ಆಧುನಿಕ ರಾಮನ ಬಿಡುವಿಲ್ಲದ ಓಡಾಟ- ನೋಡುಗನ ಆಯಾಸ !

ಚಿತ್ರ ವಿಮರ್ಶೆ: ರೇಟಿಂಗ್ 2.5/5

ವಿಜಯ್ ಭರಮಸಾಗರ

ಚಿತ್ರ: ರಾಮನ ಅವತಾರ
ನಿರ್ದೇಶಕ: ವಿಕಾಸ್ ಪಂಪಾಪತಿ
ನಿರ್ಮಾಣ: ಅಮರೇಜ್ ಸೂರ್ಯವಂಶಿ
ತಾರಾಗಣ: ರಿಷಿ, ಪ್ರಣೀತಾ, ಶುಭ್ರ ಅಯ್ಯಪ್ಪ, ಅರುಣ್ ಸಾಗರ್ ಇತರರು

ಜೀವನದಲ್ಲಿ ಎಲ್ಲ ಕಷ್ಟ ಗಳು ನಮ್ಮನ್ನೇ ಯಾಕೆ ಹುಡಿಕೊಂಡ್ ಬರ್ತವೆ. ಹಾಗೆ ಬಂದಾಗಲೇ ನಮ್ಮವರು ಯಾರು ಅಂತ ಗೊತ್ತಾಗೋದು..’
ಈ ಡೈಲಾಗ್ ಬರುವ ಹೊತ್ತಿಗೆ ಅಲ್ಲೊಂದು ಮೆಲೋ ಡ್ರಾಮ ನಡೆದಿರುತ್ತೆ. ಏನದು ಎಂಬ ಕುತೂಹಲಕ್ಕೆ ಸಿನಿಮಾ ನೋಡಿ.

ಮನೆಗೆ ಮಾರಿ, ಊರಿಗೆ ಉಪಕಾರಿ ಇದು ಗಾದೆ ಮಾತು. ಮನೆಗೊಬ್ಬ ಇಂತಹ ವ್ಯಕ್ತಿ ಇದ್ದೇ ಇರ್ತಾರೆ. ಆದರೆ ಅಲ್ಲೊಬ್ಬ ಆಧುನಿಕ ರಾಮ, ಊರ ಉದ್ಧಾರ ಮಾಡಬೇಕು. ಜನಸೇವೆ ಮೂಲಕ ಹೆಸರಾಗಬೇಕು ಅಂದುಕೊಳ್ತಾನೆ. ಅವನ ಕನಸು ತುಂಬಾ ದೊಡ್ಡದು. ಆದರೆ ಆ ಕನಸು ನನಸಾಗುತ್ತಾ ಅನ್ನುವುದನ್ನು ಹಾಸ್ಯ ಪ್ರಧಾನವಾಗಿ ಕಟ್ಟಿಕೊಡುವ ಪ್ರಯತ್ನದಲ್ಲಿ ನಿರ್ದೇಶಕರು ತಕ್ಕಮಟ್ಟಿಗೆ ಕೆಲಸ‌ ಮಾಡಿದ್ದಾರೆ. ಹಾಗಂತ ಇದು ಪೂರ್ಣ ಪ್ರಮಾಣದ‌ ಕಾಮಿಡಿ ಸಿನಿಮಾವಂತೂ ಅಲ್ಲ. ನೀತಿ ಬೋಧನೆಯೂ ಇಲ್ಲ. ಮೊದಲರ್ಧ ಹೇಗೋ ನಗಾಡಿಸಿಕೊಂಡು ಸಾಗುವ ಸಿನಿಮಾ, ದ್ವಿತಿಯಾರ್ಧದಲ್ಲಿ ಏರುಪೇರಾಗುತ್ತೆ. ಎಲ್ಲೋ ಒಂದು ಕಡೆ ಕಥೆ ಮಂದಗತಿ ಎನಿಸುತ್ತೆ. ಇದು ತೀರಾ ಹೊಸ ಕಥೆಯೇನಲ್ಲ. ಇನ್ನಷ್ಟು ಬಿಗಿ ಹಿಡಿತ ಇದ್ದಿದ್ದರೆ ಸಿನಿಮಾದ ಅಂದ, ಗುಣಮಟ್ಟ, ವೇಗ ಹೆಚ್ಚುತ್ತಿತ್ತು. ಮೊದಲರ್ಧಕ್ಕೆ‌ ಕೊಟ್ಟ ಗಮನ ದ್ವಿತಿಯಾರ್ಧಕ್ಕೆ ನೀಡಿದ್ದರೆ ಹೊಸ ಅವತಾರವಾದರೂ ಕಾಣಬಹುದಿತ್ತು.

