Categories
ಸಿನಿ ಸುದ್ದಿ

ಸೂಪರ್‌ ಕಪಲ್‌… ! ಇಲ್ಲಿದೆ ರೋಚಕತೆಯ ಫ್ಯಾಮಿಲಿ ಮ್ಯಾಟರ್!! ಇದು ಕನ್ನಡದ ಹೊಸ ವೆಬ್ ಸರಣಿ…

ಸದ್ಯ ಈಗ ಡಿಜಿಟಲ್ ಮಾಧ್ಯಮದ್ದೇ ಹವಾ! ಹೌದು, ಅದರಲ್ಲೂ ಮನರಂಜನೆ ವಿಷಯದಲ್ಲಂತೂ ಒಂದು ಹೆಜ್ಜೆ ಮುಂದೆ. ಸಾಕಷ್ಟು ಡಿಜಿಟಲ್ ಮಾಧ್ಯಮಗಳಲ್ಲಿ ಮನರಂಜನೆ ಅಂಶಗಳದ್ದೇ ಕಾರುಬಾರು. ಅಂತಹ ಮನರಂಜನೆಗೆ ಮತ್ತೊಂದು ವೇದಿಕೆಯ ಹೆಸರು “ಮಾಧ್ಯಮ ಅನೇಕ”. ಇಲ್ಲೀಗ ವೆಬ್ ಸರಣಿಯೊಂದು ಶುರುವಾಗುತ್ತಿದೆ. ಅದರ ಹೆಸರು ” ಸೂಪರ್ ಕಪಲ್” ಈಗಾಗಲೇ ಅದರ ಸ್ಯಾಂಪಲ್ ಎಂಬಂತೆ ಆ ವೆಬ್ ಸರಣಿಯ ಟೀಸರ್ ಕೂಡ ರಿಲೀಸ್ ಆಗಿದೆ. ಟೀಸರ್ ನೋಡಿದವರಿಗೆ ಸಖತ್ ಮಜವಂತೂ ಕಾಣಿಸುತ್ತೆ. ಇನ್ನು ಸರಣಿಯಲ್ಲಿ ಏನೆಲ್ಲಾ ಇರಬಹುದು ಅನ್ನೋ ಕುತೂಹಲ ಸಹಜವೇ.


ಈ ಸೂಪರ್ ಕಪಲ್ ಬಗ್ಗೆ ಹೇಳೋದಾದರೆ,
“ಬೆಂಗಳೂರಿನಂಥ ಮಹಾನಗರದಲ್ಲಿ ವಾಸ ಮಾಡುತ್ತಾ ಆಧುನಿಕ ಜೀವನ ಶೈಲಿ ಅನುಸರಿಸುತ್ತಿರುವ ಯುವ ದಂಪತಿ ಈಶ್ವರ್ ಮತ್ತು ಶಾರ್ವರಿ. ಇಬ್ಬರ ಸ್ವಭಾವ ತದ್ವಿರುದ್ಧ. ಆದರೆ, ಪರಸ್ಪರರಲ್ಲಿ ಪ್ರೀತಿ, ಗೌರವವಿದೆ. ಇಬ್ಬರದ್ದೂ ಒಂದೇ ಗುರಿ, ಆದರೆ ದಾರಿ ಮಾತ್ರ ಭಿನ್ನ. ಈ ಜೋಡಿಯ ಬದುಕಿನ ನೈಜ ಹಾಸ್ಯ ಘಟನಾವಳಿಗಳನ್ನು ಕಚ್ಚಾಟ, ಕಿರುಚಾಟಗಳಿಲ್ಲದೆ ಕಟ್ಟಿಕೊಡುವ ಈ ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೊದಲ ಸೀಸನ್‌ ನೋಡುಗರನ್ನು ತಲುಪಿ ಈಗಾಗಲೇ ಮೆಚ್ಚುಗೆ ಪಡೆದಿತ್ತು. ಆ ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ‘ಸೂಪರ್‌ ಕಪಲ್‌’ ಎರಡನೆಯ ಕಂತು ರೂಪುಗೊಂಡು ಪ್ರಸಾರಕ್ಕೆ ಸಿದ್ಧವಾಗಿದೆ.


ರಘು ಅವರು ಇಲ್ಲಿ ‘ಈಶ್ವರ್’ ಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ತೇಜಸ್ವಿನಿ ಅವರು ‘ಶಾರ್ವರಿ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸರಣಿಯ ಮತ್ತಿಬ್ಬರು ಯುವ ಪ್ರತಿಭೆಗಳು ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ಪ್ರೇರಣಾ ಕಂಬಂ ಮತ್ತು ಉದಯ ಮ್ಯೂಸಿಕ್‌ನ ವಿಜೆ ಇಮ್ರಾನ್ ಪಾಷಾ. ‘ಸೂಪರ್ ಕಪಲ್‌’ನ ದಿನ ನಿತ್ಯದ ಬದುಕಿನಲ್ಲಿ ಇನ್ನಷ್ಟು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಹುಟ್ಟು ಹಾಕುವ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ದಂಪತಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಉದ್ಭವ ಆಗುವ ಹಲವಾರು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಬಿಂಬಿಸುವ, ಯುವ ಜನರ ಜೊತೆಗೆ, ಕುಟುಂಬದ ಎಲ್ಲರೂ ನೋಡಿ ಖುಷಿ ಪಡಬಹುದಾದ ವೆಬ್‌ ಸರಣಿ ಇದಾಗಿದೆ. ರಘುನಂದನ್ ಖಾನಡ್ಕ ಮತ್ತು ಪುನೀತ್ ಕಬ್ಬೂರು ಸರಣಿಯ ನಿರ್ದೇಶಕರು. ಏಪ್ರಿಲ್‌ 30ರಂದು ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಮೇ 3 ರಂದು ಸರಣಿಯ ಸಂಚಿಕೆ ‘ಮಾಧ್ಯಮ ಅನೇಕ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಸ್ಟ್ರೀಮ್‌ ಆಗಲಿದೆ.
ಅಂದಹಾಗೆ,
2018ರಲ್ಲಿ ಆರಂಭಗೊಂಡ ‘ಮಾಧ್ಯಮ ಅನೇಕ’ ಮೌಲ್ಯಯುತವಾದ, ಹೊಸತನ ಹಾಗೂ ಉತ್ತಮ ಗುಣಮಟ್ಟದ ಮಾಹಿತಿ ಮತ್ತು ಮನರಂಜನಾ ಕಾರ್ಯಕ್ರಮ, ಸಾಕ್ಷ್ಯಚಿತ್ರಗಳು, ಸಂದರ್ಶನಗಳು, ವೆಬ್ ಆಧಾರಿತ ಮನರಂಜನೆ‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

