Categories
ಸಿನಿ ಸುದ್ದಿ

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ… ಹಾಡಿಗೆ ಬಾಲಿವುಡ್‌ ಲೆಜೆಂಡ್ರಿ ರವೀಂದ್ರ ಜೈನ್‌ ಧ್ವನಿ ಹುಟ್ಟುಹಬ್ಬಕ್ಕೆ ಆನಂದ್‌ ಆಡಿಯೋ ಹೊರತಂದ ಜನಪ್ರಿಯ ಗೀತೆ!

“ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…ಇನ್ನೇನು ಬಿಡುವುದು ಬಾಕಿ ಇದೆ… ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ, ಎದ್ದೋಗು ಕೊನೆ ಬಸ್ಸು ಟೈಮಾಗಿದೆ…”
– ಬಹುಶಃ ಈ ಹಾಡನ್ನು ಕೇಳದವರಿಲ್ಲ. ಕರ್ನಾಟಕದ ಕನ್ನಡಿಗರು ಮಾತ್ರವಲ್ಲ, ಸಾಗರದಾಚೆ ಇರುವ ಕನ್ನಡಿಗರೂ ಈ ಹಾಡನ್ನು ಕೇಳಿ, ಕಣ್ತುಂಬಿಕೊಂಡವರಿಗೆ ಲೆಕ್ಕವಿಲ್ಲ. ಎಷ್ಟೋ ಮಂದಿ ಈ ಹಾಡು ಕೇಳಿ ತಮ್ಮೂರಿಗೆ ಹೋಗಿದ್ದುಂಟು. ಇಷ್ಟಕ್ಕೂ ಈ ಹಾಡಿನ ಬಗ್ಗೆ ಈಗ ಯಾಕೆ ಪ್ರಸ್ತಾಪ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಹಾಡು ದಿಗಂತ್‌ ಅಭಿನಯದ “ಪರಪಂಚ” ಸಿನಿಮಾದ್ದು. ಕ್ರಿಶ್‌ ಜೋಶಿ ನಿರ್ದೇಶನವಿದೆ. ಇನ್ನು ಈ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯವಿದೆ. ಅವರ ಸಾಹಿತ್ಯಕ್ಕೆ ಅದ್ಭುತ ರಾಗ ಸಂಯೋಜನೆ ಮಾಡಿದ್ದು, ಸಂಗೀತ ನಿರ್ದೇಶಕ ವೀರ್‌ ಸಮರ್ಥ್.‌ ಈ ಹಾಡನ್ನು ಹುಚ್ಚವೆಂಕಟ್‌ ಅವರ ಧ್ವನಿಯಲ್ಲಿ ಬಹುತೇಕ ಮಂದಿ ಕೇಳಿದ್ದುಂಟು. ಆದರೆ, ಅದರ ಹಿಂದೊಂದು ಸತ್ಯವಿದೆ. ಹುಚ್ಚ ವೆಂಕಟ್‌ ಅವರಿಗೂ ಮೊದಲು ವೀರ್‌ ಸಮರ್ಥ್‌ ಅವರು ಬಾಲಿವುಡ್‌ನ ದಂತಕತೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಹಾನ್‌ ವ್ಯಕ್ತಿ ಪದ್ಮಶ್ರೀ ರವೀಂದ್ರ ಜೈನ್‌ ಅವರಿಂದ ಹಾಡಿಸಿದ್ದರು ಅನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಹೌದು, ವೀರ್‌ ಸಮರ್ಥ್‌ ಅವರು “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ” ಹಾಡನ್ನು ಬಾಲಿವುಡ್‌ನ ಖ್ಯಾತ ಗೀತಸಾಹಿತಿ, ಹಿಂದೂಸ್ತಾನಿ ಸಂಗೀತ ನಿರ್ದೇಶಕ ರವೀಂದ್ರ ಜೈನ್‌ ಅವರಿಂದ ಹಾಡಿಸಿದ್ದರು. ಆದರೆ, ಕಾರಣಾಂತರಗಳಿಂದ “ಪರಪಂಚ” ಚಿತ್ರಕ್ಕೆ ರವೀಂದ್ರ ಜೈನ್‌ ಅವರ ಹಾಡನ್ನು ಬಳಸಿಕೊಳ್ಳಲಾಗಿಲ್ಲ. ಆದರೆ, ರವೀಂದ್ರ ಜೈನ್‌ ಅವರು ಹಾಡಿರುವ ಈ ಹಾಡನ್ನು ಆನಂದ್‌ ಆಡಿಯೋ ಫೆ.೨೮ರಂದು ಬಿಡುಗಡೆ ಮಾಡಿದೆ. ಅದಕ್ಕೆ ಕಾರಣ, ಫೆಬ್ರವರಿ 28ರಂದು ರವೀಂದ್ರ ಜೈನ್‌ ಅವರ ಹುಟ್ಟುಹಬ್ಬ. ಅವರ 77 ನೇ ಹುಟ್ಟುಹಬ್ಬದ ಸವಿನೆನಪಿಗೆ ಆನಂದ್‌ ಆಡಿಯೋ ಅವರನ್ನು ಸ್ಮರಿಸಿ, ರವೀಂದ್ರ ಜೈನ್‌ ಅವರ ಧ್ವನಿಯಲ್ಲಿ ಮೂಡಿಬಂದಿರುವ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…” ಹಾಡನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.


ಈ ಕುರಿತಂತೆ, ಸಂಗೀತ ನಿರ್ದೇಶಕ ವೀರ್‌ಸಮರ್ಥ್‌ ಅವರು “ಸಿನಿಲಹರಿ” ಜೊತೆ ಮಾತನಾಡಿ, ತಮ್ಮ ಗುರು ರವೀಂದ್ರ ಜೈನ್‌ ಅವರನ್ನು ಗುಣಗಾನ ಮಾಡಿದ್ದಾರೆ. “ನಾನು ಸಂಗೀತ ನಿರ್ದೇಶಕ ಆಗಿದ್ದೇನೆ ಅಂದರೆ ಅದಕ್ಕೆ ನನ್ನ ಗುರು ರವೀಂದ್ರ ಜೈನ್‌ ಅವರೇ ಕಾರಣ. ಅವರು ನನಗೆ ಸಂಗೀತ ಕಲಿಸಿ, ಅವರೊಟ್ಟಿಗೆ ಐದು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ಕಲ್ಪಿಸಿದವರು. ಮೂಲತಃ ಹಿಂದೂಸ್ತಾನಿ ಸಂಗೀತಗಾರರಾಗಿರುವ ಅವರು ಸುಮಾರು 200 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಗೀತ ಸಾಹಿತಿಯಾಗಿ ದೊಡ್ಡ ಹೆಸರು ಪಡೆದವರು. ನಾನು ಸಂಗೀತ ನಿರ್ದೇಶಕನಾದ ಬಳಿಕ, ಒಂದೊಮ್ಮೆ ಅವರು ನಿನ್ನ ರಾಗ ಸಂಯೋಜನೆಯಲ್ಲೊಂದು ಹಾಡು ಹಾಡ್ತೀನಿ. ಕನ್ನಡದ ಮೊದಲ ಹಾಡು ಅದಾಗಿರಬೇಕು ಅಂದಿದ್ದರು. ಹಾಗಾಗಿ, ನಾನು ಒಳ್ಳೆಯ ಸಾಹಿತ್ಯ, ರಾಗ ಇದ್ದ ಕಾರಣ, “ಹುಟ್ಟಿದ ಊರನು” ಹಾಡನ್ನು ಅವರಿಂದಲೇ ಮುಂಬೈನ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದೆ. ತುಂಬಾನೇ ಅದ್ಭುತವಾಗಿ ಹಾಡಿದ್ದರು. ಆದರೆ, ಕಾರಣಾಂತರಗಳಿಂದ ಆ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಆಗಿರಲಿಲ್ಲ. ಅವರು ನನ್ನ ಹಾಡು ಹಾಡಿದ ಐದಾರು ತಿಂಗಳ ಬಳಿಕ ನಿಧನರಾದರು. ಅವರ ಹಾಡನ್ನು ಎಲ್ಲೂ ಹೊರತರಲು ಆಗಲಿಲ್ಲವಲ್ಲ ಎಂಬ ಬೇಸರ ನನಗೂ ಇತ್ತು. ಆದರೆ, ಫೆಬ್ರವರಿ ೨೮ರಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆನಂದ್‌ ಆಡಿಯೋ ಅವರ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಬಿಡುಗಡೆ ಮಾಡಿದೆ. ಆ ಮೂಲಕ ನಾವೆಲ್ಲ ಅವರನ್ನು ಸ್ಮರಿಸುತ್ತಿದ್ದೇವೆ” ಎಂದಿದ್ದಾರೆ ವೀರ್.

