ಸಿನಿಮಾ ನಟರೆಂದರೆ ಅದೇನೋ ಗೊತ್ತಿಲ್ಲ. ಒಂದಷ್ಟು ಅಭಿಮಾನಿಗಳು ಪ್ರೀತಿಯ ಅಭಿಮಾನ ತೋರಿಸುತ್ತಾರೆ. ಅದರಲ್ಲೂ ನಾಯಕ ನಟರನ್ನು ಆರಾಧ್ಯ ದೈವ ಅನ್ನುವಂತೆಯೇ ಆರಾಧಿಸುತ್ತಾರೆ. ಅಂತೆಯೇ ನಾಯಕ ನಟರು ಕೂಡ ಅಭಿಮಾನಿಗಳನ್ನೂ ದೇವರು ಅಂತಾನೂ ಕರೆಯುತ್ತಾರೆ. ಅವರಿಂದಲೇ ನಾವು ಅನ್ನುತ್ತಲೇ ಸದಾ ಫ್ಯಾನ್ಸ್ ಖುಷಿಪಡಿಸುವಂತಹ ಸಿನಿಮಾ ಕೊಡುವಲ್ಲಿ ನಿರತರಾಗುತ್ತಾರೆ. ಇಲ್ಲೀಗ ಹೇಳ ಹೊರಟಿರುವ ವಿಷಯ ಅಂದರೆ, ಅದು ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ.
ಹೌದು, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಎಂಬ ಗ್ರಾಮದಲ್ಲಿ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯೊಬ್ಬ ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಎದುರೇ ಮದುವೆ ಆಗುವ ಮೂಲಕ ವಿಶೇಷ ಪ್ರೀತಿ ತೋರಿದ್ದಾರೆ. ನಿಜಕ್ಕೂ ಇದು ವಿಷ್ಣುವರ್ಧನ್ ಮೇಲಿನ ಅತಿಯಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿ ಎನ್ನಬಹುದು.
ಶುಕ್ರವಾರ ಬೆಳಗ್ಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಡಾ.ವಿಷ್ಣುವರ್ಧನ್ ಅವರ ಅಭಿಮಾನಿ ನಾಗರಾಜ್ ಕೆಸಿ ಎಂಬುವವರು ದೇವಸ್ಥಾನ ಅಥವಾ ಕಲ್ಯಾಣ ಮಂಟಪದಲ್ಲಿ ವಿವಾಹ ಆಗಬಹುದಿತ್ತು. ಆದರೆ, ಅದರ ಬದಲಾಗಿ ಅವರು ಡಾ.ವಿಷ್ಣು ಅವರ ಪುತ್ಥಳಿ ಎದುರು ವಿವಾಹವಾಗುವ ಮೂಲಕ ತಮ್ಮ ಅಭಿಮಾನ ತೋರಿದ್ದಾರೆ. ಅಂದಹಾಗೆ, ಈ ರೀತಿಯ ಮದುವೆ ಇದೇ ಮೊದಲು ಅನ್ನೋದು ವಿಶೇಷ.
ಟ್ಯಾಕ್ಸಿ ಚಾಲಕನೊಬ್ಬನ ಜೀವನದ ಕಥಾನಕ ಇರುವ ಯೆಲ್ಲೋ ಬೋರ್ಡ್ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡೊಂದನ್ನು ಹಾಡಿದ್ದಾರೆ. ತ್ರಿಲೋಕ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಚಾಲಕರಾಗಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿ ಚಾಲಕರೆಲ್ಲ ಕೆಟ್ಟವರಲ್ಲ. ಅವರಲ್ಲೂ ಒಳ್ಳೆಯವರಿರುತ್ತಾರೆ. ಅವರಿಂದಲೂ ಸಮಾಜ ಸುಧಾರಣೆ ಸಾಧ್ಯ ಎನ್ನುವ ವಿಭಿನ್ನ ಕಥಾಹಂದರ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಿದು. ಅಹಲ್ಯಾ ಸುರೇಶ್ ಹಾಗೂ ಸ್ನೇಹ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ, ವಿಂಟೇಜ್ ಫಿಲಂಸ್ ಮೂಲಕ ನವೀನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮೊದಲ ಬಾರಿಗೆ ರ‍್ಯಾಪ್‌ಸಾಂಗ್ ಹಾಡಿರುವುದು ವಿಶೇಷ. ಅಂದಹಾಗೆ, ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಮಾರ್ಚ್ ೪ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ನಿರ್ದೇಶಕ ತ್ರಿಲೋಕ್ ಮಾತನಾಡಿ, “ನಾವು ಈ ಸಿನಿಮಾ ಶುರು ಮಾಡುವಾಗ ಚಾಲಕರಿಗೆಂದೇ ಒಂದು ಹಾಡನ್ನು ಪ್ಲಾನ್ ಮಾಡಿದ್ದೆವು. ಅದನ್ನು ನಿರ್ದೇಶಕ ಚೇತನ್ ಅವರಿಂದ ಬರೆಸಿದೆವು, ಯಾರ ಕೈಲಿ ಹಾಡಿಸಬೇಕು ಅಂತ ಯೋಚಿಸುತ್ತಿರುವಾಗ ಮೊದಲು ಕಣ್ಣಮುಂದೆ ಬಂದದ್ದೇ ಅಪ್ಪು. ಪ್ರದೀಪ್ ಮೂಲಕ ಪುನೀತ್‌ರನ್ನು ಅಪ್ರೋಚ್ ಮಾಡಿದಾಗ ಅವರು ಖುಷಿಯಿಂದಲೇ ಒಪ್ಪಿ ಹಾಡಿಕೊಟ್ಟರು ಎಂದು ನೆನಪಿಸಿಕೊಂಡರು ಅವರು. ನಾಯಕ ಪ್ರದೀಪ್ ಅವರಿಗೆ ಅಪ್ಪು ಸರ್ ಬಳಿ ಹಾಡು ಹಾಡಿಸಿದ್ದೇ ದೊಡ್ಡ ಖುಷಿಯಾಗಿದೆಯಂತೆ. ಅವರೇ ಹೇಳುವಂತೆ, “ನನ್ನ ಹತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲ ಸಲ ಪುನೀತ್ ಅವರು ನನ್ನ ಚಿತ್ರಕ್ಕೆ ಪ್ರೀತಿಯಿಂದಲೇ ಹಾಡಿದ್ದಾರೆ. ಆರಂಭದಲ್ಲಿ ಜಾಲಿಡೇಸ್ ಚಿತ್ರದ ಆಡಿಯೋ ಬಿಡುಗಡೆಗೂ ಅವರು ಬಂದು ಹಾರೈಸಿದ್ದರು, ಮೊದಲ ಬಾರಿಗೆ ಡ್ರೈವರ್‌ಗಳ ಮೇಲೆ ಸಿನಿಮಾ ಮಾಡಿದ್ದೀರಿ, ಒಳ್ಳೇದಾಗಲಿ, ಹಾಡು ಚೆನ್ನಾಗಿದೆ ಎಂದು ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಹಾಡಿದರು. ಎಲ್ಲಾ ಡ್ರೈವರ್‌ಗಳಿಗೆ ನನ್ನ ಕಡೆಯಿಂದ ಕೊಡುಗೆ ಎನ್ನುವ ಮೂಲಕ ಪ್ರೀತಿ ತೋರಿದ್ದಾರೆ. ಅವರು ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ ಅಂದರು ಪ್ರದೀಪ್.
