ಕನ್ನಡದಲ್ಲೀಗ ಸಿನಿಮಾಗಳ ಕಲರವ. ಹೌದು, ಕೊರೊನಾ ಹಾವಳಿಯ ಬಳಿಕ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಮೆಲ್ಲನೆ, ಒಂದೊಂದೇ ಚಿತ್ರಗಳು ತೆರೆಗೆ ಬರುತ್ತಿವೆ. ಈಗ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪಾರು” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಚಿತ್ರ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಬಡತನದ ಬೇಗೆಯಲ್ಲೇ ದಿನದೂಡಿ ಬದುಕುವ ಫ್ಯಾಮಿಲಿಯಲ್ಲಿ ನಾಲ್ವರು ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ, ಜಿಲ್ಲಾಧಿಕಾರಿಯಾಗುತ್ತಾಳೆ. ಆದೇ ಚಿತ್ರದ ಕಥಾಹಂದರ. ಹನುಮಂತ್ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಹಾಗು ಛಾಯಾಗ್ರಹಣದ ಜವಾಬ್ದಾರಿಯೂ ಹನುಮಂತ್ ಪೂಜಾರ್ ಅವರಿಗಿದೆ. ಇನ್ನು, ನೀನಾಸಂ ನಂಟು ಇರುವ ಹನುಮಂತ್ ಪೂಜಾರ್, “ಬುದ್ದಿವಂತ”, “ಅಯೋಗ್ಯ”, “ದೋಬಿಘಾಟ್” ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಹನುಮಂತ್ ಪೂಜಾರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಸಿ.ಎನ್.ಗೌರಮ್ಮ ಅವರ ಸಹ ನಿರ್ಮಾಣವಿದೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತವಿದೆ. ಶಿವಕುಮಾರ್ ಸ್ವಾಮಿ ಸಂಕಲನ ಮಾಡಿದ್ದಾರೆ. “ಪಾರು” ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಮ್ ಕುಮಾರ್ ಇತರರು ಇದ್ದಾರೆ. ದಾವಣಗೆರೆ, ಬೆಂಗಳೂರು, ಹಾವೇರಿ ಇನ್ನಿತರೆ ಕಡೆ ಚಿತ್ರೀಕರಣ ನಡೆದಿದೆ.
ಡಿಸೆಂಬರ್, 5, 2003
– ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾವೊಂದು ಬಿಡುಗಡೆಯಾದ ದಿನ. ಹೌದು, ಪ್ರೇಮ್ ನಿರ್ದೇಶನದ ಅಜೇಯ್ ರಾವ್ , ರಮ್ಯಾ ಹಾಗೂ ಸುನೀಲ್ ರಾವ್ ಅಭಿನಯದ “ಎಕ್ಸ್ ಕ್ಯೂಸ್.. ಮಿ” ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಹದಿನೇಳು ವರ್ಷಗಳು ಸಂದಿವೆ. ಎನ್.ಎಂ.ಸುರೇಶ್ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದರು. ಇಂದಿಗೂ ಈ “ಎಕ್ಸ್ ಕ್ಯೂಸ್ …ಮಿ” ಎವರ್‌ಗ್ರೀನ್. ಒಂದಷ್ಟು ಸಿನಿಮಾಗಳು ಪದೇ ಪದೇ ಕಾಡುವುದಕ್ಕೆ ಕಾರಣ, ಆ ಚಿತ್ರದಲ್ಲಿದ್ದ ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಕಲಾವಿದರ ಅಭಿನಯ. ಅಷ್ಟಕ್ಕೂ ಈ ಚಿತ್ರದ ಬಗ್ಗೆ ಇಷ್ಟೊಂದು ಹೇಳುವುದಕ್ಕೆ ಕಾರಣವಿಷ್ಟೇ. ಈ ಚಿತ್ರವನ್ನು ಅಜೇಯ್‌ರಾವ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಯಶಸ್ಸು ತಂದುಕೊಟ್ಟ “ಎಕ್ಸ್ ಕ್ಯೂಸ್…ಮಿ” ಚಿತ್ರ ಅವರಿಗೊಂದು ಐಡೆಂಟಿಟಿ ತಂದುಕೊಟ್ಟಿದೆ ಅನ್ನುವುದು ಸತ್ಯ. ಹೀರೋ ಆಗಿ ಯಶಸ್ಸು ಕೊಟ್ಟ ಚಿತ್ರವಿದು. ಹಾಗಾಗಿ ಈ ಹದಿನೇಳು ವರ್ಷಗಳ ಸಿನಿಮಾ ಜರ್ನಿಯಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಆ ಕುರಿತು ಅಜೇಯ್‌ರಾವ್ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.
ನೋವು-ಸಂಕಟ ಮರೆತಿಲ್ಲ
“ಹಲೋ ಎಕ್ಸ್ ಕ್ಯೂಸ್… ಮಿ” ಈ ಪದವನ್ನೊಮ್ಮೆ ಕೇಳೋಕೆ ಒಂದು ಖುಷಿ ಎನಿಸುತ್ತೆ. ಯಾಕೆಂದರೆ, ನಾನು “ಎಕ್ಸ್ ಕ್ಯೂಸ್… ಮಿ” ಸಿನಿಮಾ ಮೂಲಕ ಹೀರೋ ಆದವನು. ನನ್ನನ್ನು ಹೀರೋ ಅಂತ ಗುರುತಿಸಿಕೊಟ್ಟ ಸಿನಿಮಾವದು. ದೊಡ್ಡ ಯಶಸ್ಸು ಕೊಟ್ಟ ಚಿತ್ರವದು. ನನ್ನ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟ, ನನ್ನೊಳಗಿನ ಬಯಕೆಯನ್ನು ಈಡೇರಿಸಿದ ಮತ್ತು ಎಂದೆಂದಿಗೂ ಮರೆಯಲಾರದ ಚಿತ್ರವದು. ನಾನು ಯಾರು ಅಂತ ಗೊತ್ತಿಲ್ಲದ ದಿನದಲ್ಲೇ ಆ ಚಿತ್ರ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿದ ಚಿತ್ರವದು. ಹಾಗಾಗಿ, ನನಗೆ ಆ ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ.
ಈ ಹದಿನೇಳು ವರ್ಷಗಳು ಸುದೀರ್ಘ ಪಯಣದಲ್ಲಿ ಸಕ್ಸಸ್ ನೋಡಿದ್ದೇನೆ. ಫೇಲ್ಯೂರ್ ಕೂಡ ಕಂಡಿದ್ದೇನೆ. ಈ ಎರಡನ್ನೂ ನಾನು ಹತ್ತಿರದಿಂದಲೇ ನೋಡಿದವನು. ಒಂದೊಂದೇ ಮೆಟ್ಟಿಲನ್ನು ತುಂಬಾ ಕಷ್ಟಪಟ್ಟು ಹತ್ತಿ ಬಂದಿದ್ದೇನೆ. ಹತ್ತುವಾಗ ಎಡವಿದ್ದೇನೆ, ನೋವು ಅನುಭವಿಸಿದ್ದೇನೆ. ಒಮ್ಮೊಮ್ಮೆ ಆ ಮೆಟ್ಟಿಲ ಮೇಲೆ ನಿಂತು ಖುಷಿಪಟ್ಟಿದ್ದೇನೆ. ಆದರೆ, ನಾನು ಯಾವುದನ್ನೂ ಮರೆತಿಲ್ಲ ಎಂಬುದೊಂದೇ ಸತ್ಯ. ಯಾಕೆಂದರೆ, ಮನುಷ್ಯ ಎಷ್ಟೇ ಮೇಲೆ ಬಂದರೂ, ಎಷ್ಟೇ ಗಳಿಸಿದರೂ, ಹಿಂದಿನ ನೆನಪು, ಆ ಕಷ್ಟ, ನೋವು, ಸಂಕಟ ಮರೆಯಬಾರದು. ನಾನು ಈ ಎಲ್ಲವನ್ನೂ ಅನುಭವಿಸಿದ್ದರಿಂದ ಪದೇ ಪದೇ ಎಲ್ಲವೂ ನೆನಪಾಗುತ್ತಲೇ ಇರುತ್ತದೆ. ಹಾಗಾಗಿಯೇ ನಾನು ಸದಾ ಕೇವಲ ಒಬ್ಬ ನಟನಾಗಿ ಇರಲು ಇಷ್ಟಪಡ್ತೀನಿ.
ಸ್ಟಾರ್ ಅನ್ನೋದು ಮಿಂಚಿ ಮರೆಯಾಗುತ್ತೆ…
ಕ್ಯಾಮೆರಾ ಮುಂದೆ ನಾನು ಒಬ್ಬ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡ್ತೀನಿ. ಯಾಕೆಂದರೆ, ನಟನಾಗಿರುವುದೇ ಶಾಶ್ವತ. ನನಗೆ ಸ್ಟಾರ್ ಪಟ್ಟ ಬೇಡವೇ ಬೇಡ. ಅದೊಂದು ರೀತಿ ಸ್ವಿಚ್ ಆನ್ ಅಂಡ್ ಆಫ್ ಇದ್ದಂತೆ. ಆಗಾಗ ಸಕ್ಸಸ್, ಫೇಲ್ಯೂರ್ ಇದ್ದಂಗೆ. ಹಾಗಾಗಿ ನಾನು ಸ್ಟಾರ್‌ಗಿಂತ ಒಬ್ಬ ನಟನಾಗಿ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ. ಒಬ್ಬ ನಿರ್ದೇಶಕನ ಕಲ್ಪನೆ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನಾಗಬೇಕು ಎಂಬುದು ನನ್ನ ಉದ್ದೇಶ. ನಾವು ಅಣ್ಣಾವ್ರು ಅವರನ್ನು ನೆನಪಿಸಿಕೊಂಡರೆ, ಅವರು ಮಾಡಿದ ಕೆಲಸಗಳು, ಪಾತ್ರಗಳು, ಚಿತ್ರಗಳು ಕಣ್ಣೆದುರು ಬರುತ್ತವೆ. ಅದಷ್ಟೇ ಶಾಶ್ವತ. ಹಾಗಾಗಿ ನಾವು ತೆರೆಯ ಮೇಲೆ ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಬೇಕಾದರೆ, ಶ್ರದ್ಧೆ, ಭಕ್ತಿ,ಪ್ರಾಮಾಣಿಕತೆಯಿಂದ ಮಾಡಬೇಕು.
