Categories
ಸಿನಿ ಸುದ್ದಿ

ಶಿವ 143… ಇದು ರಾಜ್ ಮೊಮ್ಮಗನ ಸಿನಿಮಾ: ಧೀರನ್ ರಾಮಕುಮಾರ್ ಚಿತ್ರ ಆಗಸ್ಟ್ 26ಕ್ಕೆ ರಿಲೀಸ್

ನಟ ಸಾರ್ವಭೌಮ ಡಾ.ರಾಜಕುಮಾರ್ ಮೊಮ್ಮಗ ಧೀರನ್ ರಾಮಕುಮಾರ್ ನಾಯಕನಾಗಿ ನಟಿಸಿರುವ “ಶಿವ 143” ಚಿತ್ರ ಆಗಸ್ಟ್ 26 ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡು ನೋಡುಗರ ಮನ ಗೆದ್ದಿದೆ. ನಾಯಕನ ಪರಿಚಯಿಸುವ ಟೀಸರ್ ಗೂ ಅಪಾರ ಜನಮನ್ನಣೆ ದೊರಕಿದೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಇದು ಲಾಕ್ ಡೌನ್ ಪೂರ್ವದಲ್ಲೇ ತಯಾರಾದ ಸಿನಿಮಾ. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು. ಆನಂತರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದ್ದವು. ನಾವು ಸೂಕ್ತ ಸಮಯ ನೋಡಿ, ಇದೇ ಆಗಸ್ಟ್ 26 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು
ರೌಡಿಸಂ ಸಿನಿಮಾ ಅಲ್ಲ. ವಿಭಿನ್ನ ಪ್ರೇಮಕಥೆಯ ಚಿತ್ರ. ಜಯಣ್ಣ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ನಿರ್ಮಾಪಕರು ಹಾಗೂ ಧೀರನ್ ಅವರ ಕುಟುಂಬದವರು ಕುಳಿತು, ಧೀರನ್ ಅವರಿಗೆ ಇಂತಹುದೇ ಕಥೆ ಇದ್ದರೆ ಚೆನ್ನ ಎಂದು ತಿರ್ಮಾನಿಸಿದ್ದರು. ನಾನು ಆನಂತರ ತಂಡ ಸೇರಿಕೊಂಡೆ. ಧೀರನ್ ಅವರಿಗೆ ಈ ಮಾಸ್ ಲುಕ್ ಸರಿ ಹೊಂದುವುದೊ, ಇಲ್ಲವೋ? ಎಂಬ ಯೋಚನೆಯಿತ್ತು. ಅವರ ನಟನೆ ನೋಡಿ ಅದು ದೂರಾಯಿತು. ನಾಯಕಿ ಮಾನ್ವಿತ ಕಾಮತ್ ಹಾಗೂ ಚರಣ್ ರಾಜ್ ಅವರ ಅಭಿನಯ‌ ಕೂಡ ತುಂಬಾ ಚೆನ್ನಾಗಿದೆ. ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರ ಕಾಮಿಡಿ ಮೋಡಿ ಮಾಡಲಿದೆ ಎಂದು ನಿರ್ದೇಶಕ ಅನಿಲ್ ಕುಮಾರ್ ಚಿತ್ರದ ಬಗ್ಗೆ ವಿವರಣೆ ನೀಡಿದರು.

ನಾನು ನಮ್ಮ ಕುಟುಂಬದವರ ಬಳಿ ಈ ಸಿನಿಮಾ ಕಥೆ ಬಗ್ಗೆ ಚರ್ಚಿಸಿದಾಗ ನಿನಗೆ ಸರಿ ಹೊಂದುವುದಾದರೆ ಮಾಡು ಎಂದರು. ನನಗೂ ಈ ಕಥೆ ಇಷ್ಟವಾಗಿತ್ತು. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಕೊರೋನ ಕಾರಣದಿಂದ ಬಿಡುಗಡೆ ತಡವಾಗಿದೆ. ಶಿವಣ್ಣ ಮಾಮ ಹಾಗೂ ಗೀತಾ ಆಂಟಿ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಭೇಟಿ‌ ನೀಡಿ ಶುಭ ಹಾರೈಸಿದ್ದರು. ರಾಘಣ್ಣ ಮಾಮ ಅವರ ಹಾರೈಕೆ ಸದಾ ಇದೆ. ಇನ್ನೂ ಯಾರ ಬಳಿಯು ಹೇಳದ ವಿಷಯವೊಂದು ಇಂದು ಹೇಳುತ್ತಿದ್ದೇನೆ. ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲೇ ಅಪ್ಪು ಮಾಮ‌ “ಜೇಮ್ಸ್” ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಾಹಸ ನಿರ್ದೇಶಕ ರವಿವರ್ಮ ಅವರು ಎರಡೂ ಚಿತ್ರಗಳಿಗೂ ಸಾಹಸ ಸಂಯೋಜನೆ ಮಾಡುತ್ತಿದ್ದರು‌. ನಾನು ಪಾಲ್ಗೊಂಡ ಸಾಹಸ ದೃಶ್ಯವೊಂದರ ತುಣುಕನ್ನು ಅವರು, ಅಪ್ಪು ಮಾಮ ಅವರಿಗೆ ತೋರಿಸಿದರಂತೆ.

