ಒಂದು ಯಶಸ್ವಿ ಸಿನಿಮಾ ಹಿಂದೆ ನೂರಾರು ಕಥೆಗಳಿರುತ್ತವೆ. ಅಲ್ಲಿ ನಲಿವಿಗಿಂತ ನೋವಿನ ಕಥೆಗಳೇ ಹೆಚ್ಚು. ಅಂತಹ ಬೇಸರದ ಕಥೆ ಬಂಧನ ಚಿತ್ರದಲ್ಲೂ ಇದೆ. ಆ ಇನ್ಸೈಡ್ ಸ್ಟೋರಿ ಕುರಿತು ಸ್ವತಃ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ….
- ವಿಶಾಲಾಕ್ಷಿ
ಬಂಧನ' ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಎವರ್‌ಗ್ರೀನ್ ಚಿತ್ರ ಮತ್ತು ದಾದಾ ಕರಿಯರ್‌ನ ಮೈಲ್‌ಸ್ಟೋನ್ ಸಿನಿಮಾ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ,
ಬಂಧನ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಂತಹ ಮಹಿಳೆಯರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದರು ಎನ್ನುವ ಸತ್ಯ ಬಹುಷಃ ನಿಮ್ಮೆಲ್ಲರಿಗೂ ತಿಳಿದಿರಲಿಕ್ಕಿಲ್ಲ. ಈ ಕಟುಸತ್ಯವನ್ನು ನಿರ್ದೇಶಕ ಎಸ್.ರಾಜೇಂದ್ರ ಸಿಂಗ್ ಬಾಬು ಅವರು `ಬಂಧನ-2′ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಬಹಿರಂಗಪಡಿಸಿದರು.
ಹೌದು, ಶುಭ ಶುಕ್ರವಾರವಾದ ಇಂದು ನಗರದ ಅಶೋಕ್ ಹೋಟೆಲ್‌ನಲ್ಲಿ ಬಂಧನ-2' ಚಿತ್ರದ ಮುಹೂರ್ತ ಹಮ್ಮಿಕೊಂಡಿದ್ದರು. ಅಶೋಕದಲ್ಲೇ
ಬಂಧನ’ ಸಿನಿಮಾ ಸೆಟ್ಟೇರಿದ್ದ ಸೆಂಟಿಮೆಂಟ್‌ಗೋಸ್ಕರ ಸೀಕ್ವೆಲ್ ಕೂಡ ಇಲ್ಲೇ ಮುಹೂರ್ತ ನೆರವೇರಿಸಿದರು. ಈ ವೇಳೆ ಹಳೆಯ ಬಂಧನ ಹಾಗೂ ಹೊಸ ಬಂಧನದ ಬಗ್ಗೆ ಮಾತಿಗಿಳಿದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು, `ಬಂಧನ’ ಟೀಮ್ ಎದುರಿಸಿದ ಅಗ್ನಿಪರೀಕ್ಷೆಗಳ ಬಗ್ಗೆ ಹೇಳುತ್ತಾ ಹೋದರು.
ದಾದಾ ನಟನೆಯ ಬಂಧನ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ಟಾಗುತ್ತೆ, ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆಹೊಡೆಯುತ್ತೆ, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಇತಿಹಾಸವನ್ನು ಸೃಷ್ಟಿಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಯಾಕಂದ್ರೆ, ಸಿನಿಮಾ ಆರಂಭದಲ್ಲೇ ಈ ಮೂವೀ ಪಕ್ಕಾ ಫ್ಲಾಪ್ ಆಗುತ್ತೆ. ಆಕ್ಷನ್ ಹೀರೋನ ಹಾಕಿಕೊಂಡು ಪ್ರೇಮಕಾವ್ಯದ ಪುರಾಣ ಹೇಳಲಿಕ್ಕೆ ಹೊರಟಿದ್ದಾರೆ. ಅದಕ್ಕೆ
ಬಂಧನ’ ಅಂತ ಟೈಟಲ್ ಬೇರೆ ಇಟ್ಟಿದ್ದಾರೆ, ಈ ಸಿನಿಮಾ ಎಲ್ಲಿ ಓಡಬೇಕು ಗುರು ಅಂತ ಗಾಂಧಿನಗರದ ಬಹುತೇಕ ಪಂಡಿತಪಾಮರರು ಕೊಂಕು ನುಡಿದಿದ್ದರು. ಆದರೆ, `ಬಂಧನ’ ಬಿಡುಗಡೆಯಾಗಿ ಒಂದೆರಡು ವಾರ ಕಳೆದ್ಮೇಲೆ ಕೊಂಕು ನುಡಿದವರ ಬಾಯಿಗೆ ಬೀಗ ಹಾಕಿಸಿತು. ಪಡ್ಡೆಹುಡ್ಗರಿಂದ ಹಿಡಿದು ಹಣ್ಣಣ್ಣು ಮುದುಕರು ಕೂಡ ಬಂಡಿ ಜೊತೆ ಬುತ್ತಿ ಕಟ್ಟಿಕೊಂಡು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವಂತೆ ಮಾಡ್ತು.
