Categories
ಸಿನಿ ಸುದ್ದಿ

ಎ ಕಿಕ್ ಲವ್ ಸ್ಟೋರಿ… ಇದು ಮದರಂಗಿ ಹುಡುಗನ ದಿಲ್ ಪಸಂದ್! ಡಾರ್ಲಿಂಗ್ ಕೃಷ್ಣನ ಬರ್ತ್ ಡೇ ಗೆ ಫಸ್ಟ್ ಗ್ಲಿಂಪ್ಸ್ ರಿಲೀಸ್…

ನಿರ್ದೇಶಕ ಶಿವತೇಜಸ್ ಈಗ ಡಾರ್ಲಿಂಗ್ ಡಾರ್ಲಿಂಗ್ ಅಂತ ಜಪ ಮಾಡುತ್ತಿದ್ದಾರೆ. ಹೀಗಂದರೆ ಅಪಾರ್ಥವಾದೀತು. ವಿಷಯವಿಷ್ಟೇ, ಶಿವ ತೇಜಸ್ ತಮ್ಮ ನಿರ್ದೇಶನದ ದಿಲ್ ಪಸಂದ್ ಚಿತ್ರದ ಸುದ್ದಿಯೊಂದನ್ನು ಹೊರ ಬಿಟ್ಟಿದ್ದಾರೆ. ಚಿತ್ರ ಬಹುತೇಕ ಮುಗಿಯೋ ಹಂತಕ್ಕೆ ಬಂದಿದ್ದು, ನೋಡುಗರ ಮುಂದ ಬರಲು ಮಾತ್ರ ಬಾಕಿ ಇದೆ.

ಈ ನಡುವೆ ಅವರು ದಿಲ್ ಪಸಂದ್ ಚಿತ್ರದ ಹೊಸದೊಂದು ಗ್ಲಿಂಪ್ಸ್ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ. ಅಂದಹಾಗೆ, ಜೂನ್ 12ರಂದು ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬ. ಅದರ ಅಂಗವಾಗಿ ಈ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಲು ಅಣಿಯಾಗಿದ್ದಾರೆ. ಸದ್ಯ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ನಿರ್ದೇಶಕರು. ಆದಷ್ಟು‌ ಬೇಗ ಚಿತ್ರದ ಟೀಸರ್, ಟ್ರೇಲರ್ ಗೆ ಪ್ಲಾನ್ ಮಾಡುತ್ತಿದ್ದಾರೆ.

ಅಂದಹಾಗೆ ಸುಮಂತ್ ಕ್ರಾಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ.ಆರ್.ರಂಗಸ್ವಾಮಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.

ವಿನೋದ್‌ಸ್ಟಂಟ್ ಮಾಡಿದರೆ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಜೂನ್ 12ರಂದು 11.14ಕ್ಕೆ ಆನಂದ್ ಆಡಿಯೋದಲ್ಲಿ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಲಹರಿ ವೇಲು ಅವರ ಬರ್ತ್ ಡೇಗೆ ಹೊಸ ಹಾಡು: ಇದು ಅವರೇ ಬರೆದು ಹಾಡಿದ ಗೀತೆ…

ಲಹರಿ ವೇಲು ಗಾಯನ ಮಾಡಿದ್ದು ಗೊತ್ತೇ ಇದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರೀಗ ಹಾಡೊಂದಕ್ಕೆ ಸಾಹಿತ್ಯ ಬರೆದು, ಅವರೇ ಹಾಡಿದ್ದಾರೆ. ಅಭಿಮನ್ ರಾಯ್ ಆ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜೂನ್ 11ರಂದು ವೇಲು ಅವರ ಹುಟ್ಟು ಹಬ್ಬ. ಅಂದು ‘ಹುಟ್ಗುಣ ಸುಟ್ರು ಹೋಗಲ್ಲ’ ಶೀರ್ಷಿಕೆಯ ಹಾಡು ಲಹರಿ‌ ಮ್ಯೂಸಿಕ್ ನಲ್ಲಿ ರಿಲೀಸ್ ಆಗಲಿದೆ…

ಕನ್ನಡ ಚಿತ್ರರಂಗದಲ್ಲಿ ಲಹರಿ ಸಂಸ್ಥೆ ದೊಡ್ಡ ಛಾಪು ಮೂಡಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಪ್ಯಾನ್ ಇಂಡಿಯಾ ಮ್ಯೂಸಿಕ್ ಸಂಸ್ಥೆಯಾಗಿ ಬೆಳೆದಿರುವ ಲಹರಿ ಮ್ಯೂಸಿಕ್ ಸಂಸ್ಥೆ, ಯುಟ್ಯೂಬ್ ಕೊಡ ಮಾಡುವ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಿಸಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಕೂಡ ಲಭಿಸಿರುವುದು ಕನ್ನಡಕ್ಕೆ ಮತ್ತು ಭಾರತೀಯ ಚಿತ್ರರಂಗಕ್ಕೆ ಸಂತಸದ ವಿಷಯ. ಹಲವು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿರುವ ಲಹರಿ ಸಂಸ್ಥೆ, ನಿರಂತರವಾಗಿ ಸಿನಿಮಾ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದೆ. ಈಗ ಲಹರಿ‌ ಸಂಸ್ಥೆ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ?