ನಟನಿಗೆ ಸ್ಟಾರ್ ಭ್ರಮೆ ಇರಬಾರದು
ನನಗೆ ಈ ಸ್ಟಾರ್‌ಡಮ್ ಮೇಲೆ ನಂಬಿಕೆ ಇಲ್ಲ. ಸ್ಟಾರ್ ಪಟ್ಟ ಅನ್ನೋದು ಶಾಶ್ವತವೂ ಅಲ್ಲ. ನಟನಾದವನು ಆ ಭ್ರಮೆಯಲ್ಲಿ ಇರಬಾರದು. ಕಲಾವಿದರ ಬದುಕಲ್ಲಿ ಸೋಲು-ಗೆಲುವು ಕಾಮನ್. ನಿರ್ಮಾಪಕ ಇರಲಿ, ನಿರ್ದೇಶಕ ಇರಲಿ, ನಟನೇ ಇರಲಿ ತನ್ನ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮಾತ್ರ ಎಲ್ಲವೂ ಶಾಶ್ವತವಾಗಿರುತ್ತೆ. ಎಲ್ಲರ ಮನಸ್ಸಲ್ಲಿ ಕೊನೆಗೆ ಉಳಿಯೋದು ಮಾಡಿದ ಕೆಲಸವಷ್ಟೇ. ಅದೆಷ್ಟೋ ಸಿನಿಮಾಗಳು ಫ್ಲಾಪ್ ಆಗಿದ್ದರೂ, ಇವತ್ತಿಗೂ ಆ ಸಿನಿಮಾಗಳನ್ನು ನೋಡಿದಾಗ, ಎಂಥಾ ಕ್ಲಾಸಿಕ್ ಸಿನಿಮಾ ಮಾಡಿದ್ದಾರೆ ಅನ್ಸುತ್ತೆ. ಇವತ್ತು ಮಾರ್ಕೆಟ್ ಅನ್ನೋದು ಕೂಡ ಶಾಶ್ವತವಲ್ಲ. ನಾಳೆ ನಾವೇ ಇರ್ತೀವೋ ಇಲ್ಲವೋ ಅನ್ನೋದು ಶಾಶ್ವತವಲ್ಲ. ಆದರೆ, ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯೋದು ಎಂಬುದು ಅವರ ಮಾತು.
ನಿರ್ದೇಶನದ ಆಸೆಯೂ ಇದೆ
ಅಂದಹಾಗೆ, ಅಜೇಯ್‌ರಾವ್ ಈ ಹದಿನೇಳು ವರ್ಷಗಳಲ್ಲಿ ಗೆದ್ದಿದ್ದಾರೆ, ಬಿದ್ದಿದ್ದಾರೆ, ನಿರ್ಮಾಪಕರಾಗಿದ್ದಾರೆ, ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ನಿರ್ದೇಶನದ ಮೇಲೆ ಆಸೆ ಇಲ್ಲವೇ? ಈ ಬಗ್ಗೆ ಮಾತನಾಡುವ ಅಜೇಯ್‌ರಾವ್, ನನಗೂ ನಿರ್ದೇಶನದ ಮೇಲೆ ಪ್ರೀತಿ ಇದೆ. ಆದರೆ, ಮೊದಲ ಆದ್ಯತೆ ನಟನೆಗೆ ಕೊಡ್ತೀನಿ. ಅದು ನನ್ನ ಪ್ಯಾಷನ್ ಕೂಡ. ಮೊದಲು ನನ್ನೊಂದಿಗೆ ಸಿನಿಮಾ ಮಾಡೋಕೆ ಬರೋರನ್ನು ಗೌರವಿಸುತ್ತೇನೆ. ಅಂಥವರಿಗೆ ಸಿನಿಮಾ ಮೇಲೆ ಪ್ರೀತಿ ಇರಬೇಕು. ಗೆಲ್ಲುವ ಛಲ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ತಾಳ್ಮೆ ಇರಬೇಕು. ಇಂದು ನನಗೆ ಆ ತಾಳ್ಮೆ ಇದ್ದುದರಿಂದಲೇ ಎಲ್ಲವನ್ನೂ ಕಂಡುಕೊಳ್ಳಲು ಸಾಧ್ಯವಾಗಿದೆ ಎಂಬುದು ಅವರ ಮಾತು.
ಸಾಧಿಸುವುದಿನ್ನೂ ಇದೆ…
ಸದ್ಯ ಅಜೇಯ್ ರಾವ್ ಅವರ “ಕೃಷ್ಣ ಟಾಕೀಸ್” ಸೆನ್ಸಾರ್ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಉಳಿದಂತೆ “ಶೋಕಿವಾಲ” ಕೂಡ ರೆಡಿ. ಇವುಗಳ ಜೊತೆಗೆ ನಿರ್ದೇಶಕರಾದ ಮಂಜು ಸ್ವರಾಜ್ ಮತ್ತು ಗುರುದೇಶಪಾಂಡೆ ಜೊತೆ ಸಿನಿಮಾ ಮಾಡಬೇಕಿದೆ. ಇದರ ನಡುವೆಯೇ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆಯಂತೆ. ಅದೇನೆ ಇರಲಿ, ಅಜೇಯ್ ರಾವ್ “ಎಕ್ಸ್ ಕ್ಯೂಸ್… ಮಿ”ಗೆ ಹದಿನೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಅಜೇಯ್‌ರಾವ್ ಎಲ್ಲಾ ಪಾಠ ಕಲಿತಿದ್ದಾರೆ. ಒಮ್ಮೆ ತಿರುಗಿ ನೋಡಿದಾಗ ಸಾಧನೆ ಮಾಡುವುದು ಇನ್ನೂ ಇದೆ ಎಂದೆನಿಸದಿರದು.
“ಆಕೆ ಟೀ ಟೇಸ್ಟರ್. ಅದಕ್ಕೆ ಅವಳು ಟೀ ಮಾತ್ರ ಕುಡಿತಾಳೆ. ಆಕೆಯ ಪ್ರಕಾರ, ಅವಳ ಬಾಯ್‌ಫ್ರೆಂಡ್ ಆಗೋನು ಕೂಡ ಟೀ ಕುಡಿಬಾರ್ದು…!
– ಅರೇ ಇದೇನಪ್ಪಾ, ಯಾರವಳು ಟೀ ಟೇಸ್ಟರ್, ಏನದು ಎಂಬ ಪ್ರಶ್ನೆ ಎದುರಾದರೆ, ಇದೇ ಮೊದಲ ಸಲ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರ “ಸಿಕ್ಸ್” ಚಿತ್ರದ ಟೀಸರ್ ನೋಡಬೇಕು. ಹಲವು ಚಿತ್ರಗಳ ಟೀಸರ್, ಟ್ರೇಲರ್ ಬಿಡುಗಡೆಯಾಗುತ್ತವೆ. ಕೆಲ ಚಿತ್ರಗಳ ಟೀಸರ್, ಟ್ರೇಲರ್‌ಗಳು ಮೊದಲ ಸಲವೇ ನಿರೀಕ್ಷೆ ಹುಟ್ಟಿಸಿಬಿಡುತ್ತವೆ. ಆ ಸಾಲಿಗೆ “ಸಿಕ್ಸ್” ಚಿತ್ರದ ಟೀಸರ್ ಕೂಡ ಸೇರಿದೆ ಅನ್ನೋದು ವಿಶೇಷ. ಹೌದು, “ಸಿಕ್ಸ್” ಟೀಸರ್ ಈಗ ಜೋರು ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ, ಒಳ್ಳೆಯ ಮೆಚ್ಚುಗೆಗೂ ಕಾರಣವಾಗುತ್ತಿದೆ.
ಟೀಸರ್ ನೋಡಿದವರಿಗೆ ಹೊಸ ಭರವಸೆ ಮೂಡಿಸುವುದಷ್ಟೇ ಅಲ್ಲ, ಅಲ್ಲಲ್ಲಿ ಥ್ರಿಲ್ ಎನಿಸುವ ಅಂಶಗಳೂ ಇವೆ. ಲವ್ ಇದೆ, ಹಾಸ್ಯವೂ ಇದೆ, ರಗಡ್ ಲುಕ್ಕೂ ಇದೆ, ಭಯ ಹುಟ್ಟಿಸುವ ಫೀಲೂ ಇದೆ. ಟೀಸರ್‌ನಲ್ಲಿ “ಏ.. ಏನ್ ಮುಖ ನೋಡ್ತಾ ಇದೀಯಾ ಹಿಂದೆನಾ, ಮುಂದೆನಾ…? ಹೀಗೆ ಆ ಹುಡುಗಿ ಕೇಳಿದಾಕ್ಷಣ, ಆ ಹುಡುಗ, “ಯೆಸ್, ಫಸ್ಟ್ ಟೈಮ್ ಅಲ್ವಾ, ಅದಕ್ಕೆ ಸ್ವಲ್ಪ ನಾಚಿಕೆ ಆಗ್ತಾ ಇದೆ” ಅಂತಾನೆ, ಆ ಮಾತಿಗೆ ಆಕೆ, “ಏನ್ ಫಸ್ಟ್ ಟೈಮ್, ಬದನೆಕಾಯಿ… ಮೂರು ವರ್ಷದಿಂದಲೂ ಓಡಿಸ್ತಾನೆ ಇದೀಯಾʼ ಅನ್ನೋ ಡೈಲಾಗ್ ಹರಿಬಿಡುತ್ತಾಳೆ. ಅವನು ತನ್ನ ಮನಸ್ಸಲ್ಲಿ, “ತಾಜ್ ಮಹಲ್ ತೋರಿಸ್ತಾಳೆ, ಅಂದರೆ, ತಾರ್ ರೋಡ್ ತೋರಿಸ್ತಾಳೆ..ʼ ಅಂತಾನೆ. ಹಾಗಾದರೆ, ಆ ಹುಡುಗ, ಹುಡುಗಿ ನಡುವೆ ನಡೆಯೋ ಸಂಭಾಷಣೆ ಎಂಥದ್ದು? ಈ ಮಾತುಗಳನ್ನು ಕೇಳಿದರೆ, ಡಬಲ್ ಮೀನಿಂಗ್ ಎನಿಸುತ್ತೆ, ಆದರೆ, ಆ ದೃಶ್ಯ ನೋಡಿದವರಿಗಷ್ಟೇ, ಅಲ್ಲಿ ಇರೋದ್ ಏನು, ನಡೆಯೋದ್ ಏನು ಅಂತ. ಸಿಕ್ಸ್ ಟೀಸರ್ ಕುರಿತು ಅದೇನೆ ಹೇಳಿದರೂ, ಹೆಚ್ಚು ಅರ್ಥ ಆಗಲ್ಲ. ಹಾಗಾಗಿ ಒಮ್ಮೆ “ಸಿಕ್ಸ್” ಟೀಸರ್ ನೋಡಿದರಷ್ಟೇ, ಎಲ್ಲವೂ ಸ್ಪಷ್ಟವಾಗುತ್ತೆ.
