Categories
ಸಿನಿ ಸುದ್ದಿ

ಜಟಕಾ ‌ಕುದುರೆ ಹತ್ತಿ ಪ್ಯಾಟೆಗೋಗುಮ ಅಂತ ಗೀತೆ ಬರೆದ ಶ್ರೀರಂಗ ಈಗ ಹೇಗಿದ್ದಾರೆ ಗೋತ್ತಾ?

ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ ನಟ. ರಂಗಭೂಮಿ ,ಸಿನಿಮಾ ನಟನೆಯ ಜತೆಗೆ ಅವರು ಸಾಮಾಜಿಕ ಕಾಳಜಿಗೆ ಮಿಡಿಯುವ ಒರ್ವ ಹೃದಯವಂತ ಕಲಾವಿದ. ಅವರು ಇತ್ತೀಚೆಗೆ ಕೆ.ಆರ್.ಪುರಂ ನಲ್ಲಿನ‌ ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಹೋದಾಗ ಅಲ್ಲಿ ಕಂಡ ಶ್ರೀರಂಗ ಅವರ ಬಗ್ಗೆ ಬರೆದ ಬರಹ ಇಲ್ಲಿದೆ. ಅವರ ಅನುಮತಿ ಪಡೆದುಕೊಂಡೆ‌ ‘ ಸಿನಿ‌ಲಹರಿ ‘ ಈ ಬರಹ ಪ್ರಕಟಿಸಿದೆ.

ಶ್ರೀರಂಗ ಅವರನ್ನು ನಟ ವಿಜಯ್ ಕಂಡ ಕ್ಷಣ…

‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ ನೀ ವಯ್ಯಾರದ ಗೊಂಬೆ’, ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’, ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’….. ಹಾಡುಗಳನ್ನ ಹಾಗು ‘ಜನುಮದ ಜೋಡಿ’, ‘ರಕ್ತ ಕಣ್ಣೀರು’, ‘ಆಕಾಶ್’, ‘ವೀರ ಕನ್ನಡಿಗ’, ‘ಅಪ್ಪಾಜಿ’, ‘ಇನ್ಸ್ಪೆಕ್ಟರ್ ವಿಕ್ರಮ್’, ‘ಗಂಡುಗಲಿ ಕುಮಾರ ರಾಮ’, ‘ಆಸೆಗೊಬ್ಬ ಮೀಸೆಗೊಬ್ಬ’ ಮುಂತಾದ ಚಿತ್ರದ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗರೂ ಒಂದಲ್ಲ ಒಂದು ಸಾರಿ ಗುನುಗೇ ಗುನುಗಿರುತ್ತೇವೆ.
ಇವರು ಬರೆದು ನಿರ್ದೇಶಿಸಿದ ಹಲವಾರು ನಾಟಕಗಳನ್ನೂ ನೋಡಿರುತ್ತೇವೆ.

ಜೊತೆಗೆ ‘ಅಂಜದ ಗಂಡು’, ‘ಕಿಂದರಿ ಜೋಗಿ’, ‘ಮುತ್ತೈದೆ ಭಾಗ್ಯ’, ‘ಅದೃಷ್ಟ ರೇಖೆ’, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ’, ‘ಶುಕ್ರ ದೆಶೆ’, ‘ಭೂಲೋಕದಲ್ಲಿ ಯಮರಾಜ’ ಹೀಗೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದನ್ನೂ ಗಮನಿಸಿರುತ್ತೇವೆ ಆದರೆ ಅವರು ಯಾರಿರಬಹುದು ಅನ್ನುವುದು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ ಅದಕ್ಕೆ ಕಾರಣವೂ ಇರುವುದಿಲ್ಲ.

ಅವರು ಮತ್ಯಾರು ಅಲ್ಲ ಕನ್ನಡದ ಹಿರಿಯ ಸಾಹಿತಿಗಳು, ಸಂಭಾಷಣೆಗಾರರು, ನಿರ್ದೇಶಕರೂ ಆದ “ಶ್ರೀ ರಂಗ”ರವರು. ಇವರನ್ನು ‘ಭಂಗಿ ರಂಗ’ ಎಂದು ಸಹಾ ಕರೆಯುತ್ತಿದ್ದರೆಂದು ಅವರ ಬಾಯಿಂದಲೇ ಕೇಳಿ ತಿಳಿದೆವು.

ಈಗ್ಗೆ ಒಂದು ವಾರದ ಹಿಂದೆ ಕೆ.ಅರ್.ಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ನಾನು ಕೂಡ ಅತಿಥಿಯಾಗಿ ಹೋಗಿದ್ದಾಗ ಆಕಸ್ಮಿಕವಾಗಿ ಇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ವೇದಿಕೆಯ ಮುಂಭಾಗದಲ್ಲಿ ಮಗುವಿನಂತೆ ಕುಳಿತು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಮುಗ್ಧ ನಗುವೊಂದು ನನ್ನನ್ನು ಸೆಳೆಯುತ್ತಿತ್ತು. ವೇದಿಕೆಯ ಮೇಲೆ ಕುಳಿತೇ ಅವರನ್ನು ಮೊಬೈಲಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಪಕ್ಕದಲ್ಲಿ ಕುಳಿತಿದ್ದವರು ಅದನ್ನು ಗಮನಿಸಿ ಕಿವಿಯಲ್ಲಿ ನಿಧಾನವಾಗಿ ‘ಇವರಿಗೆ ಏನಾದರೂ ಸಹಾಯ ಮಾಡಬಹುದಾ? ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ’ ಎಂದರು. ಅವರಾಡಿದ ಮಾತು ಯಾಕೋ ಮನಸಿನೊಳಗೆ ಕೊರೆಯಲು ಶುರುಮಾಡಿತು. ಸರಿ ಕಾರ್ಯಕ್ರಮ ಮುಗಿದಮೇಲೆ ಖುದ್ದಾಗಿ ಇವರನ್ನು ಭೇಟಿಯಾಗಿ ಮಾತನಾಡಿಸಲೇಬೇಕು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿ ಅವರನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪಾಪ ಇಳಿ ವಯಸ್ಸು ಬಹಳ ಹೊತ್ತು ಕುಳಿತುಕೊಳ್ಳಲು ಕಷ್ಟವಾಗಿಯೋ ಏನೋ ಶ್ರೀರಂಗರು ಅಲ್ಲಿಂದ ಮನೆಗೆ ಹೊರಟುಬಿಟ್ಟರು. ಕಾರ್ಯಕ್ರಮ ಮುಗಿಯಿತು ಅಲ್ಲಿದ್ದವರೊಬ್ಬರನ್ನು ಕೇಳಿದೆ ‘ ಶ್ರೀರಂಗರನ್ನು ಖುದ್ದು ಭೇಟಿಯಾಗಬಹುದೇ?’ ಅದಕ್ಕವರು ಹಿಂದೂ ಮುಂದೂ ನೋಡದೆ ಅವರದೇ ಕಾರಿನಲ್ಲಿ ಕೂರಿಸಿಕೊಂಡು ಮನೆಯ ಹತ್ತಿರ ಕರೆದುಕೊಂಡು ಹೋದರು.

ಕಾರು ಮನೆಯ ಗೇಟಿನ ಹತ್ತಿರ ಬಂದು ನಿಲ್ಲುತ್ತಿದ್ದಂತೆ ಪುಟ್ಟ ಮಗುವಿನ ಹಾಗೆ ಓಡೋಡಿ ಬಂದ ಶ್ರೀಗಳು ‘ಯಾರು?’ ಎಂದು ಕೇಳಬೇಕೆನ್ನುವ ಸಮಯಕ್ಕೆ ನನ್ನ ಜೊತೆಯಲ್ಲಿದ್ದವರನ್ನು ನೋಡಿ ಗುರುತು ಹಿಡಿದು ‘ಹೋ!!!!ನೀವಾ ಬನ್ನಿ ಬನ್ನಿ’ ಎಂದು ಗೇಟಿನ ಬಾಗಿಲು ತೆಗೆದು ಒಳ ಕರೆದರು.
ನಾನು ಗೇಟಿನ ಒಳಗೆ ನಡೆದವನೇ ಶೂ ಬಿಚ್ಚತೊಡಗಿದೆ ನನ್ನ ಜೊತೆಯಲ್ಲಿದ್ದವರು ತಡೆದು ‘ಮನೆ ಇದಲ್ಲ ಮೊದಲನೇ ಮಹಡಿ ಅಂದ್ರು’.
ವೇದಿಕೆಯ ಮೇಲೆ ನನ್ನ ಪಕ್ಕ ಕುಳಿತಿದ್ದವರು ಹೇಳಿದ ಮಾತು ಕಣ್ಣ ಮುಂದೆ ಹಾದು ಹೋಯಿತು. ಶ್ರೀ ರಂಗರ ಮುಖ ನೋಡಿ ಏನೋ ಸಂಕಟವಾಗೋಕೆ ಶುರುವಾಯ್ತು 86 ವರ್ಷದ ಹಿರಿಯ ಜೀವ ಹೀಗೆ ಸಣ್ಣ ಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದೆಂದರೆ ತಮಾಷೆಯ ಮಾತಲ್ಲ ಅಂಥದ್ದರಲ್ಲಿ ಅಷ್ಟು ಚುರುಕಾಗಿ ಪಟ ಪಟ ಅಂತ ಮೆಟ್ಟಿಲು ಹತ್ತಿ ನಮ್ಮನ್ನು ಕರೆದೊಯ್ದು ಬಾಗಿಲು ತೆರೆದು ಮನೆಯೊಳಗೆ ಹೆಜ್ಜೆ ಇಡುತ್ತಲೇ ‘ತುಂಬಾ ಪುಟ್ಟ ಮನೆ ಏನು ಅಂದುಕೊಳ್ಳಬೇಡಿ’ ಅಂತ ಸೌಜನ್ಯದಿಂದ ನುಡಿದರು. ಮರು ಮಾತಾಡಿದರೆ ಅತಿಯಾಗಬಹುದೇನೋ ಅಂದುಕೊಂಡು ಸುಮ್ಮನೆ ಅವರ ಪಕ್ಕದಲ್ಲಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದೆ. ಪುಟ್ಟ ಗೂಡಿನ ಬಾಡಿಗೆ ಮನೆ ಅಂತ ತಿಳಿದುಕೊಳ್ಳಲು ಹೆಚ್ಚು ಸಮಯವೂ ಬೇಕಾಗಲಿಲ್ಲ. ಹೀಗೆ ಮಾತು ಸಾಗುತ್ತ ಸಾಹಿತ್ಯ,ಬರವಣಿಗೆ,ಸಿನೆಮಾ ಬಗ್ಗೆ ಅವರ ಮಾತುಗಳಲ್ಲೇ ಕೇಳುತ್ತಾ ಕುಳಿತಿದ್ದೆವು.

