Categories
ಸಿನಿ ಸುದ್ದಿ

ಸಲಗ ಚಿತ್ರ ನೋಡ್ತೀನಿ ಅಂದ್ರು ತೇಜಸ್ವಿ ಸೂರ್ಯ – ಸಲಗ ತಂಡಕ್ಕೆ ಶುಭಕೋರಿದ ಸಂಸದ

“ದುನಿಯಾ” ವಿಜಯ್‌ ಅಭಿನಯಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಚಿತ್ರರಂಗದಲ್ಲಿ ಸದ್ಯಕ್ಕೆ ಪೋಸ್ಟರ್‌ ಮತ್ತು ಹಾಡುಗಳ ಮೂಲಕ ಎಲ್ಲೆಡೆ ನಿರೀಕ್ಷೆ ಹುಟ್ಟಿಸಿರುವ “ಸಲಗ” ಚಿತ್ರವನ್ನು ನೋಡಲು ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರೇ ಉತ್ಸುಕಗೊಂಡಿದ್ದಾರೆ.

ಹೌದು, ಇತ್ತೀಚೆಗೆ “ಸಲಗ” ಚಿತ್ರ ನಿರ್ದೇಶಕ “ದುನಿಯಾ” ವಿಜಯ್‌ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಅವರು ಸಂಸದ ತೇಜಸ್ವಿ ಸೂರ್ಯ‌ ಅವರನ್ನು ಭೇಟಿ ಮಾಡಿ ಒಂದಷ್ಟು ಚರ್ಚಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮದೇ ಕ್ಷೇತ್ರದಲ್ಲಿರುವ ದುನಿಯಾ ವಿಜಯ್ ಅವರ ಮನೆಗೆ ಇತ್ತೀಚೆಗಷ್ಟೇ, ಭೇಟಿ ನೀಡಿದ್ದರು. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರಿಗೆ ಬಹಳ‌ ಆತ್ಮೀಯರಾಗಿರುವ ತೇಜಸ್ವಿ ಸೂರ್ಯ, ಕ್ಷೇತ್ರದಲ್ಲಿ ರೌಂಡ್ಸ್ ಮಾಡುವ ವೇಳೆ “ದುನಿಯಾ” ವಿಜಯ್‌ ಅವರ ಮನೆಗೆ ಶ್ರೀಕಾಂತ್ ಜೊತೆಗೆ ಭೇಟಿ ನೀಡಿದ್ದಾರೆ.

“ಸಲಗ” ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿರುವ ತೇಜಸ್ವಿ ಅವರು, ಚಿತ್ರದ ಟೀಸರ್‌, ಟ್ರೇಲರ್‌ ಹಾಗು ಹಾಡುಗಳನ್ನೂ ನೋಡಿದ್ದಾರೆ. ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಸಿನಿಮಾ ನೋಡ್ತೀನಿ ಅಂತಾನೂ ಹೇಳಿದ್ದಾರೆ. “ದುನಿಯಾ” ವಿಜಯ್ ಅವರ ಚೊಚ್ಚಲ‌ ನಿರ್ದೇಶನಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ ತೇಜಸ್ವಿ ಸೂರ್ಯ.

Categories
ಸಿನಿ ಸುದ್ದಿ

ಶಿವರಾಜಕುಮಾರ್ ಸಿನಿರಂಗ ಸ್ಪರ್ಶಕ್ಕೆ 35- ಸಂಭ್ರಮಕ್ಕೆ ಶಿವಣ್ಣ ಪ್ರೀಮಿಯರ್ ಲೀಗ್ ಸೀಸನ್ 1

ಶಿವರಾಜಕುಮಾರ್‌ ಅವರು ಕನ್ನಡ ಸಿನಿಮಾರಂಗಕ್ಕೆ ಬಂದು ೩೫ ವರ್ಷಗಳು ಸಂದಿವೆ. ಈ ಮೂರುವರೆ ದಶಕವನ್ನು ಯಶಸ್ವಿಯಾಗಿ ಮುಗಿಸಿರುವ ಶಿವರಾಜಕುಮಾರ್‌ ಅವರಿಗೆ ಎಲ್ಲೆಡೆಯಿಂದಲೂ ಶುಭಾಶಯ ಹರಿದುಬಂದಿದೆ. ಈಗ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 35 ವರ್ಷ ಪೂರೈಸಿದ ಹಿನ್ನಲೆಯಲ್ಲಿಯೇ ಅವರ ಪ್ರೀತಿಯ ಅಭಿಮಾನಿಗಳು ಆ ಸಂಭ್ರಮದಲ್ಲೇ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದ್ದರು‌.

. “ಶಿವಣ್ಣ ಪ್ರೀಮಿಯರ್‌ ಲೀಗ್‌ ಸೀಸನ್‌ ೧” ಫೆಬ್ರವರಿ ೨೦ ಮತ್ತು ೨೧ರಂದು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ಅಂದಹಾಗೆ, ಶಿವ ಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಆಯೋಜಿಸಿದ್ದ ಈ ಟೂರ್ನಮೆಂಟ್‌ಗೆ ಅಭಿಮಾನಿಗಳು, ಸಿನಿಮಾ ತಂತ್ರಜ್ಞರು, ಕಲಾವಿದರು, ಸಿನಿಮಾ ತಂಡಗಳು, ಸಿನಿಮಾ ಪತ್ರಕರ್ತರು ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.

ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ರುಸ್ತುಂ ರೈಮ್ಸ್ ( ರೇಮ್ಸ್ ಸಿನೆಮಾ ತಂಡ) ವಿಜಯಶಾಲಿಯಾದರೆ, ರನ್ನರ್ ಅಪ್ ತಂಡವಾಗಿ ಶಿವಸೈನ್ಯ ಸ್ಪಾರ್ಟನ್ಸ್ (ಶಿವಣ್ಣ ಅಭಿಮಾನಿ ಸಂಘ) ಹೊರಹೊಮ್ಮಿದೆ. ಇನ್ನು, ಈ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಕೋರಿದ್ದು ಶಾಸಕ ವಿ.ಸೋಮಣ್ಣ, ಜೊತೆಯಲ್ಲಿ ಅರುಣ್ ಸೋಮಣ್ಣ ಹಾಗೂ ಉಮೇಶ್ ಶೆಟ್ಟಿ ಕೂಡ ಪಂದ್ಯಾವಳಿಗೆ ಸಾಥ್‌ ಕೊಟ್ಟರು.