ವೀರ್‌ ಸಮರ್ಥ್‌ ಅವರು ಮುಂಬೈನಲ್ಲಿದ್ದಾಗ, ರವೀಂದ್ರ ಜೈನ್‌ ಬಳಿ ಕೆಲಸ ಮಾಡಿದ್ದರು. ಆರಂಭದ ದಿನಗಳಲ್ಲಿ ಅವರ ಜೊತೆ ಐದು ವರ್ಷ ಸಂಗೀತ ಕೆಲಸ ಕಲಿತು ದುಡಿದವರು. ಒಂದು ರೀತಿ ಅವರ ಮನೆಯಲ್ಲೇ ಇದ್ದು, ಮಗನಂತೆ ಇದ್ದವರು ವೀರ್. ಹಾಗೆ ನೋಡಿದರೆ ವೀರ್‌ ಅವರು‌ ಸಿನಿಮಾ ಸಂಗೀತ ಕಲಿತಿದ್ದು ರವೀಂದ್ರ ಜೈನ್‌ ಅವರಿಂದಲೇ. ಅವರ ಮೂಲಕವೇ ರೆಕಾರ್ಡ್‌ ಮಾಡೋದು ಕಲಿತರು, ಮೈಕ್‌ ಮುಂದೆ ನಿಂತು ಹಾಡೋದನ್ನೂ ಕಲಿತರು. ಬಾಲಿವುಡ್‌ನ ಲೆಜೆಂಡ್ರಿ ಸಂಗೀತ ನಿರ್ದೇಶಕ ಆಗಿದ್ದ ಅವರು, “ರಾಮ್‌ ತೇರಿ ಗಂಗಾ ಮೈಲಿ” ಸೇರಿದಂತೆ ಹಿಟ್‌ ಸಿನಿಮಾಗಳಿಗೆ ಹಾಡು ಕೊಟ್ಟ ಕೀರ್ತಿ ರವೀಂದ್ರ ಜೈನ್‌ ಅವರದು. ವೀರ್‌ ಸಮರ್ಥ್‌ ಅವರು ಯಾವಾಗ ಭೇಟಿ ಮಾಡಿದರೂ, ರವೀಂದ್ರ ಜೈನ್‌ ಅವರು, ನನಗೊಂದು ಹಾಡು ಮಾಡಪ್ಪ, ನಾನು ಕನ್ನಡದಲ್ಲಿ ಹಾಡ್ತೀನಿ ಅಂತ ಹೇಳುತ್ತಿದ್ದರಂತೆ. ಅವರ ಸಲುವಾಗಿ ಹಾಡು ಮಾಡಲು ಒಳ್ಳೆಯ ಸಾಹಿತ್ಯ, ರಾಗ ಎದುರು ನೋಡುತ್ತಿದ್ದ ವೀರ್‌, ದೊಡ್ಡ ಸ್ಕೇಲ್‌ನಲ್ಲೇ ರಾಗ ಸಂಯೋಜನೆ ಮಾಡುವ ಆಸೆ ಇಟ್ಟುಕೊಂಡಿದ್ದರು. ಹೈ ರೇಂಜ್‌ನಲ್ಲೇ ಅವರಿಂದ ಹಾಡಿಸಬೇಕು ಅಂದುಕೊಂಡಿದ್ದ ವೀರ್‌, “ಪರಪಂಚ” ಚಿತ್ರಕ್ಕೆ ಸಂಗೀತ ಮಾಡುವಾಗ, “ಹುಟ್ಟಿದ ಊರನು” ಹಾಡನ್ನು ಅವರಿಂದ ಹಾಡಿಸುವ ಯೋಚನೆ ಮಾಡಿದ್ದಾರೆ. ಬಳಿಕ ನಿರ್ದೇಶಕ ಕ್ರಿಶ್‌ ಜೋಶಿ ಬಳಿ ಮಾತಾಡಿದ ಬಳಿಕ ಯೋಗರಾಜ್‌ಭಟ್‌ ಜೊತೆಯಲ್ಲೂ ಚರ್ಚಿಸಿದ್ದಾರೆ. ಎಲ್ಲವೂ ಓಕೆ ಆದಾಗ, ಮುಂಬೈಗೆ ಹೋಗಿ ರವೀಂದ್ರ ಜೈನ್‌ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದಾರೆ. ಆದರೆ, ಕಾರಣಾಂತರ ಆ ಹಾಡು ರಿಲೀಸ್‌ ಆಗಲಿಲ್ಲ.  ಆ ನೋವು ವೀರ್‌ ಅವರಲ್ಲಿತ್ತು. ಇತ್ತೀಚೆಗೆ ಆ ಹಾಡನ್ನು ಬಿಡುಗಡೆ ಮಾಡುವ ಬಗ್ಗೆಯೂ ನಿರ್ದೇಶಕರ ಜೊತೆ ಮಾತಾಡಿದ್ದರು. ಆನಂದ್‌ ಆಡಿಯೋ ಜೊತೆ ಮಾತಾಡಿದಾಗ, ಫೆ.೨೮ರಂದು ಅವರ ಹುಟ್ಟುಹಬ್ಬ ಇದ್ದುರಿಂದ, ಬಿಡುಗಡೆ ಮಾಡಲಾಗಿದೆ. ಸದ್ಯ ಆ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ಫೆ.28ರಿಂದ ಬಿಗ್‌ಬಾಸ್‌ ಮನೆಯೊಳಗಿನ ಆಟ ಶುರು! ಈ ಬಾರಿ ರಾಜಕಾರಣಿ ಜೊತೆ ಯಾರೆಲ್ಲಾ ಇರ್ತಾರೆ?

ಬಹಳ ಕುತೂಹಲದ ಬಿಗ್‌ಬಾಸ್‌ ಸೀಸನ್‌ -8ಕ್ಕೆ ಫೆಬ್ರವರಿ 28ರ ಸಂಜೆ ಅದ್ಧೂರಿ ಚಾಲನೆ ದೊರೆಯಲಿದೆ. ಈ ಕುರಿತು ಈಗಾಗಲೇ ಬಿಗ್‌ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಅವರು ಘೋಷಣೆ ಮಾಡಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್‌ ಬಾಸ್‌ ಸೀಸನ್‌-೮ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಹೋಗಲಿದ್ದಾರೆ ಅನ್ನೋದೇ ಗೌಪ್ಯ. ಆದರೂ, ಅವರು ಹೋಗ್ತಾರೆ, ಇವರು ಇರ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆವೆ.