‘ಸುಮಾರು ಹದಿನೈದು ಇಪ್ಪತ್ತು ವರ್ಷಗಳಾಯ್ತು ಗಾಂಧಿನಗರದ ಕಡೆ ಮುಖಮಾಡಿ ಈಗ ಎಲ್ಲಾ ಬದಲಾಗಿರಬೇಕು,ನಾನು ಒಂದಷ್ಟು ವರ್ಷಗಳ ಕಾಲ ಚಿತ್ರರಂಗಕ್ಕೆ ದುಡಿದೆ ಈಗ ವಯೋ ಸಹಜ ಸಣ್ಣ ಪುಟ್ಟ ಕಾಯಿಲೆಗಳು ಕೆಲಸ ಮಾಡೋದು ಕಷ್ಟ. ಈಗಲೂ ಬರೆಯಬೇಕೆಂಬ ಆಸೆ ಬೆಟ್ಟದಷ್ಟಿದೆ ಆದರೆ ಏನು ಮಾಡೋದು ಕಾಲ ಬದಲಾಗಿದೆ ಈಗಿನವರ ಸಿನಿಮಾ ಅಭಿರುಚಿಯೇ ಬೇರೆ’ ಎಂದು ಹೇಳುತ್ತಾ ತಮ್ಮ ಮತ್ತು ಗಾಂಧಿನಗರದ ನಂಟಿನ ಬಗ್ಗೆ ಮಾತು ಸಾಗುತ್ತಿತ್ತು. ಅದೇ ಸಮಯಕ್ಕೆ ಶ್ರೀರಂಗರ ಧರ್ಮಪತ್ನಿಯವರೂ ಸಹ ನಾವು ಕುಳಿತಿದ್ದ ಜಾಗಕ್ಕೆ ಗೋಡೆಗೆ ಆತುಕೊಂಡಿದ್ದ ಒಬ್ಬರೇ ಓಡಾಡಬಹುದಾದ ಚಿಕ್ಕ ಅಡುಗೆ ಮನೆಯಿಂದ ಹೊರಬಂದು ನಮ್ಮನ್ನು ನೋಡಿ ಸಣ್ಣ ನಗೆಬೀರಿ ಅವರೂ ಮಾತಿಗಿಳಿದು ‘ಇಲ್ಲಿರುವುದು ನಾವಿಬ್ಬರೇ ಸದ್ಯಕ್ಕೆ ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ, ಮಗಳು ಅಲ್ಲಿ ಇಲ್ಲಿ ಆರ್ಕೆಷ್ಟ್ರಾದಲ್ಲಿ ಹಾಡಿ ಜೀವನ ನಡೆಸುತ್ತಿದ್ದಾಳೆ ಅವಳದು ಒಂಥರಾ ಕಷ್ಟ. ಅದರೊಳಗೆ ನಮ್ಮನ್ನು ನೋಡಿಕೊಳ್ಳುವುದಂತೂ ಕಷ್ಟ ಸಾಧ್ಯ ಹಾಗೂ ಹೀಗೂ ಕೊರೊನ ಸಂಕಷ್ಟದಲ್ಲೂ ಬದುಕಿ ಜೀವನ ನಡೆಸುತ್ತಾ ಇದ್ದೀವಿ’. ಅಂದರು.

ಹೀಗೆ ಮಾತು ಮುಂದುವರಿಸಿ ನಮ್ಮ ಜೊತೆಯಲ್ಲಿದ್ದವರಒಬ್ಬರನ್ನು ಕುರಿತು ‘ಇವರು ಇದೆ ಬಡಾವಣೆಯವರು ನಮ್ಮ ಕಷ್ಟಕ್ಕೆ ಮರುಗಿ ಆಗಾಗ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇಲ್ಲಿಯವರೆಗೂ ನಮ್ಮನ್ನು ಅವರ ತಂದೆ ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರೇ ನಮಗೆ ಮಕ್ಕಳು. ನಮಗೂ ತುಂಬಾ ವಯಸ್ಸಾಗಿದೆ ಹೊರಗೆ ಹೋಗಿ ದುಡಿಯುವ ಶಕ್ತಿಯಂತೂ ಇಲ್ಲ ಕೊನೆಯವರೆಗೂ ನಾವು ಇವರುಗಳಿಗೆ ಎಷ್ಟು ಕೃತಘ್ನತೆ ಹೇಳಿದರೂ ಸಾಲದು ‘ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವಾಗ ದುಃಖ ಒತ್ತರಿಸಿ ಬಂದು ಸೆರಗಿನಿಂದ ನಮಗೆ ಗೊತ್ತಾಗದಂತೆ ಕಣ್ಣೇರು ಒರೆಸಿಕೊಳ್ಳುವ ಪ್ರಯತ್ನ ಮಾಡಿದರು. ನಮ್ಮ ಕಣ್ಣುಗಳೂ ಸಹ ಒದ್ದೆಯಾಗಿದ್ದವು ನಾವೂ ನೋಡಿಯೂ ನೋಡದವರಂತೆ ಭಾರವಾದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆವು. ಹೀಗೆ ಮಾತಿನ ನಡುವೆ ಒಂದು ಧೀರ್ಘ ಮೌನ ಆ ನಂತರ ಮಾತು ಬದಲಿಸಲು ನಾನು ಶ್ರೀರಂಗರನ್ನು ‘ಒಂದು ಸೆಲ್ಫಿ ತೆಗೆದುಕೊಳ್ಳಲೇ?’ಎಂದು ಕೇಳಿದೆ. ಅದಕ್ಕವರು ಒಂದೇ ಮಾತಿನಲ್ಲಿ ‘ಬೇಡ’ ಅಂದುಬಿಡಬೇಕೆ. ನನಗೋ ಅವಮಾನವಾದಂತಾಗಿ ಮರುಮಾತಾಡದೆ ‘ಹೊರಡೋಣವೇ?’ ಎಂದು ಎದ್ದು ನಿಂತೆವು.

ಕೊನೆಗೆ ನಮ್ಮನ್ನು ಬೀಳ್ಕೊಡಲು ಬಾಗಿಲ ಬಳಿ ಬಂದ ಹಿರಿಯ ಜೀವಗಳು ನಿಮಗೆ ತಿನ್ನಲು ಕುಡಿಯಲು ಏನು ಮಾಡಿಕೊಡಲಿಲ್ಲವಲ್ಲ’ ಅಂದ್ರು.
ಹೃದಯ ತುಂಬಿ ಬಂತು ಮನೆ ಖಾಲಿಯಿದ್ದರೂ ಮನಸ್ಸು ಎಷ್ಟೊಂದು ತುಂಬಿದೆಯಲ್ಲಾ ಅನ್ನಿಸಿತು. ಈ ವಯಸ್ಸಿನಲ್ಲಿ ಇದೆಂತಹ ಶಿಕ್ಷೆ. ಒಂದು ಕಡೆ ವಯಸ್ಸು ಮಾಗಿ ದುಡಿಯಲಾರದೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿ ಬದುಕಲಾರದ ಬದುಕು, ಮತ್ತೊಂದು ಕಡೆ ಮಗಳು ಇದ್ದು ಇರುವ ಎರೆಡು ಜೀವಗಳನ್ನು ನೋಡಿಕೊಳ್ಳಲೂ ಆಗದ ಅಸಹಾಯಕ ಸ್ಥಿತಿ. ದೇವರೇ ಮತ್ಯಾರಿಗೂ ಇಂತ ಕಷ್ಟ ಬಾರದಿರಲಿ ಎಂದು ಆ ಕ್ಷಣಕ್ಕೆ ಪ್ರಾರ್ಥಿಸುವುದು ಬಿಟ್ಟು ಬೇರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಭಾರವಾದ ಮನಸ್ಸಲ್ಲಿ ಹೊರಬಂದವನೇ ಕುತೂಹಲಕ್ಕೆ ಕೇಳಿದೆ ‘ಯಾಕೆ ಸೆಲ್ಫಿ ಕೇಳಿದರೆ ಒಂದೇ ಮಾತಲ್ಲಿ ಬೇಡ ಅಂದರಲ್ಲ’.
ಅದಕ್ಕವರ ಉತ್ತರ ‘ಶ್ರೀ ರಂಗರು ತುಂಬಾ ಸ್ವಾಭಿಮಾನಿ ಇವತ್ತಿನ ಈ ಕ್ಷಣದವರೆಗೂ ಯಾರಲ್ಲೂ ಕೈಚಾಚಿ ಒಂದು ಸಣ್ಣ ಸಹಾಯವನ್ನೂ ಬೇಡಿದವರಲ್ಲ ನಾವೇ ಅವರಿಗೆ ಒತ್ತಾಯ ಮಾಡಿ ನಾವು ನಿಮ್ಮ ಮಕ್ಕಳಂತೆ ಅಲ್ಲವೇ ಎಂದು ತಿಳಿ ಹೇಳಿ ಸಣ್ಣ ಪುಟ್ಟ ಸಹಾಯ ಮಾಡುತ್ತಿರುತ್ತೇವೆ. ಹೀಗೆ ಯಾರೋ ಹೊರಗಿನಿಂದ ಬಂದು ಸಹಾಯ ಮಾಡುವ ನೆಪದಲ್ಲಿ ಫೋಟೋ ತೆಗೆದುಕೊಂಡು ನಮ್ಮ ಈಗಿನ ಸ್ಥಿತಿಯನ್ನು ಜನಕ್ಕೆ ತೋರಿಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಬಿಡುತ್ತಾರೋ ಅನ್ನುವ ಭಯ ಅವರಿಗೆ’ ಅಂದರು. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ‘ಕಸ್ತೂರಿ ನಿವಾಸದ’ ಕೊನೆಯ ದೃಶ್ಯ.

ಇಷ್ಟು ಬರೆದು ಶ್ರೀರಂಗ‌ಅವರಿಗೆ ಆತ್ಮೀಯರು ನೆರವಾಗುವಂತೆ ಮನವಿ‌ಮಾಡಿದ್ದಾರೆ. ಹಾಗೆಯೇ ಬ್ಯಾ‌ಂಕ್ ವಿವರ ಕೂಡ ಕೊಟ್ಟಿದ್ದಾರೆ.ಅದರ ವಿವರ ಇಂತಿದೆ.

Name- sree ranga
state bank of india
Chandar layout branch
Ifsc SBIN 0004051

A/c no 64145797446

ಸಪರ್ಕಕ್ಕೆ, ಗಿರೀಶ್ – 98866-40906.

Categories
ಸಿನಿ ಸುದ್ದಿ

ಚಿತ್ರಮಂದಿರ ಅನ್ನೋದು  ದೇವಾಲಯ ಅಂದ್ರು ಅಭಿನಯ ಚಕ್ರವರ್ತಿ

 ಐರಾವನ್ ಚಿತ್ರದ ಟೀಸರ್ ಲಾಂಚ್ ಮಾಡಿದ ಕಿಚ್ಚ ಸುದೀಪ್

ಸಿನಿಮಾ ಮೊದಲು ಚಿತ್ರಮಂದಿರಕ್ಕೆ ಬರಬೇಕು, ಎಲ್ಲೋ ಕಳೆದು ಹೋಗಬೇಡಿ. ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಸಿನಮಾ ಚಿತ್ರಮಂದಿರ ಅನ್ನೋ ದೇವಸ್ಥಾನ ಪ್ರವೇಶಿಸಲೇಬೇಕು….

