ಹೌದು, ಸದ್ಯಕ್ಕೆ ಸಿನಿಮಾಗಳ ಬಿಡುಗಡೆಯ ಪರ್ವ ಶುರುವಾಗಿದೆ. ಇದಕ್ಕೂ ಮೊದಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಜೋರು ಸುದ್ದಿ ಮಾಡುತ್ತಿವೆ. ಇನ್ನು, ಕ್ರಿಕೆಟ್ ವಿಚಾರಕ್ಕೆ ಬಂದರೆ, ಸಿನಿಮಾರಂಗಕ್ಕೂ ಕ್ರಿಕೆಟ್ ಪಂದ್ಯಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಸಿನಿಮಾ ನಟರು ಕೂಡ ಕ್ರಿಕೆಟ್ ಮೇಲೆ ಹೆಚ್ಚು ಪ್ರೀತಿ ತೋರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೂಡ ಕ್ರಿಕೆಟ್ ಆಡೋಕೆ ಬ್ಯಾಟು-ಬಾಲು ಹಿಡಿಯುತ್ತಿರುವುದು ಹೊಸ ಬೆಳವಣಿಗೆಯೇನಲ್ಲ.
ಇತ್ತೀಚೆಗಷ್ಟೇ, ಶಿವರಾಜಕುಮಾರ್ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಫ್ಯಾನ್ಸ್ ಸೇರಿ ಕ್ರಿಕೆಟ್ ಲೀಗ್ ಆಯೋಜಿಸಿದ್ದರು. ಈಗ “ದುನಿಯಾ” ವಿಜಯ್ ಅಭಿಮಾನಿಗಳ ಸರದಿ. ಹೌದು, ಸದ್ಯಕ್ಕೆ “ಸಲಗ” ಚಿತ್ರದ ಬಗ್ಗೆ ಎಲ್ಲೆಡೆ ಹವಾ ಇದೆ. ಹೀಗಾಗಿ ರಾಜ್ಯದಾದ್ಯಂತ ವಿಜಯ್ ಅಭಿಮಾನಿಗಳಿಂದ ಕ್ರಿಕೆಟ್ ಅಭಿಯಾನ ಶುರುವಾಗಿದೆ. “ಸಲಗ” ಚಿತ್ರತಂಡ ಕ್ರಿಕೆಟ್ ಮೂಲಕ ವಿಶಿಷ್ಟವಾಗಿ ಸಿನಿಮಾ ಪ್ರಚಾರ ಮಾಡಲು ಹೊರಟಿದೆ. “ದುನಿಯಾ” ವಿಜಯ್ ಅಭಿಮಾನಿಗಳು ರಾಜ್ಯದಾದ್ಯಂತ “ಸಲಗ” ಕ್ರಿಕೆಟ್ ಕಪ್ ಸರಣಿಯನನು ಆಯೋಜಿಸಿದ್ದಾರೆ.
ಆ ಸರಣಿಗಳಲ್ಲಿ “ಸಲಗ” ಚಿತ್ರತಂಡವೂ ಒಂದು ತಂಡವಾಗಿ ಮೈದಾನಕ್ಕಿಳಿಯಲಿದೆ. ಇದರಿಂದಾಗಿ ಮಾರ್ಚ 7ರಂದು ಕೋಲಾರದ ಮಾಲೂರಿನಲ್ಲಿ “ಸಲಗ” ಕ್ರಿಕೆಟ್ ಕಪ್ ಸರಣಿ ನಡೆಯಲಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ, ಹೊಸಪೇಟೆ ಹಾಗೂ ಮೈಸೂರು ಸೇರಿದಂತೆ ರಾಜ್ಯದ ನಾನಾ ಊರುಗಳಲ್ಲಿ “ಸಲಗ” ಕಪ್ ನಡೆಯಲಿದೆ. ಇತ್ತೀಚೆಗೆ ನಡೆದ ಶಿವರಾಜಕುಮಾರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸರಣಿಯಲ್ಲಿ “ಸಲಗ” ಚಿತ್ರತಂಡ ಭಾಗವಹಿಸಿತ್ತು. ಪ್ರದರ್ಶನ ಪಂದ್ಯ ಆಡಿದ “ಸಲಗ” ಟೀಮ್ ಭರ್ಜರಿಯಾಗಿ ಗೆಲುವು ದಾಖಲಿಸಿತ್ತು. ಈಗ ಅದರ ವಿಡಿಯೋ ಕೂಡ ರಿಲೀಸ್ ಆಗಿದೆ.
ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್‌ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ದುಬೈನಲ್ಲಿ ಮಾರ್ಚ್ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ.
ಅನಂತ್‌ನಾಗ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅನಂತ್‌ನಾಗ್, ಇದೇ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೌದು, ತುಳು ಭಾಷೆಯಲ್ಲಿ ತಯಾರಾಗಿರುವ “ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ” ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದು ವಿಶೇಷ ಪಾತ್ರ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಈಗಾಗಲೇ ಚಿತ್ರೀಕರಣ ಪೂರೈಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಈ ಚಿತ್ರ, ಮಾರ್ಚ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂಬುದು ವಿಶೇಷತೆಗಳಲ್ಲೊಂದು.
ಹೌದು, ತುಳು ಚಿತ್ರರಂಗದಲ್ಲಿ ಬಹುನಿರೀಕ್ಷೆ ಇರುವ ಈ ಚಿತ್ರ ಮಂಗಳೂರು, ಉಡುಪಿ ಸೇರಿದಂತೆ ಗಲ್ಫ್ ಹಾಗು ವಿಶ್ವದ ನಾನಾ ಕಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇವರು “ಮಾರ್ಚ್ 22”, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”, “ಯಾನ” ಚಿತ್ರ ನಿರ್ಮಿಸಿದ್ದಾರೆ. ಕೆ.ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ತುಳು ಚಿತ್ರರಂಗದ ಹಾಸ್ಯ ದಿಗ್ಗಜರ ದಂಡೇ ಇದೆ. ಚಿತ್ರದ ಬಗ್ಗೆ ಹೇಳುವುದಾದರೆ, ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್‌ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲ, 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಮ್ಮೆಯೂ ಇದೆ. ದುಬೈನಲ್ಲಿ ಮಾರ್ಚ್ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ದುಬೈನಲ್ಲಿ ‘ವರ್ಲ್ಡ್ ಪ್ರೀಮಿಯರ್ ಶೋ’ ನಡೆದಿದ್ದು, ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ.
