ನಟಿ ಸಂಯುಕ್ತಾ ಹೆಗಡೆ ಅಂದಾಕ್ಷಣ ಎಲ್ಲರಿಗೂ ನೆನಪಾಗೋದೇ ಕಿರಿಕ್ ಹುಡುಗಿ ಅಂತ. ಅವರು “ಕಿರಿಕ್ ಪಾರ್ಟಿ” ಸಿನಿಮಾ ಮಾಡಿದ್ದರಿಂದ ಆ ಹೆಸರು ಬಂದಿದ್ದು ನಿಜ. ಆದರೂ, ಆಗಾಗ ಸಂಯುಕ್ತಾ ಹೆಗಡೆ ಒಂದಷ್ಟು ವಿವಾದಗಳಿಗೆ ಕಾರಣವಾಗುತ್ತಲೇ ಇರುತ್ತಾರೆ. ಹಾಗಾಗಿ, ಎಲ್ಲರೂ ಈ ನಟಿಯನ್ನು ಕಿರಿಕ್ ಅನ್ನುತ್ತಲೇ ಇದ್ದಾರೆ. ಆದರೆ, ಸಂಯುಕ್ತಾ ಹೆಗಡೆ ಅಂತಹ ಕಿರಿಕ್ ನಟಿ ಅಲ್ಲ ಅನ್ನೋದು ನೆನಪಿರಲಿ. ಈಗ ಈ ಹುಡುಗಿಯ ಸುದ್ದಿ ಏನಪ್ಪಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಯಾವುದೇ ನಟ,ನಟಿ ಇರಲಿ, ಅವರಿಗೊಂದು ಕನಸಿರುತ್ತೆ. ಇಂತಹವರ ಜೊತೆ ನಟಿಸಬೇಕು ಅಥವಾ ಹಾಡೊಂದಕ್ಕೆ ಹೆಜ್ಜೆ ಹಾಕಬೇಕು ಅನ್ನೋದೇ ಆ ಕನಸು. ಅಂಥದ್ದೊಂದು ಕನಸು ಈ ಸಂಯುಕ್ತಾ ಹೆಗಡೆ ಅವರಿಗೂ ಇತ್ತು. ಅದನ್ನು ಈಗ ನನಸು ಮಾಡಿಕೊಂಡು ಸಂಭ್ರಮಿಸಿದ್ದಾರೆ ಸಂಯುಕ್ತಾ ಹೆಗಡೆ.
ಹೌದು, ಸಂಯುಕ್ತಾ ಹೆಗಡೆ ಮೂಲತಃ ಅವರೊಬ್ಬ ಡ್ಯಾನ್ಸರ್. ಉತ್ತಮ ನೃತ್ಯಪಟು ಆಗಿರುವ ಸಂಯುಕ್ತಾ ಹೆಗಡೆ, ಹಿಂದಿ ಕಿರುತೆರೆಯ ಪ್ರಸಿದ್ಧ ರೋಡಿಸ್ ಎಂಬ ರಿಯಾಲಿಟಿ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡ ನಟಿ. ಅವರು ಸದಾ ಸುದ್ದಿಯಲ್ಲಿರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗಲೂ ಅವರು ಸುದ್ದಿಯಲ್ಲೇ ಇದ್ದಾರೆ. ಬದಲಾಗಿ ಈ ಸಲ ಅವರು ಕಿರಿಕ್‌ನಿಂದ ಸುದ್ದಿಯಾಗಿಲ್ಲ. ಒಂದು ಸಂತಸದ ವಿಷಯದ ಮೂಲಕ ಸುದ್ದಿಯಾಗಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಬ್ಯುಸಿಯಾಗಿರುವ ಸಂಯುಕ್ತಾ ತನ್ನ ಅದ್ಭುತ ಡ್ಯಾನ್ಸ್ ಕಲೆಯಿಂದಲೇ ಮೋಡಿ ಮಾಡುವ ಮೂಲಕ ಅಲ್ಲಿನ ಸಿನಿಮಂದಿಗೂ ಫೇವರ್ ಆಗಿದ್ದಾರೆ.