-ಇದು ನಟ ಕಿಚ್ಚ ಸುದೀಪ್‌ ಅವರ ಮಾತು, ಸಿನಿಮಾ ಮಂದಿಗೆ ಮಾಡಿದ ಮನವಿ. ಜೆಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಅಭಿನಯ ಹಾಗೂ ನಿರಂತರ ಪ್ರೊಡಕ್ಷನ್‌ ಬ್ಯಾನರ್‌ ನಲ್ಲಿ ನಿರ್ಮಾಣವಾದ ʼ ಐರಾವನ್‌ʼ ಚಿತ್ರದ ಟೀಸರ್‌ ಲಾಂಚ್‌ ಸಂದರ್ಭದಲ್ಲಿ ಮಾತನಾಡಿದ ಸುದೀಪ್‌,  ಸಿನಿಮಾ ಅಂದ್ರೇನೆ ಹಾಗೆ. ಸಿನಿಮಾ ಅನ್ನೋದು ಮೊದಲು ಚಿತ್ರಮಂದಿರಕ್ಕೆ ಬರಬೇಕು, ಎಲ್ಲೋ ಕಳೆದು ಹೋಗಬೇಡಿ, ಶ್ರಮಕ್ಕೆ ಬೆಲೆ ಸಿಗಬೇಕು, ಒಂದು ಕಾಲದಲ್ಲಿ ಚಿತ್ರಮಂದಿರಕ್ಕೆ ಸಿನಿಮಾ ಬಂದರೆ ಸಾಕುಎನ್ನುತ್ತಿದ್ದೆವು. ಇದೀಗ ಚಿತ್ರಮಂದಿರ ಸಿಕ್ಕರೆ ಸಾಕಪ್ಪ ಎಂಬಂತಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ನಟ ಜೆಕೆ ಸಿನಿಮಾರಂಗದ ಆರಂಭದ ದಿನಗಳನ್ನು ನೆನಪಿಸಿಕೊಂಡರು. ‘. ಕಷ್ಟ ಇರಲಿ, ಸುಖ ಇರಲಿ ಸುದೀಪ್  ಅವರು ಮೊದಲಿನಿಂದಲೂ ಸುದೀಪ್‌ ಜತೆಗಿದ್ದಾರೆ. ಇನ್ನು ಈ ಸಿನಿಮಾ ಬಗ್ಗೆ ಹೇಳುವುದಾದರೆ, ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ಯೋಚನೆ ಮಾಡಬೇಕು. ನಿರಂತರ್ ಅವರು ಅಷ್ಟೇ ಬೇಗ ಈ ಸಿನಿಮಾ ವನ್ನು ಮುಗಿಸಿದ್ದಾರೆ ಎಂದರು.

ಅದೇ ರೀತಿ ಚಿತ್ರದಲ್ಲಿ ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೆಕೆಗೆ ಜೋಡಿಯಾಗಿದ್ದಾರೆ. ವಿವೇಕ್‌ ಹಾಗೂ  ಅಭಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ತಮ್ಮ ಅನುಭವ ವನ್ನು ಹಂಚಿಕೊಂಡರು. ಅದೇ ರೀತಿ ನಿರ್ದೇಶಕ ರಾಮ್ಸ್ ರಂಗ ಸಿನಿಮಾದ ಎಳೆ ಬಿಚ್ಚಿಟ್ಟರು. ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಿದ್ದೇನೆ. ಐರಾವನ್ ಎಂದರೆ, ಅರ್ಜುನನ ಮೂರನೇ ಮಗ ಐರಾವನ್. ಅದು ರಾಕ್ಷಸ ರೂಪ. ಆ ರೂಪವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ಆ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಬೇಕೆಂದರು.

ನಿರ್ಮಾಪಕ ನಿರಂತರ, ಹುಚ್ಚ ಸಿನಿಮಾದಿಂದ ಸುದೀಪ್ ಅವರನ್ನು ನೋಡಿಕೊಂಡು ಬಂದಿದ್ದೇವೆ. ಜೆಕೆ ಅವರ ಮೂಲಕ ಅವರನ್ನು ಭೇಟಿ ಮಾಡಿಬಂದೆವು. ಈ ಕಾರ್ಯಕ್ರಮಕ್ಕೆ ಬಂದು ಟೀಸರ್ ಲಾಂಚ್ ಮಾಡಿದ್ದಕ್ಕೆ ಅವರಿಗೆ ಧನ್ಯವಾದ. ಇಡೀ ತಂಡದಲ್ಲಿ ಎಲ್ಲರೂ ಯುವಕರೇ. ಯುವಕರನ್ನು ಗುರುತಿಸಬೇಕೆಂಬ ಉದ್ದೇಶದಿಂದ ಸಿನಿಮಾರಂಗಕ್ಕೆ ಬಂದಿದ್ದೇನೆ ಎಂದರು.

ಅದೇ ರೀತಿ ನಿರ್ದೇಶಕರಾದ ಹರಿ ಸಂತೋಷ್, ಭರ್ಜರಿ ಚೇತನ್, ರಜತ್ ರವಿ ಶಂಕರ್, ನಟ ರಾಜವರ್ಧನ್, ವಿಕ್ಕಿ ವರುಣ್, ರಾಕ್​ಲೈನ್ ವಂಕಟೇಶ್ ಪುತ್ರ ಯತೀಶ್ ವೆಂಕಟೇಶ್ ಸೇರಿ ಹಲವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.   ಇನ್ನು ತಾಂತ್ರಿಕ ವರ್ಗದಲ್ಲಿ ಎಸ್ ಪ್ರದೀಪ್ ವರ್ಮಾ ಅವರ ಸಂಗೀತ, ದೇವೇಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಹರಿ ಸಂತೋಶ್ ಸಾಹಿತ್ಯ, ಕಾಂತರಾಜು ಕಡ್ಡಿಪುಡಿ ಸಂಭಾಷಣೆ ಬರೆದಿದ್ದಾರೆ. ಸಾಯಿ ಚರಣ್ ಮತ್ತು ಆರ್ ಲೋಹಿತ್ ನಾಯ್ಕ್​ ಸಹ ನಿರ್ದೇಶನ ಮಾಡಿದ್ದಾರೆ. ಕುಂಗ್ ಫು ಚಂದ್ರು ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಸಂತೋಷ್ ನಿರ್ದೇಶನದ ‘ಕ್ಯಾಂಪಸ್ ಕ್ರಾಂತಿ’ಗೆ ಪವರ್ ಸ್ಟಾರ್ ಬೆಂಬಲ

ಗಡಿಭಾಗದ ಕ್ರೈಮ್‌ ಥ್ರಿಲ್ಲರ್‌ ಕತೆಯಲ್ಲಿದೆ ಕನ್ನಡದೊಂದಿಗಿನ ಸೆಂಟಿಮೆಂಟ್ 

ಯುವ ನಿರ್ದೇಶಕ ಸಂತೋಷ್‌ ಕುಮಾರ್‌ ನಿರ್ದೇಶನದ “ಕ್ಯಾಂಪಸ್ ಕ್ರಾಂತಿ’ ಚಿತ್ರವೀಗ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಚಿತ್ರತಂಡ ಟೈಟಲ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಟೈಟಲ್‌ ಲಾಂಚ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್‌ ಗುರೂಜಿ ಅವರ ಆರ್ಟ್‌ಆಫ್‌ ಲಿವಿಂಗ್‌ ಆಶ್ರಮದಲ್ಲಿ ಇತ್ತೀಚೆಗೆ ಪುನೀತ್‌ ರಾಜ್‌ಕುಮಾರ್‌ ಅವರು ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಚಿತ್ರತಂಡ ಅಲ್ಲಿಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ʼಕ್ಯಾಂಪಸ್‌ ಕ್ರಾಂತಿʼ ಚಿತ್ರದ ಟೈಟಲ್‌ ಪೋಸ್ಟರ್‌ ಲಾಂಚ್‌ ಮಾಡುವ ಮೂಲಕ ಶುಭ ಕೋರಿದರು.

ನಿರ್ದೇಶಕ ಸಂತೋಷ್ ಕುಮಾರ್

“ಬಿಂದಾಸ್‌ ಗೂಗ್ಲಿʼ ಹಾಗೂ ʼಸ್ಟೂಡೆಂಟ್ಸ್‌ʼ ಚಿತ್ರಗಳ ನಂತರವೀಗ ಸಂತೋಷ್‌ ಕುಮಾರ್‌ ಆಕ್ಷನ್‌ ಕಟ್‌ ಹೇಳಿದ ಮೂರನೇ ಚಿತ್ರ  “ಕ್ಯಾಂಪಸ್‌ ಕ್ರಾಂತಿʼ. ಚಿತ್ರದ ನಿರ್ದೇಶನ ಜತೆಗೆ ಸಂತೋಷ್ ಹಿಂದಿಯಲ್ಲೂ ಒಂದು ಆಲ್ಬಂ ಸಾಂಗ್ ವೊಂದನ್ನು ನಿರ್ದೇಶಿಸಿ, ಹೊರ ತಂದಿದ್ದಾರೆ. ಅದರ ಜತೆಗೀಗ ಲಾಕ್ ಡೌನ್ ಸಮಯದಲ್ಲಿ ಕತೆ, ಚಿತ್ರಕತೆ ಬರೆದು ‘ಕ್ಯಾಂಪಸ್ ಕ್ರಾಂತಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಲೇಜು ಸುತ್ತು ನಡೆಯುವ ಕತೆ. ಹಾಗಂತ ಕನ್ನಡ ಚಿತ್ರರಂಗಕ್ಕೆ ಇಂತಹ ಕತೆಗಳೇನು ಹೊಸದಲ್ಲ. ಕಾಲೇಜು ಲವ್ ಸ್ಟೋರಿ ಕತೆಗಳು ಬೆಳ್ಳಿತೆರೆಯಲ್ಲಿ ಬೇಕಾದಷ್ಟು ಬಂದಿವೆ. ಹಾಗೆ ನೋಡಿದರೆ, ಪ್ರತಿ ಸಿನಿಮಾದಲ್ಲೂ ಇಂತಹ ಕಾಲೇಜು ಕತೆ ಇರುವುದು ಸರ್ವೇ ಸಾಮಾನ್ಯ. ಆದರೆ “ಕ್ಯಾಂಪಸ್ ಕ್ರಾಂತಿ’ ವಿಭಿನ್ನ ಕತೆಯ ಚಿತ್ರ. ಆ ಕತೆ ಹೇಗೆ ವಿಭಿನ್ನ ಅಂತ ಹೇಳ್ತಾರೆ ಕೇಳಿ ನಿರ್ದೇಶಕ ಸಂತೋಷ್ ಕುಮಾರ್.

