ಕೋಮಲ್ ಅಂದಾಕ್ಷಣ ನೆನಪಾಗೋದೇ ನಗು ಮತ್ತು ನಗು. ಕನನ್ಡ ಸಿನಿಮಾರಂಗದಲ್ಲಿ ಬಿಡುವಿಲ್ಲದಂತಹ ಹಾಸ್ಯ ನಟರೆಂದೇ ಕರೆಸಿಕೊಳ್ಳುವ ಕೋಮಲ್, ತೆರೆಮೇಲೆ ನೋಡುಗರಲ್ಲಿ ಕಚಗುಳಿ ಇಟ್ಟು, ಅಪ್ಪಟ ಮನದುಂಬಿ ನಗಿಸೋ ನಟರು. ಅವರ ಡೈಲಾಗ್ ಹರಿಬಿಡುವುದಿರಲಿ, ಮ್ಯಾನರಿಸಂ ಆಗಲಿ, ಟೈಮಿಂಗ್ ಆಗಲಿ ಎಲ್ಲವೂ ಅಲ್ಟಿಮೇಟ್. ಯಾವುದೇ ಪಾತ್ರವಿರಲಿ ಸಲೀಸಲಾಗಿ ನಿರ್ವಹಿಸಿ ಆ. ಸನ್ನಿವೇಶವನ್ನು ಅಷ್ಟೇ ಸುಲಭಗೊಳಿಸುವ ಜಾಣತನ ಅವರದು.
ಕೋಮಲ್ ಹಾಸ್ಯ ನಟರಾಗಿಯೇ ಸದ್ದು ಮಾಡಿದವರು. ನಂತರ ಅವರು ಹೀರೋ ಆಗಿಯೂ ಸುದ್ದಿ ಆಗಿದ್ದುಂಟು. ಬಹುಬೇಡಿಕೆಯ ನಟರಾಗಿದ್ದ ಕೋಮಲ್, ಒಂದಷ್ಟು ಸೋಲು ಒಪ್ಪಿಕೊಂಡರು. ಅವರ ಫ್ಯಾನ್ಸ್ ಕೂಡ ಕೋಮಲ್ ಅವರ ನಿರ್ಧಾರಕ್ಕೆ ಜೈ ಎಂದರು. ಅಭಿಮಾನಿಗಳಿಗೆ ಖುಷಿಪಡಿಸಬೇಕು ಅಂತಾನೇ ತರಹೇವಾರಿ ಸಿನಿಮಾ ಮಾಡಿಕೊಂಡು ಬಂದ ಕೋಮಲ್, ಒಂದಷ್ಟು ಗ್ಯಾಪ್ ಪಡೆದರು. ಅಭಿಮಾನಿಗಳ ಒತ್ತಡ ಹೆಚ್ಚಾದಂತೆ ಪುನಃ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಿದರು.
ಕೋಮಲ್ ಈಗ ಬಹು ನಿರೀಕ್ಷೆಯ ಸಿನಿಮಾ ಕೊಡುತ್ತಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಮೂಡಿಸಿರುವ ಅವರ ‘ ಉಂಡೆನಾಮ’ ಏಪ್ರಿಲ್14ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.
‘ಉಂಡೆನಾಮ’ ಹೆಸರೇ ಹೇಳುವಂತೆ ಪಕ್ಕಾ ಹಾಸ್ಯಮಯ ಕಥೆಯ ಹೂರಣ ಇರುವ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ಉಂಡೆನಾಮ, ಒಂದೊಳ್ಳೆಯ ಕಥಾಹಂದರದೊಂದಿಗೆ ನೋಡುಗರನ್ನು ನಗಿಸೋಕೆ ಬರುತ್ತಿದೆ.
ಕೋಮಲ್ ಈ ಸಿನಿಮಾ ಮೂಲಕ ಭರ್ಜರಿ ಇನ್ನಿಂಗ್ಸ್ ಶುರು ಮಾಡಲು ಅಣಿಯಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಬಹುದಿನಗಳ ಬಳಿಕ ಕಚಗುಳಿ ಇಡಲು ಬರುತ್ತಿದ್ದಾರೆ. ಆ ದಿನಗಳಿಗೆ ನೋಡುಗರನ್ನು ಕರೆದೊಯ್ಯಲು ಸಜ್ಜಾಗಿರುವ ಕೋಮಲ್, ಉಂಡೆನಾಮ ಮೂಲಕ ಮತ್ತೆ ಅದೇ ಜಯದ ಟ್ರ್ಯಾಕ್ ಗೆ ಮರಳುವ ಉತ್ಸಾಹದಲ್ಲಿದ್ದಾರೆ.
ಡಾ.ಟಿ ಆರ್ ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್. ಕೆ. ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಂದಕಿಶೋರ್ ಸಿ. ನಿರ್ಮಿಸಿದ್ದಾರೆ. ಕೆ.ಎಲ್. ರಾಜಶೇಖರ್ ನಿರ್ದೇಶನವಿದೆ. ನವೀನ್ ಕುಮಾರ್ ಎಸ್ ಛಾಯಾಗ್ರಹಣವಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಕೋಮಲ್ ಜೊತೆ ಧನ್ಯ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು “ಉಂಡೆನಾಮ” ಚಿತ್ರದಲ್ಲಿದ್ದಾರೆ.