Categories
ಸಿನಿ ಸುದ್ದಿ

ಇಂಟ್ರೆಸ್ಟಿಂಗ್ ಮಾಯಾವಿ ಹಿಂದೆ ಶಿವಾಜಿ ! ಕೊಲೆಗಳ ರೋಚ’ಕತೆ’ಯ ಕುತೂಹಲ

ಚಿತ್ರ ವಿಮರ್ಶೆ

ಚಿತ್ರ : ಶಿವಾಜಿ ಸುರತ್ಕಲ್ 2

ನಿರ್ದೇಶನ : ಆಕಾಶ್ ಶ್ರೀವತ್ಸ

ನಿರ್ಮಾಣ: ರೇಖಾ, ಅನೂಪ್ ಗೌಡ
ತಾರಾಗಣ : ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ ಇತರರು.

ರೇಟಿಂಗ್ : 3.5/5


ವಿಜಯ್ ಭರಮಸಾಗರ

ಯಾರವನು…?
ಪೊಲೀಸ್ ಅಧಿಕಾರಿಯಾಗಿರುವ ಆ ನಾಯಕ ಈ ಡೈಲಾಗ್ ಹೇಳುವ ಹೊತ್ತಿಗೆ, ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ನಿಗೂಢ ಕೊಲೆಗಳು ನಡೆದು ಹೋಗಿರುತ್ತವೆ! ಕೊಲೆಗಾರನನ್ನು ಬೆನ್ನತ್ತಿ ಹೋಗುವ ಆ ಪೊಲೀಸ್ ಅಧಿಕಾರಿ ಮತ್ತು ತಂಡಕ್ಕೆ ಐದನೇ ಕೊಲೆ ಮಾಡುವುದಾಗಿ ಚಾಲೆಂಜ್ ಹಾಕುವ ಆ ಕೊಲೆಗಾರ ಯಾರು ಅನ್ನೋದೇ ಈ ಚಿತ್ರದೊಳಗಿನ ಗುಟ್ಟು.

ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ತಿರುವುಗಳೇ ಜೀವಾಳ. ಅಂತಹ ಅನೇಕ ಟ್ವಿಸ್ಟು-ಟೆಸ್ಟುಗಳ ನಡುವೆ ಸಾಗುವ ‘ಶಿವಾಜಿ ಸುರತ್ಕಲ್ 2’, ನಿಜಕ್ಕೂ ಕುತೂಹಲದಲ್ಲೇ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇಂತಹ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಕಥೆಯಲ್ಲಿ ಪಕ್ವತೆ ಇರಬೇಕು. ಅಷ್ಟೇ ಅಲ್ಲ, ಅಷ್ಟೇ ಸೂಕ್ಷ್ಮವಾಗಿ ನಿರೂಪಿಸುವ ಜಾಣ್ಮೆ ಇರಬೇಕು. ಆಗ ಮಾತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾಗಳು ನೋಡುಗನ ಮನ ಗೆಲ್ಲೋಕೆ ಸಾಧ್ಯ. ಅದನ್ನಿಲ್ಲಿ ನಿರ್ದೇಶಕರು ಪರಿಪೂರ್ಣವಾಗಿ ಸಾಧ್ಯವಾಗಿಸಿದ್ದಾರೆ ಅನ್ನೋದು ಸಮಾಧಾನ.

ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆರಂಭದಿಂದ ಕೊನೆವರೆಗೂ ಕುತೂಹಲದಲ್ಲೇ ಸಿನಿಮಾ ಸಾಗುತ್ತದೆ. ಚಿತ್ರ ನೋಡಿ ಹೊರಬಂದ ಬಳಿಕವೂ ಕೊಂಚ ಎದೆ ಭಾರವಾಗಿಸುತ್ತದೆ. ಅಲ್ಲಲ್ಲಿ ಒಂದಷ್ಟು ದೃಶ್ಯಗಳು ಕಾಡುವುದು ಸುಳ್ಳಲ್ಲ. ಹಾಗಾದರೆ ಆ ಕಾಡುವಿಕೆಯ ವಿಶೇಷ ತಿಳಿಯುವ ಕುತೂಹಲವಿದ್ದರೆ ಒಮ್ಮೆ ಶಿವಾಜಿಯ ಇಂಟ್ರೆಸ್ಟಿಂಗ್ ಗೇಮ್ ನೋಡಿಬರಲು ಯಾವುದೇ ಅಡ್ಡಿಯಿಲ್ಲ.

