Categories
ಸಿನಿ ಸುದ್ದಿ

ಹೊರ ಬಂತು ಜಯ ಹೇ ದೇಶಭಕ್ತಿ ಹಾಡು; ಯೋಧರಿಗೊಂದು ಗಾನ ನಮನ…

ಸಂಗೀತವೇ ಹಾಗೆ. ಎಂತಹವರನ್ನಾದರೂ ಸೆಳೆಯುವ ಶಕ್ತಿ‌ ಸಂಗೀತಕ್ಕಿದೆ. ಒತ್ತಡಗಳನ್ನು ನಿವಾರಿಸಿ ಮನಕ್ಕೆ ಮುದ ನೀಡುವ ಮದ್ದು ಸಂಗೀತ ಅಂದ್ರು‌ ತಪ್ಪಿಲ್ಲ. ಸಂಗೀತವೆಂಬ ಕಲೆ‌ ಎಲ್ಲರಿಗೂ ಒಲಿಯುವುದಿಲ್ಲ. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಬೆವರು ಹರಿಸಲೇಬೇಕು ಎಂಬ ಮಾತನ್ನು ನಂಬಿರುವ ಗಾಯಕ ಆದರ್ಶ್ ಅಯ್ಯಂಗಾರ್. ಸಂಗೀತವೇ ತಮ್ಮ ಸಂಗಾತಿ ಅಂತಾ ಆರಾಧಿಸುತ್ತಿರುವ ಆದರ್ಶ್, ಜಯ ಹೇ ಎಂಬ ಗೀತೆ ಮೂಲಕ ಕರುನಾಡಿನ ಮನೆ-ಮನ ತಲುಪಲು ಬರುತ್ತಿದ್ದಾರೆ. ಆದರ್ಶ್ ಪ್ರೀತಿಯಿಂದ ಮಾಡಿರುವ ಜಯ ಹೇ ಹಾಡನ್ನು ವಿಂಗ್ ಕಮಾಂಡರ್ ಸುದರ್ಶನ್, ರಾಮ್ ದಾಸ್ ಜಿ ಎನ್ ( Retired LT Col ), ನಟ ವಿರಾಟ್ ಬಿಡುಗಡೆ ಮಾಡಿ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸದ್ಯ ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ, ಸ್ಟಾರ್ ಸುವರ್ಣ “ಸ್ಟಾರ್ ಸಿಂಗರ್” ಕಾರ್ಯಕ್ರಮದಲ್ಲಿ ಸ್ಪರ್ಧಿ ಭಾಗಿಯಾಗಿ ಅಪಾರ ಜನಪ್ರಿಯತೆ ಪಡೆದುಕೊಂಡರು. ನಂತರ ಉದ್ಯೋಗ ಅರಸಿ ದೂರದ ಅಮೇರಿಕಾಗೆ ಹೋದ್ರೂ ಕೂಡ ಸಂಗೀತದ ಮೇಲಿನ ಅವರ ಆಸಕ್ತಿ ಏನನ್ನಾದರು ಮಾಡುವಂತೆ ಪ್ರೇರೇಪಿಸುತ್ತಿತ್ತು. ಅದರಂತೆ ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಾ ಬಂದರು. ನಂತರ “My Friend” ಎಂಬ ವಿಡಿಯೋ ಹಾಡನ್ನು ತಮ್ಮದೆ ಆದ “ಶ್ರೀ ಕೃಷ್ಣ ಪ್ರೊಡಕ್ಷನ್” ಮೂಲಕ ಭಾರತ ಮತ್ತು ಅಮೇರಿಕಾ ಎರಡು ಕಡೆ ಶೂಟ್ ಮಾಡಿ My friend ಹಾಡಿನಿಂದ ಹೊಸ ಹೆಜ್ಜೆ ಇಟ್ಟರು. ಇದೀಗ ಜಯ ಹೇ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಿದ್ದಾರೆ.

ಹಳ್ಳಿಗಾಡಿನಿಂದಲೇ ಸೈನ್ಯಕ್ಕೆ ಸೇರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಮಲೆನಾಡಿನ ಹಳ್ಳಿಯೊಂದರಲ್ಲಿ ಮತ್ತು ಅಲ್ಲಿನ ಕುಟುಂಬವನ್ನು ಆಯ್ಕೆ ಮಾಡಿಕೊಂಡು ತೀರ್ಥಹಳ್ಳಿಯ ಸುತ್ತ ಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ ಆದರ್ಶ್.

ರಾಕ್-ಪಾಪ್ ಜಾನರ್ ನಲ್ಲಿ‌ ಮೂಡಿ ಬಂದಿರುವ ಜಯ ಹೇ ಎಂಬ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್ ಜೋಯೀಸ್ ಸಂಗೀತ ನೀಡಿದ್ದು, ಆದರ್ಶ್ ಅಯ್ಯಂಗಾರ್
ಹಾಡಿಗೆ ಧ್ವನಿಯಾಗುವುದರ‌ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್ ಜೋಯಿಸ್, ಗುರುಪ್ರಸಾದ್ ಬಡಿಗೇರ್, ದರ್ಶನ್ ಕುಮಾರ್, ಶ್ರೀ ಹರ್ಷ ರಾಮ್ ಕುಮಾರ್ ನಟಿಸಿದ್ದು, ರಕ್ಷಿತ್ ತೀರ್ಥಹಳ್ಳಿ‌ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಕ್ಯಾಮೆರಾ,
ಸುಧೀರ್ ಎಸ್ ಜೆ ಸಂಕಲನವಿರುವ ಜಯ ಹೇ ಹಾಡು, ಆದರ್ಶ್ ಅಯ್ಯಂಗಾರ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ..

Categories
ಸಿನಿ ಸುದ್ದಿ

ಶೋಕಿವಾಲನಿಗೆ ಯುಎ ಸರ್ಟಿಫಿಕೆಟ್;‌ ಸೆನ್ಸಾರ್‌ ಪರೀಕ್ಷೆಯಲ್ಲಿ ಪಾಸಾದ ಅಜೇಯ್‌ ರಾವ್‌ !