ಸದ್ಯ ಈ ಹಾಡಿಗೆ ಎಲ್ಲಾ ಚಾಲಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ನಮಗೆ ಬೆಲೆಕೊಟ್ಟು ಒಳ್ಳೇ ಸಾಂಗ್ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ, ಹೀರೋಯಿಸಂ ಇಲ್ಲದ ಪಾತ್ರವಿದು. ಯಾರೋ ಒಬ್ಬರು ಮಾಡುವ ತಪ್ಪಿಗೆ, ಎಲ್ಲ ಟ್ಯಾಕ್ಸಿ ಚಾಲಕರನ್ನೂ ದೂಷಿಸುವುದು ತಪ್ಪು ಎಂಬ ಸಂದೇಶ ಇಲ್ಲಿದೆ. ಕಾರ್ಯಕಾರಿ ನಿರ್ಮಾಪಕ ನವೀನ್, “ಇಂದು ಅಪ್ಪು ಸಾಂಗ್ ರಿಲೀಸ್ ಆಗಿದೆ. ಇದಕ್ಕೆ ಡ್ರೈರ್‌ಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅವರ ಕೈಲೇ ಈ ಹಾಡನ್ನು ಬಿಡುಗಡೆ ಮಾಡಿಸಬೇಕೆಂದು ತುಂಬಾ ಆಸೆಯಿತ್ತು. ಆದರೆ ಆಗಲಿಲ್ಲ, ಅಪ್ಪು ಅವರ ಒಂದು ಪ್ರತಿಕ್ರಿಯೆಯನ್ನೂ ತೆಗೆದುಕೊಳ್ಳಲಾಗಲಿಲ್ಲವಲ್ಲ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಟ್ಯಾಕ್ಸಿ ಚಾಲಕನ ಕನಸು ಮತ್ತು ಆಸೆಗಳ ಸುತ್ತ ಹೆಣೆದ ಕಥೆಯಿದು, ಒಂದು ಕೊಲೆಯ ಆರೋಪ ಹೊತ್ತು ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ, ಅದ್ವಿಕ್ ಅವರ ಸಂಗೀತವಿದೆ. ಪ್ರವೀಣ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಸಾಮಾನ್ಯವಾಗಿ ಲವರ್ಸ್ ಡೇ ಬಂತೆಂದರೆ ಸಾಕು, ಹಲವು ಸಿನಿಮಾ ತಂಡಗಳು ಸಾಂಗು, ಟೀಸರ್, ಪೋಸ್ಟರ್ , ಟ್ರೇಲರ್ ಹೀಗೆ ರಿಲೀಸ್ ಮಾಡುವುದು ವಾಡಿಕೆ. ಈಗ ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಹಾಗಾಗಿ ಇಲ್ಲೊಂದು ಚಿತ್ರತಂಡ ಅಂದು ದಸರಾ ಬೊಂಬೆ ಹಬ್ಬಕ್ಕೆ ಒಂದು ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡುತ್ತಿದೆ.
ಹೌದು, ಫೆಬ್ರವರಿ 14 ಪ್ರೇಮಿಗಳ ದಿನ. ಅಂದು ಅಗ್ರಸೇನಾ ಸಿನಿಮಾ ತಂಡ, ದಸರಾ ಬೊಂಬೆ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತಿದೆ. ಈ ಗೀತೆಯನ್ನು ವಿಭಿನ್ನವಾಗಿ ಚಿತ್ರೀಕರಣ ಮಾಡಲಾಗಿದೆ. ಕೆಜಿಎಫ್ ಖ್ಯಾತಿಯ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿದರೆ, ಈ ಗೀತೆಗೆ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ವಿಜಯಪ್ರಕಾಶ್ ಅವರು ಹಾಡಿದ್ದಾರೆ.
ಈ ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲವೂ ವಿಭಿನ್ನವಾಗಿ ಮೂಡಿಬಂದಿದೆ. ಈ ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ. ಆನಂದ್ ಆಡಿಯೋ ದವರು ಈ ಮೂಲಕ ಹೊಸ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಪ್ರೋತ್ಸಾಹಿಸಿದ್ದಾರೆ. ಚಿತ್ರಕ್ಕೆ ಮರುಗೇಶ್ ಕಣ್ಣಪ್ಪ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರಾಮರೆಡ್ಡಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿಜಯ್ ಎಂ.ಕುಮಾರ್ ಸಂಕಲನವಿದೆ. ಮೋಹನ್ ಭಜರಂಗಿ ನೃತ್ಯವಿದೆ. ರಮೇಶ್ ಸಾಹಸ ಮಾಡಿದ್ದಾರೆ. ಚಿತ್ರಕ್ಕೆ ಮಮತಾ ಜಯರಾಮರೆಡ್ಡಿ ನಿರ್ಮಾಪಕರು. ಅಮರ್ ವಿರಾಜ್ ಹಾಗೂ ರಚನಾ ದಶರತ್ ನಾಯಕ, ನಾಯಕಿಯಾಗಿದ್ದಾರೆ.
ಕನ್ನಡದಲ್ಲಿ ಈಗಾಗಲೇ ತರಹೇವಾರಿ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಅದರಲ್ಲೂ ನಿಷ್ಕಲ್ಮಶ ಪ್ರೀತಿ ಕುರಿತಾದ ಅದೆಷ್ಟೋ ಕಥೆಗಳು ಬಂದಿವೆ. ಬರುತ್ತಲೂ ಇವೆ. ಸಿನಿಮಾಗಳಲ್ಲಿ ಬ್ಯೂಟಿಫುಲ್ ಕಪಲ್ಸ್ ಕಥೆಗಳಿಗೇನೂ ಬರವಿಲ್ಲ. ಅಂತಹ ನೂರಾರು ಬ್ಯೂಟಿಫುಲ್ ಕಪಲ್ ಲವ್‌ಸ್ಟೋರಿಗಳೂ ಬಂದಿವೆ. ಅಂಥದ್ದೊಂದು ಕಪಲ್ ಲವ್‌ಸ್ಟೋರಿ ಇಟ್ಟುಕೊಂಡು ಹೀಗೊಂದು ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಶೇ.೯೦ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಅಂದಹಾಗೆ, ಆ ಸಿನಿಮಾದ ಹೆಸರು ಪರಿಶುದ್ಧಂ. ಈ ಹೆಸರು ಕೇಳಿದಾಕ್ಷಣ ಇಲ್ಲಿ ಎಲ್ಲವೂ ಪರಿಶುದ್ಧವಾಗಿಯೇ ಇರುತ್ತೆ ಅನ್ನೋದು ಪಕ್ಕಾ. ಹೌದು, ಪರಿಶುದ್ಧಂ ಒಂದೊಳ್ಳೆಯ ಬಾಂಧವ್ಯದ ಕಥೆ. ಇಲ್ಲಿ ಸ್ನೇಹ ಇರಲಿ, ಪ್ರೀತಿ ಇರಲಿ, ಸಂಬಂಧಗಳಿರಲಿ ಎಲ್ಲವೂ ಪರಿಶುದ್ಧವಾಗಿರುತ್ತವೆ ಅನ್ನೋದರ ಸುತ್ತ ಸಾಗುವ ಕಥೆ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು.
