ಬಿಡುಗಡೆ ಮುನ್ನವೇ ನೋಡುಗರ ಮನ ಗೆದ್ದ 777 ಚಾರ್ಲಿ…

ಕಿರಣ್ ರಾಜ್ ನಿರ್ದೇಶನದ ಮೊದಲ ಚಿತ್ರ, ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ “777 ಚಾರ್ಲಿ” ಚಿತ್ರ. ಜೂನ್ 10 ರಂದು ದೇಶ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

ನಮ್ಮ ಚಿತ್ರ ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ದೆಹಲಿ, ಅಹಮದಾಬಾದ್, ಲಕ್ನೋ, ಕೊಲ್ಕತ್ತಾ ಸೇರಿದಂತೆ ಭಾರತದ ವಿವಿಧ ಕಡೆ ಹಾಗೂ ವಿದೇಶದ ಕೆಲವು ಕಡೆ ನಮ್ಮ ಚಿತ್ರದ ಸೆಲೆಬ್ರಿಟಿ ಶೋಗಳನ್ನು ಆಯೋಜಿಸಲಾಗಿತ್ತು. ಸಾಕಷ್ಟು ಜನ ನಮ್ಮ ಚಿತ್ರ ವೀಕ್ಷಣೆ ಮಾಡಿ,‌‌ ಮೆಚ್ಚುಗೆ ಸೂಚಿಸಿದ್ದಾರೆ.‌ ಕೆಲವು ಪ್ರಾಣಿಪ್ರಿಯರಂತೂ ಕಣ್ಣಲ್ಲಿ ನೀರು ಹಾಕಿಕೊಂಡು ಹೊರಬಂದಿದ್ದಾರೆ.‌‌ ಅವರ ಪ್ರತಿಕ್ರಿಯೆ ನೋಡಿ, ನಮಗೂ ಮನ ತುಂಬಿ‌ ಬಂದಿದೆ. ವ್ಯಾಪಾರ ದೃಷ್ಟಿಯಿಂದ ಹೇಳುವುದಾದಾರೆ, ಬಿಡುಗಡೆಗೂ ಮುನ್ನವೇ “ಚಾರ್ಲಿ” ನಮ್ಮನ್ನು‌ ಗೆಲಿಸಿದ್ದಾಳೆ ಎನ್ನುತ್ತಾರೆ‌ ಚಿತ್ರದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ.

ನನ್ನ ತಂಡದ ಪರಿಶ್ರಮದಿಂದ ನನ್ನ ಮೊದಲ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರ ನೋಡಿರುವವರು ಮೆಚ್ಚುಗೆ ಸೂಚಿಸಿದ್ದಾರೆ. ಒಳ್ಳೆಯ ಚಿತ್ರ ಮಾಡಿದ್ದೀನಿ ಎಂಬ ವಿಶ್ವಾಸವಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಕಿರಣ್ ರಾಜ್.

ಕರ್ನಾಟಕದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಜೂನ್ 9 ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ 55 ಕಡೆ ನಡೆದರೆ, ಉಳಿದಂತೆ ಕರ್ನಾಟಕದ ವಿವಿಧ ಕಡೆ ನಡೆಯಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಪ್ರದರ್ಶನ ನಡೆಯಲಿದೆ ಎಂದರು ಕೆ.ಆರ್.ಜಿ ಫಿಲಂಸ್ ನ‌ ಕಾರ್ತಿಕ್ ಗೌಡ.

ನಾಯಕಿ ಸಂಗೀತ ಶೃಂಗೇರಿ, “ಚಾರ್ಲಿ” ಟ್ರೈನರ್ ಪ್ರಮೋದ್, ಸಂಗೀತ ನಿರ್ದೇಶಕ ನೊಬಿನ್ ಪಾಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಬೇಬಿ ಶಾರ್ವರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

error: Content is protected !!