ಇನ್ನು ಚಿತ್ರದಲ್ಲಿ ಹಾಸ್ಯವೇ ಹೈಲೈಟ್ ಆಗಿದೆ. ಪಂಚಿಗ್ ಡೈಲಾಗ್‌ಗಳಿಗೆ ಹೆಚ್ಚು ಆದ್ಯತೆ ಇದೆ. ಚಿತ್ರದಲ್ಲಿ ತುಳು ರಂಗಭೂಮಿ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಇದ್ದಾರೆ. ಹೀರೋ ಆಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಅವರಿಗೆ ನಾಯಕಿಯಾಗಿ ನವ್ಯಾ ಪೂಜಾರಿ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ಸೂರಜ್ ಶೆಟ್ಟಿ ವಹಿಸಿಕೊಂಡರೆ, ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಕೃಷ್ಣ ಸಾರಥಿ ಹಾಗೂ ಅಭಿಲಾಷ್ ಕಲಾತಿ ಛಾಯಾಗ್ರಹಣವಿದೆ. ಮನು ಶೆಡ್ಗರ್ ಸಂಕಲನ ಮಾಡಿದ್ದಾರೆ. ಮಹೇಶ್ ಎನ್ಮೂರಿ ಅವರ ಕಲಾ ನಿರ್ದೇಶನವಿದೆ. ಅರ್ಜುನ್ ಲೆವಿಸ್, ಲೋಕು ಕುಡ್ಲ ಸಾಹಿತ್ಯವಿದೆ. “ಭಜರಂಗಿ” ಮೋಹನ್ ಅವರ ನೃತ್ಯ ನಿರ್ದೇಶನವಿದೆ.
“ಹಸಿವು ಮತ್ತು ದಾರಿದ್ರ್ಯ ಸಮಾಜಕ್ಕೊಂದು ಶಾಪ. ಅದರ ಜೊತೆ ಜಾತಿ ಕೂಡ ಮನುಕುಲದ ದುರಂತ…”
– ಇದು ನಿರ್ದೇಶಕ ಹಾಗೂ ಖ್ಯಾತ ಗೀತ ಸಾಹಿತಿ ಸುಧೀರ್ ಅತ್ತಾವರ್ ನಿರ್ದೇಶನದ “ಮಡಿ” ಚಿತ್ರದೊಳಗಿರುವ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕ. ಹೌದು, ಇಂಥದ್ದೊಂದು ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್ ಅತ್ತಾವರ್ ಅವರ “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ.
ಅಷ್ಟೇ ಅಲ್ಲ, ಬಾಲಿವುಡ್ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಈ “ಮಡಿ” ಇನ್ನೊಂದು ಹೊಸ ಸುದ್ದಿ ಹೊತ್ತು ಬಂದಿದೆ. “ಮಡಿ” ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫ಼ೆಸ್ಟಿವಲ್ (ರಿಫ಼್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಇಂದಿಗೂ ಅಸ್ಪೃಶ್ಯತೆ ಜೀವಂತ ಎಂಬುದಕ್ಕೆ ಕಣ್ಣೆದುರಿಗಿನ ಸಾಕ್ಷಿಯಂತಿರುವ “ಮಡಿ” ಚಿತ್ರ ಮಾರ್ಚ್ 20 ರಿಂದ 24ರವರೆಗೆ ನಡೆಯಲಿರುವ ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಸ್ಫರ್ಧಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಯಾವುದೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗುವ ಚಿತ್ರದೊಳಗಿರುವ ಕಥೆ ಗಟ್ಟಿಯಾಗಿರಬೇಕು. ಅಷ್ಟೇ ಸೂಕ್ಷ್ಮತೆಯಿಂದಲೂ ಕೂಡಿರಬೇಕು. “ಮಡಿ” ಆ ಎಲ್ಲಾ ತನವನ್ನು ಹೊಂದಿದ್ದರಿಂದಲೇ ಆಯ್ಕೆಯಾಗಿದೆ. ಅಂದಹಾಗೆ, ಇದೊಂದು ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಹಸಿವು, ದಾರಿದ್ರ್ಯ ಸಮಾಜಕ್ಕೊಂದು ಶಾಪ. ಅದರ ಜೊತೆ ಜಾತಿ ಕೂಡ ಮನುಕುಲದ ದುರಂತವೇ. “ಮಡಿ” ಚಿತ್ರದೊಳಗಿನ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ ಎಂಬುದನ್ನೂ ಇಲ್ಲಿ ಪರಿಗಣಿಸಲಾಗಿದೆ. ಅದರ ಜೊತೆಯಲ್ಲಿ ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ಬಿಂಬಿಸುವಂತಿವೆ.
ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆಹಿಡಿದಿದ್ದರಿಂದಲೇ ಈ ಚಿತ್ರ ಕೂಡ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಇನ್ನು, ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ವೇದಿಕೆ ಸಿಕ್ಕಂತಾಗಿದೆ. ಜೈಪುರ ಮತ್ತು ಜೋದ್‌ಪುರದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಜಗತ್ತಿನಾದ್ಯಂತ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ವರ್ಲ್ಡ್ ಸ್ಪರ್ಧಾ ವಿಭಾಗದಲ್ಲಿ ಸುಮಾರು 15 ಸಿನಿಮಾಗಳೊಂದಿಗೆ “ಮಡಿ” ಪ್ರತಿಷ್ಠಿತ ಪ್ರಶಸ್ತಿಗೆ ಸೆಣಸಾಡಲಿದೆ. ಮಾರ್ಚ್ 24ರಂದು ಜೈಪುರದ ಮಿರಾಜ್ ಸಿನಿಮಾಸ್ ಮತ್ತು ಜೋದ್‌ಪುರದ ಮಿರಾಜ್ ಬಯೋಸ್ಕೋಪ್ ಸಿನಿಮಾಹಾಲ್‌ನಲ್ಲಿ “ಮಡಿ” ಪ್ರದರ್ಶನವಾಗಲಿದೆ. ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ಚಾರ್ಲ್ಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಂಬೈನ ಸಕ್ಸಸ್ ಫಿಲಂಸ್ ಮತ್ತು ಸೂರಜ್ ವಿಷುವಲ್ಸ್ ಸಂಸ್ಥೆಗಳ ಬ್ಯಾನರ್ ಅಡಿ ಚಿತ್ರ ತಯಾರಾಗಿದೆ.
ಈಗಾಗಲೇ ಮೊದಲ ಬಾರಿಗೆ ಆನ್‌ಲೈನ್ ಪ್ರೀಮಿಯರ್ ಮಾಡಿಕೊಂಡಿರುವ “ಮಡಿ” ಸಿನಿಮಾವನ್ನು ಅಂತಾರಾಷ್ಟ್ರೀಯ ಕಲಾವಿದೆ ಶರೋನ್ ಪ್ರಭಾಕರ್, ಫೆಮಿನಾ ಮಿಸ್ ಇಂಡಿಯಾದ ಸ್ಮೈಲ್ ಡಿಸೈನರ್ ಡಾ.ಸಂದೇಶ್ ಮಯೇಕರ್ ಮೊದಲಾದ ಸೆಲೆಬ್ರಿಟಿಗಳ ಸೇರಿದಂತೆ, ಹಲವು ಸಿನಿ ಪ್ರಿಯರು “ಮಡಿ” ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಿರುವ ಅನೇಕರು ಯುಟ್ಯೂಬ್‌ನಲ್ಲಿ ಸಾಕಷ್ಟು ಕಾಮೆಂಟ್ ಕೂಡ ಮಾಡಿದ್ದಾರೆ. ಇನ್ನು, ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು “ಮಡಿ” ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್ ಅತ್ತಾವರ್ ಅವರು “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ನಿರ್ದೇಶನ ಮಾಡಿದ್ದಷ್ಟೇ ಅಲ್ಲ, ಅವರಿಲ್ಲಿ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.