ಈ ಸಿನಿಮಾಗೆ ಕಾರ್ತಿಕ್ ವೆಂಕಟೇಶ್ ನಿರ್ದೇಶಕರು. ಈ ಹಿಂದೆ ಇವರು ದರ್ಪಣ ಎಂಬ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿ ಇವರೊಂದು ದಾಖಲೆ ಬರೆದಿದ್ದರು. ಅದೇನೆಂದರೆ, ಸಿನಿಮಾದ ೨೧ ವಿಭಾಗದಲ್ಲಿ ಇವರೇ ಕೆಲಸ ಮಾಡಿದ್ದರು. ಈಗ ಪರಿಶುದ್ಧಂ ಅವರ ಎರಡನೇ ನಿರ್ದೇಶನದ ಚಿತ್ರ. ಈ ಸಿನಿಮಾಗೆ ನಿರ್ಮಾಣ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಯೂ ಇವರದೇ. ಇವರೊಂದಿಗೆ ನಿರ್ಮಾಣದಲ್ಲಿ ಕುಮಾರ್ ರಾಥೋಡ್ ಮತ್ತು ರೋಹನ್ ಕಿಡಿಯೂರ್ ಕೂಡ ಸಾಥ್ ನೀಡಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಮಾ ಕುರಿತು ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಕಥೆ ಮತ್ತು ನಟಿ ಸ್ಪರ್ಶ ರೇಖಾ. ಹೌದು, ಅ ಕುರಿತು ನಿರ್ದೇಶಕರು ಹೇಳೋದಿಷ್ಟು. ಸ್ಪರ್ಶ ರೇಖಾ ಅವರು ಒಂದು ರೀತಿ ಲಕ್ಕಿ. ನನಗೂ ಅಷ್ಟೇ. ಕಾರಣ, ಈ ಹಿಂದೆ ನಾನು ಒಂದು ಸಿನಿಮಾದ ಆಡಿಯೋ ಲಾಂಚ್‌ಗೆ ಆಹ್ವಾನಿಸಿದ್ದೆ. ಅವರು ಬಂದು ಹೋದ ಬಳಿಕ ನನಗೆ ಅದೃಷ್ಟ ಹೆಚ್ಚಾಯ್ತು. ಇನ್ನುಳಿದಂತೆ ಸುದೀಪ್ ಅವರ ಮೊದಲ ಸಿನಿಮಾದಲ್ಲೂ ಅವರಿದ್ದರು. ನಂತರ ಸ್ಟಾರ್ ಹೇಗೆಲ್ಲಾ ತಿರುಗಿತು ಎಲ್ಲರಿಗೂ ಗೊತ್ತಿದೆ. ದರ್ಶನ್ ಜೊತೆಯಲ್ಲೂ ಅವರಿದ್ದಾರೆ. ಹಾಗಾಗಿ ಸ್ಪರ್ಶ ರೇಖಾ ಅವರೊಂದಿಗೆ ನಾನು ಸಿನಿಮಾ ಮಾಡುತ್ತಿರುವ ಖುಷಿ ಇದೆ. ನನಗೂ ಅಂಥದ್ದೊಂದು ಅದೃಷ್ಟ ಸಿಗಲಿ ಅಂತ ಬಯಸುತ್ತೇನೆ ಅನ್ನುವ ಅವರು, ಮುಂದೆಯೂ ಅವರೊಂದಿಗೆ ಸಿನಿಮಾ ಮಾಡ್ತೀನಿ ಅಂತಾರೆ.
ಹಾಗಾದರೆ ಪರಿಶುದ್ಧಂ ಕಥೆ ಏನು? ಇದಕ್ಕೆ ಉತ್ತರಿಸೋ ನಿರ್ದೇಶಕರು, ಗಂಡ ಹೆಂಡತಿ ಸಂಬಂಧವೇ ಪರಿಶುದ್ಧವಾಗಿರುತ್ತೆ. ಅವರ ಮಧ್ಯೆ ಮೂರನೇ ವ್ಯಕ್ತಿಗೆ ಪ್ರವೇಶವಿಲ್ಲ. ಆಕರ್ಷಣೆ ಬೇರೆ, ಪ್ರೀತಿಯೇ ಬೇರೆ, ಇದರ ಮೇಲೆ ಸಿನಿಮಾ ಕಥೆ ಸಾಗುತ್ತದೆ. ಇಲ್ಲಿ ಸ್ಪರ್ಶ ರೇಖಾ ಮತ್ತು ರೋಹನ್ ಕಿಡಿಯೂರು ಆಕರ್ಷಣೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಯತಿರಾಜ್, ವಿಕ್ಟರಿ, ದಿಶಾ ಪೂವಯ್ಯ, ಮೈಸೂರು ರಮಾನಂದ, ರಮೇಶ್ ಪಂಡಿತ್, ಕುರಿ ರಂಗ ಇತರರು ಇದ್ದಾರೆ. ಕೃಷ್ಣ ಸಾರಥಿ ಹಾಗು ಕೃಷ್ಣ ಪ್ರೀತಂ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಆಯೂರ್ ಸ್ವಾಮಿ ಸಂಕಲನ ಮಾಡಿದ್ದಾರೆ. ಈಗಾಗಲೇ ಶೇ.೯೦ರಷ್ಟು ಬೆಂಗಳೂರಲ್ಲಿ ಚಿತ್ರೀಕರಣ ನಡೆದಿದೆ. ಮಲೇಶಿಯಾ, ಬ್ಯಾಂಕಾಕ್, ಕೌಲಲಂಪುರದಲ್ಲಿ ಒಂದು ಹಾಡನ್ನು ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.