ಇಡೀ ಟೂರ್ನಮೆಂಟ್ ನಲ್ಲಿ ಮೊದಲ ದಿನದಿಂದ ಕೊನೆ ಕ್ಷಣದವರೆಗೂ ಜೊತೆ ಇದ್ದು, ಎಲ್ಲಾ ವಿಚಾರಗಳಿಗೂ ಸಾಥ್ ಕೊಟ್ಟಿದ್ದು ನಿರ್ಮಾಪಕ ಭಾ.ಮ. ಹರೀಶ್. ವಿಜಯನಗರದ ಬಿಜಿಎಸ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಧೀರನ್ ರಾಮ್ ಕುಮಾರ್, ದುನಿಯಾ ವಿಜಯ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ನಟಿ ಸುಮನ್ ನಗರ್ಕರ್ ಹೀಗೆ ಹಲವರು ಆಗಮಿಸಿ, ಕ್ರಿಕೆಟ್‌ ಪಂದ್ಯಾವಳಿ ವೀಕ್ಷಿಸಿ, ಯಶಸ್ವಿಗೊಳಿಸಿದರು.

Categories
ಸಿನಿ ಸುದ್ದಿ

ಬೆಣ್ಣೆ ನಗರಿ ಹುಡುಗಿ ಕೈಯಲ್ಲಿ ಶ್ಯಾನೆ ಸಿನಿಮಾಗಳು! ಆನ ಚಿತ್ರದ ಮೋಷನ್‌ ಪೋಸ್ಟರ್‌ಗೆ ಭರ್ಜರಿ ರೆಸ್ಪಾನ್ಸ್

ಕನ್ನಡ ಚಿತ್ರರಂಗಕ್ಕೆ ಬಂದ ಬೆರಳೆಣಿಕೆ ವರ್ಷಗಳಲ್ಲೇ ನಟಿ ಅದಿತಿ ಪ್ರಭುದೇವ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹಾಗಂತ ಬೇರೇನೋ ವಿಷಯದಲ್ಲಿ ಸುದ್ದಿ ಮಾಡಿದ್ದಾರೆ ಅಂತಲ್ಲ. ಅವರೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಸದ್ಯ ಅವರ ಅಭಿನಯದ “ಆನ” ಸಿನಿಮಾದ ಮೋಷನ್‌ ಪೋಸ್ಟರ್‌ ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್‌ ಆಗುತ್ತಿದೆ. ಎಲ್ಲೆಡೆಯಿಂದಲೂ ಆ ಮೋಷನ್‌ ಪೋಸ್ಟರ್‌ಗೆ ಮೆಚ್ಚುಗೆ ಸಿಗುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ, ಅವರ ಅಭಿನಯ ಮತ್ತು ಸ್ಪಷ್ಟ ಭಾಷೆ. ಹೌದು, ಅದಿತಿ ಪ್ರಭುದೇವ ಹಾಗೆ ನೋಡಿದರೆ, ನಿರೂಪಕಿಯಾಗಿದ್ದವರು. ಚಂದದ ಮಾತುಗಳನ್ನು ಆಡುವ ಮೂಲಕವೇ ಅವರು ಕಿರುತೆರೆಯ ಗಮನಸೆಳೆದವರು. ಅಲ್ಲಿಂದ ಅವರು “ಗುಂಡ್ಯಾನ ಹೆಂಡತಿ” ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಆ ಬಳಿಕ “ನಾಗ ಕನ್ನಿಕೆ” ಧಾರಾವಾಹಿಯಲ್ಲೂ ಮಿಂಚಿದರು. ನಂತರದ ದಿನಗಳಲ್ಲಿ ಅವರು ಬೆಳ್ಳಿತೆರೆಗೆ ಬಡ್ತಿ ಪಡೆದು, ಅಜೇಯ್‌ರಾವ್‌ ಜೊತೆಗೆ “ಧೈರ್ಯಂ” ಸಿನಿಮಾಗೆ ನಾಯಕಿಯಾಗಿ ಕಾಣಿಸಿಕೊಂಡರು.

 

ಆ ಚಿತ್ರದ ಬಳಿಕ ಅದಿತಿ ಪ್ರಭುದೇವ ಹಿಂದಿರುಗಿ ನೋಡಿಲ್ಲ. ಅಷ್ಟರಮಟ್ಟಿಗೆ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. ಸಿನಿಮಾ ಮಂದಿಗಷ್ಟೇ ಅಲ್ಲ, ಪಡ್ಡೆ ಹುಡುಗರಿಗೂ ಅದಿತಿ ಪ್ರಭುದೇವ ಫೇವರೇಟ್‌ ನಾಯಕಿ ಎನಿಸಿಕೊಂಡರು. ಸದ್ಯಕ್ಕೆ ಎಸ್.ನಾರಾಯಣ್‌ ನಿರ್ದೇಶನದ “೫ಡಿ” ಸಿನಿಮಾದಲ್ಲಿ ಆದಿತ್ಯ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.


ಸದಾ ನಗುಮೊಗದ ಈ ಅದಿತಿಗೆ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿವೆ. ನೋಡ ನೋಡುತ್ತಿದ್ದಂತೆಯೇ ಕೆಲವು ನಟರ ಜೊತೆಗೆ ನಟಿಸುವ ಮೂಲಕ ಶ್ಯಾನೆ ಬಿಝಿಯಾಗಿಬಿಟ್ಟರು. ಈಗಾಗಲೇ “ಬ್ರಹ್ಮಚಾರಿ”, “ಬಜಾರ್”, “ಸಿಂಗ” ಸೇರಿದಂತೆ ಹಲವು ಹೊಸಬರ ಸಿನಿಮಾಗಳಲ್ಲೂ ಅದಿತಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕೈಯಲ್ಲಿರುವ ಸಿನಿಮಾಗಳ ಬಿಡುಗಡೆ ಎದುರು ನೋಡುತ್ತಿದ್ದಾರೆ ಅದಿತಿ.