ಈಗಾಗಲೇ ಸಿಂಗಲ್ ಶಾಟ್ ಸಿನಿಮಾಗಳು ಬಂದಿವೆ. ಹಾಗೆಯೇ ಕೆಲವು ಸಿನಿಮಾಗಳ ಸಿಂಗಲ್ ಶಾಟ್ ದೃಶ್ಯಗಳೂ ಸುದ್ದಿಯಾಗಿವೆ. ಈ ಸಿಂಗಲ್ ಶಾಟ್ ಸಂಸ್ಕೃತಿ ಈಗಿನದಲ್ಲ. ಮೊದಲಿನಿಂದಲೂ ಸಿಂಗಲ್ ಶಾಟ್ ಕುರಿತ ಅನೇಕ ವಿಷಯಗಳು ಸುದ್ದಿಯಾಗಿವೆ. ಈಗ ಆ ಸಾಲಿಗೆ ಆಲ್ಬಂ ಸಾಂಗ್‌ವೊಂದು ಸುದ್ದಿಯಾಗುತ್ತಿದೆ ಎಂಬುದು ಈ ಹೊತ್ತಿನ ವಿಶೇಷ. ಹೌದು, ಆ ಆಲ್ಬಂ ಸಾಂಗ್‌ಗೆ “ಪಾರಿವಾಳ” ಎಂದು ಹೆಸರಿಡಲಾಗಿದೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರ ಸಹಾಯಕ ರಾಮ್ ಕಿರಣ್ ಅಂಥದ್ದೊಂದು ಸಾಹಸ ಮಾಡಿದ್ದಾರೆ.
ಸದ್ಯ “ಪಾರಿವಾಳ” ವಿಡಿಯೋ ಆಲ್ಬಂ ಸಾಂಗ್ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಈ ವಿಡಿಯೋ ಆಲ್ಬಂ ಸಾಂಗ್‌ಗೆ ಅಗಸ್ತ್ಯ ಸಂತೋಷ್ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಇನ್ನು, ಈ ಹಾಡಲ್ಲಿ ೫೦ ಮಂದಿ ನೃತ್ಯ ಕಲಾವಿದರು ನಟಿಸಿದ್ದಾರೆ. “ಪಾರಿವಾಳ” ಅಂದಾಕ್ಷಣ, ಅದೊಂದು ಫೀಲ್ ಸಾಂಗ್ ಅನ್ನೋದು ಗೊತ್ತಾಗುತ್ತೆ. ಆ ಫೀಲ್ ಸಾಂಗ್ ಅನ್ನು ತುಂಬಾ ವಿಭಿನ್ನವಾಗಿಯೇ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ರಾಮ್‌ಕಿರಣ್, ಸಿಂಗಲ್ ಶಾಟ್‌ನಲ್ಲೇ ಸಾಂಗ್ ಚಿತ್ರೀಕರಿಸಬೇಕು ಎಂದು ನಿರ್ಧರಿಸಿ, ಕೊನೆಗೆ ತಾವು ಅಂದುಕೊಂಡಂತೆಯೇ ಸಾಂಗ್ ಮಾಡಿದ್ದಾರೆ.
ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಇಡೀ ಸಾಂಗ್ ಚಿತ್ರೀಕರಿಸಲಾಗಿದೆ. ಈ ಒನ್ ಶಾಟ್ ಸಾಂಗ್‌ನಲ್ಲಿ ರಾಮ್ ಕಿರಣ್ ಜೊತೆ ತೇಜಸ್ವಿನಿ ಶರ್ಮ ನಟಿಸಿದ್ದಾರೆ. “ಆರಂಭದಿಂದಲೂ ನಾಯಕ ತನ್ನ ಪ್ರೀತಿಯನ್ನು ಕಳೆದುಕೊಂಡು ತುಂಬಾನೇ ವ್ಯಥೆಯಲ್ಲೇ ತನ್ನ ಕಥೆ ಜೊತೆ ಪ್ರಿಯತಮೆ ಕುರಿತು ಹೇಳುವುದನ್ನು ಅರ್ಥಪೂರ್ಣವಾಗಿಯೇ ಸೆರೆಹಿಡಿಯಲಾಗಿದೆ.” ಈ ಹಾಡಲ್ಲಿ ನಾಯಕಿ ಕೂಡ ಪಾರಿವಾಳದಂತೆ ಬಂದು ಹೋಗುವುದು ವಿಶೇಷ. ಈ ಹಾಡಿನ ಇನ್ನೊಂದು ವಿಶೇಷ ಅಂದರೆ, ಕನ್ನಡ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಇದೂಂದು ರೀತಿ ಪ್ಯಾನ್ ಇಂಡಿಯಾ ಸಾಂಗ್. ಈ “ಪಾರಿವಾಳ” ಹಾಡನ್ನು ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
“ನಾನು “ಯುವರತ್ನ” ಚಿತ್ರದ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ರಾಮ್ ಕಿರಣ್ ಬಂದು ನನಗೆ ಈ ಸಾಂಗ್ ಕೇಳಿಸಿದಾಗ, ನನಗೆ ಶಾಕ್ ಆಯಿತು. ಹಾಡು ತುಂಬಾ ಚೆನ್ನಾಗಿದೆ ಅಂದೆ. ನೀವು ಸಾಂಗ್ ಮಾಡಿಕೊಡಬೇಕು ಅಂದಾಗ, ಡೇಟ್ ಸಮಸ್ಯೆ ಅಂದೆ. ಕೊನೆಗೆ ರಾಮ್ ಕಿರಣ್, ಒಂದು ದಿನ ಕಾಲ್ ಮಾಡಿ, ನಾನು ವಿಡಿಯೊ ಆಲ್ಬಂ ಸಾಂಗ್ ಮಾಡುತ್ತಿದ್ದೇನೆ. ಅದು ಒನ್ ಶಾಟ್ ನಲ್ಲಿ ಅಂದರು. ನನಗೆ ಇನ್ನೂ ಗಾಬರಿಯಾಯಿತು. ಹೇಗೆ ಮಾಡುತ್ತಿರಿ? ಅದು ತುಂಬಾ ಕಷ್ಟ ಎಂದೆ. ಆದರೆ, ನನ್ನನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ರಾಮ್ ಕಿರಣ್, ಒಂದೊಂದು ವಿಷಯವನ್ನು ವಿವರಿಸಿದರು. ಆಗ ನನಗೆ ಅನಿಸಿದ್ದು, ಓಹೋ, ಈ ತರಹನೂ ಮಾಡಬಹುದಾ ಅಂತ. ನನ್ನ ಅಸಿಸ್ಟೆಂಟ್ ನಂಬರ್ ಒನ್ ಆಗಬೇಕು, ನಂಬರ್ ೨ ಆಗೋದು ಬೇಡ ಅನ್ನೋದೇ ನನ್ನ ಆಸೆ. ಈ ಹಾಡು ಸಖತ್ ಆಗಿದೆ ಎಂದು ಶಿಷ್ಯನ ಬೆನ್ನು ತಟ್ಟಿದರು ಚಿನ್ನಿ ಪ್ರಕಾಶ್. ನಟ ರಾಮ್ ಕಿರಣ್ ಅವರು ತುಂಬಾನೇ ನರ್ವಸ್ ಆಗಿದ್ದರು. ಭಾವುಕರಾಗಿದ್ದ ಅವರು, “ಏನಾದರೂ ಡಿಫರೆಂಟ್ ಮಾಡು ಅಂತ ಮಾಸ್ಟರ್ ಹೇಳಿದ ಮಾತುಗಳು ನನಗೆ ಮಾದರಿಯಾಯಿತು. ಒಂದು ವರ್ಷದಿಂದ ತಯಾರು ಮಾಡುತ್ತಿದ್ದೆ. ಅವರ ಹೆಸರು ಉಳಿಸಬೇಕು. ಅದಕ್ಕೆ ಹೊಸದೇನಾದರೂ ಮಾಡಬೇಕು ಅಂತ ಒನ್ ಶಾಟ್‌ನಲ್ಲಿ ಈ ಹಾಡು ಮಾಡುವ ಬಗ್ಗೆ ಯೋಚಿಸಿದೆ. ಅಂದುಕೊಂಡಂತೆ ಮಾಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಇನ್ನು, ನನ್ನ ಈ ಹಾಡಿಗೆ ಸಾಥ್ ಕೊಟ್ಟಿದ್ದು ಡಾನ್ಸರ್ಸ್. ರಾತ್ರಿಯಿಂದ ಮುಂಜಾನೆಯವರೆಗೂ ಎನರ್ಜಿಯಲ್ಲಿದ್ದು, ಸಹಕಾರ ನೀಡಿದರು.
