ಇಂಟ್ರೆಸ್ಟಿಂಗ್ ಮಾಯಾವಿ ಹಿಂದೆ ಶಿವಾಜಿ ! ಕೊಲೆಗಳ ರೋಚ’ಕತೆ’ಯ ಕುತೂಹಲ

ಚಿತ್ರ ವಿಮರ್ಶೆ

ಚಿತ್ರ : ಶಿವಾಜಿ ಸುರತ್ಕಲ್ 2

ನಿರ್ದೇಶನ : ಆಕಾಶ್ ಶ್ರೀವತ್ಸ

ನಿರ್ಮಾಣ: ರೇಖಾ, ಅನೂಪ್ ಗೌಡ
ತಾರಾಗಣ : ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ ಇತರರು.

ರೇಟಿಂಗ್ : 3.5/5


ವಿಜಯ್ ಭರಮಸಾಗರ

ಯಾರವನು…?
ಪೊಲೀಸ್ ಅಧಿಕಾರಿಯಾಗಿರುವ ಆ ನಾಯಕ ಈ ಡೈಲಾಗ್ ಹೇಳುವ ಹೊತ್ತಿಗೆ, ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ನಿಗೂಢ ಕೊಲೆಗಳು ನಡೆದು ಹೋಗಿರುತ್ತವೆ! ಕೊಲೆಗಾರನನ್ನು ಬೆನ್ನತ್ತಿ ಹೋಗುವ ಆ ಪೊಲೀಸ್ ಅಧಿಕಾರಿ ಮತ್ತು ತಂಡಕ್ಕೆ ಐದನೇ ಕೊಲೆ ಮಾಡುವುದಾಗಿ ಚಾಲೆಂಜ್ ಹಾಕುವ ಆ ಕೊಲೆಗಾರ ಯಾರು ಅನ್ನೋದೇ ಈ ಚಿತ್ರದೊಳಗಿನ ಗುಟ್ಟು.

ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ತಿರುವುಗಳೇ ಜೀವಾಳ. ಅಂತಹ ಅನೇಕ ಟ್ವಿಸ್ಟು-ಟೆಸ್ಟುಗಳ ನಡುವೆ ಸಾಗುವ ‘ಶಿವಾಜಿ ಸುರತ್ಕಲ್ 2’, ನಿಜಕ್ಕೂ ಕುತೂಹಲದಲ್ಲೇ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇಂತಹ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಕಥೆಯಲ್ಲಿ ಪಕ್ವತೆ ಇರಬೇಕು. ಅಷ್ಟೇ ಅಲ್ಲ, ಅಷ್ಟೇ ಸೂಕ್ಷ್ಮವಾಗಿ ನಿರೂಪಿಸುವ ಜಾಣ್ಮೆ ಇರಬೇಕು. ಆಗ ಮಾತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾಗಳು ನೋಡುಗನ ಮನ ಗೆಲ್ಲೋಕೆ ಸಾಧ್ಯ. ಅದನ್ನಿಲ್ಲಿ ನಿರ್ದೇಶಕರು ಪರಿಪೂರ್ಣವಾಗಿ ಸಾಧ್ಯವಾಗಿಸಿದ್ದಾರೆ ಅನ್ನೋದು ಸಮಾಧಾನ.

ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆರಂಭದಿಂದ ಕೊನೆವರೆಗೂ ಕುತೂಹಲದಲ್ಲೇ ಸಿನಿಮಾ ಸಾಗುತ್ತದೆ. ಚಿತ್ರ ನೋಡಿ ಹೊರಬಂದ ಬಳಿಕವೂ ಕೊಂಚ ಎದೆ ಭಾರವಾಗಿಸುತ್ತದೆ. ಅಲ್ಲಲ್ಲಿ ಒಂದಷ್ಟು ದೃಶ್ಯಗಳು ಕಾಡುವುದು ಸುಳ್ಳಲ್ಲ. ಹಾಗಾದರೆ ಆ ಕಾಡುವಿಕೆಯ ವಿಶೇಷ ತಿಳಿಯುವ ಕುತೂಹಲವಿದ್ದರೆ ಒಮ್ಮೆ ಶಿವಾಜಿಯ ಇಂಟ್ರೆಸ್ಟಿಂಗ್ ಗೇಮ್ ನೋಡಿಬರಲು ಯಾವುದೇ ಅಡ್ಡಿಯಿಲ್ಲ.