ಆದರೂ, ಟೀಸರ್ ಒಂದಷ್ಟ ಕುತೂಹಲದೊಂದಿಗೆ ಸಾಗುತ್ತೆ. ಒಂದು ಬೆಟ್ಟ, ಅಲ್ಲಿರುವ ಕಡಿದಾದ ದಾರಿ, ಕತ್ತಲಲ್ಲಿ ನಡೆದು ಹೋಗುವ ಅಪರಿಚಿತ. ಅವನ ಕೈಲ್ಲೊಂದು ಕಬ್ಬಿಣದ ರಾಡು, ಮುಖವಾಡ ಧರಿಸಿದ ಅಪರಿಚಿತನ ರಗಡ್ ಲುಕ್ಕು… ಆಗಾಗ ಬಂಡೆ ಹೊಡೆಯುವ ರಾಡಿನಲ್ಲಿ, ವ್ಯಕ್ತಿಯೊಬ್ಬನ ಹೃದಯಕ್ಕೆ ಚುಚ್ಚುತ್ತಾನೆ….” ಆ ಅಪರಿಚಿತ ಯಾರು, ಯಾರನ್ನು ಕೊಲೆಗೈದ, ಬಂಡೆ ಹೊಡೆಯೋ ಕಾಯಕ ಮಾಡುವ ಆ ವ್ಯಕ್ತಿಗೂ, ಕೊಲೆಯಾದ ವ್ಯಕ್ತಿಗೂ ಇರುವ ಸಂಬಂಧವೇನು ಇತ್ಯಾದಿ ವಿಷಯಗಳು ಇಲ್ಲಿ ಒಂದಷ್ಟು ಸಸ್ಪೆನ್ಸ್ ಎನಿಸುತ್ತದೆ. ತುಂಬಾನೇ ಕ್ರಿಯೇಟಿವ್ ಎನಿಸುವ ಈ ಟೀಸರ್‌ಗೆ ಅಷ್ಟೇ ಎಫೆಕ್ಟ್ ಎನಿಸುವ ಹಿನ್ನೆಲೆ ಸಂಗೀತ ಕೂಡ ಪೂರಕವೆನಿಸಿದೆ. ಒಟ್ಟಾರೆ, ಟೀಸರ್ ಹೊಸದೊಂದು ನಿರೀಕ್ಷೆ ಮೂಡಿಸಿರುವುದಂತೂ ಸುಳ್ಳಲ್ಲ. ಅಂಥದ್ದೊಂದು ನಿರೀಕ್ಷೆಗೆ ಝೇಂಕಾರ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ “ಸಿಕ್ಸ್” ಟ್ರೇಲರ್ ನೋಡಬೇಕು.
ಕನ್ನಡದಲ್ಲಿ ಹಲವು ಹಿಟ್ ಸಾಂಗ್ ಕೊಟ್ಟಿರುವ ಅಭಿಮನ್‌ರಾಯ್ ಅವರ ಮೊದಲ ನಿರ್ದೇಶನದ ಚಿತ್ರವಿದು. ಈಗಾಗಲೇ ಫಸ್ಟ್ ಲುಕ್‌ನಲ್ಲೇ “ಸಿಕ್ಸ್” ಗಮನಸೆಳೆದಿತ್ತು. ಈ ಟೀಸರ್ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ, ಇದು ಶ್ರೇಯ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನಲ್ಲಿ ತಯಾರಾಗಿದೆ. ನಳಿನಿ ಗೌಡ ಹಾಗೂ ರವಿಕುಮಾರ್, ಸೋಮಶೇಖರ್ ರಾಜವಂಶಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮನ್ ರಾಯ್ ಅವರ ಈ “ಸಿಕ್ಸ್” ಚಿತ್ರದಲ್ಲಿ ಸಂದೇಶವಿದೆ. ಲವ್‌ಸ್ಟೋರಿ, ಕಾಮಿಡಿಯ ಜೊತೆಗೆ ಥ್ರಿಲ್ಲರ್ ಅಂಶಗಳೂ ಇಲ್ಲಿ ಹೈಲೈಟ್. ಅಭಿಮನ್ ಬರೀ ಕೀ ಬೋರ್ಡ್ ಮೇಲೆ ಕೈಯಾಡಿಸುವುದಷ್ಟೇ ಅಲ್ಲ, ಒಳ್ಳೆಯ ಗೀತರಚನೆಕಾರರೂ ಹೌದು. ಅವರೇ ತಮ್ಮ ಚೊಚ್ಚಲ ಚಿತ್ರ “ಸಿಕ್ಸ್”ಗೆ ಕಥೆ ಹೆಣೆದು, ಚಿತ್ರಕಥೆ ಬರೆದು, ಮಾತುಗಳನ್ನೂ ಪೋಣಿಸಿ ನಿರ್ದೇಶಿಸಿದ್ದಾರೆ.
ಒಂದು ಸಣ್ಣ ತಪ್ಪಿನಿಂದ ದೊಡ್ಡ ತಪ್ಪುಗಳು ಹೇಗಾಗುತ್ತವೆ. ದೊಡ್ಡ ಸಮಸ್ಯೆಯನ್ನೂ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರವಿದು. ನೈಜತೆಗೆ ಹತ್ತಿರವಾಗಿರುವ ಚಿತ್ರವಿದು ಎನ್ನುವ ಚಿತ್ರತಂಡ, ಇಲ್ಲಿ ಯಾವ ಕಲಾವಿದರಿಗೂ ಮೇಕಪ್ ಮಾಡಿಸಿಲ್ಲ ಎಂಬುದು ವಿಶೇಷ. ಬಹುತೇಕ ಬೆಂಗಳೂರು, ಕೋಲಾರ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿರಲಿವೆ. ಸದ್ಯಕ್ಕೆ ಈಗ ಝೇಂಕಾರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ “ಸಿಕ್ಸ್ʼ ಟೀಸರ್ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ “ಅಮೃತಾಂಜನ್” ಕಿರುಚಿತ್ರದ ನಾಯಕಿ ಪಾಯಲ್ ಚೆಂಗಪ್ಪ ಈ ಚಿತ್ರದ ನಾಯಕಿ. ಅವರೊಂದಿಗೆ ರವಿಚಂದ್ರ, ಪ್ರಣವ್‌ರಾಯ್, ಪೂರ್ವ ಯೋಗಾನಂದ್ ಸೇರಿದಂತೆ ಹಲವು ಕಲಾವಿದರು ಇರಲಿದ್ದಾರೆ. ಈ ಸಿದ್ಧಾರ್ಥ್ ಅವರು ಕ್ಯಾಮೆರಾ ಹಿಡಿದಿದ್ದಾರೆ.
ಒಳ್ಳೇ ಸಿನ್ಮಾ ಕೊಡುವ ಉದ್ದೇಶ
ಇನ್ನು, ಈ ಚಿತ್ರದ ಬಗ್ಗೆ ನಿರ್ಮಾಪಕಿ ನಳಿನಿ ಗೌಡ ಹೇಳುವುದಿಷ್ಟು, “ಇದು ನನ್ನ ಮೊದಲ ನಿರ್ಮಾಣದ ಸಿನಿಮಾ. ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಇತ್ತು. ಅದಕ್ಕಾಗಿ ಹೊಸತನ ಇರುವಂತಹ ಕಥೆ ಹುಡುಕಾಟ ನಡೆಸುತ್ತಿದ್ದೆ. ಅಭಿಮನ್ ರಾಯ್ ಅವರ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಿದ್ದೆ. ಹಾಗೆ, ಒಮ್ಮೆ ಭೇಟಿಯಾಗಿ, ನಿರ್ಮಾಣ ಮಾಡುವ ಕುರಿತು ಹೇಳಿಕೊಂಡಿದ್ದೆ. ಆಗ ಅವರು “ಸಿಕ್ಸ್” ಚಿತ್ರದ ಒನ್‌ಲೈನ್ ಸ್ಟೋರಿ ಹೇಳಿದರು. ನನಗೂ ಅದು ಇಷ್ಟವಾಯ್ತು. ಸಿನಿಮಾ ಶುರುವಾಯ್ತು. ನಾನು ಮೂಲತಃ ಬೆಂಗಳೂರಿನವಳು. ರೈತ ಮತ್ತು ಕಾರ್ಮಿಕರ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯಕ್ಕೆ ಚಿತ್ರದ ಟೀಸರ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದೇವೆ. ಕನ್ನಡಕ್ಕೊಂದು ಹೊಸತನದ ಸಿನಿಮಾ ಕೊಡುವ ಉದ್ದೇಶ ನನ್ನದುʼ ಎಂಬುದು ನಳಿನಿ ಗೌಡ ಅವರ ಮಾತು.