ಈ ಹಾಡನ್ನು ಕನ್ನಡ ಮಾತ್ರವಲ್ಲಿ ಬೇರೆ ಭಾಷೆಯಲ್ಲೂ ಮಾಡಬೇಕು ಅಂದುಕೊಂಡೆ. ಹಾಗಾಗಿ ಐದು ಭಾಷೆಯಲ್ಲಿ ತಯಾರು ಮಾಡಿದ್ದೇನೆ” ಎಂದು ವಿವರ ಕೊಟ್ಟರು ರಾಮ್ ಕಿರಣ್. ನಟಿ ತೇಜಸ್ವಿನಿ ಶರ್ಮಾ ಅವರಿಗೆ ಇದೊಂದು ಹೊಸ ಅನುಭವವಂತೆ. “ರಾಮ್ ಕಿರಣ್ ಅವರು ವಿಡಿಯೋ ಆಲ್ಬಂ ಬಗ್ಗೆ ಹೇಳಿದಾಗ, ಸ್ವಲ್ಪ ಕಷ್ಟ ಎನಿಸಿದರೂ ಓಕೆ ಅಂದೆ, ಕಷ್ಟ ಅಂದುಕೊಂಡಿದ್ದನ್ನು ಸುಲಭವಾಗಿ ಮಾಡಿದೆವು. ಚಿನ್ನಿ ಮಾಸ್ಟರ್ ಅವರ ಪ್ರೋತ್ಸಾಹ, ಡಾನ್ಸರ್ ಗಳ ಶ್ರಮ ಮೆಚ್ಚಲೇಬೇಕು ಎಂಬುದು ತೇಜಸ್ವಿನಿ ಶರ್ಮಾ ಮಾತು. ಇನ್ನು, ಶಶಾಂಕ್ ಶೇಷಗಿರಿ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಅವರು ಈ ಐದು ಭಾಷೆಯಲ್ಲೂ ಹಾಡಿದ್ದಾರೆ ಅನ್ನೋದೇ ವಿಶೇಷ.
ಸಾಧುಕೋಕಿಲ ಈಗ ಏನ್ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಅವರೀಗ ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಹೌದು, ನಟ, ಗಾಯಕ ಕಮ್ ಸಂಗೀತ ನಿರ್ದೇಶಕರಾಗಿ ಜನರನ್ನು ರಂಜಿಸಿರುವ ಸಾಧುಕೋಕಿಲ, ನಿರ್ದೇಶನದಲ್ಲೂ ಸೈ ಎನಿಸಿಕಕೊಂಡವರು. ಈಗ ಅವರೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ಜಾಲಿ ಲೈಫ್” ಎಂದು ನಾಮಕರಣ ಮಾಡಲಾಗಿದೆ.
ಈ ಹಿಂದೆ “ತ್ರಿಕೋನ” ಚಿತ್ರ ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪೊಲೀಸ್ ಪ್ರಕ್ಕಿ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ರಾಜ್‌ಶೇಖರ್ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ. ತಮ್ಮ ಸಂಸ್ಥೆ ಮೂಲಕ ಈ ವರ್ಷ ನಾಲ್ಕು ಚಿತ್ರಗಳನ್ನು ನಿರ್ಮಿಸುವುದಾಗಿ ನಿರ್ಮಾಪಕ ರಾಜಶೇಖರ್ ತಿಳಿಸಿದ್ದಾರೆ. ಇನ್ನು, ಮಾರ್ಚ್‌ನಲ್ಲೇ ಚಿತ್ರೀಕರಣ ಶುರುವಾಗಲಿದೆ.
ಈಗಾಗಲೇ ಚಿತ್ರದ ತಾರಾಬಳಗ ಆಯ್ಕೆಗಾಗಿ ನಟ ಸುಚೀಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ವಿಭಿನ್ನವಾಗಿ ಆಡಿಶನ್ ನಡೆಸಲಾಗಿದೆ. ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾ ಮೂಲಕ ಸುಮಾರು 500 ರಿಂದ 600 ಪ್ರತಿಭಾವಂತರು ಆಡಿಶನ್ ಗೆ ಆಗಮಿಸಿದ್ದು, ಸದ್ಯಕ್ಕೆ 18 ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಸಾಧುಕೋಕಿಲ ಅವರೇ ಸಂಗೀತ ನೀಡುತ್ತಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈ ಚಿತ್ರದಲ್ಲಿ ಸುಚೀಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ತಾಜ್ ಮಹಲ್”… ಕನ್ನಡದಲ್ಲಿ ಯಶಸ್ವಿಗೊಂಡ ಚಿತ್ರವಿದು. ಅಜೇಯ್‌ರಾವ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ. ಈಗಾಗಲೇ ಇದೇ ಹೆಸರಲ್ಲಿ ಚಿತ್ರವೊಂದು ಮೂಡಿ ಬಂದಿದ್ದು, ಇಷ್ಟರಲ್ಲೇ ಸಿನಿಮಾ ಮುಕ್ತಾಯಗೊಳ್ಳಲಿದೆ. ಹೌದು, “ತಾಜ್ ಮಹಲ್ ೨” ಚಿತ್ರ ಈಗಾಗಲೇ ಚಿತ್ರೀಕರಣಗೊಂಡಿದ್ದು, ಮಾರ್ಚ್ ೧೫ರಿಂದ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ.
