ಅಂದದ ಗಾಳಿಪಟದಲ್ಲಿ ತಮಾಷೆ ಹತಾಷೆ ನಿರಾಸೆ

ವಿಜಯ್ ಭರಮಸಾಗರ

ಚಿತ್ರ ವಿಮರ್ಶೆ- ರೇಟಿಂಗ್ 4 / 5

ನಿರ್ದೇಶನ : ಯೋಗರಾಜ ಭಟ್

ನಿರ್ಮಾಣ: ಉಮಾ ಎಂ. ರಮೇಶ್ ರೆಡ್ಡಿ

ತಾರಾಗಣ: ಗಣೇಶ್, ದಿಗಂತ್, ಪವನ್ ಕುಮಾರ್, ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಸುಧಾ ಬೆಳವಾಡಿ ಇತರರು.

ಕನಸಿಗೂ ಮತ್ತು ಸಂಬಂಧಕ್ಕೂ ರಿಯಾಲಿಟಿ ಇರಲ್ಲ. ಕನಸು ಇದ್ದಂಗೆ ಬದುಕಾಗಲ್ಲ…’ ಅವನು ಈ ಡೈಲಾಗ್ ಹೇಳುವ ಹೊತ್ತಿಗೆ ಆ ಮೂವರು ಗೆಳೆಯರ ಲೈಫಲ್ಲಿ ತಮಾಷೆ, ಹತಾಶೆ ಮತ್ತ ನಿರಾಸೆ ಎಂಬ ಕಾರ್ಮೋಡ ಕವಿದಿರುತ್ತೆ. ಆ ಕಾರ್ಮೋಡ ಸರಿದ ಮೇಲೆ ಒಂದಷ್ಟು ಜೋರು ಮಳೆ ಸುರಿದು ಎಲ್ಲವೂ ನಿರಾಳವೆನಿಸುತ್ತೆ… ಇದಿಷ್ಟು ಹೇಳಿದ ಮೇಲೆ ಭಟ್ಟರ ಗಾಳಿಪಟದ ಎತ್ತರ ಎಷ್ಟಿದೆ ಅನ್ನೋದನ್ನು ಊಹಿಸಿಕೊಳ್ಳಿ.

ಈ ಗಾಳಿಪಟ ಕಣ್ಣಿಗೆ ಕಾಣುವಷ್ಟೇ ಹಾರಿದೆ. ನಿರ್ದೇಶಕ ಎಂಬ ಸೂತ್ರದಾರನಿಗೆ ಎಷ್ಟು ಹಾರಿಸಬೇಕೆಂಬ ಕಲ್ಪನೆ ಇದ್ದುದರಿಂದಲೋ ಏನೋ, ಗಾಳಿಪಟದ ಪ್ರತಿಯೊಂದು ಚಿತ್ರಪಟ ಪಟಪಟನೆ ಕಣ್ಮುಂದೆ ಹಾದು ಹೋಗಿ ನಿಚ್ಚಳ ಭಾವ ತೃಪ್ತಿಗೆ ಕಾರಣವಾಗುತ್ತೆ.