ಚಾಲೆಂಜಿಂಗ್ ಪಾತ್ರ
ಈ ಚಿತ್ರಕ್ಕೆ ಪಾಯಲ್ ಚೆಂಗಪ್ಪ ನಾಯಕಿ. “ಅಮೃತಾಂಜನ್” ಎಂಬ ಕಿರುಚಿತ್ರದ ಮೂಲಕ ಸುದ್ದಿಯಾದವರು. ಇವರಿಗೆ ಯಾವ ನಟನೆಯ ಅನುಭವ ಇಲ್ಲ. “ಅಮೃತಾಂಜನ್” ಮೂಲಕ ತಾನೊಬ್ಬ ನಟಿ ಅನ್ನುವುದನ್ನು ಜನರು ಗುರುತಿಸುತ್ತಿದ್ದಾರೆ. ನನಗೂ ಧೈರ್ಯ ಬಂದಿದೆ. “ಅಮೃತಾಂಜನ್” ನಂತರ ಸಿಕ್ಕ ಮೊದಲ ಚಿತ್ರವೇ “ಸಿಕ್ಸ್” ಅಭಿಮನ್ ರಾಯ್ ಸರ್ ಸ್ಟೇಟ್ ಅವಾರ್ಡ್ ವಿನ್ನರ್ ಆಗಿದ್ದರೂ, ಅವರು ತುಂಬಾನೇ ಸಿಂಪಲ್. ಅವರನ್ನು ಭೇಟಿ ಮಾಡಿದಾಗ ಅವರು ಕಥೆ ಹೇಳಿದ ರೀತಿ, ನನ್ನ ಪಾತ್ರ ಕಟ್ಟಿಕೊಟ್ಟಿರುವ ರೀತಿ ತುಂಬಾ ಚೆನ್ನಾಗಿತ್ತು. ಅದೊಂದು ಹೊಸ ರೀತಿಯ ಪಾತ್ರ. ಚಾಲೆಂಜಿಂಗ್ ಎನಿಸಿದೆ. ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನ್ನದು ಒಬ್ಬ ಟೀ ಟೇಸ್ಟರ್ ಪಾತ್ರ. ಹಾಗಂತ ಕಡಿಮೆ ಜನರಿಗೆ ಗೊತ್ತಿರುತ್ತೆ. ಅಂಥದ್ದೊಂದು ಹೊಸಬಗೆಯ ಪಾತ್ರ ಹೆಣೆದು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಹಾಗೆ ನೋಡಿದರೆ, ಈ ಪಾತ್ರಕ್ಕೆ ಸಾಕಷ್ಟು ನಾಯಕಿಯರ ಹುಡುಕಾಟ ನಡೆಸಿದ್ದಾರೆ ಎಂಬುದು ಗೊತ್ತಾಯ್ತು. ನನಗೆ ಆ ಅವಕಾಶ ಸಿಕ್ಕಿದೆ. ಸಾಧ್ಯವಾದಷ್ಟು ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂಬ ವಿಶ್ವಾಸವಿದೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಹೆಮ್ಮೆ ನನಗಿದೆ” ಎಂಬುದು ಪಾಯಲ್ ಚೆಂಗಪ್ಪ ಅವರ ಮಾತು.
ವಿಲನ್ ಅಂದರೆ ಸ್ಪೆಷಲ್!
ಈ “ಸಿಕ್ಸ್”ನ ಮತ್ತೊಂದು ಕೇಂದ್ರ ಬಿಂದು ಅಂದರೆ, ಅದು ರವಿಚಂದ್ರ. ಯಾರು ಈ ರವಿಚಂದ್ರ ಅಂದರೆ, ಇಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲ. ಆದರೆ, “ಸಿಕ್ಸ್” ಸಿನಿಮಾ ರಿಲೀಸ್ ನಂತರ ಖಂಡಿತವಾಗಿಯೂ ಈ ರವಿಚಂದ್ರ ಒಂದಷ್ಟು ಮಂದಿಗೆ ಗೊತ್ತಾಗುತ್ತಾರೆ. ಅದಕ್ಕೆ ಕಾರಣ, “ಸಿಕ್ಸ್” ಚಿತ್ರದಲ್ಲಿರುವ ಇವರ ಪಾತ್ರ. ಹೌದು, ತಮ್ಮ “ಸಿಕ್ಸ್” ಸಿನಿಮಾ ಕುರಿತು ಹೇಳುವ ರವಿಚಂದ್ರ, “ಇದು ನನ್ನ ಮೂರನೇ ಹೆಜ್ಜೆ. ಇದಕ್ಕೂ ಮೊದಲು ನಾನು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆ. ಕಿರುತೆರೆ ಬಳಿಕ ಒಂದು ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿತು. ಅದಾದ ಬಳಿಕ ನಾನೀಗ “ಸಿಕ್ಸ್” ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ವಿಲನ್ ಪಾತ್ರ ಏನೆಲ್ಲಾ ಮಾಡುತ್ತೆ ಅನ್ನೋದೇ ಸಸ್ಪೆನ್ಸ್. ನನಗೂ ಈ ಚಿತ್ರದ ಪಾತ್ರ ಚಾಲೆಂಜಿಂಗ್ ಎನಿಸಿದೆ. ಸದಾ ಕ್ಲೀನ್ ಶೇವ್ ಮಾಡ್ಕೊಂಡ್ ಇರುತ್ತಿದ್ದೆ. ನಿರ್ದೇಶಕರು ನೋಡಿ, ದಾಡಿ, ಕೂದಲು ಬಿಡಿ ಅಂತ ಹೇಳಿ ನಂತರ, ಫೋಟೋ ಶೂಟ್ ಮಾಡಿಸಿ, ಒಂದು ಲುಕ್ ಬಂದ ನಂತರ, ಸಿನಿಮಾದಲ್ಲಿ ಮಾಡಿಸಿದ್ದಾರೆ. ಪಾತ್ರಕ್ಕಾಗಿಯೇ ನನಗೆ ಮಾಡಿಸಿದ್ದಾರೆ.ʼ ಎನ್ನುತ್ತಾರೆ ರವಿಚಂದ್ರ.
ಸಿನಿಮಾ ಅಂದರೆ, ಅಲ್ಲೊಂದಷ್ಟು ಗಾಸಿಪ್‌ಗಳು ಸಹಜ. ಅಂತೆ ಕಂತೆ ವಿಷಯಗಳೂ ಸಾಮಾನ್ಯ. ಸ್ಟಾರ್ ನಟರ ಒಂದು ಹೊಸ ಚಿತ್ರ ಅನೌನ್ಸ್ ಆಗಿಬಿಟ್ಟರೆ ಮುಗೀತು, ಆ ಚಿತ್ರದ ಬಗ್ಗೆ ಒಂದಷ್ಟು ಹೊಸ ಬಗೆಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಅಸಲಿಗೆ ಅಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನೋ ವಿಷಯ ಆ ಕಥೆಗಾರನಿಗೆ ಗೊತ್ತಿರಲ್ಲ. ಆದರೂ, ಹೊರಗಡೆಯಿಂದ ಹಾಗಂತೆ, ಹೀಗಂತೆ ಎಂಬ ಸುದ್ದಿಗಳು ಹರಿದಾಡುತ್ತವೆ.
ಹಾಗಂತ, ಈ ವಿಷಯ ಕನ್ನಡದ ಸ್ಟಾರ್ ಸಿನಿಮಾಗಳಿಗೆ ಹೊಸದಲ್ಲ ಬಿಡಿ. ಇಲ್ಲೀಗ ಹೇಳಹೊರಟಿರುವ ವಿಷಯವಿಷ್ಟೇ, ಇತ್ತೀಚೆಗೆ ಧ್ರುವಸರ್ಜಾ ಅಭಿನಯದ “ದುಬಾರಿ” ಸಿನಿಮಾ ಪೂಜೆ ಕಂಡಿದ್ದು ಎಲ್ಲರಿಗೂ ಗೊತ್ತಿದೆ. “ಪೊಗರು” ಸಿನಿಮಾ ಬಳಿಕ ನಂದಕಿಶೋರ್ ಅವರು ಪುನಃ ಧ್ರುವ ಸರ್ಜಾ ಅವರ ಜೊತೆಗೂಡಿ ಈ ಚಿತ್ರ ಶುರುಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಉದಯ್ ಮೆಹ್ತಾ ನಿರ್ಮಾಪಕರು. ಈ ಚಿತ್ರವನ್ನು ಅನೌನ್ಸ್ ಮಾಡಿದಾಗ ಯಾರು ನಾಯಕಿ ಅನ್ನೋದು ಗೊತ್ತಿರಲಿಲ್ಲ. ಈಗ ನಿರ್ದೇಶಕ ನಂದಕಿಶೋರ್ ಶ್ರೀಲೀಲ ಚಿತ್ರದ ನಾಯಕಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಶ್ರೀಲೀಲಾ ಹೈಲೈಟ್. ಅವರೊಂದಿಗೆ ಇನ್ನೂ ನಾಲ್ವರು ಜೊತೆಗೂಡುತ್ತಿದ್ದಾರೆ. “ರನ್ನ” ಸಿನಿಮಾದಲ್ಲೂ ರಚಿತಾರಾಮ್ ಲೀಡ್ ಪಾತ್ರ ಮಾಡಿದ್ದರೂ, ಜೊತೆಯಲ್ಲಿ ಹರಿಪ್ರಿಯಾ ಇದ್ದಂತೆ, ಇಲ್ಲೂ ಹಾಗೆಯೇ ಒಂದಷ್ಟು ನಾಯಕಿಯರು ಇರಲಿದ್ದಾರೆ. ಇದೊಂದು ಪಕ್ಕಾ “ಫ್ಯಾಮಿಲಿ” ಸಬ್ಜೆಕ್ಟ್ ಎಂಬುದು ನಂದಕಿಶೋರ್ ಅವರ ಮಾತು.
