ಜಟಕಾ ‌ಕುದುರೆ ಹತ್ತಿ ಪ್ಯಾಟೆಗೋಗುಮ ಅಂತ ಗೀತೆ ಬರೆದ ಶ್ರೀರಂಗ ಈಗ ಹೇಗಿದ್ದಾರೆ ಗೋತ್ತಾ?

ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ ನಟ. ರಂಗಭೂಮಿ ,ಸಿನಿಮಾ ನಟನೆಯ ಜತೆಗೆ ಅವರು ಸಾಮಾಜಿಕ ಕಾಳಜಿಗೆ ಮಿಡಿಯುವ ಒರ್ವ ಹೃದಯವಂತ ಕಲಾವಿದ. ಅವರು ಇತ್ತೀಚೆಗೆ ಕೆ.ಆರ್.ಪುರಂ ನಲ್ಲಿನ‌ ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಹೋದಾಗ ಅಲ್ಲಿ ಕಂಡ ಶ್ರೀರಂಗ ಅವರ ಬಗ್ಗೆ ಬರೆದ ಬರಹ ಇಲ್ಲಿದೆ. ಅವರ ಅನುಮತಿ ಪಡೆದುಕೊಂಡೆ‌ ‘ ಸಿನಿ‌ಲಹರಿ ‘ ಈ ಬರಹ ಪ್ರಕಟಿಸಿದೆ.

ಶ್ರೀರಂಗ ಅವರನ್ನು ನಟ ವಿಜಯ್ ಕಂಡ ಕ್ಷಣ…

‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ ನೀ ವಯ್ಯಾರದ ಗೊಂಬೆ’, ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’, ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’….. ಹಾಡುಗಳನ್ನ ಹಾಗು ‘ಜನುಮದ ಜೋಡಿ’, ‘ರಕ್ತ ಕಣ್ಣೀರು’, ‘ಆಕಾಶ್’, ‘ವೀರ ಕನ್ನಡಿಗ’, ‘ಅಪ್ಪಾಜಿ’, ‘ಇನ್ಸ್ಪೆಕ್ಟರ್ ವಿಕ್ರಮ್’, ‘ಗಂಡುಗಲಿ ಕುಮಾರ ರಾಮ’, ‘ಆಸೆಗೊಬ್ಬ ಮೀಸೆಗೊಬ್ಬ’ ಮುಂತಾದ ಚಿತ್ರದ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗರೂ ಒಂದಲ್ಲ ಒಂದು ಸಾರಿ ಗುನುಗೇ ಗುನುಗಿರುತ್ತೇವೆ.
ಇವರು ಬರೆದು ನಿರ್ದೇಶಿಸಿದ ಹಲವಾರು ನಾಟಕಗಳನ್ನೂ ನೋಡಿರುತ್ತೇವೆ.

ಜೊತೆಗೆ ‘ಅಂಜದ ಗಂಡು’, ‘ಕಿಂದರಿ ಜೋಗಿ’, ‘ಮುತ್ತೈದೆ ಭಾಗ್ಯ’, ‘ಅದೃಷ್ಟ ರೇಖೆ’, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ’, ‘ಶುಕ್ರ ದೆಶೆ’, ‘ಭೂಲೋಕದಲ್ಲಿ ಯಮರಾಜ’ ಹೀಗೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದನ್ನೂ ಗಮನಿಸಿರುತ್ತೇವೆ ಆದರೆ ಅವರು ಯಾರಿರಬಹುದು ಅನ್ನುವುದು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ ಅದಕ್ಕೆ ಕಾರಣವೂ ಇರುವುದಿಲ್ಲ.

ಅವರು ಮತ್ಯಾರು ಅಲ್ಲ ಕನ್ನಡದ ಹಿರಿಯ ಸಾಹಿತಿಗಳು, ಸಂಭಾಷಣೆಗಾರರು, ನಿರ್ದೇಶಕರೂ ಆದ “ಶ್ರೀ ರಂಗ”ರವರು. ಇವರನ್ನು ‘ಭಂಗಿ ರಂಗ’ ಎಂದು ಸಹಾ ಕರೆಯುತ್ತಿದ್ದರೆಂದು ಅವರ ಬಾಯಿಂದಲೇ ಕೇಳಿ ತಿಳಿದೆವು.