ಯೋಗರಾಜ ಭಟ್ ಶೈಲಿಯ ಸಿನಿಮಾ ಸಾಲಿಗೆ ಇದೂ ಸೇರಿದೆ. ಅವರ ಹಿಂದಿನ ಸಿನಿಮಾಗಳಲ್ಲಿದ್ದ ಮಾತು-ಮಂಥನ ಇಲ್ಲೂ ಇದೆ. ಅದೇ ಹಸಿ ಪ್ರೀತಿ, ಅದೇ ತುಂಟಾಟ, ತಮಾಷೆ, ‘ನಾಟು’ವ ನಾಟಿ ಮಾತುಗಳು, ಬೈಗುಳ, ಜಗಳ, ಮಳೆ, ತಂಗಾಳಿ ಇತ್ಯಾದಿಯ ಭಟ್ಟರ ‘ಸಿನಿಮಾ ವ್ಯಾಕರಣ’ ಇಲ್ಲೂ ಇದೆಯಾದರೂ, ಅವೆಲ್ಲಕ್ಕಿಂತಲೂ ಈ ಬಾರಿ ಅವರ ಈ ಸಿನಿಮಾದಲ್ಲಿ ಒಂದಷ್ಟು ಮಜವಿದೆ, ತುಸು ಹೆಚ್ಚೇ ತುಂಟಾಟವಿದೆ, ಪದಪುಂಜಗಳ ಕಣಜವಿದೆ. ಪರಿಮಿತಿ ಇರದ ಪರಿಸರದ ಅಂದವಿದೆ. ಈ ಎಲ್ಲವೂ ಸಿನಿಮಾದ ಚಂದವನ್ನು ಹೆಚ್ಚಿಸಿದೆ.

ಭಟ್ಟರಿಗೆ ಈಗಿನ ಮತ್ತು ಮುಂದಿನ ಪೀಳಿಗೆಯ ಹುಡುಗ, ಹುಡುಗಿಯರ ನಾಡಿಮಿಡಿತ ಗೊತ್ತಿದೆ. ಆ ಕಾರಣಕ್ಕೆ ಇಂಥದ್ದೊಂದು ಸಿನಿಮಾ‌ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡುವರೆ ತಾಸು ಕೂರಿಸುವ ತಾಕತ್ತು ಈ ಕಥೆಗಿದೆಯಾದರೂ, ಕಥೆಯ ಅಲ್ಲ್ಲಿಲಿ ಆಚೀಚೆ ಹಳ್ಳ- ಕೊಳ್ಳಗಳು ಎದುರಾಗಿವೆ. ಅಷ್ಟಾದರೂ ಕಿವಿಗಿಂಪೆನಿಸೋ ಹಾಡು ಎದುರಾಗಿ ಮನೋಲ್ಲಾಸಕ್ಕೆ ಕಾರಣವಾಗುತ್ತೆ.

ಸಿನಿಮಾ ಕಥೆ ಬಗ್ಗೆ ಯಾವ ತಕರಾರಿಲ್ಲ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಇನ್ನು, ಸುಂದರ ತಾಣಗಳ ಮಧ್ಯೆ ನೋಡುಗರ ಮನಸ್ಸನ್ನು ಜೋರು ಮಳೆಗೆ ಮೈವೊಡ್ಡಿ ಸಂಭ್ರಮಿಸಿದಷ್ಟೇ ಅನುಭವ ಕಟ್ಟಿಕೊಟ್ಟಿದ್ದಾರೆಂಬ ಸಮಾಧಾನ. ಮೊದಲರ್ಧ ತುಂಟಾಟ, ತಮಾಷೆಯಲ್ಲೇ ಸಾಗುವ ಕಥೆಯಲ್ಲಿ ಸಣ್ಣ ಸಣ್ಣ ತಿರುವುಗಳಿವೆ. ಅವನ್ನು ದಾಟಿ ಬರಲು ಸಣ್ಣ ಅಯಾಸವೆನಿಸಿದರೂ ಭಟ್ಟರ ಹಾಡು ಕಚಗುಳಿ ಇಡುವ ಮಾತುಗಳು ಮತ್ತದೇ ಉತ್ಸಾಹ ತುಂಬುತ್ತೆ.