ಶ್ರೀಗಂಗಾಂಭಿಕಾ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ದೇವರಾಜ ಕುಮಾರ್ ನಿರ್ದೇಶನ ಮಾಡಿದ್ದಾರೆ. ದೇವರಾಜ್ ಕುಮಾರ್ ಅವರೇ ಇಲ್ಲಿ ಹೀರೋ ಆಗಿದ್ದಾರೆ. ಅವರಿಗೆ ಸಮೃದ್ಧಿ ನಾಯಕಿಯಾಗಿದ್ದಾರೆ. ಇನನು, ದೇವರಾಜ್ ಕುಮಾರ್ ಅವರ ಕಥೆ, ಚಿತ್ರಕಥೆ ಚಿತ್ರಕ್ಕಿದೆ. ವೀನಸ್ ಮೂರ್ತಿ ಅವರು ಕ್ಯಾಮೆರಾ ಹಿಡಿದಿದ್ದಾರೆ. ಬೆಂಗಳೂರಿನ ಹೆಚ್ಎಂಟಿ ಲೇಔಟ್‌ನಲ್ಲಿ ಆರು ದಿನಗಳ ಕಾಲ ಸಾಹಸ ಸನ್ನಿವೇಶ ಹಾಗೂ ಹಾಡಿನ ಚಿತ್ರೀಕರಣ ನಡೆಯಲಿದ್ದು, ಈ ಮೂಲಕ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಮೇ ತಿಂಗಳಲ್ಲಿ ಟೀಸರ್ ಬಿಡುಗಡೆಯಾಗಲಿದ್ದು, ನಂತರ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮನ್ವರ್ಷಿ ನವಲಗುಂದ ಸಂಭಾಷಣೆಯ ಜೊತೆಗೆ ಹಾಡುಗಳನ್ನೂ ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತವಿದೆ.
ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದರೆ, ಧನಂಜಯ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಜಯ್ ಅವರ ಸಂಕಲನವಿದೆ. ನೈಜ ಪ್ರೇಮಕಥೆ ಆಧರಿಸಿದ ಈ ಚಿತ್ರದಲ್ಲಿ ಜಿಮ್ ರವಿ, ಶೋಭರಾಜ್, ಶಿವರಾಂ, ತಬಲ ನಾಣಿ, ಕಡ್ಡಿ ಪುಡಿ ಚಂದ್ರು, ಕಾಕ್ರೋಜ್ ಸುಧಿ ಇತರರು ನಟಿಸಿದ್ದಾರೆ.
ಕನ್ನಡದಲ್ಲಿ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಆ ಸಾಲಿಗೆ ಹೊಸಬರ “ಅನಘ” ಚಿತ್ರವೂ ಸೇರಿದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಈ ಚಿತ್ರವನ್ನು ರಾಜು ನಿರ್ದೇಶನ ಮಾಡಿದ್ದಾರೆ. ಡಿ.ಪಿ.ಮಂಜುಳ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನಾಯಕ, ನಾಯಕಿ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಇದೊಂದು ಸಸ್ಪೆನ್ಸ್, ಹಾರರ್, ಕಾಮಿಡಿ ಅಂಶಗಳನ್ನು ಹೊಂದಿದೆ.
ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗುತ್ತಿರುವ ಸಿನಿಮಾ, ಈಗಾಗಲೇ ಬಿಡುಗಡೆ ಕೆಲಸದತ್ತ ಚಿತ್ರತಂಡ ಚಿತ್ತ ಹರಿಸಿದೆ. ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್ ಪುತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್ ಗೌಡ್ರು, ಕಿರಣ ತೇಜ, ಕಿರಣ್ ರಾಜ್, ಕರಣ್ ಆರ್ಯನ್, ದೀಪ, ಖುಷಿ, ರಶ್ಮಿ ನಟಿಸಿದ್ದಾರೆ.
ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯ ಪಾತ್ರದಲ್ಲಿ ಮೋಟು ರವಿ, ಅಭಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜು ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಬೆಂಗಳೂರು ಮತ್ತು ದೇವರಾಯನ ದುಗ೯ ಸುತ್ತ ಮುತ್ತ ಚಿತ್ರಿಕರಿಸಲಾಗಿದೆ. ಈ ಚಿತ್ರಕ್ಕೆ ಶಂಕರ್ ಅವರು ಕ್ಯಾಮೆರಾ ಹಿಡಿದರೆ, ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಸಂಕಲನ ಮಾಡಿದ್ದಾರೆ. ಕೌರವ ವೆಂಕಟೇಶ್ ಸಾಹಸವಿದೆ. ಬಿಡುಗಡೆಗೆ ಜೋರು ಕೆಲಸ ನಡೆಯುತಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲಿದೆ.
ಸಾಮಾನ್ಯವಾಗಿ ತೆರೆಮೇಲೆ ಇರುವ ಸ್ಟಾರ್‌ಗಳಷ್ಟೇ ಜನರಿಗೆ ಹತ್ತಿರವಾಗುತ್ತಾರೆ. ಅವರೆಲ್ಲರೂ ಜೋರು ಸುದ್ದಿ ಕೂಡ ಆಗುತ್ತಾರೆ. ಆದರೆ, ಅವರ ಸ್ಟಾರ್‌ಗಿರಿಗೆ ತೆರೆ ಹಿಂದೆ ಕೆಲಸ ಮಾಡಿದವರ ಶ್ರಮವೂ ಇರುತ್ತೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇರಲಿ, ಇಲ್ಲೀಗ ಒಂದು ಖುಷಿಯ ವಿಷಯ ಹೇಳಲೇಬೇಕು. ಸಿನಿಮಾದ ಕಣ್ಣು ಅಂದರೆ ಅದು ಛಾಯಾಗ್ರಾಹಕ. ಸುಂದರವಾಗಿ ಸೆರೆ ಹಿಡಿದು, ಕಣ್ ತಂಪು ಮಾಡುವ ಕಲೆ ಛಾಯಾಗ್ರಾಹಕರಿಗೆ ಇದ್ದೇ ಇರುತ್ತೆ. ಈಗ ಅಂತಹ ಛಾಯಾಗ್ರಾಹಕರೊಬ್ಬರಿಗೆ ೨೦೨೦ನೇ ಸಾಲಿನ ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಹೌದು, ಛಾಯಾಗ್ರಾಹಕ ಗಣೇಶ್ ಹೆಗ್ಡೆ ಅವರಿಗೆ ಈ ಪ್ರಶಸ್ತಿ ಸಂದಿದೆ. ಅಂದಹಾಗೆ, ಅವರಿಗೆ ಈ ಪ್ರಶಸ್ತಿ ಬಂದಿರೋದು, “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ. ಈ ಸಿನಿಮಾಗೆ ಚೇತನ್ ಮುಂಡಾಡಿ ನಿರ್ದೇಶಕರು. ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳೂ ಸಂದಿವೆ.