ಇದು ನಾನು ಲಾಕ್ ಡೌನ್ ಸಮಯದಲ್ಲಿ ಬರೆದ ಕತೆ. ಕರ್ನಾಟಕ ಹಾಗು ಮಹಾರಾಷ್ಟ್ರ ಗಡಿ ಭಾಗದ ಕಾಲೇಜ್ ಒಂದರಲ್ಲಿ ನಡೆದಿದ್ದು. ನಿಜವಾಗಿಯೂ ನಡೆದಿದ್ದು. ಆ ಕಾಲೇಜ್ ನಲ್ಲಿ ತುಂಬಾ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನಡೆಯುವುದಿಲ್ಲ. ಅದಕ್ಕೆ ಕಾರಣ ಯಾಕೆ ಎನ್ನುವುದು ಸಸ್ಪೆನ್ಸ್. ಆದರೆ ಅಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತವೆ. ಆ ಕೊಲೆಗಳಿಗೂ, ರಾಜ್ಯೋತ್ಸವ ನಡೆಯದಿರುವುದಕ್ಕೂ ಸಂಬಂಧ ಇದೀಯಾ? ಇದ್ದರೆ ಅದಕ್ಕೆ ಕಾರಣ ಏನು? ಅದರ ಸುತ್ತ ನಡೆಯುವ ಕತೆ ಇದು. ಇದು ಸಸ್ಪೆನ್ಸ್ ಥ್ರಿಲ್ಲರ್ ಕತೆ. ಅದರ ಜತೆಗೆ ಒಂದು ಕ್ಯೂಟ್ ಪ್ರೇಮ ಕತೆಯೂ ಇದೆ’

– ಸಂತೋಷ್ ಕುಮಾರ್, ನಿರ್ದೇಶಕ

ಬಹುತೇಕ ಹೊಸಬರೇ ಚಿತ್ರದ ಕಲಾವಿದರು. ಒಂದೆರೆಡು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇರುವ ಆರ್ಯ ಹಾಗೂ ಅಲಂಕಾರ್‌ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಹಾಗೆಯೇ ಈಶಾನಾ ಹಾಗೂ ಆರತಿ ಪಡುಬಿದ್ರಿ ನಾಯಕಿಯರು. ಅವರೊಂದಿಗೆ ವಾಣಿಶ್ರೀ, ಹನುಮಂತೇ ಗೌಡ್ರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕೊರೋನಾ ಆತಂಕದ ಮಧ್ಯೆಯೇ ಚಿತ್ರ ತಂಡ ಸೂಕ್ತ ರಕ್ಷಣೆಯೊಂದಿಗೆ ೪೫ ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಹಾಗೆಯೇ ರೀ ರೆಕಾರ್ಡಿಂಗ್‌ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಮುಗಿಸಿಕೊಂಡು ಈಗ ಆಡಿಯೋ ರಿಲೀಸ್‌ ಗೆ ಪ್ಲಾನ್‌ ಮಾಡಿಕೊಂಡಿದೆ.

 

ಹೊಸ ವರ್ಷ ಜನವರಿ ತಿಂಗಳಲ್ಲಿ ಆಡಿಯೋ ಲಾಂಚ್‌ ಮಾಡಲು ತಯಾರಿ ನಡೆಸಿದೆ. ಹಾಗೆಯೇ ಚಿತ್ರದ ರಿಲೀಸ್‌ ಗೂ ಸಿದ್ದತೆ ನಡೆದಿದೆ. ಎಲ್ಲವೂ ಅಂದುಕೊಂಡಂತಾದರೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಚಿತ್ರ ರಿಲೀಸ್‌ ಗ್ಯಾರಂಟಿ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಕುಮಾರ್.‌ ಚಿತ್ರಕ್ಕೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಣವಿದೆ. ಪ್ಯಾಷನ್‌ ಮೂವೀ ಮೇಕರ್ಸ್‌ ಮೂಲಕ ಸಂತೋಷ್‌ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ದೇಶಕರಾಗಿ ಅವರಿಗಿದು ಮೂರನೇ ಚಿತ್ರ. ಹಾಗೆಯೇ ನಿರ್ಮಾಪಕರಾಗಿ ಎರಡನೇ ಚಿತ್ರ. ಈ ಸಲ ಸಕ್ಸಸ್‌ ಪಡೆಯಲೇ ಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ ಸಂತೋಷ್.‌ ಆಲ್‌ ದಿ ಬೆಸ್ಟ್‌ ಸಂತೋಷ್.

Categories
ಸಿನಿ ಸುದ್ದಿ

ಎಲ್ಲಾ ಬಿಟ್ಟು ಅಡಿಕೆ ಸುಲಿಯುವ ಕೆಲಸ ಶುರು ಮಾಡಿದ್ರಾ ಆ ನಟಿ ?

ಶಿರಸಿಯಲ್ಲಿದ್ದಾರೆ ರಾಬರ್ಟ್‌ ಸುಂದರಿ ಆಶಾ ಭಟ್‌

ʼರಾರ್ಬಟ್‌ʼ ಸುಂದರಿ ರಜೆಯ ಮಜಾದಲ್ಲಿದ್ದಾರೆ. ಬೆಂಗಳೂರಿನಲ್ಲಿದ್ದು ಸಿನಿಮಾ ಶೂಟಿಂಗ್‌, ಡಬ್ಬಿಂಗ್‌ ಅಂತೆಲ್ಲ ಯಾವುದೇ ಒತ್ತಡಕ್ಕೆ ಸಿಲುಕದೆ ರಜೆಯ ಮಜಾ ಸವಿಯಲು ಊರು ಕಡೆ ಮುಖ ಮಾಡಿದ್ದಾರೆ. ಸದ್ಯ ಅವರೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿದ್ದಾರೆ. ಅದು ಅವರ ಅಜ್ಜಿಯ ಮನೆ ಊರು. ಶಿರಸಿ ಅಂದ್ರೆ ಗೊತ್ತಲ್ವಾ ಮಲೆನಾಡಿನ ತವರೂರು. ಬಹುತೇಕ ಆಡಿಕೆ ತೋಟಗಳ ನಾಡು. ಹಾಗೆಯೇ ಮೋಹಕ ನೋಟದ ಗದ್ದೆ ಬಯಲು. ಅವುಗಳ ನಡುವೆ ಸುತ್ತಾಡುವುದು, ಅಡಿಕೆ ಸುಲಿಯುವುದು, ಕಾಡು ಬೀಡು ಸುತ್ತಾಡುತ್ತಾ ಕಣ್ಣು ತಂಪಾಗಿಸಿಕೊಳ್ಳುವುದೇ ಆನಂದ.

ಸದ್ಯಕ್ಕೆ ಅಂತಹದೇ ಅದ್ಬುತ ಅನುಭದಲ್ಲಿದ್ದಾರೆ ನಟಿ ಆಶಾಭಟ್.‌ ಆ ಅನುಭವದ ವಿಧ ವಿಧ ಪೋಟೋಗಳನ್ನು ಸೋಷಲ್‌ ಮೀಡಿಯಾದಲ್ಲಿ ಅಪಲೋಡ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಮಾಡೆಲ್‌ ಕಮ್‌ ನಟಿ ಆಶಾ ಭಟ್.‌ ಅಡಿಕೆ ಸುಲಿಯುವ ವಿಡಿಯೋ ಶೇರ್ ಮಾಡಿರುವ ಅಶಾ ಭಟ್, ‘ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ’ ಎಂದು ಬರೆದುಕೊಂಡಿದ್ದಾರೆ.

 

 

Categories
ಸಿನಿ ಸುದ್ದಿ

ರೈತರು ನಿಜವಾದ ವೀರರು-ರೈತರ ದಿನಕ್ಕೆ ಶುಭ ಕೋರಿದ  ಸ್ಟಾರ್ಸ್‌

ರೈತರ ಉತ್ಪನ್ನಗಳಿಗೆ ಬೆಲೆ ಸಿಕ್ಕಾಗಲೆ ರೈತ ದಿನಕ್ಕೆ ನಿಜ ಅರ್ಥ, ಶುಭಾಶಯ ಕೋರುವ ಸಂದರ್ಭದಲ್ಲೆ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನಟರು

 

ಇಂದು ರಾಷ್ಟ್ರೀಯ ರೈತ ದಿನಾಚರಣೆ. ನಿರಂತರ ದುಡಿಮೆಯಲ್ಲಿ ತೊಡಗುವ ನಾಡಿನ ಸಮಸ್ತ ರೈತರಿಗೆ ಕನ್ನಡ ಹಲವು ನಟರು ಶುಭಾಶಯ ಕೋರಿದ್ದಾರೆ. ರೈತರು ನಿಜವಾದ ವೀರರಾಗಿದ್ದಾರೆ. ಯಾಕೆಂದರೆ, ಅವರ ಸಮರ್ಪಣೆ ಮತ್ತು ಶ್ರಮದಿಂದ. ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ, ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಅಂತ ನಟ ದರ್ಶನ್‌ ಟ್ವಿಟ್‌ ಮಾಡಿದ್ದಾರೆ.

ಹಾಗೆಯೇ ನಟ ನಿಖಿಲ್‌ ಕುಮಾರ್‌ ಕೂಡ ರೈತರ ದಿನಕ್ಕೆ ಶುಭಾಶಯ ಕೋರಿದ್ದಾರೆ.
ʼ ದೇಶದ ಬೆನ್ನೆಲುಬು ರೈತ. ಎಲ್ಲರಿಗೂ ಅನ್ನದಾತರಾಗಿರುವ ಸಮಸ್ತ ರೈತ ಕುಲಕ್ಕೆ ರೈತ ದಿನದ ಶುಭಾಶಯ. ಬೆವರು ಸುರಿಸಿ ಬೆಳೆ ಬೆಳೆಯುವ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಗೌರವ ದೊರಕುವಂತಹ ದಿನಗಳು ಬಂದಾಗಲೇ ರೈತ ದಿನಾಚರಣೆ ಸಾರ್ಥಕʼ ಎಂದು ನಿಜವಾದ ಅರ್ಥʼ ಎಂಬುದಾಗಿ ನಿಖಿಲ್‌ ಟ್ವಿಟ್‌ ಮಾಡಿದ್ದಾರೆ.

ನಟ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಕೂಡ ರೈತರ ದಿನಕ್ಕೆ ಶುಭ ಕೋರಿದ್ದಾರೆ. ರೈತ ದೇಶದ ಬೆನ್ನೆಲುಬು, ರೈತ ದುಡಿದರೆ ಅನ್ನ, ನಾಡಿಗೆ ಅನ್ನ ನೀಡುವ ರೈತರ ಎಲ್ಲಾ ಸಂಕಷ್ಟಗಳು ಮುಂದಿನ ದಿನಗಳಲ್ಲಾದರೂ ಬಗೆ ಹರೆದು, ಸಂತಸ ಕಾಣಲಿ” ಎಂದು ಅವರು ಟ್ವಿಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಐರಾವನ್‌ ಟೀಸರ್‌ ಗೆ ಅದ್ಭುತ ರೆಸ್ಪಾನ್ಸ್, ಜೆಕೆ ಅವರಿಗೆ ಸಿಗುತ್ತಾ ದೊಡ್ಡದೊಂದು ಬ್ರೇಕ್‌ ?

