ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ಮೂಲಕ ನಿರ್ದೇಶಕ ವಿಕಾಸ್ ಪಂಪಾಪತಿ ಭರಪೂರ ನಗುವಿನ ಮ್ಯಾಜಿಕ್ಕನ್ನು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ರಿಷಿ ಪಂಚಿಂಗ್ ಸಂಭಾಷಣೆ ಮೂಲಕ ನೋಡುಗರನ್ನು ನಕ್ಕು ನಲಿಸುತ್ತಾರೆ. ಇವರಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಟೀಸರ್ ರಿಲೀಸ್ ಬಳಿಕ ಮಾತಾನಾಡಿದ ರಿಷಿ, ಸಾಮಾನ್ಯವಾಗಿ ಕಾಮಿಡಿ ಕಷ್ಟವಾದ ಜಾನರ್. ಅದರಲ್ಲಿ ಡಬಲ್ ಮೀನಿಂಗ್ ಮಾಡಬಹುದು. ಬೇರೆಯವರನ್ನು ನಿಂದಿಸಿ ಕಾಮಿಡಿ ಮಾಡಬಹುದು. ಡಬಲ್ ಮೀನಿಂಗ್ ಇಲ್ಲದೇ. ಯಾರಿಗೂ ನಿಂದಿಸದೆ ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್ ಪಂಪಾಪತಿ ಉದಾಹರಣೆ. ನಾನು ಈ ಸಿನಿಮಾವನ್ನು ತುಂಬಾ ಮಜಾಕೊಂಡು ಮಾಡಿದ್ದೇನೆ. ನನಗೆ ಖುಷಿ ಕೊಟ್ಟ ಸಿನಿಮಾ. ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅವರೆಲ್ಲರ ಎನರ್ಜಿ ನೋಡಿ ನನಗೆ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿನಿಮಾ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ.
ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್ ಪಂಪಾಪತಿ, ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆಯೆಂದು ಹೇಳಿದ್ದಾರೆ.
ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೆ ಸಿನಿಮಾವನ್ನು ಮಾಡಿದ್ದು ಕನ್ನಡ ಸಿನಿ ರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ, ಪ್ರೇಕ್ಷಕರಿಗೆ ಮನೋರಂಜನೆ ಕೊಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ವಿಕಾಸ್ ಪಂಪಾಪತಿ “ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ರಾಮನ ಅವತಾರ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಚಿತ್ರತಂಡ ಜೂನ್ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.