ಮೈಲಾರ ಜಾತ್ರೆ ನೋಡ ಬನ್ನಿ! ಇದು ಸಂಚಾರಿ ವಿಜಯ್ ಹಾಡಿ ಕುಣಿದ ಸಾಂಗು: ಏಳುಕೋಟಿ ಮೈಲಾರನ ವಿಶೇಷ ವಿಡಿಯೋ ಆಲ್ಬಂ…

ಕನ್ನಡದಲ್ಲಿ ಮೈಲಾರಿ ಅನ್ನೋ ಪದಕ್ಕೆ ವಿಶೇಷ ಸ್ಥಾನವಿದೆ. ಈ ಮೈಲಾರಿ ಅಮನದಾಕ್ಷಣ ತಕ್ಷಣ ನೆನಪಾಗೋದೆ ಡಾ.ರಾಜಕುಮಾರ್ ಅವರ ‘ ಬಂಗಾರದ ಪಂಜರ’ ಚಿತ್ರದಲ್ಲಿ ಅವರು ಕೂಗಿ ಹೇಳೋ ‘ಮೈಲಾರಿ…’ ಎಂಬ ಡೈಲಾಗ್. ಇನ್ನು, ಈ ಮೈಲಾರಿಯ ನಂಟು ಶಿವರಾಜಕುಮಾರ್ ಅವರಿಗೂ ಅಂಟಿಕೊಂಡಿದ್ದು ಗೊತ್ತೇ ಇದೆ. ಮೈಲಾರಿ ಸಿನಿಮಾ ಮೂಲಕ ಶಿವಣ್ಣ ಮತ್ತೆ ಜೋರು ಸುದ್ದಿಯಾದರು. ಇಷ್ಟಕ್ಕೂ ಈ ಮೈಲಾರಿ ಬಗ್ಗೆ ಇಷ್ಟೊಂದು ಪೀಠಿಕೆಗೆ ಕಾರಣ, ಮತ್ತದೇ ಮೈಲಾರಿ!
ಹೌದು, ಈಗ ಮೈಲಾರ ಲಿಂಗೇಶ್ವರನ ಭಕ್ತರಾಗಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಅದೇ ಈ ಹೊತ್ತಿನ ಸುದ್ದಿ. ಸಂಚಾರಿ ವಿಜಯ್ ನಮ್ಮಿಂದ ದೂರವಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಅವರಿಲ್ಲ ಎಂಬ ಭಾವ ಯಾರಲ್ಲೂ ಇಲ್ಲ. ಅವರ ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರು ನಟಿಸಿ ಕೊನೆಯ ವಿಡಿಯೋ ಆಲ್ಬಂ ಸಾಂಗ್ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಅದರ ಹೆಸರು ‘ಮೈಲಾರ’. ಇದೊಂದು ಭಕ್ತಿಪೂರ್ವಕ ಹಾಡು. ಜಾನಪದ ಭಾವಗುಚ್ಛ ಇದರ ಹೈಲೆಟ್. ಅಂಥದ್ದೊಂದು ಆಲ್ಬಂ ಸಾಂಗ್ ಕುರಿತು ಒಂದು ವರದಿ…

ಕನ್ನಡದಲ್ಲಿ ಈಗಾಗಲೇ ಅನೇಕ ಭಕ್ತಿಪ್ರಧಾನ, ಜಾನಪದ ಹಿನ್ನೆಲೆಯ ಹಾಡುಗಳು ಬಂದಿವೆ. ಆ ಸಾಲಿಗೆ ‘ಮೈಲಾರ’ ಹಾಡು ಸೇರಿದೆ. ಪ್ರದೀಪ್ ಚಂದ್ರ ಈ ಹಾಡು ಹುಟ್ಟಿಗೆ ಕಾರಣರಾದರೆ, ಸುಂದರ ಆಲ್ಬಂ ಆಗೋಕೆ‌ ಕಾರಣ ಡಾ. ರಾಜಶೇಖರ್ . ಇನ್ನು‌ ಇಂಥದ್ದೊಂದು ಹಾಡನ್ನು ಅಷ್ಟೇ ಅದ್ಭುತವಾಗಿ ಕಲ್ಪನೆಯಂತೆ ಮೂಡಿಬರಲು ಕಾರಣ ನಿರ್ದೇಶಕ ಹುಡುಗಾಟ ಸಂಜಯ್. ಈ ಹಾಡಿನ ಹಿಂದೆ ನೂರಾರು ಜನರ ಹಗಲಿರುಳು ಶ್ರಮವಿದೆ. ಇಷ್ಟಕ್ಕೂ ಈ ಹಾಡು ಮಾಡಿದ್ದು ಯಾಕೆ, ಹೇಗೆ, ಎಲ್ಲಿ ಎಂಬಿತ್ಯಾದಿ ಕುರಿತು ಸಂಗೀತ ನಿರ್ದೇಶಕ, ಗಾಯಕ ಮತ್ತು ಗೀತೆರಚನೆಕಾರ ಪ್ರದೀಪ್ ಚಂದ್ರ ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.