ಈಗ್ಗೆ ಒಂದು ವಾರದ ಹಿಂದೆ ಕೆ.ಅರ್.ಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ನಾನು ಕೂಡ ಅತಿಥಿಯಾಗಿ ಹೋಗಿದ್ದಾಗ ಆಕಸ್ಮಿಕವಾಗಿ ಇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ವೇದಿಕೆಯ ಮುಂಭಾಗದಲ್ಲಿ ಮಗುವಿನಂತೆ ಕುಳಿತು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಮುಗ್ಧ ನಗುವೊಂದು ನನ್ನನ್ನು ಸೆಳೆಯುತ್ತಿತ್ತು. ವೇದಿಕೆಯ ಮೇಲೆ ಕುಳಿತೇ ಅವರನ್ನು ಮೊಬೈಲಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಪಕ್ಕದಲ್ಲಿ ಕುಳಿತಿದ್ದವರು ಅದನ್ನು ಗಮನಿಸಿ ಕಿವಿಯಲ್ಲಿ ನಿಧಾನವಾಗಿ ‘ಇವರಿಗೆ ಏನಾದರೂ ಸಹಾಯ ಮಾಡಬಹುದಾ? ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ’ ಎಂದರು. ಅವರಾಡಿದ ಮಾತು ಯಾಕೋ ಮನಸಿನೊಳಗೆ ಕೊರೆಯಲು ಶುರುಮಾಡಿತು. ಸರಿ ಕಾರ್ಯಕ್ರಮ ಮುಗಿದಮೇಲೆ ಖುದ್ದಾಗಿ ಇವರನ್ನು ಭೇಟಿಯಾಗಿ ಮಾತನಾಡಿಸಲೇಬೇಕು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿ ಅವರನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪಾಪ ಇಳಿ ವಯಸ್ಸು ಬಹಳ ಹೊತ್ತು ಕುಳಿತುಕೊಳ್ಳಲು ಕಷ್ಟವಾಗಿಯೋ ಏನೋ ಶ್ರೀರಂಗರು ಅಲ್ಲಿಂದ ಮನೆಗೆ ಹೊರಟುಬಿಟ್ಟರು. ಕಾರ್ಯಕ್ರಮ ಮುಗಿಯಿತು ಅಲ್ಲಿದ್ದವರೊಬ್ಬರನ್ನು ಕೇಳಿದೆ ‘ ಶ್ರೀರಂಗರನ್ನು ಖುದ್ದು ಭೇಟಿಯಾಗಬಹುದೇ?’ ಅದಕ್ಕವರು ಹಿಂದೂ ಮುಂದೂ ನೋಡದೆ ಅವರದೇ ಕಾರಿನಲ್ಲಿ ಕೂರಿಸಿಕೊಂಡು ಮನೆಯ ಹತ್ತಿರ ಕರೆದುಕೊಂಡು ಹೋದರು.