ಕಥೆ ಹೇಳುವ ಮತ್ತು ತೋರಿಸುವ ವಿಧಾನ ಮತ್ತು ಜಾಣತನ ನಿರ್ದೇಶಕರಿಗಿದೆ. ಆ ಕಾರಣಕ್ಕೆ ಸಿನಿಮಾ ಶುರುವಿನಿಂದ ಹಿಡಿದು ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತೆ. ನೋಡುಗನ ಗಮನ ಆಚೀಚೆ ಹೋಗದ ರೀತಿ ಶಿವಾಜಿ ತನ್ನ ಚಾಕಚಕ್ಯತೆ ಮೂಲಕ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕೊಲೆ, ಕೊಲೆಗಾರ ಮತ್ತು ಪೊಲೀಸ್ ಆಟದಲ್ಲಿ ಸಾಗುವ ಸಿನಿಮಾದ ಮೊದಲರ್ಧ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಕೂಡ ಇದಕ್ಕಿಂತಲೂ ಭಿನ್ನ‌ ನಿರೂಪಣೆ ಹಾಗು ಚಿತ್ರಕಥೆಯ ಬಿಗಿಯಾದ ಹಿಡಿತಕ್ಕೆ‌ ಸಾಕ್ಷಿಯಾಗಿದೆ.

ಮುಖ್ಯವಾಗಿ ಇಂತಹ ಕಥೆಗಳಲ್ಲಿ ಚಾಲೆಂಜ್ ಎನಿಸುವ ಸನ್ನಿವೇಶ ಸಹಜ. ಅದನ್ನಿಲ್ಲಿ ತುಂಬಾನೇ ಸಲೀಸಾಗಿ ನಿರ್ವಹಿಸಿರುವ ನಿರ್ದೇಶಕರ ಜಾಣತನ ಕಾಣುತ್ತದೆ. ಒಂದೇ ಕಡೆ ಸುತ್ತದ ಕಥೆಯಲ್ಲಿ ಸಾಕಷ್ಟು ಎಲಿಮೆಂಟ್ಸ್ ಇರುವುದರಿಂದ ಶಿವಾಜಿಗೆ ಒಳ್ಳೆಯ ಮಾರ್ಕ್ಸ್ ಕೊಡಬಹುದು.

ಒಂದು ಪರಿಪೂರ್ಣ ಸಿನಿಮಾಗೆ ಬೇಕಿರೋದು ಕಥೆ, ಚಿತ್ರಕಥೆ, ಮಾತುಕತೆ, ಪಾತ್ರಾಭಿನಯ ಅದಕ್ಕೆ ಪೂರಕವಾಗಿರುವ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ. ಇಲ್ಲಿ ಎಲ್ಲವೂ ಸರಿಯಾಗಿ ಹೆಗಲು ಕೊಟ್ಟಿರುವುದರಿಂದ ಶಿವಾಜಿ ತನ್ನ ಫೋಕಸ್ ಜೊತೆ ವೇಗ ಕಳೆದುಕೊಂಡಿಲ್ಲ.

ಸಿನಿಮಾ ನೋಡುವಾಗ ಎಲ್ಲೋ ಒಂದು ಕಡೆ ಗೊಂದಲ ಆಗೋದು ದಿಟ. ಅ ಎಲ್ಲಾ ಗೊಂದಲಗಳಿಗೂ ನಿರ್ದೇಶಕರು ಉತ್ತರಿಸುತ್ತ ಹೋಗುತ್ತಾರೆ. ಒಮ್ಮೊಮ್ಮೆ ಅದು ಹಾರರ್ ಕಥೆನಾ ಎನಿಸಿದರೂ ಒಂದೊಂದು‌ ತಿರುವು ಹೊಸ ಬಗೆಯ ರೂಪ ಪಡೆದುಕೊಳ್ಳುತ್ತ ಹೋಗುತ್ತೆ. ಇನ್ನು, ಕತ್ತಲು ಬೆಳಕಿನಾಟದ ಕಳ್ಳ ಪೊಲೀಸ್ ಆಟ ನೋಡೋಕೆ ಚಂದವಾದರೂ, ಅಲ್ಲಲ್ಲಿ ಕೇಳಿ ಬರುವ ಹಿನ್ನೆಲೆ ಸಂಗೀತ ಸಿನಿಮಾವೊಂದನ್ನು ನೆನಪಿಸುತ್ತದೆ. ಉಳಿದಂತೆ ಶಿವಾಜಿ ನೋಡುಗನ ಎರಡು ಗಂಟೆ ಸಮಯ ವ್ಯರ್ಥ ಮಾಡಲ್ಲ.

ಕಥೆ ಏನು?

ಆರಂಭದಲ್ಲೇ ನಾಯಕ ಪೊಲೀಸ್ ಅಧಿಕಾರಿ ಎದುರು ಒಂದು ಕೊಲೆ ನಡೆದು ಹೋಗುತ್ತೆ. ನಂತರ ಹುಡುಗಿಯೊಬ್ಬಳ ಹತ್ಯೆ. ಬಳಿಕ‌ಮತ್ತೊಂದು ಹುಡುಗಿಯ ಕೊಲೆ, ನೋಡುತ್ತಿದ್ದಂತೆ ಒಬ್ಬ ಅಧಿಕಾರಿ ಕೊಲೆ… ಆ ಕೊಲೆಗಾರನ ಬೆನ್ನು ಹತ್ತಿ ಹೋಗುವ ನಾಯಕನಿಗೆ
ಆ ಮಾಯಾವಿ ಯಾರು ಎಂಬ ಪ್ರಶ್ನೆ. ಕೊಲೆಗಾರ ಇನ್ನೂ ಒಂದು ಕೊಲೆ ಆಗುತ್ತೆ ಸಾಧ್ಯವಾದರೆ ತಪ್ಪಿಸು ಎಂಬ ಸವಾಲು ಹಾಕುತ್ತಾನೆ. ಆಮೇಲೆ ನಡೆಯೋದೇ ರೋಚಕ. ಈ ನಡುವೆ ಅಪ್ಪ ಮಗನ ಬಾಂಧವ್ಯ, ಹೆಂಡತಿಯ ಕಾಳಜಿ, ಮಗಳ ಮೇಲಿರುವ ಅಪ್ಪನ ಪ್ರೀತಿ… ಇತ್ಯಾದಿ ಕಥೆಯ ತಿರುಳು.