ಅರ್ಜುನನ ಪುತ್ರನ ಅವತಾರ ಹೊತ್ತ ಕಾರ್ತಿಕ್‌ ಜಯರಾಂ, ಐದು ಭಾಷೆಗಳಲ್ಲಿ ಐರಾವನ್

ಜೆಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಈಗಾದ್ರೂ ಇನ್ನೊಂದು ಲೆವೆಲ್‌ಗೆ ಹೋಗ್ತಾರಾ? ಗೊತ್ತಿಲ್ಲ, ಅದರೆ ಅವರ ಫ್ಯಾನ್ಸ್‌ ಜತೆಗೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಹಾಗೊಂದು ಕುತೂಹಲ ಈಗ ಶುರುವಾಗಿದೆ. ಅದಕ್ಕೆ ಕಾರಣ ʼಐರಾವನ್‌ʼ ಚಿತ್ರ. ಒಂದಷ್ಟು ಗ್ಯಾಪ್‌ ನಂತರ ನಟ ಕಾರ್ತಿಕ್‌ ಜಯರಾಂ ಸಾಕಷ್ಟು ತಾಳ್ಮೆ ಮತ್ತು ಸಿದ್ದತೆಯೊಂದಿಗೆ ಮಾಡಿದ ಚಿತ್ರ ಇದು. ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಭಿನ್ನ ಮತ್ತು ವಿಶೇಷ. ಐರಾವನ್‌ ಅಂದ್ರೇನು? ಇದು ಕನ್ನಡದ ಸಿನಿ ಪ್ರೇಕ್ಷಕರಿಗೆ ಇರುವ ಪ್ರಶ್ನೆ.

ಚಿತ್ರ ತಂಡ ಹೇಳುವ ಪ್ರಕಾರ ʼಐರಾವನ್‌ʼ ಅಂದ್ರೆ ಅರ್ಜುನನ ಪುತ್ರನ ಹೆಸರಂತೆ. ಅದನ್ನೇ ಚಿತ್ರ ತಂಡ ಯಾಕೆ ಟೈಟಲ್‌ ಆಗಿಸಿಕೊಂಡಿದೆ ಎನ್ನುವ ಕುತೂಹಲದ ಪ್ರಶ್ನೆಗೆ ಅದು ಕತೆಯೊಳಗಿನ ಸಸ್ಪೆನ್ಸ್‌ ಎನ್ನುತ್ತಿದೆ ಚಿತ್ರ ತಂಡ. ಅದರೆ ಅದನ್ನೇ ಯಾಕೆ ಟೈಟಲ್‌ ಆಗಿಸಿಕೊಂಡಿದ್ದು ಎನ್ನುವುದಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದು ಕಾರಣವಂತೆ.

ಹೌದು, ಈ ಚಿತ್ರ ಕನ್ನಡ, ತಮಿಳು, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಅಷ್ಟು ಭಾಷೆಗಳಿಗೂ ಕನೆಕ್ಟ್‌ ಆಗಲಿ ಅಂತಲೇ ಚಿತ್ರತಂಡ ಸಾಕಷ್ಟು ರಿಸರ್ಚ್‌ ಮಾಡಿ, ಆಲೋಚಿಸಿ, ಐರಾವನ್‌ ಎನ್ನುವ ಪದವನ್ನೆ, ಟೈಟಲ್‌ ಅಗಿಸಿಕೊಂಡಿದೆಯಂತೆ. ಅದೆನೇ ಇರಲಿ, ʼಐರಾವನ್‌ʼಮೂಲಕ ಈಗ ಜೆಕೆ ಬಹುಭಾಷೆಗಳಲ್ಲೂ ಹೀರೋ ಆಗಿ ಎಂಟ್ರಿಯಾಗುತ್ತಿರುವುದು ವಿಶೇಷ.

ಹಾಗಂತ ಜೆಕೆಗೆ ಬಹುಭಾಷೆಗಳ ಬಣ್ಣದ ಜಗತ್ತು ಹೊಸದಲ್ಲ. ಹಾಗೆ ನೋಡಿದರೆ, ನಟ ಕಾರ್ತಿಕ್‌ ಜಯರಾಂ ಅವರಿಗೆ ಕನ್ನಡಕ್ಕಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದ್ದೇ ಹಿಂದಿ ಕಿರುತೆರೆಯ ಮೂಲಕ. ” ಸೀ ಯಾ ಕೆ ರಾಮ್‌ʼ ಧಾರಾವಾಹಿ ದೊಡ್ಡ ಗೆಲುವು ಕಂಡ ನಂತರ ಜೆಕೆ, ಹಿಂದಿ ಕಿರುತೆರೆಯಲ್ಲಿ ಮನೆ ಮಾತಾದರು. ಆಗಲೇ ಕನ್ನಡದ ಸಿನಮಾ ಮಂದಿ ಜೆಕೆ ಅವರತ್ತ ತಿರುಗಿ ನೋಡಿದರು. ಹಾಗಂತ ಕನ್ನಡದ ಸಿನಿಮಾ ನಿರ್ಮಾಪಕರು ಅವರಿಗೆ ರೆಡ್‌ ಕಾರ್ಪೆಟ್‌ ಹಾಕಿ ಕರೆದರು ಅಂತಲ್ಲ. ಒಂದಷ್ಟು ಆವಕಾಶ ಬರುವಂತೆ ಅಯಿತು. ಅದರೂ ಸಕ್ಸಸ್‌ ಸಿನಿಮಾದಲ್ಲಿ ದೊಡ್ಡ ಸಕ್ಸಸ್‌ ಕಾಣದೆ ಒಂಥರ ನೋವಿನ ಭಾವದಲ್ಲಿದ್ದ ಜೆಕೆ ಈಗ ಗಾಯಗೊಂಡ ಹುಲಿಯಂತೆ ಘರ್ಜಿಸಲು ರೆಡಿ ಅಗಿದ್ದಾರೆ. ಸೋಮವಾರವಷ್ಟೇ ಲಾಂಚ್‌ ಅಗಿರುವ ಟೀಸರ್‌ ನೋಡಿದರೆ ಜೆಕೆ, ಕಿರುತೆರೆಯ ಹಾಗೆಯೇ ಸಿನಿಮಾದಲ್ಲೂ ದೊಡ್ಡ ಹವಾ ಸೃಷ್ಟಿಸುವುದು ಗ್ಯಾರಂಟಿ ಎನಿಸಿದೆ.


ಐರಾವನ್‌ ಟೀಸರ್‌ ಮೇಕಿಂಗ್‌ ನಲ್ಲಿ ಗ್ರಾಂಡ್‌ ಆಗಿದೆ. ಹಾಗೆಯೇ ಲುಕ್‌ನಲ್ಲಿ ಜಬರ್‌ದಸ್ತ್‌ ಆಗಿದೆ. ಜೆಕೆ ಡಿಫೆರೆಂಟ್‌ ಗೆಟಪ್‌ನಲ್ಲಿ ಅಬ್ಬರಿಸಿದ್ದಾರೆ. ಟೀಸರ್‌ ನಲ್ಲಿನ ಅವರ ಎಂಟ್ರಿಯೇ ಜೋರಾಗಿದೆ. ಕತೆ ಸಸ್ಪೆನ್ಸ್‌, ಥ್ರಿಲ್ಲರ್‌
ಎನ್ನುವುದನ್ನು ಟೀಸರ್‌ ಹೇಳುತ್ತದೆ. ಜೆಕೆ ರಗಡ್‌ ಲುಕ್‌ ನೋಡಿದರೆ, ಐರಾವನ್‌ ಜೆಕೆಗೆ ಬ್ರೇಕ್‌ ನೀಡುವುದು ಗ್ಯಾರಂಟಿ ಎನಿಸುತ್ತದೆ. ಸಿನಿಮಾ ಜತೆಗೆ ಟೀಸರ್‌ ಕುರಿತು ಮಾತನಾಡುವ ನಟ ಜೆಕೆ, ತಮ್ಮ ನೆಚ್ಚಿನ ನಟ ಸುದೀಪ್‌ ಅವರು ಟೀಸರ್‌ ಲಾಂಚ್‌ ಮಾಡಿದಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರದ ಬಗ್ಗೆ ಅತೀವ ವಿಶ್ವಾಸ ವ್ಯಕ್ತಪಡಿಸಿದರು.

” ಇದೊಂದು ಕಠಿಣ ಪ್ರಯತ್ನದ ಫಲ. ಸಾಕಷ್ಟು ಶ್ರಮ ವಹಿಸಿ ಈ ಸಿನಿಮಾ ಮಾಡಿದ್ದೇವೆ. ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ಟೀಮ್‌ ವರ್ಕ್‌ ಅತ್ಯಾದ್ಭುತವಾಗಿದೆ. ಅವರೆಲ್ಲರ ಶ್ರಮದಿಂದಲೇ ಸಿನಿಮಾ ರಿಚ್‌ ಅಗಿ ಬಂದಿದೆʼ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ನಿರಂತರ ಪ್ರೋಡಕ್ಷನ್‌ ಮೂಲಕ ನಿರ್ಮಾಣವಾದ ಸಿನಿಮಾ ಇದು. ಯುವ ನಿರ್ದೇಶಕ ರಾಮ್‌ ರಂಗ, ಕತೆ, ಚಿತ್ರಕತೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಎಸ್.‌ ಪ್ರದೀಪ್‌ ವರ್ಮ ಸಂಗೀತ ನಿರ್ದೇಶನ ಇದೆ. ದೇವೇಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನ, ಕುಂಗ್ಪು ಚಂದ್ರು ಸಾಹಸವಿದೆ. ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರಕ್ಕೆ ಕಿಚ್ಚ ಸುದೀಪ್‌ ಸಾಥ್‌ ನೀಡಿರುವುದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲವಾಗಿದೆ.

Categories
ಸಿನಿ ಸುದ್ದಿ

ಕಿಚ್ಚ ಸುದೀಪ್‌ ಅವರಿಗೆ ಯಾಕೋ ವಯಸ್ಸಾಗಿರೋ ಫೀಲಿಂಗ್‌ ಅಂತೆ..!!