ಗಣೇಶ್ ಹೆಗ್ಡೆ, ಛಾಯಾಗ್ರಾಹಕ
ಛಾಯಾಗ್ರಾಹಕ ಗಣೇಶ್ ಹೆಗ್ಡೆ ಅವರ ಕುರಿತು ಹೇಳುವುದಾದರೆ, ತಮ್ಮ ಕೆಲಸವನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿ. ಅವರು ಛಾಯಾಗ್ರಾಹಕರಾಗಿ ಮೊದಲ ಸಲ ಕೆಲಸ ಮಾಡಿದ “ಮದಿಪು” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಚೇತನ್ ಮುಂಡಾಡಿ ನಿರ್ದೇಶನ ಮಾಡಿದ್ದರು.“ಮದಿಪು” ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಗಣೇಶ್ ಹೆಗ್ಡೆ ಅವರ ಪಾತ್ರ ಕೂಡ ಪ್ರಮುಖವಾಗಿತ್ತು. ಪುನಃ ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.
ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ
ಕರ್ನಾಟಕದ ಬುಡಕಟ್ಟು ಜನರ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಅವರು, ಚಿತ್ರ ವಿಮರ್ಶಕರ ಅತ್ಯುತ್ತಮ ಪ್ರಶಂಸೆಗೂ ಪಾತ್ರರಾಗಿದ್ದರು. ಇತ್ತೀಚೆಗೆ ಚಿತ್ರೀಕರಣಗೊಂಡಿರುವ “ಎಸ್ಐಟಿ”, “ಪ್ರೀತಿ ಕಿತಾಬು”, “ಮಾರೀಚ” ಚಿತ್ರಗಳಿಗೂ ಇವರ ಕ್ಯಾಮೆರಾ ಕೈ ಚಳಕವಿದೆ. ಇದರೊಂದಿಗೆ ಕನ್ನಡದ ಹಲವು ಜನಪ್ರಿಯ ಧಾರಾವಾಹಿಗಳಾದ “ಕುಂಕುಮ ಭಾಗ್ಯ”, “ಕಾದಂಬರಿ”, “ರಾಧಾ ಕಲ್ಯಾಣ”, “ಅರಮನೆ”, “ಹೆಳವನಕಟ್ಟೆ ಗಿರಿಯಮ್ಮ”, “ಕೆಳದಿ ಚನ್ನಮ್ಮ” ಧಾರಾವಾಹಿಗಳಿಗೂ ಇವರ ಛಾಯಾಗ್ರಹಣವಿದೆ.
ಇನ್ನು, ಕುಂಚ ಹಿಡಿದು ಪ್ರಕೃತಿ ಮಡಿಲಲ್ಲಿ ಚಿತ್ರಿಸುತ್ತಿದ್ದ, ಬಣ್ಣದ ಜೊತೆ ಸದಾ ಆಟವಾಡುತ್ತಿದ್ದ ಗಣೇಶ್ ಹೆಗ್ಡೆ ಮೂಲತಃ ಶಿರಸಿಯವರು. “ನಮ್ಮೂರ ಮಂದಾರ ಹೂವೆ” ಚಿತ್ರದ ಚಿತ್ರೀಕರಣ ನಡೆದದ್ದು ಶಿರಸಿ ಸುತ್ತಮುತ್ತ. ಅಷ್ಟೇ ಅಲ್ಲ, ಆ ಚಿತ್ರದಲ್ಲಿರುವ ಮನೆ ಗಣೇಶ್ ಹೆಗ್ಡೆ ಅವರದು. ಆ ಮನೆಯಲ್ಲೇ ಗಣೇಶ್ ಹೆಗ್ಡೆ ಹುಟ್ಟಿ ಬೆಳೆದದ್ದು. ಚಿತ್ರೀಕರಣದ ವೇಳೆ ಕ್ಯಾಮರಾ ಬಗ್ಗೆ ಕುತುಹಲ ಬೆಳೆಸಿಕೊಂಡು ಚಿತ್ರರಂಗದ ಕಡೆ ಹೊರಟ ಗಣೇಶ್ ಹೆಗ್ಡೆ, ಅನೇಕ ಸಾಕ್ಷ್ಯಚಿತ್ರಗಳು, ಜಾಹಿರಾತುಗಳು, ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.
ಚಿತ್ರಕಲೆಯಲ್ಲಿ ಪದವಿ ಪಡೆದ ಗಣೇಶ್ ಹೆಗ್ಡೆ, ನಂತರದ ದಿನಗಳಲ್ಲಿ ಛಾಯಾಗ್ರಹಣವನ್ನು ಆಯ್ಕೆ ಮಾಡಿಕೊಂಡು, ಮೊದಲ ಸಲ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಕ್ಕೆ ಪೋಸ್ಟರ್ ವಿನ್ಯಾಸ ಮಾಡುವ ಮೂಲಕ, ನಂತರ ಮೆಲ್ಲನೆ, ಛಾಯಾಗ್ರಾಹಕರಾದ ವೇಣು, ಎಂ.ಕುಮಾರ್, ಕೃಷ್ಣಕುಮಾರ್ ಸೇರಿದಂತೆ ಹಲವರ ಗರಡಿಯಲ್ಲಿ ಗಣೇಶ್ ಹೆಗ್ಡೆ ಪಳಗಿದ್ದಾರೆ. ಸದ್ಯ ಚೇತನ್ ಮುಂಡಾಡಿ ಅವರ ನಿರ್ದೇಶನದ “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್ ಹೆಗ್ಡೆ ಅವರಿಗೆ 2020ನೇ ಸಾಲಿನ ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ ಅವರು ಕೆಲಸ ಮಾಡಿರುವ ಸುಧೀರ್ ಶಾನುಭೋಗ ನಿರ್ದೇಶನದ “ಮಾರೀಚ” ಹಾಗೂ “ಎಸ್ಐಟಿ” ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.
“ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…ಇನ್ನೇನು ಬಿಡುವುದು ಬಾಕಿ ಇದೆ… ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ, ಎದ್ದೋಗು ಕೊನೆ ಬಸ್ಸು ಟೈಮಾಗಿದೆ…” – ಬಹುಶಃ ಈ ಹಾಡನ್ನು ಕೇಳದವರಿಲ್ಲ. ಕರ್ನಾಟಕದ ಕನ್ನಡಿಗರು ಮಾತ್ರವಲ್ಲ, ಸಾಗರದಾಚೆ ಇರುವ ಕನ್ನಡಿಗರೂ ಈ ಹಾಡನ್ನು ಕೇಳಿ, ಕಣ್ತುಂಬಿಕೊಂಡವರಿಗೆ ಲೆಕ್ಕವಿಲ್ಲ. ಎಷ್ಟೋ ಮಂದಿ ಈ ಹಾಡು ಕೇಳಿ ತಮ್ಮೂರಿಗೆ ಹೋಗಿದ್ದುಂಟು. ಇಷ್ಟಕ್ಕೂ ಈ ಹಾಡಿನ ಬಗ್ಗೆ ಈಗ ಯಾಕೆ ಪ್ರಸ್ತಾಪ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಹಾಡು ದಿಗಂತ್ ಅಭಿನಯದ “ಪರಪಂಚ” ಸಿನಿಮಾದ್ದು. ಕ್ರಿಶ್ ಜೋಶಿ ನಿರ್ದೇಶನವಿದೆ. ಇನ್ನು ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಅವರ ಸಾಹಿತ್ಯಕ್ಕೆ ಅದ್ಭುತ ರಾಗ ಸಂಯೋಜನೆ ಮಾಡಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್. ಈ ಹಾಡನ್ನು ಹುಚ್ಚವೆಂಕಟ್ ಅವರ ಧ್ವನಿಯಲ್ಲಿ ಬಹುತೇಕ ಮಂದಿ ಕೇಳಿದ್ದುಂಟು. ಆದರೆ, ಅದರ ಹಿಂದೊಂದು ಸತ್ಯವಿದೆ. ಹುಚ್ಚ ವೆಂಕಟ್ ಅವರಿಗೂ ಮೊದಲು ವೀರ್ ಸಮರ್ಥ್ ಅವರು ಬಾಲಿವುಡ್‌ನ ದಂತಕತೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಹಾನ್ ವ್ಯಕ್ತಿ ಪದ್ಮಶ್ರೀ ರವೀಂದ್ರ ಜೈನ್ ಅವರಿಂದ ಹಾಡಿಸಿದ್ದರು ಅನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಹೌದು, ವೀರ್ ಸಮರ್ಥ್ ಅವರು “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ” ಹಾಡನ್ನು ಬಾಲಿವುಡ್‌ನ ಖ್ಯಾತ ಗೀತಸಾಹಿತಿ, ಹಿಂದೂಸ್ತಾನಿ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಅವರಿಂದ ಹಾಡಿಸಿದ್ದರು. ಆದರೆ, ಕಾರಣಾಂತರಗಳಿಂದ “ಪರಪಂಚ” ಚಿತ್ರಕ್ಕೆ ರವೀಂದ್ರ ಜೈನ್ ಅವರ ಹಾಡನ್ನು ಬಳಸಿಕೊಳ್ಳಲಾಗಿಲ್ಲ. ಆದರೆ, ರವೀಂದ್ರ ಜೈನ್ ಅವರು ಹಾಡಿರುವ ಈ ಹಾಡನ್ನು ಆನಂದ್ ಆಡಿಯೋ ಫೆ.೨೮ರಂದು ಬಿಡುಗಡೆ ಮಾಡಿದೆ. ಅದಕ್ಕೆ ಕಾರಣ, ಫೆಬ್ರವರಿ 28ರಂದು ರವೀಂದ್ರ ಜೈನ್ ಅವರ ಹುಟ್ಟುಹಬ್ಬ. ಅವರ 77 ನೇ ಹುಟ್ಟುಹಬ್ಬದ ಸವಿನೆನಪಿಗೆ ಆನಂದ್ ಆಡಿಯೋ ಅವರನ್ನು ಸ್ಮರಿಸಿ, ರವೀಂದ್ರ ಜೈನ್ ಅವರ ಧ್ವನಿಯಲ್ಲಿ ಮೂಡಿಬಂದಿರುವ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…” ಹಾಡನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.
ಈ ಕುರಿತಂತೆ, ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರು “ಸಿನಿಲಹರಿ” ಜೊತೆ ಮಾತನಾಡಿ, ತಮ್ಮ ಗುರು ರವೀಂದ್ರ ಜೈನ್ ಅವರನ್ನು ಗುಣಗಾನ ಮಾಡಿದ್ದಾರೆ. “ನಾನು ಸಂಗೀತ ನಿರ್ದೇಶಕ ಆಗಿದ್ದೇನೆ ಅಂದರೆ ಅದಕ್ಕೆ ನನ್ನ ಗುರು ರವೀಂದ್ರ ಜೈನ್ ಅವರೇ ಕಾರಣ. ಅವರು ನನಗೆ ಸಂಗೀತ ಕಲಿಸಿ, ಅವರೊಟ್ಟಿಗೆ ಐದು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ಕಲ್ಪಿಸಿದವರು. ಮೂಲತಃ ಹಿಂದೂಸ್ತಾನಿ ಸಂಗೀತಗಾರರಾಗಿರುವ ಅವರು ಸುಮಾರು 200 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಗೀತ ಸಾಹಿತಿಯಾಗಿ ದೊಡ್ಡ ಹೆಸರು ಪಡೆದವರು. ನಾನು ಸಂಗೀತ ನಿರ್ದೇಶಕನಾದ ಬಳಿಕ, ಒಂದೊಮ್ಮೆ ಅವರು ನಿನ್ನ ರಾಗ ಸಂಯೋಜನೆಯಲ್ಲೊಂದು ಹಾಡು ಹಾಡ್ತೀನಿ. ಕನ್ನಡದ ಮೊದಲ ಹಾಡು ಅದಾಗಿರಬೇಕು ಅಂದಿದ್ದರು. ಹಾಗಾಗಿ, ನಾನು ಒಳ್ಳೆಯ ಸಾಹಿತ್ಯ, ರಾಗ ಇದ್ದ ಕಾರಣ, “ಹುಟ್ಟಿದ ಊರನು” ಹಾಡನ್ನು ಅವರಿಂದಲೇ ಮುಂಬೈನ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದೆ. ತುಂಬಾನೇ ಅದ್ಭುತವಾಗಿ ಹಾಡಿದ್ದರು. ಆದರೆ, ಕಾರಣಾಂತರಗಳಿಂದ ಆ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಆಗಿರಲಿಲ್ಲ. ಅವರು ನನ್ನ ಹಾಡು ಹಾಡಿದ ಐದಾರು ತಿಂಗಳ ಬಳಿಕ ನಿಧನರಾದರು. ಅವರ ಹಾಡನ್ನು ಎಲ್ಲೂ ಹೊರತರಲು ಆಗಲಿಲ್ಲವಲ್ಲ ಎಂಬ ಬೇಸರ ನನಗೂ ಇತ್ತು. ಆದರೆ, ಫೆಬ್ರವರಿ ೨೮ರಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಅವರ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಬಿಡುಗಡೆ ಮಾಡಿದೆ. ಆ ಮೂಲಕ ನಾವೆಲ್ಲ ಅವರನ್ನು ಸ್ಮರಿಸುತ್ತಿದ್ದೇವೆ” ಎಂದಿದ್ದಾರೆ ವೀರ್.