ಲಹರಿ ಮ್ಯೂಸಿಕ್ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಲಹರಿ ವೇಲು ಮತ್ತು ಅವರ ಪ್ರೀತಿಯ ಸಹೋದರ ಮನೋಹರ ನಾಯ್ಡು. ಸರಿಸುಮಾರು ನಾಲ್ಕು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಸ್ಥಗೆ ಈ ಇಬ್ಬರು ಸಹೋದರರು ಭದ್ರ ಬುನಾದಿ ಹಾಕಿದ್ದಾರೆ. ಲಹರಿ ವೇಲು ಅದ್ಬುತ ಮಾತುಗಾರರು. ಯಾವುದೇ ವಿಷಯವಿರಲಿ, ಅದನ್ನು ನಿರರ್ಗಳವಾಗಿ ಗಂಟೆಗಟ್ಟಲೆ ಮಾತಾಡುವ ವಾಕ್ಚಾತುರ್ಯ ಅವರಲ್ಲಿದೆ. ಬಹಳಷ್ಟು ಮಂದಿಗೆ ವೇಲು ಒಬ್ಬ ಒಳ್ಳೆಯ ವ್ಯಕ್ತಿ, ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿತ್ವ ಅವರದು ಅನ್ನುವುದಷ್ಟೇ ಗೊತ್ತು. ಅದರಾಚೆಗೆ ಅವರೊಬ್ಬ ಗಾಯಕರು ಅನ್ನೋದು ಗೊತ್ತಿಲ್ಲ. ಬರೀ ಗಾಯಕರಷ್ಟೇ ಅಲ್ಲ, ಅವರೊಬ್ಬ ಗೀತರಚನೆಕಾರರೂ ಹೌದು.

ಗಾಯಕ ಕಮ್ ಗೀತ ಸಾಹಿತಿ

ನಿಜ, ಲಹರಿ ವೇಲು ಅವರೊಳಗೊಬ್ಬ ಗಾಯಕ‌ ಕಮ್ ಬರಹಗಾರನಿದ್ದಾನೆ. ಅದು ಈಗಾಗಲೇ ಸಾಬೀತಾಗಿದೆ ಕೂಡ. ಕಳೆದ ಕೊರೊನೊ ವೇಳೆ ಲಹರಿ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದವರನ್ನು‌ ಗುರುತಿಸಿ ಆ ಮೂಲಕ ಒಂದಷ್ಟು ಸಹಾಯ ಹಸ್ತ ಚಾಚಿದ್ದು ಗೊತ್ತೇ ಇದೆ. ಅದೇ ಸಮಯದಲ್ಲಿ ಹಾಗೆ ಸುಮ್ಮನೆ ಹಾಡನ್ನು ಗುನುಗುವಾಗ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರು, ಲಹರಿ ವೇಲು ಅವರ ಹಾಡುವ ಧ್ವನಿ ಗಮನಿಸಿ, ನೀವೊಂದು ಹಾಡು ಹಾಡಬಾರದೇಕೆ ಎಂದು ಪ್ರಶ್ನಿಸಿದ್ದಾರೆ. ಅದರ ಬೆನ್ನಲ್ಲೇ ಲಹರಿ ವೇಲು ಕೂಡ ಪ್ರಯತ್ನಕ್ಕೆ‌ ಮುಂದಾಗಿದ್ದಾರೆ. ‘ ಒಳಿತು ಮಾಡು‌ ಮನುಸ ನೀ ಇರೋದು ಮೂರು ದಿವಸ’ ಗೀತೆ ಬರೆದ ನಮ್‌ ರಿಷಿ ಬರೆದ ‘ಇರುವುದೊಂದೆ ಜನ್ಮ ನೀ ಸಹಾಯ ಮಾಡು ತಮ್ಮ’ ಎಂಬ ಮಾನವೀಯ ಮೌಲ್ಯ ಸಾರುವ ಗೀತೆಗೆ ವೇಲು ಅವರು ಧ್ವನಿಯಾಗಿದ್ದಾರೆ. ಆ ಹಾಡು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದೇ ತಡ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಈಗ ಒಂದು ಮಿಲಿಯನ್ (ಹತ್ತು ಲಕ್ಷ) ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

ಇದರ ಬೆನ್ನ ಹಿಂದೆಯೇ ಇದೀಗ ಲಹರಿ ವೇಲು ಅವರು ಮತ್ತೊಂದು ಅದ್ಭುತ ಗೀತೆಗೆ ಧ್ವನಿಯಾಗಿದ್ದಾರೆ. ಹಾಡುವುದರ ಜೊತೆಗೆ ಅವರು ತಾನೊಬ್ಬ ಗೀತ ಸಾಹಿತಿಯೂ ಆಗಿದ್ದಾರೆ. ಹೌದು, ಮತ್ತದೇ ಟೀಮ್ ಜೊತೆ ಸೇರಿಕೊಂಡು‌ ಲಹರಿ ವೇಲು ಒಂದೊಳ್ಳೆಯ ಗೀತೆ ಬರೆದು ಹಾಡಿದ್ದಾರೆ. ‘ ಹುಟ್ಗುಣ ಸುಟ್ರು ಹೋಗಲ್ಲ’ ಎಂಬ ಹಾಡನ್ನು ಸ್ವತಃ ರಚಿಸಿದ ವೇಲು, ಅದನ್ನು ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರ ಬಳಿ ಹೇಳಿದ್ದಾರೆ. ಆ ಸಾಲುಗಳನ್ನು ಗಮನಿಸಿದ ಅಭಿಮನ್ ರಾಯ್, ವೇಲು ಅವರಿಂದ ಆ ಹಾಡನ್ನು ಸಂಪೂರ್ಣ ಬರೆಸಿ, ಅರ್ಥಪೂರ್ಣವಾದ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ವೇಲು ಬರೆದ ಹಾಡಿಗೆ ಅವರಿಂದಲೇ ಹಾಡಿಸಿದ್ದಾರೆ. ವೇಲು‌ ಅವರ ಜೊತೆ ಈ ಹಾಡಿಗೆ ವೇದಾ ವೆಂಕಟೇಶ್ ಭಟ್ ಕೂಡ ಧ್ವನಿಯಾಗಿದ್ದಾರೆ. ಆ ಹಾಡು ಜೂನ್ 11ರಂದು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶ, ಜೂನ್ 11 ಲಹರಿ ವೇಲು ಅವರ ಹುಟ್ಟು ಹಬ್ಬ. ತಮ್ಮ 57 ನೇ ವಸಂತಕ್ಕೆ ಕಾಲಿಡುತ್ತಿರುವ ವೇಲು ಅವರಿಗಾಗಿ ಅಭಿಮನ್ ರಾಯ್ ಈ ಹಾಡನ್ನು ಅಂದೇ ರಿಲೀಸ್ ಮಾಡುತ್ತಿದ್ದಾರೆ.

