ಲಾ ಕಲಾವಿದರಿಗೆ ಹಾಗೂ ಅರ್ಜುನ್ ಜನ್ಯ ಅವರು ಸೇರಿದಂತೆ ಪ್ರತಿಯೊಬ್ಬ ತಂತ್ರಜ್ಞರಿಗೆ ನನ್ನ ಧನ್ಯವಾದ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವಣ್ಣ ಅವರಿಗೆ ವಿಶೇಷ ಧನ್ಯವಾದ ಎಂದರು.

ಈವರೆಗೂ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. “ಉಪಾಧ್ಯಕ್ಷ” ಕುಟುಂಬ ಸಮೇತ ನೋಡಬಹುದಾದ ಚಿತ್ರ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. “ಅಧ್ಯಕ್ಷ” ಚಿತ್ರದ ಸೀಕ್ವೆಲ್ ಆಗಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಗೆದ್ದಿದೆ. ಇಂದು ಶಿವರಾಜಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ. ಚಿತ್ರ ನೋಡಿ. ಎಲ್ಲರೂ ಪ್ರೋತ್ಸಾಹ ನೀಡಿ ಎಂದು ನಾಯಕ ಚಿಕ್ಕಣ್ಣ ತಿಳಿಸಿದರು.

ನಾಯಕಿ ಮಲೈಕ ಹಾಗೂ ನಟ ರವಿಶಂಕರ್ ಸೇರಿದಂತೆ ಅನೇಕ ಕಲಾವಿದರು “ಉಪಾಧ್ಯಕ್ಷ” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಅವಧಿ ಮೀರಿದ ಪಾರ್ಟಿ! ವಿಚಾರಣೆಗೆ ಪೊಲೀಸ್ ಮೆಟ್ಟಿಲೇರಿದ ಕಾಟೇರ: ಇದು ದರ್ಶನ್ ಮೇಲಿನ ಟಾರ್ಗೆಟ್ ಅಂದ್ರು ರಾಕ್ ಲೈನ್

ಒಂದು ಕಡೆ ಕಾಟೇರ ರಾಜ್ಯ ಮಾತ್ರವಲ್ಲ ವಿದೇಶದಲ್ಲೂ ಭರ್ಜರಿ ಯಶಸ್ಸು ಕಾಣ್ತಾ ಇದ್ದರೆ, ಇನ್ನೊಂದು ಕಡೆ ಆ ಕಾಟೇರನಿಗೆ ಸಂಕಷ್ಟ ಎದುರಾಗಿದೆ. ಇಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಡೀಟೈಲ್ಸ್.


ಹೌದು, ಕೆಲ ದಿನಗಳ ಹಿಂದೆ ಕಾಟೇರ ಚಿತ್ರ ಭರ್ಜರಿ ಯಶಸ್ಸು ಕಂಡ ಹಿನ್ನಲೆಯಲ್ಲಿ, ಜೆಟ್ ಲ್ಯಾಗ್ ಪಬ್ ನಲ್ಲಿ ಚಿತ್ರ ತಂಡ ಪಾರ್ಟಿ ನಡೆಸಿತ್ತು. ಆದರೆ, ಅಂದು ಲೇಟ್ ನೈಟ್ ಪಾರ್ಟಿ ಮಾಡಿದ ಸಂಬಂಧ ದೂರು ಪ್ರಕರಣವಾಗಿತ್ತು. ಹಾಗಾಗಿ ಚಿತ್ರ ತಂಡಕ್ಕೆ ಠಾಣೆಗೆ ಬರುವಂತೆ ಪೋಲೀಸ್ ನೋಟಿಸ್ ಕೂಡ ನೀಡಿತ್ತು.