Categories
ಸಿನಿ ಸುದ್ದಿ

ಕೊರೊನೊ ಸಂಕಷ್ಟಕ್ಕೆ ಮಿಡಿಯುತ್ತಿರೋ ಮನಸುಗಳು! ಕನ್ನಡ ನಟನೊಬ್ಬ ಆಂಬುಲೆನ್ಸ್ ಚಾಲಕನಾಗಿ ಸೇವೆ

ಕೊರೊನಾ ಸಾಕಷ್ಟು ಸಮಸ್ಯೆ ಹುಟ್ಟು ಹಾಕಿದೆ. ಅದಷ್ಟೇ ಅಲ್ಲ, ಅದೆಷ್ಟೊ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ, ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸಿಗದ ಬೆಡ್ ಮತ್ತು ಆಕ್ಸಿಜನ್. ಇದರಿಂದ ಜನ ಪರದಾಡುತ್ತಿದ್ದಾರೆ. ಸಾವಿನ ದವಡೆಯಲ್ಲಿದ್ದಾರೆ. ಇದನ್ನರಿತ ಸಾಕಷ್ಟು ಮಂದಿ ಹಲವು ಸೇವೆಗೆ ಮುಂದಾಗಿದ್ದಾರೆ. ಇದಕ್ಕೆ ಸಿನಿಮಾ ರಂಗದ ಮಂದಿಯೂ ಹೊರತಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಹಲವು ಸಿನಿಮಾ ನಟ, ನಟಿಯರು ತಮ್ಮದೇ ರೂಟಿನಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಮಂದಿ ಕೂಡ ಕೊರೊನಾ ವಿರುದ್ಧ ನಿಂತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಟನೊಬ್ಬ ಕೂಡ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಆಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಅದು ಬೇರಾರೂ ಅಲ್ಲ, ನಟ ಅರ್ಜುನ್ ಗೌಡ. ಅವರು ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದೇ ವಿಶೇಷ. ತೀವ್ರ ಸಮಸ್ಯೆಯಲ್ಲಿರುವ ಜನರಿಗೆ ಅರ್ಜುನ್ ಗೌಡ ಸಹಾಯಕ್ಕೆ ನಿಂತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವುದರ ಜೊತೆ ಮೃತಪಟ್ಟವರ ಅಂತಿಮ ವಿಧಿವಿಧಾನ ನೆರವೇರಿಸಲು ಆಂಬುಲೆನ್ಸ್ ಸೇವೆಯನ್ನು ಮಾಡುತ್ತಿದ್ದಾರೆ.

ಈಗಾಗಲೇ ಸಾಕಷ್ಟು ಮಂದಿಗೆ ಅರ್ಜುನ್ ಸಹಾಯ ಮಾಡಿರುವ ಅವರು, ಮುಂದಿನ ಎರಡು ತಿಂಗಳು ಈ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಕೇವಲ ರೋಗಿಗಳನ್ನು ಕರೆದೊಯ್ಯುವುದು ಮತ್ತು ಮೃತದೇಹಗಳನ್ನು ಸಾಗಿಸುವುದು ಮಾತ್ರವಲ್ಲದೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Categories
ಸಿನಿ ಸುದ್ದಿ

ಖ್ಯಾತ ತಮಿಳು ಛಾಯಾಗ್ರಾಹಕ , ನಿರ್ದೇಶಕ ಕೆ. ವಿ. ಆನಂದ್ ನಿಧನ

ಇತ್ತೀಚೆಗೆ ಚಿತ್ರರಂಗದಲ್ಲಿ ಆಘಾತಕಾರಿ ವಿಷಯಗಳು ಹೆಚ್ಚಾಗಿವೆ‌.‌ ಒಂದೆಡೆ ಕೊರೊನಾ ಹಾವಳಿಯಾದರೆ ಇನ್ನೊಂದೆಡೆ ಚಿತ್ರೋದ್ಯಮದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ‌.

ಹೌದು, ಕರ್ನಾಟಕದ ಜನರು ಸಾವು ನೋವುಗಳ ಜೊತೆ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ನಾನಾ ರಂಗದಲ್ಲಿನ ದಿಗ್ಗಜರು ಕೊರೋನಾದಿಂದ ಮೃತಪಟ್ಟಿದ್ದಾರೆ.