ಅದನ್ನು ನೋಡಿದ ಅಪ್ಪು ಮಾಮ, ಸ್ನೇಹಿತರೊಬ್ಬರ ಬಳಿ ಅವನ ಕಣ್ಣು ನೋಡಿ ಎಷ್ಟು ಚೆನ್ನಾಗಿದೆ. ನಮ್ಮ ಕುಟುಂಬದಿಂದ ಒಳ್ಳೆಯ ಹೀರೋ ಬರುತ್ತಿದ್ದಾನೆ ಎಂದು ತುಂಬಾ ಸಂತೋಷಪಟ್ಟಿದ್ದರಂತೆ. ಈ ವಿಷಯವನ್ನು ನನಗೆ ಎಷ್ಟೋ ದಿನಗಳ ಬಳಿಕ ಆ ಸ್ನೇಹಿತರು ಹೇಳಿದರು. ಅಶ್ವಿನಿ ಆಂಟಿ ‌ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅವರು ಬಿಡುಗಡೆ ಮಾಡಿಕೊಟ್ಟಿದ್ದು ನನಗೆ ಅಪ್ಪು ಮಾಮ ಬಿಡುಗಡೆ ಮಾಡಿದಷ್ಟೇ ಖುಷಿಯಾಗಿದೆ. ಅವರಿಗೆ ನನ್ನ ಧನ್ಯವಾದ ಎಂದರು ನಾಯಕ ಧೀರನ್.

ಛಾಯಾಗ್ರಹಕ ಶಿವ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.

ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಕಿರುತೆರೆ ಕಲಾವಿದರ ಕ್ರಿಕೆಟ್ ಪ್ರೀತಿ: ಆಗಸ್ಟ್ 18ರಿಂದ ಮೂರು ದಿನಗಳ ಟಿಪಿಎಲ್…

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿಮಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಶುರುವಾಗುತ್ತಿದ್ದು, ಆಗಸ್ಟ್ 18, 19 ಹಾಗೂ 20 ಈ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಲಿದ್ದಾರೆ. ಹಿರಿಯ ಕಲಾವಿದರಿಗೆ ಸಹಾಯಾರ್ಥ ಈ ಟಿಪಿಎಲ್ ನ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಟಿಪಿಎಲ್ ಆಯೋಜಕ ಸುನಿಲ್ ಕುಮಾರ್ ಬಿ ಆರ್.

ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಸುನಿಲ್ ಕುಮಾರ್ ಮಾತಾಡಿ, ಒಳ್ಳೆ ಉದ್ದೇಶ ಇಟ್ಕೊಂಡು ಈ ಪಂದ್ಯಾವಳಿ ಏರ್ಪಡಿಸಲಾಗಿದೆ. ಆರು ಜನ ಓನರ್ಸ್ ಗೆ ಧನ್ಯವಾದ ತಿಳಿಸುತ್ತೇನೆ. 16ರಂದು ಜರ್ಸಿ ಲಾಂಚ್ ಹಾಗೂ ಟ್ರೋಫಿ ಲಾಂಚ್ ಮಾಡಲಾಗುತ್ತದೆ. 18, 19 ಹಾಗೂ 20 ಈ ಮೂರು ದಿನಗಳ ಕಾಲ ಕ್ರಿಕೆಟ್ ನಡೆಯಲಿದೆ ಎಂದು ತಿಳಿಸಿದರು.

ಅಶ್ವ ಸೂರ್ಯ ರೈಡರರ್ಸ್ ತಂಡದ ನಾಯಕ ಮಂಜು ಪಾವಗಡ ಮಾತನಾಡಿ, ಒಂದೊಳ್ಳೆ ತಂಡಗಳು ಸೇರಿಕೊಂಡು ಕ್ರಿಕೆಟ್ ಆಡುತ್ತಿದ್ದು, ಪ್ರತಿ ತಂಡಕ್ಕೂ ಓನರ್ ಗಳು ಬೆಂಬಲವಾಗಿ ನಿಂತಿದ್ದಾರೆ ಎಂದರು.

ದಿ ಬುಲ್ ಸ್ಕ್ವಾಡ್, ಭಜರಂಗಿ ಬುಲ್ಸ್, ಏಂಜೆಲ್ ಎಸ್ಐ, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲಿಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ.

Categories
ಸಿನಿ ಸುದ್ದಿ

ಅಂದದ ಗಾಳಿಪಟದಲ್ಲಿ ತಮಾಷೆ ಹತಾಷೆ ನಿರಾಸೆ

ವಿಜಯ್ ಭರಮಸಾಗರ

ಚಿತ್ರ ವಿಮರ್ಶೆ- ರೇಟಿಂಗ್ 4 / 5

ನಿರ್ದೇಶನ : ಯೋಗರಾಜ ಭಟ್

ನಿರ್ಮಾಣ: ಉಮಾ ಎಂ. ರಮೇಶ್ ರೆಡ್ಡಿ

ತಾರಾಗಣ: ಗಣೇಶ್, ದಿಗಂತ್, ಪವನ್ ಕುಮಾರ್, ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಸುಧಾ ಬೆಳವಾಡಿ ಇತರರು.

ಕನಸಿಗೂ ಮತ್ತು ಸಂಬಂಧಕ್ಕೂ ರಿಯಾಲಿಟಿ ಇರಲ್ಲ. ಕನಸು ಇದ್ದಂಗೆ ಬದುಕಾಗಲ್ಲ…’ ಅವನು ಈ ಡೈಲಾಗ್ ಹೇಳುವ ಹೊತ್ತಿಗೆ ಆ ಮೂವರು ಗೆಳೆಯರ ಲೈಫಲ್ಲಿ ತಮಾಷೆ, ಹತಾಶೆ ಮತ್ತ ನಿರಾಸೆ ಎಂಬ ಕಾರ್ಮೋಡ ಕವಿದಿರುತ್ತೆ. ಆ ಕಾರ್ಮೋಡ ಸರಿದ ಮೇಲೆ ಒಂದಷ್ಟು ಜೋರು ಮಳೆ ಸುರಿದು ಎಲ್ಲವೂ ನಿರಾಳವೆನಿಸುತ್ತೆ… ಇದಿಷ್ಟು ಹೇಳಿದ ಮೇಲೆ ಭಟ್ಟರ ಗಾಳಿಪಟದ ಎತ್ತರ ಎಷ್ಟಿದೆ ಅನ್ನೋದನ್ನು ಊಹಿಸಿಕೊಳ್ಳಿ.