ಅದೇನೆ ಇರಲಿ, ತಮ್ಮ ಮತ್ತೊಂದು ಗೀತೆ ಕುರಿತು ಲಹರಿ ವೇಲು ಅವರು ಹೇಳುವುದಿಷ್ಟು. ‘ಅಭಿಮನ್ ರಾಯ್ ಅವರ ರಾಗ ಸಂಯೋಜನೆಯಲ್ಲಿ ಒಂದು‌ ಹಾಡು ಹಾಡಿದ್ದೆ. ಅದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿತ್ತು. ಇತ್ತೀಚೆಗೆ ಅಭಿಮನ್ ರಾಯ್ ಲಹರಿ ಸಂಸ್ಥೆ ಕಚೇರಿಗೆ ಬಂದಾಗ, ನಾನು ಒಂದಷ್ಟು ಸ್ಪೂರ್ತಿದಾಯಕ ಎನಿಸುವ ಪದಗಳನ್ನು ಬರೆದಿದ್ದೆ. ಅದನ್ನು ಅಭಿಮನ್ ಗಮನಿಸಿ, ಪದಗಳಲ್ಲಿ ಸಾಕಷ್ಟು ಅರ್ಥವಿದೆ. ಇನ್ನಷ್ಟು ಬರೆದು ಪೂರ್ಣಗೊಳಿಸಿ ಇದಕ್ಕೆ ರಾಗ ಸಂಯೋಜಿಸುತ್ತೇನೆ ಅಂದರು. ನಾನು ಅನುಭವಿಸಿದ, ನೋಡಿದ ಸಂದರ್ಭ ನೆನೆದು ಒಂದಷ್ಟು ಸಾಲು ಬರೆದೆ. ಅದೀಗ ಹಾಡಿನ ರೂಪದಲ್ಲಿ ಹೊರ ಬರಲಿದೆ. ಎಲ್ಲರೂ ತೋರಿದ ಪ್ರೀತಿಯಿಂದ ಹಾಡು ಬರೆಯೋಕೆ ಸಾಧ್ಯವಾಗಿದೆ’ ಎನ್ನುತ್ತಾರೆ ವೇಲು.

ಅಂದಹಾಗೆ, ‘ಹುಟ್ಗುಣ ಸುಟ್ರು ಹೋಗಲ್ಲ’ ಗೀತೆ ಮತ್ತೊಂದು ಮೆಚ್ಚುಗೆಯ ಹಾಡಾಗಲಿ, ಎಲ್ಲರೂ ಗುನುಗುವಂತಾಗಲಿ ಎಂಬುದು ಆಶಯ.

Categories
ಸಿನಿ ಸುದ್ದಿ

ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ

ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿನ್ನೆ ಅಮೇರಿಕಾದ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಪುರುಷೋತ್ತಮ ಕಣಗಾಲ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅವರು ಅಗಲಿದ್ದಾರೆ.


ಪುರುಷೋತ್ತಮ ಕಣಗಾಲ್, ಹೆಸರಾಂತ ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ.‌
ಪುರುಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ. ಕಣಗಾಲ್ ನೃತ್ಯಾಲಯ ಹಾಗೂ ಪುಟ್ಟಣ್ಣ ಕಣಗಾಲ್ ಟ್ರಸ್ಟ್ ನ ಮುಖ್ಯಸ್ಥರಾಗಿ ಪುರುಷೋತ್ತಮ ಕಣಗಾಲ್ ಕಾರ್ಯ ನಿರ್ವಹಿಸಿದ್ದರು.

Categories
ಸಿನಿ ಸುದ್ದಿ

ಬಹು ನಿರೀಕ್ಷಿತ ಕಬ್ಜ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಶುರು…

ವಿಶ್ವದಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಜನಪ್ರಿಯತೆ ಪಡೆದಿರುವ, ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಕಬ್ಜ” ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಏಕಕಾಲದಲ್ಲಿ ಏಳುಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ.