ಆ ಮಾಯಾವಿ ಯಾರು ಎಂಬ ಪ್ರಶ್ನೆ ನೋಡುಗರಲ್ಲೂ ಹುಟ್ಟಿಸಿ, ಕೊನೆಗೊಂದು ಅಂತ್ಯ ಕಾಣಿಸೋದೆ ಶಿವಾಜಿಯ ಗೇಮ್‌ ಪ್ಲಾನ್. ಕೊನೆಗೆ ಕೊಲೆಗಾರ ಯಾರು? ಯಾಕಾಗಿ ಕೊಲೆ ಮಾಡ್ತಾನೆ ಎಂಬುದು ತಿಳಿಯಬೇಕಾದರೆ ಮಿಸ್ ಮಾಡದೆ ಒಳ್ಳೇ ಥ್ರಿಲ್ ಪಡೆಯಬಹುದು.

ಯಾರು ಹೇಗೆ?


ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ತ್ಯಾಗಮಯಿ ನಟ ಎಂಬ ಟ್ಯಾಗ್ ಲೈನ್ ಇರುವ ರಮೇಶ್ ನಿಜಕ್ಕೂ ಇಲ್ಲಿ ಅದನ್ನು ಮರೆಸುವಂತಹ ನಟನೆ ಮಾಡಿದ್ದಾರೆ. ಒಬ್ಬ ಪಕ್ಕಾ ಪೊಲೀಸ್ ಅಧಿಕಾರಿಯಾಗಿ, ಮಗಳಿಗೆ ಪ್ರೀತಿಯ ಅಪ್ಪನಾಗಿ ಎಂದಿಗಿಂತ ಇಷ್ಟವಾಗುತ್ತಾರೆ.
ರಾಧಿಕಾ ನಾರಾಯಣ್, ಕಾಳಜಿ ತೋರುವ ಹೆಂಡತಿಯಾಗಿ ಗಮನ ಸೆಳೆದಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಸಾಥ್ ನೀಡಿದರೆ, ಬೇಬಿ ಅರಾಧ್ಯ, ರಾಘು ರಾಮನಕೊಪ್ಪ ಸಿನಿಮಾದ ಭಾಗವಾಗಿದ್ದಾರೆ. ವಿನಾಯಕ ಜೋಷಿ, ವಿದ್ಯಾಮೂರ್ತಿ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ.

ಜೂಡಾ ಸ್ಯಾಂಡಿ ಸಂಗೀತ ಹೇಳಿಕೊಳ್ಳುವಂತಿಲ್ಲ. ಇರುವ ಯಾವ ಹಾಡು ಗುನುಗುವಂತಿಲ್ಲ. ಗುರು ಪ್ರಸಾದ್, ಮಧು ಅಂಬಟ್ ಅವರ ಕ್ಯಾಮೆರಾ ಕೈಚಳಕ ಶಿವಾಜಿಯ ಅಂದ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಕೋಮಲ್ ಮಾಡಿದ ಸಿಹಿ ಉಂಡೆ: ಹಾಸ್ಯವೇ ನಾಮಬಲದ ತಾಕತ್ತು; ಭರ್ಜರಿ ಇನ್ನಿಂಗ್ಸ್ ಗೆಲ್ಲಲು ಜೋರು ತಯಾರಿ

ಕೋಮಲ್ ಅಂದಾಕ್ಷಣ ನೆನಪಾಗೋದೇ ನಗು ಮತ್ತು‌ ನಗು. ಕನನ್ಡ ಸಿನಿಮಾರಂಗದಲ್ಲಿ ಬಿಡುವಿಲ್ಲದಂತಹ ಹಾಸ್ಯ ನಟರೆಂದೇ ಕರೆಸಿಕೊಳ್ಳುವ ಕೋಮಲ್, ತೆರೆಮೇಲೆ ನೋಡುಗರಲ್ಲಿ ಕಚಗುಳಿ ಇಟ್ಟು, ಅಪ್ಪಟ ಮನದುಂಬಿ ನಗಿಸೋ ನಟರು. ಅವರ ಡೈಲಾಗ್ ಹರಿಬಿಡುವುದಿರಲಿ, ಮ್ಯಾನರಿಸಂ ಆಗಲಿ, ಟೈಮಿಂಗ್ ಆಗಲಿ ಎಲ್ಲವೂ ಅಲ್ಟಿಮೇಟ್. ಯಾವುದೇ ಪಾತ್ರವಿರಲಿ ಸಲೀಸಲಾಗಿ ನಿರ್ವಹಿಸಿ ಆ. ಸನ್ನಿವೇಶವನ್ನು ಅಷ್ಟೇ ಸುಲಭಗೊಳಿಸುವ ಜಾಣತನ ಅವರದು.