ಈ ಚಿತ್ರದಲ್ಲೊಂದು ದಾಖಲೆ ಇದೆ. ಅದೇನೆಂದರೆ, ಸ್ಪರ್ಶ ರೇಖಾ ಅವರಿಗೆ ಪ್ಯಾಥೋ ಸಾಂಗ್ ಇಡಲಾಗಿದ್ದು, ಅದು ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಕೇವಲ ಎರಡೇ ಸ್ವರದ ಮೇಲೆ ಆ ಸಾಂಗ್ ಕಂಪೋಸ್ ಮಾಡಲಾಗಿದೆಯಂತೆ. ಅದರಲ್ಲೂ ಆ ಹಾಡಲ್ಲಿ ಶುರುವಾಗುವ ಅಕ್ಷರಗಳಲ್ಲೆವೂ “ಕ”ನಿಂದಲೇ ಶುರುವಾಗುತ್ತೆ ಅನ್ನೋದು ವಿಶೇಷವಂತೆ. ಇನ್ನು, ಲುಲು ಮಾಲ್‌ನಲ್ಲಿ ಮೊದಲ ಬಾರಿ ಚಿತ್ರೀಕರಿಸಿದ ಮೊದಲ ಸಿನಿಮಾವಂತೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಅಂದಹಾಗೆ, ಈ ಚಿತ್ರ ಏಪ್ರಿಲ್ ೨೮ರಂದು ಬಿಡುಗಡೆಯಾಗಲಿದೆಯಂತೆ. ಅದೇನೆ ಇರಲಿ, ಈ ಸಿನಿಮಾ ನೋಡುವ ಮಂದಿ ಬಳಿಕ ಪರಿಶುದ್ಧ ಪ್ರೀತಿ, ಗೆಳೆತನ ಬಾಂಧವ್ಯ ಇಟ್ಟುಕೊಂಡರೆ ಈ ಸಿನಿಮಾ ಮಾಡಿದ್ದಕ್ಕೂ ಸಾರ್ಥಕ.
ಕೆಲವು ಸಿನಿಮಾಗಳೇ ಹಾಗೆ. ಬಿಡುಗಡೆ ಮುನ್ನವೇ ಒಂದಷ್ಟು ಕುತೂಹಲ ಮೂಡಿಸಿಬಿಡುತ್ತವೆ. ಆ ಸಾಲಿಗೆ “ಕನ್ನೇರಿ” ಸಿನಿಮಾ ಕೂಡ ಅಂಥದ್ದೊಂದು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ, ಈ ಹಿಂದೆ “ಮೂಕ ಹಕ್ಕಿ” ಚಿತ್ರ ನಿರ್ದೇಶಿಸಿದ್ದ ನೀನಾಸಂ ಮಂಜು. ಹೌದು, ನಿರ್ದೇಶಕ ನೀನಾಸಂ ಮಂಜು ಅವರು “ಮೂಕಹಕ್ಕಿ” ಮೂಲಕ ಒಂದೊಳ್ಳೆಯ ಕಥೆ ಹೇಳಿದ್ದರು. ಅದು ಎಲ್ಲರ ಮನ ಮುಟ್ಟಿತ್ತು. ಈಗ ಅವರು “ಕನ್ನೇರಿ” ಸಿನಿಮಾ ಮೂಲಕ ನೈಜ ಘಟನೆಯಾಧಾರಿತ ಕಥೆ ಹೇಳಲು ಸಜ್ಜಾಗಿದ್ದಾರೆ.
ಈಗಾಗಲೇ “ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡುಕಟ್ಟಿ’ ಹಾಡಿನ ಮೂಲಕ ಗಮನಸೆಳೆದಿದ್ದ ಕನ್ನೇರಿ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. “ನೆಲೆ ಇರದ ಕಾಲು..” ಹಾಡು ರಿಲೀಸ್ ಆಗಿದೆ. ಈ ಲಿರಿಕಲ್ ವೀಡಿಯೋ ಎ2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.
ಕಾಡ ಮಕ್ಕಳ ಒಡಲ ಬೇಗುದಿಯ ನೋವಿನ ಕಥೆ ಈ ಹಾಡಿನಲ್ಲಿದ್ದು ವಿ. ರಘು ಶಾಸ್ತ್ರಿ ಸಾಹಿತ್ಯ ಬರೆದು, ವಾಣಿ ಹರಿಕೃಷ್ಣ ಆ ಹಾಡಿಗೆ ದನಿಯಾಗಿದ್ದಾರೆ. ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ‘ನೆಲೆ ಇರದ ಕಾಲು’ ಹಾಡನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಅವರು ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ‘ಕನ್ನೇರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅರ್ಚನಾ ಮಧು ಸೂಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅರುಣ್ ಸಾಗರ್, ಅನಿತಾ ಭಟ್, ಸರ್ದಾರ್ ಸತ್ಯ, ಎಂ.ಕೆ.ಮಠ್, ಕರಿಸುಬ್ಬು ಚಿತ್ರದಲ್ಲಿದ್ದಾರೆ.
ಕದ್ರಿ ಮಣಿಕಾಂತ್ ಸಂಗೀತವಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ಹಿಡಿದರೆ, ಸುಜಿತ್ ಎಸ್. ನಾಯಕ್ ಸಂಕಲನವಿದೆ. ಸದ್ಯ ಹಾಡಿನ ಮೂಲಕವೇ ಜೋರು ಸದ್ದು ಮಾಡುತ್ತಿರುವ ಕನ್ನೇರಿ ಹೊಸಬಗೆಯ ಸಿನಿಮಾವಂತೂ ಹೌದು. ಅಷ್ಟೇ ಅಲ್ಲ, ಮತ್ತೊಂದು ಭಾವುಕತೆ ಹೆಚ್ಚಿಸುವ ಸಿನಿಮಾ ಕೊಡುವ ಉತ್ಸಾಹದಲ್ಲಿ ನಿರ್ದೇಶಕರಿದ್ದಾರೆ.
ಹಾಸ್ಯ ನಟ ತಬಲನಾಣಿ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ನನಗೂ ಹೇಂಡ್ತಿ ಬೇಕು” ಎಂದು ಹೆಸರಿಡಲಾಗಿದೆ. ಹೆಸರಲ್ಲೇ ಒಂದು ಮಜಾ ಇದೆ ಅಂದಮೇಲೆ ಚಿತ್ರದ ಕಥೆ ಮತ್ತು ಮಾತುಗಳಲ್ಲೂ ಆ ಮಜಾ ಇದ್ದೇ ಇರುತ್ತದೆ. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲಿಗೆ, ಈ ಸಿನಿಮಾದ ಹೈಲೈಟ್ ಅವರೇ. ತಬಲ ನಾಣಿ ಸಿನಿಮಾ ಅಂದಮೇಲೆ ಅಲ್ಲಿ ಮಾತಿಗೇನೂ ಬರ ಇರೋದಿಲ್ಲ. ಅದರಲ್ಲೂ ಸಖತ್ ಪಂಚಿಂಗ್ ಫನ್ನಿ ಡೈಲಾಗ್‌ಗಳದ್ದೇ ಕಾರುಬಾರು. ಮತ್ತೆ ಜನರನ್ನು ನಗಿಸೋಕೆ ನಾಣಿ ಸಜ್ಜಾಗಿದ್ದಾರೆ. ಅವರನ್ನು ಸಜ್ಜು ಮಾಡಿರೋದು ನಿರ್ದೇಶಕ ಕೆ.ಶಂಕರ್. ಅವರಿಗೆ ಹಣ ಹಾಕಿ ಸಾಥ್ ನೀಡಿರೋದು ಭರತ್ ಗೌಡ ಹಾಗು ಹುಲ್ಲೂರ್ ಮಂಜುನಾಥ್. ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆಯೋ ಕಥೆಯಲ್ಲಿ ನೂರಾರು ತಿರುವುಗಳಿದ್ದು, ಇದೊಂದು ಅಪ್ಪಟ ಕೌಟುಂಬಿಕ ಸಿನಿಮಾ ಎಂಬುದು ಚಿತ್ರತಂಡದ ಮಾತು….