ಇನ್ನು, ಅವರ “ಪೊಗರು” ಸಿನಿಮಾ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದ್ದು, ಈಗಾಗಲೇ ಎಲ್ಲೆಡೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. “ಪೊಗರು” ಜನವರಿಯಲ್ಲಿ ಹೊರಬಂದರೆ, ಜನವರಿಯಲ್ಲೇ “ದುಬಾರಿ” ಚಿತ್ರಕ್ಕೂ ಚಾಲನೆ ಸಿಗಲಿದೆ. ಶ್ರೀಲೀಲಾ “ಕಿಸ್” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ ಶ್ರೀಮುರಳಿ ಜೊತೆ “ಭರಾಟೆ”ಯಲ್ಲೂ ಕಾಣಿಸಿಕೊಂಡರು. ಈಗ “ದುಬಾರಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅದೇನೆ ಇರಲಿ, ಕನ್ನಡದ ಹುಡುಗಿಯನ್ನೇ ನಿರ್ದೇಶಕರು ತಮ್ಮ “ದುಬಾರಿ” ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಪರಭಾಷೆ ನಾಯಕಿ ನಟಿಯಂತೆ ಎಂಬ ಸುದ್ದಿ ಹರಿದಾಡಿತ್ತು. ಅದು ಹಲವು ಪ್ರಶ್ನೆಗಳಿಗೂ ಕಾರಣವಾಗಿತ್ತು. ಈಗ ನಂದಕಿಶೋರ್, ಅದಕ್ಕೆಲ್ಲಾ ತೆರೆ ಎಳೆದಿದ್ದಾರೆ. ಇನ್ನು, ಈ ಚಿತ್ರದಲ್ಲಿ ಶ್ರೀಲೀಲ ಅವರೊಂದಿಗೆ ಇನ್ನೂ ಬೆರಳೆಣಿಕೆಯಷ್ಟು ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿಯನ್ನೂ ಹೊರಹಾಕಿರುವ ನಂದಕಿಶೋರ್, ಯಾರೆಲ್ಲಾ ಇರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ. ಇನ್ನು, ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದೆ.
ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಅಂದಾಕ್ಷಣ ನೆನಪಾಗೋದೇ ಒಂದೇ ಉಸಿರಲ್ಲಿ ಪಟಪಟ ಮಾತಾಡುವ “ಪಂಚರಂಗಿ”ಯ ಮಾತಿನ ಮಲ್ಲಿಯ ಪಾತ್ರ. ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿರುವ ನಿಧಿ ಸುಬ್ಬಯ್ಯ, ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದೂ ಗೊತ್ತೇ ಇದೆ. ಅಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದ್ದೊಂದು ಠಸ್ಸೇ ಹೊತ್ತಿದ ನಿಧಿ ಸುಬ್ಬಯ್ಯ ಬಹಳ ವರ್ಷಗಳ ಬಳಿಕ ಪುನಃ ಕನ್ನಡಕ್ಕೆ ವಾಪಾಸ್ಸಾಗಿದ್ದು ಗೊತ್ತೇ ಇದೆ. ಈಗ ಮತ್ತೊಂದು ವಿಭಿನ್ನ ಕಥಾಹಂದರ ಇರುವ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರ ನಾಯಕಿ ಪ್ರಧಾನವಾದದ್ದು. ಈ ಸಿನಿಮಾ ಮೂಲಕ ಪವನ್ ಮತ್ತು ಪ್ರಸಾದ್ ನಿರ್ದೇಶನದ ಪಟ್ ಅಲಂಕರಿಸುತ್ತಿದ್ದಾರೆ. ಇನ್ನು, ಕಿಶೋರ್ ನರಸಿಂಹಯ್ಯ, ಚೇತನ್ ಕೃಷ್ಣ ಮತ್ತು ಬಿ.ಜಿ. ಅರುಣ್ ಅವರು ಜೊತೆಗೂಡಿ ಈ ಚಿತ್ರವನನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು “ಮಮ್ಮಿ” ಖ್ಯಾತಿಯ ಲೋಹಿತ್ ಎಚ್. ಅರ್ಪಿಸುತ್ತಿದ್ದಾರೆ. ಅವರ ಫ್ರೈಡೇ ಫಿಲ್ಮ್ಸ್ ಸಹಯೋಗದೊಂದಿಗೆ ಸಿಲ್ವರ್ ಟ್ರೈನ್ ಇಂಟರ್ನ್ಯಾಷನಲ್ ಮತ್ತು ಸಿ.ಕೆ.ಸಿನಿ ಕ್ರಿಯೇಷನ್ ಜೊತೆಯಲ್ಲಿ ತಯಾರಾಗುತ್ತಿರುವುದು ವಿಶೇಷ.
ಈ ನಾಯಕಿ ಪ್ರಧಾನ ಚಿತ್ರಕ್ಕಿನ್ನೂ ಯಾವುದೇ ನಾಮಕರಣ ಮಾಡಿಲ್ಲ. ತಮ್ಮ ಹೊಸ ಚಿತ್ರದ ಬಗ್ಗೆ ನಾಯಕಿ ನಿಧಿ ಸುಬ್ಬಯ್ಯ ಸಾಕಷ್ಟು ಥ್ರಿಲ್ ಆಗಿದ್ದಾರೆ. ಆ ಬಗ್ಗೆ ನಿಧಿ ಸುಬ್ಬಯ್ಯ ಹೇಳುವುದಿಷ್ಟು. “ಸಿನಿಮಾದ ಕಥೆ ಕೇಳಿದಾಕ್ಷಣ, ನಾನು ನಿಜಕ್ಕೂ ಥ್ರಿಲ್ ಆದೆ. ಅದರಲ್ಲೂ ನಾನು ಇದೇ ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದೊಂದು ಹೊಸ ಕತೆ, ಪಾತ್ರ ಇರುವಂತಹ ಸಿನಿಮಾ ಆಗಲಿದೆ. ಅಷ್ಟೇ ಅಲ್ಲ, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಚಿತ್ರದ ಕಥೆ ಇಷ್ಟವಾಗುತ್ತೆ ಎಂಬ ನಂಬಿಕೆ ನನಗಿದೆ. ನಾನು ಈವರೆಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಿದ್ದೇನೆ. ಇದು ನನಗೆ ಹೊಸ ರೀತಿಯ ಪಾತ್ರ ಕೊಡುತ್ತಿರುವ ಚಿತ್ರ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುವ ಖುಷಿ ಇದೆ” ಎಂಬುದು ನಿಧಿ ಮಾತು.
ಸದ್ಯಕ್ಕೆ ಈ ಚಿತ್ರಕ್ಕೆ ತಾಂತ್ರಿಕ ವರ್ಗ, ಕಲಾವಿದರು, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ಯಾರೆಲ್ಲಾ ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹೊಸ ವರ್ಷಕ್ಕೆ ಹೊಸತನದೊಂದಿಗೆ ಈ ಚಿತ್ರ ಶುರುವಾಗಲಿದೆ ಎಂಬುದು ಲೋಹಿತ್ ಅವರ ಮಾತು. ಲೋಹಿತ್ ಅವರು ಈ ಹಿಂದೆ “ಮಮ್ಮಿ” ಮೂಲಕ ಜೋರು ಸುದ್ದಿಯಾಗಿದ್ದರು.
ಆ ಬಳಿಕ ಅವರು “ದೇವಕಿ” ಚಿತ್ರ ಮಾಡಿಯೂ ಗೆಲುವು ಕಂಡರು. ಆ ಬಳಿಕ ಅವರು ಸಮಾನ ಮನಸ್ಕರ ಜೊತೆ ಸೇರಿ ತಮ್ಮದ್ದೊಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ “ಲೈಫ್ ಈಸ್ ಬ್ಯೂಟಿಫುಲ್” ಚಿತ್ರ ಶುರು ಮಾಡಿ, ಅದನ್ನೂ ಮುಗಿಸಿದ್ದಾರೆ. ಆ ಚಿತ್ರ ಈಗ ಡಬ್ಬಿಂಗ್ ಹಂತದಲ್ಲಿದೆ. ಈಗ ನಾಯಕಿ ಪ್ರಧಾನ ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಈ ಹೊಸ ಪ್ರಯತ್ನಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.
ಕನ್ನಡ ಚಿತ್ರರಂಗ ಗರಿಗೆದರಿರುವುದಂತೂ ಹೌದು. ದಿನ ಕಳೆದಂತೆ ಹೊಸಬರ ಚಿತ್ರಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ. ಆ ಸಾಲಿಗೆ “ಆ ಒಂದು ಕನಸು” ಚಿತ್ರವೂ ಸೇರಿದೆ. ಹೌದು, ರಂಗು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಆ ಒಂದು ಕನಸು” ಚಿತ್ರಕ್ಕೆ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ರಾಜಕುಮಾರ್ ಕ್ಲಾಪ್ ಮಾಡಿ, ಬಾಲಕೃಷ್ಣ ಎಚ್. ಎಂ. ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಮೂಲಕ ವಿಷ್ಣು ನಾಚನೇಕರ್ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ವಿಷ್ಣು ನಾಚನೇಕರ್, ಈಗ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ತಮ್ಮ ಸಿನಿಮಾ ಕುರಿತು ಹೇಳಿಕೊಳ್ಳುವ ಅವರು, ” ಈವರೆಗೆ ನಾನು ಸುಮಾರು 22 ಚಿತ್ರಗಳಿಗೆ ಅಸೋಸಿಯೇಟ್ ಕೆಲಸ ಮಾಡಿದ್ದೇನೆ. ಸಾಕಷ್ಟು ಧಾರಾವಾಹಿಗಳಿಗೆ ನಿರ್ದೇಶಕನಾಗಿ, ಸಂಚಿಕೆ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನ ಮಾಡುವ ಅವಕಾಶ “ಆ ಒಂದು ಕನಸು” ಚಿತ್ರದ ಮೂಲಕ ಸಿಕ್ಕಿದೆ ಎಂದು ಹೇಳಿಕೊಂಡರು ನಿರ್ದೇಶಕ ವಿಷ್ಣು ನಾಚನಕೇರ್.
