ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಹಾಗೂ ಸತ್ಯ & ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ.
ಡಿ ಸತ್ಯ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ. ಈ ಚಿತ್ರದಲ್ಲಿ ವಾಸುಕಿ ವೈಭವ್ ಅವರು ಸಂಗೀತ ನೀಡುವುದರ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡಿ, ಕುಣಿದಿದ್ದಾರೆ.
ನೃತ್ಯ ನಿರ್ದೇಶನವನ್ನು ಸ್ವತಃ ಡಿ ಸತ್ಯ ಪ್ರಕಾಶ್ ಅವರೇ ಮಾಡಿದ್ದಾರೆ. ಚಿತ್ರದ ಕಥೆ ತಿಳಿಸುವ ಈ ಹಾಡಿಗೆ, ಸೊಗಸಾದ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಡಿ ಸತ್ಯ ಪ್ರಕಾಶ್ ಜಂಟಿಯಾಗಿ ಬರೆದಿದ್ದಾರೆ.
ದರ್ಶನ್-ಧ್ರುವ ಈ ಹೆಸರು ಒಟ್ಟೊಟ್ಟಿಗೆ ಕೇಳಿ ಬಂದರೆ ಇವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಸಕಲರೂ ದಡಕ್ಕನೆ ಎದ್ದು ಕೂರುತ್ತಾರೆ. ಅಪ್‌ಕೋರ್ಸ್ ಕೂರ್ಲೇಬೇಕು. ಯಾಕಂದ್ರೆ ಹಂಗೈತೆ ಇವರಿಬ್ಬರ ಗತ್ತು ಮತ್ತು ತಾಕತ್ತು. ಒಬ್ಬರು ಚಾಲೆಂಜಿಂಗ್ ಸ್ಟಾರ್ ಇನ್ನೊಬ್ಬರು ಆಕ್ಷನ್ ಬಹದ್ದೂರ್. ಗಂಧದಗುಡಿಯಲ್ಲಿ ಗುರ್ತಿಸಿಕೊಳ್ಳೋದಕ್ಕೆ ಹಾಗೂ ಬಣ್ಣದ ಲೋಕದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟೋದಕ್ಕೆ ಪಟ್ಟಶ್ರಮ ಎಷ್ಟು ಅನ್ನೋದು ಬೆಳ್ಳಿಪರದೆಗೂ ಗೊತ್ತಿದೆ. ಅಷ್ಟಕ್ಕೂ, ನಾವ್ ಇವತ್ತು ದಚ್ಚು-ಧ್ರುವ ಬಗ್ಗೆ ಮಾತನಾಡ್ತಿರವುದಕ್ಕೆ ಕಾರಣ ಆ ಸಿನಿಮಾ ಸುದ್ದಿ.
ಕಳೆದೊಂದು ವರ್ಷದ ಹಿಂದೆ ಆಕ್ಷನ್‌ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಗಮದ ಸುದ್ದಿ ಕೇಳಿ ಬಂದಿತ್ತು. ಇದೀಗ, ಆ ಸುದ್ದಿ ನಿಜವಾಗುವ ಗಳಿಗೆ ಸನ್ನಿಹಿತವಾಗಿದೆ. ಬಹದ್ದೂರ್ ಗಂಡು ಹಾಗೂ ಚಕ್ರವರ್ತಿ ಜೊತೆಯಾಗಿ ಶಕ್ತಿ ತುಂಬುವ ದಿವ್ಯಕ್ಷಣಕ್ಕಾಗಿ ಫುಲ್ ಟೀಮ್ ಕೂಡ ಎದುರು ನೋಡ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ದಚ್ಚು- ಧ್ರುವ ಇಬ್ಬರು ಕೂಡ ಇನ್ನೊಂದು ವಾರದೊಳಗೆ ಆ ದಿವ್ಯಜಾಗಕ್ಕೆ ಭೇಟಿಕೊಡ್ತಾರೆ. ಒಟ್ಟಿಗೆ ಸೇರಿ ಹೋಗದಿದ್ದರೂ ಕೂಡ ಬೇರೆ ಬೇರೆ ಟೈಮು-ಗಳಿಗೆಯಲ್ಲಿ ಅಲ್ಲಿಗೆ ಹೋಗಿ ಕೆಲಸ ಮಾಡಿಕೊಟ್ಟು ಬರಲಿದ್ದಾರೆ. ಒಂದೊಳ್ಳೆ ಕೆಲಸಕ್ಕಾಗಿ ಆಕ್ಷನ್‌ಸ್ಟಾರ್-ಚಾಲೆಂಜಿಂಗ್‌ಸ್ಟಾರ್ ಕೈಜೋಡಿಸ್ತಿರುವುದು ವಿಶೇಷ.
ಅಷ್ಟಕ್ಕೂ ಅದ್ಯಾವ ಕೆಲಸಕ್ಕಾಗಿ ಸಾರಥಿ ಹಾಗೂ ಧ್ರುವ ಕೈಜೋಡಿಸ್ತಿದ್ದಾರೆ ಈ ಕೂತೂಹಲದ ಪ್ರಶ್ನೆಗೆ ಉತ್ತರ ರಾಜಮಾರ್ತಾಂಡ. ಈ ಸಿನಿಮಾದ ಹೆಸರು ಕೇಳಿ ದಾಕ್ಷಣ ಕಂಪ್ಲೀಟ್ ಪಿಕ್ಚರ್ ನಿಮ್ಮ ಕಣ್ಮುಂದೆ ಬಂದಿರುತ್ತೆ. ರಾಜಮಾರ್ತಾಂಡ ಯುವಸಾಮ್ರಾಟ ಚಿರಂಜೀವಿ ಸರ್ಜಾ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಅಕಾಲಿಕ ಮರಣಕ್ಕೆ ತುತ್ತಾಗಿ ಅರ್ಧಕ್ಕೆ ಜೀವನಪಯಣ ಮುಗಿಸಿದರು. ಅಣ್ಣನ ಸಿನಿಮಾ ಅರ್ಧಕ್ಕೆ ನಿಂತು ಹೋಗುವುದನ್ನು ಇಷ್ಟಪಡದ ಸಹೋದರ ಧ್ರುವ ಅಣ್ಣನ ಸಿನಿಮಾಗೆ ಬೆನ್ನೆಲುಬಾಗಿ ನಿಲ್ತಿದ್ದಾರೆ.