ಶೋಕಿವಾಲ ಚಿತ್ರ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದು ಪಾಸ್ ಅಗಿದ್ದು… ಜನರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾನೆ. ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ರೀಲಿಸ್ ಅಗಿ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಮತ್ತೊಂದು ಹಾಡನ್ನು ರಿಲೀಸ್‌ ಮಾಡಲು ತಂಡ ತಯಾರಿ ನಡೆಸುತ್ತಿದೆ.

ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ. ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು , ಮಾಗಡಿ ಯತಂಹ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ ಎಂಬುದು ನಿರ್ದೇಶಕ ಜಾಕಿ ಮಾತು.

ಶ್ರೀಧರ್. ವಿ. ಸಂಭ್ರಮ್ ಸಂಗೀತ ನೀಡಿದ್ದು, 4 ಹಾಡುಗಳಿವೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯವಿದೆ. ನವೀನ್ ಕುಮಾರ್.ಎಸ್ ಕ್ಯಾಮೆರಾ ಹಿಡಿದರೆ, ಕೆ.ಎಂ. ಪ್ರಕಾಶ್ ಸಂಕಲನವಿದೆ., ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಮೋಹನ್ ನೃತ್ಯವಿದೆ. ವಿಕ್ರಮ್ ಮೋರ್ ಸಾಹಸ ಮಾಡಿದ್ದಾರೆ. ಮೈಸೂರು ರಘು ಕಲಾ ನಿರ್ದೇಶನ ಚಿತ್ರಕ್ಕಿದೆ. ಕೊರೊನಾ ಸಮಸ್ಯೆ ಬಗೆಹರಿದರೆ, ಈ ತಿಂಗಳಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬುದು ತಂಡ ಹೇಳಿಕೆ. ಈ ಚಿತ್ರಕ್ಕೆ ಟಿ.ಆರ್.ಚಂದ್ರಶೇಖರ್‌ ನಿರ್ಮಾಪಕರು.

Categories
ಸಿನಿ ಸುದ್ದಿ

ಗರುಡ ಗಮನ ಮೆಚ್ಚಿದ ತೆಲುಗು ನಿರ್ದೇಶಕ; ಆಸ್ಕರ್ ಅವಾರ್ಡ್ ವಿನ್ನಿಂಗ್ ಮೂವಿ ಎಂದ ದೇವ ಕಟ್ಟ!

ಸ್ಯಾಂಡಲ್​ವುಡ್​​ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ ಗರುಡ ಗಮನ ವೃಷಭ ವಾಹನ ಸಿನಿಮಾ ಜೀ5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ‌ ನವೆಂಬರ್ 19ರಂದು ಥಿಯೇಟರ್ ಗೆ ಲಗ್ಗೆ ಇಟ್ಟ ‘ಗರುಡ ಗಮನ ವೃಷಭ ವಾಹನ’ ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ‘ಒಂದು ಮೊಟ್ಟೆಯ ಕಥೆ’ ಥರದ ಕಾಮಿಡಿ ಸಿನಿಮಾ ಮಾಡಿದ್ದ ರಾಜ್ ಬಿ. ಶೆಟ್ಟಿ, ಇಂಥದ್ದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಅವರು ಮಾಡಿದ್ದ ಶಿವ ಪಾತ್ರ ಸಖತ್ ರಗಡ್ ಆಗಿ ಮೂಡಿಬಂದಿತ್ತು. ರಾಜ್ ಬಿ. ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಕಾಂಬಿನೇಷನ್ ನೋಡುಗರಿಗೆ ಇಷ್ಟವಾಗಿತ್ತು. ಇದೀಗ ಈ ಸಿನಿಮಾವನ್ನು‌ ಟಾಲಿವುಡ್ ಖ್ಯಾತ ನಿರ್ಮಾಪಕ ದೇವ ಕಟ್ಟ ಮೆಚ್ಚುಕೊಂಡಿದ್ದಾರೆ.

ಆಸ್ಕರ್ ಅವಾರ್ಡ್ ವಿನ್ನಿಂಗ್ ಮೂವಿ ಎಂದ ದೇವ

ಟಾಲಿವುಡ್ ಸೇರಿದಂತೆ ಬಾಲಿವುಡ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ದೇವ ಕಟ್ಟಾ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.
2021ರ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ ಗರಡುಗಮನ ವೃಷಭ ವಾಹನ. ನನಗೆ ಆಸ್ಕರ್ ಗೆ ಸಿನಿಮಾ ಆಯ್ಕೆ ಮಾಡುವ ಪವರ್ ಇದ್ದಿದ್ದರೆ ಈ ಸಿನಿಮಾವನ್ನು ಆಯ್ಕೆ‌ ಮಾಡುತ್ತಿದ್ದೆ. ಗರುಡ ಗಮನ ವೃಷಭ ವಾಹನ ಸಿನಿಮಾ‌‌ವನ್ನು ನನ್ನ ಸ್ನೇಹಿತರ ಜೊತೆ ನೋಡಿದೆ. ಫಿಲ್ಮಂ ಮೇಕಿಂಗ್ ಅದ್ಭುತವಾಗಿದೆ.

ಸಿನಿಮಾ‌ ಬಹಳಷ್ಟು ಇಷ್ಟದ‌‌ ನಂತರ ಮತ್ತೆ ಕೆಲ ದಿನ ಬಳಿಕ ಥಿಯೇಟರ್ ಗೆ ಹೋದಾಗ ಸಿನಿಮಾ‌ ಇರಲಿಲ್ಲ. ಹೀಗಾಗಿ ಬೇಸರ ಆಯ್ತು. ಈಗ ಜೀ5 ಫ್ಲಾಟ್ ಫಾರ್ಮ್ ನಲ್ಲಿ‌ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ ಬಿ ಶೆಟ್ಟಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೆ ಇಷ್ಟು ಆಗುತ್ತೆ ಮಿಸ್ ಮಾಡದ್ದೇ ಎಲ್ಲರೂ ನೋಡಿ‌ ಎಂದಿದ್ದಾರೆ ದೇವ್.