ಕಾರು ಮನೆಯ ಗೇಟಿನ ಹತ್ತಿರ ಬಂದು ನಿಲ್ಲುತ್ತಿದ್ದಂತೆ ಪುಟ್ಟ ಮಗುವಿನ ಹಾಗೆ ಓಡೋಡಿ ಬಂದ ಶ್ರೀಗಳು ‘ಯಾರು?’ ಎಂದು ಕೇಳಬೇಕೆನ್ನುವ ಸಮಯಕ್ಕೆ ನನ್ನ ಜೊತೆಯಲ್ಲಿದ್ದವರನ್ನು ನೋಡಿ ಗುರುತು ಹಿಡಿದು ‘ಹೋ!!!!ನೀವಾ ಬನ್ನಿ ಬನ್ನಿ’ ಎಂದು ಗೇಟಿನ ಬಾಗಿಲು ತೆಗೆದು ಒಳ ಕರೆದರು.
ನಾನು ಗೇಟಿನ ಒಳಗೆ ನಡೆದವನೇ ಶೂ ಬಿಚ್ಚತೊಡಗಿದೆ ನನ್ನ ಜೊತೆಯಲ್ಲಿದ್ದವರು ತಡೆದು ‘ಮನೆ ಇದಲ್ಲ ಮೊದಲನೇ ಮಹಡಿ ಅಂದ್ರು’.
ವೇದಿಕೆಯ ಮೇಲೆ ನನ್ನ ಪಕ್ಕ ಕುಳಿತಿದ್ದವರು ಹೇಳಿದ ಮಾತು ಕಣ್ಣ ಮುಂದೆ ಹಾದು ಹೋಯಿತು. ಶ್ರೀ ರಂಗರ ಮುಖ ನೋಡಿ ಏನೋ ಸಂಕಟವಾಗೋಕೆ ಶುರುವಾಯ್ತು 86 ವರ್ಷದ ಹಿರಿಯ ಜೀವ ಹೀಗೆ ಸಣ್ಣ ಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದೆಂದರೆ ತಮಾಷೆಯ ಮಾತಲ್ಲ ಅಂಥದ್ದರಲ್ಲಿ ಅಷ್ಟು ಚುರುಕಾಗಿ ಪಟ ಪಟ ಅಂತ ಮೆಟ್ಟಿಲು ಹತ್ತಿ ನಮ್ಮನ್ನು ಕರೆದೊಯ್ದು ಬಾಗಿಲು ತೆರೆದು ಮನೆಯೊಳಗೆ ಹೆಜ್ಜೆ ಇಡುತ್ತಲೇ ‘ತುಂಬಾ ಪುಟ್ಟ ಮನೆ ಏನು ಅಂದುಕೊಳ್ಳಬೇಡಿ’ ಅಂತ ಸೌಜನ್ಯದಿಂದ ನುಡಿದರು. ಮರು ಮಾತಾಡಿದರೆ ಅತಿಯಾಗಬಹುದೇನೋ ಅಂದುಕೊಂಡು ಸುಮ್ಮನೆ ಅವರ ಪಕ್ಕದಲ್ಲಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದೆ. ಪುಟ್ಟ ಗೂಡಿನ ಬಾಡಿಗೆ ಮನೆ ಅಂತ ತಿಳಿದುಕೊಳ್ಳಲು ಹೆಚ್ಚು ಸಮಯವೂ ಬೇಕಾಗಲಿಲ್ಲ. ಹೀಗೆ ಮಾತು ಸಾಗುತ್ತ ಸಾಹಿತ್ಯ,ಬರವಣಿಗೆ,ಸಿನೆಮಾ ಬಗ್ಗೆ ಅವರ ಮಾತುಗಳಲ್ಲೇ ಕೇಳುತ್ತಾ ಕುಳಿತಿದ್ದೆವು.