ಈ ಗಾಳಿಪಟ ಕಣ್ಣಿಗೆ ಕಾಣುವಷ್ಟೇ ಹಾರಿದೆ. ನಿರ್ದೇಶಕ ಎಂಬ ಸೂತ್ರದಾರನಿಗೆ ಎಷ್ಟು ಹಾರಿಸಬೇಕೆಂಬ ಕಲ್ಪನೆ ಇದ್ದುದರಿಂದಲೋ ಏನೋ, ಗಾಳಿಪಟದ ಪ್ರತಿಯೊಂದು ಚಿತ್ರಪಟ ಪಟಪಟನೆ ಕಣ್ಮುಂದೆ ಹಾದು ಹೋಗಿ ನಿಚ್ಚಳ ಭಾವ ತೃಪ್ತಿಗೆ ಕಾರಣವಾಗುತ್ತೆ.

ಯೋಗರಾಜ ಭಟ್ ಶೈಲಿಯ ಸಿನಿಮಾ ಸಾಲಿಗೆ ಇದೂ ಸೇರಿದೆ. ಅವರ ಹಿಂದಿನ ಸಿನಿಮಾಗಳಲ್ಲಿದ್ದ ಮಾತು-ಮಂಥನ ಇಲ್ಲೂ ಇದೆ. ಅದೇ ಹಸಿ ಪ್ರೀತಿ, ಅದೇ ತುಂಟಾಟ, ತಮಾಷೆ, ‘ನಾಟು’ವ ನಾಟಿ ಮಾತುಗಳು, ಬೈಗುಳ, ಜಗಳ, ಮಳೆ, ತಂಗಾಳಿ ಇತ್ಯಾದಿಯ ಭಟ್ಟರ ‘ಸಿನಿಮಾ ವ್ಯಾಕರಣ’ ಇಲ್ಲೂ ಇದೆಯಾದರೂ, ಅವೆಲ್ಲಕ್ಕಿಂತಲೂ ಈ ಬಾರಿ ಅವರ ಈ ಸಿನಿಮಾದಲ್ಲಿ ಒಂದಷ್ಟು ಮಜವಿದೆ, ತುಸು ಹೆಚ್ಚೇ ತುಂಟಾಟವಿದೆ, ಪದಪುಂಜಗಳ ಕಣಜವಿದೆ. ಪರಿಮಿತಿ ಇರದ ಪರಿಸರದ ಅಂದವಿದೆ. ಈ ಎಲ್ಲವೂ ಸಿನಿಮಾದ ಚಂದವನ್ನು ಹೆಚ್ಚಿಸಿದೆ.

ಭಟ್ಟರಿಗೆ ಈಗಿನ ಮತ್ತು ಮುಂದಿನ ಪೀಳಿಗೆಯ ಹುಡುಗ, ಹುಡುಗಿಯರ ನಾಡಿಮಿಡಿತ ಗೊತ್ತಿದೆ. ಆ ಕಾರಣಕ್ಕೆ ಇಂಥದ್ದೊಂದು ಸಿನಿಮಾ‌ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡುವರೆ ತಾಸು ಕೂರಿಸುವ ತಾಕತ್ತು ಈ ಕಥೆಗಿದೆಯಾದರೂ, ಕಥೆಯ ಅಲ್ಲ್ಲಿಲಿ ಆಚೀಚೆ ಹಳ್ಳ- ಕೊಳ್ಳಗಳು ಎದುರಾಗಿವೆ. ಅಷ್ಟಾದರೂ ಕಿವಿಗಿಂಪೆನಿಸೋ ಹಾಡು ಎದುರಾಗಿ ಮನೋಲ್ಲಾಸಕ್ಕೆ ಕಾರಣವಾಗುತ್ತೆ.

ಸಿನಿಮಾ ಕಥೆ ಬಗ್ಗೆ ಯಾವ ತಕರಾರಿಲ್ಲ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಇನ್ನು, ಸುಂದರ ತಾಣಗಳ ಮಧ್ಯೆ ನೋಡುಗರ ಮನಸ್ಸನ್ನು ಜೋರು ಮಳೆಗೆ ಮೈವೊಡ್ಡಿ ಸಂಭ್ರಮಿಸಿದಷ್ಟೇ ಅನುಭವ ಕಟ್ಟಿಕೊಟ್ಟಿದ್ದಾರೆಂಬ ಸಮಾಧಾನ. ಮೊದಲರ್ಧ ತುಂಟಾಟ, ತಮಾಷೆಯಲ್ಲೇ ಸಾಗುವ ಕಥೆಯಲ್ಲಿ ಸಣ್ಣ ಸಣ್ಣ ತಿರುವುಗಳಿವೆ. ಅವನ್ನು ದಾಟಿ ಬರಲು ಸಣ್ಣ ಅಯಾಸವೆನಿಸಿದರೂ ಭಟ್ಟರ ಹಾಡು ಕಚಗುಳಿ ಇಡುವ ಮಾತುಗಳು ಮತ್ತದೇ ಉತ್ಸಾಹ ತುಂಬುತ್ತೆ.


