ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ “ಐನೂರ”ನೇ ಚಿತ್ರ ಎಂದು ಸದ್ದಾಗಿದ್ದ “ಅಮ್ಮಾ ಟಾಕೀಸ್ ಬಾಗಲಕೋಟೆ” ಸಂಸ್ಥೆಯ ನಿರ್ಮಾಣದ “ನೈಂಟಿ ಬಿಡಿ ಮನೀಗ್ ನಡಿ” ಚಿತ್ರ ರಿಲೀಸಿಗೆ ತಯಾರಾಗುತ್ತಿದ್ದು, ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಗೊಳಿಸಿದೆ.
“A2” ಮ್ಯೂಸಿಕ್ ಚಾನೆಲ್ಲಿಗೆ ಭರ್ಜರಿ ಡಿಮಾಂಡಿನೊಂದಿಗೆ ಆಡಿಯೋ ಮಾರಿಕೊಂಡ ತಂಡ ಆ ಆಡಿಯೋ ಕಂಪೆನಿಯ ಯೂಟ್ಯೂಬ್(A2 Music ) ವಾಹಿನಿಯ ಮೂಲಕ ಟೀಸರ್ ಬಿಟ್ಟುಕೊಂಡಿದೆ.
ವಿಶೇಷವಾಗಿ ಹೆಸರಾಂತ ನಾಯಕನಟ “ಶರಣ್” ಅವರು ಈ ಚಿತ್ರದ ಟೀಸರ್ ಮೆಚ್ಚಿಕೊಂಡು ಬಿಡುಗಡೆಗೆ ಸಾಥ್ ನೀಡಿದ್ದಾರೆ. ಬಿರಾದಾರ್ ರವರು ಶರಣ್ ರವರ ತಂದೆಯ ಒಡನಾಡಿಯಾಗಿದ್ದು ಅದೇ ಅಭಿಮಾನದೊಂದಿಗೆ ” ನೈಂಟಿಗೆ” ಜೊತೆಯಾಗಿದ್ದಾರೆ.
“ನಾವು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು, ಮಿಗಿಲಾಗಿ ಇವರೊಬ್ಬ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು, ಇಂಥವರ ನಟನೆಯ ಐನೂರನೇ ಸಿನಿಮಾ ಎಂಬುದೇ ನಮ್ಮೆಲ್ಲರ ಹೆಮ್ಮೆ” ಎನ್ನುತ್ತಲೇ ಟೀಸರ್ ಬಿಡುಗಡೆಗೊಳಿಸಿದ ಶರಣ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.