‘ಸುಮಾರು ಹದಿನೈದು ಇಪ್ಪತ್ತು ವರ್ಷಗಳಾಯ್ತು ಗಾಂಧಿನಗರದ ಕಡೆ ಮುಖಮಾಡಿ ಈಗ ಎಲ್ಲಾ ಬದಲಾಗಿರಬೇಕು,ನಾನು ಒಂದಷ್ಟು ವರ್ಷಗಳ ಕಾಲ ಚಿತ್ರರಂಗಕ್ಕೆ ದುಡಿದೆ ಈಗ ವಯೋ ಸಹಜ ಸಣ್ಣ ಪುಟ್ಟ ಕಾಯಿಲೆಗಳು ಕೆಲಸ ಮಾಡೋದು ಕಷ್ಟ. ಈಗಲೂ ಬರೆಯಬೇಕೆಂಬ ಆಸೆ ಬೆಟ್ಟದಷ್ಟಿದೆ ಆದರೆ ಏನು ಮಾಡೋದು ಕಾಲ ಬದಲಾಗಿದೆ ಈಗಿನವರ ಸಿನಿಮಾ ಅಭಿರುಚಿಯೇ ಬೇರೆ’ ಎಂದು ಹೇಳುತ್ತಾ ತಮ್ಮ ಮತ್ತು ಗಾಂಧಿನಗರದ ನಂಟಿನ ಬಗ್ಗೆ ಮಾತು ಸಾಗುತ್ತಿತ್ತು. ಅದೇ ಸಮಯಕ್ಕೆ ಶ್ರೀರಂಗರ ಧರ್ಮಪತ್ನಿಯವರೂ ಸಹ ನಾವು ಕುಳಿತಿದ್ದ ಜಾಗಕ್ಕೆ ಗೋಡೆಗೆ ಆತುಕೊಂಡಿದ್ದ ಒಬ್ಬರೇ ಓಡಾಡಬಹುದಾದ ಚಿಕ್ಕ ಅಡುಗೆ ಮನೆಯಿಂದ ಹೊರಬಂದು ನಮ್ಮನ್ನು ನೋಡಿ ಸಣ್ಣ ನಗೆಬೀರಿ ಅವರೂ ಮಾತಿಗಿಳಿದು ‘ಇಲ್ಲಿರುವುದು ನಾವಿಬ್ಬರೇ ಸದ್ಯಕ್ಕೆ ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ, ಮಗಳು ಅಲ್ಲಿ ಇಲ್ಲಿ ಆರ್ಕೆಷ್ಟ್ರಾದಲ್ಲಿ ಹಾಡಿ ಜೀವನ ನಡೆಸುತ್ತಿದ್ದಾಳೆ ಅವಳದು ಒಂಥರಾ ಕಷ್ಟ. ಅದರೊಳಗೆ ನಮ್ಮನ್ನು ನೋಡಿಕೊಳ್ಳುವುದಂತೂ ಕಷ್ಟ ಸಾಧ್ಯ ಹಾಗೂ ಹೀಗೂ ಕೊರೊನ ಸಂಕಷ್ಟದಲ್ಲೂ ಬದುಕಿ ಜೀವನ ನಡೆಸುತ್ತಾ ಇದ್ದೀವಿ’. ಅಂದರು.

ಹೀಗೆ ಮಾತು ಮುಂದುವರಿಸಿ ನಮ್ಮ ಜೊತೆಯಲ್ಲಿದ್ದವರಒಬ್ಬರನ್ನು ಕುರಿತು ‘ಇವರು ಇದೆ ಬಡಾವಣೆಯವರು ನಮ್ಮ ಕಷ್ಟಕ್ಕೆ ಮರುಗಿ ಆಗಾಗ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇಲ್ಲಿಯವರೆಗೂ ನಮ್ಮನ್ನು ಅವರ ತಂದೆ ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರೇ ನಮಗೆ ಮಕ್ಕಳು. ನಮಗೂ ತುಂಬಾ ವಯಸ್ಸಾಗಿದೆ ಹೊರಗೆ ಹೋಗಿ ದುಡಿಯುವ ಶಕ್ತಿಯಂತೂ ಇಲ್ಲ ಕೊನೆಯವರೆಗೂ ನಾವು ಇವರುಗಳಿಗೆ ಎಷ್ಟು ಕೃತಘ್ನತೆ ಹೇಳಿದರೂ ಸಾಲದು ‘ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವಾಗ ದುಃಖ ಒತ್ತರಿಸಿ ಬಂದು ಸೆರಗಿನಿಂದ ನಮಗೆ ಗೊತ್ತಾಗದಂತೆ ಕಣ್ಣೇರು ಒರೆಸಿಕೊಳ್ಳುವ ಪ್ರಯತ್ನ ಮಾಡಿದರು. ನಮ್ಮ ಕಣ್ಣುಗಳೂ ಸಹ ಒದ್ದೆಯಾಗಿದ್ದವು ನಾವೂ ನೋಡಿಯೂ ನೋಡದವರಂತೆ ಭಾರವಾದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆವು. ಹೀಗೆ ಮಾತಿನ ನಡುವೆ ಒಂದು ಧೀರ್ಘ ಮೌನ ಆ ನಂತರ ಮಾತು ಬದಲಿಸಲು ನಾನು ಶ್ರೀರಂಗರನ್ನು ‘ಒಂದು ಸೆಲ್ಫಿ ತೆಗೆದುಕೊಳ್ಳಲೇ?’ಎಂದು ಕೇಳಿದೆ. ಅದಕ್ಕವರು ಒಂದೇ ಮಾತಿನಲ್ಲಿ ‘ಬೇಡ’ ಅಂದುಬಿಡಬೇಕೆ. ನನಗೋ ಅವಮಾನವಾದಂತಾಗಿ ಮರುಮಾತಾಡದೆ ‘ಹೊರಡೋಣವೇ?’ ಎಂದು ಎದ್ದು ನಿಂತೆವು.