Categories
ಸಿನಿ ಸುದ್ದಿ

ಚಿ.ತು.ಹುಡುಗರ ಜೋಶ್‌ ಲೈಫ್‌- ಸಂಘ ಕಟ್ಟಿಕೊಂಡ ಯುವಕರ ಕಲರ್‌ಫುಲ್‌ ಸ್ಟೋರಿ

ಹಳ್ಳಿ ಅಂದಮೇಲೆ ಪಡ್ಡೆ ಹುಡುಗ್ರು ಇದ್ದೇ ಇರ್ತಾರೆ. ಪಡ್ಡೆಗಳು ಅಂದ್ರೆ ಒಂದಷ್ಟು ತಲೆಹರಟೆ ಕೂಡ ಸಹಜ. ಊರಲ್ಲಿ ಜಾತ್ರೆ, ಹರಿದಿನ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ಜರುಗಿದರೆ, ತಮ್ಮದೇ ಒಂದು ಸಂಘ ಕಟ್ಟಿಕೊಂಡ ಯುವಕರು ಆ ಮೂಲಕ ಮುಂದೆ ನಿಂತು ಸಂಭ್ರಮದಿಂದಲೇ ಅದನ್ನೆಲ್ಲ ಆಚರಿಸೋದು ಕಾಮನ್.‌ ಈಗ ಇಲ್ಲೇಕೆ ಯುವಕರ ಸಂಘದ ಬಗ್ಗೆ ಹೇಳ್ತಾ ಇದೀವಿ ಎಂಬ ಪ್ರಶ್ನೆಗೆ ಉತ್ತರ “ಚಿ.ತು.ಯುವಕರ ಸಂಘ” ಎಂಬ ಸಿನಿಮಾ.

ಹೌದು, “ಚಿ.ತು.ಯುವಕರ ಸಂಘ” ಇದು ಹೊಸ ಬಗೆಯ ಸಿನಿಮಾ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಹಳ್ಳಿಗಾಡಲ್ಲಿ ನಡೆಯುವ ಚಿತ್ರ. ಅದರಲ್ಲೂ ಹಳ್ಳಿ ಹುಡುಗರ ಸುತ್ತಮುತ್ತ ನಡೆಯೋ ಕಥೆ ಇದು. ಸದ್ಯಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಇನ್ನು, ಚಿತ್ರತಂಡ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ನಾರಾಯಣಗೌಡ ಅವರು ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿ ಶುಭಕೋರಿದ್ದಾರೆ.


ಈ ಚಿತ್ರಕ್ಕೆ ಶಿವರಾಜ್‌ ರಾಮನಗರ ನಿರ್ದೇಶಕರು. ಇದು ಮೊದಲ ನಿರ್ದೇಶನದ ಚಿತ್ರ. ಇದಕ್ಕೂ ಮುನ್ನ ಅವರು “ಭುಜಂಗ”,”ಉಡುಂಬ”,”ದಾರಿ ಯಾವುದಯ್ಯ ವೈಕುಂಠಕೆ” ಚಿತ್ರಗಳಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಹೇಳುವ ಶಿವರಾಜ್‌ ರಾಮನಗರ, ” ಇದು ನಮ್ಮ ಮೊದಲ ಸಿನಿಮಾ. ಕಥೆ ಬಗ್ಗೆ ಹೇಳುವುದಾದರೆ, ಊರಲ್ಲಿ ಕೆಲಸ ಕಾರ್ಯ ಇಲ್ಲದೆ ಅರಾಮಾಗಿ ಶೋಕಿ ಮಾಡಿಕೊಂಡಿರುವ ನಾಲ್ವರು ಹುಡುಗರೊಂದಿಗೆ ಚಿತ್ರದ ನಾಯಕನೂ ಊರೂರು ಅಲೆದಾಡುತ್ತಿರುತ್ತಾನೆ. ಅಂತಹವರ ಲೈಫಲ್ಲಿ ಕೆಲವು ಘಟನೆಗಳು ನಡೆದು ಹೋಗುತ್ತದೆ.

ಕೆಲಸ ಕಾರ್ಯ ಇಲ್ಲದೆ ಇರೋದು ವೇಸ್ಟ್.‌ ಕೆಲಸ ಮಾಡುವಾಗ ಸಿಗುವ ಗೌರವವೇ ಬೇರೆ ಎಂಬುದನ್ನು ಅರಿತ ಆ ಯುವಕರು, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಅಂತ ನಿರ್ಧರಿಸುತ್ತಾರೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರ. ಇನ್ನು, ಇದೊಂದು ಹಾಸ್ಯ ಪ್ರಧಾನ ಸಿನಿಮಾ. ಹಾಸ್ಯ ಮೂಲಕವೇ, ಚಿತ್ರ ಸಾಗುತ್ತದೆ. ರಾಮನಗರ, ಚನ್ನಪಟ್ಟಣ, ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ.  ಚೇತನ್‌ ರಾಜ್‌ ಫಿಲ್ಮ್ಸ್ಸ್‌ ಮೂಲಕ ಚೇತನ್‌ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್‌ ತೋಟಂಬೈಲು ಸಂಗೀತ ನೀಡಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣವಿದೆ.