ಅಂದಹಾಗೆ, ಅವರು ಅಭಿನಯಿಸಿರುವ ತಮಿಳಿನ ‘ಥೀಲ್’ ಜನವರಿ 14ರ ಸಂಕ್ರಾಂತಿ ಹಬ್ಬದಂದು ತೆರೆಗೆ ಬಂದಿದೆ. ಈ ಹಿನ್ನೆಲೆಯಲ್ಲೇ ವೀಡಿಯೋ ಸಾಂಗ್ ಒಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಸಂಯುಕ್ತಾ ಹೆಗ್ಡೆ ಈ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ ಅನ್ನೋದೇ ಸಂತಸದ ವಿಷಯ. ಪ್ರಭುದೇವ ಅಭಿನಯದ “ಥೀಲ್” ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಕಂಡಿದೆ. ಆ ಚಿತ್ರ ರಿಲೀಸ್ ಆದ ಬೆನ್ನಲ್ಲೇ ಥೀಲ್ ಚಿತ್ರದ ವೀಡಿಯೋ ಸಾಂಗ್ ಕೂಡ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ಸಂಯುಕ್ತ ಹೆಗಡೆ ಆ ಹಾಡಿನ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.
“ಥೀಲ್” ಚಿತ್ರದ ಹಾಡಿನ ಬಗ್ಗೆ ಸಂಯುಕ್ತಾ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ. “ದಂತಕಥೆಯ ಮುಂದೆ ನೃತ್ಯ ಮಾಡುವ ಕನಸೊಂದು ಈಡೇರಿದೆ. ಪ್ರಭುದೇವ ಅವರ ಜೊತೆ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲ ಅವರ ಪಕ್ಕದಲ್ಲಿ ಕುಣಿಯುವ ಹಾಗೂ ಇಡೀ ಹಾಡನ್ನು ಏಕಾಂಗಿಯಾಗಿ ಒಯ್ಯುವ ಅವಕಾಶ ನನಗಿತ್ತು. ನಾನು ಇಂಡಸ್ಟ್ರಿಗೆ ಸೇರಿದಾಗ ಇದು ನನ್ನ ಕನಸಾಗಿತ್ತು, ಸಿನಿಮಾದಲ್ಲಿ ನನ್ನ ಮೊದಲ ಡ್ಯಾನ್ಸ್ ಪ್ರಭುದೇವ ಸರ್ ಜೊತೆ. ಅವರು ಬೆಳೆಯುತ್ತಿರುವ ನನಗೆ ಸ್ಫೂರ್ತಿಯಾಗಿದ್ದಾರೆ. ಏಕೆಂದರೆ ಅವರು ಯಾವಾಗಲೂ ಕ್ರಿಯಾಶೀಲರಾಗಿರುತ್ತಾರೆ. ಅಂತಹ ನೃತ್ಯ ದಂತಕಥೆಯೊಂದಿಗೆ ಹಾಡಿನಲ್ಲಿ ನೃತ್ಯ ಮಾಡಲು ಸಾಧ್ಯವಾಗುವುದು ನಿಜವಾಗಿಯೂ ಗೌರವವಾಗಿದೆ. ನನ್ನ ಬಾಲ್ಯದ ಕನಸು ನನಸಾಯಿತು…” ಎಂದು ಸಂಯುಕ್ತಾ ಹೆಗಡೆ ಬರೆದುಕೊಂಡು ಸಂಭ್ರಮಿಸಿದ್ದಾರೆ. ಸಂಯುಕ್ತಾ ಹಗೆಡೆ ಈಗ ಕನ್ನಡದ ಕ್ರೀಂ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಆ ಚಿತ್ರ ಇನ್ನೇನು ಬಿಡುಗಡೆಯಾಗಬೇಕಿದೆ. ಈ ಚಿತ್ರಕ್ಕೆ ಅಗ್ನಿಶ್ರೀಧರ್ ಅವರ ಬರಹದ ಸ್ಪರ್ಶವಿದೆ. ಈ ಚಿತ್ರದ ಪಾತ್ರಕ್ಕೆ ಸಂಯುಕ್ತಾ ಹೆಗಡೆ ಅವರೇ ಸೂಕ್ತ ಎನಿಸಿದ್ದರಿಂದ ಅವರನ್ನು ಆಯ್ಕೆ ಮಾಡಲಾಗಿದೆ.