1940ರ ಕಾಲಘಟ್ಟದ ಕಥೆ ಅದ್ಭುತವಾಗಿದೆ. ಮೋಷನ್ ಪೋಸ್ಟರ್ ಹಾಗೂ ಸ್ಟಿಲ್ಸ್ ಜನಮನಸೂರೆಗೊಂಡಿದೆ. ಮೇಕಿಂಗ್ ತುಣುಕು ನೋಡಿದವರಂತು ಫಿದಾ ಆಗಿದ್ದಾರೆ. ಭಾರತ ದೇಶವೇ ತಿರುಗಿ ನೋಡುವ ಸಿನಿಮಾ ಇದಾಗಲಿದೆ. “ಕಬ್ಜ” ಚಿತ್ರ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದೇ ಕನ್ನಡಿಗರ ಆಶಯ. ಚಿತ್ರದ. ಟೀಸರ್ ನೋಡುವ ಕಾತುರದಲ್ಲಿದ್ದೇವೆ. ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಸಿನಿಪ್ರೇಕ್ಷಕರು ಚಂದ್ರು ಅವರನ್ನು ಒತ್ತಾಯಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಬಿಡುಗಡೆ ಮುನ್ನವೇ ನೋಡುಗರ ಮನ ಗೆದ್ದ 777 ಚಾರ್ಲಿ…

ಕಿರಣ್ ರಾಜ್ ನಿರ್ದೇಶನದ ಮೊದಲ ಚಿತ್ರ, ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ “777 ಚಾರ್ಲಿ” ಚಿತ್ರ. ಜೂನ್ 10 ರಂದು ದೇಶ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

ನಮ್ಮ ಚಿತ್ರ ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ದೆಹಲಿ, ಅಹಮದಾಬಾದ್, ಲಕ್ನೋ, ಕೊಲ್ಕತ್ತಾ ಸೇರಿದಂತೆ ಭಾರತದ ವಿವಿಧ ಕಡೆ ಹಾಗೂ ವಿದೇಶದ ಕೆಲವು ಕಡೆ ನಮ್ಮ ಚಿತ್ರದ ಸೆಲೆಬ್ರಿಟಿ ಶೋಗಳನ್ನು ಆಯೋಜಿಸಲಾಗಿತ್ತು. ಸಾಕಷ್ಟು ಜನ ನಮ್ಮ ಚಿತ್ರ ವೀಕ್ಷಣೆ ಮಾಡಿ,‌‌ ಮೆಚ್ಚುಗೆ ಸೂಚಿಸಿದ್ದಾರೆ.‌ ಕೆಲವು ಪ್ರಾಣಿಪ್ರಿಯರಂತೂ ಕಣ್ಣಲ್ಲಿ ನೀರು ಹಾಕಿಕೊಂಡು ಹೊರಬಂದಿದ್ದಾರೆ.‌‌ ಅವರ ಪ್ರತಿಕ್ರಿಯೆ ನೋಡಿ, ನಮಗೂ ಮನ ತುಂಬಿ‌ ಬಂದಿದೆ. ವ್ಯಾಪಾರ ದೃಷ್ಟಿಯಿಂದ ಹೇಳುವುದಾದಾರೆ, ಬಿಡುಗಡೆಗೂ ಮುನ್ನವೇ “ಚಾರ್ಲಿ” ನಮ್ಮನ್ನು‌ ಗೆಲಿಸಿದ್ದಾಳೆ ಎನ್ನುತ್ತಾರೆ‌ ಚಿತ್ರದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ.

ನನ್ನ ತಂಡದ ಪರಿಶ್ರಮದಿಂದ ನನ್ನ ಮೊದಲ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರ ನೋಡಿರುವವರು ಮೆಚ್ಚುಗೆ ಸೂಚಿಸಿದ್ದಾರೆ. ಒಳ್ಳೆಯ ಚಿತ್ರ ಮಾಡಿದ್ದೀನಿ ಎಂಬ ವಿಶ್ವಾಸವಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಕಿರಣ್ ರಾಜ್.

ಕರ್ನಾಟಕದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಜೂನ್ 9 ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ 55 ಕಡೆ ನಡೆದರೆ, ಉಳಿದಂತೆ ಕರ್ನಾಟಕದ ವಿವಿಧ ಕಡೆ ನಡೆಯಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಪ್ರದರ್ಶನ ನಡೆಯಲಿದೆ ಎಂದರು ಕೆ.ಆರ್.ಜಿ ಫಿಲಂಸ್ ನ‌ ಕಾರ್ತಿಕ್ ಗೌಡ.

ನಾಯಕಿ ಸಂಗೀತ ಶೃಂಗೇರಿ, “ಚಾರ್ಲಿ” ಟ್ರೈನರ್ ಪ್ರಮೋದ್, ಸಂಗೀತ ನಿರ್ದೇಶಕ ನೊಬಿನ್ ಪಾಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಬೇಬಿ ಶಾರ್ವರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ನಿರ್ಮಾಣದ ಚಿತ್ರ ಜು. 8ಕ್ಕೆ ರಿಲೀಸ್: ಇದು ಎಲ್ಲರ ಹೋಪ್…!

ಹೋಪ್..ಕನ್ನಡದಲ್ಲಿ ಹೀಗೊಂದು ಸಿನಿಮಾ ಬರ್ತಿರೋದು ಗೊತ್ತೇ ಇದೆ. ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ಸಣ್ಣದೊಂದು ಗ್ಯಾಪ್ ಬಳಿಕ ಕಂಬ್ಯಾಕ್ ಆಗ್ತಿರುವ ಈ ಚಿತ್ರ ತೆರೆಗೆ ಬರೋದಿಕ್ಕೆ ಅಣಿಯಾಗಿದೆ. ಜುಲೈ 8ರಂದು ಹೋಪ್ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಸಜ್ಜಾಗ್ತಿದೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕಥೆ ಬರೆದು ನಿರ್ಮಾಣ ಮಾಡಿರುವ ಹೋಪ್ ಸಿನಿಮಾಗೆ ಅಂಬರೀಷ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಜನರಿಗೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಂಟೆಂಟ್ ಆಧಾರಿತ ಸೋಷಿಯಲ್ ಡ್ರಾಮಾ ಹೋಪ್ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕೆಎಎಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಸದೆ ಸುಮಲತಾ ಅಂಬರೀಷ್ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೋಪ್ ಚಿತ್ರ ಇಷ್ಟರಲ್ಲಾಗಲೇ ತೆರೆಗೆ ಬರಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿತ್ತು. ಇದೀಗ ಎಲ್ಲಾ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. 34 ದಿನಗಳ ಶೂಟಿಂಗ್ ಮುಗಿಸಿರುವ ಹೋಪ್ ಚಿತ್ರಕ್ಕೆ ಹಾಲೇಶ್ ಛಾಯಾಗ್ರಾಹಣ, ಹರೀಶ್ ಕೊಮ್ಮೆ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತವಿದೆ.