ಈ ಬಾರಿ ಒಟ್ಟು 17 ಜನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ. ಎಲ್ಲರನ್ನೂ ಕ್ವಾರಂಟೈನ್‌ ಮಾಡಿಯೇ ಬಿಗ್‌ಬಾಸ್‌ ಮನೆಗೆ ಕಳುಹಿಸಲಾಗುತ್ತಿದೆ. ಸದ್ಯ, ಆ ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸುದೀಪ್‌ ಕೂಡ ತಯಾರಾಗಿದ್ದಾರೆ. ಕಲರ್ಸ್‌ ವಾಹಿನಿಯರ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌, ಒಂದಷ್ಟು ಮಾಹಿತಿ ಕೊಟ್ಟು, ಸ್ಪರ್ಧಿಗಳಿಗೆ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಹಾಗೆಯೇ ತಾಂತ್ರಿಕ ವರ್ಗದವರನ್ನೂ ಕ್ವಾರಂಟೈನ್‌ ಮಾಡಲಾಗುತ್ತಿದೆ. ಈ ಸಲ ಒಬ್ಬ ರಾಜಕಾರಣಿಯೂ ಇರುತ್ತಾರೆ. ಉಳಿದಂತೆ ನಟ,ನಟಿಯರು, ಒಂದಷ್ಟು ಗುರುತಿಸಿಕೊಂಡ ವ್ಯಕ್ತಿಗಳೂ ಇಲ್ಲಿರಲಿದ್ದಾರೆ ಎಂದಷ್ಟೇ ವಿವರಿಸಿದ್ದಾರೆ. ಅದೇನೆ ಇರಲಿ, ಬಿಗ್‌ಬಾಸ್‌ -೮ರಲ್ಲಿ ಯಾರು ಇರುತ್ತಾರೆ ಅನ್ನುವ ಕುತೂಹಲಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ. ಫೆ.೨೮ರ ಭಾನುವಾರ ಕಲರ್ಸ್‌ ವಾಹಿನಿಯಲ್ಲಿ ಸಂಜೆ 6ಕ್ಕೆ ಅದ್ದೂರಿಯಾಗಿ ಕಾರ್ಯಕ್ರಮ ಶುರುವಾಗಲಿದೆ. ಪ್ರತಿ ರಾತ್ರಿ 8 ಗಂಟೆಯಿಂದ ೯ ರವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

Categories
ಸಿನಿ ಸುದ್ದಿ

ಐದು ಫಿಲ್ಮ್ ಫೆಸ್ಟಿವಲ್‌ಗೆ ಸಿಕ್ತು ದಾರಿ! ಕನ್ನಡ ಸಿನಿಮಾಗೆ ‌ಚಿತ್ರೋತ್ಸವದ ವೇದಿಕೆ; ವೈಕುಂಠಕೆ ದಾರಿ ಹಿಡಿದು ಸಂಭ್ರಮಿಸಿದರು…

ಕನ್ನಡ ಚಿತ್ರರಂಗ ಇದೀಗ ಬೇರೆ ಭಾಷಾ ಚಿತ್ರರಂಗಗಳಿಗೆ ಹೋಲಿಸಿದರೆ, ತುಸು ಗುಣಮಟ್ಟದ ಚಿತ್ರಗಳನ್ನೇ ಕೊಡುತ್ತ ಬಂದಿದೆ. ಅಷ್ಟೇ ಅಲ್ಲ, ಸಾಕಷ್ಟು ವಿಭಿನ್ನ ಸಿನಿಮಾಗಳ ಮೂಲಕ ಗಮನಸೆಳೆಯುತ್ತಿರುವುದು ಕೂಡ ಖುಷಿಯ ವಿಚಾರ. ಈಗಾಗಲೇ ಕನ್ನಡದ ಬಹುತೇಕ ಸಿನಿಮಾಗಳು ಈಗ ಗಡಿ ದಾಟಿವೆ, ಸಾಗರದಾಚೆಯೂ ಹೋಗಿವೆ. ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲೂ ಆಯ್ಕೆಯಾಗಿ, ಮೆಚ್ಚುಗೆ ಪಡೆದಿವೆ.

ಈಗ ಅಂಥದ್ದೊಂದು ಖುಷಿ ವಿಚಾರಕ್ಕೆ ಕನ್ನಡ ಸಿನಿಮಾವೊಂದು ಕಾರಣವಾಗಿದೆ. ಹೌದು, ಆ ಕನ್ನಡ ಸಿನಿಮಾ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಅದು “ದಾರಿ ಯಾವುದಯ್ಯ ವೈಕುಂಠಕೆ”. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಚಿತ್ರ ಸದ್ಯ ಸುದ್ದಿ ಮಾಡುತ್ತಿದ್ದು, ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವ, ನಾವ್ಡ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಲರ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌, ಬೆಟ್ಟಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಇಂಡಿಯನ್‌ ವರ್ಲ್ಡ್‌ ಫಿಲ್ಮ್‌ ಫೆಸ್ಟಿವಲ್‌ಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಇಷ್ಟರಲ್ಲೇ ಆಯಾ ಚಿತ್ರೋತ್ಸವದ ಜ್ಯೂರಿಗಳು ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಈ ಚಿತ್ರದಲ್ಲಿ ವರ್ಧನ್‌ ತೀರ್ಥಹಳ್ಳಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡ, ಸ್ಪಂದನಾ ನೀನಾಸಂ, ಪ್ರಯಣಮೂರ್ತಿ ಸೇರಿದಂತೆ ಹಲವರು ಇದ್ದಾರೆ. ಚಿತ್ರದ ಒನ್‌ಲೈನ್‌ ಸ್ಟೋರಿ ಬಗ್ಗೆ ಹೇಳುವುದಾದರೆ, ಒಬ್ಬ ಕೊಲೆಗಾರ, ಕಳ್ಳ, ದೊಡ್ಡ ಕ್ರಿಮಿನಲ್‌ ವ್ಯಕ್ತಿಗೆ ಭಾವನೆಗಳ ಸ್ಪರ್ಶ ಕೊಟ್ಟರೆ, ಅವನು ಹೇಗೆ ಬದಲಾಗುತ್ತಾನೆ ಅನ್ನುವುದರ ಮೇಲೆ ಕಥೆ ಸಾಗುತ್ತದೆ.

ಇಡೀ ಚಿತ್ರದ ಚಿತ್ರೀಕರಣ ಸ್ಮಶಾನ ಮತ್ತು ಒಂದು ಹಳ್ಳಿ, ಒಂದು ಮನೆಯಲ್ಲಿ ನಡೆಯುತ್ತದೆ. ಸುಮಾರು ೩೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೊಂದು ವಿಭಿನ್ನ ಕಥಾಹಂದರವಾಗಿದ್ದು, ಇಲ್ಲಿರುವ ಪ್ರತಿ ಪಾತ್ರಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ವರ್ಧನ್‌ ತೀರ್ಥಹಳ್ಳಿ ಅವರಿಗೆ ಇದೊಂದು ವಿಶೇಷ ಚಿತ್ರವಂತೆ. “ಸಿನಿಲಹರಿ” ಜೊತೆ ಮಾತನಾಡಿದ ವರ್ಧನ್‌ ತೀರ್ಥಹಳ್ಳಿ, “ನಾನು ಇದುವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ.

ಅದರಲ್ಲಿ ಹೆಚ್ಚು ನೆಗೆಟಿವ್‌ ಶೇಡ್‌ ಪಾತ್ರಗಳೇ. ಆಕ್ಷನ್‌ ಜೊತೆ ಬಂದ ಪಾತ್ರಗಳನ್ನು ಕೂಡ ನಿರ್ವಹಿಸಿದ್ದೇನೆ. ಆದರೆ, ನನಗೆ ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಅಂತಹ ಪಾತ್ರಗಳಿಗೆ ಎದುರು ನೋಡುತ್ತಿದ್ದೆ. ಅದೀಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾ ಮೂಲಕ ಸಿಕ್ಕಿದೆ. ಅದು ನನ್ನ ಅದೃಷ್ಟ.‌ ನನ್ನದು ರಫ್‌ ಲುಕ್. ಅದಕ್ಕೆ ಬೇರೆ ರೀತಿಯದ್ದೇ ಆಯ್ಕೆ ಇರುತ್ತೆ.

ಈ ಚಿತ್ರದ ಪಾತ್ರ ಕೂಡ ನನಗೆ ಸರಿಹೊಂದಿದ್ದರಿಂದ, ಅದು ನನ್ನ ಪಾಲಾಯಿತು. ಒಬ್ಬ ಕ್ರಿಮಿನಲ್‌ ಆಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಕ್ರಿಮಿನಲ್‌ಗೂ ಹೃದಯ ಇರುತ್ತೆ, ಅವನಲ್ಲೂ ಭಾವನೆಗಳಿರುತ್ತವೆ, ಅವು ಗರಿಗೆದರಿದಾಗ ಅವನು ಹೇಗೆ ರಿಯಾಕ್ಟ್‌ ಮಾಡ್ತಾನೆ ಅನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಆ ಪಾತ್ರ ಮಾಡಿದ್ದಕ್ಕೆ ನನಗೆ ಖುಷಿ ಇದೆ. ಅದರಲ್ಲೂ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಚಿತ್ರ ಆಯ್ಕೆಯಾಗಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ ಎನ್ನುತ್ತಾರೆ ವರ್ಧನ್‌ ತೀರ್ಥಹಳ್ಳಿ.


ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಈ ಹಿಂದೆ, ಇವರು, “ಕೃಷ್ಣ ಗಾರ್ಮೆಂಟ್ಸ್‌” ಚಿತ್ರ ನಿರ್ದೇಶಿಸಿದ್ದರು. ಶರಣಪ್ಪ ಎಂ.ಕೊಟಗಿ ಅವರಿಗೆ ಇದು ಮೊದಲ ಚಿತ್ರ. ಸಿನಿಮಾಗೆ ನಿತಿನ್‌ ಕ್ಯಾಮೆರಾ ಹಿಡಿದರೆ, ಲೋಕಿ ಸಂಗೀತವಿದೆ. ಮುತ್ತುರಾಜ್‌ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಾಮಘಡದಲ್ಲೊಂದು ಅವಘಡ! ಹೊಸಬರು ಹೇಳ ಹೊರಟ ಥ್ರಿಲ್ಲಿಂಗ್‌ ಸ್ಟೋರಿ

ಪೋಸ್ಟರ್‌ ನೋಡಿದವರಿಗೆ ಅದು ಮೂವರು ದರೋಡೆಕೋರರ ಕಥೆಯೇ ಎಂಬ ಪ್ರಶ್ನೆ ಮೂಡುತ್ತೆ. ಯಾಕೆಂದರೆ, ಮೂವರ ಕೈಯಲ್ಲಿ ಬಂದೂಕು ಇದೆ. ಹಾಗಂತ, ಅವರನ್ನು ದರೋಡೆಕೋರರು ಅಂತ ಹೇಳುವುದೂ ಕಷ್ಟ. ಅದೇನೆ ಇದ್ದರೂ, ಸಿನಿಮಾ ಬರುವವರೆಗೂ ಕಾಯಲೇಬೇಕು

ಕನ್ನಡದಲ್ಲಿ ಸದ್ಯಕ್ಕೆ ಹೊಸಬರ ಚಿತ್ರಗಳದ್ದೇ ಹವಾ. ಸ್ಟಾರ್‌ ಸಿನಿಮಾಗಳೊಂದಿಗೆ ಹೊಸಬರೂ ಒಂದಷ್ಟು ಜೋರು ಸುದ್ದಿ ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಕನ್ನಡದಲ್ಲಿ ಸ್ಟಾರ್‌ ಸಿನಿಮಾಗಳಿಗಿಂತ ಹೊಸಬರ ಚಿತ್ರಗಳ ಸಂಖ್ಯೆಯೇ ಹೆಚ್ಚು. ಲಾಕ್‌ಡೌನ್‌ ಬಳಿಕ ಸಾಕಷ್ಟು ಹೊಸಬರು ಹೊಸ ಕಥೆಗಳೊಂದಿಗೆ ಒಂದಷ್ಟು ಭರವಸೆಯೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆ ಸಾಲಿಗೆ “ಥಗ್ಸ್‌ ಇನ್‌ ರಾಮಘಡ” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಈ ಚಿತ್ರದ ಮೂಲಕ ಅಶ್ವಿನ್‌ ಹಾಸನ್‌ ಅವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹಾಗೆ ಹೇಳುವುದಾದರೆ, ಅಶ್ವಿನ್‌ ಹಾಸನ್‌ ಮತ್ತು ಚಂದನ್‌ ರಾಜ್‌ ಕೂಡ  ಇಲ್ಲಿ ಒಂದರ್ಥದಲ್ಲಿ ಹೀರೋಗಳೇ . ಆದರೆ, ಅಶ್ವಿನ್‌ ಹಾಸನ್‌ ಹೇಳುವ ಪ್ರಕಾರ,  ನಾನಿಲ್ಲಿ  ಹೀರೋ ಅಲ್ಲ. ಇಲ್ಲಿರುವ ಕಥೆ, ಪಾತ್ರವೇ ಹೀರೋ ಅನ್ನುತ್ತಾರೆ ಅವರು.

ಇದೊಂದು ಹೊಸ ರೀತಿಯ ಕಥೆ. ಒಂದೂರಲ್ಲಿ ಮೂರು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಒಂದು ಸಸ್ಪೆನ್ಸ್-ಥ್ರಿಲ್ಲರ್‌ ಕಥಾಹಂದರ ಇದು ಹೊಂದಿದೆ. ದಟ್ಟ ಕಾಡಲ್ಲೇ ಚಿತ್ರದ ಶೂಟಿಂಗ್‌ ನಡೆಯಲಿದ್ದು, ಒಂದಷ್ಟು ವಿಶೇಷ ಅಂಶಗಳನ್ನು ಇಲ್ಲಿ ಹೇಳಲಾಗುತ್ತಿದೆ. ಅಂದಹಾಗೆ, ಈ ಚಿತ್ರಕ್ಕೆ ಕಾರ್ತಿಕ್‌ ಮರಳಭಾವಿ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಶಿವಸ್ವಾಮಿ ಮತ್ತು ಕಾರ್ತಿಕ್‌ ಮರಳಭಾವಿ ಇಬ್ಬರೂ ಸೇರಿ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಕೀರ್ತಿ ರಾಜ್‌ ನಿರ್ಮಾಣವಿದೆ. ಜೈ ಕುಮಾರ್‌ ಸಹ ನಿರ್ಮಾಪಕರು.

ಚಿತ್ರದಲ್ಲಿ ಅಶ್ವಿನ್‌ ಹಾಸನ್‌ ಅವರೊಂದಿಗೆ ಚಂದನ ರಾಜ್ ಕೂಡ ಹೀರೋ. ಉಳಿದಂತೆ ಮಹಾಲಕ್ಷ್ಮೀ  ಇತರರು ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಪೂಜೆ ನೆರವೇರಿದ್ದು, ನಿರ್ದೇಶಕ ಅಭಿಷೇಕ್‌ ಶೆಟ್ಟಿ ಅವರು ಕ್ಲಾಪ್‌ ಮಾಡಿ, ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಪೋಸ್ಟರ್‌ ನೋಡಿದವರಿಗೆ ಅದು ಮೂವರು ದರೋಡೆಕೋರರ ಕಥೆಯೇ ಎಂಬ ಪ್ರಶ್ನೆ ಮೂಡುತ್ತೆ.

ಯಾಕೆಂದರೆ, ಮೂವರ ಕೈಯಲ್ಲಿ ಬಂದೂಕು ಇದೆ. ಹಾಗಂತ, ಅವರನ್ನು ದರೋಡೆಕೋರರು ಅಂತ ಹೇಳುವುದೂ ಕಷ್ಟ. ಅದೇನೆ ಇದ್ದರೂ, ಸಿನಿಮಾ ಬರುವವರೆಗೂ ಕಾಯಲೇಬೇಕು. ಇನ್ನು, ಚಿತ್ರದ ಹಾಡುಗಳಿಗೆ ಸೂರಜ್ ಸಂಗೀತ ನೀಡಿದರೆ, ಮನು ದಾಸಪ್ಪ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ.