ಇವರಿಗೆ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಸನತ್‌ ಹೀರೋ ಆಗಿದ್ದಾರೆ. ಈ ಹಿಂದೆ “ಕಮರೊಟ್ಟು ಚೆಕ್‌ಪೋಸ್ಟ್‌ ” ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ನಿರ್ಮಾಪಕ ಚೇತನ್‌ ರಾಜ್‌ ಈ ಚಿತ್ರ ನಿರ್ಮಿಸಿದ್ದರು. ಮತ್ತೆ ಈ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರದಲ್ಲಿ ವಿರಾನಿಕ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಹೀರೋ ಸನತ್‌ ಜೊತೆಗೆ “ಫ್ರೆಂಚ್‌ ಬಿರಿಯಾನಿ” ಖ್ಯಾತಿಯ ಮಹಂತೇಶ್‌, “ಕಾಮಿಡಿ ಕಿಲಾಡಿಗಳು” ಸಂತು, “ಕಿರಿಕ್‌ ಪಾರ್ಟಿ” ಸಲ್ಮಾನ್‌, ಪವನ್‌, ಬಲರಾಜವಾಡಿ, ಚಂದ್ರಕಲಾ ಮೋಹನ್‌, ರಾಜೇಂದ್ರ ಕಾರಂತ್‌, ಬಿರಾದಾರ್‌, ಚಂದ್ರ ಪ್ರಭ, ಕುರಿ[ಪ್ರತಾಪ್‌ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಶಾರುಖ್‌ ಜೋಡಿಯಾಗಿ ತಾಪ್ಸಿ! ಇದು ‘ಮುನ್ನಾಭಾಯ್‌’ ಖ್ಯಾತಿಯ ಹಿರಾನಿ ಸಿನಿಮಾ!!


2018ರಲ್ಲಿ ‘ಜೀರೋ’ ಚಿತ್ರದ ನಂತರ ಶಾರುಖ್‌ ಖಾನ್‌ ಅವರ ಸಿನಿಮಾ ಬಿಡುಗಡೆಯಾಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೊಸ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಶಾರುಖ್‌ರ ‘ಪಠಾಣ್‌’ ಸಿನಿಮಾ ಚಿತ್ರೀಕರಣದಲ್ಲಿದೆ. ಈ ಮಧ್ಯೆ ‘ಮುನ್ನಾಭಾಯ್ ಎಂಬಿಬಿಎಸ್‌’ ಸಿನಿಮಾ ಖ್ಯಾತಿಯ ರಾಜಕುಮಾರ್ ಹಿರಾನಿ ಅವರು ಶಾರುಖ್‌ಗೆ ಚಿತ್ರಕಥೆ ಹೆಣೆಯುತ್ತಿದ್ದಾರೆ. ಈ ಚಿತ್ರದಲ್ಲಿ ಖಾನ್‌ಗೆ ನಾಯಕಿಯಾಗಿ ತಾಪ್ಸಿ ನಟಿಸುವುದು ಖಾತ್ರಿಯಾಗಿದೆ.

ಹಿರಾನಿ ನಿರ್ದೇಶನದ ಈ ಚಿತ್ರ ಶಾರುಖ್‌ ಖಾನ್‌ ಜೊತೆ ತಾಪ್ಸಿಗೆ ಮೊದಲ ಪ್ರಯೋಗ. ಆದರೆ ಈ ಹಿಂದೆ ಖಾನ್ ನಿರ್ಮಾಣದ ‘ಬದ್ಲಾ’ ಚಿತ್ರದಲ್ಲಿ ತಾಪ್ಸಿ ನಟಿಸಿದ್ದರು. ಅಮಿತಾಭ್ ಬಚ್ಚನ್‌ ಮುಖ್ಯಭೂಮಿಕೆಯಲ್ಲಿದ್ದ ಈ ಕ್ರೈಂ-ಥ್ರಿಲ್ಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ತಾಪ್ಸಿ ಅವರು ಶಾರುಖ್‌ಗೆ ಜೋಡಿಯಾಗುವ ಅವಕಾಶ ಪಡೆದಿದ್ದಾರೆ. ಹಿರಾನಿ ಹೊಸ ಸಿನಿಮಾ ಒಂದು ಸೋಷಿಯಲ್‌ – ಡ್ರಾಮಾ ಎನ್ನಲಾಗಿದೆ. ಪಂಜಾಬ್‌ನಿಂದ ಕೆನಡಾಗೆ ವಲಸೆ ಹೋಗುವ ವ್ಯಕ್ತಿಯಾಗಿ ಶಾರುಖ್‌ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಶಾರುಖ್‌ ನಟನೆಯ ‘ಪಠಾಣ್‌’ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಚಿತ್ರದಲ್ಲಿನ ಶಾರುಖ್ ಗೆಟ್‌ಅಪ್ ಹೊರಬಿದ್ದಿದ್ದು, ಅಭಿಮಾನಿಗಳು ಅವರ ಹೇರ್‌ಸ್ಟೈಲ್ ಕಾಪಿ ಮಾಡತೊಡಗಿದ್ದಾರೆ. ಮತ್ತೊಂದೆಡೆ ನಟಿ ತಾಪ್ಸಿ ಮೊನ್ನೆ ‘ಲೂಪ್‌ ಲಪೇಟಾ’ ಸಿನಿಮಾ ಪೂರ್ಣಗೊಳಿಸಿದ್ದು, ಸದ್ಯ ‘ದೊ ಬಾರಾ’ ಚಿತ್ರೀಕರಣದಲ್ಲಿದ್ದಾರೆ. ಇದಾದ ನಂತರ ‘ರಶ್ಮಿ ರಾಕೆಟ್‌’ನಲ್ಲಿ ನಟಿಸಲಿದ್ದು, ಅದು ಪೂರ್ಣಗೊಂಡ ನಂತರ ಶಾರುಖ್‌ ಸಿನಿಮಾಗೆ ಬರುತ್ತಾರೆ. ವಿಶಿಷ್ಠ ಸಿನಿಮಾಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ತಾಪ್ಸಿ, ಶಾರುಖ್ ಜೋಡಿಯಾಗಿ ಹೇಗೆ ಕಾಣಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಟೈಂ ಟು ಡ್ಯಾನ್ಸ್‌ ಫಸ್ಟ್ ಲುಕ್‌ ರಿಲೀಸ್; ನಟಿ ಕತ್ರಿನಾ ಕೈಫ್‌ ಸಹೋದರಿ ಇಸಬೆಲ್ಲಾ‌ ಹೊಸ ಚಿತ್ರ


