“ಗೆಜ್ಜೆನಾದ”, ” ನಂದ ಲವ್ಸ್ ನಂದಿತಾ”, “ಕನ್ನಡದ ಕಂದ”, “ಆಟ” ಮುಂತಾದ ಸೂಪರ್ ಹಿಟ್ ಚಿತ್ರಗಳ ಹಾಗೂ ಕಿರುತೆರೆಯ ಸಾಕಷ್ಟು ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಬಿ.ಎನ್. ವಿಜಯ್ ಕುಮಾರ್ (ಗೆಜ್ಜೆನಾದ) ಈಗ ನಿರ್ಮಾಪಕರಾಗಿದ್ದಾರೆ. ಅಥರ್ವ್ ಪಿಕ್ಚರ್ಸ್ ಅಡಿಯಲ್ಲಿ ಧರ್ಮೇಂದ್ರ ಎಂ ರಾವ್ ಅವರ ಜೊತೆಯಾಗಿ ನೂತನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಏಪ್ರಿಲ್ 13 ರಂದು ಬಿಡುಗಡೆಯಾಗಲಿದೆ.
ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಮೂರು ವಿಭಿನ್ನ ಕಥೆಗಳು ಚಿತ್ರದಲ್ಲಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ.
ಬಿ.ಎನ್.ವಿಜಯ್ ಕುಮಾರ್ ಅವರ ಪುತ್ರ ಅಥರ್ವ್ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ “ಪುನರ್ ವಿವಾಹ” ಹಾಗೂ “ಪತ್ತೆದಾರಿ ಪ್ರತಿಭಾ” ದಲ್ಲಿ ಅಥರ್ವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಈ ಚಿತ್ರದ ಮೂಲಕ ಅಥರ್ವ್ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನು ಅಥರ್ವ್ ಅವರೆ ಬರೆದಿದ್ದಾರೆ. ಚಿತ್ರಕಥೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಅವರದು. “ಕನ್ನಡತಿ” ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ.ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಸಾಕಷ್ಟು ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.