54 ವರ್ಷ ವಯಸ್ಸಿನ ಖ್ಯಾತ ತಮಿಳು ಸಿನಿಮಾ ನಿರ್ದೇಶಕ ಕೆ ವಿ ಆನಂದ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಪತ್ರಕರ್ತರಾಗಿ ಸಿನಿಮಾ ರಂಗ ಪ್ರವೇಶಿಸಿದ ಇವರು ಛಾಯಾಗ್ರಹಣ ಅಂದರೆ ಇಷ್ಟ ಪಡುತ್ತಿದ್ದರು‌.

ಇವರು ಮೋಹನ್ ಲಾಲ್ ಅಭಿನಯಿಸಿದ ತೇನ್ ಮಾವಿನ್ ಕೊಂಬತ್ತ್ ಸಿನಿಮಾಗೆ ಕೊಡುಗೆನೀಡಿದ್ದರು‌‌. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ‌.

ಇತ್ತೀಚೆಗೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದೆಂಥಹ ಸೆಲೆಬ್ರಿಟಿಯನ್ನೂ ಬಿಡುತ್ತಿಲ್ಲ. ಇತ್ತೀಚೆಗೆ ಸಿನಿಮಾ ರಂಗದ ಹಲವರನ್ನು ಕೊರೊನಾ ಬಲಿತೆಗೆದುಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.

Categories
ಸಿನಿ ಸುದ್ದಿ

ಮೊಗ್ಗಿನ ಮನಸ್ಸು ನಿರ್ದೇಶಕ ಶಶಾಂಕ್ ಮತ್ತೆ ಹೊಸ ಪ್ರತಿಭೆ ಜೊತೆ ಸಿನಿಮಾ ; ಹೆಸರಿಡದ ಚಿತ್ರಕ್ಕೆ ನೆರವೇರಿತು ಮುಹೂರ್ತ

ಕನ್ನಡದಲ್ಲಿ ಹೊಸಬರ ಹಿಂದೆ ನಿಂತು ಸಾಬೀತುಪಡಿಸಿದ ನಿರ್ದೇಶಕ ಶಶಾಂಕ್, ಈಗ ಮತ್ತೆ ಹೊಸಬರ ಹಿಂದೆ ಹೊರಟಿದ್ದಾರೆ. ಹೌದು, ಶಶಾಂಕ್ ಈಗ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ.
“ಶಶಾಂಕ್ ಸಿನೆಮಾಸ್” ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಸದ ಮೂಲಕ‌ ಅವರು “ಪ್ರವೀಣ್” ಎಂಬ ಹೊಸ ನಾಯಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ವೈದ್ಯಕೀಯ ಪದವೀಧರರಾದ ಪ್ರವೀಣ್ ಅವರು ಹೊಸಪೇಟೆ ಮೂಲದವರಾಗಿದ್ದು, ಹೀರೋ ಆಗಬೇಕೆಂದು ಬಂದಿದ್ದಾರೆ. ಅಷ್ಟೇ ಅಲ್ಲ, ಅವರು ನಟನಾಗುವ ಆಸಕ್ತಿಯಿಂದ ಅದಕ್ಕೆ ಬೇಕಾಗುವ ಎಲ್ಲಾ ತರಬೇತಿ ಪಡೆದು ಬೆಳ್ಳಿತೆರೆಗೆ ಎಂಟ್ರಿಯಾಗಲು ರೆಡಿಯಾಗಿದ್ದಾರೆ.

ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಭಾವುಕ ಪ್ರೇಮಕಥೆಯ ಈ ಚಿತ್ರಕ್ಕೆ ಶಶಾಂಕ್ ಹೊಸ ನಾಯಕಿಯ ಹುಡುಕಾಟ ನಡೆಸುತ್ತಿದ್ದಾರೆ ಲಾಕ್ಡೌನ್ ಗೂ ಮುನ್ನ ಸರಳವಾಗಿ ಮುಹೂರ್ತ ನೆರವೇರಿದ್ದು, ಲಾಕ್ಡೌನ್ ಮುಗಿದ ನಂತರ ಫೋಟೋ ಶೂಟ್ ಮಾಡಿ, ಶೀರ್ಷಿಕೆಯ ಜೊತೆ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

Categories
ಸಿನಿ ಸುದ್ದಿ

ಕನ್ನಡದ ನಟರನ್ನು ಎಚ್ಚರಿಸಲು ಕೊನೆಗೂ ಸೋನು ಸೂದ್ ಅವರೇ ಬರಬೇಕಾಯಿತಾ..?