ಕೋಮಲ್ ಹಾಸ್ಯ ನಟರಾಗಿಯೇ ಸದ್ದು ಮಾಡಿದವರು. ನಂತರ ಅವರು ಹೀರೋ ಆಗಿಯೂ ಸುದ್ದಿ ಆಗಿದ್ದುಂಟು. ಬಹು‌ಬೇಡಿಕೆಯ ನಟರಾಗಿದ್ದ ಕೋಮಲ್, ಒಂದಷ್ಟು ಸೋಲು ಒಪ್ಪಿಕೊಂಡರು. ಅವರ ಫ್ಯಾನ್ಸ್ ಕೂಡ ಕೋಮಲ್ ಅವರ ನಿರ್ಧಾರಕ್ಕೆ ಜೈ ಎಂದರು. ಅಭಿಮಾನಿಗಳಿಗೆ ಖುಷಿಪಡಿಸಬೇಕು ಅಂತಾನೇ ತರಹೇವಾರಿ ಸಿನಿಮಾ ಮಾಡಿಕೊಂಡು‌ ಬಂದ ಕೋಮಲ್, ಒಂದಷ್ಟು ಗ್ಯಾಪ್ ಪಡೆದರು. ಅಭಿಮಾನಿಗಳ ಒತ್ತಡ ಹೆಚ್ಚಾದಂತೆ ಪುನಃ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಿದರು.

ಕೋಮಲ್ ಈಗ ಬಹು ನಿರೀಕ್ಷೆಯ ಸಿನಿಮಾ ಕೊಡುತ್ತಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಮೂಡಿಸಿರುವ ಅವರ ‘ ಉಂಡೆನಾಮ’ ಏಪ್ರಿಲ್14ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

‘ಉಂಡೆನಾಮ’ ಹೆಸರೇ ಹೇಳುವಂತೆ ಪಕ್ಕಾ ಹಾಸ್ಯಮಯ ಕಥೆಯ ಹೂರಣ ಇರುವ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ಉಂಡೆನಾಮ, ಒಂದೊಳ್ಳೆಯ ಕಥಾಹಂದರದೊಂದಿಗೆ ನೋಡುಗರನ್ನು ನಗಿಸೋಕೆ ಬರುತ್ತಿದೆ.

ಕೋಮಲ್ ಈ ಸಿನಿಮಾ ಮೂಲಕ ಭರ್ಜರಿ ಇನ್ನಿಂಗ್ಸ್ ಶುರು ಮಾಡಲು ಅಣಿಯಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಬಹುದಿನಗಳ ಬಳಿಕ ಕಚಗುಳಿ ಇಡಲು ಬರುತ್ತಿದ್ದಾರೆ. ಆ ದಿನಗಳಿಗೆ ನೋಡುಗರನ್ನು ಕರೆದೊಯ್ಯಲು ಸಜ್ಜಾಗಿರುವ ಕೋಮಲ್, ಉಂಡೆನಾಮ ಮೂಲಕ ಮತ್ತೆ ಅದೇ ಜಯದ ಟ್ರ್ಯಾಕ್ ಗೆ ಮರಳುವ ಉತ್ಸಾಹದಲ್ಲಿದ್ದಾರೆ.

ಡಾ.ಟಿ ಆರ್ ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್. ಕೆ. ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಂದಕಿಶೋರ್ ಸಿ. ನಿರ್ಮಿಸಿದ್ದಾರೆ. ಕೆ.ಎಲ್. ರಾಜಶೇಖರ್ ನಿರ್ದೇಶನವಿದೆ. ನವೀನ್ ಕುಮಾರ್ ಎಸ್ ಛಾಯಾಗ್ರಹಣವಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

ಕೋಮಲ್ ಜೊತೆ ಧನ್ಯ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು “ಉಂಡೆನಾಮ” ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶಿವಾಜಿ ಜಾಣತನಕ್ಕೆ ಆಕಾಶ್ ಶ್ರೀವತ್ಸ ಕಾರಣ! ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಹೆಚ್ಚಿದ ಕುತೂಹಲ