Categories
ಸಿನಿ ಸುದ್ದಿ

ಮೀ ಟೂ ಪ್ರಕರಣ; ಅರ್ಜುನ್‌ ಸರ್ಜಾಗೆ ರಿಲೀಫ್;‌ ಪೊಲೀಸರ ಬಿ.ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಕಳೆದ ಐದು ವರ್ಷಗಳ ಹಿಂದೆ ಮೀಟು ವಿಷಯಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್‌ ಅವರು ನಟ ಆರ್ಜುನ್‌ ಸರ್ಜಾ ಅವರ ಮೇಲೆ ಆರೋಪಿಸಿದ್ದ ಪ್ರಕರಣವನ್ನು ನ್ಯಾಯಾಲಯ, ಬಿ.ರಿಪೋರ್ಟ್‌ ಅಂತ ತೀರ್ಮಾನಿಸಿ ತೀರ್ಪು ಪ್ರಕಟಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜುನ್‌ ಸರ್ಜಾ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.
ಈ ಹಿಂದೆ ನಟಿ ಶ್ರುತಿ ಅವರು ಸಿನಿಮಾವೊಂದರ ಚಿತ್ರೀಕರಣ ವೇಳೆ, ಅರ್ಜುನ್‌ ಸರ್ಜಾ ಅವರ ವಿರುದ್ಧ ಗಂಭೀರ ಅರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ಬಿ.ರಿಪೋರ್ಟ್‌ಗೆ ಎಂಟನೇ ಎಸಿಎಂಎಂ ಕೋರ್ಟ್‌ ಮುಕ್ತಾಯ ಅನ್ನುವ ರೀತಿಯಲ್ಲಿ, ಆರೋಪಕ್ಕೆ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಪರಿಗಣಿಸಿ, ಈ ತೀರ್ಪು ನೀಡಿದೆ.

ಬಿ.ರಿಪೋರ್ಟ್‌ಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ಇತ್ತು. ಆದರೆ, ನಟಿ ಶ್ರುತಿ ಅವರು ಯಾವುದೇ ರೀತಿ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಸಾಕ್ಷ್ಯಾಧಾರ ಸಲ್ಲಿಕೆ ಮಾಡಿರಲಿಲ್ಲ. ಅವರು ಈ ಪ್ರಕರಣ ಕೈ ಬಿಟ್ಟಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.


2017ರಲ್ಲಿ ಶ್ರುತಿ ಹರಿಹರನ್‌ ಅವರು ಮೀಟು ಗಂಭೀರ ಆರೋಪ ಮಾಡಿದ್ದರು. ಅವರು ಬ್ಯಾಡ್‌ ಟಚ್‌ ಎಂದು ಆರೋಪಿಸಿ, ಸಾಕಷ್ಟು ಹೇಳಿಕೆ ನೀಡಿದ್ದರು. ಈ ಪ್ರಕರಣ ವಿರುದ್ಧ ಹೋರಾಡುವುದಾಗಿಯೂ ತಿಳಿಸಿದ್ದರು. ಪೋಲೀಸರು ಕೂಡ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಿದ್ದರು.

Categories
ಸಿನಿ ಸುದ್ದಿ

ನಾಟ್ಯ ರಿಶಿಕುಮಾರಶ್ರೀ ! ಕಾಳಿ ಸ್ವಾಮಿಯ ನೃತ್ಯ ಪ್ರಸಂಗ; ಯುಗಾದಿಗೆ ಬಿಡುಗಡೆ


ಬಿಗ್ ಬಾಸ್ ಮೂಲಕ ಗುರುತಿಸಿಕೊಂಡ ಶ್ರೀ ಯೋಗೇಶ್ವರ ರಿಶಿಕುಮಾರಸ್ವಾಮಿ (ಕಾಳಿ ಮಠ) ಅವರಿಗೆ ಸಿನಿಮಾ ನಂಟು ಹೊಸದೇನಲ್ಲ. ಅವರು ಸ್ವಾಮಿ ಆಗುವ ಮೊದಲೇ ಸಿನಿಮಾರಂಗದಲ್ಲಿ ಮಿಂದೆದ್ದವರು. ಹೌದು, ಅದೇ ರಿಶಿಕುಮಾರಸ್ವಾಮಿ ಸಿನಿಮಾವೊಂದರಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ಅಂದಹಾಗೆ, ಅದರ ಹೆಸರು “ಸರ್ವಸ್ಯ ನಾಟ್ಯಂ”. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಕುಂಚಿಘಟ್ಟ ಮಹಾಸಂಸ್ಥಾನದ ಶ್ರೀಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್‌ನ ಹರೇಶಂಕರ ಮಹಾಸಂಸ್ಥಾನದ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಆಡಿಯೋ ರಿಲೀಸ್‌ಗೆ ಸಾಕ್ಷಿಯಾದರು.


ತಮ್ಮ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ವಿಜಯನಗರ ಮಂಜು, “ನಾನು ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ನೃತ್ಯ ಕಥಾಹಂದರದ ಕುರಿತು ಸಿನಿಮಾ ಮಾಡುವ ಹಂಬಲವಿತ್ತು. ಆ ಆಸೆಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದೆ. ನನ್ನ ನೃತ್ಯ ಶಾಲೆಗೆ ವಿದ್ಯಾರ್ಥಿಯಾಗಿ ಬಂದ ಮನೋಜ್ ಕುಮಾರ್, ನನ್ನ ಆಸೆ ತಿಳಿದು, ನಿರ್ಮಾಣಕ್ಕೆ ಮುಂದಾದರು. ಕೊರೊನಾ ಇಲ್ಲದಿದ್ದರೆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಸಂಪೂರ್ಣವಾಗಲು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರ ಅಪಾರ. ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ಪೈಪೋಟಿ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾಗಿ ಹೇಳುವ ಅವರು. ಈ ಸಿನಿಮಾದಲ್ಲಿ ಸುಮಾರು ನೂರೈವತ್ತಕ್ಕು ಹೆಚ್ಚು ಮಕ್ಕಳು ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ನಲ್ಲಿ ನಡೆಯುವ ವಾಸ್ತವಾಂಶಗಳು ನನ್ನ ಕಥೆಗೆ ಸ್ಪೂರ್ತಿ ಎನ್ನುತ್ತಾರೆ ವಿಜಯನಗರ ಮಂಜು. ಅಂದಹಾಗೆ, ಈ ಚಿತ್ರ ಯುಗಾದಿಗೆ ತೆರೆಗೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ.