ನಟ ಸೋನು ಸೂದ್ ಅಂದ್ರೆ ಎಲ್ಲರಿಗೂ ಗೊತ್ತಿದದ್ದು ಬೆಳ್ಳಿತೆರೆ ಮೇಲಿನ ಒಬ್ಬ ವಿಲನ್ ಆಗಿ. ಅದರಾಚೆ ಅವರು ರಿಯಲ್ ಲೈಫ್ ನಲ್ಲೂ‌ ಹೀರೋ ಅಂತ ಗೊತ್ತಾಗಿದ್ದು ಕಳೆದ ವರ್ಷ ಕೊರೋನಾ ತಂದಿಟ್ಟಿದ್ದ ಸಂಕಷ್ಟದ ಕಾಲದಲ್ಲಿ. ಆ ಸಂದರ್ಭದಲ್ಲಿ ಅವರು ಅದೆಷ್ಟು ಜನರಿಗೆ ಸಹಾಯಕ್ಕೆ ನಿಂತರು ಅನ್ನೋದು ಇಡೀ ಭಾರತಕ್ಕೆ ಗೊತ್ತಾಯಿತು. ಅಷ್ಟು ಮಾತ್ರವಲ್ಲ ಇಡೀ ಇಂಡಿಯಾವೇ ಅವರನ್ನು‌ ಕೊಂಡಾಡಿ ಬಿಟ್ಟಿತು‌. ಇಂತಿಪ್ಪ ವಿಲನ್ ಸೋನು ಸೂದ್ ಈಗ ಕರ್ನಾಟಕಕ್ಕೂ ನೆರವಿನ ಹಸ್ತ ನೀಡುವ ಮೂಲಕ ಸ್ಯಾಂಡಲ್ ವುಡ್ ಶಾಕ್ ಕೊಟ್ಟಿದ್ದಾರೆ. ವಿಶೇಷವಾಗಿ ಕೊರೋನ‌ ಎರಡನೇ ಅಲೆಯಲ್ಲಿ ತತ್ತರಿಸಿರುವ ರಾಜ್ಯದ ಜನತೆಯ ಪರವಾಗಿ ಬೆಂಗಳೂರು ಪೊಲೀಸರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ನೂರು ಆಕ್ಸಿಜನ್ ಕಿಟ್ ನೀಡುವುದಾಗಿ ಹೇಳಿದ್ದಾರೆ.

ಇದು ಅವರ ಸ್ವ ಇಚ್ಚೆಯ ಕೆಲಸ. ಕರ್ನಾಟಕದ ಪೊಲೀಸರು ಕೇಳುವ ಮೊದಲೇ, ಹೃದಯವಂತ ಸೋನು‌ ಸೂದ್ ಈ ಕೆಲಸ‌ ಮಾಡಿದ್ದಾರೆ. ಅದು ಆಗಿದ್ದು‌ ಕೂಡ ಒಂದು ಅಚ್ಚರಿಯೇ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರಿಗೆ ಮುಂಬೈನಿಂದ ಒಂದು‌ ಪೋನ್ ಕಾಲ್ ಬರುತ್ತೆ. ಸಹಜವಾಗಿಯೇ ಅವರು ಯಾರೋ ಇರಬಹುದು ಅಂತ ಹಲೋ‌ ಅಂತಾರೆ. ಆ‌ ಕಡೆಯಿಂದ ಸೋನು‌ ಸೂದ್ ಸಹಾಯಕ ,ಮಾತನಾಡುತ್ತಿರುತ್ತಾನೆ. ಸರ್, ಏಕ್ ಮಿನಿಟ್ ಸಾಬ್ ಬಾತ್ ಕರೋ‌ ಅಂತಾನೆ. ಕಮೀಷನರ್‌ ಕಮಲ್‌ಪಂಥ್ ಆಯ್ತು ಅಂತಾರೆ‌ .ಹಲೋ‌ ಸರ್, ಐ ಅ್ಯಮ್ ಸೋನು‌ಸೂದ್ ಅಂತ ಆ‌ ಕಡೆಯಿಂದ ಧ್ವನಿ‌ ಕೇಳಿಸುತ್ತೆ. ಕಮೀಷನರ್ ಕಮಲ್ ಪಂಥ್ ಅಚ್ಚರಿಗೊಳುತ್ತಾರೆ. ತಕ್ಷಣವೇ ಸೋನು‌ಸೂದ್ ತಾವೇನು ಅಂದುಕೊಂಡಿದ್ದರೋ ಅದನ್ನು‌ ಹೇಳಿ ಪೋನ್ ಕಾಲ್ ಕಟ್ ಮಾಡುತ್ತಾರೆ‌. ಆ ಸಂಭಾಷಣೆ ಪ್ರಕಾರ, ಕರ್ನಾಟಕ ಪೊಲೀಸರಿಗೆ ನೂರು ಆಕ್ಸಿಜನ್ ಕಿಟ್ ನೀಡುವುದಾಗಿ ಸೋನು ಸೂದ್ ಭರವಸೆ ನೀಡಿದ್ದಾರೆ‌.