ವೀರ್ ಸಮರ್ಥ್
ವೀರ್ ಸಮರ್ಥ್ ಅವರು ಮುಂಬೈನಲ್ಲಿದ್ದಾಗ, ರವೀಂದ್ರ ಜೈನ್ ಬಳಿ ಕೆಲಸ ಮಾಡಿದ್ದರು. ಆರಂಭದ ದಿನಗಳಲ್ಲಿ ಅವರ ಜೊತೆ ಐದು ವರ್ಷ ಸಂಗೀತ ಕೆಲಸ ಕಲಿತು ದುಡಿದವರು. ಒಂದು ರೀತಿ ಅವರ ಮನೆಯಲ್ಲೇ ಇದ್ದು, ಮಗನಂತೆ ಇದ್ದವರು ವೀರ್. ಹಾಗೆ ನೋಡಿದರೆ ವೀರ್ ಅವರು ಸಿನಿಮಾ ಸಂಗೀತ ಕಲಿತಿದ್ದು ರವೀಂದ್ರ ಜೈನ್ ಅವರಿಂದಲೇ. ಅವರ ಮೂಲಕವೇ ರೆಕಾರ್ಡ್ ಮಾಡೋದು ಕಲಿತರು, ಮೈಕ್ ಮುಂದೆ ನಿಂತು ಹಾಡೋದನ್ನೂ ಕಲಿತರು. ಬಾಲಿವುಡ್‌ನ ಲೆಜೆಂಡ್ರಿ ಸಂಗೀತ ನಿರ್ದೇಶಕ ಆಗಿದ್ದ ಅವರು, “ರಾಮ್ ತೇರಿ ಗಂಗಾ ಮೈಲಿ” ಸೇರಿದಂತೆ ಹಿಟ್ ಸಿನಿಮಾಗಳಿಗೆ ಹಾಡು ಕೊಟ್ಟ ಕೀರ್ತಿ ರವೀಂದ್ರ ಜೈನ್ ಅವರದು. ವೀರ್ ಸಮರ್ಥ್ ಅವರು ಯಾವಾಗ ಭೇಟಿ ಮಾಡಿದರೂ, ರವೀಂದ್ರ ಜೈನ್ ಅವರು, ನನಗೊಂದು ಹಾಡು ಮಾಡಪ್ಪ, ನಾನು ಕನ್ನಡದಲ್ಲಿ ಹಾಡ್ತೀನಿ ಅಂತ ಹೇಳುತ್ತಿದ್ದರಂತೆ. ಅವರ ಸಲುವಾಗಿ ಹಾಡು ಮಾಡಲು ಒಳ್ಳೆಯ ಸಾಹಿತ್ಯ, ರಾಗ ಎದುರು ನೋಡುತ್ತಿದ್ದ ವೀರ್, ದೊಡ್ಡ ಸ್ಕೇಲ್‌ನಲ್ಲೇ ರಾಗ ಸಂಯೋಜನೆ ಮಾಡುವ ಆಸೆ ಇಟ್ಟುಕೊಂಡಿದ್ದರು. ಹೈ ರೇಂಜ್‌ನಲ್ಲೇ ಅವರಿಂದ ಹಾಡಿಸಬೇಕು ಅಂದುಕೊಂಡಿದ್ದ ವೀರ್, “ಪರಪಂಚ” ಚಿತ್ರಕ್ಕೆ ಸಂಗೀತ ಮಾಡುವಾಗ, “ಹುಟ್ಟಿದ ಊರನು” ಹಾಡನ್ನು ಅವರಿಂದ ಹಾಡಿಸುವ ಯೋಚನೆ ಮಾಡಿದ್ದಾರೆ. ಬಳಿಕ ನಿರ್ದೇಶಕ ಕ್ರಿಶ್ ಜೋಶಿ ಬಳಿ ಮಾತಾಡಿದ ಬಳಿಕ ಯೋಗರಾಜ್‌ಭಟ್ ಜೊತೆಯಲ್ಲೂ ಚರ್ಚಿಸಿದ್ದಾರೆ. ಎಲ್ಲವೂ ಓಕೆ ಆದಾಗ, ಮುಂಬೈಗೆ ಹೋಗಿ ರವೀಂದ್ರ ಜೈನ್ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದಾರೆ. ಆದರೆ, ಕಾರಣಾಂತರ ಆ ಹಾಡು ರಿಲೀಸ್ ಆಗಲಿಲ್ಲ. ಆ ನೋವು ವೀರ್ ಅವರಲ್ಲಿತ್ತು. ಇತ್ತೀಚೆಗೆ ಆ ಹಾಡನ್ನು ಬಿಡುಗಡೆ ಮಾಡುವ ಬಗ್ಗೆಯೂ ನಿರ್ದೇಶಕರ ಜೊತೆ ಮಾತಾಡಿದ್ದರು. ಆನಂದ್ ಆಡಿಯೋ ಜೊತೆ ಮಾತಾಡಿದಾಗ, ಫೆ.೨೮ರಂದು ಅವರ ಹುಟ್ಟುಹಬ್ಬ ಇದ್ದುರಿಂದ, ಬಿಡುಗಡೆ ಮಾಡಲಾಗಿದೆ. ಸದ್ಯ ಆ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.
ಬಹಳ ಕುತೂಹಲದ ಬಿಗ್‌ಬಾಸ್ ಸೀಸನ್ -8ಕ್ಕೆ ಫೆಬ್ರವರಿ 28ರ ಸಂಜೆ ಅದ್ಧೂರಿ ಚಾಲನೆ ದೊರೆಯಲಿದೆ. ಈ ಕುರಿತು ಈಗಾಗಲೇ ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಸೀಸನ್-೮ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಹೋಗಲಿದ್ದಾರೆ ಅನ್ನೋದೇ ಗೌಪ್ಯ. ಆದರೂ, ಅವರು ಹೋಗ್ತಾರೆ, ಇವರು ಇರ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆವೆ.
ಈ ಬಾರಿ ಒಟ್ಟು 17 ಜನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ. ಎಲ್ಲರನ್ನೂ ಕ್ವಾರಂಟೈನ್ ಮಾಡಿಯೇ ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತಿದೆ. ಸದ್ಯ, ಆ ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸುದೀಪ್ ಕೂಡ ತಯಾರಾಗಿದ್ದಾರೆ. ಕಲರ್ಸ್ ವಾಹಿನಿಯರ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್, ಒಂದಷ್ಟು ಮಾಹಿತಿ ಕೊಟ್ಟು, ಸ್ಪರ್ಧಿಗಳಿಗೆ ಕ್ವಾರಂಟೈನ್ ಮಾಡಲಾಗುತ್ತಿದೆ.
ಹಾಗೆಯೇ ತಾಂತ್ರಿಕ ವರ್ಗದವರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಸಲ ಒಬ್ಬ ರಾಜಕಾರಣಿಯೂ ಇರುತ್ತಾರೆ. ಉಳಿದಂತೆ ನಟ,ನಟಿಯರು, ಒಂದಷ್ಟು ಗುರುತಿಸಿಕೊಂಡ ವ್ಯಕ್ತಿಗಳೂ ಇಲ್ಲಿರಲಿದ್ದಾರೆ ಎಂದಷ್ಟೇ ವಿವರಿಸಿದ್ದಾರೆ. ಅದೇನೆ ಇರಲಿ, ಬಿಗ್‌ಬಾಸ್ -೮ರಲ್ಲಿ ಯಾರು ಇರುತ್ತಾರೆ ಅನ್ನುವ ಕುತೂಹಲಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ. ಫೆ.೨೮ರ ಭಾನುವಾರ ಕಲರ್ಸ್ ವಾಹಿನಿಯಲ್ಲಿ ಸಂಜೆ 6ಕ್ಕೆ ಅದ್ದೂರಿಯಾಗಿ ಕಾರ್ಯಕ್ರಮ ಶುರುವಾಗಲಿದೆ. ಪ್ರತಿ ರಾತ್ರಿ 8 ಗಂಟೆಯಿಂದ ೯ ರವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.