ರಿಶಿಕುಮಾರ ಸ್ವಾಮಿ ಮಾತನಾಡಿ, “ಇಂದು ವಿಶ್ವಕಂಡ ಮಹಾ ಸಂತ ವಿವೇಕಾನಂದರ ಜಯಂತಿ. ಈ ಮಹಾ ಸಂತನ ಜಯಂತಿ ದಿವಸ ಇನೊಬ್ಬ ಸಂತನ ಅಭಿನಯದ ಸಿನಿಮಾವೊಂದರ ಹಾಡುಗಳ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ. ಪ್ರತಿಯೊಬ್ಬ ನೃತ್ಯ ನಿರ್ದೇಶಕ ಅಥವಾ ಶಿಕ್ಷಕನಿಗೆ ಆಗುವ ನೋವುಗಳು. ಅವರು ಒಂದು ಹಂತಕ್ಕೆ ಬರುವವರೆಗೂ ಎಲ್ಲರು ತುಳಿಯುವವರೆ. ಆ ತುಳಿತಕ್ಕೆ‌ ಸಿಕ್ಕಿ ನಲಗುವ ಪಾತ್ರ ನನ್ನದು. ನನ್ನೊಂದಿಗೆ ಅನಾಥ ಮಕ್ಕಳ ಪಾತ್ರದಲ್ಲಿ ಅಭಿನಯಿಸಿರುವ ಮಕ್ಕಳು ಅಭಿನಯದಲ್ಲಿ ರಾಕ್ಷಸರು. ಅಂತಹ ಅಮೋಘ ಅಭಿನಯ ಅವರದು. ಮಕ್ಕಳನ್ನು ಸುಸೂತ್ರವಾಗಿ ನಿಭಾಯಿಸಿದ ನಿರ್ದೇಶಕ ವಿಜಯನಗರ ‌ಮಂಜು ಅವರ ತಾಳ್ಮೆ ನಿಜಕ್ಕೂ ಶ್ಲಾಘನೀಯ ಎಂಬುದು ರಿಶಿಕುಮಾರ ಸ್ವಾಮಿ ಅವರ ಮಾತು. ಈ ವೇಳೆ ನಿರ್ಮಾಣದ ಬಗ್ಗೆ ಮನೋಜ್‌ ವರ್ಮ ಮಾತಾಡಿದರೆ, ಎ.ಟಿ.ರವೀಶ್‌ ಸಂಗೀತ ಕುರಿತು ಹೇಳಿಕೊಂಡರು. ಲೋಕಿ ಸಾಹಿತ್ಯ ಬಗ್ಗೆ ಮಾತಾಡಿದರು. ಛಾಯಾಗ್ರಾಹಕ ಎಂ.ಬಿ.ಅಳಿಕಟ್ಟಿ, ಸಂಕಲನಕಾರ ಸೌಂದರ್‌ ರಾಜ್‌ ಇದ್ದರು. ನೃತ್ಯ ನಿರ್ದೇಶಕ ಮುರಳಿ, ರವೀಂದ್ರ , ಸಿರಿ ಮ್ಯೂಸಿಕ್ ಚಿಕ್ಕಣ್ಣ ಇತರರು ಶುಭಕೋರಿದರು.

Categories
ಸಿನಿ ಸುದ್ದಿ

ಕಹಿ ಘಟನೆ ನೆನೆದ ಭಾವನಾ ಮೆನನ್ ;‌ಮಲಯಾಳಂ ಸ್ಟಾರ್‌ ನಟರ ಬೆಂಬಲ

“ಜಾಕಿ” ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಭಾವನಾ ಮೆನನ್‌ ನಂತರದ ದಿನಗಳಲ್ಲಿ “ಜಾಕಿ” ಭಾವನಾ ಎಂದೇ ಗುರುತಿಸಿಕೊಂಡರು. ಆ ಬಳಿಕ ಕನ್ನಡದಲ್ಲಿ ಅನೇಕ ಸ್ಟಾರ್‌ಗಳ ಜೊತೆ ನಟಿಸಿದರು. ಪರಭಾಷೆ ನಟಿ ಅಂತಾನೂ ಗುರುತಿಸಿಕೊಂಡರು. ಈವರೆಗೆ ಎಲ್ಲಾ ಭಾಷೆಯ ಸಿನಿಮಾಗಳನ್ನು ಲೆಕ್ಕಹಾಕಿದರೆ, ೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಭಾವನಾ ಮೆನನ್‌ ನಟಿಸಿದ್ದಾರೆ. ಈಗ ಭಾವನಾ ಮೆನನ್‌ ಅವರ ಒಂದು ಸುದ್ದಿ ಇದೆ. ಹಾಗಂತ, ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡ ಪೋಸ್ಟ್‌ವೊಂದು ಸುದ್ದಿ ಮಾಡಿದೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಅಷ್ಟಕ್ಕೂ ಆ ವಿಷಯ ಏನು ಗೊತ್ತಾ?