Categories
ಸಿನಿ ಸುದ್ದಿ

ಡೊಳ್ಳುಗೆ ಪ್ರಶಸ್ತಿಗಳ ಸೌಂಡು!ಇದು ಪವನ್‌ ಒಡೆಯರ್ ನಿರ್ಮಾಣದ ಚಿತ್ರ…

ನಿರ್ದೇಶಕನಾಗಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವೀಸ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ ಡೊಳ್ಳು. ಡೊಳ್ಳು ಕುಣಿತದ ಸುತ್ತ ಎಣೆದಿರುವ ಈ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬಂದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ. ಇಷ್ಟೆಲ್ಲಾ ಯಶಸ್ಸಿಗೆ ಕಾರಣದವರಿಗೆ ಇಡೀ ಚಿತ್ರತಂಡ ಧನ್ಯವಾದ ಅರ್ಪಿಸಿದೆ.

ಒಡೆಯರ್ ಮೂವೀಸ್ ನಡಿ ನಿರ್ಮಾಣದ ಮಾಡಿರುವ ಮೊದಲ ಸಿನಿಮಾವಾಗಿದ್ದು, ನಾನು ನನ್ನ ಪತ್ನಿ, ಸ್ನೇಹಿತರಾದ ಹರೀಶ್ ನಾರಾ, ಸಚಿನ್ ತಪಶೆಟ್ಟಿ, ನರಸಿಂಹ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದು ನಿಜವಾದ ಸಿನಿಮಾ. ಇಡೀ ತಂಡ ಸೇರಿಕೊಂಡು ತುಂಬಾ ಅದ್ಭುತ ಸಿನಿಮಾ ಮಾಡಿದ್ದಾರೆ. ನಿರ್ಮಾಪಕನಾಗಿ ನನಗೂ ಇದು ಹೊಸ ಅನುಭವ. ಸಿನಿಮಾದ ವಿಶೇಷ ಅಂದ್ರೆ ಇಡೀ ಡೊಳ್ಳು ಕಲಾವಿದರು ಅಭಿನಯಿಸಿರುವ ಚಿತ್ರ ಇದಾಗಿದೆ ಎಂದು ನಿರ್ಮಾಪಕ ಪವನ್ ಒಡೆಯರ್ ಅಭಿಪ್ರಾಯ ಹಂಚಿಕೊಂಡರು.

ಇಂತಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪವನ್ ಸರ್ ಗೆ ಧನ್ಯವಾದ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದವರಿಗೆ ಸಿನಿಮಾ ಮಾಡುವುದು ದೊಡ್ದ ಸಾಹಸ. ಆ ಸಾಹಸ ಮಾಡುವುದಕ್ಕೆ ಇಡೀ ತಂಡ ಸಪೋರ್ಟ್ ಮಾಡಿದೆ. ಈ ಯಶಸ್ಸಿಗೆ ಕಾರಣವರಾದ ಎಲ್ಲರಿಗೂ ಧನ್ಯವಾದ ಎಂದು ನಿರ್ದೇಶಕ ಸಾಗರ್ ಪುರಾಣಿಕ್ ತಮ್ಮ ಅನಿಸಿಕೆ ಹಂಚಿಕೊಂಡರು.

ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿರುವ ಡೊಳ್ಳು ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ನಾಯಕ-ನಾಯಕಿಯಾಗಿ ನಟಿಸಿದ್ದು, ಬಾಬು ಹಿರಣಯ್ಯ, ಚಂದ್ರ ಮಯೂರ್ ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾವಿರುವ ಡೊಳ್ಳು ಸಿನಿಮಾ ಸದ್ಯದಲ್ಲಿಯೇ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.

Categories
ಸಿನಿ ಸುದ್ದಿ

ಗೆಳೆಯನ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್: ಶೀರ್ಷಿಕೆ ಅನಾವರಣ

‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಚಿತ್ರದ ಟೈಟಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸುವ ಮೂಲಕ ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಮೊದಲನೆಯ ನಿರ್ದೇಶನದ ಸಡಗರಕ್ಕೆ ಗೆಳೆಯ ರೀಷಬ್ ಶೆಟ್ಟಿ ಸಾಥ್ ನೀಡಿದ್ದಾರೆ.

ಈಗಾಗಲೇ ಸುದ್ಧಿಯಾಗಿರುವ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಚಿತ್ರದ ಟೈಟಲ್ ಬಿಡುಗಡೆಯ ವಿಚಾರದಲ್ಲಿ ಮೊದಲಿನಿಂದಲೂ ಕುತೂಹಲ ಹುಟ್ಟಿಸಿದ್ದ ಚಿತ್ರ ತಂಡ ಕೊನೆಗೂ ನಾಯಕ ಕವೀಶ್ ಶೆಟ್ಟಿ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ಯಾನ್ ಇಂಡಿಯಾ ಮಟ್ಟದ ಆಕರ್ಷಕ ಟೈಟಲ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಇನ್ನಷ್ಟೂ ಕುತೂಹಲ ಮೂಡಿಸಿದೆ.

‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಟೈಟಲ್ನಲ್ಲಿಯೇ ಇದೊಂದು ದೊಡ್ಡ ಮಟ್ಟದ ಆಕ್ಷನ್ ಪ್ಯಾಕೇಜ್ ಸಿನಿಮಾ ಎನ್ನುವುದನ್ನು ರುಜು ಮಾಡಿದೆ. ಹಾಲಿವುಡ್ ಶೈಲಿಯ ಪೋಸ್ಟರ್ನಲ್ಲಿರುವ ನಾಯಕ ಕವೀಶ್ ಶೆಟ್ಟಿ ಖದರ್ರು ಅದಕ್ಕೆ ಪುಷ್ಟಿ ನೀಡಿದೆ.

ನುರಿತ ತಾಂತ್ರಿಕ ವರ್ಗ ಹಾಗೂ ಕನ್ನಡ, ಮರಾಠಿ ಮತ್ತು ಬಹುಭಾಷಾ ಕಲಾವಿದರನ್ನು ಹೊಂದಿರುವ ಲಂಡನ್ ಕೆಫೆಯ ಗುಟ್ಟು ಬಿಟ್ಟು ಕೊಡದ ನಿರ್ದೇಶಕ ಸಡಗರ ರಾಘವೇಂದ್ರ ಹೆಸರಿಗೆ ತಕ್ಕಂತೆ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸುವುದಿಲ್ಲ ಎನ್ನುತ್ತಾ ಚಿತ್ರದ ಟೈಟಲ್ ಬಿಡುಗಡೆಗೆ ಸಹಕರಿಸಿದ ಗೆಳೆಯ ರೀಷಬ್ ಶೆಟ್ಟಿಗೆ ಈ ಮೂಲಕ ಕೃತಜ್ಞತೆಯನ್ನು ಸೂಚಿಸಿದ್ದಾರೆ.

ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ಹೆಸರಾಂತ ಡ್ರೀಮರ್ಸ್ ಪ್ರೊಡಕ್ಷನ್ ದೀಪಕ್ ರಾಣೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು. ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ.

ಕನ್ನಡದ ಮತ್ತೊಂದು ಚಿತ್ರ ಕರ್ನಾಟಕದ ಗಡಿ ಭಾಷೆಯನ್ನು ಮೀರಿ ಯಶಸ್ಸಿನ ಹಾದಿಯಲ್ಲಿ ಸಾಗಲಿ!

Categories
ಸಿನಿ ಸುದ್ದಿ

ತ್ರಿವಿಕ್ರಮನಿಗೆ ಕುಂಬಳಕಾಯಿ: ಜೂನ್ 24ಕ್ಕೆ ಚಿತ್ರ ಬಿಡುಗಡೆ…

ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಹಾಡಿನ ಚಿತ್ರೀಕರಣ ನಡೆಸಿರುವ ‘ತ್ರಿವಿಕ್ರಮ’ ತಂಡ, ಬಳಿಕ ಕುಂಬಳಕಾಯಿ ಒಡೆದಿದೆ. ಜೂನ್ 24ರಂದು ರಾಜ್ಯಾದ್ಯಂತ ‘ತ್ರಿವಿಕ್ರಮ’ ದರ್ಶನವಾಗಲಿದೆ.

ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ‘ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್…’ ಎಂಬ ಹಾಡನ್ನು ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಹಾಕಲಾಗಿದ್ದ ಬೃಹತ್ ಸೆಟ್ ಹಾಗೂ ಕಲರ್ ಕಲರ್ ಕಾಸ್ಟ್ಯೂಮ್’ಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಟ್ಟಾರೆ ನೂರಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’ ಹಾಡು ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್’ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಕಾಶ್ ಹಾಡಿದ್ದಾರೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.

Categories
ಸಿನಿ ಸುದ್ದಿ

ಮೈಲಾರ ಜಾತ್ರೆ ನೋಡ ಬನ್ನಿ! ಇದು ಸಂಚಾರಿ ವಿಜಯ್ ಹಾಡಿ ಕುಣಿದ ಸಾಂಗು: ಏಳುಕೋಟಿ ಮೈಲಾರನ ವಿಶೇಷ ವಿಡಿಯೋ ಆಲ್ಬಂ…