ಅಶ್ವಿನ್‌ ಹಾಸನ್‌ ಅವರು, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಒಂದಷ್ಟು ಪ್ರಮುಖ ಪಾತ್ರಗಳನ್ನು ನಿರ್ವಹಿಸಿ, ಗುರುತಿಸಿಕೊಂಡಿದ್ದಾರೆ. ಈಗ “ಥಗ್ಸ್‌ ಇನ್‌ ರಾಮಘಡ” ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ, ಚಿತ್ರದ ಜವಾಬ್ದಾರಿಯನ್ನೇ ಹೊತ್ತುಕೊಂಡಿದ್ದಾರೆ. ಗೆಳೆಯರು ಸೇರಿ ಮಾಡುತ್ತಿರುವ ಸಿನಿಮಾ ಆಗಿರುವುದರಿಂದ, ಅಶ್ವಿನ್‌ ಹಾಸನ್‌ ಅವರಿಗೆ ಇದೊಂದು ಹೆಮ್ಮೆ. ಅದರಲ್ಲೂ, ತುಂಬಾ ಚೆನ್ನಾಗಿಯೇ ಸಿನಿಮಾವನ್ನು ಕಟ್ಟಿಕೊಡಬೇಕು, ಕನ್ನಡದಲ್ಲಿ ಭಿನ್ನ ಸಿನಿಮಾ ಎಂದೆನಿಸಿಕೊಳ್ಳಬೇಕು ಎಂಬ ಆಸೆ ಅವರದು. ಆ ನಿಟ್ಟಿನಲ್ಲಿ ಒಂದೊಳ್ಳೆಯ ತಂಡದ ಜೊತೆ ಸೇರಿ ಸಿನಿಮಾ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ನನ್ನ ಸೆಲಿಬ್ರಿಟಿಗಳಿಂದ ತಪ್ಪಾಗಿದ್ದರೆ ಸಾರಿ‌ ಸರ್!‌ ಹೀಗಂತ ದರ್ಶನ್ ಜಗ್ಗೇಶ್‌ಗೆ ಕ್ಷಮೆ ಕೋರಿ ದೊಡ್ಡೋರಾದರು!!

ಜಗ್ಗೇಶ್‌ ಅವರ ಮೇಲೆ ಇತ್ತೀಚೆಗೆ ದರ್ಶನ್‌ ಫ್ಯಾನ್ಸ್‌ ಮುಗಿಬಿದ್ದದ್ದು ದೊಡ್ಡ ಸುದ್ದಿಯಾಗಿದ್ದ ಬೆನ್ನಲ್ಲೇ ದರ್ಶನ್‌ ಅವರು ಜಗ್ಗೇಶ್‌ ಅವರಿಗೆ ಸಾರಿ ಕೇಳಿದ್ದಾರೆ! ಅಷ್ಟೇ ಅಲ್ಲ, ಆ ಮೂಲಕ ಅವರು ದೊಡ್ಡತನವನ್ನೂ ಮೆರೆದಿದ್ದಾರೆ. ಹೌದು, ಜಗ್ಗೇಶ್‌ ಅವರು ದರ್ಶನ್‌ ಅವರ ಅಭಿಮಾನಿಗಳ ಬಗ್ಗೆ ಇತ್ತೀಚೆಗೆ ತುಂಬಾನೇ ಕೇವಲವಾಗಿ ಮಾತನಾಡಿದ್ದರು. ಆ ಮಾತು ದೊಡ್ಡ ಸುದ್ದಿಯಾಗಿ, ಎಲ್ಲೆಡೆ ವೈರಲ್‌ ಆಗಿತ್ತು. ಸಾಕಷ್ಟು ವಿವಾದಕ್ಕೀಡಾಗಿತ್ತು. ಜಗ್ಗೇಶ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಮಾತಾಡಿದ್ದರು.

ಅದು ಸಹಜವಾಗಿಯೇ ದರ್ಶನ್‌ ಅವರ ಫ್ಯಾನ್ಸ್‌ಗೆ ಬೇಸರವಾಗಿತ್ತು. ರೊಚ್ಚಿಗೆದ್ದ ದರ್ಶನ್‌ ಫ್ಯಾನ್ಸ್‌ , ಇತ್ತೀಚೆಗೆ ಜಗ್ಗೇಶ್‌ ಅಭಿನಯದ “ತೋತಾಪುರಿ” ಚಿತ್ರದ ಚಿತ್ರೀಕರಣ ನಡೆಯುವ ವೇಳೆ ದಿಢೀರನೆ ದರ್ಶನ್‌ ಫ್ಯಾನ್ಸ್‌ ಮುತ್ತಿಗೆ ಹಾಕಿ ಆಕ್ರೋಶಗೊಂಡಿದ್ದರು. ಜಗ್ಗೇಶ್‌ ಕೂಡ ಅದರಿಂದ ಕಕ್ಕಾಬಿಕ್ಕಿಯಾಗಿದ್ದರು. ಮರುದಿನ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದರು. ಆದರೆ, ದರ್ಶನ್‌ ಮಾತ್ರ ಜಗ್ಗೇಶ್‌ ಅವರ ಮಾತಿಗೆ ಯಾವುದೇ ಉತ್ತರ ನೀಡಿರಲಿಲ್ಲ. ಜಗ್ಗೇಶ್‌ ಮಾತಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ, ವಾಹಿನಿಯೊಂದರ ಮುಂದೆ ಪ್ರತಿಕ್ರಿಯಿಸಿರುವ ದರ್ಶನ್‌, “ನೋಡಿ, ಇದು ಎಲ್ಲಿಂದ ಎಲ್ಲಿಗೆ ಸ್ಪ್ರೆಡ್‌ ಆಯ್ತು ನನಗೆ ಗೊತ್ತಿಲ್ಲ. ಅಲ್ಲೀ ಏನಾಯ್ತು ಅನ್ನೋದು ಗೊತ್ತಿಲ್ಲ. ಬಟ್‌ ಒಂದು ನನ್ನ ಸೆಲಿಬ್ರಿಟಿಗಳಿಂದ ಅವರಿಗೆ ಬೇಜಾರಾಗಿದ್ದರೆ ನನ್‌ ಸೆಲಿಬ್ರಿಟಿಗಳ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಅವರು ಸೀನಿಯರ್.‌ ದಯವಿಟ್ಟು ಕ್ಷಮಿಸಿಬಿಡಿ ಜಗ್ಗೇಶ್‌ ಸಾರ್.‌ ಅವರು ದೊಡ್ಡೋರು” ಅಂತ ಹೇಳುವ ಮೂಲಕ ನಿಜಕ್ಕೂ ದೊಡ್ಡತನ ಮೆರೆದಿದ್ದಾರೆ ದರ್ಶನ್.‌


ಜಗ್ಗೇಶ್‌ ಅವರು ಇತ್ತೀಚೆಗೆ ಮಾತನಾಡುವಾಗ, “ಎಂಥಾ ಟೈಮಲ್ಲಿ ಅವರ ಪರ ನಾನಿದ್ದೆ. ಒಮ್ಮೆ ಪೊಲೀಸರು ಬರಿಗಾಲಲ್ಲಿ ನಿಲ್ಲಿಸಿದ್ದರು. ಆಗ ನಾನು ಅವರ ಜೊತೆಗಿದ್ದೆ. ಆಗೆಲ್ಲಾ ಆಗ ಯಾಕೆ ಅಭಿಮಾನಿಗಳು ಬರಲಿಲ್ಲ” ಎಂದು ಜಗ್ಗೇಶ್‌ ಮಾತಾಡಿದ್ದರು. ಆದರೆ, ದರ್ಶನ್‌ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದರೂ ಸುಮ್ಮನಿದ್ದರು. ಆದರೆ, ವಾಹಿನಿಯೊಂದರ ಜೊತೆ ಮಾತಾಡುವಾಗ, “ನಮ್‌ ಸೆಲಿಬ್ರಿಟಿಗಳಿಂದ ತಪ್ಪಾಗಿದ್ದರೆ ಕ್ಷಮಿಸಿ. ನಮ್ಮ ಸೆಲಿಬ್ರಿಟಿಗಳು ಹೋಗಿದ್ದು ಗೊತ್ತಿಲ್ಲ. ಅಲ್ಲಿ ಏನಾಯ್ತು ಅನ್ನೋದು ಗೊತ್ತಿಲ್ಲ. ಆದರೂ ಅವರು ನಮ್ಮ ಸೀನಿಯರ್.‌ ತುಂಬಾ ದೊಡ್ಡೋರು. ಅವರಿಗೆ ನಾನು ನಮ್‌ ಸೆಲಿಬ್ರಿಟಿಗಳ ಪರವಾಗಿ ಕ್ಷಮೆ ಕೇಳ್ತೀನಿ” ಎನ್ನುವ ಮೂಲಕ ದೊಡ್ಡತನ ಮೆರೆದಿದ್ದಾರೆ.
ಜಗ್ಗೇಶ್‌, ಅವರೂ ಸಹ ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಮೂಲಕ ಪದೇ ಪದೇ ಇಂಡಸ್ಟ್ರಿ ಹಾಳಾಗೋಯ್ತು, ಒಳರಾಜಕೀಯ ನಡೀತಾ ಇದೆ ಅಂತ ಹೇಳಿಕೊಂಡಿದ್ದರು. ಆದರೆ, ದರ್ಶನ್‌ ಮಾತ್ರ ಒಂದೇ ಮಾತಲ್ಲಿ ಉತ್ತರ ಕೊಡುವ ಮೂಲಕ ವಿವಾದಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಅದೇನೆ ಇದ್ದರೂ, ದರ್ಶನ್‌ ಅವರು ಅವರ ಫ್ಯಾನ್ಸ್‌ಗೆ ತುಂಬಾ ಇಷ್ಟ ಆಗೋದು, ಫ್ಯಾನ್ಸ್‌ಗಳನ್ನು ಸೆಲಿಬ್ರಿಟಿಗಳು ಎಂದು ಕರೆದಾಗ. ಈಗ ಅಭಿಮಾನಿಗಳನ್ನು ಸೆಲಿಬ್ರಿಟಿಗಳು ಅಂತ ಹೇಳಿ ಮತ್ತಷ್ಟು ಫಾನ್ಸ್‌ಗೆ ಇಷ್ಟವಾಗಿದ್ದಾರೆ.

