ಇನಾಮ್ದಾರ್‌ ಎಂಬ ಜನಾಂಗೀಯ ಘರ್ಷಣೆ ಸುತ್ತುವ ಕಥೆ…

ಕೆಲವು ವರ್ಷಗಳ ಹಿಂದೆ ” ಕತ್ತಲೆಕೋಣೆ” ಎಂಬ ಚಿತ್ರ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಅಜ್ರಿ, ಈಗ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾದ ಹೆಸರು “ಇನಾಮ್ದಾರ್”. ಇದೊಂದು ಜನಾಂಗೀಯ ಘರ್ಷಣೆ ಸುತ್ತ ಸುತ್ತುವ ಸ್ಟೋರಿ…

ತಮ್ಮ ಸಿನಿಮಾ ಕುರಿತು ನಿರ್ದೇಶಕ ಸಂದೇಶ್‌ ಶೆಟ್ಟಿ ಅಜ್ರಿ ಹೇಳಿದ್ದು ಹೀಗೆ… “ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ‌ಹಾಗೂ ಕಪ್ಪು – ಬಿಳುಪು ವರ್ಣದ ಜನರ ಘರ್ಷಣೆ ಸುತ್ತ ಈ ಚಿತ್ರಕಥೆ ಹೆಣೆದಿದ್ದೇನೆ. ಕಾಡಿನ‌ ಮುಗ್ಧ ಜನರಿಗೆ ಆಗುತ್ತಿರುವ ಅನ್ಯಾಯ ಎತ್ತಿ‌ಹಿಡಿಯುವ ಪ್ರಯತ್ನ ಮಾಡುತ್ತಿದ್ದೇನೆ. ಡಬ್ಬಲ್ ಸ್ಕ್ರೀನ್ ಪ್ಲೇ ನಡುವೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇನಾಮ್ದಾರ್ ಕುಟುಂಬಗಳಿವೆ. ಅದಕ್ಕೆ ಅದರದೇ ಆದ ಕಥೆಯೂ ಇದೆ. ನಾವು ಆಯ್ಕೆ ಮಾಡಿಕೊಂಡಿರುವ
” ಇನಾಮ್ದಾರ್ ” ಶಿವಾಜಿ ಮಹಾರಾಜರ ಮಗ ಶಂಭು ಮಾಹಾರಾಜರ ವಂಶಸ್ಥರದು. ಈ ಚಿತ್ರಕ್ಕೆ ಕಪ್ಪು ಸುಂದರಿಯ ಸುತ್ತ ಎಂಬ ‌ಅಡಿಬರಹ ಕೂಡ ಇದೆ ಎಂದು ವಿವರ ಕೊಡುತ್ತಾರೆ ಅವರು.

ರಂಜನ್ ಛತ್ರಪತಿ ಎಂಬ ಹೊಸ ಪ್ರತಿಭೆ ನಾಯಕನಾಗಿ ನಟಿಸುತ್ತಿದ್ದು, ಭೂಮಿ ಶೆಟ್ಟಿ, ಎಸ್ತರ್ ನರೋನ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಎಂ.ಕೆ.ಮಠ, ರಘು ಪಾಂಡೇಶ್ವರ್ ಮುಂತಾದವರು ಇದ್ದಾರೆ. ಒಳ್ಳೆಯ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಪ್ಸೆ ಗುಡ್ಡ ಪ್ರದೇಶದಲ್ಲಿ ಈಗಾಗಲೇ ಕಲಾ ನಿರ್ದೇಕರು ಗುಡಿಸಿಲಿನ ಸೆಟ್ ಹಾಕುತ್ತಿದ್ದಾರೆ. ಫೆಬ್ರವರಿ ಮಧ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.

ಎಲ್ಲರಂತೆ ಈ ಚಿತ್ರದ ಹೀರೋ ರಂಜನ್‌ ಛತ್ರಪತಿ ಕೂಡ ಇಲ್ಲಿಗೆ ಹಲವು ಆಸೆ ಹೊತ್ತು ಬಂದರಂತೆ. ಅವರು ಇಲ್ಲಿಗೆ ಹಲವು ವರ್ಷಗಳ ಹಿಂದೆ ನಟನಾಗಬೇಕೆಂದು ಸಾಕಷ್ಟು ಕನಸು ಹೊತ್ತು ಬಂದಿದ್ದರು. ಆದರೆ, ಮೋಸ ಹೋಗಿದ್ದೇ ಹೆಚ್ಚು. ಸಾಕಷ್ಟು ಅವಮಾನ, ಅನುಭವದ ನಂತರ ಈಗ ಸಮಯ ಕೂಡಿ ಬಂದಿದೆ ಎನ್ನುವ ಅವರು, ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡುತ್ತಿದ್ದೇನೆ. ಅವಕಾಶ ಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಥ್ಯಾಂಕ್ಸ್‌ ಅಂದರು ರಂಜನ್ ಛತ್ರಪತಿ.

ನಾಯಕಿ ಭೂಮಿಶೆಟ್ಟಿ ಅವರಿಗೆ, ಸಂದೇಶ್ ಅವರು ಹೇಳಿದ ತಕ್ಷಣ ಈ ಪಾತ್ರದಲ್ಲಿ ಅಭಿನಯಿಸಬೇಕೆಂಬ ಆಸೆಯಾಯಿತಂತೆ. ನಾನು ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ ಅನ್ನುತ್ತಾರೆ ಭೂಮಿ ಶೆಟ್ಟಿ. ಛಾಯಾಗ್ರಹಣ ಮಾಡುತ್ತಿರುವ ಸುನೀಲ್ ನರಸಿಂಹಮೂರ್ತಿ, ಸಂಗೀತ ನೀಡುತ್ತಿರುವ ರಾಕಿ ಸೋನು, ಸಂಕಲನಕಾರ ಶಿವರಾಜ್ ಮೇಹು ಮಾತನಾಡಿದರು.

Related Posts

error: Content is protected !!