ಕಳೆದ ಐದು ವರ್ಷಗಳ ಹಿಂದೆ ಖ್ಯಾತ ನಟಿ ಭಾವನಾ ಮೆನನ್‌ ಅವರು ಕೇರಳದಲ್ಲಿ ಸಿನಿಮಾವೊಂದರ ಶೂಟಿಂಗ್‌ ಮುಗಿಸಿಕೊಂಡು ಕಾರಲ್ಲಿ ಮನೆಗೆ ಹೋಗುವಾರ, ಕೆಲ ಕಿಡಿಗೇಡಿಗಳ ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದರು. ನಂತರ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪವಿತ್ತು. ಆ ವಿಷಯಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್‌ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಭಾವನಾ ಮೆನನ್‌, ಅದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಈಗ ಒಂದಷ್ಟು ಬರೆದುಕೊಂಡಿದ್ದರು. ಅದಕ್ಕೆ ಮಲಯಾಳಂ ಸ್ಟಾರ್‌ ನಟರು ಸಾಥ್‌ ನೀಡಿದ್ದಾರೆ. ಅವರ ಬರಹವಿದು. “ನನ್ನ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ” ನಾನು ಬಲಿಪಶು ಎನಿಸಿಕೊಂಡು ಅದರಿಂದ ಹೊರಬರುವ ಬದುಕಿನ ಆ ಐದು ವರ್ಷಗಳ ಹಾದಿ ನಿಜಕ್ಕೂ ಸುಲಭವಾಗಿರಲಿಲ್ಲ. ಆ ವೇಳೆ ಎಷ್ಟೋ ಮಂದಿ ನನ್ನನ್ನು ಅವಮಾನಿಸಿದರು, ಇನ್ನೂ ಕೆಲವರು ನನ್ನ ಪರವಾಗಿ ಮಾತನಾಡಿದರು. ಇವೆಲ್ಲವನ್ನೂ ನೋಡಿದಾಗ ನನ್ನ ಹೋರಾಟದ ಹಾದಿಯಲ್ಲಿ ನಾನೂ ಒಬ್ಬಂಟಿಯಲ್ಲ ಎಂದೆನಿಸುತ್ತಿದೆ. ನ್ಯಾಯ ಗೆಲ್ಲಲು, ಯಾವುದೇ ಮಹಿಳೆಯು ಇಂತಹ ಪರಿಸ್ಥಿಗೆ ಒಳಗಾಗದಂತೆ ನೋಡಿಕೊಳ್ಳಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಭಾವನಾ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಬರಹಕ್ಕೆ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಸಿಕ್ಕಿವೆ. ಈಗಲೂ ಸಿಗುತ್ತಿವೆ.


ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ಹಾಕಿಕೊಂಡಿದ್ದೇ ತಡ, ಹಲವು ಸಿನಿಮಾ ನಟರು, ತಾಂತ್ರಿಕ ವರ್ಗದವರು, ನಟಿಮಣಿಗಳು, ನಿರ್ದೇಶಕ, ನಿರ್ಮಾಪಕರು ಬೆಂಬಲ ಸೂಚಿಸಿದ್ದಾರೆ. ಅಂತಹವರ ಪೈಕಿ ಮಲಯಾಳಂನ ಸೂಪರ್‌ ಸ್ಟಾರ್‌ಗಳಾದ ಮೋಹನ್‌ ಲಾಲ್‌ ಹಾಗೂ ಮಮ್ಮುಟಿ ಕೂಡ ಸೇರಿದ್ದಾರೆ. ಈ ಪ್ರಕರಣ ನಡೆದ ಸಮಯದಲ್ಲಿ ಮೋಹನ್‌ ಲಾಲ್‌ ಆಗಲಿ ಮಮ್ಮುಟಿಯಾಗಲಿ ಅಥವಾ ಇನ್ನಾವುದೇ ನಟ,ನಟಿಯರು ಮಾತಾಡಿಯೇ ಇರಲಿಲ್ಲ. ಅವರ ಈ ಮೌನದಿಂದಾಗಿ ಅವರೆಲ್ಲರೂ ದಿಲೀಪ್‌ ಪರವಾಗಿದ್ದಾರೋ ಅಥವಾ ತಟಸ್ಥರಾಗಿದ್ದಾರೋ ಎಂಬ ಪ್ರಶ್ನೆ ಇತ್ತು. ಆದರೂ, ಆ ಕುರಿತಂತೆ ಯಾರಿಗೂ ಗೊತ್ತಿರಲಿಲ್ಲ.

ಆದರೀಗ ಭಾವನಾ ಮೆನನ್‌ ಅವರು ಮಾಡಿದ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಅನ್ನು ಈ ಇಬ್ಬರು ನಟರು ತಮ್ಮ ಸೋಶಿಯಲ್‌ ಮೀಡಿಯದಲ್ಲಿ ರೀ ಪೋಸ್ಟ್‌ ಮಾಡಿದ್ದಾರೆ. ಮೋಹನ್‌ ಲಾಲ್‌ “ರೆಸ್ಪೆಕ್ಟ್‌” ಎಂಂದು ಬರೆದುಕೊಂಡರೆ, ಮಮ್ಮುಟ್ಟಿ ಅವರು “ಭಾವನಾ ನಿಮ್ಮ ಜೊತೆ ನಾವಿರುತ್ತೇವೆ” ಎಂದು ಬರೆದುಕೊಂಡಿದ್ದಾರೆ. ಇವರ ಜೊತೆ ಬಾಲಿವುಡ್‌ ಚಿತ್ರ ನಿರ್ದೇಶಕಿ ಬರಹಗಾರ್ತಿ ಜೋಯಾ ಅಖ್ತರ್‌ ಬೆಂಬಲ ನೀಡಿದ್ದು, “ನಿಮಗೆ ಇನ್ನಷ್ಟು ಶಕ್ತಿ ಸಿಗಲಿʼ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಭಾವನಾ ಮೆನನ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಬ್ರಹ್ಮಸಂದ್ರದಲ್ಲಿ ಸಾಹಸ ಸಿಂಹ ಜೀವಂತ ! ವಿಷ್ಣು ಪುತ್ಥಳಿಗೆ ವೀರಕಪುತ್ರ ಶ್ರೀನಿವಾಸ್ ನೇತೃತ್ವ…

ತುಮಕೂರಿನ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಜನವರಿ 19ರಂದು ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣಗೊಳ್ಳಲಿದೆ. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಸಲಹೆ ಮೂಲಕ ಪುತ್ಥಳಿ ಸಜ್ಜಾಗಿದೆ. ಅದರ ಪೂರ್ಣ ವೆಚ್ಚವನ್ನು ವೀರಕಪುತ್ರ ಶ್ರೀನಿವಾಸ್ ಅವರೇ ವಹಿಸಿದ್ದಾರೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂತಸದ ವಿಷಯ…