ಚಿರು ರಾಜಮಾರ್ತಾಂಡ ಚಿತ್ರಕ್ಕೆ ಧ್ರುವ ಬೆಂಬಲವಿರುವುದು ಹಾಗೂ ಚಿರು ಪಾತ್ರಕ್ಕೆ ಧ್ರುವ ವಾಯ್ಸ್ ಡಬ್ ಮಾಡುವುದು ಹಳೆಯ ವಿಷ್ಯ. ಲೇಟೆಸ್ಟ್ ಅಪ್ ಡೇಟ್ ಅಂದರೆ ಧ್ರುವ ಕಾಲ್ ಶೀಟ್ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಖಾಸಗಿ ಸ್ಟುಡಿಯೋಗೆ ಆಗಮಿಸಲಿರುವ ಧ್ರುವ ಅಣ್ಣನ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ. ಈಗಾಗಲೇ ರಿಲೀಸ್ ಆಗಲಿರುವ ಟ್ರೇಲರ್ ನಲ್ಲಿ ಚಿರು ಅಭಿನಯಕ್ಕೆ ಧ್ರುವ ಕಂಠದಾನದ ಮೂಲಕ ಕಳೆ ತಂದಿರುವುದನ್ನು ನೋಡಬಹುದಾಗಿದೆ.
ಇನ್ನೂ ಇದೇ ರಾಜಮಾರ್ತಾಂಡ ಚಿತ್ರಕ್ಕೆ ಚಾಲೆಂಜಿಂಗ್ ಚಕ್ರವರ್ತಿ ಕೂಡ ಶಕ್ತಿ ತುಂಬುತ್ತಾರೆನ್ನುವ ಸುದ್ದಿ ಕೂಡ ಕಳೆದ ವರ್ಷವೇ ಕೇಳಿ ಬಂದಿತ್ತು. ಕೊಟ್ಟ ಮಾತಿನಂತೆ ಸಾರಥಿ ನಡೆದುಕೊಳ್ತಿದ್ದಾರೆ. ಶೀಘ್ರದಲ್ಲೇ ರಾಜಮಾರ್ತಾಂಡ ಚಿತ್ರದ ಚಿರು ಇಂಟ್ರುಡಕ್ಷನ್ ಸೀನ್ ಗೆ ದಚ್ಚು ಬಲ ತುಂಬಲಿದ್ದಾರೆ. ಇದನ್ನು ಸೆರೆ ಹಿಡಿಯೋಕೆ ಚಿತ್ರತಂಡ ಸಿದ್ದತೆ ನಡೆಸಿಕೊಂಡಿದೆ. ಡಬ್ಬಿಂಗ್ ನಂತರ ಆದಷ್ಟು ಬೇಗ ಸಿನಿಮಾ ಕೆಲಸ ಕಾರ್ಯ ಮುಗಿಸಿಕೊಂಡು ಚಿತ್ರ ತೆರೆಗೆ ತರಲು ಪ್ಲ್ಯಾನ್ ರೂಪಿಸುತ್ತಿದೆ. ಟೈಸನ್ ಖ್ಯಾತಿಯ ರಾಮ್ ನಾರಾಯಣ್ ನಿರ್ದೇಶನ ಚಿತ್ರಕ್ಕಿದ್ದು, ಶಿವಕುಮಾರ್ ನಿರ್ಮಾಣದಲ್ಲಿ ಮೂಡಿಬರ್ತಿದೆ. ದಚ್ಚು- ಧ್ರುವ ಸಮಾಗಮದಲ್ಲಿ ರಾಜಮಾರ್ತಾಂಡನಿಗೆ ನೂರಾನೆ ಬಲ ಬಂದಿದೆ ಅಂದರೆ ತಪ್ಪಾಗಲ್ಲ ಬಿಡಿ.
ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಮೇಲೊಬ್ಬ ಮಾಯಾವಿ’ ಚಿತ್ರತಂಡ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಹರಳು ಮಾಫಿಯಾದ ಕಂಟೆಂಟ್ ಇರುವಂತಹ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿತ್ತು.
ಈಗ ಚಿತ್ರ ತಂಡ ಚಿತ್ರದ ಟೈಟಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ. ‘ಬಿಗ್ ಬಾಸ್’ ಖ್ಯಾತಿಯ, ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಇರುವ ಈ ಹಾಡನ್ನು ಎಲ್.ಎನ್.ಶಾಸ್ತ್ರೀ, ಹೇಮಂತ್ ಮತ್ತು ಶಮಿತಾ ಮಲ್ನಾಡ್ ಹಾಡಿದ್ದಾರೆ.
ಎಲ್.ಎನ್.ಶಾಸ್ತ್ರೀಯವರು ತಮ್ಮ ಕೊನೆಯ ದಿನಗಳಲ್ಲಿ ಹಾಡಿದ ಈ ಹಾಡು ಸಾಕಷ್ಟು ಅರ್ಥಗರ್ಭಿತವಾಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.
ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧಾರಿತ ಈ ಚಿತ್ರವನ್ನು ಬಿ.ನವೀನ್ ಕೃಷ್ಣ ಕಥೆ, ಬರೆದು ನಿರ್ದೇಶಿಸಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್ ನಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ಎಲ್.ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯ ರಚಿಸಿದ್ದಾರೆ. ಕೆ.ಗಿರೀಶ್ ಕುಮಾರ್ ಸಂಕಲನಕಾರರಾಗಿರುವ ʻಮೇಲೊಬ್ಬ ಮಾಯಾವಿʼಗೆ, ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಹಣ ಮಾಡಿದ್ದಾರೆ. ದೇಸಿ ಸೊಗಡಿನ ಈ ಹಾಡಿಗೆ ರಾಮು ಅವರ ನೃತ್ಯ ನಿರ್ದೇಶನವಿದೆ.
ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಎಮ್.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್ ಲಕ್ಷ್ಮೀ ಅರ್ಪಣ್, ನವೀನ್‌ಕುಮಾರ್, ಪವಿತ್ರಾ ಜಯರಾಮ್, ಮುಖೇಶ್, ಡಾ.ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ “ಮೇಲೊಬ್ಬ ಮಾಯಾವಿ”ಚಿತ್ರ ತೆರೆಗೆ ಬರಲಿದೆ.