ಆದರೆ, ದರ್ಶನ್ ಕಾಟೇರ ಸಕ್ಸಸ್ ಹಿನ್ನೆಲೆಯಲ್ಲಿ ದುಬೈನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹೋಗಿದ್ದರು. ಹಾಗಾಗಿ ಠಾಣೆಯ ವಿಚಾರಣೆಗೆ ದರ್ಶನ್ ಹಾಜರಾಗಿರಲಿಲ್ಲ.

ದುಬೈ ನಿಂದ ಮರಳಿದ ದರ್ಶನ್ ಇಂದು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಸೇರಿದಂತೆ ಕಾಟೇರ ಚಿತ್ರತಂಡ ವಿಚಾರಣೆಗೆ ಹಾಜರಾಗಿದೆ.

ನೈಟ್ ಲೇಟ್ ಪಾರ್ಟಿ ನಡೆದಿದ್ದರಿಂದ ಅಲ್ಲಿ ಮಧ್ಯರಾತ್ರಿ ಕೂಡ ಮದ್ಯಪಾನ ಸರಬರಾಜು ಮಾಡಲಾಗಿತ್ತು. ಈ ವೇಳೆ ಕನ್ನಡದ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಅಲ್ಲಿ ಸೆಲೆಬ್ರಿಟಿಗಳು ಅವಧಿ ಮೀರಿ ಪಾರ್ಟಿ ನಡೆಸಿದ್ದರು. ಹೀಗಾಗಿ ಪೊಲೀಸರುವಿದನ್ನ ಪ್ರಶ್ನಿಸಿ ಪ್ರಕರಣ ದಾಖಲಿಸಿದ್ದರು.

ಸದ್ಯ ಸೆಲಬ್ರಿಟಿಗಳು ನೈಟ್ ಲೇಟ್ ಪಾರ್ಟಿ ಮಾಡಿದ್ದರ ಹಿನ್ನೆಲೆಯಲ್ಲಿ ಪೋಲೀಸರು ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಜೊತೆ ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಟಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್, ನಟ ಚಿಕ್ಕಣ್ಣ ಸೇರಿದಂತೆ ಇತರರು ಠಾಣೆಗೆ ಹಾಜರಾಗಿದ್ದಾರೆ.

ಈ ವೇಳೆ ಸುಬ್ರಹ್ಮಣ್ಯ ನಗರ ಪೋಲೀಸರು ಸೆಲೆಬ್ರಿಟಿಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ನಿಮ್ಮ ಹೆಸರೇನು ನಿಮ್ಮ ತಂದೆ ಹೆಸರೇನು,

ಜೆಟ್ ಲ್ಯಾಗ್ ಪಬ್ ಗೆ ನಿಮ್ಮನ್ನು ಆಹ್ವಾನಿಸಿದ್ದು ಯಾರು,

ಎಷ್ಟೊತ್ತಿಗೆ ಪಬ್ ಗೆ ಬಂದ್ರಿ.

ಅವಧಿ ಮೀರಿದ್ದರೂ ಅಲ್ಲೇ ಪಾರ್ಟಿ ಮಾಡಲು ಅನುಮತಿ ಕೊಟ್ಟವರು ಯಾರು

ಹೀಗೆ ಸುಮಾರು ಹದಿನೈದು ಪ್ರಶ್ನೆಗಳನ್ನು ಪೊಲೀಸರು ವಿಚಾರಣೆ ವೇಳೆ ಕೇಳಿದ್ದಾರೆ ಎನ್ನಲಾಗಿದೆ.

ಅದೇನೆ ಇರಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ್ದರ ಹಿನ್ನೆಲೆಯಲ್ಲಿ ಕಾಟೇರ ಚಿತ್ರತಂಡ ಈಗ ಸಂಕಷ್ಟ ಎದುರಿಸುವಂತಾಗಿದೆ.

ವಿಚಾರಣೆ ಬಳಿಕ ಹೊರಬಂದ ಸೆಲಿಬ್ರಿಟಿಗಳ ಪರವಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಿಷ್ಟು.