ಇದು ಸೋನು ಸೂದ್ ಕೆಲಸ. ಬಾಲಿವುಡ್ ನಟ ಸೋನು ಸೂದ್ ಕನ್ನಡಕ್ಕೂ ಪರಿಚಿತರೆ. ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಕನ್ನಡದಂತೆಯೇ ತೆಲುಗು, ತಮಿಳು ಹಾಗೂ‌ ಮಲಯಾಳಂ‌ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಅದರೂ ಅವರಿಗೆ ಕನ್ನಡದ ಮೇಲೆ ವಿಶೇಷ ಅಭಿಮಾನ‌ ಅನ್ನೋ‌ ಮಾತನ್ನು ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು. ಈಗ ಆ ಅಭಿಮಾನವನ್ನು ಇನ್ಮೊಂದು‌ ರೀತಿಯಲ್ಲಿ ತೋರಿಸಿದ್ದಾರೆ. ಕನ್ನಡದ ನಟರಿಗೆ ಇದು ನಿಜಕ್ಕೂ‌ ಮಾದರಿ.‌ ಹಾಗೆಯೇ ಒಂದು ಸಂದೇಶ. ಹಾಗೆ‌ ನೋಡಿದರೆ ಈ ಕೆಲಸ ಇಲ್ಲಿನ ನಟರಿಂದಲೇ‌ ಮೊದಲು ಶುರುವಾಗಬೇಕಿತ್ತು.‌ ಆದರೆ ಅವರೆಲ್ಲ ಈಗ ತಮ್ಮ ತಮ್ಮ‌ ಫಾರ್ಮ್ ಹೌಸ್ ಗಳಲ್ಲಿ ಸುರಕ್ಷಿತ ವಾಗಿದ್ದಾರೆ. ಕೆಲವರು ತಾವೇ ನಿಜವಾದ ರೈತರು ಎನ್ನುವಂತೆ ಫೋಸು ನೀಡುತ್ತಿದ್ದಾರೆ. ತಮ್ಮನ್ನು ಹೊತ್ತು ಮೆರೆದ ಅಭಿಮಾನಿಗಳು‌ ಶವವಾಗಿ ಹೋಗುತ್ತಿದ್ದರೂ ತಾವು‌ ಮಾತ್ರ ಹೀಗೆಯೇ ಅಂತ ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಹಾಯಾಗಿ ಕಾಲ‌ ಕಳೆಯುತ್ತಿದ್ದಾರೆ‌ . ಹಾಗಂತ ಅವರಿಗೇನು ಆಸ್ತಿ- ಅಂತಸ್ತು ಕಮ್ಮಿ ಇಲ್ಲ. ಒಂದೊಂದು ಸಿನಿಮಾಕ್ಕೆ ಇವರೆಲ್ಲ ಏಳೆಂಟು‌ ಕೋಟಿ‌ ಸಂಭಾವನೆ ಎಣಿಸುವವರೆ. ಅವರ ಕಾರು ಬಾರು ನೋಡಿದರೆಯೇ ಜನ ಸಾಮನ್ಯರ ಹೊಟ್ಟೆ ಉರಿಯುತ್ತೆ. ಆದರೆ ಅವರಿಗೆ ಇಂತಹದೊಂದು ಘನ ಕಾರ್ಯ ಮಾಡಬಹುದು ಅಂತ ಇವರಿಗೂ ಎನಿಸಿಲ್ಲ. ಅವರಿಗೆಲ್ಲ ಸೋನು ಸೂದ್ ಕೆಲಸ ಒಂದು‌ ಎಚ್ಚರಿಕೆಯೇ ಆಗಿದೆ. ಇನ್ನಾದರೂ ಕನ್ನಡದ ನಟರು‌ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುತ್ತಾರೆಯೇ ಕಾದು‌ ನೋಡಬೇಕಿದೆ.

Categories
ಸಿನಿ ಸುದ್ದಿ

ಮತ್ತೊಬ್ಬ ನಿರ್ಮಾಪಕ ನಿಧನ; ಅಣ್ಣಯ್ಯ,ರನ್ನ ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ

ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ಚಂದ್ರಶೇಖರ್ ನಿಧನರಾಗಿದ್ದಾರೆ. ಕಳೆದ 23 ದಿನಗಳ ಹಿಂದೆಯೇ ಅವರಿಗೆ ಕೋವಿಡ್ ಪಾಸಿಟಿವ್ ಇತ್ತು. ಮಣಿಪಾಲ್ ಗೆ ದಾಖಲಿಸಲಾಗಿತ್ತು. ಕೊರೊನಾದಿಂದ ಹೊರ ಬಂದಿದ್ದರೂ, ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡು ಗುರುವಾರ ಮುಂಜಾನೆ ನಿಧನರಾಗಿದ್ದಾರೆ.

ನಿಮಿಶಾಂಬ ಪ್ರೊಡಕ್ಷನ್ಸ್ ಮೂಲಕ “ಅಣ್ಣಯ್ಯ”, “ಬಿಂದಾಸ್”, “ಏನೋ ಒಂಥರಾ”, “ರನ್ನ‌” ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು.

ಚಂದ್ರಶೇಖರ್ ಅವರು ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರಿಗಾಗಿ ಸಿನಿಮಾವೊಂದನ್ನು ಮಾಡುವುದಾಗಿ ಅನೌನ್ಸ್ ಮಾಡಿದ್ದರು.

ಕೋಟಿ‌ ನಿರ್ಮಾಪಕ ರಾಮು ಅವರ ಜೊತೆಗೆ ಉದ್ಯಮ ಮತ್ತೊಂದು ಅನ್ನದಾತನ್ನ ಕಳೆದುಕೊಂಡಂತಾಗಿದೆ.

Categories
ಸಿನಿ ಸುದ್ದಿ

ಬರಲಿದೆ ಬರ್ಕ್ಲಿ ಟೀಸರ್: ಇದು ವಿಭಿನ್ನ ಕಥಾಹಂದರದ ಚಿತ್ರ -ಬಾಲರಾಜ್ ಪುತ್ರನ ಸಿಗರೇಟ್ ಕಹಾನಿ ಅಲ್ಲವೇ ಅಲ್ಲ!

ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಈಗ ಬರ್ಕ್ಲಿ ಸಿಗರೇಟ್ ಬೇಕು ಅಂತಿದ್ದಾರೆ. ಅರೇ, ಸಿಗರೇಟ್ ವಿಷಯ ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಇದು ಸಿನಿಮಾ ಸುದ್ದಿ. ಹೌದು “ಬರ್ಕ್ಲಿ” ಚಿತ್ರ ಈಗ ಸದ್ದು ಮಾಡಲು ಸಜ್ಜಾಗಿದೆ.. ಏಪ್ರಿಲ್ 30 ರ ಸಂಜೆ 5 ಗಂಟೆಗೆ ಝೇಂಕಾರ್ ಮ್ಯೂಸಿಕ್ ಮೂಲಕ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ “ಬರ್ಕ್ಲಿ” ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ಸದ್ಯದಲ್ಲೇ ಫಸದಟ್ ಕಾಪಿ ಸಿದ್ದವಾಗಲಿದೆ. ಈಗಾಗಲೇ “ಕರಿಯ”, “ಗಣಪ”, “ಕರಿಯ ೨” ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರವಿದು.
“ಬರ್ಕ್ಲಿ‌” ಒಂದು ಉತ್ತಮ‌ ಮನೋರಂಜನೆ ಸಿನಿಮಾ. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ನಿರ್ದೇಶಕರು. ಚಿತ್ರಕ್ಕೆ ಸಂಗೀತ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರದೇ.