ವೀರಕಪುತ್ರ ಶ್ರೀನಿವಾಸ್, ಹಾಗೊಮ್ಮೆ ಈ ಹೆಸರು ಕೇಳಿದವರಿಗೆ ಥಟ್ಟನೆ ನೆನಪಾಗೋದೇ ಡಾ. ವಿಷ್ಣುವರ್ಧನ್. ಹೌದು ಅಪ್ಪಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿರುವ ಇವರು, ವಿಷ್ಣುವರ್ಧನ್ ಅವರ ಕುರಿತು ಸದಾ ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾಗಿ ಈಗಾಗಲೇ ಮರೆಯಲಾರದ ಅನೇಕ ಕಾರ್ಯಕ್ರಮ ರೂಪಿಸಿ ಸೈ ಎನಿಸಿಕೊಂಡಿದ್ದಾರೆ. ಸದಾ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಕಾಳಜಿಯ ಮಾತುಗಳ ಮೂಲಕ ವಿಷ್ಣುವರ್ಧನ್ ಫ್ಯಾನ್ಸ್ ಗೆ ಅಚ್ಚುಮೆಚ್ಚಾಗಿರುವ ವೀರಕಪುತ್ರ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಮತ್ತೊಂದು ಮಹತ್ತರ ಕಾರ್ಯವಾಗುತ್ತಿದೆ. ಅದು ಬೇರೇನೂ ಅಲ್ಲ, ಡಾ.ವಿಷ್ಣುವರ್ಧನ್ ಅವರ ಪುತ್ಥಳಿ.

ಡಾ.ವಿಷ್ಣುವರ್ಧನ್ ಅವರ ಸಿನಿಮಾ ಪಯಣದಲ್ಲಿ ವೀರಪ್ಪನಾಯ್ಕ ಸಿನಿಮಾ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಅದರ ಪಾತ್ರಕ್ಕೆ ಅತ್ಯಂತ ಮಹತ್ವವೂ ಇದೆ. ದೇಶಪ್ರೇಮವನ್ನು ಸಾರುವಂತಹ ಪಾತ್ರವದು. ಅತ್ಯಂತ ಪರಿಣಾಮಕಾರಿಯಾಗಿ ತೋರಿದ ಸಿನಿಮಾ ಎಂಬ ಹೆಗ್ಗಳಿಕೆಯೂ ಇದೆ. ಡಾ.ವಿಷ್ಣುವರ್ಧನ್ ಅವರ ಈ ಪಾತ್ರಕ್ಕೆ ರಾಜ್ಯಪ್ರಶಸ್ತಿ ಲಭಿಸಿತ್ತು. ಭಾರತ ಕ್ರಿಕೆಟ್ ತಂಡದ ವಿದೇಶ ಪ್ರವಾಸಕ್ಕೂ ಮುನ್ನ ಅಂದಿನ ಪ್ರಧಾನಿ ವಾಜಪೇಯಿ ಅವರು ನಮ್ಮ ಕ್ರಿಕೆಟಿಗರಿಗೆ ಈ ಸಿನಿಮಾ ತೋರಿಸಿ ಅವರಲ್ಲಿ ದೇಶಪ್ರೇಮದ ಉತ್ಸಾಹವನ್ನು ತುಂಬಿ ಕಳುಹಿಸಿದ್ದನ್ನು ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ.

ಅಂತಹ ಮಹತ್ವದ ಪಾತ್ರವನ್ನು ಪುತ್ಥಳಿ ರೂಪದಲ್ಲಿಯೂ ಜೀವಂತವಾಗಿಡುವ ಪ್ರಯತ್ನವನ್ನು ಡಾ.ವಿಷ್ಣು ಸೇನಾ ಸಮಿತಿ ಮಾಡಿದೆ ಅನ್ನೋದೆ ಖುಷಿಯ ವಿಷಯ. ವರ್ಣಸಿಂಧು ಎಂಬ ಶಿಲ್ಪಿ ಯು ಈ ಪುತ್ಥಳಿಗೆ ಜೀವ ತುಂಬಿದ್ದಾರೆ. ವೀರಕಪುತ್ರ ಶ್ರೀನಿವಾಸ ಅವರು ಕೆಲ ಸಲಹೆ ಮತ್ತು ಅದಕ್ಕೆ ಅಗತ್ಯವಿದ್ದ ಹಣಕಾಸು ನೆರವನ್ನು ಒದಗಿಸಿ ಪುತ್ಥಳಿ ಅನಾವರಣಗೊಳ್ಳಲು ಸಹಕಾರಿಯಾಗಿದ್ದಾರೆ.

ಅಂದಹಾಗೆ, ಈ ಪುತ್ಥಳಿಯು ತುಮಕೂರಿನ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಜನವರಿ 19ರ ಬೆಳಗ್ಗೆ 11 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಜಿಲ್ಕಾ ಹುಡುಗನ ಬೆನ್ನು ತಟ್ಟಿದ ಶಿವಣ್ಣ…

ಪ್ರೋತ್ಸಾಹಿಸುವುದರಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಎತ್ತಿದ ಕೈ. ಮೊನ್ನೆ ಅಚಾನಕ್ ಜಿಲ್ಕಾ ಚಿತ್ರದ ಹೀರೋ ಕಮ್ ಡೈರೆಕ್ಟರ್ ಕವೀಶ್ ಶೆಟ್ಟಿ ಮೊಬೈಲ್ ಸದ್ದು ಮಾಡಿದೆ. ಕರೆ ರಿಸೀವ್ ಮಾಡಿದರೆ ಇನ್ನೊಂದು ಕಡೆಯಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ! ಅವರ ಧ್ವನಿ ಕೇಳಿ ತಬ್ಬಿಬ್ಬಾಗಿದ್ದು ನಿಜ! ಅದರೊಂದಿಗೆ ಆಶ್ಚರ್ಯ ಕೂಡ ಆಯ್ತು ಎನ್ನುವ ಕವೀಶ್ ಶೆಟ್ಟಿ, ‘ಅಮೆಜಾನ್ ಪ್ರೈಮ್ ನಲ್ಲಿ ನಿಮ್ಮ ‘ಜಿಲ್ಕಾ’ ಸಿನಿಮಾ ನೋಡಿದೆ ತುಂಬಾ ಚೆನ್ನಾಗಿ ಮಾಡಿದ್ದೀರಿ, ಚಿತ್ರಕಥೆಯಿಂದ ಹಿಡಿದು ನಿಮ್ಮ ಅಭಿನಯ ಮತ್ತು ನಿರ್ದೇಶನ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಇಷ್ಟವಾಯ್ತು! ಹೆತ್ತವರು ಮತ್ತು ಹರೆಯದ ವಯಸ್ಸಿನ ಮಕ್ಕಳ ಜವಾಬ್ದಾರಿ ಮತ್ತು ತಪ್ಪುಗಳನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ವಿವರಿಸಿದ್ದೀರಿ’ ಎನ್ನುತ್ತಾ ಒಮ್ಮೆ ಭೇಟಿಯಾಗಲು ಕೂಡ ಹೇಳಿದ್ದಾರೆ.