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಬಿಗ್‌ಬಾಸ್ ಪಟ್ಟ ಹಾಗೂ ದೊಡ್ಮನೆ ಕಿರೀಟ ಅದ್ಯಾರ ಮುಡಿಗೇರಲಿದೆ ಎನ್ನುವ ಕೂತೂಹಲ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆಗಸ್ಟ್ ೦೮ಕ್ಕೆ ಮುಹೂರ್ತ ಫಿಕ್ಸಾಗಿದ್ದು `ಇವರು ವಿನ್ ಆಗ್ಬೋದು, ಇವರು ರನ್ನರ್ ಅಪ್ ಆಗ್ಬಹುದು’ ಅಂತ ಕರುನಾಡ ಮಂದಿ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ಆದರೆ, ಬಿಗ್‌ಬಾಸ್ ಸ್ಪರ್ಧಿಗಳ ಅಭಿಮಾನಿಗಳು ಮಾತ್ರ ತಾವು ಇಷ್ಟ ಪಡುವವರೇ ವಿನ್ ಆಗ್ಬೇಕು ಅಂತ ಆಸೆ ಪಡ್ತಿದ್ದಾರೆ. ಈ ರೀತಿ ಎಕ್ಸ್ಪೆಕ್ಟ್ ಮಾಡೋದು ತಪ್ಪು ಅಂತ ಹೇಳೋದಕ್ಕೆ ಆಗಲ್ಲ ಯಾಕಂದ್ರೆ ಆಯಾ ಸ್ಪರ್ಧಿಗಳ ಮೇಲೆ ಅವರವರ ಫ್ಯಾನ್ಸ್‌ಗೆ ಇರುವ ಅಪಾರವಾದ ಪ್ರೀತಿ ಮತ್ತು ಅಭಿಮಾನ. ಇದಕ್ಕೆ ಪ್ರಶಾಂತ್ ಸಂಬರ್ಗಿಯವರ ಅಭಿಮಾನಿ ಬಣ ಕೂಡ ಹೊರತಾಗಿಲ್ಲ.
ಈ ಭಾರಿಯ ಬಿಗ್‌ಬಾಸ್ ಕಿರೀಟವನ್ನು ಹಾಗೂ ೫೦ ಲಕ್ಷ ಚೆಕ್‌ನ ಅದ್ಯಾರ ಮುಡಿಗೇರಿಸಬೇಕು ಅಂತ ನೀವು ನಿರ್ಧರಿಸಿದ್ದೀರೋ ಗೊತ್ತಿಲ್ಲ. ಇಲ್ಲಿವರೆಗೂ ನೀವುಗಳು ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ದೊಡ್ಮನೆ ಟ್ರೋಪಿಯನ್ನು ಯಾರದ್ದೋ ಪಾಲು ಮಾಡುತ್ತಾ ಬಂದಿದ್ದೀರೋ ಅದು ಕೂಡ ನಮಗೆ ತಿಳಿದಿಲ್ಲ. ಎನಿವೇ ಈ ರೀತಿ ನೀವು ಮಾಡಿಕೊಂಡು ಬಂದಿಲ್ಲ ಅಂದರೆ ಪ್ರಶಾಂತ್ ಸಂಬರ್ಗಿಯವರನ್ನ ಹಾಗೂ ಶಮಂತ್‌ರನ್ನ ಟಾಪ್ 2ಗೆ ತಂದು ನಿಲ್ಲಿಸಿ ನೋಡೋಣ ಹೀಗಂತ ಅದೊಂದು ಬಣ ಸೋಷಿಯಲ್ ಲೋಕದಲ್ಲಿ ಬಿಗ್‌ಹೌಸ್‌ಗೆ ಚಾಲೆಂಜ್ ಮಾಡ್ತಿದೆ. ಅಲ್ಲದೇ, ಟಾಫ್ ೫ನಲ್ಲಿ ಫೈನಲ್ಸ್ ಅಂಗಳದಲ್ಲಿ ಸಂಬರ್ಗಿ ಹಾಗೂ ಶಮಂತ್‌ರನ್ನು ನಾವು ನೋಡ್ಲೆಬೇಕು ಎನ್ನುವ ಇಂಗಿತ ಕೂಡ ವ್ಯಕ್ತಪಡಿಸುತ್ತಿದೆ.
ಈ ಬಣದ ಆಸೆಯಂತೆ ಪ್ರಶಾಂತ್-ಶಮಂತ್ ಫೈನಲ್ಸ್ ತಲುಪುತ್ತಾರಾ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ ಆದರೆ, ಬಿಗ್‌ಬಾಸ್ ಅಂಗಳಕ್ಕೆ ಬರುತ್ತಿರುವ ಕಮೆಂಟ್ಸ್ ನ ನೋಡಿದ್ರೆ ಅದೃಷ್ಟ ಕೈ ಹಿಡಿದರೂ ಹಿಡಿಯಬಹುದು ಕಿಚ್ಚ ಸುದೀಪ್ ಅಕ್ಕ-ಪಕ್ಕದಲ್ಲಿ ಇವರಿಬ್ಬರು ನಿಂತರೂ ನಿಲ್ಲಬಹುದು. ಅದೃಷ್ಟ ಯಾರಪ್ಪನ ಮನೆ ಸ್ವತ್ತೂ ಅಲ್ಲ ಈ ಕ್ಷಣ ಕೋಟ್ಯಾಧಿಪತಿ ಮನೆಯ ಅಂಗಳದಲ್ಲಿ ಕೇಕೆ ಹಾಕ್ತಿದ್ದರೂ ಮುಂದಿನ ಕ್ಷಣಕ್ಕೆ ಭಿಕ್ಷುಕನ ಮನೆಯಂಗಳಕ್ಕೆ ಶಿಫ್ಟ್ ಆಗಬಹುದು. ಹೀಗಾಗಿ ಪ್ರತಿಕ್ಷಣದ ಮೇಲೂ ಎಲ್ಲರೂ ಕಣ್ಣಿಟ್ಟರಲೆಬೇಕು. ನಮ್ಮ ಅಂಗಳಕ್ಕೆ ಬಂದಾಗ ಅದೃಷ್ಟ ಎನ್ನುವ ಕುದುರೆಯನ್ನ ಕಟ್ಟಿ ಹಾಕಿಕೊಳ್ಳೋದಕ್ಕೂ ರೆಡಿಯಾಗ್ಬೇಕು.
