ತ್ರಿವಿಕ್ರಮನಿಗೆ ಕುಂಬಳಕಾಯಿ: ಜೂನ್ 24ಕ್ಕೆ ಚಿತ್ರ ಬಿಡುಗಡೆ…

ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಹಾಡಿನ ಚಿತ್ರೀಕರಣ ನಡೆಸಿರುವ ‘ತ್ರಿವಿಕ್ರಮ’ ತಂಡ, ಬಳಿಕ ಕುಂಬಳಕಾಯಿ ಒಡೆದಿದೆ. ಜೂನ್ 24ರಂದು ರಾಜ್ಯಾದ್ಯಂತ ‘ತ್ರಿವಿಕ್ರಮ’ ದರ್ಶನವಾಗಲಿದೆ.

ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ‘ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್…’ ಎಂಬ ಹಾಡನ್ನು ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಹಾಕಲಾಗಿದ್ದ ಬೃಹತ್ ಸೆಟ್ ಹಾಗೂ ಕಲರ್ ಕಲರ್ ಕಾಸ್ಟ್ಯೂಮ್’ಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಟ್ಟಾರೆ ನೂರಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’ ಹಾಡು ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್’ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಕಾಶ್ ಹಾಡಿದ್ದಾರೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.

Related Posts

error: Content is protected !!