ಕಾಟೇರ ಸಕ್ಸಸ್ ಆಗಿದ್ದರಿಂದ ನಾನೇ ಪಾರ್ಟಿ ಅರೇಂಜ್ ಮಾಡಿದ್ದೆ. ಎಲ್ಲರೂ ಬರೋದು ತಡವಾಗಿತ್ತು. ಹಾಗಾಗಿ ಪಬ್ ಮಾಲೀಕರಿಗೆ ನಾನು ಊಟ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ . ಹಾಗಾಗಿ ತಡವಾಗಿತ್ತು.

ಇದು ದರ್ಶನ್ ವಿರುದ್ಧ ಮಾಡಿದ ಪಿತೂರಿ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೂ ಗೊತ್ತು ರಾಜ್ಯದ ಜನರಿಗೂ ಗೊತ್ತು ಎಂಬುದು ಅವರ ಮಾತು.

ಒಟ್ಟಾರೆ ಇಂದು ಡಾ.ರಾಜಕುಮಾರ್ ರಸ್ತೆ ಟ್ರಾಫಿಕ್ ಜಾಮ್ ಆಗಿದ್ದಂತೂ ಸುಳ್ಳಲ್ಲ.

Categories
ಸಿನಿ ಸುದ್ದಿ

ಇದು ದೇವದಾಸ್ ಕಾಪಿಕಾಡ್ ಪ್ರೇಮ ಪ್ರಸಂಗ: ಪುರುಷೋತ್ತಮನ ಪ್ರೇಮ ಪ್ರಸಂಗ ಫ್ರೆಬ್ರವರಿಗೆ ರಿಲೀಸ್

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ “ಪುರುಷೋತ್ತಮನ‌ ಪ್ರಸಂಗ” ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.

ತುಳುವಿನಲ್ಲಿ ಒಂಭತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದು ಮಾತನಾಡಿದ ನಿರ್ದೇಶಕ ದೇವದಾಸ್ ಕಾಪಿಕಾಡ್, ಕನ್ನಡದಲ್ಲಿ ನನಗೆ ಮೊದಲ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. “ಪುರುಷೋತ್ತಮನ ಪ್ರಸಂಗ” ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ. “ಪುರುಷೋತ್ತಮ” ನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ.

ಈ ಪಾತ್ರಕ್ಕೆ ಹೇಳಿಮಾಡಿಸಿದ ನಟ ಅಜಯ್. ಹೊರದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ. ರಿಷಿಕಾ ನಾಯ್ಕ್ ಈ ಚಿತ್ರದ ನಾಯಕಿ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ನಾನು ಕೂಡ ನಟಿಸಿದ್ದೇನೆ. ನನ್ನ ಮಗ ಅರ್ಜುನ್ ಸಹ ನಿರ್ದೇಶನ ಮಾಡಿದ್ದಾರೆ.

ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನದಲ್ಲಿ ನಾಲ್ಕು ಹಾಡುಗಳು ಮೂಡಿಬಂದಿದೆ. ಜಯಂತ ಕಾಯ್ಕಿಣಿ, ದೊಡ್ಡರಂಗೇ ಗೌಡ, ವಿ.ನಾಗೇಂದ್ರ ಪ್ರಸಾದ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ವಿಷ್ಣು ಈ ಚಿತ್ರದ ಛಾಯಾಗ್ರಾಹಕರು. ಮಂಗಳೂರು ಹಾಗೂ ದುಬೈನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಫೆಬ್ರವರಿ ಮಧ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ನಾನು ಈ ಹಿಂದೆ “ಕಿಸ್”, ” ಮೆಹಬೂಬ “, “ನಾಟ್ ಔಟ್” ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ನಟಿಸಿರುವ ಮೊದಲ. ಚಿತ್ರವಿದು. ತುಳು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರವೂ ಚೆನ್ನಾಗಿದೆ ಎಂದರು ನಾಯಕ ಅಜಯ್.