ದ್ವಿತಿಯಾರ್ಧ ಕಥೆ ಮತ್ತೊಂದು ಪಯಣದತ್ತ ಸಾಗುತ್ತೆ. ಅಲ್ಲೂ ತಮಾಷೆ, ಹತಾಶೆ ನಿರಾಸೆಯ ಕಾರ್ಮೋಡದ ಛಾಯೆ ಆವರಿಸುತ್ತೆ. ಪ್ರೀತಿ ಜಗಳ ಕೋಪ ತಾಪ ಹುಡುಕಾಟ ಒದ್ದಾಟಗಳ ಮಧ್ಯೆ ಎದೆಭಾರವೆನಿಸೋ ಸನ್ನಿವೇಶಗಳು ಸ್ವಲ್ಪಮಟ್ಟಿಗೆ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ. ಉಳಿದಂತೆ ಇಲ್ಲಿ ಭಾವನೆಗಳು ಗರಿಗೆದರಿವೆ, ಭಾವುಕತೆಯೂ ಹರಿದಾಡಿದೆ, ಕಳೆದು ಹೋದ ಮಗನ ಹಂಬಲ, ಪ್ರೀತಿ ಪಡೆಯೋ ಚಡಪಡಿಕೆ, ಗೆಳೆತನದ ಬದ್ಧತೆ, ಅಪ್ಪ,ಅಮ್ಮನ ವಾತ್ಸಲ್ಯ ಹೀಗೆ ಎಲ್ಲದರ ಸುತ್ತವೂ ಕಥೆ ಗಿರಕಿ ಹೊಡೆದು ನೋಡುಗನ ಮನಸ್ಸನ್ನು ಗಾಳಿಪಟದೆತ್ತರದಷ್ಟು ಹಾರಿಸುವ ಪ್ರಯತ್ನಕ್ಕೆ ಭಟ್ಟರು ಸಾಕ್ಷಿಯಾಗುತ್ತಾರೆ.

ಕಥೆ ಏನು…?

ಅದು ‘ನೀರುಕೋಟೆ’ ಕನ್ನಡ‌ ವಿಶ್ವವಿದ್ಯಾಲಯ. ಹೆಸರಿಗೆ ತಕ್ಕಂತೆ ಸದಾ ಮಳೆ ಸುರಿಯೋ ಊರು. ಆ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಸೇರುವ ಮೂವರು ತರಲೆ‌ ಗೆಳೆಯರು. ಜವಾಬ್ದಾರಿ ಇರದ ಹುಡುಗ, ಆಕಾಶದೆತ್ತರದಷ್ಟೇ ಗೆಳೆತನ, ಎತ್ತರದಲ್ಲಿ ಹಾರಾಡುವ ಗಾಳಿಪಟದಷ್ಟೇ ಎತ್ತರದ ಪ್ರೀತಿ, ಬಾಚಿ ಹಿಡಿದು ತಬ್ಬುವಷ್ಟು ಪ್ರೀತಿ, ಕೋಪಿಸಿಕೊಳ್ಳುವಷ್ಟು ತಮಾಷೆ, ಬೊಗಸೆಯಷ್ಟು ಹತಾಶೆ, ಹಿಡಿಯಷ್ಟು ನಿರಾಸೆ… ಇವೆಲ್ಲದರ ಜೊತೆ ಹಳೆಯ ನೆನಪುಗಳ ಗುಚ್ಛ. ಎಂಎಲ್ಎ ಮತ್ತು ಕಾದಂಬರಿಕಾರ್ತಿ ಮಗ ಗಣಿ. ಅವನಿಗೆ ಕನ್ನಡ ಅಷ್ಟಾಗಿ ಬರಲ್ಲ. ಹೆತ್ತವರಿಗೆ ಕನ್ನಡ‌ ಸ್ನಾತಕೋತ್ತರ ಪದವಿ ಕೊಡಿಸೋ ಆಸೆ.