” ಬರ್ಕ್ಲಿ” ಎಂದ ಕೂಡಲೇ ಎಲ್ಲರೂ ಸಿಗರೇಟ್ ಒಂದರ ಹೆಸರು ಅಂದುಕೊಳ್ಳುತ್ತಾರೆ. ಆದರೆ ನಮ್ಮ “ಬರ್ಕ್ಲಿ” ಚಿತ್ರಕ್ಕೂ ಸಿಗರೇಟ್ ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದ ಶೀರ್ಷಿಕೆಯ ಅರ್ಥವೇ ಬೇರೆ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.
“ಗಣಪ”, “ಕರಿಯ ೨” ಚಿತ್ರಗಳಲ್ಲಿ ನಟಿಸಿ
ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ.


ಬಹುಭಾಷಾ ನಟ ಚರಣರಾಜ್, ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ.
“ಬಹದ್ದೂರ್” ಚೇತನ್ ಕುಮಾರ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣವಿದೆ. ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕೊರೋನಾದಿಂದ ಸೇಫ್ ಆಗಿ ಹೊರ ಬಂದ ನಟ ಕೋಮಲ್! ಭಾವುಕತೆಯ ಬರಹದ ಜೊತೆ ರಾಯರಿಗೆ ನಮಿಸಿದ ಜಗ್ಗೇಶ್

ದೇಶಾದ್ಯಂತ ಕೊರೊನಾ ಸೋಂಕು ವಿಪರೀತವಾಗಿ ಹಬ್ಬುತ್ತಿದ್ದು, ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಮಾರಣಾಂತಿಕ ಕಾಯಿಲೆ ದಿನದಿಂದ ದಿನಕ್ಕೆ ಸಾವಿರಾರು ಜನರನ್ನು ಬಲಿ ಪಡೆದುಕೊಳ್ಳುತ್ತಿದೆ. ಈ ಬಿಸಿ ಚಿತ್ರರಂಗಕ್ಕೂ ಬರ ಸಿಡಿಲು ಬಡಿದಂತಾಗಿದೆ. ಇನ್ನೇನು ಚಿತ್ರಗಳು ಬಿಡುಗಡೆಗೆ ಸಿದ್ಧ ಎನ್ನುವ ಹೊತ್ತಿಗೆ, ಚಿತ್ರಮಂದಿರಗಳು ಬಾಗಿಲು ಹಾಕಿದವು. ಇದು ಕೊರೊನಾ ತಂದ ಆಘಾತ. ಇಷ್ಟೇ ಅಲ್ಲ, ಸಿನಿಮಾ ಮಂದಿಯ ಬದುಕನ್ನೇ ಬೀದಿಗೆ ತಳ್ಳಿದೆ. ಅತ್ತ ಸ್ಟಾರ್ ನಟರು ಕೂಡ ಸೂಕ್ತ ಸ್ಥಳ ಅರಸಿ ರೆಸಾರ್ಟ್, ಫಾರ್ಮ್ ಹೌಸ್ ಇತರೆಡೆ ಹೋಗಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನ ಕಳೆದಂತೆ ಸಿನಿಮಾ ರಂಗದ ಒಬ್ಬೊಬ್ಭರೇ ಕೊರೊನಾ ಹೊಡೆತಕ್ಕೆ ಜೀವ ಬಿಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಪಕ ಕೋಟಿ ರಾಮು ಅವರಿಗೆ ಕೊರೋನಾ ತಗುಲಿ‌ ಮೃತಪಟ್ಟಿರುವುದು ಅಕ್ಷರಶಃ ಸ್ಯಾಂಡಲ್ ವುಡ್ ಅನ್ನು ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಇದೀಗ ನಟ ಕೋಮಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಕೋಮಲ್ ಅವರು ಕೊರೊನಾ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು‌‌. ವೈದ್ಯರ ಸತತ ಪರಿಶ್ರಮದಿಂದ ಕೋಮಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ‌. ಈ ಕುರಿತು ಕೋಮಲ್ ಸಹೋದರ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

“ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ
ಮಾತ್ರ ಗೊತ್ತು!ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ! ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡು ಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗು ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ ತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ,
ಅನ್ನಕೊಟ್ಟ ಶಾರದೆ ಸೇವೆ ನಿಷ್ಟೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾಕ್ಷೇತ್ರದಲ್ಲು ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ ಸಾವಿನಮನೆ ಕದ ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು! ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು! komal is safe.


ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು
ಸ್ವಂತ ವ್ಯವಹಾರವನ್ನು ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ! ಆದರೆ, ಇತ್ತೀಚೆಗೆ ತನಗೆ ಬರಬೇಕಾದ ಬ bill ಗೆ ಅಲ್ಲಿನ ಕೆಲ ಲಂಚ ಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿ ಬಿಟ್ಟರು! ಅದ ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬ serious ಆಗಿಬಿಟ್ಟ!ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ!ಅವನಿಗೆ ಸಹಾಯ ಮಾಡಿದ ಡಾ: ಮಧುಮತಿ,ನಾದನಿ ಡಾ ಲಲಿತ ನರ್ಸ್ ಗಳ ಪಾದಕ್ಕೆ ನನ್ನ ನಮನ, ರಾಯರೆ ಎಂದು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ನಿಧನ; ನೃತ್ಯ ಕಲಾವಿದರಾಗಿ ಬದುಕು ಕಟ್ಟಿಕೊಂಡಿದ್ದ ರಾಮು ಕಣಗಾಲ್ ಜೀವ ಪಡೆದ ಕೊರೊನಾ

ಈ ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಬದುಕನ್ನಷ್ಟೇ ಚೆಲ್ಲಾಪಿಲ್ಲಿಯಾಗಿಸಿದ್ದ ಕೊರೊನೊ ಹೆಮ್ಮಾರಿ, ಲೆಕ್ಕವಿಲ್ಲದ್ದಷ್ಟು ಜೀವಗಳನ್ನೇ ಬಲಿ ತೆಗೆದುಕೊಂಡಿದೆ.
ಇಲ್ಲಿ ದಿನ ಕಳೆದಂತೆ ಹಲವು ಸಿನಿಮಾರಂಗದ ಜನರೂ ಪ್ರಾಣ‌ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಟಿ ನಿರ್ಮಾಪಕ ರಾಮು ಜೀವ ಕಳೆದುಕೊಂಡಿದ್ದರು. ಈಗ ಕನ್ನಡ‌ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಕೊರೊನಾ ಮಾರಿಗೆ ಪ್ರಾಣ ಬಿಟ್ಟಿದ್ದಾರೆ.

ಹೌದು, ರಾಮು ಕಣಗಾಲ್
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಕುಡಿ. ಪುಟ್ಟಣ್ಣ ಕಣಗಾಲ್ ಅವರ ಐದನೇ ಪುತ್ರ. ಪುಟ್ಟಣ್ಣ ಅವರಿಗೆ ಸರ್ವೋತ್ತಮ, ಭುವನೇಶ್ವರಿ, ರಾಜರಾಜೇಶ್ವರಿ,
ತ್ರಿವೇಣಿ, ರಾಮು ಮಕ್ಕಳು. ಈ ಪೈಕಿ ರಾಮು , ಭರತನಾಟ್ಯ ಪ್ರವೀಣರು ತಂದೆಯ (ಕಣಗಾಲ್ ನೃತ್ಯಾಲಯ) ಹೆಸರಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿ ನೃತ್ಯಶಾಲೆ ಶುರುಮಾಡಿದ್ದ ರಾಮು ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ನೃತ್ಯ ಗುರುವಾಗಿದ್ದರು. ಅಷ್ಟೇ ಅಲ್ಲ, ತಂದೆಯಂತೆಯೇ ಅವರು ಸಾಂಸ್ಕೃತಿಕ ಸೇವೆಯಲ್ಲಿ ನಿರತರಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳನ್ನು ಪರಿಚಯಿಸಿದ ಹಲವು‌ನಟ,ನಟಿಯರನ್ನು ಕನ್ನಡ ಸಿನಿಮಾ ಲೋಕಕ್ಕೆ ಕರೆತಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮಕ್ಕಳು ಮಾತ್ರ ಸಿನಿಮಾ ರಂಗಕ್ಕೆ ಬರಲಿಲ್ಲ. ಈ ಪ್ರಶ್ನೆ‌ಗೆ ಇಂದಿಗೂ ಉತ್ತರ ‌ಸಿಕ್ಕಿಲ್ಲ.
ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ಮಕ್ಕಳು ಬರಲಿಲ್ಲ ಎಂಬ ಬಗ್ಗೆ ಪ್ರಶ್ನೆ ಎದ್ದ ಹಿನ್ನೆಲೆಯಲ್ಲಿ ಈ ಹಿಂದೆಯೇ ರಾಮು ಅವರು ಹೇಳಿಕೊಂಡಿದ್ದರು. ನನಗೆ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಇತ್ತು. ಆದರೆ, ತಂದೆಗೆ ತಾವು ಚೆನ್ನಾಗಿ ಓದಬೇಕು. ಆ ನಂತರವಷ್ಟೇ ಉಳಿದದ್ದು ಎಂದಿದ್ದರು. ಆದರೆ, ನಾನು 17 ವರ್ಷ ಹುಡುಗನಿದ್ದಾಗಲೇ ತಂದೆ ನಮ್ಮನ್ನು ಬಿಟ್ಟು ಹೋದರು ಎಂದಿದ್ದರು.
ಪುಟ್ಟಣ್ಷ ಕಣಗಾಲ್ ಅವರ ಕುಟುಂಬ ಮದರಾಸಿನಲ್ಲೇ ವಾಸವಾಗಿತ್ತು. ಪುಟ್ಟಣ್ಣ ಅವರು ನಿಧನವಾಗುವ ಮೂರು ತಿಂಗಳ ಹಿಂದಷ್ಟೇ, ಕುಟುಂಬ ಬೆಂಗಳೂರಿಗೆ ಬಂದಿತ್ತು. ಆದರೆ, ಚಿತ್ರರಂಗದವರ ಪರಿಚಯ ನಮಗಿರಲಿಲ್ಲ ಎಂದು ಹೇಳಿಕೊಂಡಿದ್ದ ರಾಮು, ಆ ಸಂದರ್ಭದಲ್ಲಿ ಯಾರೊಬ್ಬರೂ ಸಹಾಯ ಮಾಡಲಿಲ್ಲ. ನಮ್ಮ ತಂದೆ ಇದ್ದಿದ್ದರೆ ಸಿನಿಮಾ ಸಿನಿಮಾ ರಂಗಕ್ಕೆ ಬರುತ್ತಿದ್ದೆವೋ ಏನೋ ಎಂದು ಹಿಂದೆ ಪತ್ರಿಕೆಯೊಂದರ‌ ಸಂದರ್ಶನದಲ್ಲಿ ಹೇಳಿದ್ದರು ರಾಮು.