ಕಥೆ ಹೇಳುವ ಮತ್ತು ತೋರಿಸುವ ವಿಧಾನ ಮತ್ತು ಜಾಣತನ ನಿರ್ದೇಶಕರಿಗಿದೆ. ಆ ಕಾರಣಕ್ಕೆ ಸಿನಿಮಾ ಶುರುವಿನಿಂದ ಹಿಡಿದು ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತೆ. ನೋಡುಗನ ಗಮನ ಆಚೀಚೆ ಹೋಗದ ರೀತಿ ಶಿವಾಜಿ ತನ್ನ ಚಾಕಚಕ್ಯತೆ ಮೂಲಕ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕೊಲೆ, ಕೊಲೆಗಾರ ಮತ್ತು ಪೊಲೀಸ್ ಆಟದಲ್ಲಿ ಸಾಗುವ ಸಿನಿಮಾದ ಮೊದಲರ್ಧ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಕೂಡ ಇದಕ್ಕಿಂತಲೂ ಭಿನ್ನ‌ ನಿರೂಪಣೆ ಹಾಗು ಚಿತ್ರಕಥೆಯ ಬಿಗಿಯಾದ ಹಿಡಿತಕ್ಕೆ‌ ಸಾಕ್ಷಿಯಾಗಿದೆ.

ಮುಖ್ಯವಾಗಿ ಇಂತಹ ಕಥೆಗಳಲ್ಲಿ ಚಾಲೆಂಜ್ ಎನಿಸುವ ಸನ್ನಿವೇಶ ಸಹಜ. ಅದನ್ನಿಲ್ಲಿ ತುಂಬಾನೇ ಸಲೀಸಾಗಿ ನಿರ್ವಹಿಸಿರುವ ನಿರ್ದೇಶಕರ ಜಾಣತನ ಕಾಣುತ್ತದೆ. ಒಂದೇ ಕಡೆ ಸುತ್ತದ ಕಥೆಯಲ್ಲಿ ಸಾಕಷ್ಟು ಎಲಿಮೆಂಟ್ಸ್ ಇರುವುದರಿಂದ ಶಿವಾಜಿಗೆ ಒಳ್ಳೆಯ ಮಾರ್ಕ್ಸ್ ಕೊಡಬಹುದು.

ಒಂದು ಪರಿಪೂರ್ಣ ಸಿನಿಮಾಗೆ ಬೇಕಿರೋದು ಕಥೆ, ಚಿತ್ರಕಥೆ, ಮಾತುಕತೆ, ಪಾತ್ರಾಭಿನಯ ಅದಕ್ಕೆ ಪೂರಕವಾಗಿರುವ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ. ಇಲ್ಲಿ ಎಲ್ಲವೂ ಸರಿಯಾಗಿ ಹೆಗಲು ಕೊಟ್ಟಿರುವುದರಿಂದ ಶಿವಾಜಿ ತನ್ನ ಫೋಕಸ್ ಜೊತೆ ವೇಗ ಕಳೆದುಕೊಂಡಿಲ್ಲ.

ಸಿನಿಮಾ ನೋಡುವಾಗ ಎಲ್ಲೋ ಒಂದು ಕಡೆ ಗೊಂದಲ ಆಗೋದು ದಿಟ. ಅ ಎಲ್ಲಾ ಗೊಂದಲಗಳಿಗೂ ನಿರ್ದೇಶಕರು ಉತ್ತರಿಸುತ್ತ ಹೋಗುತ್ತಾರೆ. ಒಮ್ಮೊಮ್ಮೆ ಅದು ಹಾರರ್ ಕಥೆನಾ ಎನಿಸಿದರೂ ಒಂದೊಂದು‌ ತಿರುವು ಹೊಸ ಬಗೆಯ ರೂಪ ಪಡೆದುಕೊಳ್ಳುತ್ತ ಹೋಗುತ್ತೆ. ಇನ್ನು, ಕತ್ತಲು ಬೆಳಕಿನಾಟದ ಕಳ್ಳ ಪೊಲೀಸ್ ಆಟ ನೋಡೋಕೆ ಚಂದವಾದರೂ, ಅಲ್ಲಲ್ಲಿ ಕೇಳಿ ಬರುವ ಹಿನ್ನೆಲೆ ಸಂಗೀತ ಸಿನಿಮಾವೊಂದನ್ನು ನೆನಪಿಸುತ್ತದೆ. ಉಳಿದಂತೆ ಶಿವಾಜಿ ನೋಡುಗನ ಎರಡು ಗಂಟೆ ಸಮಯ ವ್ಯರ್ಥ ಮಾಡಲ್ಲ.

ಕಥೆ ಏನು?