ಇನ್ನು, ಈ ಚಿತ್ರದ ಹೀರೋ ವಿಶ್ವಾಸ್. ನಾವಿಬ್ಬರೂ ಬಹಳ ದಿನಗಳ ಗೆಳೆಯರು. ಒಟ್ಟಿಗೆ ಒಂದು ಸಿನಿಮಾ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದೆವು. ಆದರೆ, ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಆ ಕನಸು ನಮ್ಮ “ಆ ಒಂದು ಕನಸು” ಈಡೇರುತ್ತಿದೆ. ನಿರ್ಮಾಪಕ ದಿಲೀಪ್ ಅವರ ಉತ್ಸಾಹ ಮತ್ತು ಪ್ರೋತ್ಸಾಹದಿಂದ ಈ ಚಿತ್ರಕ್ಕೆ ನಾನು ನಿರ್ದೇಶಕನಾಗುತ್ತಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರ. ಕಮರ್ಷಿಯಲ್ ಅಂಶಗಳೊಂದಿಗೆ ಸಿನಿಮಾ ಸಾಗಲಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನುಳಿದಂತೆ ಸಾಗರ ಹಾಗು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ವಿವರ ಕೊಟ್ಟರು ನಿರ್ದೇಶಕರು.
ಹೀರೋ ವಿಶ್ವಾಸ್ ಅವರಿಗೆ ಈ ಚಿತ್ರದ ಮೇಲೆ ತುಂಬಾನೇ ನಂಬಿಕೆ ಇದೆಯಂತೆ. ಒಂದಷ್ಟು ಕಾರಣಗಳಿಂದಾಗಿ ನಾನು ಕಳೆದ ಐದಾರು ವರ್ಷಗಳಿಂದ ಸಿನಿಮಾ, ಧಾರಾವಾಹಿಗಳಿಂದ ದೂರವಿದ್ದೆ. ಇದೀಗ ಪುನಃ ಎಂಟ್ರಿಯಾಗುತ್ತಿದ್ದೇನೆ. ತಮಿಳಿನ ಉದಯಂ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಥೆಯೇ ಈ ಚಿತ್ರದಲ್ಲಿ ಹೀರೋ. ಇದರಲ್ಲಿ ತುಂಬ ಸಾಫ್ಟ್ ಪಾತ್ರ ನನ್ನದು. ಹಲ್ಲಿ ಕಂಡರೂ ಹೆದರುವಂಥ ಪಾತ್ರವದು ಎಂದು ಹೇಳಿಕೊಂಡರು ವಿಶ್ವಾಸ್.
ನಿರ್ಮಾಪಕ ದಿಲೀಪ್ ಅವರು ಒಬ್ಬ ಉದ್ಯಮಿ. ಅವರಿಗೆ ಸಿನಿಮಾ ಮೇಲೆ ಪ್ರೀತಿ ಇತ್ತು. ಆಸಕ್ತಿಯೂ ಇದ್ದುದರಿಂದ ಒಳ್ಳೆಯ ಕಥೆಯೊಂದಿಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಒಳ್ಳೆಯ ತಂಡ ಸಿಕ್ಕ ಖುಷಿ ಅವರದು.
ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. “ಕನಸು ಕಾಣುವುದು ಮತ್ತು ಕಂಡ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಈ ಸಿನಿಮಾ ಸಾಗುತ್ತದೆ. ಇಲ್ಲಿ ಕನಸು ಕಾಣುವವರಾರು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ” ಎಂದರು ಸಾಯಿಕೃಷ್ಣ. ಧನ್ಯಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅಮಿತ್ ಹಾಸ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಮಾ. ಚಿರಾಯು ಚಕ್ರವರ್ತಿ, ಅಮಿತ್, ಗಿರೀಶ್ ಶಿವಣ್ಣ, ರಮೇಶ್ ಭಟ್, ಗಿರಿಜಾ ಲೋಕೇಶ್ಮ ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾ ರಾವ್ ಮತ್ತು ಜಯಶ್ರೀ ನಟಿಸುತ್ತಿದ್ದಾರೆ. ಅಭಿಷೇಕ್ ಜಿ. ರಾಯ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣವಿದೆ. ಸುಜನ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಹೈಟ್ ಮಂಜು ಮತ್ತು ಸ್ಟಾರ್ ಗಿರಿ ನೃತ್ಯ ನಿರ್ದೇಶನವಿದೆ.
ಕನ್ನಡ ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ಒಂದಷ್ಟು ಸ್ಟಾರ್ ನಟರು ಆಕಸ್ಮಿಕ ಭೇಟಿ ನೀಡಿ, ಆ ಚಿತ್ರತಂಡಕ್ಕೆ ಅಚ್ಚರಿ ನೀಡುವುದು ಹೊಸದೇನಲ್ಲ. ದರ್ಶನ್, ಸುದೀಪ್, ಪುನೀತ್ ಸೇರಿದಂತೆ ಒಂದಷ್ಟು ನಟರು ತಮ್ಮ ಪ್ರೀತಿಗೆ ಪಾತ್ರರಾದ ಸಿನಿಮಾ ನಿರ್ಮಾಪಕರು, ನಿರ್ದೇಶಕರ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದುಂಟು. ಈಗ ನಟ ಜಗ್ಗೇಶ್ ಕೂಡ ಹೊಸಬರ ಚಿತ್ರದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಭೇಟಿ ನೀಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಹೌದು, ಜಗ್ಗೇಶ್ ಹಾಗೆ ಭೇಟಿ ನೀಡಿದ್ದು, “ಪದವಿಪೂರ್ವ” ಚಿತ್ರದ ಸೆಟ್‌ಗೆ. ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಶೂಟಿಂಗ್ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ ಜಗ್ಗೇಶ್ ಅವರು, ಕೆಲ ಕಾಲ ಅವರೊಂದಿಗೆ ಚರ್ಚಿಸಿ, ಅಲ್ಲಿಯೇ ಇದ್ದು, ಕೆಲ ಸೀನ್‌ಗಳನ್ನೂ ವೀಕ್ಷಿಸಿ, ಸಂತಸಪಟ್ಟಿದ್ದಾರೆ.
ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹಾಗು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಅವರ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಗ್ಗೇಶ್ ಅವರು, ಸೆಟ್‌ನಲ್ಲಿದ್ದ ಕೆಲವು ಕಲಾವಿದರೊಂದಿಗೂ ಮಾತನಾಡಿ, ಅವರಿಗೆ ಸಲಹೆಗಳನ್ನೂ ನೀಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಜಗ್ಗೇಶ್ ಅವರ ಈ ಭೇಟಿ ಖುಷಿ ಕೊಟ್ಟಿದ್ದಲ್ಲದೆ, ಮತ್ತಷ್ಟು ಉತ್ಸಾಹ ತುಂಬಿದೆ. ಕಳೆದ ವಾರವಷ್ಟೇ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿದ. ಚಿತ್ರಕ್ಕೆ ಪೃಥ್ವಿ ಶಾಮನೂರ್ ನಾಯಕಿ. ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸಾ.ರಾ.ಗೋವಿಂದು, ಬಾ.ಮ.ಹರೀಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ
ಕನ್ನಡ ಚಿತ್ರರಂಗಕ್ಕೆ ಸುಮಾರು ಎಂಟು ದಶಕಕ್ಕೂ ಹೆಚ್ಚು ಕಾಲ ಇತಿಹಾಸವಿದೆ. ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಐದು ದಶಕಕ್ಕೂ ಹೆಚ್ಚು ಕಾಲದ ಇತಿಹಾಸವಿದೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೃದಯವಿದ್ದಂತೆ. ಈ ಫಿಲ್ಮ್ ಚೇಂಬರ್ ಕನ್ನಡ ಚಿತ್ರರಂಗದ ಪ್ರಗತಿಗೆ ಬೆನ್ನೆಲುಬು. ಈವರೆಗೆ ಈ ಫಿಲ್ಮ್ ಚೇಂಬರ್‌ನಲ್ಲಿ ಸಾಕಷ್ಟು ಹಿರಿಯರು ಚುಕ್ಕಾಣಿ ಹಿಡಿದು, ಕನ್ನಡ ಚಿತ್ರರಂಗದ ಏಳಿಗೆಗೆ ದುಡಿದಿದ್ದಾರೆ. ಇನ್ನೂ ಕೆಲವರು ದುಡಿಯುತ್ತಿದ್ದಾರೆ. ಇಷ್ಟಕ್ಕೂ ಈ ಫಿಲ್ಮ್ ಚೇಂಬರ್ ಕುರಿತ ಸುದ್ದಿ ಯಾಕೆಂದರೆ, ಪ್ರತಿ ವರ್ಷವೂ ಫಿಲ್ಮ್ ಚೇಂಬರ್ ಚುನಾವಣೆ ನಡೆಯುತ್ತದೆ. ಕೆಲವೊಮ್ಮೆ ಈ ಫಿಲ್ಮ್ ಚೇಂಬರ್‌ನಲ್ಲಿ ಅವಿರೋಧ ಆಯ್ಕೆಯಾಗಿರುವುದೂ ಉಂಟು. ಬಹುತೇಕ ಚುನಾವಣೆ ಮೂಲಕ ಚುಕ್ಕಾಣಿ ಹಿಡಿದವರೇ ಹೆಚ್ಚು. ಈಗ ಸದ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ಅದಕ್ಕೀಗ ಕ್ಷಣಗಣನೆ ಕೂಡ ಶುರುವಾಗಿದೆ. ಈಗಾಗಲೇ ಫಿಲ್ಮ್ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಚೇಂಬರ್‌ನ ಮಾಜಿ ಅಧ್ಯಕ್ಷರಾದ ಥಾಮಸ್ ಡಿಸೋಜ ಅವರನ್ನು ಚುನಾವಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಥಾಮಸ್ ಡಿಸೋಜ ಅವರು, ಇಷ್ಟರಲ್ಲೇ ಸಭೆ ಕರೆದು, ಫಿಲ್ಮ್ ಚೇಂಬರ್‌ಗೆ ಯಾವಾಗ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ದಿನಾಂಕವನ್ನೂ ನಿಗದಿಗೊಳಿಸಲಿದ್ದಾರೆ.