ದ್ವಿತಿಯಾರ್ಧ ಕಥೆ ಮತ್ತೊಂದು ಪಯಣದತ್ತ ಸಾಗುತ್ತೆ. ಅಲ್ಲೂ ತಮಾಷೆ, ಹತಾಶೆ ನಿರಾಸೆಯ ಕಾರ್ಮೋಡದ ಛಾಯೆ ಆವರಿಸುತ್ತೆ. ಪ್ರೀತಿ ಜಗಳ ಕೋಪ ತಾಪ ಹುಡುಕಾಟ ಒದ್ದಾಟಗಳ ಮಧ್ಯೆ ಎದೆಭಾರವೆನಿಸೋ ಸನ್ನಿವೇಶಗಳು ಸ್ವಲ್ಪಮಟ್ಟಿಗೆ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ. ಉಳಿದಂತೆ ಇಲ್ಲಿ ಭಾವನೆಗಳು ಗರಿಗೆದರಿವೆ, ಭಾವುಕತೆಯೂ ಹರಿದಾಡಿದೆ, ಕಳೆದು ಹೋದ ಮಗನ ಹಂಬಲ, ಪ್ರೀತಿ ಪಡೆಯೋ ಚಡಪಡಿಕೆ, ಗೆಳೆತನದ ಬದ್ಧತೆ, ಅಪ್ಪ,ಅಮ್ಮನ ವಾತ್ಸಲ್ಯ ಹೀಗೆ ಎಲ್ಲದರ ಸುತ್ತವೂ ಕಥೆ ಗಿರಕಿ ಹೊಡೆದು ನೋಡುಗನ ಮನಸ್ಸನ್ನು ಗಾಳಿಪಟದೆತ್ತರದಷ್ಟು ಹಾರಿಸುವ ಪ್ರಯತ್ನಕ್ಕೆ ಭಟ್ಟರು ಸಾಕ್ಷಿಯಾಗುತ್ತಾರೆ.

ಕಥೆ ಏನು…?

ಅದು ‘ನೀರುಕೋಟೆ’ ಕನ್ನಡ‌ ವಿಶ್ವವಿದ್ಯಾಲಯ. ಹೆಸರಿಗೆ ತಕ್ಕಂತೆ ಸದಾ ಮಳೆ ಸುರಿಯೋ ಊರು. ಆ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಸೇರುವ ಮೂವರು ತರಲೆ‌ ಗೆಳೆಯರು. ಜವಾಬ್ದಾರಿ ಇರದ ಹುಡುಗ, ಆಕಾಶದೆತ್ತರದಷ್ಟೇ ಗೆಳೆತನ, ಎತ್ತರದಲ್ಲಿ ಹಾರಾಡುವ ಗಾಳಿಪಟದಷ್ಟೇ ಎತ್ತರದ ಪ್ರೀತಿ, ಬಾಚಿ ಹಿಡಿದು ತಬ್ಬುವಷ್ಟು ಪ್ರೀತಿ, ಕೋಪಿಸಿಕೊಳ್ಳುವಷ್ಟು ತಮಾಷೆ, ಬೊಗಸೆಯಷ್ಟು ಹತಾಶೆ, ಹಿಡಿಯಷ್ಟು ನಿರಾಸೆ… ಇವೆಲ್ಲದರ ಜೊತೆ ಹಳೆಯ ನೆನಪುಗಳ ಗುಚ್ಛ. ಎಂಎಲ್ಎ ಮತ್ತು ಕಾದಂಬರಿಕಾರ್ತಿ ಮಗ ಗಣಿ. ಅವನಿಗೆ ಕನ್ನಡ ಅಷ್ಟಾಗಿ ಬರಲ್ಲ. ಹೆತ್ತವರಿಗೆ ಕನ್ನಡ‌ ಸ್ನಾತಕೋತ್ತರ ಪದವಿ ಕೊಡಿಸೋ ಆಸೆ.

ನೀರುಕೋಟೆ ಕಾಲೇಜಿನಲ್ಲಿ ಜೊತೆಯಾಗೋ ಮೂವರು ಗೆಳೆಯರು, ಅವರ ತರಲೆ, ರಗಳೆ, ಪ್ರೀತಿ, ಜಗಳದೊಂದಿಗೆ ಸುಂದರ ಪಯಣ. ಅಲ್ಲೊಂದಷ್ಟು ಕಾಡುವ ಪ್ರೀತಿ ಗೀತಿ ಇತ್ಯಾದಿಯೊಂದಿಗೆ ಭಾವನಾತ್ಮಕ ಸಂಬಂಧದ ಬೆಸುಗೆ. ಜಾಲಿಯಾಗಿಯೇ ಸಾಗುವ ಮೊದಲರ್ಧ. ದ್ವಿತಿಯಾರ್ಧ ಒಂದಷ್ಟು ಖುಷಿ ಮತ್ತು ದುಃಖದೊಂದಿಗೆ ಮುಕ್ತಾಯ. ಇಲ್ಲಿ ಕೊಟ್ಟ ಕಾಸಿಗೆ ಮೋಸವಿಲ್ಲ. ಒಂದು ಮನರಂಜನೆಯ ಸಿನಿಮಾವಾಗಿ ಇಷ್ಟವಾಗುತ್ತೆ.

ಯಾರು ಹೇಗೆ..?


ಕಾಲೇಜ್ ನ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಅಗಿ ಗಣೇಶ್, ದಿಗಂತ್, ಪವನ್ ಕುಮಾರ್ ಒಬ್ಬರಿಗೊಬ್ಬರು ಹಠಕ್ಕೆ ಬಿದ್ದವರಂತೆ ನಟಿಸಿದ್ದಾರೆ.
ಗಣೇಶ್ ಎಂದಿಗಿಂತಲೂ ಮುದ್ದಾಗಿ ಕಾಣುವುದರ ಜೊತೆ ನಟನೆಯಲ್ಲಿ ನಗಿಸಿ ಭಾವುಕತೆ ಹೆಚ್ಚಿಸುತ್ತಾರೆ. ದಿಗಂತ್ ಅವರಿಗೆ ಇಲ್ಲಿ ಹೆಚ್ಚು ಸ್ಕೋರ್ ಕೊಡಬಹುದು. ಅವರಿಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಪವನ್ ಕುಮಾರ್ ಕೂಡ ಪಾಪದ ಹುಡುಗನಾಗಿ ಇಷ್ಟವಾಗುತ್ತಾರೆ. ಇವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ನಾಯಕಿಯರ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿದೆ. ಅನಂತ್ ನಾಗ್ ಇಡೀ ಸಿನಿಮಾದ ಕೇಂದ್ರ ಬಿಂದು. ಉಳಿದಂತೆ ರಂಗಾಯಣ ರಘು, ಸುಧಾ ಬೆಳೆವಾಡಿ, ಶ್ರೀನಾಥ್ ಎಲ್ಲರೂ ಗಮನ ಸೆಳೆಯುತ್ತಾರೆ.

ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೈಚಳಕ ಎತ್ತರದ ಗಾಳಿಪಟದಷ್ಟೇ ಅಂದವಾಗಿದೆ. ಅರ್ಜುನ್ ಜನ್ಯ ಸಂಗೀತವೂ ಇಲ್ಲಿ ಸ್ಕೋರ್‌ ಮಾಡಿದೆ. ಜಯಂತ್ ಕಾಯ್ಕಿಣಿ ಮತ್ತು ಭಟ್ಟರ ಹಾಡು ಗುನುಗುವಂತಿವೆ. ‘ನೀನು ಬಗೆಹರಿಯದ ಹಾಡು ಮತ್ತು ‘ದೇವ್ಲೆ ದೇವ್ಲೆ’ ಹಾಡುಗಳಲ್ಲಿ ಹೊಸತನವಿದೆ.

ಕೊನೇಮಾತು: ಪ್ರಾಯಶಃ ಇದು ಲೈಫಲ್ಲಿ ಜವಾಬ್ದಾರಿ ಇರದ ಹುಡುಗರ ಪಾಲಿಗೆ ಕಾಡುವ ಸಿನಿಮಾ ಆಗಬಹುದೇನೋ?

Categories
ಸಿನಿ ಸುದ್ದಿ

ಅಧ್ಯಕ್ಷರ ನೈಂಟಿ ಮಾತು! ನಟ ಬಿರಾದರ್ ಸಿನಿಮಾಗೆ ಶರಣ್ ಸಾಥ್…

ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ “ಐನೂರ”ನೇ ಚಿತ್ರ ಎಂದು ಸದ್ದಾಗಿದ್ದ “ಅಮ್ಮಾ ಟಾಕೀಸ್ ಬಾಗಲಕೋಟೆ” ಸಂಸ್ಥೆಯ ನಿರ್ಮಾಣದ “ನೈಂಟಿ ಬಿಡಿ ಮನೀಗ್ ನಡಿ” ಚಿತ್ರ ರಿಲೀಸಿಗೆ ತಯಾರಾಗುತ್ತಿದ್ದು, ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಗೊಳಿಸಿದೆ.

“A2” ಮ್ಯೂಸಿಕ್ ಚಾನೆಲ್ಲಿಗೆ ಭರ್ಜರಿ ಡಿಮಾಂಡಿನೊಂದಿಗೆ ಆಡಿಯೋ ಮಾರಿಕೊಂಡ ತಂಡ ಆ ಆಡಿಯೋ ಕಂಪೆನಿಯ ಯೂಟ್ಯೂಬ್(A2 Music ) ವಾಹಿನಿಯ ಮೂಲಕ ಟೀಸರ್ ಬಿಟ್ಟುಕೊಂಡಿದೆ.

ವಿಶೇಷವಾಗಿ ಹೆಸರಾಂತ ನಾಯಕನಟ “ಶರಣ್” ಅವರು ಈ ಚಿತ್ರದ ಟೀಸರ್ ಮೆಚ್ಚಿಕೊಂಡು ಬಿಡುಗಡೆಗೆ ಸಾಥ್ ನೀಡಿದ್ದಾರೆ. ಬಿರಾದಾರ್ ರವರು ಶರಣ್ ರವರ ತಂದೆಯ ಒಡನಾಡಿಯಾಗಿದ್ದು ಅದೇ ಅಭಿಮಾನದೊಂದಿಗೆ ” ನೈಂಟಿಗೆ” ಜೊತೆಯಾಗಿದ್ದಾರೆ.

“ನಾವು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು, ಮಿಗಿಲಾಗಿ ಇವರೊಬ್ಬ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು, ಇಂಥವರ ನಟನೆಯ ಐನೂರನೇ ಸಿನಿಮಾ ಎಂಬುದೇ ನಮ್ಮೆಲ್ಲರ ಹೆಮ್ಮೆ” ಎನ್ನುತ್ತಲೇ ಟೀಸರ್ ಬಿಡುಗಡೆಗೊಳಿಸಿದ ಶರಣ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.

Categories
ಸಿನಿ ಸುದ್ದಿ

ಧನ್ವೀರ್ ಗೌಡಗೆ ಜೋಡಿಯಾದ ರೀಷ್ಮಾ : ಶೂಟಿಂಗ್ ಗೆ ಎಂಟ್ರಿಯಾದ ಕೊಡಗು ಬೆಡಗಿ…

ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸುತ್ತಿರುವ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್ ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕನ ಪಯಣದಲ್ಲಿ ನಾಯಕಿ ಹೇಗೆ ಬೆಂಬಲವಾಗಿ ನಿಲ್ಲುತ್ತಾಳೆ ಅನ್ನೋದನ್ನು ಸಿನಿಮಾದಲ್ಲಿ ನೋಡಬಹುದು. ಪಕ್ಕ ಔಟ್ ಅಂಡ್ ಟ್ ಕಮರ್ಷಿಯಲ್ ಆಕ್ಷನ್ ಸಿನಿಮಾ

ವಾಗಿರುವ ವಾಮನದಲ್ಲಿ ಒಂದೊಳ್ಳೆ ಲವ್ ಸ್ಟೋರಿ ಕೂಡ ಇದೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿಬರ್ತಿರುವ ಸಿನಿಮಾವನ್ನು ಚೇತನ್ ಕುಮಾರ್ ರ್ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ನಿರ್ಮಾಣ ಮಾಡಿದ್ದಾರೆ.