ನಾಯಕಿ ರಿಷಿಕಾ ನಾಯ್ಕ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕರಾದ ವಿ.ರವಿಕುಮಾರ್, ಶಂಶುದ್ದೀನ್ ಚಿತ್ರದ ಕುರಿತು ಮಾತನಾಡಿದರು. ಶರ್ಮಿಳಾ ಕಾಪಿಕಾಡ್ ಚಿತ್ರಕ್ಕೆ ಶುಭ ಹಾರೈಸಿದರು.

Categories
ಸಿನಿ ಸುದ್ದಿ

ಚಿತ್ರ ಸಂತೆಯಲ್ಲಿ 31 ಡೇಸ್: ನಿರಂಜನ್ ಶೆಟ್ಟಿ ನಟನೆಯ 31 DAYS ಚಿತ್ರದ ಫಸ್ಟ್ ಲುಕ್ ರಿಲೀಸ್

“ಜಾಲಿಡೇಸ್” ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ “31 DAYS” ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅನಾವರಣಗೊಂಡಿದೆ.

“31 DAYS” ಚಿತ್ರಕ್ಕೆ “ಹೈ ವೋಲ್ಟೇಜ್ ಲವ್ ಸ್ಟೋರಿ” ಎಂಬ ಅಡಿಬರಹವಿದೆ. ಇದೊಂದು ಪ್ರೇಮ ಕಥಾನಕವಾಗಿದ್ದು, ಚಿತ್ರಸಂತೆಗೆ ಆಗಮಿಸಿದ್ದ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ವಿಶೇಷ. ಶೀರ್ಷಿಕೆಯನ್ನು ಯುವ ಪ್ರೇಮಿಗಳು ಬಿಡುಗಡೆ ಮಾಡಿದರು. ಅಲ್ಲಿ ನೆರದಿದ್ದ ಸಹಸ್ರಾರು ಕಲಾಸಕ್ತರು “31 DAYS” ಚಿತ್ರದ ವಿನೂತನ ಫಸ್ಟ್ ಲುಕ್ ಗೆ ಫಿದಾ ಆದರು.

“ನಾನು ಸಹ ಚಿತ್ರಕಲಾ ಪರಿಷತ್ ನ ವಿದ್ಯಾರ್ಥಿಯಾಗಿದ್ದು, ಚಿತ್ರಸಂತೆಯಲ್ಲಿ ನಮ್ಮ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆಯಾಗಿದ್ದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ನಿರಂಜನ್ ಶೆಟ್ಟಿ.

Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸುತ್ತಿರುವ “31DAYS” ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. “31 DAYS” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಹೆಬ್ರಿ, ಆಗುಂಬೆ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ನಿರಂಜನ್ ಶೆಟ್ಟಿ ಅವರು ನಾಯಕನಾಗಿ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸುತ್ತಿದ್ದಾರೆ.

“31 DAYS” ಚಿತ್ರ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು 31 ದಿನಗಳಲ್ಲಿ ನಡೆಯುವ high voltage love story ಇದಾಗಿದೆ.

4 ಹಾಡುಗಳಿರುವ ಈ ಚಿತ್ರಕ್ಕೆ ವಿ. ಮನೋಹರ್ ರವರ ಸಂಗೀತ ನಿರ್ದೇಶನವಿದೆ. ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150 ನೇ ಚಿತ್ರವೂ ಹೌದು. ವಿನುತ್. K ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ಸನತ್ ರವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಅನೀಶ್ ಬರ್ತ್ ಡೇಗೆ ’ಆರಾಮ್’ ಟೈಟಲ್ ಟ್ರ್ಯಾಕ್ ಗಿಫ್ಟ್: ಸೆಲ್ಫ್ ಮೇಡ್ ಸ್ಟಾರ್ ನ ಬಿಂದಾಸ್ ಸ್ಟೆಪ್