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾಸ್ಯಮಯ ಸಿನಿಮಾಗಳು ಬಂದಿವೆ. ಅದರಲ್ಲೂ ಹಾಸ್ಯ ಸಿನಿಮಾಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಈಗ ಮತ್ತೊಂದು ಹಾಸ್ಯಮಯ ಸಿನಿಮಾ ಶುರುವಾಗುತ್ತಿದೆ. ಹಾಸ್ಯ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ತಬಲ ನಾಣಿ. ಹೌದು, ತಬಲ ನಾಣಿ ಅವರನ್ನು ನೋಡಿದ ಕೂಡಲೇ ಸಿನಿಮಾ ಮಂದಿಗೆ ಒಂದು ರೀತಿ ಖುಷಿ. ಅದಕ್ಕೆ ಕಾರಣ, ಅವರ ಪಂಚಿಂಗ್ ಡೈಲಾಗ್‌ಗಳು, ಆಗಾಗ ಹರಿಬಿಡುವ ಡಬ್ಬಲ್ ಮೀನಿಂಗ್ ಮಾತುಗಳು. ಇವೆಲ್ಲದರಿಂದಲೇ ಅವರ ಸಿನಿಮಾಗಳು ಸಕ್ಸಸ್ ಆಗಿದ್ದು ಗೊತ್ತೇ ಇದೆ. ತಬಲ ನಾಣಿ ಅವರ ಸಿನಿಮಾಗಳಲ್ಲಿ ಮಾತುಗಳೇ ಬಂಡವಾಳ. ಅಂಥದ್ದೊಂದು ಮಾತುಗಳ ಮಳೆ ಸುರಿಸುವಂತಹ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ ತಬಲ ನಾಣಿ.
ಆ ಸಿನಿಮಾಗೆ “ನನಗೂ ಹೆಂಡ್ತಿ ಬೇಕು” ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ನೋಡಿದ ಕೂಡಲೇ ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಅನಿಸದೇ ಇರದು. ಈ ಸಿನಿಮಾಗೆ ಕೆ.ಶಂಕರ್ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಇನ್ನು, ಈ ಚಿತ್ರ ಲೈರಾ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದ್ದು, ಭರತ್ ಗೌಡ ಹಾಗು ಹುಲ್ಲೂರ್ ಮಂಜುನಾಥ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ನವರಂಗ ಬಳಿ ಇರುವ ಶ್ರೀ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ನಿರ್ಮಾಪಕ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್.ಎಂ..ಸುರೇಶ್ ಅವರು ಕ್ಯಾಮೆರಾ ಚಾಲನೆ ಮಾಡಿದರೆ, ಉದ್ಯಮಿ ಸಿ.ರಮೇಶ್ ಅವರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಿರ್ದೇಶಕ ಕೆ.ಶಂಕರ್ ಅವರಿಗೆ ಇದು ಮೂರನೇ ನಿರ್ದೇಶನದ ಸಿನಿಮಾ. ತಮ್ಮ ಹಾಸ್ಯಮಯ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶಕ ಕೆ.ಶಂಕರ್, “ಇದೊಂದು ಪಕ್ಕಾ ಔಟ್ ಆಂಡ್ ಔಟ್ ಕಾಮಿಡಿ ಸಿನಿಮಾ. “ನನಗೂ ಹೆಂಡ್ತಿ ಬೇಕು” ಎಂಬ ಶೀರ್ಷಿಕೆಯೇ ಚಿತ್ರದ ಸಾರಾಂಶವನ್ನು ಹೇಳುತ್ತೆ. ಚಿತ್ರದ ಒನ್ ಲೈನ್ ಸ್ಟೋರಿ ಕುರಿತು ಹೇಳುವುದಾದರೆ, ಚಿತ್ರದಲ್ಲೊಬ್ಬ ಅಂಧ ತಾನು ಮದುವೆ ಆಗಬೇಕು ಎಂಬ ಆಸೆ ಇಟ್ಟುಕೊಳ್ಳುತ್ತಾನೆ. ಆದರೆ, ಅವನಿಗೆ ಯಾವುದೇ ಕಾರಣಕ್ಕೂ ಮದುವೆ ಆಗಲೇಬಾರದು ಅಂತ ಒಂದಷ್ಟು ಮಂದಿ ತೊಂದರೆ ಕೊಡೋಕೆ ಮುಂದಾಗುತ್ತಾರೆ. ಅಂತಹ ಮಂದಿಯ ಮಧ್ಯೆ ಆ ಅಂಧ ಮದ್ವೆ ಆಗುತ್ತಾನೋ ಇಲ್ಲವೋ ಅನ್ನೋದು ತಮಾಷೆಯ ಜೊತೆ ಜೊತೆಗೆ ಹಾಸ್ಯಮಯವಾಗಿಯೇ ಸಿನಿಮಾ ಸಾಗುತ್ತದೆ.
ಇದರ ನಡುವೆ, ಕಣ್ಣು ಇರುವವರ ಮಧ್ಯೆಯೇ ಕಣ್ಣಿಲ್ಲದವ ಅವರನ್ನು ಹೇಗೆಲ್ಲಾ ಯಾಮಾರಿಸಿ, ತನ್ನ ಗುರಿ ಮುಟ್ಟುತ್ತಾನೆ ಅನ್ನೋದು ಸಸ್ಪೆನ್ಸ್. ಇಡೀ ಚಿತ್ರದ ಕಥೆ ಚಿತ್ರದುರ್ಗದಲ್ಲಿ ನಡೆಯುತ್ತೆ. ಒಟ್ಟಾರೆ ಚಿತ್ರದ ಸಾರಾಂಶ ಏನೆಂದರೆ, ಯಾರೇ ಇರಲಿ, ಬದುಕಲ್ಲಿ ಒಂದೊಳ್ಳೆಯ ಪ್ಲಾನ್ ಮಾಡಿಕೊಳ್ಳದೇ ಇದ್ದರೆ ಲೈಫ್ ಏನಾಗುತ್ತೆ, ಪ್ಲಾನ್ ಮಾಡಿಕೊಂಡರೆ ಲೈಫ್ ಹೇಗಿರುತ್ತೆ ಅನ್ನುವುದರ ಸುತ್ತ ಕಥೆ ಸಾಗುತ್ತದೆ. ಇದು ಫ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ ಆಗಲಿದೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ಕೆ.ಶಂಕರ್.