ಆರಂಭದಲ್ಲೇ ನಾಯಕ ಪೊಲೀಸ್ ಅಧಿಕಾರಿ ಎದುರು ಒಂದು ಕೊಲೆ ನಡೆದು ಹೋಗುತ್ತೆ. ನಂತರ ಹುಡುಗಿಯೊಬ್ಬಳ ಹತ್ಯೆ. ಬಳಿಕ‌ಮತ್ತೊಂದು ಹುಡುಗಿಯ ಕೊಲೆ, ನೋಡುತ್ತಿದ್ದಂತೆ ಒಬ್ಬ ಅಧಿಕಾರಿ ಕೊಲೆ… ಆ ಕೊಲೆಗಾರನ ಬೆನ್ನು ಹತ್ತಿ ಹೋಗುವ ನಾಯಕನಿಗೆ
ಆ ಮಾಯಾವಿ ಯಾರು ಎಂಬ ಪ್ರಶ್ನೆ. ಕೊಲೆಗಾರ ಇನ್ನೂ ಒಂದು ಕೊಲೆ ಆಗುತ್ತೆ ಸಾಧ್ಯವಾದರೆ ತಪ್ಪಿಸು ಎಂಬ ಸವಾಲು ಹಾಕುತ್ತಾನೆ. ಆಮೇಲೆ ನಡೆಯೋದೇ ರೋಚಕ. ಈ ನಡುವೆ ಅಪ್ಪ ಮಗನ ಬಾಂಧವ್ಯ, ಹೆಂಡತಿಯ ಕಾಳಜಿ, ಮಗಳ ಮೇಲಿರುವ ಅಪ್ಪನ ಪ್ರೀತಿ… ಇತ್ಯಾದಿ ಕಥೆಯ ತಿರುಳು.

ಆ ಮಾಯಾವಿ ಯಾರು ಎಂಬ ಪ್ರಶ್ನೆ ನೋಡುಗರಲ್ಲೂ ಹುಟ್ಟಿಸಿ, ಕೊನೆಗೊಂದು ಅಂತ್ಯ ಕಾಣಿಸೋದೆ ಶಿವಾಜಿಯ ಗೇಮ್‌ ಪ್ಲಾನ್. ಕೊನೆಗೆ ಕೊಲೆಗಾರ ಯಾರು? ಯಾಕಾಗಿ ಕೊಲೆ ಮಾಡ್ತಾನೆ ಎಂಬುದು ತಿಳಿಯಬೇಕಾದರೆ ಮಿಸ್ ಮಾಡದೆ ಒಳ್ಳೇ ಥ್ರಿಲ್ ಪಡೆಯಬಹುದು.

ಯಾರು ಹೇಗೆ?


ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ತ್ಯಾಗಮಯಿ ನಟ ಎಂಬ ಟ್ಯಾಗ್ ಲೈನ್ ಇರುವ ರಮೇಶ್ ನಿಜಕ್ಕೂ ಇಲ್ಲಿ ಅದನ್ನು ಮರೆಸುವಂತಹ ನಟನೆ ಮಾಡಿದ್ದಾರೆ. ಒಬ್ಬ ಪಕ್ಕಾ ಪೊಲೀಸ್ ಅಧಿಕಾರಿಯಾಗಿ, ಮಗಳಿಗೆ ಪ್ರೀತಿಯ ಅಪ್ಪನಾಗಿ ಎಂದಿಗಿಂತ ಇಷ್ಟವಾಗುತ್ತಾರೆ.
ರಾಧಿಕಾ ನಾರಾಯಣ್, ಕಾಳಜಿ ತೋರುವ ಹೆಂಡತಿಯಾಗಿ ಗಮನ ಸೆಳೆದಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಸಾಥ್ ನೀಡಿದರೆ, ಬೇಬಿ ಅರಾಧ್ಯ, ರಾಘು ರಾಮನಕೊಪ್ಪ ಸಿನಿಮಾದ ಭಾಗವಾಗಿದ್ದಾರೆ. ವಿನಾಯಕ ಜೋಷಿ, ವಿದ್ಯಾಮೂರ್ತಿ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ.

ಜೂಡಾ ಸ್ಯಾಂಡಿ ಸಂಗೀತ ಹೇಳಿಕೊಳ್ಳುವಂತಿಲ್ಲ. ಇರುವ ಯಾವ ಹಾಡು ಗುನುಗುವಂತಿಲ್ಲ. ಗುರು ಪ್ರಸಾದ್, ಮಧು ಅಂಬಟ್ ಅವರ ಕ್ಯಾಮೆರಾ ಕೈಚಳಕ ಶಿವಾಜಿಯ ಅಂದ ಹೆಚ್ಚಿಸಿದೆ.

Related Posts

error: Content is protected !!