 

ಮನಸು ಹಗುರವಾಯಿತು- ಧನ್ಯವಾದ ದರ್ಶನ್

ಜಗ್ಗೇಶ್‌ ಟ್ವೀಟ್‌ ಮೂಲಕ ದಚ್ಚುಗೆ ಧನ್ಯವಾದ 

ಹೀಗಂತ ನಟ ಜಗ್ಗೇಶ್‌, ಟ್ವೀಟ್‌ ಮಾಡಿದ್ದಾರೆ. ಯಾವಾಗ ದರ್ಶನ್‌ ಅವರು ವಾಹಿನಿಯೊಂದರ ಮೂಲಕ ಜಗ್ಗೇಶ್‌ ಅವರಿಗೆ ಕ್ಷಮೆ ಇರಲಿ ಅಂತ ಹೇಳಿಕೆ ಕೊಟ್ಟರೋ, ಆಗಲೇ, ಜಗ್ಗೇಶ್‌ ಅವರು ತಮ್ಮ ಟ್ವೀಟ್‌ ಮೂಲಕ ದರ್ಶನ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಟ್ವೀಟ್‌ನಲ್ಲಿ ” ಸಮಯ ಸಂದರ್ಭ, ವಿಷ ಘಳಿಗೆ, ಪ್ರೀತಿ ವಿಶ್ವಾಸಕ್ಕೆ, ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ, ಅಪನಂಬಿಕೆ ದೂರ ಸರಿದು, ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ.

ಕನ್ನಡಕ್ಕೆ ಒಗ್ಗಟ್ಟಿರಲಿ, ಧನ್ಯವಾದ ದಾಸ ದರ್ಶನ್. ಮನಸು ಹಗುರವಾಯಿತು. ಧನ್ಯವಾದ ಮಾಧ್ಯಮ ಮಿತ್ರರಿಗೆ, ಧನ್ಯವಾದ ಕನ್ನಡದ ಮನಗಳಿಗೆ, ಇನ್ನೆಂದೂ  ಇಂತಹ ದಿನ ಬರದಿರಲಿ” ಎಂದು ಟ್ವೀಟ್‌ ಮಾಡಿದ್ದಾರೆ.

 

Categories
ಗ್ಲಾಮರ್‌ ಕಾರ್ನರ್

ತಾಪಂಡರ ಸಿನಿಮಾ ಕೃಷಿ! ಪಡ್ಡೆಗಳ ಫೇವರೇಟ್‌ ಚೆಲುವೆಯ ನಗುಮೊಗದ ಹಾಡು


“ನನಮೇಲೆ ನನಗೀಗ ಅನುಮಾನ ಶುರುವಾಗಿದೆ…”
– ಇದು ತುಂಬಾ ಜನಪ್ರಿಯ ಗೀತೆ. ನಿರ್ದೇಶಕ ಕುಶಾಲ್‌ಗೌಡ ನಿರ್ದೇಶನದ “ಕನ್ನಡಕ್ಕಾಗಿ ಒಂದನ್ನು ಹೊತ್ತಿ” ಸಿನಿಮಾದಲ್ಲಿ ಅವರೇ ಗೀಚಿದ ಹಾಡಿದು. ಈ ಹಾಡು ಹಿಟ್‌ ಆದಷ್ಟು ಸಿನಿಮಾ ಹಿಟ್‌ ಆಗಲಿಲ್ಲ. ಆದರೆ, ಹಾಡಿನ ಮೂಲಕವೇ ಸಿನಿಮಾ ಬಗ್ಗೆ ಮಾತಾಡುವಂತಾಗಿದ್ದು ಸುಳ್ಳಲ್ಲ.

ಒಂದೊಳ್ಳೆಯ ಕಥೆ, ಚಿತ್ರಕಥೆ, ಮಾತುಕತೆ ಎಲ್ಲವನ್ನೂ ಒಳಗೊಂಡು ಈ ಚಿತ್ರ ಕನ್ನಡಿಗರಿಗೆ ಇಷ್ಟವಾಗಿದ್ದು ದಿಟ. ಈಗ ಈ ಚಿತ್ರದ ಬಗ್ಗೆ ಇಷ್ಟೊಂದ ಪೀಠಿಕೆ ಯಾಕೆ ಗೊತ್ತಾ? ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋದು ಕೃಷಿ ತಾಪಂಡ.

ಸದಾ ಹಸನ್ಮುಖಿಯಾಗಿರುವ ಕೃಷಿ ತಾಪಂಡ, ಪಡ್ಡೆ ಹುಡುಗರ ಹಾಟ್‌ ಫೇವರೇಟ್‌ ಕೂಡ ಹೌದು. ಅವರ ಸೋಶಿಯಲ್‌ ಮೀಡಿಯಾದಲ್ಲಿ ಗ್ಲಾಮರಸ್‌ ಫೋಟೋಗಳು ಒಂದಷ್ಟು ಸುದ್ದಿ ಮಾಡುತ್ತಿವೆ. “ಅಕಿರ”, “ಕಹಿ” ಸಿನಿಮಾಗಳಲ್ಲಿ ನಟಿಸಿದ್ದ ಕೃಷಿ ತಾಪಂಡ, ಮೆಲ್ಲನೆ ಬಿಗ್‌ಬಾಸ್‌ ಮನೆಗೂ ಎಂಟ್ರಿಯಾಗಿದ್ದರು.

ಸಾಕಷ್ಟು ನಗುವಲ್ಲೇ ಮೋಡಿ ಮಾಡುವ ಕೃಷಿತಾಪಂಡ, ಅವರೀಗ ಒಂದಷ್ಟು ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯಕ್ಕೆ ಒಂದಷ್ಟು ಫೋಟೋಗಳ ಝಲಕ್‌ ಇಲ್ಲಿದೆ.

Categories
ಸಿನಿ ಸುದ್ದಿ

ಬದಲಾವಣೆ ಬಯಸೋದಲ್ಲ, ನಾವು ಬದಲಾಗಬೇಕು… ಮುಂದುವರೆದ ಅಧ್ಯಾಯ ಡೈಲಾಗ್ ಟೀಸರ್‌ ಗೆ ಭರಪೂರ ಮೆಚ್ಚುಗೆ

ನಟ ಆದಿತ್ಯ ಅಭಿನಯದ “ಮುಂದುವರೆದ ಅಧ್ಯಾಯ” ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರ ಈಗ ಜೋರು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಚಿತ್ರದ ಡೈಲಾಗ್‌ ಟೀಸರ್.‌ ಹೌದು, ಚಿತ್ರದ ಡೈಲಾಗ್‌ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದು, ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆಯುತ್ತಿದೆ. ಬಾಲು ಚಂದ್ರಶೇಖರ್ ನಿರ್ದೇಶನದ ಮೊದಲ ಚಿತ್ರವಿದು. ಇನ್ನು ‌ಕಣಜ‌ ಎಂಟರ್ಪ್ರೈಸಸ್ ನಿರ್ಮಾಣದ ಈ ಚಿತ್ರಕ್ಕೆ ಆದಿತ್ಯ ಹೀರೋ.

