ಶಿವ 143… ಇದು ರಾಜ್ ಮೊಮ್ಮಗನ ಸಿನಿಮಾ: ಧೀರನ್ ರಾಮಕುಮಾರ್ ಚಿತ್ರ ಆಗಸ್ಟ್ 26ಕ್ಕೆ ರಿಲೀಸ್

ನಟ ಸಾರ್ವಭೌಮ ಡಾ.ರಾಜಕುಮಾರ್ ಮೊಮ್ಮಗ ಧೀರನ್ ರಾಮಕುಮಾರ್ ನಾಯಕನಾಗಿ ನಟಿಸಿರುವ “ಶಿವ 143” ಚಿತ್ರ ಆಗಸ್ಟ್ 26 ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡು ನೋಡುಗರ ಮನ ಗೆದ್ದಿದೆ. ನಾಯಕನ ಪರಿಚಯಿಸುವ ಟೀಸರ್ ಗೂ ಅಪಾರ ಜನಮನ್ನಣೆ ದೊರಕಿದೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಇದು ಲಾಕ್ ಡೌನ್ ಪೂರ್ವದಲ್ಲೇ ತಯಾರಾದ ಸಿನಿಮಾ. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು. ಆನಂತರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದ್ದವು. ನಾವು ಸೂಕ್ತ ಸಮಯ ನೋಡಿ, ಇದೇ ಆಗಸ್ಟ್ 26 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು
ರೌಡಿಸಂ ಸಿನಿಮಾ ಅಲ್ಲ. ವಿಭಿನ್ನ ಪ್ರೇಮಕಥೆಯ ಚಿತ್ರ. ಜಯಣ್ಣ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ನಿರ್ಮಾಪಕರು ಹಾಗೂ ಧೀರನ್ ಅವರ ಕುಟುಂಬದವರು ಕುಳಿತು, ಧೀರನ್ ಅವರಿಗೆ ಇಂತಹುದೇ ಕಥೆ ಇದ್ದರೆ ಚೆನ್ನ ಎಂದು ತಿರ್ಮಾನಿಸಿದ್ದರು. ನಾನು ಆನಂತರ ತಂಡ ಸೇರಿಕೊಂಡೆ. ಧೀರನ್ ಅವರಿಗೆ ಈ ಮಾಸ್ ಲುಕ್ ಸರಿ ಹೊಂದುವುದೊ, ಇಲ್ಲವೋ? ಎಂಬ ಯೋಚನೆಯಿತ್ತು. ಅವರ ನಟನೆ ನೋಡಿ ಅದು ದೂರಾಯಿತು. ನಾಯಕಿ ಮಾನ್ವಿತ ಕಾಮತ್ ಹಾಗೂ ಚರಣ್ ರಾಜ್ ಅವರ ಅಭಿನಯ‌ ಕೂಡ ತುಂಬಾ ಚೆನ್ನಾಗಿದೆ. ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರ ಕಾಮಿಡಿ ಮೋಡಿ ಮಾಡಲಿದೆ ಎಂದು ನಿರ್ದೇಶಕ ಅನಿಲ್ ಕುಮಾರ್ ಚಿತ್ರದ ಬಗ್ಗೆ ವಿವರಣೆ ನೀಡಿದರು.

ನಾನು ನಮ್ಮ ಕುಟುಂಬದವರ ಬಳಿ ಈ ಸಿನಿಮಾ ಕಥೆ ಬಗ್ಗೆ ಚರ್ಚಿಸಿದಾಗ ನಿನಗೆ ಸರಿ ಹೊಂದುವುದಾದರೆ ಮಾಡು ಎಂದರು. ನನಗೂ ಈ ಕಥೆ ಇಷ್ಟವಾಗಿತ್ತು. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಕೊರೋನ ಕಾರಣದಿಂದ ಬಿಡುಗಡೆ ತಡವಾಗಿದೆ. ಶಿವಣ್ಣ ಮಾಮ ಹಾಗೂ ಗೀತಾ ಆಂಟಿ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಭೇಟಿ‌ ನೀಡಿ ಶುಭ ಹಾರೈಸಿದ್ದರು. ರಾಘಣ್ಣ ಮಾಮ ಅವರ ಹಾರೈಕೆ ಸದಾ ಇದೆ. ಇನ್ನೂ ಯಾರ ಬಳಿಯು ಹೇಳದ ವಿಷಯವೊಂದು ಇಂದು ಹೇಳುತ್ತಿದ್ದೇನೆ. ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲೇ ಅಪ್ಪು ಮಾಮ‌ “ಜೇಮ್ಸ್” ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಾಹಸ ನಿರ್ದೇಶಕ ರವಿವರ್ಮ ಅವರು ಎರಡೂ ಚಿತ್ರಗಳಿಗೂ ಸಾಹಸ ಸಂಯೋಜನೆ ಮಾಡುತ್ತಿದ್ದರು‌. ನಾನು ಪಾಲ್ಗೊಂಡ ಸಾಹಸ ದೃಶ್ಯವೊಂದರ ತುಣುಕನ್ನು ಅವರು, ಅಪ್ಪು ಮಾಮ ಅವರಿಗೆ ತೋರಿಸಿದರಂತೆ.

ಅದನ್ನು ನೋಡಿದ ಅಪ್ಪು ಮಾಮ, ಸ್ನೇಹಿತರೊಬ್ಬರ ಬಳಿ ಅವನ ಕಣ್ಣು ನೋಡಿ ಎಷ್ಟು ಚೆನ್ನಾಗಿದೆ. ನಮ್ಮ ಕುಟುಂಬದಿಂದ ಒಳ್ಳೆಯ ಹೀರೋ ಬರುತ್ತಿದ್ದಾನೆ ಎಂದು ತುಂಬಾ ಸಂತೋಷಪಟ್ಟಿದ್ದರಂತೆ. ಈ ವಿಷಯವನ್ನು ನನಗೆ ಎಷ್ಟೋ ದಿನಗಳ ಬಳಿಕ ಆ ಸ್ನೇಹಿತರು ಹೇಳಿದರು. ಅಶ್ವಿನಿ ಆಂಟಿ ‌ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅವರು ಬಿಡುಗಡೆ ಮಾಡಿಕೊಟ್ಟಿದ್ದು ನನಗೆ ಅಪ್ಪು ಮಾಮ ಬಿಡುಗಡೆ ಮಾಡಿದಷ್ಟೇ ಖುಷಿಯಾಗಿದೆ. ಅವರಿಗೆ ನನ್ನ ಧನ್ಯವಾದ ಎಂದರು ನಾಯಕ ಧೀರನ್.

ಛಾಯಾಗ್ರಹಕ ಶಿವ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.

ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Related Posts

error: Content is protected !!