ಶಿವಣ್ಣನ ಶಹಬ್ಬಾಸ್ ಇನ್ನಷ್ಟೂ ಹೆಚ್ಚಿನದನ್ನು ಮಾಡುವ ಉತ್ಸಾಹ ತುಂಬಿದೆ ಎನ್ನುವ ಕವೀಶ್ ಶೆಟ್ಟಿಯ ಮಾತಿನಲ್ಲಿ ಹೆಚ್ಚಿನ ಲವಲವಿಕೆಯಿತ್ತು. ಈಗಾಗಲೇ ಸಡಗರ ರಾಘವೇಂದ್ರ ನಿರ್ದೇಶನದ ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಕವೀಶ್ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೈಲಿಗಲ್ಲು ಸೃಷ್ಟಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣಿಸುತ್ತಿವೆ.

Categories
ಸಿನಿ ಸುದ್ದಿ

ಕೊರೊನಾ ಆತಂಕ; ಮತ್ತೆ ಲಾಕ್‌ಡೌನ್ ಜಾರಿಯಾದರೆ ಚಿತ್ರರಂಗದ ಪಾಡೇನು?

ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿದೆ ನಿಜ. ಅದರಿಂದ ಈಗಲೂ ಹೊರಬರಲಾಗದೆ ಹಲವು ಉದ್ಯಮಗಳು ಸಂಕಷ್ಟದಲ್ಲಿವೆ. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಉದ್ಯಮಗಳೆಲ್ಲವೂ ಮತ್ತೆ ಕೊರೊನಾ ಭಯದಲ್ಲಿವೆ. ಹೌದು, ಎರಡನೇ ಅಲೆಯ ಹೊಡೆತಕ್ಕೆ ಭಾರೀ ಕಷ್ಟ-ನಷ್ಟಗಳನ್ನು ಅನುಭವಿಸಿದ್ದ ಮಂದಿ ಈಗ ಮತ್ತೊಂದು ಕೊರೊನಾ ಹೊಡೆತದ ಭೀತಿಯಲ್ಲಿರುವುದಂತೂ ನಿಜ. ಅದರಲ್ಲೂ ಚಿತ್ರರಂಗ ಇಂದಿಗೂ ಸಹ ಎರಡು ವರ್ಷಗಳಿಂದಲೂ ಸುಧಾರಿಸಿಕೊಳ್ಳುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಈಗ ಕೊರೊನಾ ಭಯ ಆವರಿಸಿದೆ. ಇತ್ತೀಚೆಗೆ ಕೊರೊನಾ ಸಂಖ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದ್ದು ನಿಜ. ಚಿತ್ರಮಂದಿರಗಳಲ್ಲಿ ಆಸನಗಳ ಭರ್ತಿ ಶೇ.೫೦ರಷ್ಟು ಇರಬೇಕೆಂಬ ನಿಯಮ ಜಾರಿಯಾಯ್ತು. ಅಲ್ಲದೆ, ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿದ್ದರಿಂದ ದೊಡ್ಡ ಪೆಟ್ಟು ತಿನ್ನಬೇಕಾಯ್ತು.

ಚಿತ್ರಮಂದಿರಗಳತ್ತ ಸಿನಿಮಾ ಮಂದಿ ಮುಖ ಮಾಡುತ್ತಿದ್ದದ್ದೇ ವಿರಳ. ಹೇಗೋ, ಎರಡು ವರ್ಷಗಳ ಬಳಿಕ ಚಿತ್ರರಂಗ ಮೆಲ್ಲನೆ ಚೇತರಿಸಿಕೊಂಡಿತ್ತು. ಚಿತ್ರಮಂದಿರಗಳು ಬಾಗಿಲು ತೆರೆದವು. ಚಿತ್ರಗಳು ಬಿಡುಗಡೆಯಾದವು. ಜನರು ಹೋಗತೊಡಗಿದರು. ನೋಡ ನೋಡುತ್ತಿದ್ದಂತೆಯೇ, ಕೊರೊನಾ ಸಂಖ್ಯೆ ಮತ್ತೆ ಹೆಚ್ಚಿದ್ದರಿಂದ, ಈಗ ಮತ್ತೆ ಶೇ.೫೦ರಷ್ಟು ಇದ್ದ ಆಸನಭರ್ತಿ ಜಾರಿ ಆದೇಶ ಕೂಡ ರದ್ದಾಗಿ, ಪೂರ್ಣ ಪ್ರಮಾಣದಲ್ಲಿ ಬಂದ್‌ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಬೆಂಗಳೂರಲ್ಲಿ ಕಠಿಣ ರೂಲ್ಸ್‌ ಜಾರಿಯಾದರಂತೂ ಚಿತ್ರೋದ್ಯಮ ಮಾತ್ರವಲ್ಲ, ಇತರೆ ಕ್ಷೇತ್ರಗಳೂ ಆಘಾತಕ್ಕೊಳಗಾಗುತ್ತವೆ.

ಸದ್ಯ, ಸಿಎಂ ತುರ್ತು ಸಭೆ ಕರೆದಿದ್ದು, ಬಹುಶಃ ಕಠಿಣ ರೂಲ್ಸ್‌ ಜಾರಿಗೊಳಿಸುವ ಸಾಧ್ಯತೆ ಇದೆ. ಮತ್ತೇನಾದರೂ, ಬಂದ್‌ ಆಗಿಬಿಟ್ಟರೆ, ಚಿತ್ರರಂಗದಲ್ಲಿರುವ ಕಾರ್ಮಿಕರು, ತಾಂತ್ರಿಕ ವರ್ಗದವರು, ಪೋಷಕ ಕಲಾವಿದರು, ಜೂನಿಯರ್‌ ನಟ,ನಟಿಯರಿಗೆ ನಿಜಕ್ಕೂ ಸಮಸ್ಯೆ ಎದುರಾಗುತ್ತೆ. ಕಳೆದ ಎರಡು ವರ್ಷಗಳಿಂದಲೂ ಈ ಸಮಸ್ಯೆಯಿಂದ ಹೊರಬರಲಾಗದೆ ಒದ್ದಾಡಲಾಗುತ್ತಿದೆ. ಈಗ ಮತ್ತದೇ ಸಮಸ್ಯೆ ಎದುರಾದರೆ ಗತಿ ಏನು? ಈ ಪ್ರಶ್ನೆ ಈಗ ಎಲ್ಲೆಡೆ ಗಿರಕಿ ಹೊಡೆಯುತ್ತಿದೆ.