ದೊಡ್ಮನೆ ಅಖಾಡ ಧಗಧಗಿಸುತ್ತಿದೆ, ಕ್ಷಣಕ್ಷಣಕ್ಕೂ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. ಬಿಗ್‌ಬಾಸ್ ಡಿಫರೆಂಟ್ ಟಾಸ್ಕ್ ಕೊಟ್ಟು ಟ್ವಿಸ್ಟ್ ಇಟ್ಟು ದೊಡ್ಮನೆ ರಂಗೇರುವಂತೆ ಮಾಡ್ತಿದ್ದಾರೆ. ಬಿಗ್‌ಬಾಸ್ ಎಂತಹದ್ದೇ ಟಫ್ ಟಾಸ್ಕ್ ಕೊಟ್ಟರೂ, ಎಂತಹದ್ದೇ ಟ್ವಿಸ್ಟ್ ಇಟ್ಟರೂ ಕೂಡ ಅದನ್ನು ಜಯಿಸುವಲ್ಲಿ ಪ್ರಶಾಂತ್ ಹಾಗೂ ಶಮಂತ್ ಯಶಸ್ವಿಯಾಗ್ತಿದ್ದಾರೆ. ದೋಸ್ತಿಗಳಾಗಿದ್ದ ಇವರಿಬ್ಬರ ನಡುವೆ ಈಗ ನೆಕ್ ಟು ನೆಕ್ ಫೈಟ್ ನಡೆಯುತ್ತಿದೆ. ಒಟ್ಟು 8 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿದ್ದು ಹಣಾಹಣಿ ಜೋರಾಗಿದೆ. ಇಲ್ಲಿವರೆಗೂ ಬಂದಿರುವ ನಾವು ಯಾವುದೇ ಕಾರಣಕ್ಕೂ ಈ ವಾರ ಎಲಿಮಿನೇಟ್ ಆಗ್ಬಾರ್ದು ಫೈನಲ್ಸ್ಗೆ ಲಗ್ಗೆ ಇಡಲೆಬೇಕು ಅಂತ 8 ಜನ ಕೂಡ ಹೊಡೆದಾಡುತ್ತಿದ್ದಾರೆ.
ಕಮ್ಮಿಂಗ್ ಸಂಡೇ ಒಳಗಾಗಿ ಮೂರು ಜನ ಸ್ಪರ್ಧಿಗಳು ದೊಡ್ಮನೆಯಿಂದ ಹೊರಗೆ ಹೋಗ್ಬೇಕು. ಐದು ಜನ ಸ್ಪರ್ಧಿಗಳು ಫೈನಲ್ ಕಣಕ್ಕೆ ಜಿಗಿಬೇಕು. ಆ ಐವರು ಸ್ಪರ್ಧಿಗಳಲ್ಲಿ ಪ್ರಶಾಂತ್-ಶಮಂತ್ ಇಬ್ಬರು ರ‍್ತಾರಾ ಎಂಬ ಕೂತೂಹಲ ಹೆಚ್ಚಾಗ್ತಿದೆ. ಟಾಪ್ ೫ನಲ್ಲಿ ಇವರಿಬ್ಬರು ಇದ್ದೇ ಇರುತ್ತಾರೆ ಎನ್ನುವ ಭರವಸೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಪ್ರಶಾಂತ್ ಅವರು ತಮ್ಮ ಶಕ್ತಿಮೀರಿ ಎಫರ್ಟ್ ಹಾಕ್ತಿದ್ದಾರೆ, ಮುಖವಾಡ ಹಾಕಿಕೊಳ್ಳದೇ ಆಟ ಆಡುತ್ತಿದ್ದಾರೆ.
ಶಮಂತ್ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ಕೊಡುತ್ತಾ ಭರ್ಜರಿ ಎಂಟರ್‌ಟೈನ್ಮೆಂಟ್ ಕೊಡ್ತಿದ್ದಾರೆ. ಹೀಗಾಗಿ, ರಿಯಲ್ ವ್ಯಕ್ತಿತ್ವಕ್ಕೆ ಮಣೆಹಾಕೋಣ, ರಿಯಲ್ ಸ್ಪರ್ಧಿಗಳನ್ನು ಗೆಲ್ಲಿಸೋಣ ಅಂತ ಕೆಲವರು ಪಣತೊಟ್ಟಿದ್ದಾರೆ. ಹೀಗೆ ಕೆಲವರ ಆಸೆಯಂತೆ ಇವರಿಬ್ಬರು ಸುದೀಪ್ ಅಕ್ಕ-ಪಕ್ಕ ನಿಲ್ತಾರೆ ವೇಯ್ಟ್ ಅಂಡ್ ಸೀ ಅಷ್ಟೇ.
ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಜನರ ಬೆಂಬಲ ಸಿಕ್ಕಿದ್ದು ಹೆಚ್ಚು. ಅದರಲ್ಲೂ ಇತ್ತೀಚಿಗೆ ಹೊಸ ತಂಡ ಕಟ್ಟಿಕೊಂಡು ವಿಭಿನ್ನ ಕಥಾ ಹಂದರದ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ತುಸು ಹೆಚ್ಚುತ್ತಲೇ ಇದೆ. ಅಂಥದ್ದೇ ಒಂದು ಉತ್ಸಾಹಿ ಯುವಕರ ತಂಡ ವಿಭಿನ್ನ ಕಥೆ ಇರುವ ಸಿನಿಮಾ ಮಾಡಿದೆ. ಅವರ ಹೊಸ ಪ್ರಯತ್ನಕ್ಕೆ “TT # 50” ಎಂದು ಹೆಸರಿಡಲಾಗಿದೆ. ಆಗಸ್ಟ್ 13 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಕೃಷ್ಣ. ಎಲ್ ರಂಗಭೂಮಿಯೊಂದಿಗೆ ಒಡನಾಟ ಹೊಂದಿದ್ದು, ಹಿರಿ ತೆರೆಯಲ್ಲಿ ಮೊದಲ ಬಾರಿಗೆ ತಾವೇ ಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೊತೆಯಲ್ಲಿ ನಿರ್ಮಾಣ ಕೂಡ ಇವರದೆ. ಸಸ್ಪೆನ್ಸ್ ಅಂಶವಿರುವ ಈ ಚಿತ್ರದ ಚಿತ್ರೀಕರಣ ಭದ್ರಾವತಿಯಲ್ಲಿ ಹೆಚ್ಚಿನ ಭಾಗ ನಡೆದಿದೆ.
ಇನ್ನು ಈ ಚಿತ್ರಕ್ಕೆ ಕರ್ಣ ಎಸ್.ರಾಮಚಂದ್ರ ಹೀರೋ. ಅವರು ಹೇಳುವಂತೆ, “ನಾನು ಹತ್ತು ವರ್ಷದ ಹಿಂದೆ “ಫೆಬ್ರವರಿ ೧೪” ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕಾರಣಾಂತರದಿಂದ ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಅಭಿನಯದ ಧಾರಾವಾಹಿ ನೋಡಿದ ನಿರ್ದೇಶಕರು ನನಗೆ ಈ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದ್ದಾರೆ ಅಂತ ಧನ್ಯವಾದ ಅರ್ಪಿಸಿದರು ಅವರು.