ನೀರುಕೋಟೆ ಕಾಲೇಜಿನಲ್ಲಿ ಜೊತೆಯಾಗೋ ಮೂವರು ಗೆಳೆಯರು, ಅವರ ತರಲೆ, ರಗಳೆ, ಪ್ರೀತಿ, ಜಗಳದೊಂದಿಗೆ ಸುಂದರ ಪಯಣ. ಅಲ್ಲೊಂದಷ್ಟು ಕಾಡುವ ಪ್ರೀತಿ ಗೀತಿ ಇತ್ಯಾದಿಯೊಂದಿಗೆ ಭಾವನಾತ್ಮಕ ಸಂಬಂಧದ ಬೆಸುಗೆ. ಜಾಲಿಯಾಗಿಯೇ ಸಾಗುವ ಮೊದಲರ್ಧ. ದ್ವಿತಿಯಾರ್ಧ ಒಂದಷ್ಟು ಖುಷಿ ಮತ್ತು ದುಃಖದೊಂದಿಗೆ ಮುಕ್ತಾಯ. ಇಲ್ಲಿ ಕೊಟ್ಟ ಕಾಸಿಗೆ ಮೋಸವಿಲ್ಲ. ಒಂದು ಮನರಂಜನೆಯ ಸಿನಿಮಾವಾಗಿ ಇಷ್ಟವಾಗುತ್ತೆ.

ಯಾರು ಹೇಗೆ..?


ಕಾಲೇಜ್ ನ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಅಗಿ ಗಣೇಶ್, ದಿಗಂತ್, ಪವನ್ ಕುಮಾರ್ ಒಬ್ಬರಿಗೊಬ್ಬರು ಹಠಕ್ಕೆ ಬಿದ್ದವರಂತೆ ನಟಿಸಿದ್ದಾರೆ.
ಗಣೇಶ್ ಎಂದಿಗಿಂತಲೂ ಮುದ್ದಾಗಿ ಕಾಣುವುದರ ಜೊತೆ ನಟನೆಯಲ್ಲಿ ನಗಿಸಿ ಭಾವುಕತೆ ಹೆಚ್ಚಿಸುತ್ತಾರೆ. ದಿಗಂತ್ ಅವರಿಗೆ ಇಲ್ಲಿ ಹೆಚ್ಚು ಸ್ಕೋರ್ ಕೊಡಬಹುದು. ಅವರಿಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಪವನ್ ಕುಮಾರ್ ಕೂಡ ಪಾಪದ ಹುಡುಗನಾಗಿ ಇಷ್ಟವಾಗುತ್ತಾರೆ. ಇವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ನಾಯಕಿಯರ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿದೆ. ಅನಂತ್ ನಾಗ್ ಇಡೀ ಸಿನಿಮಾದ ಕೇಂದ್ರ ಬಿಂದು. ಉಳಿದಂತೆ ರಂಗಾಯಣ ರಘು, ಸುಧಾ ಬೆಳೆವಾಡಿ, ಶ್ರೀನಾಥ್ ಎಲ್ಲರೂ ಗಮನ ಸೆಳೆಯುತ್ತಾರೆ.

ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೈಚಳಕ ಎತ್ತರದ ಗಾಳಿಪಟದಷ್ಟೇ ಅಂದವಾಗಿದೆ. ಅರ್ಜುನ್ ಜನ್ಯ ಸಂಗೀತವೂ ಇಲ್ಲಿ ಸ್ಕೋರ್‌ ಮಾಡಿದೆ. ಜಯಂತ್ ಕಾಯ್ಕಿಣಿ ಮತ್ತು ಭಟ್ಟರ ಹಾಡು ಗುನುಗುವಂತಿವೆ. ‘ನೀನು ಬಗೆಹರಿಯದ ಹಾಡು ಮತ್ತು ‘ದೇವ್ಲೆ ದೇವ್ಲೆ’ ಹಾಡುಗಳಲ್ಲಿ ಹೊಸತನವಿದೆ.

ಕೊನೇಮಾತು: ಪ್ರಾಯಶಃ ಇದು ಲೈಫಲ್ಲಿ ಜವಾಬ್ದಾರಿ ಇರದ ಹುಡುಗರ ಪಾಲಿಗೆ ಕಾಡುವ ಸಿನಿಮಾ ಆಗಬಹುದೇನೋ?

Related Posts

error: Content is protected !!