ಕನ್ನಡದಲ್ಲಿ ಮೈಲಾರಿ ಅನ್ನೋ ಪದಕ್ಕೆ ವಿಶೇಷ ಸ್ಥಾನವಿದೆ. ಈ ಮೈಲಾರಿ ಅಮನದಾಕ್ಷಣ ತಕ್ಷಣ ನೆನಪಾಗೋದೆ ಡಾ.ರಾಜಕುಮಾರ್ ಅವರ ‘ ಬಂಗಾರದ ಪಂಜರ’ ಚಿತ್ರದಲ್ಲಿ ಅವರು ಕೂಗಿ ಹೇಳೋ ‘ಮೈಲಾರಿ…’ ಎಂಬ ಡೈಲಾಗ್. ಇನ್ನು, ಈ ಮೈಲಾರಿಯ ನಂಟು ಶಿವರಾಜಕುಮಾರ್ ಅವರಿಗೂ ಅಂಟಿಕೊಂಡಿದ್ದು ಗೊತ್ತೇ ಇದೆ. ಮೈಲಾರಿ ಸಿನಿಮಾ ಮೂಲಕ ಶಿವಣ್ಣ ಮತ್ತೆ ಜೋರು ಸುದ್ದಿಯಾದರು. ಇಷ್ಟಕ್ಕೂ ಈ ಮೈಲಾರಿ ಬಗ್ಗೆ ಇಷ್ಟೊಂದು ಪೀಠಿಕೆಗೆ ಕಾರಣ, ಮತ್ತದೇ ಮೈಲಾರಿ!
ಹೌದು, ಈಗ ಮೈಲಾರ ಲಿಂಗೇಶ್ವರನ ಭಕ್ತರಾಗಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಅದೇ ಈ ಹೊತ್ತಿನ ಸುದ್ದಿ. ಸಂಚಾರಿ ವಿಜಯ್ ನಮ್ಮಿಂದ ದೂರವಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಅವರಿಲ್ಲ ಎಂಬ ಭಾವ ಯಾರಲ್ಲೂ ಇಲ್ಲ. ಅವರ ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರು ನಟಿಸಿ ಕೊನೆಯ ವಿಡಿಯೋ ಆಲ್ಬಂ ಸಾಂಗ್ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಅದರ ಹೆಸರು ‘ಮೈಲಾರ’. ಇದೊಂದು ಭಕ್ತಿಪೂರ್ವಕ ಹಾಡು. ಜಾನಪದ ಭಾವಗುಚ್ಛ ಇದರ ಹೈಲೆಟ್. ಅಂಥದ್ದೊಂದು ಆಲ್ಬಂ ಸಾಂಗ್ ಕುರಿತು ಒಂದು ವರದಿ…

ಕನ್ನಡದಲ್ಲಿ ಈಗಾಗಲೇ ಅನೇಕ ಭಕ್ತಿಪ್ರಧಾನ, ಜಾನಪದ ಹಿನ್ನೆಲೆಯ ಹಾಡುಗಳು ಬಂದಿವೆ. ಆ ಸಾಲಿಗೆ ‘ಮೈಲಾರ’ ಹಾಡು ಸೇರಿದೆ. ಪ್ರದೀಪ್ ಚಂದ್ರ ಈ ಹಾಡು ಹುಟ್ಟಿಗೆ ಕಾರಣರಾದರೆ, ಸುಂದರ ಆಲ್ಬಂ ಆಗೋಕೆ‌ ಕಾರಣ ಡಾ. ರಾಜಶೇಖರ್ . ಇನ್ನು‌ ಇಂಥದ್ದೊಂದು ಹಾಡನ್ನು ಅಷ್ಟೇ ಅದ್ಭುತವಾಗಿ ಕಲ್ಪನೆಯಂತೆ ಮೂಡಿಬರಲು ಕಾರಣ ನಿರ್ದೇಶಕ ಹುಡುಗಾಟ ಸಂಜಯ್. ಈ ಹಾಡಿನ ಹಿಂದೆ ನೂರಾರು ಜನರ ಹಗಲಿರುಳು ಶ್ರಮವಿದೆ. ಇಷ್ಟಕ್ಕೂ ಈ ಹಾಡು ಮಾಡಿದ್ದು ಯಾಕೆ, ಹೇಗೆ, ಎಲ್ಲಿ ಎಂಬಿತ್ಯಾದಿ ಕುರಿತು ಸಂಗೀತ ನಿರ್ದೇಶಕ, ಗಾಯಕ ಮತ್ತು ಗೀತೆರಚನೆಕಾರ ಪ್ರದೀಪ್ ಚಂದ್ರ ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.

ಓವರ್ ಟು ಪ್ರದೀಪ್ ಚಂದ್ರ…

‘ಮೈಲಾರ’ ಇದು ನನ್ನ ಕನಸಿನ ಆಲ್ಬಂ ಸಾಂಗ್. ಜಾನಪದ ಹಿನ್ನಲೆಯ ಹಾಡು ಕಟ್ಟಬೇಕೆಂಬ ನನ್ನ ಆಸೆ ಇದರ ಮೂಲಕ ಈಡೇರಿದೆ. ಮೈಸೂರು ಕಡೆ ಮಲೆ ಮಹದೇಶ್ವರ ಸ್ವಾಮಿ ಪ್ರಸಿದ್ಧಿ. ಅದರ‌ ಮೇಲೆ ಸಾಕಷ್ಟು ಹಾಡು ಬಂದಿದೆ. ನಮ್ಮ ಈ ಭಾಗದಲ್ಲಿ ಮೈಲಾರ ಲಿಂಗೇಶ್ವರ ಪ್ರಸಿದ್ಧಿ. ಹಾಗಾಗಿ ಯಾಕೆ ಮೈಲಾರ ಸ್ವಾಮಿ ಮೇಲೆ ಹಾಡು ಮಾಡಬಾರದು ಅಂತ ನಿರ್ಧರಿಸಿದೆ.

ಅದಕ್ಕೆ ಕಾರಣ ಅಲ್ಲಿ ನಡೆಯುವ ದೊಡ್ಡ ಜಾತ್ತೆ, ಅಲ್ಲಿನ ಕಲ್ಚರ್, ಗೊರಪ್ಪಗಳು, ಅಲ್ಲಿನ ಪವಾಡ, ಭವಿಷ್ಯ ನುಡಿಯುವ ಕಾರ್ಣಿಕ ಲಕ್ಷಾಂತರ ಭಕ್ತರು ಇವೆಲ್ಲವೂ ಅದರ ಹೈಲೆಟ್. ಹಾಗಾಗಿ ಹಾಡು ಮಾಡಲು ಮುಂದಾದೆ. ನಿರ್ದೇಶಕ ಸಂಜಯ್ ಅವರು ಹಾಡನ್ನು ಚಿತ್ರೀಕರಿಸಬೇಕೆಂದಾಗ ಒಂದಷ್ಟು ಸಲಹೆ ನೀಡಿ, ಚಂದದ ಹಾಡಾಗಲು ಕಾರಣರಾದರು.