ಈ ಚಿತ್ರ ಬಹುತೇಕ ಚಿತ್ರದುರ್ಗ ಹಾಗು ಬೆಂಗಳೂರಲ್ಲಿ ನಡೆಯಲಿದೆ. ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಸಿನಿಮಾದಲ್ಲಿ ತಬಲ ನಾಣಿ ಹೈಲೈಟ್. ಅವರೇ ಚಿತ್ರದ ಹೀರೋ. ಇನ್ನು ಚಿತ್ರದಲ್ಲಿ ಚೈತನ್ಯ, ಪ್ರಿಯಾ, ಧರ್ಮ, ಮುಖ್ಯಮಂತ್ರಿ ಚಂದ್ರು, ಭೈರತಿ ಭಾನುಪ್ರಕಾಶ್, ಟೆನ್ನಿಸ್ ಕೃಷ್ಣ, ಪಾಟೀಲ್, ಕಿಲ್ಲರ್ ವೆಂಕಟೇಶ್, ಗಣೇಶ್‌ರಾವ್ ಕೇಸರ್‌ಕರ್, ಲಕ್ಷ್ಮಣ ರಾವ್, ಬ್ಯಾಂಕ್ ಜನಾರ್ಧನ್, ಶ್ರೀಧರ್, ಹುಲ್ಲೂರ್ ಮಂಜುನಾಥ್, ಬಿಗ್ ಬಾಸ್ ಮಂಜು, ಪುಣ್ಯಶ್ರೀ, ಮಾ.ಧೃವ ಚಂದನ್ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಟಿ.ರವಿಕುಮಾರ್ (ಎಸ್‌ಎಲ್‌ವಿ ರವಿ) ಕ್ಯಾಮೆರಾ ಹಿಡಿದರೆ, ಸಂಜೀವ್ ರೆಡ್ಡಿ ಸಂಕಲನ ಮಾಡುತ್ತಿದ್ದಾರೆ. ಹರಿ ನೃತ್ಯ ನಿರ್ದೇಶನವಿದೆ. ವೇಲು ಸಾಹಸ ಮಾಡಲಿದ್ದಾರೆ. ರವಿ. ಬಿ.ಎಸ್., ಸತೀಶ್ ಪಾಲನೇತ್ರಪ್ಪ, ಶಿವಣ್ಣ, ಪ್ರಸನ್ನ ಸಹ ನಿರ್ದೇಶನವಿದೆ.
ಇನ್ನು, ತಬಲ ನಾಣಿ ಅವರು ಈಗಾಗಲೇ ಅಂಧ ಪಾತ್ರದಲ್ಲಿ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮತ್ತೊಮ್ಮೆ ಅವರು ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ “ನನಗೂ ಹೆಂಡ್ತಿ ಬೇಕು” ಅಂತ ಹೊರಟಿದ್ದಾರೆ. ಈ ಹಿಂದಿನ ಎಲ್ಲಾ ಸಿನಿಮಾಗಳಲ್ಲಿ ಅವರು ಕಚಗುಳಿ ಇಟ್ಟು ಪ್ರೇಕ್ಷಕರನ್ನು ನಗಿಸಿದ್ದಾರೆ. ಇಲ್ಲೂ ಅದು ಮುಂದುವರೆಯಲಿದೆ ಎಂಬುದು ಚಿತ್ರತಂಡದ ಹೇಳಿಕೆ.
ಸಂಗೀತಕ್ಕೆ ಗಡಿ-ಭಾಷೆ ಯಾವುದು ಇರೋದಿಲ್ಲ. ಸಂಗೀತ ಮನತಣಿಸಿ ಕುಣಿಸಿದ್ರೆ ಸಾಕು. ಭಾರತೀಯ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತಗಾರರಿಗೇನು ಲೆಕ್ಕವಿಲ್ಲ. ಹಾಗೇಯೇ ನಮ್ ಕನ್ನಡದಲ್ಲೂ ಅದ್ಭುತ ಸಂಗೀತಗಾರರಿಗೇನು ಕಮ್ಮಿಇಲ್ಲ. ಆದರೆ ಎಲ್ಲರೊಳಗೇ ನಾವು ಒಬ್ಬರಾದರೆ ಜನ ನಮ್ಮನ್ನು ನೋಡಲ್ಲ. ಆ ಎಲ್ಲರಲ್ಲಿ ನಾವು ವಿಭಿನ್ನ ಎನಿಸಿಕೊಂಡಾಗಲೇ ಜನ ಇಷ್ಟಪಟ್ಟು ಬೆನ್ನು ತಟ್ಟೋದು. ಈಗ ಇಷ್ಟೊಂದು ಪೀಠಿಕೆಗೆ ಕಾರಣ ಸಂಗೀತ ನಿರ್ದೇಶಕ ಹೇಮಂತ್ ಜೋಯ್ಸ್. ಅವರೀಗ ಖುಷಿ-2 ಎಂಬ ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದಾರೆ. ಅದು ಹೇಮಂತ್ ಜೋಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದೆ ಬಿಡುಗಡೆಯಾಗಿರುವ ಖುಷಿ ಹಾಡಿನ ಸೀಕ್ವೆಲ್ ಆಗಿರುವ ಖುಷಿ 2 ಹಾಡು ಸಮ್ ಥಿಂಗ್ ಸ್ಪೆಷಲ್. ಅಜ್ಜಿ ಹಾಗೂ ಮೊಮ್ಮಗನ ಬಾಂಧವ್ಯದ ಮಹತ್ವ ಸಾರುವ ಈ ಹಾಡು EDM ಸಾಂಗ್, ಅಂದ್ರೆ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಹಾಡು. ಸಾಹಿತ್ಯಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಹೆಚ್ಚಿರುತ್ತೆ. ಸಾಮನ್ಯವಾಗಿ ನಾವು ಕೇಳುವ ನೋಡುವ ವಿದೇಶಿ ಹಾಡುಗಳು ಇದೇ ರೀತಿ ಇರುತ್ತವೆ. ನಾನು ಯಾಕೆ EDM ಒಮ್ಮೆ ಟ್ರೈ ಮಾಡಬಾರದು ಅಂತಾ ಯೋಚಿಸಿ ಹೇಮಂತ್ ಖುಷಿ 2 ಹಾಡು ಮಾಡಿ ರಿಲೀಸ್ ಮಾಡಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತಿದೆ. ಅಂದಹಾಗೇ ಕನ್ನಡದಲ್ಲಿ ಈ ರೀತಿ ಹಾಡು ಮೊದಲು ಅಂದರೂ ತಪ್ಪಿಲ್ಲ ಬಿಡಿ.