ಈಗಾಗ್ಲೇ ರಿಲೀಸ್ ಆಗಿರುವ ಧನ್ವೀರ್ ಫಸ್ಟ್ ಲುಕ್ ಹಾಗೂ ಮೇಕಿಂಗ್ ಝಲಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಖತ್ ಮಾಸ್ ಅವತಾರದಲ್ಲಿ ಶೋಕ್ದಾರ್ ಮಿಂಚಿದ್ದು, ಶೀರ್ಘದಲ್ಲಿ ಚಿತ್ರತಂಡ ಮತ್ತೊಂದು ಅಪ್ ಡೇಟ್ ಗೆ ಸಜ್ಜಾಗುತ್ತಿದೆ.

Categories
ಸಿನಿ ಸುದ್ದಿ

ಇದು ಲೈನ್ ಮ್ಯಾನ್ ಸಿನಿಮಾ: ಕನ್ನಡದಲ್ಲೊಂದು ಬೆಳಕು ನೀಡೋ ಸ್ಪೆಷಲ್ ಲೈನ್ ಮ್ಯಾನ್ ಸ್ಟೋರಿ…

“ಭಿನ್ನ” ದಂತಹ ವಿಭಿನ್ನ ಚಿತ್ರ ನಿರ್ಮಾಣ ಮಾಡಿದ್ದ ಪರ್ಪಲ್ ರಾಕ್ ಸಂಸ್ಥೆಯಿಂದ ಇತ್ತೀಚೆಗೆ “ಡಿಯರ್ ಸತ್ಯ” ಚಿತ್ರ ಸಹ ನಿರ್ಮಾಣವಾಗಿತ್ತು. ಈಗ ಸಂಸ್ಥೆಯ ಮೂರನೇ ಕಾಣಿಕೆಯಾಗಿ “ಲೈನ್ ಮ್ಯಾನ್” ಚಿತ್ರ ಆರಂಭವಾಗಿದೆ.
ಚಾಮರಾಜನಗರದ ಚಂದಕವಾಡಿಯಲ್ಲಿರುವ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ
“ರನ್ ಆಂಟೊನಿ” ಹಾಗೂ “ಟಕ್ಕರ್” ಚಿತ್ರಗಳನ್ನು ರಘು ಶಾಸ್ತ್ರಿ ನಿರ್ದೇಶಿಸಿದ್ದರು.

ತ್ರಿಗುಣ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಆರ್.ಜಿ.ವಿ ನಿರ್ದೇಶನದ “ಕೊಂಡ” ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.
ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ ಹಾಗೂ “ತರ್ಲೆನನ್ಮಗ” ಖ್ಯಾತಿಯ ಅಂಜಲಿ‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹಳ್ಳಿ ಕಡೆ ದಿನ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ನಿಂದಾಗುವ ತೊಂದರೆ ಸರಿಪಡಿಸುವ “ಲೈನ್ ಮ್ಯಾನ್” ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ “ಲೈನ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ
ಪ್ರಚುರ ಪಿ ಪಿ , ಜೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಇದು ಧಮ್ ಇರೋ ಸಿನಿಮಾ! ತಮಿಳು ನಿರ್ದೇಶಕರ ಕನ್ನಡ‌ ಚಿತ್ರ…

ಕಳೆದ ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿನಯದಲ್ಲಿ “ಧಮ್” ಎನ್ನುವ ಚಿತ್ರ ಬಂದಿತ್ತು. ಈಗ ಮತ್ತೆ ಅದೇ ಹೆಸರಿನ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡದ ಹುಡುಗ ಶ್ರೀಜಿತ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವಿ ಆರ್ ಆರ್ ನಿರ್ದೇಶಿಸಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಹಾಗೂ ನಟ, ನಿರ್ದೇಶಕ ರವಿಕಿರಣ್ ಇದ್ದರು.

ನಾನು ಬಾಲನಟನಾಗಿ “ಹಾತಿ ಮೇರೆ ಸಾತಿ” ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ತಾಯಿ ಮೈಸೂರಿನವರು‌. ಅವರಿಗೆ ನಾನು ಕನ್ನಡ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ. ಈ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ನಾಯಕರಾಗಿ ಸಂಚಾರಿ ವಿಜಯ್ ಮಾಡಬೇಕಿತ್ತು. ಕಾರಣಾಂತರದಿಂದ ಅದು ಆಗಲಿಲ್ಲ. ನಂತರ ಶ್ರೀಜಿತ್ ಆಯ್ಕೆಯಾದರು. ಎರೀನ್ ಅಧಿಕಾರಿ ಈ ಚಿತ್ರದ ನಾಯಕಿ. ಶಯ್ಯಾಜಿ ಶಿಂಧೆ, ರವಿಕಾಳೆ, ನಾಗೇಶ್ವರ ರಾವ್, ಗುರುಚಂದ್ರನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರಿಹಾನ್ ಅಹಮದ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಳಯರಾಜ ಅವರ ಬಳಿ ಕಾರ್ಯ ನಿರ್ವಹಿಸಿರುವ ಜೀವ ವರ್ಷಿಣಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು ನಿರ್ದೇಶಕ ವಿ.ಆರ್.ಆರ್.

ನನ್ನ ಸ್ನೇಹಿತನ ಮೂಲಕ ನಿರ್ದೇಶಕರ ಪರಿಚಯವಾಯಿತು. ವಿ.ಆರ್.ಆರ್ ಅವರಂತಹ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಿದ್ದು ಸಂತೋಷವಾಗಿದೆ. ನಾನು ಈ ಹಿಂದೆ “ರಂಗ್ ಬಿ ರಂಗಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಇದು ಎರಡನೇ ಚಿತ್ರ. ಆಕ್ಷನ್, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಶ್ರೀಜಿತ್.