ಐರಾವನ್‌ ಟೀಸರ್‌ ಲಾಂಚ್‌ ನಲ್ಲಿ ಕಿಚ್ಚ  ಸುದೀಪ್‌ ಹಾಗೇಕೆ  ಹೇಳಿದರು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೀಗ ವಯಸ್ಸೆಷ್ಟು ? ಸದ್ಯಕ್ಕೆ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ವಯಸ್ಸಿನ ಬಗ್ಗೆ ಈ ತನಕ ಯೋಚಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಅವರ ಪಾಲಿಗೆ ನಟ ಕಿಚ್ಚ ಸುದೀಪ್‌ ಈಗಲೂ ಎವರ್‌ಗ್ರೀನ್‌ ಹೀರೋ. ಒಬ್ಬ ನಟನಾಗಿ ತೆರೆ ಮೇಲೆ ಈಗಲೂ ಲವರ್‌ ಬಾಯ್‌, ಅಷ್ಟೇ ಅಲ್ಲ, ಪ್ಲೇ ಬಾಯ್‌ ಕೂಡ ಹೌದು.‌ ಅದರಾಚೆ ಉಳಿದವರಿಗೂ ಕೂಡ ಸುದೀಪ್‌ ಅವರಿಗೆ ವಯಸ್ಸಾದ ಹಾಗೆ ಅನಿಸಿಲ್ಲ. ಆದರೆ ನಟ ಸುದೀಪ್‌ ಅವರೇ ಈಗ ತಮಗ್ಯಾಕೋ ವಯಸ್ಸಾದ ಫೀಲಿಂಗ್‌ ಶುರುವಾಗಿದೆ ಅಂತ ಹೇಳಿಕೊಂಡಿದ್ದಾರೆ. ಹಾಗಂತ ಸುದೀಪ್‌ ಹೇಳಿದ್ದು ಎಲ್ಲೋ ನಾಲ್ಕು ಜನರ ನಡುವೆ ಅಲ್ಲ. ಬದಲಿಗೆ ಅಧಿಕೃತವಾಗಿಯೇ ಆ ರೀತಿ ಹೇಳಿ ಕುತೂಹಲ ಮೂಡಿಸಿದರು. ಅಂದ ಹಾಗೆ ಇದು ಅಗಿದ್ದು, ʼಐರಾವನ್‌ʼ ಹೆಸರಿನ ಕನ್ನಡ ಚಿತ್ರದ ಟೀಸರ್‌ ಲಾಂಚ್‌ ಸಂದರ್ಭ !


ಜಕೆ ಅಲಿಯಾಸ್‌ ಕಾರ್ತಿಕ್‌ ಜಯರಾಂ ಅಭಿನಯದ ಚಿತ್ರ ʼಐರಾವನ್ʼ. ಇದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬರುತ್ತಿದೆ. ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಮುಗಿಸಿ ಈ ಚಿತ್ರ ರಿಲೀಸ್‌ ಗೆ ರೆಡಿ ಆಗಿದೆ. ಆ ನಿಟ್ಟಿನಲ್ಲೇ ಈ ಬ್ಯುಸಿ ಆಗಿರುವ ಚಿತ್ರ ತಂಡ ಸೋಮವಾರ ಸಂಜೆ ಬೆಂಗಳೂರಿನ ಕಾರ್ಲಟನ್‌ ಸ್ಟಾರ್‌ಹೋಟೆಲ್‌ನಲ್ಲಿ ಟೀಸರ್‌ ಕಾರ್ಯಕ್ರಮ ನಡೆಯಿತು. ಚಿತ್ರ ತಂಡ ಅದ್ದೂರಿಯಾಗಿಯೇ ಈ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿಗೆ ನಟ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿ ಬಂದಿದ್ದರು. ಅದಕ್ಕೆ ಕಾರಣ ನಟ ಜೆಕೆ. ಸುದೀಪ್‌ ಬಳಗದಲ್ಲಿ ಮೊದಲಿನಿಂದಲೂ ಗುರತಿಸಿಕೊಂಡವರ ಪೈಕಿ ಜೆಕೆ ಕೂಡ ಒಬ್ಬರು. ಸುದೀಪ್‌ ಅವರ ಕ್ರಿಕೆಟ್‌ ಬಳಗದಲ್ಲೂ ಜೆಕೆ ಇದ್ದಾರೆ. ಅದೇ ನಂಟಿನ ಮೂಲಕ ಸುದೀಪ್‌ ಈಗ ಜೆಕೆ ಸಿನಿಮಾ ಜರ್ನಿಗೂ ಸಾಥ್‌ ನೀಡುತ್ತಿದ್ದಾರೆ. ಅದೇ ಕಾರಣಕ್ಕೆ ಸೋಮವಾರ ʼಐರಾವನ್‌ʼ ಚಿತ್ರದ ಟೀಸರ್‌ ಲಾಂಚ್‌ ಗೆ ನಟ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿದ್ದರು.


ಚಿತ್ರ ತಂಡದೊಂದಿಗೆ ಸೇರಿ ಟೀಸರ್‌ ಲಾಂಚ್‌ ಮಾಡಿ ಮಾತನಾಡಿದ ಕಿಚ್ಚ ಸುದೀಪ್‌, ತಮಾಷೆಯಲ್ಲೇ ಕೆಲವು ಅನಿಸಿಕೆ ಹಂಚಿಕೊಂಡರು. ತುಂಬಾ ವರ್ಷಗಳ ಹಿಂದಕ್ಕೆ ಹೋಗಿಯೇ ಮಾತನಾಡುತ್ತೇನೆ. ಹೊಸದಾಗಿ ನಾನು ಚಿತ್ರರಂಗಕ್ಕೆ ಬಂದಾಗ ಕೆಲವರು ನನ್ನನ್ನು ಸನ್ಮಾನಿಸಿ, ಹಾರೈಸಿದ್ದಾಗ ಏನೋ ರೋಮಾಂಚನ ಅಗುತ್ತಿತ್ತು. ಆದರೆ, ಇವತ್ತು ನಾನು ವೇದಿಕೆಯಲ್ಲಿದ್ದು ಜೆಕೆ ಅವರನ್ನು ಸನ್ಮಾನಿಸುವಾಗ ಯಾಕೋ ನಂಗೇ ವಯಸ್ಸಾಯ್ತೇನೋ ಅಂತ ಫೀಲ್‌ ಅಗ್ತಿದೆ ಅಂತ ಹೇಳಿ ಹಾಸ್ಯ ಚಟಾಕಿ ಹಾರಿಸಿದರು. ಉಳಿದಂತೆ ಜೆಕೆ ಅವರ ನಟನೆಯ ಸಾಮರ್ಥ್ಯ ಹಾಗು ಬದ್ದತೆಯನ್ನು ಮೆಚ್ಚಿಕೊಂಡು ಮಾತನಾಡಿದರು.

 

Categories
ಸಿನಿ ಸುದ್ದಿ

ಬೀದಿಗೆ ಬಿತ್ತು ಚಲನಚಿತ್ರ ನಿರ್ದೇಶಕರ ಸಂಘದ ಘನತೆ, ಗೌರವ!

ಆರ್ಥಿಕ ಮುಗ್ಗಟ್ಟಿಗೆ  ಸಿಲುಕಿದ ನಿರ್ದೇಶಕರ ಸಂಘ

– ಕಚೇರಿ ಬಾಡಿಗೆ ಕಟ್ಟದೆ ಕಳೆಯಿತು ಒಂದು ವರ್ಷ

– ಪೊಲೀಸ್ ಮೆಟ್ಟಿಲೇರಿದ ಕಟ್ಟಡ ಮಾಲೀಕ

– ಅಂತಿಮವಾಗಿ ಹೊರ ಬಿದ್ದವು ಕಚೇರಿ ಪೀಠೋಪಕರಣ

(ಇದು ಸಿನಿ‌ಲಹರಿ  ಬ್ರೇಕಿಂಗ್)

ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘  ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ  ಇಂದು ಬೀದಿಗೆ ಬಿದ್ದಿದೆ‌. 2018 ರಲ್ಲಷ್ಟೇ ವಿಜಯನಗರದಿಂದ ನಾಗರಭಾವಿಗೆ ಸ್ಥಳಾಂತರ ಗೊಂಡ ಸಂಘದ  ಕಚೇರಿ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ  ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಾನಂತೆ‌. ಹಾಗೆಯೇ ಎರಡು ದಿನಗಳ ಹಿಂದಷ್ಟೇ ಕಚೇರಿಯಲ್ಲಿನ‌ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿ ಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನ ಲಾಗಿದೆಯಂತೆ.

ಸಂಘದ ಹಲವು ಪದಾಧಿಕಾರಿಗಳಲ್ಲಿ ಇದು ತೀವ್ರ ಬೇಸರ ಹುಟ್ಟಿಸಿದೆ‌. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು‌ ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿ ಸಿದ್ದಾರಂತೆ. ಸದ್ಯಕ್ಕೀಗ ಎಲ್ಲವೂ‌ ತೆರೆಮರೆಯಲ್ಲೆ  ನಡೆದಿದೆ.‌ ಕೊರೋನಾ ಕಾರಣ ಸಂಘವು ಆರ್ಥಿಕ‌ ಮುಗ್ಗಟ್ಟಿಗೆ ಸಿಲುಕಿದ್ದೇ ಇಷ್ಟಕ್ಕೆಲ್ಲ ಕಾರಣ ಅಂತಲೂ ಸಂಘದ ಕೆಲವು ಮೂಲಗಳು ತಿಳಿಸಿವೆ.

ಆದರೆ ಕೊರೋನಾ ಅಂತ‌ ಲಾಕ್ ಡೌನ್ ಶುರುವಾಗಿದ್ದು ಮಾರ್ಚ್ ತಿಂಗಳಿನಿಂದ.‌  ಚಿತ್ರೋದ್ಯಮ ಕೂಡ ಬಂದ್ ಆಗಿರುವುದು ಕೂಡ ಅಲ್ಲಿ‌ಂದಲೇ . ಆದರೆ  ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಇರುವುದು ಕಳೆದ‌ ಡಿಸೆಂಬರ್ ತಿಂಗಳಿನಿಂದಲೇ ಅಂತೆ. ಹಾಗಾದ್ರೆ ಆಗ ಕೊರೋನಾ ಇತ್ತಾ ಎನ್ನುವ ಪ್ರಶ್ನೆಯಿಂದಲೇ ಕಟ್ಟಡದ ಮಾಲೀಕ , ಸಂಘದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರಂತೆ ಎನ್ನುತ್ತಿವೆ ‌ಮೂಲಗಳು.ಸಂಘದ ಹಾಲಿ ಅಧ್ಯಕ್ಷರ ವಿರುದ್ಧವೇ ಕಟ್ಟಡದ ಮಾಲೀಕ ದೂರು ಸಲ್ಲಿಸಿರುವ ಸಂಗತಿ ಕೂಡ ರಿವೀಲ್ ಆಗಿದೆ.