ಎರಡನೇ ನಾಯಕನಾಗಿ ನಟಿಸಿರುವ ಹೇಮಂತ್ ಕುಮಾರ್ ಅವರಿಗೂ ಇದು ಮೊದಲ ಚಿತ್ರವಂತೆ. ಒಂದು ಹಾಡಿರುವ ಚಿತ್ರಕ್ಕೆ ಮುರಳೀಧರನ್ ಸಂಗೀತ ನೀಡಿದ್ದಾರೆ. ದಿವ್ಯ ರಾಮಚಂದ್ರ ಹಾಡಿದ್ದಾರೆ. ಶಿವಕುಮಾರ್ ನಾಗನವಿಲು, ನಟ ಪ್ರಶಾಂತ್ ಸಿದ್ದಿ, ಉದ್ಯಮಿ ಪ್ರದೀಪ್ ಕುಮಾರ್, ಶ್ರೀಮಂತ್ ಮಂಜು ಹಾಗೂ ನಿರ್ಮಲ ಇತರರು ಇದ್ದರು.
ತಮ್ಮ ನಟನೆಯಿಂದ ಮನೆಮಾತಾಗಿರುವ ಲಯಕೋಕಿಲ, ಸಂಗೀತ ನಿರ್ದೇಶಕರಾಗಿ ಸರಾದವರು. ಅಷ್ಟೇ ಅಲ್ಲ, ನಟರಾಗಿಯೂ ಗೊತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಲಯಕೋಕಿಲ. ಹೌದು, ಲಯಕೋಕಿಲ ಈಗ ಡೈರೆಕ್ಟರ್. ತಮ್ಮ ಮೊದಲ ಚಿತ್ರಕ್ಕೆ “ತಾಯ್ತ” ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ರಾಮನಗರದ ದರ್ಗಾವೊಂದರಲ್ಲಿ ಸರಳವಾಗಿ ಆರಂಭವಾಗಿದೆ. ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿ ಶುಭಹಾರೈಸಿದ್ದಾರೆ. ಲಯಕೋಕಿಲ ಅವರೆ ಕ್ಲಾಪ್ ಮಾಡುವ ಮೂಲಕ ತಮ್ಮ ನಿರ್ದೇಶನಕ್ಕೆ ಚಾಲನೆ ನೀಡಿದ್ದಾರೆ. ಮೊದಲ ದಿನದ ಚಿತ್ರೀಕರಣವನ್ನು ರಾಮನಗರದ ಸುತ್ತಮುತ್ತ ನಡೆಸಲಾಗಿದೆ.
ಆಗಸ್ಟ್ 5 ರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ನಿರಂತರ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಡಾ.ಶಾಹಿದ್ ಅವರು ನಿರ್ಮಿಸುತ್ತಿದ್ದಾರೆ. ಕಥೆ ಕೂಡ ಶಾಹಿದ್ ಅವರೇ ಬರೆದಿದ್ದಾರೆ. ಲಯಕೋಕಿಲ ಅವರ ಸಂಗೀತ ಇರುವ ಈ ಚಿತ್ರದ ಹಾಡುಗಳನ್ನು ರಾಮನಾರಾಯಣ್ ಬರೆದಿದ್ದಾರೆ. ಆನಂದ್ ಛಾಯಾಗ್ರಹಣವಿದೆ. ಮೋಹನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು, ರಿಹಾನ್ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ.
ರಿಹಾನ್ ಅವರಿಗೆ ಹರ್ಷಿಕಾ ಪೂಣಚ್ಛ ನಾಯಕಿಯಾಗಿದ್ದಾರೆ. ನಾಯಕನ ತಾಯಿ ಪಾತ್ರದಲ್ಲಿ ಸುಮಾಶಾಸ್ತ್ರಿ ಕಾಣಿಸಿಕೊಳ್ಳುತ್ತಿದ್ದಾರೆ. ಲಯಕೋಕಿಲ, ಡಾ. ಶಾಹಿದ್, ಶೋಭ್ ರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ತಾಯ್ತ” ಮಾಮೂಲಿ ಕಥೆಯಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎಂಬುದು ಲಯಕೋಕಿಲ ಅವರ ಮಾತು.
ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿರುವ “ಕೆಜಿಎಫ್-೨” ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇಷ್ಟರಲ್ಲೇ ಸಿನಿಮಾ ಬಿಡುಗಡೆಯ ಅಧಿಕೃತ ಘೋಷಣೆಯಾಗಲಿದೆ. ಈ ಮಧ್ಯೆ ಚಿತ್ರತಂಡ ಸಂಜಯ್ ದತ್ ಅವರ ಮತ್ತೊಂದು ಭರ್ಜರಿ ಪೋಸ್ಟರ್ ಬಿಡುಗಡೆ ಮಾಡಿದೆ.
ಹೌದು, ಜುಲೈ ೨೯ರಂದು ಸಂಜಯ್‌ದತ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ, ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಆ ಪೋಸ್ಟರ್‌ಗೆ ಸಖತ್ ಮೆಚ್ಚುಗೆ ಸಿಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತುತ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿರುವ “ಕೆಜಿಎಫ್-೨” ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಂದಹಾಗೆ, ಪೋಸ್ಟರ್ ರಿಲೀಸ್ ಮಾಡಿ, “ಯುದ್ಧವು ಪ್ರಗತಿಗಾಗಿ ಆಗಿದೆ. ರಣಹದ್ದುಗಳು ಕೂಡ ನನ್ನೊಂದಿಗೆ ಒಪ್ಪುತ್ತವೆ” ಎಂಬ ಬರಹದೊಂದಿಗೆ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಸಂಜಯ್ ದತ್ ಅವರ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಪೋಸ್ಟರ್ ನೋಡಿದವರಿಗೆ ಅವರ ಪಾತ್ರ ನಿಜಕ್ಕೂ ಕುತೂಹಲ ಮೂಡಿಸೋದು ನಿಜ. ಕೈಯಲ್ಲೊಂದು ಖಡ್ಗ, ಕಣ್ಣಿಗೊಂದು ಬ್ಲಾಕ್ ಗ್ಲಾಸ್, ಕಣ್‌ಸೆಳೆಯೋ ಹೇರ್‌ಸ್ಟೈಲ್, ಪೆಪ್ಪರ್ ಸಾಲ್ಟ್ ದಾಡಿ, ಖದರ್ ಲುಕ್‌ನೊಂದಿಗಿರುವ ಪೋಸ್ಟರ್ ಸದ್ಯ ಜೋರು ಸುದ್ದಿ ಮಾಡುತ್ತಿದೆ.