ಬಾಲಿವುಡ್ ನಟಿ ಕತ್ರಿನಾ ಕೈಫ್‌ ಕಿರಿಯ ಸಹೋದರಿ ಇಸಬೆಲ್ಲಾ ಕೈಫ್‌ ಬೆಳ್ಳಿತೆರೆಗೆ ಪದಾರ್ಪಣೆಗೆ ವೇದಿಕೆ ಸಜ್ಜಾಗಿದೆ. ರೂಪದರ್ಶಿಯಾಗಿದ್ದ ಅವರು ಸೂಕ್ತ ತರಬೇತಿಯೊಂದಿಗೆ ನಟಿಯಾಗುತ್ತಿದ್ದಾರೆ. ಅವರ ಚೊಚ್ಚಲ ಹಿಂದಿ ಸಿನಿಮಾ ‘ಟೈಂ ಟು ಡ್ಯಾನ್ಸ್‌’ ಫಸ್ಟ್ ಲುಕ್‌ ಬಿಡುಗಡೆಯಾಗಿದೆ. ಸೂರಜ್ ಪಾಂಚೋಲಿ ಚಿತ್ರದ ಹೀರೋ. ಸಿನಿಮಾ ಮಾರ್ಚ್‌ 12ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ರಿಲೀಸ್ ಡೇಟ್ ಜೊತೆ ಪೋಸ್ಟರ್‌ಗಳೂ ಹೊರಬಿದ್ದಿದ್ದು, ಇದೊಂದು ಡ್ಯಾನ್ಸ್ ಸಿನಿಮಾ ಎನ್ನುವುದು ತಿಳಿದುಬರುತ್ತದೆ.

ಪೋಸ್ಟರ್‌ಗಳು ಹೇಳುವಂತೆ ಇಲ್ಲಿ ಇಸಬೆಲ್ಲಾ ಮತ್ತು ಸೂರಜ್‌ ಇಬ್ಬರೂ ಡ್ಯಾನ್ಸ್ ಸ್ಪರ್ಧಿಗಳಂತೆ ತೋರುತ್ತಾರೆ. ಹಿನ್ನೆಲೆಯಲ್ಲಿ ಪ್ರಶಸ್ತಿ ಫಲಕಗಳಿದ್ದು, ನಟ-ನಟಿ ನೃತ್ಯದ ಪೋಸು ಕೊಟ್ಟಿದ್ದಾರೆ. “ಬದುಕು ಪರೀಕ್ಷೆಗೊಳಪಟ್ಟಾಗ ನೃತ್ಯವೇ ಉತ್ತರ’ ಎನ್ನುವ ಒಕ್ಕಣಿಯೂ ಇದೆ.

ನಟಿ ಕತ್ರಿಕಾ ಕೈಫ್ ಕಳೆದ ವರ್ಷ ತಮ್ಮ ಸಹೋದರಿ ಇಸಬೆಲ್ಲಾರ ಸಿನಿಮಾ ‘ಕ್ವಾಥಾ’ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಬರೆದಿದ್ದರು. ಆದರೆ ಈ ಸಿನಿಮಾ ಸ್ಥಗಿತಗೊಂಡಿತು. ಇದೀಗ ಅವರು ‘ಟೈಂ ಟು ಡ್ಯಾನ್ಸ್‌’ ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ.

Categories
ಟಾಲಿವುಡ್

ಸೀಟಿಮಾರ್‌ ಟೀಸರ್ ರಿಲೀಸ್‌ – ಮೊದಲ ಬಾರಿ ತೆರೆಮೇಲೆ ಗೋಪಿಚಂದ್‌-ತಮನ್ನಾ


ಸಂಪತ್‌ನಂದಿ ನಿರ್ದೇಶನದ ‘ಸೀಟಿಮಾರ್’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗೋಪಿಚಂದ್‌ ಮತ್ತು ತಮನ್ನಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಚಿತ್ರವಿದು. ಏಪ್ರಿಲ್‌ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಕಬಡ್ಡಿ ಹಿನ್ನೆಲೆಯಲ್ಲಿ ಸಖತ್ ಆಕ್ಷನ್‌-ಡ್ರಾಮಾ ಇರುವುದನ್ನು ‘ಸೀಟಿಮಾರ್‌’ ಟೀಸರ್ ಸಾರಿ ಹೇಳುತ್ತಿದೆ. ಚಿತ್ರದಲ್ಲಿ ಗೋಪಿಚಂದ್‌ ಮತ್ತು ತಮನ್ನಾ ಕಬಡ್ಡಿ ಕೋಚ್‌ಗಳು!

ಗೋಪಿಚಂದ್‌ ಆಂಧ್ರ ಕಬಡ್ಡಿ ತಂಡದ ಕೋಚ್ ಆದರೆ ತಮನ್ನಾ ತೆಲಂಗಾಣ ತಂಡದ ಕೋಚ್‌. ಟೀಸರ್‌ನಲ್ಲಿ ತಮನ್ನಾಗೆ ಹೆಚ್ಚು ಸ್ಪೇಸ್‌ ಇದ್ದಂತಿಲ್ಲ. ಡೈಲಾಗ್ ಕೂಡ ಇಲ್ಲವಾದ್ದರಿಂದ ತೆರೆ ಮೇಲಿನ ಗೋಪಿಚಂದ್‌-ತಮನ್ನಾ ಕೆಮಿಸ್ಟ್ರಿ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಚಿತ್ರತಂಡದ ಮೂಲಗಳು ಹೇಳುವಂತೆ ಚಿತ್ರದಲ್ಲಿ ತಮನ್ನಾ ತೆಲಂಗಾಣ ಶೈಲಿ ತೆಲುಗು ಮಾತನಾಡುತ್ತಾರಂತೆ. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲೇ ಈ ಸಸ್ಪ್ರೈಸ್‌ ಸಿಗಲಿ ಎನ್ನುವುದು ನಿರ್ದೇಶಕರ ನಿಲುವು ಎನ್ನಲಾಗಿದೆ.