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಟ್ರೇಲರ್ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಸಿನಿಮಾ ಕೂಡ ನೋಡುವ ಕಾತುರ ಹೆಚ್ಚಿಸಿದೆ ಏಪ್ರಿಲ್ 14ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಇಂತಹ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಿರೋದು. ನಿರೂಪಣೆ. ನಿರ್ದೇಶಕ ಆಕಾಶ್ ಶ್ರಿವತ್ಸ ವಿಶೇಷ ಎನ್ನುವಂತೆ ಈ ಸಿನಿಮಾದ ನಿರೂಪಣೆಯ ಜವಾಬ್ದಾರಿ ಹೊತ್ತು ನೋಡುಗರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಂದಹಾಗೆ, ಕೋವಿಡ್ ಸಮಯದಲ್ಲಿ ಅವರಿಗೆ ಈ ಕಥೆ ಹೊಳೆದಿದೆ. ಕಥೆ ಲೈನ್ ಹೊಳೆದಿದ್ದೇ ತಡ,. ಪ್ರತಿ ದಿನವೂ ರಮೇಶ್ ಅರವಿಂದ್ ಅವರ ಜೊತೆ ಫೋನ್ ನಲ್ಲಿ ಕಥೆ ಬಗ್ಗೆ ಚರ್ಚಿಸಿ ಅದಕ್ಕೊಂದು ರೂಪ ಕೊಡಲು ಸಾಧ್ಯವಾದ ಬಗ್ಗೆ ಹೇಳುತ್ತಾರೆ ಅವರು.

ಅಂದಹಾಗೆ, ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆರಂಭದಿಂದ ಕೊನೆಯವರೆಗೂ ಕುತೂಹಲ ಕಾದಿರಿಸಿಯೇ ಸಿನಿಮಾ ಸಾಗುತ್ತದೆ. ಸಿನಿಮಾ ಮುಗಿದ ಬಳಿಕವೂ ಒಂದಷ್ಟು ಕಾಡುತ್ತದೆ. ಅಲ್ಲೊಂದು ಮಾಯಾವಿ ಜಗತ್ತು.ಲ ಇದೆ. ಆ ಮಾಯಾವಿ ಯಾರು ಎಂಬುದೇ ನಿಗೂಢ.‌ಅದನ್ನು ಅರಿಯಬೇಕಾದರೆ ಸಿನಿಮಾ‌ ನೋಡಬೇಕು ಎಂಬುದು ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಮಾತು.

ನಟ ರಮೇಶ್ ಅರವಿಂದ್ ಈ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಕಾರಣ, ಸಿನಿಮಾದ ಕಥೆ ಹಾಗು ನಿರೂಪಣೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಉತ್ಸಾಹ ದೊಡ್ಡದು ಎಂಬುದು ರಮೇಶ್ ಅರವಿಂದ್ ಮಾತು

ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಚಿತ್ರದ ನಿರ್ಮಾಪಕರು. ಪಾಸಿಟಿವ್ ಟೀಂ ಜೊತೆಗೂಡಿ ಮಾಡಿರುವ ಸಿನಿಮಾ ಇದಾಗಿರುವುದರಿಂದ ಯಶಸ್ಸು ಗ್ಯಾರಂಟಿ ಎಂಬ ನಂಬಿಕೆ ಆವರದು.

ಮೇಘನಾ ಗಾಂವ್ಕರ್, ರಾಧಿಕಾ ನಾರಾಯಣ್ ಹಾಗೂ ಸಂಗೀತ ಶೃಂಗೇರಿ ಪ್ರಮುಖ ಆಕರ್ಷಣೆ.
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ, ನಿಧಿ ಹೆಗಡೆ,
ಪುನೀತ್ ಬಿ.ಎ ಮೊದಲಾದ ಕಲಾವಿದರು ಚಿತ್ರದಲ್ಲಿದ್ದಾರೆ.

ಏಪ್ರಿಲ್ 14 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿರುವ ಸಿನಿಮಾ, ಸದ್ಯ ನಿರೀಕ್ಷೆ ಹೆಚ್ಚಿಸಿರುವುದಂತೂ ಗ್ಯಾರಂಟಿ.

Categories
ಸಿನಿ ಸುದ್ದಿ

ಈ ವಾರ ಕೋಮಲ್ ಸಿನಿಮಾ: ಉಂಡೆ ನಾಮ

ಬಹು ದಿನಗಳ ನಂತರ ಖ್ಯಾತ ನಟ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಉಂಡೆನಾಮ ” ಚಿತ್ರ ಈ ವಾರ(ಏಪ್ರಿಲ್14) ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಡಾ.ಟಿ ಆರ್ ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್ ಕೆ ಸ್ಟುಡಿಯೋಸ್ ಲಾಂಛನದಲ್ಲಿ ನಂದಕಿಶೋರ್ ಸಿ ನಿರ್ಮಿಸಿದ್ದಾರೆ. ಕೆ.ಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

ನವೀನ್ ಕುಮಾರ್ ಎಸ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ಕೋಮಲ್ ಕುಮಾರ್ (ನಾಯಕ), ಧನ್ಯ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು “ಉಂಡೆನಾಮ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಗೆಜ್ಜೆನಾದ ವಿಜಯ್ ಕುಮಾರ್ ಈಗ ನಿರ್ಮಾಪಕ! ಏಪ್ರಿಲ್ 13 ರಂದು ಟೈಟಲ್ ರಿಲೀಸ್