ಇನ್ನು ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ” ಎಂದು ದತ್ ಹೇಳಿದ್ದಾರೆ.
ರಕ್ಷಿತಾ ಪ್ರೇಮ್ ಅವರ ಸೋಷಿಯಲ್ ಮೀಡಿಯಾದಿಂದ ಹೊರಟು ಸಿನಿ ಲಹರಿ ವೆಬ್ ಸೈಟ್ ಗೆ ಬಂದಿರುವ ಇದೊಂದು ಫೋಟೋ ಸಾಕು ದರ್ಶನ್- ರಕ್ಷಿತಾ ಸ್ನೇಹ ಸೌಹಾರ್ದ ಸಂಬಂಧ ಎಷ್ಟು ಪವಿತ್ರವಾದದ್ದು ಮತ್ತು ಎಷ್ಟು ಶಕ್ತಿಯುತವಾದದ್ದು ಅಂತ ಸಾರುವುದಕ್ಕೆ.
ಅಂದ್ಹಾಗೇ, ದರ್ಶನ್- ರಕ್ಷಿತಾರ ಈ ಫೋಟೋ ನೋಡಿ ಕೆಲವರು ಬಾದಾಮ್ ಮಿಲ್ಕ್ ಶೇಕ್ ಕುಡಿದಿರ್ತಾರಂತೆ ಇನ್ನೂ ಕೆಲವರು ಆಲ್ಕೋಹಾಲ್ ಕುಡಿದಿರ್ತಾರಂತೆ. ಅಷ್ಟಕ್ಕೂ ಹೀಗಂತ ನಾವು ಹೇಳ್ತಿಲ್ಲ ಗಾಂಧಿನಗರದ ಪಂಡಿತರ ಬಜಾರ್ ಮಾತುಕತೆ ಅಷ್ಟೇ. ಅದು ಏನೇ ಇರಲಿ ದಚ್ಚು – ರಕ್ಷು ಸ್ನೇಹ- ಸಂಬಂಧಕ್ಕೆ ಯಾರ ಕಣ್ಣು ಬೀಳದೇ ಇರಲಿ ಅಂತ ಒಂದು ದೃಷ್ಠಿ ತೆಗೆದು ಬಿಸಾಕಿ ಬಿಡೋಣ ಅಲ್ಲವೇ.
ಚಾಲೆಂಜಿಂಗ್ ಸ್ಟಾರ್ ಹಾಗೂ ರಕ್ಷಿತಾ ಮೇಡಂ ರೀಲ್ ಲೈಫ್ ಕೋಸ್ಟಾರ್ಸ್ ಮಾತ್ರವಲ್ಲ ಬಹುಕಾಲದ ಫ್ರೆಂಡ್ಸ್ ಕೂಡ ಹೌದು. ಕಷ್ಟ- ದುಃಖ- ನೋವು- ನಲಿವು ಎಲ್ಲದರಲ್ಲೂ ಪರಸ್ಪರ ಭಾಗಿಯಾಗಿದ್ದಾರೆ. ಒಂದೇ ಕುಟುಂಬದಂತಿರುವ ಇವರಿಬ್ಬರು ಭರ್ತಿ 25 ವರ್ಷಗಳಿಂದ ತಮ್ಮ ಸ್ನೇಹ-ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಬಿರುಗಾಳಿಯಲ್ಲ ಸುನಾಮಿ ಸುಂಟರಗಾಳಿ ಎದ್ದರೂ ಕೂಡ ತಮ್ಮ ಸ್ನೇಹಸೇತುವೆ ಕಳಚಿ ಬೀಳೋದಿರಲಿ, ಅಲುಗಾಡುವುದಕ್ಕೆ ಬಿಡಲ್ಲ ಎನ್ನುವುದಕ್ಕೆ ರಕ್ಷಿತಾ ಪೋಸ್ಟ್ ಮಾಡಿರುವ ಈ ಫೋಟೋ ಹಾಗೂ ಬರೆದಿರುವ ಈ ಸಾಲುಗಳೇ ಸಾಕ್ಷಿ.
‘ಕೆಲವು ಸಂಬಂಧಗಳು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ನೀನು ನನ್ನ ಜೊತೆ ಇರುತ್ತೀಯೆಂದು. ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ’ ಹೀಗಂತ ಟ್ವೀಟ್ ಮಾಡಿದ್ದಾರೆ ರಕ್ಷಿತಾ.
ಪ್ರೇಮ್ ಏನ್ ದೊಡ್ಡ ಪುಡಾಂಗುನಾ .. ನಾನು ನೋಡಿದ್ದೀನಿ ಕರಿಯ ಟೈಮ್ ನಿಂದ ಹೀಗಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಡುಗಿದ್ದೇ ಬಂತು ಗಾಂಧಿನಗರದಲ್ಲಿ ಬೆಂಕಿಕಡ್ಡಿ ಗೀರೋರ್ ಸಂಖ್ಯೆ ಏಕ್ದಮ್ ಜಾಸ್ತಿಯಾಯ್ತು. ಪ್ರೇಮ್ ಅಂಡ್ ರಕ್ಷಿತಾಗೆ ಫೋನ್ ಮೇಲ್ ಫೋನ್. ಏನೇ ಆಗಲಿ ಪ್ರೇಮ್ ಅವರೇ ದರ್ಶನ್ ನಿಮ್ಮನ್ನ ಪುಡಾಂಗುನಾ ಎನ್ನಬಾರದಿತ್ತು. ಏನೇ ಆಗಲಿ ಮೇಡಂ ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಗಂಡನ ಬಗ್ಗೆ ಇಷ್ಟು ಚೀಪಾಗಿ ಮಾತನಾಡಬಾರದಿತ್ತು ಹೀಗಂತ ಫೋನ್ ಮಾಡಿ ಹೇಳಿ ಹೇಳಿ ಪ್ರೇಮ್ ಹಾಗೂ ರಕ್ಷಿತಾರ ನೆಮ್ಮದಿ ಕದಡಿದರು. ಹೀಗಾಗಿ, ರಕ್ಷಿತಾ ಹಾಗೂ ಪ್ರೇಮ್ ಇಬ್ಬರು ಕೂಡ ಬೇಸರದಿಂದಲೇ ತಮ್ಮ ಪ್ರತಿಕ್ರಿಯೆ ಹೊರ ಹಾಕಿದ್ದರು.