ಮದರಾಸಿನಲ್ಲಿ ಚಿಕ್ಕಂದಿನಲ್ಲೇ ನೃತ್ಯಾಭ್ಯಾಸ ಶುರುಮಾಡಿದ್ದ ರಾಮು, ಅದರಲ್ಲೇ ಬದುಕು ಕಟ್ಟಿಕೊಂಡಿದ್ದರು.
ಅದೇನೆ ಇರಲಿ, ಸಿನಿಮಾ ರಂಗದಲ್ಲಿ ಜನಪ್ರಿಯ ನಿರ್ದೇಶಕ ಎಂದೆನಿಸಿಕೊಂಡ ಪುಟ್ಟಣ್ಣ ಕಣಗಾಲ್ ಕುಟುಂಬ ಸಿನಿಮಾ ಲೋಕಕ್ಕೆ ಬಾರದೆ, ಬದುಕು ಕಟ್ಟಿಕೊಂಡು ತನ್ನ ಪಾಡಿಗಿತ್ತು. ನೃತ್ಯಶಾಲೆ ಮೂಲಕ ಹೆಸರು ಮಾಡಿದ್ದ ರಾಮು ಕಣಗಾಲ್ ಈಗ ಇಲ್ಲ. ಆದರೆ, ಅವರ ಅನೇಕ ನೃತ್ಯ ಕಾರ್ಯಕ್ರಮಗಳ ಮೂಲಕ ಜೀವಂತವಾಗಿದ್ದಾರೆ.
ಸಂತಾಪ: ನಟರಾದ ಶ್ರೀನಾಥ್,
ಶಿವರಾಮ್, ರಾಮಕೃಷ್ಣ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಸಂತಸದ ಸುದ್ದಿ ಕೊಟ್ಟ ಲವ್ ಮಾಕ್ಟೇಲ್ ಜೋಡಿ! ಕೃಷ್ಣ-ಮಿಲನಾ ಕೊಟ್ಟ ಆ ಖುಷಿಯ ಸುದ್ದಿ ಇದೇ ನೋಡಿ…

ಅಂತೂ ಇಂತೂ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಅರೇ, ಫೆಬ್ರವರಿ 14ರಂದು ವಿವಾಹವಾಗಿದ್ದ ಜೋಡಿ ಇಷ್ಟು ಬೇಗ ಸಂತಸದ ಸುದ್ದಿ ಕೊಡ್ತಾ? ಹೀಗೊಂದು ಪ್ರಶ್ನೆ ಹುಟ್ಟುವುದು ಸಹಜ. ಸಂತಸದ ಸುದ್ದಿಯಂತೂ ನಿಜ. ಹಾಗಂತ, ಈ ಜೋಡಿ ಈಗ ಮಮ್ಮಿ-ಡ್ಯಾಡಿ ಆಗ್ತಾ ಇಲ್ಲ!

ಹಾಗಾದರೆ ಆ ಸಂತಸದ ಸುದ್ದಿ ಏನು?
ಇತ್ತೀಚಿಗಷ್ಟೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೊರೊನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಂತರದ ದಿನಗಳಲ್ಲಿ
ಇಬ್ಬರು ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿ ವೈದ್ಯರು ಹೇಳಿದಂತೆ, ಚಿಕಿತ್ಸೆ ಪಡೆದಿದ್ದರು. ಈಗ ಇಬ್ಬರೂ ಕೊರೊನೊ ಸೋಂಕಿನಿಂದ ಹೊರ ಬಂದಿದ್ದಾರೆ. ಹೌದು, ಕೊರೊನಾ ಫಲಿತಾಂಶ ನೆಗೆಟಿವ್ ಬಂದಿದೆ. ಆ ಸಂತಸದ ಸುದ್ದಿಯನ್ನು ಇಬ್ಬರೂ ಈಗ ಹಂಚಿಕೊಂಡಿದ್ದಾರೆ. ಏಪ್ರಿಲ್ 14ರಂದು ಕೊರೊನಾ ಪಾಸಿಟಿವ್ ಆಗಿದೆ ಎಂದು ಹೇಳಿಕೊಂಡಿದ್ದರು.


ಈಗ ನೆಗೆಟಿವ್ ಬಂದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಕೋವಿಡ್ ವರದಿ ಈಗ ಬಂದಿದೆ. ನಮಗೆ ನೆಗೆಟಿವ್ ಬಂದಿದೆ. ನಮಗೆ 3 ದಿನಗಳು ಜ್ವರ ಮತ್ತು ಬಾಡಿ ನೋವು ಇತ್ತು. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. ನಿಮ್ಮ ಪ್ರೀತಿ ಪಾತ್ರರನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದು ಮತ್ತು ಸಕರಾತ್ಮಕವಾಗಿರುವುದು ಉತ್ತಮ ಔಷಧಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.

error: Content is protected !!