ಉಳಿದಂತೆ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್‌, ಸಂದೀಪ್‌ ಕುಮಾರ್‌, ಅಜಯ್‌ ರಾಜ್‌, ಚಂದನ ಗಡ, ಆಶಿಕಾ ಸೋಮಶೇಖರ್‌, ವಿನಯ್‌ ಕೃಷ್ಣಸ್ವಾಮಿ, ವಿನೋದ್‌, ಶೋಭನ್‌ ಇತರರು ನಟಿಸಿದ್ದಾರೆ. ಅನೂಪ್ ಸೀಳಿನ್ ಹಿನ್ನಲೆ‌ ಸಂಗೀತವಿದೆ. ಜಾನಿ ನಿತಿನ್ ಸಂಗೀತ ನೀಡಿದ್ದಾರೆ. ದಿಲೀಪ್ ಛಾಯಾಗ್ರಹಣವಿದೆ. “ಉಗ್ರಂ” ಶ್ರೀಕಾಂತ್ ಸಂಕಲನ ಮಾಡಿದ್ದಾರೆ. ಚಿತ್ರ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 18ರಂದು ಬಿಡುಗಡೆಯಾಗಲಿದೆ.


ಸದ್ಯಕ್ಕೆ ಡೈಲಾಗ್‌ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತಿದೆ. ಅದಕ್ಕೆ ಕಾರಣ ಡೈಲಾಗ್ಸ್ ಹಾಗೂ ಹಿನ್ನಲೆ‌ ಸಂಗೀತ. ಅಲ್ಲಿರುವ ಒಂದಷ್ಟು ಡೈಲಾಗ್‌ ಬಗ್ಗೆ ಹೇಳುವುದಾದರೆ, “ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನ ಬೈತೀವಿ, ನಮ್ಮನ್ನ ಕಾಯೋ ಪೊಲೀಸರನ್ನ ಬೈತೀವಿ, ಸುದ್ದಿ ಮುಟ್ಟಿಸೋ ವಾಹಿನಿಗಳನ್ನ ಬೈತೀವಿ, ಕಷ್ಟ ನಿವಾರಿಸೋ ಡಾಕ್ಟರ್‌ಗಳನ್ನ ಬೈತೀವಿ, ಅನ್ನ ಹಾಕೋ ರೈತ, ಪಾಠ ಮಾಡೋ ಮೇಷ್ಟ್ರು , ಊಟ ಕೊಡೊ ಹೋಟ್ಲು, ಮನೆ ತಲುಪಿಸೋ ಡ್ರೈವರ್ , ನಮ್ಮನ್ನ ತಿದ್ದೋ ಕಲಾವಿದ ಹೀಗೆ … ಎಲ್ಲರನ್ನೂ ಬೈತಿವಿ. ಆದರೆ ನಾವೂ ಇವ್ರಲ್ಲೇ ಒಬ್ಬರಾಗಿದಿವಿ ಅನ್ನೋದೇ ಮರೀತಿವಿ. ಬದಲಾವಣೆ ಬಯಸುವುದಲ್ಲ. ನಾವು ಬದಲಾಗೋದು.

ಎಷ್ಟೋ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆ… ಈ ನನ್ನ ಮುಂದುವರೆದ ಅಧ್ಯಾಯ” ಹೀಗೆ ಸಾಗುವ ಡೈಲಾಗ್‌ ಟೀಸರ್‌ನಲ್ಲಿ ಒಂದಷ್ಟು ವಿಷಯವಿದೆ ಅನ್ನುವುದಂತೂ ನಿಜ. ಈ ಡೈಲಾಗ್‌ ಟೀಸರ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂಬಷ್ಟರಮಟ್ಟಿಗೆ ಕುತೂಹಲ ಮೂಡಿಸಿರುವುದಂತೂ ದಿಟ.

Categories
ಸಿನಿ ಸುದ್ದಿ

ಸಲಗ ಚಿತ್ರ ನೋಡ್ತೀನಿ ಅಂದ್ರು ತೇಜಸ್ವಿ ಸೂರ್ಯ – ಸಲಗ ತಂಡಕ್ಕೆ ಶುಭಕೋರಿದ ಸಂಸದ

“ದುನಿಯಾ” ವಿಜಯ್‌ ಅಭಿನಯಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಚಿತ್ರರಂಗದಲ್ಲಿ ಸದ್ಯಕ್ಕೆ ಪೋಸ್ಟರ್‌ ಮತ್ತು ಹಾಡುಗಳ ಮೂಲಕ ಎಲ್ಲೆಡೆ ನಿರೀಕ್ಷೆ ಹುಟ್ಟಿಸಿರುವ “ಸಲಗ” ಚಿತ್ರವನ್ನು ನೋಡಲು ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರೇ ಉತ್ಸುಕಗೊಂಡಿದ್ದಾರೆ.

ಹೌದು, ಇತ್ತೀಚೆಗೆ “ಸಲಗ” ಚಿತ್ರ ನಿರ್ದೇಶಕ “ದುನಿಯಾ” ವಿಜಯ್‌ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಅವರು ಸಂಸದ ತೇಜಸ್ವಿ ಸೂರ್ಯ‌ ಅವರನ್ನು ಭೇಟಿ ಮಾಡಿ ಒಂದಷ್ಟು ಚರ್ಚಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮದೇ ಕ್ಷೇತ್ರದಲ್ಲಿರುವ ದುನಿಯಾ ವಿಜಯ್ ಅವರ ಮನೆಗೆ ಇತ್ತೀಚೆಗಷ್ಟೇ, ಭೇಟಿ ನೀಡಿದ್ದರು. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರಿಗೆ ಬಹಳ‌ ಆತ್ಮೀಯರಾಗಿರುವ ತೇಜಸ್ವಿ ಸೂರ್ಯ, ಕ್ಷೇತ್ರದಲ್ಲಿ ರೌಂಡ್ಸ್ ಮಾಡುವ ವೇಳೆ “ದುನಿಯಾ” ವಿಜಯ್‌ ಅವರ ಮನೆಗೆ ಶ್ರೀಕಾಂತ್ ಜೊತೆಗೆ ಭೇಟಿ ನೀಡಿದ್ದಾರೆ.

“ಸಲಗ” ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿರುವ ತೇಜಸ್ವಿ ಅವರು, ಚಿತ್ರದ ಟೀಸರ್‌, ಟ್ರೇಲರ್‌ ಹಾಗು ಹಾಡುಗಳನ್ನೂ ನೋಡಿದ್ದಾರೆ. ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಸಿನಿಮಾ ನೋಡ್ತೀನಿ ಅಂತಾನೂ ಹೇಳಿದ್ದಾರೆ. “ದುನಿಯಾ” ವಿಜಯ್ ಅವರ ಚೊಚ್ಚಲ‌ ನಿರ್ದೇಶನಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ ತೇಜಸ್ವಿ ಸೂರ್ಯ.

Categories
ಸಿನಿ ಸುದ್ದಿ

ಶಿವರಾಜಕುಮಾರ್ ಸಿನಿರಂಗ ಸ್ಪರ್ಶಕ್ಕೆ 35- ಸಂಭ್ರಮಕ್ಕೆ ಶಿವಣ್ಣ ಪ್ರೀಮಿಯರ್ ಲೀಗ್ ಸೀಸನ್ 1

ಶಿವರಾಜಕುಮಾರ್‌ ಅವರು ಕನ್ನಡ ಸಿನಿಮಾರಂಗಕ್ಕೆ ಬಂದು ೩೫ ವರ್ಷಗಳು ಸಂದಿವೆ. ಈ ಮೂರುವರೆ ದಶಕವನ್ನು ಯಶಸ್ವಿಯಾಗಿ ಮುಗಿಸಿರುವ ಶಿವರಾಜಕುಮಾರ್‌ ಅವರಿಗೆ ಎಲ್ಲೆಡೆಯಿಂದಲೂ ಶುಭಾಶಯ ಹರಿದುಬಂದಿದೆ. ಈಗ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 35 ವರ್ಷ ಪೂರೈಸಿದ ಹಿನ್ನಲೆಯಲ್ಲಿಯೇ ಅವರ ಪ್ರೀತಿಯ ಅಭಿಮಾನಿಗಳು ಆ ಸಂಭ್ರಮದಲ್ಲೇ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದ್ದರು‌.