ನಿರ್ದೇಶಕ ಸಂಪತ್ ನಂದಿ ಅವರ ಜೊತೆ ಗೋಪಿಚಂದ್‌ ಅವರಿಗೆ ಇದು ಎರಡನೇ ಸಿನಿಮಾ. ‘ಸೀಟಿಮಾರ್‌’ ಟೀಸರ್‌ನಲ್ಲಿ ಗೋಪಿಚಂದ್‌ ಪಾತ್ರವನ್ನು ಮ್ಯಾಕೋ ಕಬಡ್ಡಿ ಕೋಚ್‌ ಎನ್ನುವಂತೆ ತೋರಿಸಲಾಗಿದೆ. ರಾವ್ ರಮೇಶ್ ಮತ್ತು ತರುಣ್ ಅರೋರಾ ಮುಖ್ಯಪಾತ್ರಗಳಲ್ಲಿ ಕಾಣಿಸುತ್ತಾರೆ. ದಿಗಂಗನ ಸೂರ್ಯವಂಶಿ ಮತ್ತು ನಟಿ ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕನ್ನಡ ಕಿರುತೆರೆಯಲ್ಲಿ ರಮ್ಯಕೃಷ್ಣ ‘ನಾಗಭೈರವಿ’ ಫ್ಯಾಂಟಸಿ ಸರಣಿಯಲ್ಲಿ ಶಿವಗಾಮಿ!

 ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. ತೊಂಬತ್ತರ ದಶಕದಲ್ಲಿ ನಾಯಕಿಯಾಗಿ ಮಿಂಚಿದ ಅವರು ಇದೀಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರ ಅವರಿಗೆ ದೊಡ್ಡ ಮನ್ನಣೆ ತಂದುಕೊಟ್ಟಿತ್ತು. ಸಿನಿಮಾ ಜೊತೆಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ನಟಿ ಇದೀಗ ಕನ್ನಡ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ‘ನಾಗಭೈರವಿ’ ತೆಲುಗು ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಧಾರಾವಾಹಿಯ ಕನ್ನಡ ಅವತರಣಿಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

ಕಳೆದ ವರ್ಷಾಂತ್ಯದಲ್ಲಿ ತೆಲುಗಿನಲ್ಲಿ ಪ್ರಸಾರವಾದ ‘ನಾಗಭೈರವಿ’ ಇದೀಗ ಕನ್ನಡಕ್ಕೆ ಬರುತ್ತಿದೆ. ವರನಾಂಜನೇಯುಲು ನಿರ್ದೇಶನದ ಈ ಸರಣಿ ತೆಲುಗು ನಾಡಿನಲ್ಲಿ ಜನಪ್ರಿಯವಾಗಿದೆ. ಇದೀಗ ಮಾರ್ಚ್‌ 1ರಿಂದ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇದು ಫ್ಯಾಂಟಸಿ, ಸಸ್ಪೆನ್ಸ್‌ ಸರಣಿ. ಅದ್ಧೂರಿ ಮೇಕಿಂಗ್‌, ಆಕರ್ಷಕ ವಿಶ್ಯುಯಲ್‌ ಎಫೆಕ್ಟ್‌ ಇಲ್ಲಿನ ಹೈಲೈಟ್‌. ದೇಶದಲ್ಲಿ ನಾಗದೇವತೆ ಕುರಿತ ನಂಬಿಕೆ ಸುತ್ತಮುತ್ತ ಕತೆ ಹೆಣೆಯಲಾಗಿದೆ. ಪ್ರಾಚೀನ ಆರೋಗ್ಯ ಗ್ರಂಥ ಚರಕ ಸಂಹಿತಾ ಕುರಿತೂ ಇಲ್ಲಿ ಪ್ರಸ್ತಾಪವಾಗಲಿದೆ.

ನಟಿ ರಮ್ಯಾ ಕೃಷ್ಣ ಅವರು ಕನ್ನಡಿಗರಿಗೆ ಚಿರಪರಿಚಿತ ನಟಿ. ಎಂಬತ್ತರ ದಶಕದ ಕೊನೆಯಲ್ಲಿ ತೆರೆಕಂಡ ‘ಕೃಷ್ಣರುಕ್ಮಿಣಿ’ ಚಿತ್ರದೊಂದಿಗೆ ಕನ್ನಡ ಬೆಳ್ಳಿತೆರೆ ಪ್ರವೇಶಿಸಿದ ಅವರು ಗಡಿಬಿಡಿ ಗಂಡ, ಮಾಂಗಲ್ಯಂ ತಂತು ನಾನೇನಾ, ಸ್ನೇಹ, ಏಕಾಂಗಿ, ಬಾ ಬಾರೋ ರಸಿಕ, ರಕ್ತಕಣ್ಣೀರು, ರಾಜಾ ನರಸಿಂಹ, ಮಾಣಿಕ್ಯ, ಅಂಜನೀಪುತ್ರ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಶಿವಗಾಮಿ’ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ.

Categories
ಸಿನಿ ಸುದ್ದಿ

ದಿನಕರ್ ನಿರ್ದೇಶನದಲ್ಲಿ ಪುನೀತ್‌!? ಅಪ್ಪು ಜೊತೆ ಒಂದ್ ಸೆಲ್ಫಿಗೆ ರೆಡಿನಾ ದಚ್ಚು ಬ್ರದರ್?

ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್‌ ರಾಜಕುಮಾರ್ ನಟಿಸುತ್ತಾರೆ ಎನ್ನುವುದು ಹಳೆಯ ವದಂತಿಗೆ ರೆಕ್ಕೆ-ಪುಕ್ಕ ಮೂಡಿದೆ. ಗಾಂಧಿನಗರದ ಮೂಲಗಳ ಪ್ರಕಾರ ಪುನೀತ್‌ಗೆ ದಿನಕರ್ ಚಿತ್ರಕಥೆ ಹೆಣೆಯುತ್ತಿರುವುದು ಹೌದು! ‘ಲೈಫ್ ಜೊತೆ ಒಂದ್ ಸೆಲ್ಫಿ’ ಸಿನಿಮಾ ನಂತರ ದಿನಕರ್ ಅವರು ಪುನೀತ್‌ಗಾಗಿ ಸ್ಕ್ರಿಪ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ‘ಜೊತೆ ಜೊತೆಯಲಿ’ ಹಿಟ್ ಚಿತ್ರದೊಂದಿಗೆ ನಿರ್ದೇಶಕನಾಗಿ ಗುರುತಿಸಿಕೊಂಡ ದಿನಕರ್‌ ತಮ್ಮ ಸಹೋದರ ದರ್ಶನ್‌ಗೆ ಮಾಡಿದ ‘ಸಾರಥಿ’ ಸೂಪರ್‌ಹಿಟ್ ಆಗಿತ್ತು. ‘ನವಗ್ರಹ’ ಅವರ ಮತ್ತೊಂದು ಯಶಸ್ವೀ ಸಿನಿಮಾ.

ಮುಂದೆ ದಿನಕರ್‌ ಸಾಕಷ್ಟು ಸಮಯದ ನಂತರ ‘ಲೈಫ್ ಜೊತೆ ಒಂದ್ ಸೆಲ್ಫಿ’ ನಿರ್ದೇಶಿಸಿದ್ದರು. ಪ್ರಜ್ವಲ್‌, ಪ್ರೇಮ್‌ ನಟಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು. ಇದೀಗ ದಿನಕರ್‌ ಗೆಲುವಿನ ನಿರೀಕ್ಷೆಯಲ್ಲಿದ್ದು, ಪುನೀತ್‌ ಜೊತೆಗಿನ ಪ್ರಾಜೆಕ್ಟ್‌ ಬಗ್ಗೆ ಕೆಲಸ ಮಾಡುತ್ತಿದ್ದಾರೆ.

ಸದ್ಯ ಪುನೀತ್‌ ‘ಜೇಮ್ಸ್‌’ ಚಿತ್ರೀಕರಣದಲ್ಲಿದ್ದಾರೆ. ಸಂತೋಷ್ ಆನಂದ್‌ರಾಮ್‌ ನಿರ್ದೇಶನದಲ್ಲಿ ಅವರು ನಟಿಸಿರುವ ‘ಯುವರತ್ನ’ ತೆರೆಕಾಣಬೇಕಿದೆ. ಇದಾದ ನಂತರವೂ ಹೊಂಬಾಳೆ ಬ್ಯಾನರ್‌ಗೆ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದ್ದು, ಆನಂತರ ದಿನಕರ್ ಸಿನಿಮಾ ಸೆಟ್ಟೇರಬಹುದು.

Categories
ಸಿನಿ ಸುದ್ದಿ

ಒನ್‌ ಶಾಟ್‌ ಮೂವಿ ರಕ್ತಗುಲಾಬಿ ಟೀಸರ್ ಬಂತು – ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಚಿತ್ರ

ಕನ್ನಡಕ್ಕೆ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಆ ಸಾಲಿಗೆ “ರಕ್ತ ಗುಲಾಬಿ” ಸಿನಿಮಾವೂ ಸೇರಿದೆ. ಹೊಸಬರ ಸಿನಿಮಾ ಇದಾಗಿದ್ದರೂ, ಈ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಹೌದು, ಇದು ಒನ್‌ ಟೇಕ್‌ ಸಿನಿಮಾ. ಅಷ್ಟೇ ಅಲ್ಲ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೂ ಸೇರಿದೆ. ಅಷ್ಟೇ ಅಲ್ಲ, ಗಿನ್ನಿಸ್‌ ದಾಖಲೆಗೂ ತಯಾರಾಗಿದೆ. ಅಂದಹಾಗೆ, ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್‌ ೩ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಸ್ಪೆಷಲ್‌ ಅಂದರೆ, ಎಲ್ಲರೂ ಇಲ್ಲಿ ಹೊಸಬರೇ. ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಾಂತ್ರಿಕ ವರ್ಗ ಹೀಗೆ ಪ್ರತಿಯೊಬ್ಬರಿಗೂ ಇದು ಹೊಸತು. ಈ ಚಿತ್ರದ ಮೂಲಕ ರಾಬಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಮಿಷನ್‌ ಕಾಡ್‌ ಫಿಲಂಸ್‌ ಮೂಲಕ ಈ ಚಿತ್ರ ತಯಾರಾಗಿದ್ದು, ಸದ್ಯ ಬಿಡುಗಡೆಯನ್ನು ಎದುರು ನೋಡುತ್ತಿದೆ.


ತಮ್ಮ ಸಿನಿಮಾ ಕುರಿತು ಹೇಳಿಕೊಂಡು ನಿರ್ದೇಶಕ ರಾಬಿ, “ಈ ಸಿನಿಮಾ ಶುರುವಾಗಿದ್ದೇ ಒಂದು ರೋಚಕ. ಒನ್‌ ಟೇಕ್‌ ಸಿನಿಮಾ ಅಂದರೆ ಸುಲಭವಲ್ಲ. ಇದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡೇ ಕೆಲಸಕ್ಕಿಳಿದೆವು. ಸಿನಿಮಾಗೂ ಮುನ್ನ, ಮೂರ್ನಾಲ್ಕು ದಿನಗಳ ಕಾಲ ಅಭ್ಯಾಸ ನಡೆಸಿದ ನಂತರವೇ ಅಂತಿಮವಾಗಿ ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ಕಮರ್ಷಿಯಲ್‌ ಅಂಶಗಳೂ ಇವೆ. ಸಿನಿಮಾ ಕಥೆ ಬಗ್ಗೆ ಹೇಳುವುದಾದರೆ, “ಸಾಮಾಜಿಕ ವ್ಯವಸ್ಥೆಯಿಂದ ಮನ ನೊಂದ ಯುವಕನೊಬ್ಬ ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೊಂದು ವ್ಯವಸ್ಥೆಯತ್ತ ಮುಖ ಮಾಡುತ್ತಾನೆ. ಇದರ ನಡುವೆ ಸಣ್ಣ ಪ್ರೀತಿಯೊಂದು ಅರಳುತ್ತದೆ. ತನ್ನ ಪ್ರiತಿ ಉಳಿಸಿಕೊಳ್ಳೋಕೆ, ಅವನು ಬೇರೆ ಕಡೆ ಪಯಣ ಬೆಳೆಸಲು ಹೊಡುತ್ತಾನೆ. ಈ ವೇಳೆ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಎಂಬುದು ಒನ್‌ಲೈನ್.‌ ಇದು ಸಂಪೂರ್ಣ ಸಕಲೇಶಪುರ ಸಮೀಪದ ಕಾಡಿನ ಸುತ್ತಮುತ್ತ ನಡೆದಿದೆ.