ಹೌದು, ಹಿಂದೆಂದೂ ನೋಡಿರದ ಪಾತ್ರದಲ್ಲಿ ದಾದಾ ಕಾಣಿಸಿಕೊಂಡರು. ದುರಂತ ಅಂತ್ಯ ಕಾಣುವ ನಾಯಕನ ಪಾತ್ರ ಆದರೂ ಕೂಡ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದನ್ನು ಕಂಡು ಅಭಿಮಾನಿ ದೇವರುಗಳು ದಾದಾಗೆ ಶರಣಾದರು. ಒಮ್ಮೆ ಸಿನಿಮಾ ನೋಡಿ ಬಂದವರು ಪುನಃ ಹೋಗುವಾಗ ಕುಟುಂಬ ಸಮೇತ ರ‍್ಕೊಂಡು ಹೋದರು. ಮೂರು ಶೋ ಅಲ್ಲ ಆರು ಶೋ ಮಾಡಿದ್ರೂ ಹೌಸ್‌ಫುಲ್ ಆಗುವಂತಹ ಸಂದರ್ಭ ಸೃಷ್ಟಿಯಾಯ್ತು. ಹೀಗೆ ಥಿಯೇಟರ್‌ಗೆ ಬರುವ ಜನರು ಹೆಚ್ಚಾದಂತೆ ಬಂಧನ ಚಿತ್ರಕ್ಕೆ ಬೇಡಿಕೆ ಹೆಚ್ಚಾಯ್ತು. ಸಿನಿಮಾ ರೀಲ್ ನಮಗೆ ಕೊಡಿ ನಾವು ಪ್ರದರ್ಶನ ಮಾಡ್ತೀವಿ ಅಂತ ಕೇಳುವ ಪ್ರದರ್ಶಕರು ಕೂಡ ಹೆಚ್ಚಾದರು. ಪತ್ರಿಕೆಗಳಲ್ಲಿ ಬಂಧನ ಭರ್ಜರಿ ಯಶಸ್ವಿ ಪ್ರದರ್ಶನದ ಜಾಹೀರಾತು ಪುಟಗಳು ಹೆಚ್ಚಾದವು.
ಬಂಧನ’ ಚಿತ್ರ ನಿರ್ಮಾಪಕರ ಜೋಳಿಗೆ ಮಾತ್ರವಲ್ಲ ಕೊಂಡುಕೊಂಡವರ ಜೋಳಿಗೆ ಕೂಡ ತುಂಬುತ್ತಾ ಹೋಯ್ತು. ಇದನ್ನೆಲ್ಲಾ ನೋಡಿ ಸಹಿಸಿಕೊಳ್ಳುವ ಮನಸ್ತಿತಿಯಿಲ್ಲದವರು `ಬಂಧನ’ ಚಿತ್ರಕ್ಕೆ ಅಡ್ಡಗಾಲು ಹಾಕಿ ಮಕಾಡೆ ಮಲಗಿಸಲು ಶತಾಯಗತಾಯ ಪ್ರಯತ್ನಕ್ಕೆ ಮುಂದಾಗುತ್ತಾರೆ.
ಬೆಂಕಿ ಇಟ್ಟರು…!