ನಾನು ಮೂಲತಃ ಬಂಗಾಲಿಯವಳು. ಬಂಗಾಳಿ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕಿ ಎರೀನ್ ಅಧಿಕಾರಿ.

ಚಿತ್ರದಲ್ಲಿ ನಟಿಸಿರುವ ನಾಗೇಶ್ವರರಾವ್, ಸಂಗೀತ ನೀಡಿರುವ ಜೀವವರ್ಷಿಣಿ “ಧಮ್” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಮಿಥ್ಯ ಎಂಬ ಬಾಲಕನ ಕಥೆ: ಪರಂವಃ ಸ್ಟುಡಿಯೋಸ್ ಸಿನಿಮಾ

ಚಿತ್ರರಂಗ ಎಂದರೆ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಬೇಕು. ಹೊಸ ಶೈಲಿಯ ಕಥೆಗಳನ್ನು, ಹೊಸ ಆಲೋಚನೆಗಳನ್ನು ಬರಮಾಡಿಕೊಳ್ಳಬೇಕು. ಹೊಸ ಯೋಚನೆಗಳಿರುವ ಕಥೆಗಾರರನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್​ ಹೆಜ್ಜೆ ಇಟ್ಟಿದ್ದು, ‘ಮಿಥ್ಯ’ ಅಂಥದ್ದೊಂದು ವಿನೂತನ ಪ್ರಯತ್ನವಾಗಲಿದೆ.


‘ಮಿಥ್ಯ’, ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಈ ಚಿತ್ರದ ಮೂಲಕ ಸುಮಂತ್​ ಭಟ್​ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳವ ಪ್ರಯತ್ನ ಮಾಡುತ್ತಿದ್ದಾರೆ.
ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’.

ಮೂಲತಃ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಸುಮಂತ್​ ಭಟ್​ಗೆ ಸಿನಿಮಾ ಎನ್ನುವುದು ಪ್ಯಾಶನ್​. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್​ ನಿರ್ಮಾಣದ ‘ಏಕಂ’ ಎಂಬ ವೆಬ್​ಸೀರೀಸ್​ನ ಏಳು ಕಂತುಗಳಲ್ಲಿ, ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಅವರು. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಮತ್ತು ‘ವಿಕ್ರಾಂತ್​ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್​ ಶೆಟ್ಟಿ, ಇಲ್ಲಿ ಮಿಥುನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್​ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ.

‘ಮಿಥ್ಯ’ ಚಿತ್ರಕ್ಕೆ ಉದಿತ್​ ಖುರಾನ ಅವರ ಛಾಯಾಗ್ರಹಣವಿದ್ದು, ಮಿಥುನ್​ ಮುಕುಂದನ್​ ಅವರ ಸಂಗೀತವಿದೆ. ಭುವನೇಶ್​ ಮಣಿವಣ್ಣನ್​ ಸಂಕಲನಕಾರರಾಗಿ, ಶ್ರೇಯಾಂಕ್​ ನಂಜಪ್ಪ ಸೌಂಡ್​ ಡಿಸೈನರ್​ ಆಗಿ ಕಾರ್ಯನಿರ್ವಹಿಸಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

Categories
ಸಿನಿ ಸುದ್ದಿ

ಇದು ಮೇಡ್ ಇನ್ ಬೆಂಗಳೂರು ಸಾಂಗ್



ನಾನಾ ಊರುಗಳಿಂದ ನಾನಾ ಭಾಷೆಗಳನ್ನಾಡುವ ಜನ ಹಲವು ಕಾಲಗಳಿಂದ ಬೆಂಗಳೂರಿನಲ್ಲಿದ್ದಾರೆ. ಅಂತಹ ಬೆಂಗಳೂರಿನ ಕುರಿತಾಗಿ ಬರುತ್ತಿರುವ ಚಿತ್ರ “ಮೇಡ್ ಇನ್ ಬೆಂಗಳೂರು”.

ಈ ಚಿತ್ರದ ” ಬನ್ನಿರೆ ಬೆಂಗಳೂರಿಗೆ” ಎಂಬ ಹಾಡನ್ನು ಖ್ಯಾತ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದರು. ಚಿತ್ರದ ಪೋಸ್ಟರ್ ಗೆ ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಚಾಲನೆ ನೀಡಿದರು.

ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ. ಜನಪ್ರಿಯ ಗಾಯಕರಾದ ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ, ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ ಕುಲಕರ್ಣಿ, ಪೂಜಾ ರಾವ್, ನಾರಾಯಣ ಶರ್ಮ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಶಣ್ಮುಗ, ಅಥರ್ವ ರಾವ್, ಅಪ್ಪಣ್ಣ, ಅಶ್ವಿನ್ ಪ್ರಭಾತ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್ ಹಾಡಿನ ಬಗ್ಗೆ ವಿವರಣೆ ನೀಡಿದರು. ಅಶ್ವಿನ್ ಪಿ ಕುಮಾರ್ ಸಹ ಈ ಗೀತೆಗೆ ಧ್ವನಿಯಾಗಿದ್ದಾರೆ.

ನಾನು ರಾಘವೇಂದ್ರಸ್ವಾಮಿಗಳ ಪರಮಭಕ್ತ. ರಾಯರ ಭಕ್ತರಿಂದಲೇ ಈ ಹಾಡನ್ನು ಬಿಡುಗಡೆ ಮಾಡಿಸುವ ಆಸೆಯಿತ್ತು. ಹಾಗಾಗಿ “ಮಂತ್ರಾಲಯ ಮಹಾತ್ಮೆ” ಯಂತಹ ಅದ್ಭುತ ಚಿತ್ರದ ನಿರ್ಮಾಪಕರು ಹಾಗೂ ಖ್ಯಾತ ನಿರ್ದೇಶಕರೂ ಆಗಿರುವ ಭಗವಾನ್ ಅವರಿಂದ ಹಾಡು ಬಿಡುಗಡೆ ಮಾಡಿಸಿದ್ದೇವೆ. ನಲವತ್ತೆಂಟು ವರ್ಷಗಳ ಹಿಂದೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ರಾಯರ ಭಕ್ತರಾದ ಸುಧೀಂದ್ರ ಅವರು ಆರಂಭಿಸಿದ್ದರು. ಈಗ ಆ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಖ್ಯಾತ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಿದ್ದು ಖುಷಿಯಾಗಿದೆ. ಚಿತ್ರ‌ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಬಾಲಕೃಷ್ಣ.

ಮಧ್ಯಮವರ್ಗದ ಹುಡುಗನೊಬ್ಬ ಐಟಿ ಕಂಪನಿ ಕೆಲಸ ಬಿಟ್ಟು, ಹೊಸ ಕಂಪನಿ ಆರಂಭಿಸುತ್ತಾನೆ. ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಾನೆ. ಸಿಗದಿದ್ದಾಗ ಗ್ಯಾಂಗ್ ಸ್ಟರ್ ಬಳಿ ಹಣ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದೆ ಚಿತ್ರದ ಕಥೆ ಎಂದು ನಿರ್ದೇಶಕ ಪ್ರದೀಪ್ ಶಾಸ್ತ್ರಿ ವಿವರಣೆ ನೀಡಿದರು.

ಚಿತ್ರದ ನಾಯಕ ಮಧುಸೂದನ್ ಗೋವಿಂದ್, ನಟರಾದ ಪುನೀತ್ ಮಾಂಜ ಹಾಗೂ ವಂಶಿಧರ್ ಸಹ ಈ ಚಿತ್ರದ ಕುರಿತು ಮಾತನಾಡಿದರು.

ನಾವು ಚಿತ್ರ ನಿರ್ಮಾಣ ಮಾಡಬೇಕಾದರೆ ಇಷ್ಟು ಸುಲಭವಿರಲಿಲ್ಲ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಹೊಸಬರ ತಂಡದಿಂದ ಹೊಸಚಿತ್ರವೊಂದು ನಿರ್ಮಾಣವಾಗಿದೆ. ರಾಯರ ಭಕ್ತರು ನಿರ್ಮಾಣ ಮಾಡಿದ್ದಾರೆ. ಇಡೀ ತಂಡಕ್ಕೆ ರಾಯರ ಕೃಪೆಯಿರಲಿ ಎಂದು ಹಿರಿಯ ನಿರ್ದೇಶಕ ಭಗವಾನ್ ಹಾರೈಸಿದರು.

ಹಿರಿಯ ನಟರಾದ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಕಲಾವಿದರು “ಮೇಡ್ ಇನ್ ಬೆಂಗಳೂರು” ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ರಾಜ ರಾಣಿ ರೋರರ್ ರಾಕೆಟ್ ಹಾರಲು ರೆಡಿ: ಡ್ಯಾನ್ಸ್ ಮಾಸ್ಟರ್ ಈಗ ಹೀರೋ…

ಜನಪ್ರಿಯ “ಚುಟು ಚುಟು ಅಂತೈತಿ” ಹಾಡಿಗೆ ನೃತ್ಯ ನಿರ್ದೇಶನ ಮಾಡಿ, ಖ್ಯಾತರಾಗಿರುವ ನೃತ್ಯ ನಿರ್ದೇಶಕ ಭೂಷಣ್, ಆನಂತರ “ನಟಸಾರ್ವಭೌಮ”, ” ಬೆಲ್ ಬಾಟಮ್”, “ರಾಬರ್ಟ್” ಮುಂತಾದ ಸೂಪರ್ ಹಿಟ್ ಚಿತ್ರಗಳಿಗೂ‌ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

“ರಾಜ ರಾಣಿ ರೋರರ್ ರಾಕೆಟ್” ಚಿತ್ರದ ಮೂಲಕ ಭೂಷಣ್ ನಾಯಕರಾಗಿ ಮತ್ತೊಂದು ಮೆಟ್ಟಿಲು ಏರುವ ಉತ್ಸಾಹದಲ್ಲಿದ್ದಾರೆ . ಪ್ರಸ್ತುತ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕೆಂಪೇಗೌಡ ಮಾಗಡಿ ನಿರ್ದೇಶಿಸಿದ್ದಾರೆ. ನಾಗರಾಜ್ ವಿ ಅಜ್ಜಂಪುರ ನಿರ್ಮಾಣ ಮಾಡಿದ್ದಾರೆ. ಹುಲಿಯೂರು ದುರ್ಗದಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ.

ಮುಂದಿನ ತಿಂಗಳು ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕಾರ್ಯಕ್ಕೆ ಚಾಲನೆ ನೀಡಲಾಯಿತು. ಚಿತ್ರದ ಪಾಸ್(ಟಿಕೆಟ್) ಗಳನ್ನು ಈಗಲೇ ನೃತ್ಯಗಾರರಿಗೆ ವಿತರಿಸಲಾಗುತ್ತಿದೆ, ಆ ಕಾರ್ಯಕ್ಕೆ ಕೆಜಿಎಫ್ ಖ್ಯಾತಿಯ ನೃತ್ಯ ನಿರ್ದೇಶಕ ಮೋಹನ್ , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರುದ್ರ, ಹಾಗೂ ಮತ್ತಿತರ ನೃತ್ಯಗಾರರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ನಾಯಕ ಭೂಷಣ್.

ಇತ್ತೀಚೆಗೆ ಸಂಚಿತ್ ಹೆಗಡೆ ಹಾಡಿರುವ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ‌ಪ್ರಭು ಎಸ್ ಆರ್, ಸಂಗೀತ ನೀಡಿದ್ದಾರೆ.

ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಇದ್ದಾರೆ. ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

error: Content is protected !!