‘ನಮ್‌ ಏರಿಯಾಲಿ ಒಂದ್ ದಿನ’, ‘ಪೊಲೀಸ್‌ ಕ್ವಾಟ್ರಸ್‌’, ‘ಅಕಿರ’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ರಾಮಾರ್ಜುನ’ ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ‌ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಅನೀಶ್ ತೇಜೇಶ್ವರ್. ಅವರಿಗಿಂದು ಜನ್ಮದಿನದ ಸಂಭ್ರಮ. ಅನೀಶ್ ಬರ್ತಡೇ ಸ್ಪೆಷಲ್ ಆಗಿ ಆರಾಮ್ ಅರವಿಂದ ಸ್ವಾಮಿ ಸಿನಿಮಾದ ಮೊದಲ ಹಾಡನ್ನು ವಿಂಕ್ ವಿಶಲ್ ಪ್ರೊಡಕ್ಷನ್ ಯೂಟ್ಯೂಬ್ ನಲ್ಲಿ ಅನಾವರಣ ಮಾಡಲಾಗಿದೆ.

ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ನಾಗಾರ್ಜುನ್ ಶರ್ಮಾ ಪದಪುಂಜ ಪೊಣಿಸಿದ್ದು, ನಿಶಾನ್ ರೈ ಕಂಠ ಕುಣಿಸಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿನ ಕಿಕ್ ಏರಿಸಿದೆ. ನಾಯಕನ ಗುಣವನ್ನು ವರ್ಣಿಸುವ ಈ ಟೈಟಲ್ ಟ್ರ್ಯಾಕ್ ಅನೀಶ್ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಸಿಂಗಿಂಗ್ ಮಸ್ತಿ ಮೂಡಿಬಂದಿದೆ.

ತನ್ನ ಪ್ರಮೋಷನ್ ಕಂಟೆಂಟ್ ನಿಂದಲೇ ಈಗಾಗಲೇ ಸದ್ದು ಮಾಡುತ್ತಿರುವ ’ಆರಾಮ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ’ಆರಾಮ ಅರವಿಂದ ಸ್ವಾಮಿ’ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾನೆ.

ಅನೀಶ್ ತೇಜೇಶ್ವರ್ ಗೆ ಜೋಡಿಯಾಗಿ ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಗುಂಡನಿಗೆ ರಾಕೇಶ್ ಸಾಥ್ ನಾನು ಮತ್ತು ಗುಂಡ 2 ಸಿನಿಮಾಗೆ ಅಡಿಗ ಬಂದ್ರು…

‘ನಾನು ಮತ್ತು ಗುಂಡ’ ಚಿತ್ರದ ಸೀಕ್ವೇಲ್ ನಲ್ಲಿ ನಾಯಕ ಯಾರಾಗಿರಬಹುದು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ನಟ ರಾಕೇಶ್ ಅಡಿಗ ಅವರು ಈ ಭಾಗದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾನು ಮತ್ತು ಗುಂಡ ಚಿತ್ರದ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ -2” ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ.

ಮೊದಲ ಭಾಗದಲ್ಲಿ ಮರಣ ಹೊಂದಿದ್ದ ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ.
ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಹ ರಘು ಹಾಸನ್ ಅವರೇ ಹೊತ್ತಿದ್ದಾರೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಚಿತ್ರಕಥೆ ಮುಂದುವರೆಯಲಿದೆ. ಸೋಷಿಯಲ್ ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ. ಚಿತ್ರದ
ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ. ಈ ಚಿತ್ರಕ್ಕಿದೆ.

ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಉಸಿರು ಶೀರ್ಷಿಕೆ ರಿಲೀಸ್: ಇದು ಸೈಕೋ ಥ್ರಿಲ್ಲರ್ ಸ್ಟೋರಿ

ಆರ್‌.ಎಸ್‌.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ಅವರು ನಿರ್ಮಿಸುತ್ತಿರುವ ಉಸಿರು ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ, ಲಕ್ಷ್ಮಿ ಹರೀಶ್ ಅವರು ನೂತನ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಉಸಿರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತಿರುವ ಈ ಚಿತ್ರದ ಪೋಸ್ಟರ್ ಅನಾವರಣವಾಗಿದೆ. ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕ ಪ್ರಭಾಕರ್ ಅವರು ಹೇಳಹೊರಟಿದ್ದಾರೆ, ಸುಮಾರು 6 ತಿಂಗಳವರೆಗೆ ವರ್ಕ್ ಶಾಪ್ ನಡೆಸಿ ತಯಾರಾಗಿರುವ ಚಿತ್ರತಂಡ ಇದೇ ತಿಂಗಳ 17ರಿಂದ ಮಡಿಕೇರಿಯಲ್ಲಿ ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್ ಆರಂಭಿಸಲಿದೆ.

ನಿರ್ಮಾಪಕಿ ಲಕ್ಷ್ಮೀ ಹರೀಶ್ ಮಾತನಾಡಿ, ನಮ್ಮ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರವಿದು. ನಿರ್ದೇಶಕ ಪ್ರಭಾಕರ್ ನಮಗೆ ಬಹಳ ದಿನಗಳ ಪರಿಚಯ. ಅವರು ಈ ಥರ ಒಂದು ಕಥೆಯಿದೆ ಎಂದು ಹೇಳಿದ ಸ್ಟೋರಿ ಲೈನ್ ನಮಗೆ ಇಷ್ಟವಾಯ್ತು, ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ತಿಲಕ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಬೇರೆ ಶೂಟಿಂಗ್‌ನಲ್ಲಿರುವ ಕಾರಣ ಇವತ್ತು ಬಂದಿಲ್ಲ ಎಂದರು.

ನಿರ್ದೇಶಕ ಪ್ರಭಾಕರ್ ಮಾತನಾಡಿ, ನನ್ನ 12 ವರ್ಷಗಳ ಕನಸೀಗ ನನಸಾಗುತ್ತಿದೆ. ಈಗಾಗಲೇ ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಇದೊಂದು ಸೈಕೋ ಥ್ರಿಲ್ಲರ್ ಕಥಾಹಂದರ ಇರುವ ಚಿತ್ರವಾಗಿದ್ದು, “ಉಸಿರು” ಟೈಟಲ್ ನಮ್ಮ ಕಥೆಗೆ ಸೂಕ್ತವಾಗುತ್ತೆ ಅಂತ ಇಡಲಾಗಿದೆ. ಒಂದೊಳ್ಳೇ ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ ತಿಲಕ್ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ನಾಯಕಿಯಾಗಿ ಪ್ರಿಯಾ ಹೆಗ್ಡೆ ಉಳಿದಂತೆ ರಘು ರಮಣಕೊಪ್ಪ, ರಂಗಾಯಣ ರಘು ನಟಿಸುತ್ತಿದ್ದಾರೆ, ಮುಖ್ಯವಾಗಿ 9 ಪಾತ್ರಗಳ ಮೇಲೆ ಚಿತ್ರದ ಕಥೆ ಸಾಗುತ್ತದೆ. ಮೊದಲ ಹಂತದಲ್ಲಿ ಮಡಿಕೇರಿ ಸುತ್ತಮುತ್ತ 15 ದಿನಗಳ ಚಿತ್ರೀಕರಣ ನಡೆಸಿ, ನಂತರ ಬೆಂಗಳೂರಲ್ಲಿ ಮುಂದುವೆಸುತ್ತೇವೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಆರ್‌ಎಸ್‌ಜಿ ನಾರಾಯಣ ಮಾತನಾಡಿ, ಸಿನಿ ಜರ್ನಿಯ 25ನೇ ವರ್ಷವಿದು, ಕಥೆಯಲ್ಲಿರುವ ಸನ್ನಿವೇಶಗಳು ನನಗೆ ತುಂಬಾ ಇಷ್ಟವಾಯ್ತು. ಬೇರೆ ಬೇರೆ ಜಾನರ್‌ನ ೪ ಹಾಡುಗಳನ್ನು ಕಂಪೋಜ್ ಮಾಡಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿವೆ, ಅಭಿ ಅರ್ಥಗರ್ಭಿತವಾದ ಲಿರಿಕ್ ಬರೆದಿದ್ದಾರೆ ಎಂದರು.