“ಗೆಜ್ಜೆನಾದ”, ” ನಂದ ಲವ್ಸ್ ನಂದಿತಾ”, “ಕನ್ನಡದ ಕಂದ”, “ಆಟ” ಮುಂತಾದ ಸೂಪರ್ ಹಿಟ್ ಚಿತ್ರಗಳ ಹಾಗೂ ಕಿರುತೆರೆಯ ಸಾಕಷ್ಟು ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಬಿ.ಎನ್. ವಿಜಯ್ ಕುಮಾರ್ (ಗೆಜ್ಜೆನಾದ) ಈಗ ನಿರ್ಮಾಪಕರಾಗಿದ್ದಾರೆ. ಅಥರ್ವ್ ಪಿಕ್ಚರ್ಸ್ ಅಡಿಯಲ್ಲಿ ಧರ್ಮೇಂದ್ರ ಎಂ ರಾವ್ ಅವರ ಜೊತೆಯಾಗಿ ನೂತನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಏಪ್ರಿಲ್ 13 ರಂದು ಬಿಡುಗಡೆಯಾಗಲಿದೆ.

ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಮೂರು ವಿಭಿನ್ನ ಕಥೆಗಳು ಚಿತ್ರದಲ್ಲಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ.

ಬಿ.ಎನ್.ವಿಜಯ್ ಕುಮಾರ್ ಅವರ ಪುತ್ರ ಅಥರ್ವ್ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ “ಪುನರ್ ವಿವಾಹ” ಹಾಗೂ “ಪತ್ತೆದಾರಿ ಪ್ರತಿಭಾ” ದಲ್ಲಿ ಅಥರ್ವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಚಿತ್ರದ ಮೂಲಕ ಅಥರ್ವ್ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನು ಅಥರ್ವ್ ಅವರೆ ಬರೆದಿದ್ದಾರೆ. ಚಿತ್ರಕಥೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಅವರದು. “ಕನ್ನಡತಿ” ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ.ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಸಾಕಷ್ಟು ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರಮೇಶ್ ಅರವಿಂದ್ ಮತ್ತೆ ಬರ್ತಾರೆ: ಶಿವಾಜಿ ಸುರತ್ಕಲ್ 2 ಏಪ್ರಿಲ್ 14ಕ್ಕೆ ಬಿಡುಗಡೆ

2020ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಇದೇ ಶುಕ್ರವಾರ (ಏಪ್ರಿಲ್ 14) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.


ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಹೂರಣ.
‘ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ.

ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ರಿಷಿ ಹೊಸ ಅವತಾರ! ರಾಮನಾಗಿ ಕಚಗುಳಿ ಇಟ್ಟ ಹುಡುಗನ ಸಿನಿಮಾ ಟೀಸರ್ ರಿಲೀಸ್

ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ಮೂಲಕ ನಿರ್ದೇಶಕ ವಿಕಾಸ್ ಪಂಪಾಪತಿ ಭರಪೂರ ನಗುವಿನ ಮ್ಯಾಜಿಕ್ಕನ್ನು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ರಿಷಿ ಪಂಚಿಂಗ್ ಸಂಭಾಷಣೆ ಮೂಲಕ ನೋಡುಗರನ್ನು‌ ನಕ್ಕು ನಲಿಸುತ್ತಾರೆ. ಇವರಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಟೀಸರ್ ರಿಲೀಸ್ ಬಳಿಕ ಮಾತಾನಾಡಿದ ರಿಷಿ, ಸಾಮಾನ್ಯವಾಗಿ ಕಾಮಿಡಿ ಕಷ್ಟವಾದ ಜಾನರ್. ಅದರಲ್ಲಿ ಡಬಲ್ ಮೀನಿಂಗ್ ಮಾಡಬಹುದು. ಬೇರೆಯವರನ್ನು ನಿಂದಿಸಿ ಕಾಮಿಡಿ ಮಾಡಬಹುದು. ಡಬಲ್ ಮೀನಿಂಗ್ ಇಲ್ಲದೇ. ಯಾರಿಗೂ ನಿಂದಿಸದೆ ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್‌ ಪಂಪಾಪತಿ ಉದಾಹರಣೆ. ನಾನು ಈ ಸಿನಿಮಾವನ್ನು ತುಂಬಾ ಮಜಾಕೊಂಡು ಮಾಡಿದ್ದೇನೆ. ನನಗೆ ಖುಷಿ ಕೊಟ್ಟ ಸಿನಿಮಾ. ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅವರೆಲ್ಲರ ಎನರ್ಜಿ ನೋಡಿ ನನಗೆ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿನಿಮಾ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ.

ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್ ಪಂಪಾಪತಿ, ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆಯೆಂದು ಹೇಳಿದ್ದಾರೆ.
ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೆ ಸಿನಿಮಾವನ್ನು ಮಾಡಿದ್ದು ಕನ್ನಡ ಸಿನಿ ರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ, ಪ್ರೇಕ್ಷಕರಿಗೆ ಮನೋರಂಜನೆ ಕೊಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ವಿಕಾಸ್‌ ಪಂಪಾಪತಿ “ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಮರೇಜ್‌ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ರಾಮನ ಅವತಾರ ಸಿನಿಮಾಗೆ ವಿಷ್ಣುಪ್ರಸಾದ್‌ ಹಾಗೂ ಸಮೀರ್‌ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್‌ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್‌ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಚಿತ್ರತಂಡ ಜೂನ್‌ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಅನ್ ಲಾಕ್ ರಾಘವನಿಗೆ ಮಾತುಕತೆ: ಪಿ ಆರ್ ಕೆ ಸ್ಟುಡಿಯೋದಲ್ಲಿ ಡಬ್ಬಿಂಗ್ ಶುರು…

ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಚಲನಚಿತ್ರದ ಡಬ್ಬಿಂಗ್ ಪಿ.ಆರ್.ಕೆ. ಆಡಿಯೋ ಸ್ಟುಡಿಯೋದಲ್ಲಿ ಆರಂಭವಾಗಿದೆ. ಈ ಸಿನಿಮಾದ ನಾಯಕಿ ರೇಚಲ್ ಡೇವಿಡ್ ತಮ್ಮ ಪಾತ್ರಕ್ಕಾಗಿ ಕನ್ನಡ ಪದಗಳ ಉಚ್ಛಾರಣೆಯನ್ನು ಕಲಿತು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿರುವುದು ವಿಶೇಷ. ತನ್ನ ಈ ಪ್ರಯತ್ನಕ್ಕೆ ಅನ್ಲಾಕ್ ರಾಘವ ಚಲನಚಿತ್ರ ತಂಡ ತುಂಬಾ ಸಹಕಾರ ನೀಡುತ್ತಿದೆ ಎಂದು ನಾಯಕಿ ರೇಚಲ್ ಡೇವಿಡ್ ಹರ್ಷ ವ್ಯಕ್ತಪಡಿಸಿದ್ದಾರೆ.

ಅನ್ ಲಾಕ್ ರಾಘವ ಚಿತ್ರತಂಡ ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ 60 ದಿನಗಳ ಕಾಲ ಸಿನಿಮಾ ಶೂಟಿಂಗ್ ನಡೆಸಿದೆ. ಅನ್ ಲಾಕ್ ರಾಘವದಲ್ಲಿ ಚಿತ್ರ ಸಿನಿಗೀತೆ ಪ್ರೇಮಿಗಳಿಗಾಗಿಯೇ ಕುಣಿಸಿ-ತಣಿಸುವ ಮೂರು ಹಾಡುಗಳ ರಸದೌತಣವಿದ್ದರೆ, ಆ್ಯಕ್ಷನ್ ಪ್ರಿಯರಿಗಾಗಿ ಬರೋಬ್ಬರಿ ನಾಲ್ಕು ವಿಭಿನ್ನ ಫೈಟ್ ಗಳ ಸಖತ್ ಮನರಂಜನೆಯಿದೆ ಎಂದು ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ ಮಾಹಿತಿ ನೀಡಿದ್ದಾರೆ. ಜೊತೆಗೆ “ನಿರ್ದೇಶಕ, ಫೈಟ್ ಮಾಸ್ಟರ್, ನೃತ್ಯ ನಿರ್ದೇಶಕರು ಮೂವರೂ ಒಂದು ವಿಶೇಷ ಗೀತೆಯನ್ನು ವಿಭಿನ್ನವಾಗಿ ಒಟ್ಟಾಗಿ ಸಂಯೋಜಿಸಿದ್ದು, ಅದ್ಭುತವಾಗಿ ಮೂಡಿಬಂದಿದೆ” ಎಂದೂ ಕೂಡ ಹೇಳಿದ್ದಾರೆ.

ಇತ್ತೀಚಿಗಷ್ಟೇ ಯುಗಾದಿ ಹಬ್ಬದ ವಿಶೇಷವಾಗಿ ‘ಅನ್ ಲಾಕ್ ರಾಘವ’ ಚಿತ್ರತಂಡ ಬಿಡುಗಡೆ ಮಾಡಿದ್ದ ಸಿನಿಮಾದ ಎರಡನೆಯ ಪೋಸ್ಟರ್ ಕೂಡ ವೈರಲ್ ಆಗಿದೆ. ‘ಅನ್ಲಾಕ್ ರಾಘವ’ ಸಿನಿಮಾವನ್ನು, ಇದೇ ವರ್ಷ ಜುಲೈ ಅಂತ್ಯದ ಒಳಗಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.

‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದೆ.

ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ದೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Categories
ಸಿನಿ ಸುದ್ದಿ

ಎಲ್ರ ಕಾಲೆಳೆಯೋಕೆ ಬಂದ್ರು ರಾಗಿಣಿ! ಸಿನಿಮಾ ಪ್ರಮೋಷನ್ ಹಾಡಿಗೆ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ ತುಪ್ಪದ ಹುಡುಗಿ

ಉಷಾ ಗೋವಿಂದರಾಜು ನಿರ್ಮಾಣದ, ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಪ್ರಮೋಷನ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಅವರ ಜೊತೆ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರೆ ಈ ಹಾಡನ್ನು ಬರೆದಿದ್ದು, ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಹಾಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಮಾತ್ರ ಚಂದನ್ ಶೆಟ್ಟಿ ಅವರೆ ಸಂಗೀತ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಈ ಚಿತ್ರದ ಸಂಗೀತ ನಿರ್ದೇಶಕರು.