ರಕ್ಷಿತ್ ತೀರ್ಥಹಳ್ಳಿ ಖುಷಿ2 ಹಾಡನ್ನು ನಿರ್ದೇಶನ ಮಾಡಿದ್ದು, ಕನ್ನಡದಲ್ಲಿ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದರೆ, ಇಂಗ್ಲೀಷ್ ನಲ್ಲಿ ಚಿನ್ಮಯ್ ಬರೆದಿದ್ದಾರೆ.
ಚೇತನ್ ನಾಯ್ಕ್ ಈ ಹಾಡಿಗೆ ಧ್ವನಿಯಾಗಿದ್ದು, ಹೇಮಂತ್ ಜೋಯ್ಸ್ ಮ್ಯೂಸಿಕ್ ನೀಡುವುದರ ಜೊತೆಗೆ ಈ ಹಾಡಿನ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೇಮಂತ್ ಜೋಯ್ಸ್ ಜೊತೆಗೆ ಗುಬ್ಬಿ ವೀರಣ್ಣನ ಮರಿ ಮೊಮ್ಮಗಳು ಸುಂದರಶ್ರೀ ಕೂಡ ನಟಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ ಎನ್. ಎಸ್. ರಾಜಕುಮಾರ್ ತಮ್ಮ ಓಂಕಾರ್ ಫಿಲಂಸ್ ಮೂಲಕ “ರಮ್ಯ ರಾಮಸ್ವಾಮಿ” ಎಂಬ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಅವರಿಗೆ “ಕನ್ನಡಿಗ” ಸಿನಿಮಾ ನಿರ್ಮಿಸಿದ್ದ ರಾಜಕುಮಾರ್, ಇದೀಗ ಮತ್ತೊಂದು ಸಿನಿಮಾ ನಿರ್ಮಿಸುತ್ತಿದ್ದಾರೆ.
ಈ ಚಿತ್ರಕ್ಕೆ ಚಿ.ಗುರುದತ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಇನ್ನು, ಈ ಚಿತ್ರಕ್ಕೆ ಜನಾರ್ದನ ಮಹರ್ಷಿ ಕಥೆ ಬರೆದಿದ್ದಾರೆ. ಇಲ್ಲಿ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದು, ರಾಮಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಮ್ಯ ಪಾತ್ರದಲ್ಲಿ ಯಾರು ನಟಿಸುತ್ತಿದಾರೆಂಬ ಕುತೂಹಲವಿದೆ. ಆ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಯಾರು ನಟಿಸುತ್ತಾರೆಂಬುದನ್ನು ಸದ್ಯದಲ್ಲೇ ನಿರ್ಮಾಪಕರು ಹೇಳಲಿದ್ದಾರೆ.
ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿದೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇಷ್ಟರಲ್ಲೇ ಕೊಡಲಿದ್ದಾರೆ ನಿರ್ದೇಶಕರು.
ಕನ್ನಡದಲ್ಲಿ ಈಗಾಗಲೇ ಹಲವು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ “ಗಿಲ್ಕಿ” ಕೂಡ ಸೇರಿದೆ. ಗಿಲ್ಕಿ ಅನ್ನೋದು ಚಿತ್ರದ ಹೀರೋ ಹೆಸರು. ಈ ಚಿತ್ರದ ಕಥೆ ವಿಭಿನ್ನವಾಗಿದೆ. ಸಮಾಜದಿಂದ ವಿಮುಖರಾದ ಮೂರು ಪಾತ್ರಗಳ ಮೂಲಕ ಕಥೆ ಸಾಗುತ್ತದೆ. ಗಿಲ್ಕಿ, ನ್ಯಾನ್ಸಿ ಮತ್ತು ಶೇಕ್ಸ್ ಪಿಯರ್ ಪಾತ್ರಗಳು ಇಲ್ಲಿ ಹೈಲೈಟ್…
“ಗಿಲ್ಕಿ” ಚಿತ್ರ ಕೂಡ ವಿಭಿನ್ನ ಕಥಾವಸ್ತು ಹೊಂದಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಜಯತೀರ್ಥ, ಸತ್ಯಪ್ರಕಾಶ್ ಹಾಗೂ ನಿರ್ಮಾಪಕ ಮಂಜುನಾಥ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇನ್ನು, ನಿರ್ದೇಶಕ ವೈ.ಕೆ ತಮ್ಮ ಸಿನಿಮಾ ಕುರಿತು ಹೇಳಿದ್ದಿಷ್ಟು.
ನಮ್ಮ ಚಿತ್ರ ಮಾಮೂಲಿ ತರಹ ಇರುವುದಿಲ್ಲ. ಹೆಚ್ಚು ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡಿದವರೂ ಕೂಡ ಪ್ರೇಕ್ಷಕನಿಗೆ ಹೊಸ ಪ್ರಪಂಚ ಕಟ್ಟಿಕೊಡುವ ಕೆಲಸ ಮಾಡುತ್ತಾರೆ. ಆದರೆ, ನಾವು ಸೀಮಿತ ಬಜೆಟ್ ನಲ್ಲೇ ಅಂತಹ ಪ್ರಯೋಗಕ್ಕೆ ಮುಂದಾಗಿದ್ದೇವೆ. ಸಮಾಜದಿಂದ ವಿಮುಖರಾದ ಮೂರು ಪಾತ್ರಗಳ ಮೂಲಕ ನಮ್ಮ ಚಿತ್ರಕಥೆ ಸಾಗುತ್ತದೆ. ಅದು ಗಿಲ್ಕಿ , ನ್ಯಾನ್ಸಿ ಹಾಗೂ ಶೇಕ್ಸ್ ಪಿಯರ್ ಪಾತ್ರಗಳು ಇಲ್ಲಿರಲಿವೆ. ಗಿಲ್ಕಿ ನಾಯಕನ ಪಾತ್ರದ ಹೆಸರು. ಈತ ನೋಡಲು ಮಾಮೂಲಿ ತರಹ ಕಾಣುತ್ತಾನೆ. ಆದರೆ ಮಾತನಾಡಲು ಶುರು ಮಾಡಿದರೆ ಆತನ ಸ್ವಭಾವ ತಿಳಿಯುತ್ತದೆ. ನಾನ್ಸಿ ನಾಯಕಿಯ ಪಾತ್ರ. ಈಕೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಖಾಯಿಲೆಗೆ ತುತ್ತಾಗಿ ತನ್ನ ಕೈ – ಕಾಲುಗಳ ಸ್ವಾಧೀನ ಕಳೆದುಕೊಂಡಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ನಂತರ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಫೆ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತಿದೆ. ಸತ್ಯಪ್ರಕಾಶ್ ತಮ್ಮ ವಿತರಣಾ ಸಂಸ್ಥೆ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ವೈ.ಕೆ.