ನಿರ್ದೇಶಕರ ಕಥೆಯ ಎಳೆ ಹೊಸದಲ್ಲ. ಹೋಗಲಿ ನಿರೂಪಣೆಯನ್ನಾದರೂ ಇನ್ನಷ್ಟು ಚುರುಕಾಗಿಸಬಹುದಿತ್ತು. ಆದರೆ ಪ್ರಯತ್ನದಲ್ಲಿ ನಿರ್ದೇಶಕರು ಹಿಂದುಳಿದಿದ್ದಾರೆ. ಕಚಗುಳಿ ಮಾತು ಕೊಂಚ ನೋಡಿಸಿಕೊಂಡು ಹೋಗುತ್ತೆ ಅನ್ನೋದೇ ಸಮಾಧಾನ.

ಆರಂಭದಲ್ಲಿ ಮಜವೆನಿಸುವ ಕಥೆಯ ಜರ್ನಿ ಹೋಗ್ತಾ ಹೋಗ್ತಾ ತೀರಾ ಸರಳವೆನಿಸುತ್ತೆ. ಹಾಗಾಗಿ ನೋಡುಗರಿಗೆ ಹೇಳಿಕೊಳ್ಳುವಷ್ಟು ಮಜ ತರಿಸಲ್ಲ. ಆದರೆ, ತರಹೇವಾರಿ ಪಾತ್ರಗಳ ಮೋಡಿ ನೋಡಿಸಿಕೊಂಡು ಹೋಗುತ್ತೆ.

ಬಹುತೇಕ ಅಲ್ಲಲ್ಲೇ ಕಥೆ ಟ್ರಾವೆಲ್ ಆಗಿದ್ದರೂ, ಕೊಂಚ ಕಚಗುಳಿ ಇಡುವ ಅಂಶಗಳು ಗಮನ ಸೆಳೆಯುತ್ತವೆ. ಕೆಲವು ಕಡೆ ತೀರಾ ಸಿಲ್ಲಿ ಎನಿಸುವ ದೃಶ್ಯಗಳು ಎದುರಾಗಿ ನೋಡುಗನ ತಾಳ್ಮೆಗೆಡಿಸುತ್ತವೆ. ಅವುಗಳಿಗೆ ಕತ್ತರಿ ಬಿದ್ದಿದ್ದರೆ ಹೊಸ ಅವತಾರ ಕಾಣಬಹುದಿತ್ತು.
ರೊಮ್ಯಾಂಟಿಕ್ ಕಾಮಿಡಿ ಇಷ್ಟ ಪಡೋರಿಗೆ ಇದು ರುಚಿಸುತ್ತೆ. ರಿಷಿ ಕಾಮಿಡಿ ಸಬ್ಜೆಕ್ಟ್ ಗೆ ಫಿಟ್ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದಾರೆ. ಆದರೆ ಈ ಕಥೆಯ ಆಯ್ಕೆಯಲ್ಲಿ ಗೊಂದಲಗೊಂಡಿದ್ದಾರೆ. ಹಿಂದೆ ಆಪರೇಷನ್ ಅಲಮೇಲಮ್ಮ ಕೊಟ್ಟ ಮಜ ಜನ ಮರೆತಿಲ್ಲ. ಅದೇ ಗುಂಗಲ್ಲಿ ಈ ಹೊಸ ಅವತಾರ ನೋಡಿದರೆ ಗಾಬರಿ ಆಗುವಂತಿಲ್ಲ.!!

ಕಥೆ ಏನು?