ಓವರ್ ಟು ಪ್ರದೀಪ್ ಚಂದ್ರ…

‘ಮೈಲಾರ’ ಇದು ನನ್ನ ಕನಸಿನ ಆಲ್ಬಂ ಸಾಂಗ್. ಜಾನಪದ ಹಿನ್ನಲೆಯ ಹಾಡು ಕಟ್ಟಬೇಕೆಂಬ ನನ್ನ ಆಸೆ ಇದರ ಮೂಲಕ ಈಡೇರಿದೆ. ಮೈಸೂರು ಕಡೆ ಮಲೆ ಮಹದೇಶ್ವರ ಸ್ವಾಮಿ ಪ್ರಸಿದ್ಧಿ. ಅದರ‌ ಮೇಲೆ ಸಾಕಷ್ಟು ಹಾಡು ಬಂದಿದೆ. ನಮ್ಮ ಈ ಭಾಗದಲ್ಲಿ ಮೈಲಾರ ಲಿಂಗೇಶ್ವರ ಪ್ರಸಿದ್ಧಿ. ಹಾಗಾಗಿ ಯಾಕೆ ಮೈಲಾರ ಸ್ವಾಮಿ ಮೇಲೆ ಹಾಡು ಮಾಡಬಾರದು ಅಂತ ನಿರ್ಧರಿಸಿದೆ.

ಅದಕ್ಕೆ ಕಾರಣ ಅಲ್ಲಿ ನಡೆಯುವ ದೊಡ್ಡ ಜಾತ್ತೆ, ಅಲ್ಲಿನ ಕಲ್ಚರ್, ಗೊರಪ್ಪಗಳು, ಅಲ್ಲಿನ ಪವಾಡ, ಭವಿಷ್ಯ ನುಡಿಯುವ ಕಾರ್ಣಿಕ ಲಕ್ಷಾಂತರ ಭಕ್ತರು ಇವೆಲ್ಲವೂ ಅದರ ಹೈಲೆಟ್. ಹಾಗಾಗಿ ಹಾಡು ಮಾಡಲು ಮುಂದಾದೆ. ನಿರ್ದೇಶಕ ಸಂಜಯ್ ಅವರು ಹಾಡನ್ನು ಚಿತ್ರೀಕರಿಸಬೇಕೆಂದಾಗ ಒಂದಷ್ಟು ಸಲಹೆ ನೀಡಿ, ಚಂದದ ಹಾಡಾಗಲು ಕಾರಣರಾದರು.

ನಮ್ಮ‌ ಕನಸಿಗೆ ಬಣ್ಣ ತುಂಬಿದ್ದು, ನಿರ್ಮಾಪಕರಾದ ಡಾ.ರಾಜಶೇಖರ್. ಅವರು ತುಂಬಿದ ಧೈರ್ಯ ಮತ್ತು ಪ್ರೋತ್ಸಾಹದಿಂದ ಇಂದು ಚಂದದ ಆಲ್ಬಂ ಸಾಂಗ್ ಆಗಿದೆ.