ನಾನು “ಕೆಂಪೇಗೌಡ” ಚಿತ್ರದಿಂದಲೂ ರಾಗಿಣಿ ಅವರ ಅಭಿಮಾನಿ. ಈಗ ಅವರ ಜೊತೆ ಹಾಡೊಂದರಲ್ಲಿ ನಟಿಸಿರುವುದು ಸಂತೋಷವಾಗಿದೆ. ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲಲ್ಲಿದೆ. ಇದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಚಂದನ್ ಶೆಟ್ಟಿ.

ಈ ಹಾಡು ಚೆನ್ನಾಗಿದೆ. ಚಂದನ್ ಶೆಟ್ಟಿ ಪ್ರತಿಭಾವಂತ. ಅವರು ಸಂಗೀತ ನೀಡಿ, ಹಾಡುವ ಹಾಡುಗಳು ನನಗೆ ಇಷ್ಟ‌. ಬಹಳ ದಿನಗಳಿಂದ ಅವರ ಜೊತೆ ನಟಿಸುವ ಕುರಿತು ಮಾತುಕತೆ ನಡೆಯುತ್ತಿತ್ತು. ಈಗ ಈ ಚಿತ್ರದ ಪ್ರಮೋಷನ್ ಸಾಂಗ್ ನಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ ಎಂದು ತಿಳಿಸಿದ ನಟಿ ರಾಗಿಣಿ ದ್ವಿವೇದಿ, ಚಿತ್ರಕ್ಕೆ ಶುಭ ಕೋರಿದರು.

ಇದು 80/90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಈ ಕಥೆಯನ್ನು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಗೋವಿಂದರಾಜು ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ಧನ್ಯವಾದ. ಸದ್ಯದಲ್ಲೇ ನಿಮ್ಮ ಮುಂದೆ ಬರುತ್ತೇವೆ ಎಂದು ನಿರ್ದೇಶಕ ಸುಜಯ್ ಶಾಸ್ತ್ರಿ ತಿಳಿಸಿದರು.

ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈ ಹಾಡು ಹಾಗೂ ಚಿತ್ರ ನೋಡಿ ಸಂತೋಷವಾಗಿದೆ. ನಾವು ಅಂದಕೊಂಡದಿಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಿರ್ಮಾಪಕ ಗೋವಿಂದರಾಜು.

ನಾಯಕಿ ಅರ್ಚನಾ ಕೊಟ್ಟಿಗೆ ಚಿತ್ರದಲ್ಲಿ ನಟಿಸಿರುವ ರಜನಿಕಾಂತ್, ರಾಕೇಶ್ ಪೂಜಾರಿ, ಕಥೆ ಬರೆದಿರುವ ರಾಜ್ ಗುರು, ಛಾಯಾಗ್ರಹಕ ವಿಶ್ವಜಿತ್ ರಾವ್ ಚಿತ್ರದ ಕುರಿತು ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿದ್ದ ಚಿತ್ರರಂಗದ ಗಣ್ಯರು ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಯೋಗಿ ಸಿನಿಮಾಗೆ ಡಾಲಿ ಶುಭಾಶಯ: ರೋಜಿ ಚಿತ್ರದ ಶೀರ್ಷಿಕೆ ರಿಲೀಸ್ ಮಾಡಿದ ಧನಂಜಯ

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ.
ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ಇತ್ತೀಚೆಗೆ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಡಾಲಿ ಧನಂಜಯ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

” ಹೆಡ್ ಬುಷ್” ಚಿತ್ರದ ನಂತರ ಶೂನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ.

ಯೋಗಿ ನನ್ನ ಆತ್ಮೀಯ ಗೆಳೆಯ. “ರೋಜಿ” ಯೋಗಿ ಅಭಿನಯದ 50ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ “ಹೆಡ್ ಬುಷ್” ಚಿತ್ರ ನಿರ್ದೇಶನ ಮಾಡಿದ್ದರು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಡಾಲಿ ಹಾರೈಸಿದರು.

ಇದು ನನ್ನ ಐವತ್ತನೇ ಚಿತ್ರ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯ ಅವರಿಗೆ ಧನ್ಯವಾದ ಎಂದರು ನಾಯಕ ಯೋಗಿ.

ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರ ಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ “ರೋಜಿ” ಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೆ “ರೋಜಿ”. ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ.

ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ. ಮೇ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶೂನ್ಯ ತಿಳಿಸಿದರು.

ನಿರ್ಮಾಪಕ ಡಿ.ವೈ.ರಾಜೇಶ್ ಆಗಮಿಸಿದ ಗಣ್ಯರಿಗೆ ಧನ್ಯವಾದ ಹೇಳಿದರು.

error: Content is protected !!