ಇನ್ನು, ಈಗ ಹಾಲಿ ಜೈ ರಾಜ್ ಅವರು ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದಾರೆ. ಅವರ ಅವಧಿ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದರೆ, ಕೊರೊನೊ ಹಾವಳಿ ಇದ್ದುದರಿಂದ, ಸದ್ಯಕ್ಕೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದರು. ಈಗಷ್ಟೇ ಸಮಿತಿ ಸಭೆಯಲ್ಲಿ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ನಂತರದ ದಿನಗಳಲ್ಲಿ ದಿನಾಂಕ ನಿಗಧಿಗೊಳಿಸಿ, ಚುನಾವಣೆ ನಡೆಸುವ ತಯಾರಿ ನಡೆಯಬೇಕಿದೆ.
ಅಂದಹಾಗೆ, ಈ ಬಾರಿ ಅಧ್ಯಕ್ಷ ಸ್ಥಾನ ಬಯಸಿದವರ ಸಂಖ್ಯೆ ಬಹಳಷ್ಟು ಇದೆಯಾದರೂ, ಬಾ.ಮ.ಹರೀಶ್ ಅವರು ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ, ಮೂಲಗಳ ಪ್ರಕಾರ ಸಾ.ರಾ.ಗೋವಿಂದು ಅವರೂ ಕೂಡ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆಗಿಳಿಯಲಿದ್ದಾರೆ ಎನ್ನಲಾಗಿದೆ.
ಹಾಗೆ ನೋಡಿದರೆ, ಫಿಲ್ಮ್ ಚೇಂಬರ್‌ನಲ್ಲಿ ಸಾ.ರಾ.ಗೋವಿಂದು ಮತ್ತು ಬಾ.ಮ.ಹರೀಶ್ ಅವರು ಅಧಿಕಾರ ನಡೆಸಿದವರು. ಮೂರು ಬಾರಿ ಸಾ.ರಾ.ಗೋವಿಂದು ಅವರು ಫಿಲ್ಮ್ ಚೇಂಬರ್‌ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತೆಯೇ, ಈ ಬಾರಿಯೂ ಸ್ಥಾನಕ್ಕೆ ಸ್ಪರ್ಧೆಗಳಿಯಲಿದ್ದಾರೆ ಎನ್ನಲಾಗಿದೆ. ಇನ್ನು, ಬಾ.ಮ.ಹರೀಶ್ ಅವರು ಕೂಡ ಈ ಹಿಂದೆ ತಲ್ಲಂ ನಂಜುಂಡಶೆಟ್ಟಿ ಅವರ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. ಆ ನಂತರದ ದಿನಗಳಲ್ಲಿ ಥಾಮಸ್ ಡಿಸೋಜ ಅವರು ಅಧ್ಯಕ್ಷರಾದ ಸಂದರ್ಭದಲ್ಲೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಚಿನ್ನೇಗೌಡ ಅವರು ಅಧ್ಯಕ್ಷರಾಗಿದ್ದಾಗಲೂ ಬಾ.ಮ.ಹರೀಶ್ ಅವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ನಡೆಸಿದ್ದರಾದರೂ, ಸಾ.ರಾ.ಗೋವಿಂದು ಅವರ ವಿರುದ್ಧ ಕಡಿಮೆ ಅಂತರದಲ್ಲೇ ಅವರು ಸೋಲು ಕಂಡಿದ್ದರು. ಈ ಸಲ ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧೆಗಿಳಿಯುತ್ತಿರುವುದಾಗಿ ಹೇಳುತ್ತಾರೆ.
ಈಗಾಗಲೇ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರು ಮನರಂಜನೆ ಕ್ಷೇತ್ರಕ್ಕೂ ಎಂಟ್ರಿಯಾಗಿದ್ದು ಗೊತ್ತೇ ಇದೆ. ಬಹಳಷ್ಟು ಮಂದಿ ಸಾಧಕರು ಮನರಂಜನಾ ಕ್ಷೇತ್ರದಲ್ಲೀ ಯಶಸ್ಸು ಕಂಡಿದ್ದಾರೆ ಕೂಡ. ಈಗ ಡಾ.ಕಾಮಿನಿ ರಾವ್ ಕೂಡ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿಯಾಗುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆಯಾಗಿ, ಅಸಿಸಡ್ ರಿಪ್ರೊಡಕ್ಷನ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ.ಕಾಮಿನಿ ಎ.ರಾವ್ ಇದೀಗ ತಮ್ಮ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಈಗಾಗಲೇ ರಾಷ್ಟ್ರ. ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಅಪ್ಪಟ ಕನ್ನಡದ ಮಹಿಳೆ ಡಾ. ಕಾಮಿನಿ ಎ. ರಾವ್. ವೈದ್ಯಲೋಕದಲ್ಲಿ ಸಾಕಷ್ಟು ಸಾಧನೆ ಮಾಡುವುದರ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರೀಗ ಮನರಂಜನೆ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ಎಂಬುದು ಅಚ್ಚರಿಯಾದರೂ ಸತ್ಯ.
ಈ ಕುರಿತಂತೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ಹೇಳಿರುವ ಅವರು, ಅಧಿಕೃತವಾಗಿ ಈ ಸಂಸ್ಥೆ ತನ್ನ ಕಾರ್ಯಚಟುವಟಿಕೆ ಶುರುಮಾಡಲಿದೆ. ಮನರಂಜನಾ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಸೊಸೆ ಪೂಜಾ ಸಿದ್ಧಾರ್ಥ್ ರಾವ್ ಕೂಡ ಹೊಸ ಯೋಜನೆ ಹಾಕಿಕೊಂಡಿದ್ದರಿಂದಲೇ ನಾನು ಈ ಹೊಸ ಸಾಹಸಕ್ಕೆ ಸಿದ್ಧಳಾಗಿದ್ದೇನೆ. ಈ ಕೆಲಸಕ್ಕೆ ನನ್ನ ಪತಿ ಡಾ. ಎ.ಎಸ್. ಅರವಿಂದ್ ಅವರ ಸಹಕಾರವೂ ಇದೆ. ಸಿನಿಮಾ ಮೂಲಕ ಸಾಮಾನ್ಯರಿಗೂ ಉಪಯೋಗವಾಗುವ ಉದ್ದೇಶದಿಂದ ಹೊಸ ಪ್ರಯೋಗಗಳನ್ನು ಈ ಸಂಸ್ಥೆ ಮೂಲಕ ಮಾಡುವ ಛಲದಲ್ಲಿರುವುದಾಗಿ ಹೇಳುತ್ತಾರೆ ಅವರು.
ಮಾಸ್ಟರ್ ಕ್ಲಾಸ್
ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್ ಕೇವಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಪೂರ್ತಿದಾಯಕ ಅಂಶಗಳ ಜತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಇದರ ಜತೆಗೆ “ಪೂರ್ವಿರಾಗ”, “ಹರಟೆ” ಎಂಬ ಸ್ಫೂರ್ತಿದಾಯಕ ಕಾರ್ಯಕ್ರಮವನ್ನೂ ಆಯೋಜಿಸುತ್ತಿದ್ದು, ಒಂದಷ್ಟು ಗಾಯಕರು ಮತ್ತು ಸಂಗೀತಗಾರರನ್ನ ಆಯ್ಕೆ ಮಾಡಿ ಕಾರ್ಯಕ್ರಮವನ್ನೂ ನಡೆಸಲಿದ್ದಾರೆ. ಇಲ್ಲಿ ಹಾಸ್ಯದೊಂದಿಗೆ ಹಾಡು ಹರಟೆ ಹೈಲೈಟ್ ಆಗಿರಲಿದೆ. ಇನ್ನು, ನಾನು ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ ಇತರರಿಗೂ ಅನುಕೂಲ ಆಗಲಿ ಎಂಬ ಕಾರಣಕ್ಕೆ, ಆನ್ಲೈನ್ ತರಗತಿಗಳನ್ನೂ ಆಯೋಜಿಸುತ್ತಿದ್ದೇನೆ. ರಿಪ್ರೊಡಕ್ಟಿವ್ ಮೆಡಿಸಿನ್, ಆಬ್ಸ್ಟೆಟ್ರಿಕ್ಸ್ ಮತ್ತು ಗೆನೊಕೊಲಜಿ ಕುರಿತ ತರಗತಿಗಳನ್ನು ನಡೆಸಲಾಗುವುದು. ಇಲ್ಲಿ ಸಾಕಷ್ಟು ನುರಿತ ವೈದ್ಯರು ಈ ಬಗ್ಗೆ ಆನ್ಲೈನ್ನಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಹಾಗೇ ಕಲಿತ ಕೋರ್ಸ್ ಗೆ ಸರ್ಟಿಫೀಕೆಟ್ ಸಹ ನೀಡಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶದವರ ಜತೆಗೆ ವಿಶ್ವದಾದ್ಯಂತ ಎಲ್ಲೇ ಇದ್ದರೂ ಈ ಕೋರ್ಸ್ ಮಾಡಬಹುದು ಎಂಬುದು ಅವರ ಮಾತು.