ಕಚೇರಿ ಉದ್ಘಾಟನೆ ವೇಳೆ ನಟ ಕಿಚ್ಚ ಸುದೀಪ್

2018ರಲ್ಲಿ ಮಹತ್ತರ ಉದ್ದೇಶಗಳನ್ನು ಹೊತ್ತು ಕೊಂಡು  ವಿಶಾಲವಾದ ಬಾಡಿಗೆ ಕಟ್ಟಡಕ್ಕೆ ನಿರ್ದೇಶಕರ ಸಂಘ ಸ್ಥಳಾ‌ಂತರಗೊಂಡಿತ್ತು. ಅವತ್ತು ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು, ಸಂಘದ ಕಚೇರಿ ಉದ್ಧಾಟಿಸಿದ್ದರು. ಆದಾದ ನಂತರ ನಿರ್ದೇಶಕರ ಸಂಘಕ್ಕೆ ಪದಾಧಿಕಾರಗಳ ಆಯ್ಕೆ ನಡೆಯಿತು. ‌ನಿರ್ದೇಶಕರ ಸಂಘಕ್ಕೆ  ನಿರ್ಮಾಪಕ ಕಮ್ ನಿರ್ದೇಶಕ ‌ಟೇಶಿ ವೆಂಕಟೇಶ್ ಅಧ್ಯಕ್ಷರಾದರು‌. ಅವರು ಇನ್ನೇನು ಸಂಘವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗೋಣ ಎನ್ನುವ ಹೊತ್ತಿಗೆ ಕೊರೋನಾ ಶುರುವಾಯ್ತು. ಹಂತ ಹಂತವಾಗಿ ಮೇಲೆಳುತ್ತಿದ್ದ  ನಿರ್ದೇಶಕರ ಸಂಘ‌ ನೆಲ ಹಿಡಿಯಿತು‌.

ಮುಂದೆ ಕೊರೋನಾ,  ನಿರ್ದೇಶಕರು ಸೇರಿ‌ ಚಿತ್ರೋದ್ಯಮವನ್ನು ತೀವ್ರವಾಗಿ ಭಾದಿಸಿತು. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ‌ ಬಂತು‌. ಹಾಗೆ ಮಾಡಿದ್ದೇ ಸಂಘ ಆರ್ಥಿಕ‌ ಮುಗ್ಗಟ್ಟು ಅನುಭವಿಸಲು ಕಾರಣವಂತಂತೆ.ಆದರೆ ಕಟ್ಟಡದ ಮಾಲೀಕ ಕೇಳಬೇಕಲ್ಲ? ಬಾಡಿಗೆ ನೀಡಿಲ್ಲ ಅಂತ ಆತ ದೂರು ನೀಡಿದ್ದಾನೆ. ಪೀಠೋಪಕರಣ ಹೊರ ಹಾಕಿದ್ದಾನೆ. ಇದರಿಂದ ಸಂಘದ ಗೌರವ ಬೀದಿಗೆ ಬಿದ್ದಿದೆ ಎನ್ನುವುದು ಹೆಸರು ಹೇಳಲಿಚ್ಚಿಸದ ನಿರ್ದೇಶಕರೊಬ್ಬರ ಅಳಲು.
ಕನ್ನಡ ಚಿತ್ರರಂಗಕ್ಕೆ ದೊಡ್ಡ ಇತಿಹಾಸ ಇದೆ.ಹಾಗೆಯೇ ಅಲ್ಲಿರುವ ವಿವಿಧ ವಿಭಾಗಗಳ ಸಂಘಟನೆಗಳಿಗೂ ಅಷ್ಟೇ ಇತಿಹಾಸ, ಗೌರವ ಇದೆ. ಕರ್ನಾಟಕ ನಿರ್ಮಾಪಕರ ಸಂಘವು ತನ್ನ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದು ನಿಮಗೂ ಗೊತ್ತು. ಕಲಾವಿದರ ಸಂಘವು ಚಾಮರಾಜಪೇಟೆಯಲ್ಲಿ ಬೃಹತ್ ಭವನ ನಿರ್ಮಾಣ ಮಾಡಿದ್ದೂ ಕೂಡ ತಿಳಿದಿದ್ದೆ. ಇದೆಲ್ಲ ಸಿನಿಮಾಮಂದಿಯ ಸಾಹಸ.‌‌ ಹಾಗೆಯೇ ನಿರ್ದೇಶ ಕರ ಸಂಘವು ತನ್ನ ಸ್ವಂತ ಕಟ್ಟಡ ಹೊಂದಬೇಕು ಅಂತ ಕನ್ನಡ ಚಿತ್ರ ರಂಗ ಬಯಸುವಾಗ , ಬಾಡಿಗೆ ವಿಚಾರದಲ್ಲಿ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದ ಗೌರವ ಬೀದಿ ಪಾಲಾಗಿರುವುದು ನಿಜಕ್ಕೂ ಅವಮಾನವೇ‌ ಎನ್ನುವ ಮಾತು  ಸಿನಿಮಾ ಮಂದಿಯಿಂದ ಹೊರ ಬಿದ್ದಿದೆ.

ಆದಷ್ಟು‌ಬೇಗ ನಿರ್ದೇಶಕರ ಸಂಘವು ಈ ಮುಗ್ಗಟ್ಟಿನಿಂದ ಹೊರ ಬಂದು, ತನ್ನದೇ ಒಂದು‌ಕಟ್ಟಡ ಹೊಂದಲಿ ಎನ್ನುವುದು ಸಿನಿ‌‌ಲಹರಿ ಹಾರೈಕೆ.‌ಅದೇ ಕಾಳಜಿಯಿಂದ ಈ‌ ಬರಹ ಮಾತ್ರ

Categories
ಸಿನಿ ಸುದ್ದಿ

ಅಲೆಯಾಗಿ ಬಂದ ಹುಡುಗನ ಅಲೆ‌‌ ಅಲೆಯ ಮಾತು!

ಆ್ಯಕ್ಟರ್ ಆಗಲು ಗಾಂಧಿನಗರಕ್ಕೆ ಬಂದ ಡಾಕ್ಟರ್

ಪುನೀತ್ ರಾಜ್ ಕುಮಾರ್ ಜತೆಗೆ ರಥ ಕಿರಣ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಈಗಾಗಲೇ ಚಿತ್ರ ನಿರ್ಮಾಣದ ಜತೆಗೆ ಕನ್ನಡ ಅನೇಕ ಸಿನಿಮಾಗಳ ಆಡಿಯೋ ಹೊರ ತಂದಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಆದರೆ ಇದೇ ಮೊದಲ ಬಾರಿಗೆ ಪಿಆರ್ ಕೆ ಸಂಸ್ಥೆ‌ ಒಂದು ವಿಡಿಯೋ ಸಾಂಗ್ ಆಲ್ಬಂವೊಂದನ್ನು ಲಾಂಚ್ ಮಾಡುವ ಮೂಲಕ‌ ಸೋಷಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

 

‘ಅಲೆಯಾಗಿ ಬಾ ‘ ಎನ್ನುವುದು ಆ ವಿಡಿಯೋ ಸಾಂಗ್ ಆಲ್ಬಂ ಹೆಸರು. ಅದರಲ್ಲಿರುವುದು ಒಂದೇ ಒಂದು ಸಾಂಗ್.‌ಅದೀಗ ಸೋಷಲ್ ಮೀಡಿಯಾದಲ್ಲಿ‌ ಸಖತ್ ವೈರಲ್ ಆಗಿದೆ. ಅದಕ್ಕೆ , ಪಿಆರ್ ಕೆ ಸಂಸ್ಥೆ ಎನ್ನುವುದು ಹೇಗೆ ಕಾರಣವೋ,ಹಾಗೆಯೇ ಆ ಸಾಂಗ್ ಗುಣಮಟ್ಟವೂ ಅದಕ್ಕೆ ಅಷ್ಟೇ ಕಾರಣ. ಹಾಡಿನ ಸಾಹಿತ್ಯ ನಿರ್ದೇಶಕ ಸಿಂಪಲ್ ಸುನಿಯವರದ್ದು, ರಾಜೇಶ್ ಕೃಷ್ಣನ್ ಮತ್ತು ಆಶಾ ಭಟ್ ಇದರ ಗಾಯಕರು. ಬಿ.ಜೆ.‌ಭರತ್ ಸಂಗೀತ ನೀಡಿದ್ದಾರೆ. ಈ‌ಆಲ್ಬಂ ಥೀಮ್ ಡಾ. ಸಹನಾ ಸುಧಾಕರ್ ಅವರದ್ದು. ಆ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ ‘ಅಲೆಯಾಗಿ ಬಾ’ ಹಾಡು.

ಕೇಳುಗನ ಮನಸ್ಸಿಗೆ ಹಿತ ಕೊಡುವ ಆ ಹಾಡಿನ ಸಾಹಿತ್ಯ, ಕಣ್ಣಿಗೆ ಮುದ‌ ನೀಡುವ ಅದರ ಚಿತ್ರೀಕರಣ, ಹಾಗೆಯೇ ಕೇಳುವುದಕ್ಕೂ ಖುಷಿ ನೀಡುವ ಅದರ ಸಂಗೀತವೂ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಲು ಕಾರಣ. ಅದು ಪಿಆರ್ ಕೆ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಹೊರ ಬಂದ ಮೂರು ದಿನದಲ್ಲಿ ಎರಡೂವರೆ ಲಕ್ಷ ವಿವ್ಯೂಸ್ ಪಡೆದಿದೆ.

ಕುಂದಾಪುರದ ಸುಂದರ ನಿಸರ್ಗದ ಮಧ್ಯೆ ಅಷ್ಟೇ ಸೊಗಸಾಗಿ ಚಿತ್ರೀಕರಣಗೊಂಡಿರುವ ಈ ಹಾಡು, ಪ್ರೇಮ ಅರಸಿ ಹೋಗುವ ಹುಡುಗನ ಖುಷಿಯನ್ನು ಕಟ್ಟಿಕೊಡುತ್ತಿದೆ. ಹಾಡಿನ ಅಂತ್ಯದಲ್ಲಿ ಸಿಹಿ ನೋವನ್ನೂ ಸವರುತ್ತಿದೆ. ಅದೇ ಕಾರಣಕ್ಕೆ ಸೋಷಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. ಅದೇ ವೇಳೆ ಈ ಹಾಡಿನ ಕ್ವಾಲಿಟಿಗೂ ಅಪಾರ ಮೆಚ್ಚುಗೆ ಸೂಚಿಸುತ್ತಿರುವ ಜನರ ಕಣ್ಣು ಈಗ, ಈವಿಡಿಯೋ ಆಲ್ಬಂ ರೂವಾರಿಯ ಮೇಲೂ ಬಿದ್ದಿದೆ.

ಅಂದ ಹಾಗೆ, ಈ ಆಲ್ಬಂ ಸಾಂಗ್ ನ ರೂವಾರಿ ರಥ ಕಿರಣ್. ಇವರ ಮೂಲ‌ ಹೆಸರು ಕಿರಣ್. ಆನ್ ಸ್ಕ್ರೀನ್ ಪರಿಚಯಕ್ಕೆ ರಥ ಕಿರಣ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಹುಟ್ಟಿದ್ದು ಮೈಸೂರು, ಬೆಳೆದಿದ್ದು ವೃತ್ತಿಯಲ್ಲಿ ವೈದ್ಯರು. ಜೆಎಸ್ಎಸ್ ನಲ್ಲಿ ಮೆಡಿಕಲ್ ಶಿಕ್ಷಣ ಮುಗಿಸಿ, ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈಗ ವೈದ್ಯ ವೃತ್ತಿಗೆ ಒಂದಷ್ಟು ವಿಶ್ರಾಂತಿ ಕೊಟ್ಟು, ಸಿನಿಮಾ ನಟನಾಗುವ ಮಹತ್ತರ ಆಸೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅದರ ಮೊದಲ ಪ್ರಯತ್ನವೇ ‘ಅಲೆಯಾಗಿ ಬಾ’.