ರಾಮ (ರಿಷಿ) ಊರ ಜನರ‌ ಸೇವೆ ಮಾಡಬೇಕು. ಎಲ್ಲರೂ ದುಡಿದು ಬದುಕಬೇಕು ಅಂತ ಕನಸು ಕಂಡವನು. ಆದರೆ ಅವನ ಬದುಕಲ್ಲಿ ಒಂದು ಘಟನೆ ನಡೆದು ಹೋಗುತ್ತೆ. ಯಾರೋ ಮಾಡಿದ ತಪ್ಪು ಅವನ ಮೇಲೆ ಬರುತ್ತೆ. ಊರ ಜನ ತಿರುಗಿ ಬೀಳುವ ಮೊದಲು ಊರು ಬಿಡಬೇಕು ಅಂತ ನಿರ್ಧರಿಸಿ ರಾತ್ರೋ ರಾತ್ರಿ ಊರು ಬಿಡ್ತಾನೆ. ಮಂಗಳೂರು ಅಂಗಳಕ್ಕೆ ಬಂದು ಬೀಳೋ ರಾಮನ ಕಣ್ಣಿಗೆ ಸೀತೆಯಂತಹ ಹುಡುಗಿ ಕಾಣ್ತಾಳೆ.

ಪ್ರಾಜೆಕ್ಟ್ ಒಂದರ ರೀ ಸರ್ಚ್ ಗೆ ಬರುವ ಅವಳ ಜೊತೆ ಒಂದು ವಾರ ಸುತ್ತಾಡುತ್ತಾನೆ. ಮೆಲ್ಲನೆ‌ ಪ್ರೀತಿಯೂ ಶುರುವಾಗುತ್ತೆ. ಇನ್ನೇನು ಹೇಳಿಕೊಳ್ಳಬೇಕೆಂಬ ಹೊತ್ತಲ್ಲಿ ಅ ಹುಡುಗಿಯ ಕಿಡ್ನಾಪ್ ಆಗುತ್ತೆ. ಅಲ್ಲಿಂದ ಕಥೆ ಇನ್ನೊಂದು ಮಜಲಿಗೆ ಹೊರಳುತ್ತೆ. ಹಾಗಾದರೆ ಆಕೆಯನ್ನು ಕಿಡ್ನಾಪ್ ಮಾಡಿದ್ಯಾರು? ರಾಮ ತನ್ನ ಸೀತೆಯನ್ನು ಕಾಪಾಡ್ತಾನಾ? ತನ್ನೂರಿಗೆ ಹಿಂದಿರುಗುತ್ತಾನಾ? ಇದನ್ನು ತಿಳಿಯೋ ಕುತೂಹಲ ಇದ್ದರೆ ರಿಷಿ ಅವತಾರ ನೋಡಬಹುದು.

ಯಾರು ಹೇಗೆ?

ರಿಷಿ ನಟನೆಯಲ್ಲಿ ಲವಲವಿಕೆ ಇದೆ. ಮಾತಿನ‌ಲಹರಿ ಚಂದ. ರೊಮ್ಯಾಂಟಿಕ್ ಹುಡುಗನಾಗಿ ಇಷ್ಟವಾಗುತ್ತಾರೆ. ಅವರ ಬಾಡಿ ಲಾಂಗ್ವೇಜ್ ಎಂದಿಗಿಂತಲೂ ಗಮನ ಸೆಳೆಯುತ್ತೆ. ಕಾಮಿಡಿ ಫೈಟಲ್ಲೂ ಸೈ ಎನಿಸಿಕೊಳ್ಳುತ್ತಾರೆ.
ಪ್ರಣೀತಾ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅರುಣ್ ಸಾಗರ್ ಕಿಡ್ನಾರ್ ಲೀಡರ್ ಆಗಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪಾತ್ರಗಳು ನಾಯಕ, ನಾಯಕಿಗೆ ಹೆಗಲಾಗಿವೆ.
ವಿಷ್ಣು ಪ್ರಸಾದ್ ಛಾಯಾಗ್ರಹಣ ಪರವಾಗಿಲ್ಲ. ಜೂಡಾ ಸ್ಯಾಂಡಿ ಸಂಗೀತಕ್ಕಿನ್ನು ಧಮ್ ಬೇಕಿತ್ತು.

Related Posts

error: Content is protected !!