ಸುಮಾರು ಹತ್ತು ಕಿಲೋ ಮೀಟರ್‌ ಸುತ್ತಮುತ್ತ ಒನ್‌ ಟೇಕ್‌ನಲ್ಲೇ ಸಿನಿಮಾ ಮಾಡಲಾಗಿದೆ. ಇಲ್ಲಿ ಕಮರ್ಷಿಯಲ್ ಅಂಶಗಳೂ ಇವೆ. ಇನ್ನು, ಚಿತ್ರಕ್ಕೆ ವಿಕ್ರಮಾದಿತ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಜಾನರ್‌ ಸಿನಿಮಾ. ಚಿತ್ರದ ಅಂತ್ಯದಲ್ಲಿ ನಾಯಕಿಯ ಪಾತ್ರದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಅದನ್ನು ಸಿನಿಮಾದಲ್ಲೇ ನೋಡಬೇಕುʼ ಎಂಬುದು ನಿರ್ದೇಶಕರ ಮಾತು.


ಒನ್‌ ಟೇಕ್‌ ಸಿನಿಮಾ ಆಗಿದ್ದರಿಂದ ಇಲ್ಲಿ ಮೊದಲೇ ಪ್ಲಾನ್‌ ಮಾಡಿಕೊಂಡಿದ್ದೆವು. ಇಲ್ಲಿ ಸುಮಾರು ೪೫ ಜನರ ತಂಡ ಕೆಲಸ ಮಾಡಿದೆ. ತೆರೆಯ ಮೇಲೆ ಹದಿನೈದು ಕಲಾವಿದರು ನಟಿಸಿದ್ದಾರೆ. ಅವರೆಲ್ಲರೂ ಬಲು ತೂಕದ ಗನ್, ಬ್ಯಾಗ್‌ಗಳನ್ನು ಹೊತ್ತುಕೊಂಡು ಓಡೋಡಿ ಹೋಗೋವುದು ಕಷ್ಟಕರವಾಗಿತ್ತು. ಎಲ್ಲರಿಗೂ ಕೂಡ ಈ ಚಿತ್ರ ಚಾಲೆಂಜಿಂಗ್‌ ಆಗಿತ್ತು ಎನ್ನುತ್ತಾರೆ ರಾಬಿ.

ಇಂಡಿಯಾ ಬುಕ್‌ ಆಫ್ ರೆಕಾರ್ಡ್‌
ಈ ಸಿನಿಮಾ ಹಲವು ದಾಖಲೆಗೆ ಕಾರಣವಾಗುತ್ತಿದೆ. ಈಗಾಗಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾಗಿದೆ. ಇನ್ನುಳಿದಂತೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಹಾಗೂ ಗಿನ್ನಿಸ್‌ ದಾಖಲೆಗೂ ನೋಂದಣಿಯಾಗಿದೆ ಎಂಬುದು ವಿಶೇಷ. ಒನ್‌ ಟೇಕ್‌ ಸಿನಿಮಾ ಮಾಡಿದ ಬಳಿಕ ಯಾಕೆ ಈ ಚಿತ್ರವನ್ನು ದಾಖಲು ಮಾಡಬಾರದು ಎಂಬ ಪ್ರಶ್ನೆ ಎದುರಾದ ಬಳಿಕ ನಿರ್ದೇಶಕರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಕಳುಹಿಸಿದ್ದಾರೆ.

ಎಲ್ಲಾ ದಾಖಲೆ ಪರಿಶೀಲಿಸಿದ ಬಳಿಕ ಅಲ್ಲಿಂದ ಗ್ರೀನ್‌ ಸಿಗ್ನಲ್‌ ಸಿಕ್ಕೆ ಎನ್ನುವ ತಂಡ ಇದೊಂದು, ಕ್ರೌರ್ಯದ ಜೊತೆ ಪ್ರೀತಿಯ ಅಂಶಗಳನ್ನು ಹೊಂದಿದೆ. ನಾಯಕ ವಿಕ್ರಮಾದಿತ್ಯ ಅವರಿಗೆ ಇದೊಂದು ಒಳ್ಳೆಯ ಅವಕಾಶ. ನಮ್ಮಂತಹ ಕಿರಿಯರಿಗೆ, ರಂಗಭೂಮಿ ಕಲಾವಿದರನ್ನ ಗುರುತಿಸಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂಬುದು ಅವರ ಮಾತು. ಇನ್ನು, ನಾಯಕಿ ಶಿವಾನಿ ಕೂಡ ತಮ್ಮ ಪಾತ್ರದ ಕುರಿತು ಹೇಳಿಕೊಂಡು ಖುಷಿಗೊಳ್ಳುತ್ತಾರೆ. ನಿರ್ಮಾಪಕ ಲೋಹಿತ್ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು. ಪ್ರಜೋತ್‌ ಡೇಸಾ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರದಲ್ಲಿ ಮಾಣಿಕ್ಯ.ಜಿ.ಎನ್, ವಿನೋಧ್‌ಕುಮಾರ್ ಇತರರು ಇದ್ದಾರೆ.

error: Content is protected !!