ನಮ್ಮ‌ ಕನಸಿಗೆ ಬಣ್ಣ ತುಂಬಿದ್ದು, ನಿರ್ಮಾಪಕರಾದ ಡಾ.ರಾಜಶೇಖರ್. ಅವರು ತುಂಬಿದ ಧೈರ್ಯ ಮತ್ತು ಪ್ರೋತ್ಸಾಹದಿಂದ ಇಂದು ಚಂದದ ಆಲ್ಬಂ ಸಾಂಗ್ ಆಗಿದೆ.

ಸಂಚಾರಿಯ ಮಿಂಚಿನ ಸಂಚಾರ


ಈ ಹಾಡಿನ ಹೈಲೆಟ್ ಸಂಚಾರಿ ವಿಜಯ್. ಹಾಡು ಕೇಳಿ ನಟಿಸಲು ಒಪ್ಪಿ, ಐದು ದಿನಗಳ ಕಾಲ ನಡೆದ‌ ಶೂಟಿಂಗ್ ವೇಳೆ ಖುಷಿಯಿಂದಲೇ ನಮ್ಮೊಂದಿಗಿದ್ದರು. ನಮಗೆ ಆ ಭಾಗದ ಮೈಲಾರ ಸ್ವಾಮಿ ಚರಿತ್ರೆ ಮತ್ತು ಶ್ರೀಮಂತವಾಗಿ ನಡೆಯುವ ಜಾತ್ರೆ ಚಿತ್ರಣವನ್ನು ಇಡೀ ರಾಜ್ಯದ ಜನತೆಗೆ ತೋರಿಸಬೇಕೆಂಬ ಉದ್ದೇಶವಿತ್ತು.

ಅದಕ್ಕಾಗಿ ಸರ್ಕಾರದ ಪರ್ಮಿಷನ್ ಪಡೆದು ಜಾತ್ರೆಯಲ್ಲೇ ಚಿತ್ರೀಕರಿಸಿದ್ದೇವೆ. ಮೈಲಾರಿ ಸಿನಿಮಾ ಚಿತ್ರೀಕರಣ ಬಳಿಕ ನಮ್ಮ ಹಾಡಿನ ಚಿತ್ರೀಕರಣ ಅಲ್ಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹಾಡು ಚೆನ್ನಾಗಿ ಮೂಡಿಬಂದಿದೆ.

ವಿಜಯ್ ಪ್ರಕಾಶ್ ಗಾನ…

ಇನ್ನು, ಇದೊಂದು ಹೈ ಪಿಚ್ ಗೀತೆ. ಇದಕ್ಕೆ ವಿಜಯ್ವಪ್ರಕಾಶ್ ಅವರ ಧ್ವನಿ ಬೇಕು ಎಂಬ ಕಾರಣಕ್ಕೆ ಅವರಿಂದಲೇ ಹಾಡು ಹಾಡಿಸಿದ್ದೇವೆ. ಅವರೂ ಕೂಡ ಹಾಡಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಕಷ್ಟು ಲೈವ್ ವಾದ್ಯಗಳಿಂದಲೇ ಸಂಗೀತ ಸಂಯೋಜಿಸಲಾಗಿದೆ. ಹಾಡನ್ನು ಹಗಲಿರುಳು ಚಿತ್ರೀಕರಿಸಲಾಗಿದೆ. ಲಕ್ಷಾಂತರ ಜನರ ನಡುವೆ ಶೂಟಿಂಗ್ ನಡೆಸಿದ್ದು ವಿಶೇಷ ಎನ್ನುತ್ತಾರೆ ಪ್ರದೀಪ್ ಚಂದ್ರ.

ಕಮರ್ಷಿಯಲ್ ಹಾಡಿಗೆ ಕಮ್ಮಿ ಇಲ್ಲದಂತೆ ಅದ್ಧೂರಿಯಾಗಿ ಚಿತ್ರೀಕರಿಸಿದ್ದೇವೆ. ಸದಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಚಂದ್ರು ಮತ್ತು ರಾಜಶೇಖರ್ ಛಾಯಾಗ್ರಹಣವಿದೆ. ಈ ಹಾಡಿನ ಹಿಂದೆ ಡಾಕ್ಟರ್ ಗಿರೀಶ್, ಮಂಜುನಾಥ್, ಮೈಲೇಶ್ ನಿಂತು‌ ಸಾಥ್ ನೀಡಿದ್ದಾರೆ.

ಸಂಚಾರಿ ವಿಜಯ್ ಅವರು ಇಲ್ಲವಾಗಿ ಒಂದು ವರ್ಷವಾಗಿದೆ. ಈ ಹಾಡು ಅವರಿಗೆ ಅರ್ಪಿಸುತ್ತಿದ್ದೇವೆ. ಕನ್ನಡದ ಹಲವು ನಟ, ನಟಿಯರು ಹಾಡು ನೋಡಿ ಮೆಚ್ಚಿಕೊಂಡಿದ್ದಾರೆ.

ಕನ್ನಡದ ಸ್ಟಾರ್ ನಟರೊಬ್ಬರು ಈ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಇಷ್ಟರಲ್ಲೇ ಮೈಲಾರ ಹಾಡು ಎಲ್ಲೆಡೆ ಪಸರಿಸಲಿದೆ ಎನ್ನುತ್ತಾರೆ ಅವರು.

error: Content is protected !!