ಸಂಚಾರಿಯ ಮಿಂಚಿನ ಸಂಚಾರ


ಈ ಹಾಡಿನ ಹೈಲೆಟ್ ಸಂಚಾರಿ ವಿಜಯ್. ಹಾಡು ಕೇಳಿ ನಟಿಸಲು ಒಪ್ಪಿ, ಐದು ದಿನಗಳ ಕಾಲ ನಡೆದ‌ ಶೂಟಿಂಗ್ ವೇಳೆ ಖುಷಿಯಿಂದಲೇ ನಮ್ಮೊಂದಿಗಿದ್ದರು. ನಮಗೆ ಆ ಭಾಗದ ಮೈಲಾರ ಸ್ವಾಮಿ ಚರಿತ್ರೆ ಮತ್ತು ಶ್ರೀಮಂತವಾಗಿ ನಡೆಯುವ ಜಾತ್ರೆ ಚಿತ್ರಣವನ್ನು ಇಡೀ ರಾಜ್ಯದ ಜನತೆಗೆ ತೋರಿಸಬೇಕೆಂಬ ಉದ್ದೇಶವಿತ್ತು.

ಅದಕ್ಕಾಗಿ ಸರ್ಕಾರದ ಪರ್ಮಿಷನ್ ಪಡೆದು ಜಾತ್ರೆಯಲ್ಲೇ ಚಿತ್ರೀಕರಿಸಿದ್ದೇವೆ. ಮೈಲಾರಿ ಸಿನಿಮಾ ಚಿತ್ರೀಕರಣ ಬಳಿಕ ನಮ್ಮ ಹಾಡಿನ ಚಿತ್ರೀಕರಣ ಅಲ್ಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹಾಡು ಚೆನ್ನಾಗಿ ಮೂಡಿಬಂದಿದೆ.

ವಿಜಯ್ ಪ್ರಕಾಶ್ ಗಾನ…

ಇನ್ನು, ಇದೊಂದು ಹೈ ಪಿಚ್ ಗೀತೆ. ಇದಕ್ಕೆ ವಿಜಯ್ವಪ್ರಕಾಶ್ ಅವರ ಧ್ವನಿ ಬೇಕು ಎಂಬ ಕಾರಣಕ್ಕೆ ಅವರಿಂದಲೇ ಹಾಡು ಹಾಡಿಸಿದ್ದೇವೆ. ಅವರೂ ಕೂಡ ಹಾಡಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಕಷ್ಟು ಲೈವ್ ವಾದ್ಯಗಳಿಂದಲೇ ಸಂಗೀತ ಸಂಯೋಜಿಸಲಾಗಿದೆ. ಹಾಡನ್ನು ಹಗಲಿರುಳು ಚಿತ್ರೀಕರಿಸಲಾಗಿದೆ. ಲಕ್ಷಾಂತರ ಜನರ ನಡುವೆ ಶೂಟಿಂಗ್ ನಡೆಸಿದ್ದು ವಿಶೇಷ ಎನ್ನುತ್ತಾರೆ ಪ್ರದೀಪ್ ಚಂದ್ರ.

ಕಮರ್ಷಿಯಲ್ ಹಾಡಿಗೆ ಕಮ್ಮಿ ಇಲ್ಲದಂತೆ ಅದ್ಧೂರಿಯಾಗಿ ಚಿತ್ರೀಕರಿಸಿದ್ದೇವೆ. ಸದಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಚಂದ್ರು ಮತ್ತು ರಾಜಶೇಖರ್ ಛಾಯಾಗ್ರಹಣವಿದೆ. ಈ ಹಾಡಿನ ಹಿಂದೆ ಡಾಕ್ಟರ್ ಗಿರೀಶ್, ಮಂಜುನಾಥ್, ಮೈಲೇಶ್ ನಿಂತು‌ ಸಾಥ್ ನೀಡಿದ್ದಾರೆ.

ಸಂಚಾರಿ ವಿಜಯ್ ಅವರು ಇಲ್ಲವಾಗಿ ಒಂದು ವರ್ಷವಾಗಿದೆ. ಈ ಹಾಡು ಅವರಿಗೆ ಅರ್ಪಿಸುತ್ತಿದ್ದೇವೆ. ಕನ್ನಡದ ಹಲವು ನಟ, ನಟಿಯರು ಹಾಡು ನೋಡಿ ಮೆಚ್ಚಿಕೊಂಡಿದ್ದಾರೆ.

ಕನ್ನಡದ ಸ್ಟಾರ್ ನಟರೊಬ್ಬರು ಈ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಇಷ್ಟರಲ್ಲೇ ಮೈಲಾರ ಹಾಡು ಎಲ್ಲೆಡೆ ಪಸರಿಸಲಿದೆ ಎನ್ನುತ್ತಾರೆ ಅವರು.

Related Posts

error: Content is protected !!