ಸುದ್ದಿ ಗೋಷ್ಠಿ ಮಾಡಿದ ಪ್ರೇಮ್ ದರ್ಶನ್ ಹೇಳಿಕೆಯಿಂದ ನನ್ನ ಮನಸ್ಸಿಗೆ ಬೇಜಾರಾಗಿದೆ. ನನ್ನ ಕೆಲಸದ ಬಗ್ಗೆ ರಾಜ್ ಕುಮಾರ್ ಹಾಗೂ ರಜನಿಕಾಂತ್ ರಂತಹ ದಿಗ್ಗಜರೆಲ್ಲ ಕೊಂಡಾಡಿದ್ದಾರೆ. ನನಗೂ ನನ್ನದೇ ಆದ ಅಭಿಮಾನಿಗಳಿದ್ದಾರೆ ಅವರೆಲ್ಲರಿಗೂ ಬೇಜಾರಾಗಿದೆ. ಹೀಗಾಗಿ ಬಹಿರಂಗವಾಗಿ ಪ್ರೆಸ್ಮೀಟ್ ಮಾಡ್ತಿದ್ದೇನೆಂದು ಪ್ರೇಮ್ ತಮ್ಮ ಅಸಮಾಧಾನ ಹೊರಹಾಕಿದ್ದರು.
ಅದರಂತೇ ರಕ್ಷಿತಾ ಕೂಡ ಕೊಂಚ ಗರಂ ಆಗಿಯೇ ದಚ್ಚು ಪುಡಾಂಗು ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದರು. ಖಾಸಗಿ ಚಾನಲ್ ಜೊತೆ ಮಾತನಾಡುತ್ತಾ, ನಾನು ಪ್ರೇಮ್ ಪರವಾಗಿ ನಿಂತಿದ್ದೀನಿ ಅಂದ ಮಾತ್ರಕ್ಕೆ ನಾನು ದರ್ಶನ್ ವಿರುದ್ದ ಅಂತಲ್ಲ . ಇಬ್ಬರ ಪರವಾಗಿಯೂ ಇರುತ್ತೇನೆಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ, ರಕ್ಷಿತಾ ಹೇಳಿಕೆಯನ್ನು ಕಿವಿಗೆ ಹಾಕಿಕೊಳ್ಳದ ಮಂದಿ ದಚ್ಚು – ರಕ್ಷಿತಾ ಗೆಳೆತನ ಮುರಿದು ಬಿತ್ತು ಬಿಡು ಗುರು. ಇನ್ಮುಂದೆ ಅವರಿಬ್ಬರು ಒಂದಾಗೋದು ಡೌಟು ಅಂತ ಮಾತನಾಡಿಕೊಂಡಿದ್ದರು. ಅವರೆಲ್ಲರೂ ಈಗ ಗಪ್‌ಚುಪ್ ಆಗಿದ್ದಾರೆ. ಯಾಕಂದ್ರೆ, ದರ್ಶನ್ – ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಒಬ್ಬರಿಗೊಬ್ಬರು ಕುಳಿತು ಕಷ್ಟ ಸುಖ ಮಾತನಾಡಿದ್ದಾರೆ. ಫ್ಯಾಮಿಲಿಯೊಟ್ಟಿಗೆ ಒಂದೊಳ್ಳೆ ಊಟ ಮಾಡಿ ಸೆಲ್ಫಿಗೆ ಪೋಜು ಕೊಟ್ಟಿದ್ದಾರೆ. ಕೊನೆ ಉಸಿರು ಇರುವವರೆಗೆ ನಾವಿಬ್ಬರು ಸ್ನೇಹಿತರಾಗಿರೋಣವೆಂದು ಶೇಕ್ ಹ್ಯಾಂಡ್ ಮಾಡಿ ಸಂಭ್ರಮಿಸಿದ್ದಾರೆ. ಸ್ನೇಹ ಅಜರಾಮರವೆಂದು ಸಾರಿದ್ದಾರೆ.
ಅಂತೂ ಇಂತೂ ಚಿತ್ರರಂಗ ಈಗ ಗರಿಗೆದರಿದೆ. ಕೊರೊನಾ ಹೊಡೆತಕ್ಕೆ ಬಣ್ಣ ಕಳಚಿಕೊಂಡಿದ್ದ ಕನ್ನಡ ಚಿತ್ರರಂಗ ಈಗ ಕಲರ್ ಫುಲ್ ಆಗಿದೆ. ಈಗ ಮೆಲ್ಲನೆ ಒಂದೊಂದೇ ಸಿನಿಮಾಗಳು ಥಿಯೇಟರ್ ನತ್ತ ಮುಖ ಮಾಡಲು ಸಜ್ಜಾಗಿವೆ. ಆ ಸಾಲಿಗೆ ಈಗ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರವೂ ಸೇರಿದೆ.
ಹೌದು, ಅನ್ ಲಾಕ್ 4.0 ಆದರೂ ಇನ್ನು ಸಿನಿಮಾ ಥಿಯೆಟರ್ ಪೂರ್ತಿ ಓಪನ್ ಆಗಿಲ್ಲಾ. ಸರ್ಕಾರ ಶೇ.50 ರಷ್ಟು ಮಾತ್ರ ಅನುಮತಿ ನೀಡಿದೆ. ಹೀಗಿದ್ದರೂ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಾಲುಗಟ್ಟಿವೆ. ರೆಡಿಯಾಗಿ ನಿಂತಿವೆ. ಈ ನಡುವೆಯೇ ಯೋಗಿಅಭಿನಯದ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ರಿಲೀಸ್ ಗೂ ಮುನ್ನವೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆನಂದ್ ಆಡಿಯೋ ಯುಟ್ಯಬ್ ಚಾನೆಲ್ ನಲ್ಲಿ ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದೆ.
ಸದ್ಯ ಸಿನಿಮಾ ಪ್ರಚಾರ ಶುರು ಮಾಡಿರುವ ಚಿತ್ರತಂಡ, ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಇಲ್ಲಿ ಲೂಸ್ ಮಾದ ಯೋಗಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ಜೋಡಿಯಾಗಿದ್ದಾರೆ. ನಟ ಸಂಚಾರಿ ವಿಜಯ್ ಅವರು ಕೂಡ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.