ಪೂರ್ವಿ ಪ್ರೊಡಕ್ಷನ್ಸ್
ಇನ್ನು ಪೂರ್ವಿ ಪ್ರೊಡಕ್ಷನ್ಸ್ ಕುರಿತು ಮಾತನಾಡಿದ ಕಾಮಿನಿ ರಾವ್ ಅವರ ಸೊಸೆ, ಪೂಜಾ ಸಿದ್ಧಾರ್ಥ್ ರಾವ್, “ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ಸಿನಿಮಾಗಳನ್ನು ನಿರ್ಮಿಸುವುದು ಸಂಸ್ಥೆಯ ಗುರಿ. ಈ ಪೂರ್ವಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ತೆರೆಯುತ್ತಿರುವ ಮುಖ್ಯ ಉದ್ದೇಶ, ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹರಟೆ ರೀತಿಯ ಕಾರ್ಯಕ್ರಮಗಳನ್ನು ಮತ್ತು ಎಜುಕೇಷನಲ್ ಸಿನಿಮಾಗಳನ್ನು ನಿರ್ಮಾಣ ಮಾಡುವುದು. ಇಷ್ಟಕ್ಕೂ ಈ ಸಂಸ್ಥೆ ಶುರು ಮಾಡೋಕೆ ಕಾರಣ, ಕೊರೊನಾದಿಂದ ಆದಂತಹ ಅನುಭವ. ನಾನು ಮದುವೆಯಾಗಿ ಹತ್ತು ವರ್ಷಗಳಾದವು. ಇಷ್ಟು ದಿನದಲ್ಲಿ ನನ್ನ ಅತ್ತೆ ಸುಮ್ಮನೇ ಕುಳಿತಿದ್ದು ಯಾವತ್ತೂ ನೋಡಿಲ್ಲ. ಹೀಗಿರುವಾಗ ಕೊರೋನಾ ಕಾರಣಕ್ಕಾಗಿ ನಿರ್ಮಾಣಗೊಂಡ ಪರಿಸ್ಥಿತಿ ಎಂಥವರನ್ನೂ ಮನೆಯಲ್ಲಿ ಬಂಧಿಸಿತ್ತು. ಆನ್ ಲೈನ್, ಓಟಿಟಿಗಳನ್ನು ನೋಡಿ ಸಾಕಾಗಿತ್ತು. ಅದೊಂದು ದಿನ ʻಅಮ್ಮಾ ಸುಮ್ಮನೇ ಕೂತು ಬೇಸರವಾಗುತ್ತಿದೆʼ ಎಂದೆ. ಆ ದಿನ ಹತ್ತಾರು ನಿಮಿಷಗಳ ಕಾಲ ಅತ್ತೆ ಬದುಕಿನ ಬಗ್ಗೆ ಮಾತಾಡಿದರು. ಅವರ ಮಾತುಗಳು ತುಂಬಾ ಅಮೂಲ್ಯವೆನಿಸಿತು. ಅವರ ಈ ಹಿತ ನುಡಿಗಳು, ಮಾರ್ಗದರ್ಶನದ ಮಾತುಗಳು ನಮಗಷ್ಟೇ ದಕ್ಕಿದರೆ ಹೇಗೆ? ಜಗತ್ತಿಗೆ ಯಾಕೆ ಪರಿಚಯಿಸಬಾರದು? ಎಂಬ ಐಡಿಯಾ ಬಂದು. ಈ ಕಾರಣಕ್ಕೆ ಶುರುವಾದ ಹೊಸ ಕಲ್ಪನೆ ಪೂರ್ವಿ ಪ್ರೊಡಕ್ಷನ್ಸ್. ಈ ಮೂಲಕ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಕುರಿತು ಅಪರ್ಣ ಹಾಗೂ ಜೋಗಿ ಸುನಿತ ಜೊತೆ ಒಳ್ಳೆಯ ಕಾರ್ಯಕ್ರಮ ನಡೆದಿದೆ. ನಮ್ಮ ಡಾ.ಕಾಮಿನಿ ರಾವ್ ಡಾಟ್ ಕಾಮ್ ಯುಟ್ಯೂಬ್ ಚ್ಯಾನೆಲ್‌ನಲ್ಲಿ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಸಾಮಾಜಿಕ ಕಳ ಕಳಿ ಇರುವ ವಿಷಯ ಆಯ್ಕೆ ಮಾಡಿಕೊಂಡು ಚಿತ್ರ ಮಾಡುವ ಯೋಚನೆ ಇದೆ ಎಂಬುದು ಪೂಜಾ ಸಿದ್ಧಾರ್ಥ್ ರಾವ್ ಅವರ ಮಾತು.
ಡಾ.ಕಾಮಿನಿ ರಾವ್ ಅವರ ಪತಿ ಡಾ.ಎ.ಎಸ್. ಅರವಿಂದ್ ಅವರಿಗೆ, ವೈದ್ಯರಾಗಿದ್ದರೂ, ಸಿನಿಮಾರಂಗ ಹತ್ತಿರವಂತೆ. ಅವರು ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್, ಕಾಲೇಜಿನಲ್ಲಿ ಓದಿದವರು. ಹಾಗಾಗಿ, ಡಾ. ವಿಷ್ಣುವರ್ಧನ್ ಆಪ್ತರು. ಅಂಬರೀಶ್, ಡಾ. ರಾಜ್ ಕುಮಾರ್ ಕುಟುಂಬ ಸೇರಿದಂತೆ ಸಾಕಷ್ಟು ಕಲಾವಿದರ ಒಡನಾಟವೂ ಇವರಿಗೆ ಇದೆ. ಇಷ್ಟು ವರ್ಷ ಸಿನಿಮಾದವರ ಸಂಗಡ ಇದ್ದರೂ, ಸಿನಿಮಾರಂಗ ಪ್ರವೇಶಿಸಿರಲಿಲ್ಲ. ಈಗ ನೇರವಾಗಿ ಸ್ಪರ್ಶಿಸುವ ಕಾಲ ಬಂದಿದೆ ಎಂದರು ಡಾ. ಎ.ಎಸ್. ಅರವಿಂದ್.
2021 ರ ಫೆಬ್ರವರಿಯಲ್ಲಿ ಚಿತ್ರೋತ್ಸವ ಸಾಧ್ಯತೆ- ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ
ಈ ಬಾರಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ಕೋರಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಮ್ಮ ಅಕಾಡೆಮಿಯ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೊರೊನಾ ಹಾವಳಿಯಿಂದ ಚಿತ್ರರಂಗ ಸಂಪೂರ್ಣ ಸೊರಗಿದೆ. ಈಗಷ್ಟೇ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಚಿತ್ರರಂಗ ಇನ್ನಷ್ಟು ವೇಗವಾಗಲು, ಪ್ರೇಕ್ಷಕರನ್ನು ಪುನಃ ಚಿತ್ರಮಂದಿರಗಳತ್ತ ಸೆಳೆಯಲು 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅನುಮತಿ ಕೊಟ್ಟು, ಅದಕ್ಕೆ ಬೇಕಾದ ಪೂರಕ ವಾತಾವರಣ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ನೀಡಲಾಗಿದೆ. ೨೦೨೧ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವಂತೆ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ನೇತೃತ್ವದ ನಿಯೋಗ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಕಳೆದ 12 ವರ್ಷಗಳಿಂದಲೂ ನಡೆದು ಬಂದಿರುವ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಯಶಸ್ವಿ ಕಂಡಿದೆ. ಜಗತ್ತಿನಾದ್ಯಂತ ಸುಮಾರು 5000 ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆ ಪೈಕಿ ಕೇವಲ 45 ಚಿತ್ರೋತ್ಸವಗಳಿಗೆ ಮಾತ್ರ ಅಂತಾರಾಷ್ಟ್ರೀಯ ಮನ್ನಣೆ ಸಿಕಿದೆ. ನಮಗೂ ಈ ಮನ್ನಣೆ ಸಿಗಬೇಕಾದರೆ, ಚಿತ್ರೋತ್ಸವ ಆಯೋಜಿಸಬೇಕಿದೆ. ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆ ಮಾನ್ಯತೆ ದೊರೆಯುವ ಸಾಧ್ಯತೆಯೂ ಇದೆ. ಹಾಗೊಂದು ವೇಳೆ ಈ ಮಾನ್ಯತೆ ಏನಾದರೂ ಸಿಕ್ಕರೆ, ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಹಾಗಾಗಿ 13 ನೇಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವುದರ ಜೊತೆಯಲ್ಲಿ ಆ ಚಿತ್ರೋತ್ಸವಕ್ಕೆ ಬೇಕಾಗುವ ಅಗತ್ಯ ಅನುದಾನ ಕಲ್ಪಿಸಿಕೊಡಬೇಕು ಎಂದು ನಿಯೋಗ ಮನವಿ ಮಾಡಿದೆ.
ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಮಾತ್ರ ಚಿತ್ರೋತ್ಸವ ನಡೆಯಲಿದೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸಿದರೆ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ವಿಷಯವನ್ನು ಈ ವೇಳೆ ಸಿಎಂ ಬಳಿ ಚರ್ಚಿಸಲಾಗಿದೆ.
ಅಂದಹಾಗೆ, ಈ ನಿಯೋಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಎನ್. ವಿದ್ಯಾಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ನಟಿ ಶ್ರುತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ರಿಜಿಸ್ಟ್ರಾರ್ ಜಿ.ಹಿಮಂತರಾಜು ಇದ್ದರು. ಅವರು ಈ ನಿಯೋಗದಲ್ಲಿದ್ದರು.