ಚಿತ್ರದ ನಾಯಕಿ ಪ್ರಿಯಾ ಹೆಗ್ಡೆ ಮಾತನಾಡಿ, ಚಿತ್ರದ ಕಾನ್ಸೆಪ್ಟ್, ಟೈಟಲ್ ಎರಡೂ ಚೆನ್ನಾಗಿದೆ, ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್ಸ್ ಇದೆ. ಈಗಾಗಲೇ ಕನ್ನಡದ ಜಿಲ್ಕಾ, ಕುದ್ರು ಅಲ್ಲದೆ ಒಂದು ತೆಲುಗು ಚಿತ್ರದಲ್ಲೂ ಸಹ ಅಭಿನಯಿಸಿದ್ದೇನೆ ಎಂದು ಹೇಳಿದರು.

ನಟ ಸಂತೋಷ್ ಮಾತನಾಡಿ ನಾನು ರಂಗಭೂಮಿಯಿಂದ ಬಂದವನು, ಇದು ನನ್ನ ಮೊದಲ ಚಿತ್ರವಾಗಿದ್ದು, ಪಾತ್ರ ತುಂಬಾ ಎಮೋಷನಲ್ ಪಾತ್ರವಿದೆ ಎಂದರು. ನಟಿ ಅಪೂರ್ವ ಮಾತನಾಡಿ ನಾನು ಭರತನಾಟ್ಯ ಕಲಾವಿದೆ, ರಂಗಭೂಮಿ ನಟಿ, ನಿರ್ದೇಶಕಿ ಕೂಡ ಎಂದು ಹೇಳಿದರು, ಮತ್ತೊಬ್ಬನಟ ಅರುಣ್, ಸಾಹಿತಿ, ಡೈಲಾಗ್ ರೈಟರ್ ಭೈರವರಾಮ(ಅಭಿ), ಸಂಕಲನಕಾರ ಹರೀಶ್ ಕೊಮ್ಮೆ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು.

Categories
ಸಿನಿ ಸುದ್ದಿ

ಕಾಂಗರೂ ಮೋಷನ್ ಪೋಸ್ಟರ್ ರಿಲೀಸ್ ಗೆ ದಿನಗಣನೆ: ಇದು ಆದಿತ್ಯ ಚಿತ್ರ

ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಮಾತಿನ ಜೋಡಣೆ(ಡಬ್ಬಿಂಗ್) ಸಹ ಪೂರ್ಣವಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. “ಕಾಂಗರೂ” ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಒಬ್ಬರು ನಮ್ಮ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಲಿದ್ದಾರೆ. “ಕಾಂಗರೂ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿರುವ ಸೂಪರ್ ಸ್ಟಾರ್ ಯಾರು ಎಂಬುದನ್ನು ಸದ್ಯದಲ್ಲೇ ತಿಳಿಸುವುದಾಗಿ ನಿರ್ದೇಶಕ ಕಿಶೋರ್ ಮೇಗಳಮನೆ ಹೇಳಿದ್ದಾರೆ.

ಆದಿತ್ಯ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದು, ಸೈಕಿಯಾಟ್ರಿಸ್ಟ್ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ.

ನಿರ್ದೇಶಕ ಕಿಶೋರ್ ಮೇಗಳಮನೆ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ, ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಉದಯ್ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

error: Content is protected !!