ಸಿನಿಮಾ ನನ್ನ‌ ಕನಸು, ಉಸಿರು‌. ಮೆಡಿಕಲ್ ಓದಿದರೂ ನನಗೆ ಸಿನಿಮಾ ನಟ ಆಗ್ಬೇಕು ಎನ್ನುವ ಆಸೆಗೆ ಕಾರಣ ಡಾ. ರಾಜ್ ಕುಮಾರ್. ಹಾಗೆಯೇ ಪುನೀತ್ ರಾಜ್ ಕುಮಾರ್ ನನ್ನ ನೆಚ್ಚಿನ ನಟ. ಅವರ ಪ್ರಭಾವದಿಂದಲೇ ನನಗೆ ಸಿನಿಮಾ ಹುಚ್ವು ಹತ್ತಿಸಿಕೊಂಡೆ‌. ಈಗ ನನಗೆ ಅದೇ ಮೈನ್ ಟಾರ್ಗೆಟ್. ಹಾಗಾಗಿಯೇ ನಾನು ಗಾಂಧಿನಗರಕ್ಕೆ ಬಂದೆ. ನನ್ನನು ನಾನು ತೋರಿಸಿಕೊಳ್ಳುವ ಮೊದಲ ಪ್ರಯತ್ನವಾಗಿ ಈ ವಿಡಿಯೋ ಸಾಂಗ್ ಆಲ್ಬಂ ಹೊರ ತಂದಿದ್ದೇನೆ’

– ರಥ ಕಿರಣ್, ಯುವ ನಟ

ಅವರೇ ಹೇಳುವ ಹಾಗೆ ರಥ ಕಿರಣ್ ನಟನಾಗಲು ಗಾಂಧಿನಗರಕ್ಕೆ ಬಂದವರು. ಬಂದ ಹೊಸತರಲ್ಲಿಯೇ ಅವರಿಗೆ ನಿರ್ದೇಶಕ‌ ಸಿಂಪಲ್ ಸುನಿ ಬೆಂಬಲ‌ಸಿಕ್ಕಿದೆ. ಈ ಹಾಡು ಬರುವುದಕ್ಕೆ ಸುನಿ ಅವರೇ ಕಾರಣವಂತೆ. ರಥ ಕಿರಣ್ ಗಾಂಧಿನಗರಕ್ಕೆ ಬಂದ ಹೊಸಬರಾದರೂ, ಅಭಿನಯದ ತಿಳಿವಳಿಕೆ ಬಲ್ಲವರು‌.‌  ಧನಂಜಯ್ ಅವರಿಂದ ಖಾಸಗಿಯಾಗಿ ಅಭಿನಯದ ಪಟ್ಟುಗಳನ್ನು ಕಲಿತುಕೊಂಡಿದ್ದಾರಂತೆ.‌ಅದೇ ಅನುಭವದಲ್ಲಿ ಕಿರುಚಿತ್ರವೊಂದರಲ್ಲೂ ಅಭಿನಯಿಸಿದ್ದಾರೆ‌. ಈಗ ಅಲೆಯಾಗಿ ಹಾಡಿಗೂ ನಾಯಕ ಆಗಿದ್ದಾರೆ‌. ಈ ಮೂಲಕ ನಟನಾಗಿ ಇಲ್ಲಿಯೇ ನೆಲೆ ನಿಲ್ಲುವ ಅಚಲ ವಿಶ್ವಾಸದಲ್ಲಿದ್ದಾರೆ ರಥ ಕಿರಣ್.

ಸದ್ಯಕ್ಕೆ‌’ ಅಲೆಯಾಗಿ‌‌‌‌ ಬಾ’ ಹಾಡು ‌ಭಾರೀ ಮೆಚ್ಚುಗೆ ಪಡೆದಿದೆ.ಜ‌ನ‌ಕೂಡ ಮೆಚ್ಚುಗೆ ಪಡೆದಿದ್ದಾರೆ. ಅದೇ ಥೀಮ್ ಅನ್ನು ಮುಂದುವರೆಸಲು ಸಹ ಕೆಲವರು ಸಲಹೆ ಕೊಟ್ಟಿದ್ದಾರಂತೆ.‌ಅದನ್ನೇ ಯಾಕೆ ಮಾಡಬಾರದು ಅಂತ, ಕಾತರದಲ್ಲಿರುವ ರಥ ಕಿರಣ್, ಯಾರೇ ಅವಕಾಶ ಕೊಟ್ಟರು ಸಿನಿಮಾ‌ಮಾಡಲು ರೆಡಿ ಇದ್ದಾರೆ.ಅಂತಹ ಅವಕಾಶ ಸಿಕ್ಕಿತೇ ಎನ್ನುವುದು ಮುಂದಿರುವ ಕುತೂಹಲ.

Categories
ಸಿನಿ ಸುದ್ದಿ

ಕನ್ನಡ, ತೆಲುಗಿನಲ್ಲಿ ಹೊಸಬರ ಚರಿತ್‌

ಚರಿತ್‌ ಚೊಚ್ಚಲ ಚಿತ್ರಕ್ಕೆ ಸೃಜನ್‌ ಲೋಕೇಶ್‌ ಸಾಥ್‌

ಮೈಸೂರು ಹುಡುಗನ ಹೀರೋ ಆಗುವ ಕನಸು ಕೊನೆಗೂ ನನಸಾಗಿದೆ. ಚರಿತ್‌ ಅಭಿನಯದ ಚೊಚ್ಚಲ ಚಿತ್ರ ʼ ಚರಿತ್‌ʼ ಅಧಿಕೃತವಾಗಿ  ಸೆಟ್ಟೇರಿದೆ. ಚಿತ್ರ ತಂಡ ಅಂದುಕೊಂಡಂತೆ ಮೊನ್ನೆ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌ ಆನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

 

ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದ್ದ ಚರಿತ್‌, ಈಗ ಹೀರೋ ಆಗಿ ಆಭಿನಯಿಸುತ್ತಿರುವ ಚೊಚ್ಚಲ ಚಿತ್ರ ಇದು. ಮೈಸೂರು ಮೂಲದವರೇ ಆದ ಭರತ್‌ ನಿರ್ಮಾಣ ಮಾಡುತ್ತಿದ್ದು, ಎ.ಆರ್.‌ ಕೃಷ್ಣ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ಇವರು ʼಅಥರ್ವʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭದಲ್ಲೀಗ ಚರಿತ್‌ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವುದು ವಿಶೇಷ.

ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ. ಈಗ ಎರಡು ಭಾಷೆಯಲ್ಲೂ ಚಿತ್ರ ತಂಡ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮಾಡಿದೆ. ಚಿತ್ರಕ್ಕಾಗಿಯೇ ಸಿಕ್ಸ್‌ ಪ್ಯಾಕ್‌ ಮೂಲಕ ದೇಹವನ್ನು ಸರಿಯಾಗಿ ಹುರಿಗಟ್ಟಿಸಿಕೊಂಡಿರುವ ಚರಿತ್‌, ಇಲ್ಲಿ ತನ್ನ ಬಾಡಿ ಪ್ರದರ್ಶನದ ಚಿತ್ರಣದೊಂದಿಗೆ ಫಸ್ಟ್‌ ಲುಕ್‌ ಲಾಂಚ್‌ ಆಗಿದೆ. ಹಾಗಂತ ಇದು ಗಿಮಿಕ್‌ ಅಲ್ಲ, ಚಿತ್ರದ ನಾಯಕನ ನಿಜ ಲುಕ್‌ ಅದು. ಯಾಕಂದ್ರೆ ಚಿತ್ರದಲ್ಲಿ ಚರಿತ್‌ ನಿರ್ವಹಿಸುತ್ತಿರುವ ಪಾತ್ರ ಹಾರ್ಸ್‌ ರೈಡರ್.‌ ಅದನ್ನು ಪರಿಚಯಿಸುವ ಪರಿಕಲ್ಪನೆಯ ಮೂಲಕ ಚಿತ್ರ ಫಸ್ಟ್‌ ಲುಕ್‌ ಲಾಂಚ್‌ ಪೋಸ್ಟರ್‌ ಲಾಂಚ್‌ ಮಾಡಿದೆ.

 

ಪೊಸ್ಟರ್‌ ಲಾಂಚ್‌ ಮಾಡಿ ಮಾತನಾಡಿದ ಸೃಜನ್‌ ಲೋಕೇಶ್‌, ಸಿನಿಮಾ ಅನ್ನೋದೇ ಒಂದು ಅಕರ್ಷಣೀಯ ಜಗತ್ತು. ಹಾಗಂತ ಬರೀ ಆಕರ್ಷಣಿಗೆ ಇಲ್ಲಿ ಬರುವುದಲ್ಲ, ಟ್ಯಾಲೆಂಟ್‌ ಇಂಫಾರ್ಟೆಂಟ್.‌ ಟ್ಯಾಲೆಂಟ್‌ ಇದ್ದರೆ ಇಲ್ಲಿ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಬಹುದು. ಈಗ ಕಂಟೆಂಟ್‌ ಆಧರಿತ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಹೊಸಬರಾದ ನೀವು ಕೂಡ ಆ ಕಡೆ ಹೆಚ್ಚು ಗಮನ ಹರಿಸಿ ಅಂತವ ಕಿವಿ ಮಾತು  ಹೇಳುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾಗಿ ಚಿತ್ರದ ನಾಯಕ ನಟ ಚರಿತ್’‌ ಸಿನಿಲಹರಿ’ ಗೆ ತಿಳಿಸಿದರು.

 

ಸದ್ಯಕ್ಕೆ ಚಿತ್ರಕ್ಕೆ ತಂತ್ರಜ್ನರ ಜತೆಗೆ ಹೀರೋ ಮಾತ್ರ ಸೆಲೆಕ್ಟ್‌ ಆಗಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿ ಇದೆ. ಚರಿತ್‌ ಫಸ್ಟ್‌ ಲುಕ್‌ ಗೆ ಅಪಾರ ಮೆಚ್ಚುಗೆ ಕೂಡ ಸಿಕ್ಕಿದೆ. ನಟಿಯರಾದ ಮಾನ್ವಿತಾ ಹರೀಶ್‌ ಹಾಗೂ ನಭಾ ನಟೇಶ್‌ ಸೇರಿದಂತೆ ಹನವರು ತಮ್ಮ ಫೇಸ್‌ ಬುಕ್‌ ಹಾಗೂ ಟ್ವಿಟರ್‌ ಖಾತೆಗಳಲ್ಲಿ ಪೋಸ್ಟರ್‌ ಶೇರ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದು ಚಿತ್ರ ತಡಕ್ಕೆ ಖುಷಿ ಕೊಟ್ಟಿದೆ.

error: Content is protected !!