Categories
ಸಿನಿ ಸುದ್ದಿ

ಮೇಕೆದಾಟು ಪಾದಯಾತ್ರೆಗೆ ಫಿಲ್ಮ್‌ ಚೇಂಬರ್‌ ಬೆಂಬಲ; ನಿರ್ದೇಶಕಿ ರೂಪ ಅಯ್ಯರ್‌ ಆರೋಪ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾಂಗ್ರೆಸ್‌ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ಬೆಂಬಲ ಸೂಚಿಸಿರುವುದನ್ನು ಪ್ರಶ್ನಿಸಿ ಮಂಡಳಿ ಸದಸ್ಯರೇ ವಿರೋಧಿಸಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶಕಿ ರೂಪ ಅಯ್ಯರ್‌ ಕೂಡ ವಿರೋಧ ವ್ಯಕ್ತಪಡಿಸಿದ್ದು, ಒಂದು ಪಕ್ಷವನ್ನು ಓಲೈಸುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕನ್ನಡ ಚಿತ್ರರಂಗ ರಾಜಕೀಯಕ್ಕೆ ಕಾಲಿಡಬಾರದು. ಒಂದು ಪಕ್ಷವನ್ನು ಓಲೈಸಿ ಪತ್ರಿಕಾ ಗೋಷ್ಠಿ ಮಾಡಿದ್ದು ತಪ್ಪು ಎಂದು ಆರೋಪಿಸಿದ್ದಾರೆ. ಈ ಹಿಂದೆ ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಫಿಲ್ಮ್‌ ಚೇಂಬರ್‌ ಹೇಳಿಕೊಂಡಿದ್ದರೂ, ಕಾಂಗ್ರೆಸ್‌ ಪಾದಯಾತ್ರೆಗೆ ಬೆಂಬಲ ಸೂಚಿಸಿದೆ. ಇದು ಕಾಂಗ್ರೆಸ್‌ ಹೋರಾಟವಾಗಿದೆ ಎಂದು ನಿರ್ದೇಶಕಿ ರೂಪ ಅಯ್ಯರ್ ಆರೋಪಿಸಿದ್ದಾರೆ.


ವಾಣಿಜ್ಯ ಮಂಡಳಿಯ ಅನೇಕ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಫಿಲ್ಮ್ ಚೇಂಬರ್ ಯಾವುದೇ ಪದಾಧಿಕಾರಿಗಳಿಗೂ ಇಷ್ಟವಾಗಿಲ್ಲ. ಯಾರೂ ಕೂಡ ಇಂತಹ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಇದು ಕರ್ನಾಟಕದ ಹೋರಾಟ ಅಂತ ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ ಮುಖಂಡರು ನೇತೃತ್ವ ವಹಿಸಿ ಮಾಡುತ್ತಿರುವ ಪ್ರತಿಭಟನೆ ಅದು. ಹಾಗಾಗಿ ಅದೊಂದು ಪಕ್ಷದ ಹೋರಾಟವಾಗುತ್ತೆ. ನಮಗೆ ಎಲ್ಲಾ ಸರ್ಕಾರಗಳೂ ಬೇಕು. ಸಬ್ಸಿಡಿ ಸೇರಿದಂತೆ ಇನ್ನಿತರೆ ಯಾವುದೇ ನೆರವು ಬೇಕಾದರೂ ಆ ಸಮಯಕ್ಕೆ ಇರುವ ಸರ್ಕಾರದ ಮೊರೆ ಹೋಗಬೇಕು. ಹಾಗಾಗಿ ನಾವು ಒಂದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ತಪ್ಪು ಎಂದು ರೂಪ ಅಯ್ಯರ್‌ ಆರೋಪಿಸಿದ್ದಾರೆ.

ಕನ್ನಡ ನಾಡು, ನುಡಿ, ಜಲದ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಆದರೆ, ಒಂದು ಪಕ್ಷಕ್ಕೆ ಸೀಮಿತವಾಗಿ ಫಿಲ್ಮ್ ಚೇಂಬರ್ ನಿಲ್ಲಬಾರದು. “ಫಿಲ್ಮ್ ಚೇಂಬರ್ ನೂರಾರು ಹೋರಾಟ ಮಾಡಬಹುದು. ಮೂರು ವರ್ಷದಿಂದ ಸಬ್ಸಿಡಿ ಕೊಡುತ್ತಿಲ್ಲ. ಎಷ್ಟೋ ಜನ ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡರು. ಅಂತಹ ಸಮಸ್ಯೆ ನಿವಾರಿಸಲು ಮುಂದಾಗಬೇಕು. ಅದು ಬಿಟ್ಟು ಪಕ್ಷವೊಂದು ಕರೆದರೆ, ಹೋಗಿ ಯಾಕೆ ಪಾದಯಾತ್ರೆ ಮಾಡಬೇಕು ಎಂಬು ಪ್ರಶ್ನಿಸಿರುವ ಅವರು, ಫಿಲ್ಮ್ ಚೇಂಬರ್ ಹೆಸರು ಬಳಸಿಕೊಂಡು ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗದ ಸಹಮತವಿದೆ ಎಂದು ಹೇಳುವುದು ಹೇಗೆ? ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಸಹಕಾರ ಸಂಘಗಳು ಹೇಗಿರಬೇಕೋ, ನೀತಿ ನಿಯಮಗಳು ಹೇಗಿರಬೇಕೋ ಅದರಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.

error: Content is protected !!