ಹೇಗಾದರೂ ಸರೀ ಬಂಧನ ಬಂದ್ ಆಗಬೇಕು. ಚಿತ್ರಕ್ಕೆ ಹಿನ್ನಡೆ ಆಗಬೇಕು. ಹೀಗಂತ ಹಠಕ್ಕೆ ಬಿದ್ದ ಯಾರೋ ಕಿಡಿಗೇಡಿಗಳು,ಮೊದಲು ಥಿಯೇಟರ್ ಅಖಾಡದಲ್ಲಿ ತಲೆಎತ್ತಿದ್ದ ದಾದಾಕಟೌಟ್‌ನ ಸುಟ್ಟುಹಾಕಿದರು. ಪ್ರದರ್ಶನ ನಿಲ್ಲಿಸ್ಬೇಕು ಅಂತ ರೀಲ್‌ಗಳಿಗೆ ಬೆಂಕಿ ಇಟ್ಟರು.
ಇಷ್ಟಕ್ಕೆ ಸುಮ್ಮನಾಗದೇ ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಬಂದ ಮಹಿಳೆಯರ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚೋದಕ್ಕೆ ಶುರುಮಾಡಿದರು. ಒಟ್ನಲ್ಲಿ ಪ್ರೇಕ್ಷಕರಿಗೆ ಕಿರಿಕಿರಿ ಮಾಡಿ
ದಂಗೆ ಹೇಳುವಂತೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿದರು. ಆದರೆ, ಎಲ್ಲಾ ಉಲ್ಟಾ ಆಯ್ತು. ಅಭಿಮಾನಿ ದೇವರುಗಳು ದಾದಾ ಪರವಾಗಿ ನಿಂತರು. ‘ ಬಂಧನ’ ವನ್ನು ಬಿಗಿದಪ್ಪಿಕೊಂಡರು.ಎಷ್ಟರ ಮಟ್ಟಿಗೆ ಅಂದರೆ ಬರೋಬ್ಬರಿ 25 ಚಿತ್ರಮಂದಿರಗಳಲ್ಲಿ 25 ವಾರ ಸಿನಿಮಾ ಓಡಿಸಿದರು. 6 ತಿಂಗಳುಗಳ ಕಾಲ ಬಂಧನ ಚಿತ್ರ ಓಡುತ್ತಿತ್ತು, ಓಡುತ್ತಿತ್ತು, ಓಡುತ್ತಲೇ ಕಿಡಿಗೇಡಿಗಳ ಕಣ್ಣಿಗೆ ಬೆಂಕಿಹಾಕುತ್ತಿತ್ತು.
ಹೀಗೆ, ವಿಷ್ಣುಸೈನ್ಯದ ಬಲದಿಂದ, ಕರುನಾಡ ಜನರ ಪ್ರೀತಿಯಿಂದ ‘ ಬಂಧನ’ ಗಟ್ಟಿಯಾಗಿ ನಿಲ್ತು. ದಾದಾಗೆ ಮತ್ತು ನಿರ್ದೇಶಕರ ಕರಿಯರ್ ಗೆ ಮೈಲುಗಲ್ಲಾಯ್ತು. ಇದೀಗ, ಇದೇ ಚಿತ್ರದ ಸೀಕ್ವೆಲ್ ತಯ್ಯಾರಾಗುತ್ತಿದೆ. ಅಭಿನವ ಭಾರ್ಗವನ ಆಶೀರ್ವಾದದೊಂದಿಗೆ ಸಿನಿಮಾ ಶುರುವಾಗಿದೆ. ಡೆಡ್ಲಿಸೋಮ ಆದಿತ್ಯ ಹೀರೋ ಆಗಿದ್ದಾರೆ. ಸುಹಾಸಿನಿ ಮಣಿರತ್ನಂ, ಜೈ ಜಗದೀಶ್ ಪಾತ್ರವರ್ಗದಲ್ಲಿದ್ದಾರೆ. ಕ್ಯಾಮೆರಮ್ಯಾನ್ ಅಣಜಿ ನಾಗರಾಜ್ ಸಿನಿಮಾಟ್ರೋಗ್ರಫಿ ಮಾಡೋದರ ಜೊತೆಗೆ ಬಂಡವಾಳ ಹೂಡ್ತಿದ್ದಾರೆ. ಹೊಸ ಬಂಧನಕ್ಕೆ ನಿಮ್ಮೆಲ್ಲರ ಪ್ರೀತಿ-ಹಾರೈಕೆ ಇರಲಿ. ಬಂಧನ2 ಗೆ ಶುಭವಾಗಲಿ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