ನಿರ್ಮಾಪಕ ನರಸಿಂಹ ಕುಲಕರ್ಣಿ ಹೇಳಿದ್ದು ಹೀಗೆ. “ನಾನು ಮತ್ತು ನಿರ್ದೇಶಕರು “ಅಮೃತ ಅಪಾರ್ಟ್ಮೆಂಟ್” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ನಾನು ಆಗಲೇ ವೈ ಕೆ ಅವರಿಗೆ ಹೇಳಿದ್ದೆ. ನೀವು ಒಳ್ಳೆಯ ಕಥೆ ಸಿದ್ದ ಮಾಡಿ ಸಿನಿಮಾ ಮಾಡೋಣ ಎಂದು. ಅವರು ಹೇಳಿದ ಕಥೆ ಚೆನ್ನಾಗಿತ್ತು. ಸಿನಿಮಾ ಶುರುವಾಯಿತು. ಸಾಕಷ್ಟು ಜನರ ಸಹಕಾರದಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ನಿಮ್ಮ ಬೆಂಬಲವಿರಲಿ ಎಂದರು.
ನಾಯಕಿ ಚೈತ್ರ ಅವರಿಗೆ ನಿರ್ದೇಶಕರು ಕಥೆ ಹೇಳಲು ಆಹ್ವಾನಿಸಿದಾಗ ನಾನು ಹೋಗಲು ಹಿಂದೆ ಸರಿದಿದೆ. ನಂತರ ಕಥೆ ಕೇಳಿದೆ. ಅವರು ಕಥೆ ಹೇಳುವಾಗಲೇ ನಾನು ಪಾತ್ರದಲ್ಲಿ ಮುಳಗಿ ಹೋದೆ . ಈ ಪಾತ್ರ ನಾನೇ ಮಾಡಬೇಕೆಂದು ನಿರ್ಧಾರ ಮಾಡಿದೆ. ಈಗ ಚಿತ್ರ ತೆರೆಗೆ ಬರುತ್ತಿದೆ. ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕೂಡ ಈಗಾಗಲೇ ಬೇರೆ ಚಿತ್ರಗಳಲ್ಲಿ ನಟಿಸಲು ಅವಕಾಶ ಬರುತ್ತಿದೆ ಎಂದು ನಾಯಕಿ ಚೈತ್ರ ತಿಳಿಸಿದರು.
ನಾನು ಈ ಹಿಂದೆ ಚಿತ್ರದ ಹಾಡುಗಳನ್ನು ನೋಡಿ ಖುಷಿ ಪಟ್ಟಿದೆ. ಟ್ರೇಲರ್ ಕೂಡ ಚೆನ್ನಾಗಿದೆ. ಹೊಸ ಪ್ರಯೋಗಕ್ಕೆ ಒಳಿತಾಗಲಿ ಎಂದು ಜಯತೀರ್ಥ ಹಾರೈಸಿದರು. ಎಲ್ಲಾ ಪ್ರೇಮಕಥೆ ಆಧಾರಿತ ಸಿನಿಮಾಗಳಲ್ಲಿ ನಾಯಕ ಕಟ್ಟುಮಸ್ತಾಗಿರುತ್ತಾನೆ. ನಾಯಕಿ ಸುಂದರವಾಗಿರುತ್ತಾಳೆ. ಆದರೆ ಅಂಗವಿಕಲೆ ಮತ್ತು ಬುದ್ದಿಮಾಂದ್ಯನ ನಡುವೆ ಪ್ರೀತಿ ಹುಟ್ಟುತ್ತದೆ ಎಂಬ ವಿಷಯ ತೆಗೆದುಕೊಂಡಿರುವ ನಿರ್ದೇಶಕರಿಗೆ ಅಭಿನಂದನೆ ಎಂದರು ಸತ್ಯಪ್ರಕಾಶ್.
ಚಿತ್ರದಲ್ಲಿ ನಟಿಸಿರುವ ಗೌತಮ್ ರಾಜ್, ಸಂಗೀತ ನೀಡಿರುವ ಆದಿಲ್ ನಡಾಫ್ ಹಾಗೂ ಸಂಕಲನಕಾರ ಕೆಂಪರಾಜ್ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ, ಸಂಗೀತ ನಿರ್ದೇಶಕ, ನಿರ್ದೇಶಕ ಹಾಗು ಗೀತ ಸಾಹಿತಿ ವಿ.ಮನೋಹರ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ಮತ್ತು ಗೆಳೆಯರು ಇತ್ತೀಚೆಗೆ ಆಚರಿಸುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಗೆಳೆಯರು “ವಿನಯ ಭೂಷಣ” ಎಂಬ ಸಾಕ್ಷ್ಯ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮನೋಹರ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದರು.
“ವಿನಯ ಭೂಷಣ” ಸಾಕ್ಷ್ಯ ಚಿತ್ರವನ್ನು ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು ನಿರ್ದೇಶನ ಮಾಡುತ್ತಿದ್ದಾರೆ. ಪಳನಿ ಡಿ. ಸೇನಾಪತಿ ಸಂಗೀತ ನೀಡುತ್ತಿದ್ದಾರೆ. ಗಂಡಸಿ ಸದಾನಂದ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಇವರೊಂದಿಗೆ ಈ ಸಾಕ್ಷ್ಯ ಚಿತ್ರದ ನಿರ್ಮಾಣಕ್ಕೆ ಸೆಂಚುರಿ ಫಿಲ್ಮ್ ಇನ್ಸ್ಟಿಟ್ಯೂಟ್, ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇನ್ಫ್ಯಾಂಟ್ ಸ್ಟುಡಿಯೋ ಸಾಥ್ ನೀಡಿದೆ.
ಈ ಸಂದರ್ಭದಲ್ಲಿ ಗೀತ ಸಾಹಿತಿ, ನಿರ್ದೇಶಕ, ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್, ನಿರ್ದೇಶಕ ಬುಕ್ಕಾಪಟ್ಟಣ ವಾಸು, ಮ್ಯೂಸಿಕ್ಸ್ ಬಾಕ್ಸ್ ಸಂಸ್ಥೆ, ಐಎಫ್‌ಎಂಎನ ದಿಲೀಪ್ ಕುಮಾರ್ ಮತ್ತು ಕರ್ನಾಟಕ ಛಾಯಾಚಿತ್ರಗ್ರಾಹಕರ ಅಧ್ಯಕ್ಷ ಪರಮೇಶ ಸುಬ್ಬಯ್ಯ ಸೇರಿದಂತೆ ನೂರಾರು ಗಣ್ಯರು ಮತ್ತು ಅಭಿಮಾನಿಗಳು ಹಾಜರಿದ್ದು, ವಿ.ಮನೋಹರ್ ಅವರಿಗೆ ಶುಭಕೋರಿದರು.