ಈ ಚಿತ್ರಕ್ಕೆ ರಾಮ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳುವ ಅವರು, ‘ಸ್ವಲ್ಪ ದುಃಖ ಹಾಗೂ ಹೆಚ್ಚಿನ ಸಂತೋಷವನ್ನು ಹಾಡಿನ ಮೂಲಕ ಹೇಳಬೇಕೆಂದುಕೊಂಡೆ. ಈ ವಿಷಯವನ್ನು ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಹೇಳಿದಾಗ “ನಯನಕ್ಕೆ ನಯನ ಸೇರೋ ಕ್ಷಣ” ಎಂಬ ಸುಂದರ ಗೀತೆ ಬರೆದುಕೊಟ್ಟರು. ಅಷ್ಟೇ ಮಧುರವಾಗಿ ಕಾರ್ತಿಕ್ ಶರ್ಮ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಯೋಗಿ ಹಾಗೂ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.
ತುಂಬಾ ದಿನಗಳ ನಂತರ ಎಲ್ಲರನ್ನೂ ನೋಡಿ ಸಂತಸವಾಗುತ್ತಿದೆ ಎಂದು ಮಾತು ಆರಂಭಿಸಿದ, ನಾಯಕಿ ಕೃಷಿ ತಾಪಂಡ ಈ ಹಾಡು ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವದ ಮಾತುಗಳಾಡಿದರು.
ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲಂಕೆಗೆ ಕಾರ್ತಿಕ್ ಶರ್ಮ ಅವರ ಸಂಗೀತದ ಸ್ಪರ್ಶವಿದೆ.
ಇಲ್ಲಿ ಇನ್ನೊಂದು ವಿಶೇಷ ಅಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ‘ಸಲಗ’ ಕೂಡ ಅನೌನ್ಸ್ ಆಗಿದ್ದು, ಅಂದೇ ಲಂಕೆಯ ಲಂಕಾಧಿಪತಿಯ ಎಂಟ್ರಿಯಾಗಲಿದೆ. ಒಟ್ಟಾರೆ ಭಾವ-ಬಾಮೈದ ಒಟ್ಟಿಗೆ ಬರ‍್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.
ಚಿತ್ರದ ನಾಲ್ಕು ಹಾಡುಗಳು ಬೇರೆ ಬೇರೆ ಶೈಲಿಯಲ್ಲಿದೆ. ಈ ಹಾಡು ಸೂಫಿ ಹಾಗೂ ಕವಾಲಿ ಶೈಲಿಯಲ್ಲಿದೆ. ಗೌಸ್ ಫಿರ್ ಅವರ ಸಾಹಿತ್ಯ ಸೊಗಸಾಗಿದೆ ಹಾಗೂ ಈ ಹಾಡನ್ನು ಕನ್ನಡದವರೇ ಆದ ಧನುಷ್ ಜಗದೀಶ್ ಹಾಗೂ ರಕ್ಷಿತ ಸುರೇಶ್ ಹಾಡಿದ್ದಾರೆ ಎಂದು ಚಿತ್ರದ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕಾರ್ತಿಕ ಶರ್ಮ ಮಾಹಿತಿ ನೀಡಿದರು.
ಗೀತರಚನೆಕಾರ ಗೌಸ್ ಫಿರ್ ಅವರು ತಾವು ಬರೆದಿರುವ ಈ ಹಾಡಿನ ಬಗ್ಗೆ ಮಾತನಾಡಿ, ಸಂಗೀತ ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹೀಗೊಂದು ಸಂತಸದ ಸುದ್ದಿ. ಅದೇನಪ್ಪಾ ಅಂದ್ರೆ, ಅವರ ಅಭಿನಯದ ‘ಕೋಟಿಗೊಬ್ಬ 3’ ಬಿಡುಗಡೆ ಸುದ್ದಿ. ಹೌದು, ಕೊರೊನಾ ಹಾವಳಿಯಿಂದಾಗಿ ಇಡೀ ಚಿತ್ರರಂಗವೇ ನಲುಗಿತ್ತು. ಈಗ ಚಿತ್ರಮಂದಿರಗಳಲ್ಲಿ ಸರ್ಕಾರ ಶೇ.50ರಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದರ ಬೆನ್ನಲ್ಲೇ ಶಿವರಾಜ ಕುಮಾರ್ ಅಭಿನಯದ ‘ಭಜರಂಗಿ -2’ ‘ದುನಿಯಾ’ವಿಜಯ್ ಅಭಿನಯದ ‘ಸಲಗ’, ‘ಡಾಲಿ’ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾಗಳು ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಸುದೀಪ್ ಫ್ಯಾನ್ಸ್ ಕೂಡ ‘ಕೋಟಿಗೊಬ್ಬ 3’ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಯಾವಾಗ ರಿಲೀಸ್ ಆಗುತ್ತೋ ಏನೋ ಅಂತಂದುಕೊಂಡಿದ್ದ ಫ್ಯಾನ್ಸ್ ಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 2 ಸುದೀಪ್ ಅವರ ಹುಟ್ಟುಹಬ್ಬ. ಅಂದು ಅವರ ಅಭಿನಯದ ‘ಕೋಟಿಗೊಬ್ಬ 3’ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಡಿದೆ. ನಿರ್ಮಾಪಕ ಸೂರಪ್ಪ ಬಾಬು ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ. ಈಗಾಗಲೇ ಚಿತ್ರ ಪೂರ್ಣ ರೆಡಿಯಾಗಿ ಬಿಡುಗಡೆಗೆ ಸಜ್ಜಾಗಿದೆ. ಇನ್ನೇನಿದ್ದರೂ ಥಿಯೇಟರ್ ಕಡೆ ಲಗ್ಗೆ ಇಡಬೇಕಷ್ಟೆ. ಈ ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿದ ಬಳಿಕ ಸುದೀಪ್ ಇಷ್ಟರಲ್ಲೆ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದರು. ಇನ್ನು ಈ ಚಿತ್ರ ಬಹುತೇಕ ವಿದೇಶದಲ್ಲೇ ಚಿತ್ರೀಕರಣಗೊಂಡಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ 2 ರಂದು ಚಿತ್ರ ಬಿಡುಗಡೆ ಆಗಲಿದೆ. ಕಿಚ್ಚನ ಹುಡುಗರು ಸದ್ಯ ಸುದೀಪ್ ಹುಟ್ಟುಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಅಂದೇಎ ಕೋಟಿಗೊಬ್ಬನ ದರ್ಶನ ಮಾಡುವ ಉತ್ಸಾಹದಲ್ಲಿದ್ದಾರೆ.