. “ಶಿವಣ್ಣ ಪ್ರೀಮಿಯರ್‌ ಲೀಗ್‌ ಸೀಸನ್‌ ೧” ಫೆಬ್ರವರಿ ೨೦ ಮತ್ತು ೨೧ರಂದು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ಅಂದಹಾಗೆ, ಶಿವ ಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಆಯೋಜಿಸಿದ್ದ ಈ ಟೂರ್ನಮೆಂಟ್‌ಗೆ ಅಭಿಮಾನಿಗಳು, ಸಿನಿಮಾ ತಂತ್ರಜ್ಞರು, ಕಲಾವಿದರು, ಸಿನಿಮಾ ತಂಡಗಳು, ಸಿನಿಮಾ ಪತ್ರಕರ್ತರು ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.

ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ರುಸ್ತುಂ ರೈಮ್ಸ್ ( ರೇಮ್ಸ್ ಸಿನೆಮಾ ತಂಡ) ವಿಜಯಶಾಲಿಯಾದರೆ, ರನ್ನರ್ ಅಪ್ ತಂಡವಾಗಿ ಶಿವಸೈನ್ಯ ಸ್ಪಾರ್ಟನ್ಸ್ (ಶಿವಣ್ಣ ಅಭಿಮಾನಿ ಸಂಘ) ಹೊರಹೊಮ್ಮಿದೆ. ಇನ್ನು, ಈ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಕೋರಿದ್ದು ಶಾಸಕ ವಿ.ಸೋಮಣ್ಣ, ಜೊತೆಯಲ್ಲಿ ಅರುಣ್ ಸೋಮಣ್ಣ ಹಾಗೂ ಉಮೇಶ್ ಶೆಟ್ಟಿ ಕೂಡ ಪಂದ್ಯಾವಳಿಗೆ ಸಾಥ್‌ ಕೊಟ್ಟರು.

ಇಡೀ ಟೂರ್ನಮೆಂಟ್ ನಲ್ಲಿ ಮೊದಲ ದಿನದಿಂದ ಕೊನೆ ಕ್ಷಣದವರೆಗೂ ಜೊತೆ ಇದ್ದು, ಎಲ್ಲಾ ವಿಚಾರಗಳಿಗೂ ಸಾಥ್ ಕೊಟ್ಟಿದ್ದು ನಿರ್ಮಾಪಕ ಭಾ.ಮ. ಹರೀಶ್. ವಿಜಯನಗರದ ಬಿಜಿಎಸ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಧೀರನ್ ರಾಮ್ ಕುಮಾರ್, ದುನಿಯಾ ವಿಜಯ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ನಟಿ ಸುಮನ್ ನಗರ್ಕರ್ ಹೀಗೆ ಹಲವರು ಆಗಮಿಸಿ, ಕ್ರಿಕೆಟ್‌ ಪಂದ್ಯಾವಳಿ ವೀಕ್ಷಿಸಿ, ಯಶಸ್ವಿಗೊಳಿಸಿದರು.

Categories
ಸಿನಿ ಸುದ್ದಿ

ಬೆಣ್ಣೆ ನಗರಿ ಹುಡುಗಿ ಕೈಯಲ್ಲಿ ಶ್ಯಾನೆ ಸಿನಿಮಾಗಳು! ಆನ ಚಿತ್ರದ ಮೋಷನ್‌ ಪೋಸ್ಟರ್‌ಗೆ ಭರ್ಜರಿ ರೆಸ್ಪಾನ್ಸ್

ಕನ್ನಡ ಚಿತ್ರರಂಗಕ್ಕೆ ಬಂದ ಬೆರಳೆಣಿಕೆ ವರ್ಷಗಳಲ್ಲೇ ನಟಿ ಅದಿತಿ ಪ್ರಭುದೇವ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹಾಗಂತ ಬೇರೇನೋ ವಿಷಯದಲ್ಲಿ ಸುದ್ದಿ ಮಾಡಿದ್ದಾರೆ ಅಂತಲ್ಲ. ಅವರೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಸದ್ಯ ಅವರ ಅಭಿನಯದ “ಆನ” ಸಿನಿಮಾದ ಮೋಷನ್‌ ಪೋಸ್ಟರ್‌ ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್‌ ಆಗುತ್ತಿದೆ. ಎಲ್ಲೆಡೆಯಿಂದಲೂ ಆ ಮೋಷನ್‌ ಪೋಸ್ಟರ್‌ಗೆ ಮೆಚ್ಚುಗೆ ಸಿಗುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ, ಅವರ ಅಭಿನಯ ಮತ್ತು ಸ್ಪಷ್ಟ ಭಾಷೆ. ಹೌದು, ಅದಿತಿ ಪ್ರಭುದೇವ ಹಾಗೆ ನೋಡಿದರೆ, ನಿರೂಪಕಿಯಾಗಿದ್ದವರು. ಚಂದದ ಮಾತುಗಳನ್ನು ಆಡುವ ಮೂಲಕವೇ ಅವರು ಕಿರುತೆರೆಯ ಗಮನಸೆಳೆದವರು. ಅಲ್ಲಿಂದ ಅವರು “ಗುಂಡ್ಯಾನ ಹೆಂಡತಿ” ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಆ ಬಳಿಕ “ನಾಗ ಕನ್ನಿಕೆ” ಧಾರಾವಾಹಿಯಲ್ಲೂ ಮಿಂಚಿದರು. ನಂತರದ ದಿನಗಳಲ್ಲಿ ಅವರು ಬೆಳ್ಳಿತೆರೆಗೆ ಬಡ್ತಿ ಪಡೆದು, ಅಜೇಯ್‌ರಾವ್‌ ಜೊತೆಗೆ “ಧೈರ್ಯಂ” ಸಿನಿಮಾಗೆ ನಾಯಕಿಯಾಗಿ ಕಾಣಿಸಿಕೊಂಡರು.

 

ಆ ಚಿತ್ರದ ಬಳಿಕ ಅದಿತಿ ಪ್ರಭುದೇವ ಹಿಂದಿರುಗಿ ನೋಡಿಲ್ಲ. ಅಷ್ಟರಮಟ್ಟಿಗೆ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. ಸಿನಿಮಾ ಮಂದಿಗಷ್ಟೇ ಅಲ್ಲ, ಪಡ್ಡೆ ಹುಡುಗರಿಗೂ ಅದಿತಿ ಪ್ರಭುದೇವ ಫೇವರೇಟ್‌ ನಾಯಕಿ ಎನಿಸಿಕೊಂಡರು. ಸದ್ಯಕ್ಕೆ ಎಸ್.ನಾರಾಯಣ್‌ ನಿರ್ದೇಶನದ “೫ಡಿ” ಸಿನಿಮಾದಲ್ಲಿ ಆದಿತ್ಯ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.


ಸದಾ ನಗುಮೊಗದ ಈ ಅದಿತಿಗೆ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿವೆ. ನೋಡ ನೋಡುತ್ತಿದ್ದಂತೆಯೇ ಕೆಲವು ನಟರ ಜೊತೆಗೆ ನಟಿಸುವ ಮೂಲಕ ಶ್ಯಾನೆ ಬಿಝಿಯಾಗಿಬಿಟ್ಟರು. ಈಗಾಗಲೇ “ಬ್ರಹ್ಮಚಾರಿ”, “ಬಜಾರ್”, “ಸಿಂಗ” ಸೇರಿದಂತೆ ಹಲವು ಹೊಸಬರ ಸಿನಿಮಾಗಳಲ್ಲೂ ಅದಿತಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕೈಯಲ್ಲಿರುವ ಸಿನಿಮಾಗಳ ಬಿಡುಗಡೆ ಎದುರು ನೋಡುತ್ತಿದ್ದಾರೆ ಅದಿತಿ.

error: Content is protected !!