ಕೊನೆಗೆ ನಮ್ಮನ್ನು ಬೀಳ್ಕೊಡಲು ಬಾಗಿಲ ಬಳಿ ಬಂದ ಹಿರಿಯ ಜೀವಗಳು ನಿಮಗೆ ತಿನ್ನಲು ಕುಡಿಯಲು ಏನು ಮಾಡಿಕೊಡಲಿಲ್ಲವಲ್ಲ’ ಅಂದ್ರು.
ಹೃದಯ ತುಂಬಿ ಬಂತು ಮನೆ ಖಾಲಿಯಿದ್ದರೂ ಮನಸ್ಸು ಎಷ್ಟೊಂದು ತುಂಬಿದೆಯಲ್ಲಾ ಅನ್ನಿಸಿತು. ಈ ವಯಸ್ಸಿನಲ್ಲಿ ಇದೆಂತಹ ಶಿಕ್ಷೆ. ಒಂದು ಕಡೆ ವಯಸ್ಸು ಮಾಗಿ ದುಡಿಯಲಾರದೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿ ಬದುಕಲಾರದ ಬದುಕು, ಮತ್ತೊಂದು ಕಡೆ ಮಗಳು ಇದ್ದು ಇರುವ ಎರೆಡು ಜೀವಗಳನ್ನು ನೋಡಿಕೊಳ್ಳಲೂ ಆಗದ ಅಸಹಾಯಕ ಸ್ಥಿತಿ. ದೇವರೇ ಮತ್ಯಾರಿಗೂ ಇಂತ ಕಷ್ಟ ಬಾರದಿರಲಿ ಎಂದು ಆ ಕ್ಷಣಕ್ಕೆ ಪ್ರಾರ್ಥಿಸುವುದು ಬಿಟ್ಟು ಬೇರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಭಾರವಾದ ಮನಸ್ಸಲ್ಲಿ ಹೊರಬಂದವನೇ ಕುತೂಹಲಕ್ಕೆ ಕೇಳಿದೆ ‘ಯಾಕೆ ಸೆಲ್ಫಿ ಕೇಳಿದರೆ ಒಂದೇ ಮಾತಲ್ಲಿ ಬೇಡ ಅಂದರಲ್ಲ’.
ಅದಕ್ಕವರ ಉತ್ತರ ‘ಶ್ರೀ ರಂಗರು ತುಂಬಾ ಸ್ವಾಭಿಮಾನಿ ಇವತ್ತಿನ ಈ ಕ್ಷಣದವರೆಗೂ ಯಾರಲ್ಲೂ ಕೈಚಾಚಿ ಒಂದು ಸಣ್ಣ ಸಹಾಯವನ್ನೂ ಬೇಡಿದವರಲ್ಲ ನಾವೇ ಅವರಿಗೆ ಒತ್ತಾಯ ಮಾಡಿ ನಾವು ನಿಮ್ಮ ಮಕ್ಕಳಂತೆ ಅಲ್ಲವೇ ಎಂದು ತಿಳಿ ಹೇಳಿ ಸಣ್ಣ ಪುಟ್ಟ ಸಹಾಯ ಮಾಡುತ್ತಿರುತ್ತೇವೆ. ಹೀಗೆ ಯಾರೋ ಹೊರಗಿನಿಂದ ಬಂದು ಸಹಾಯ ಮಾಡುವ ನೆಪದಲ್ಲಿ ಫೋಟೋ ತೆಗೆದುಕೊಂಡು ನಮ್ಮ ಈಗಿನ ಸ್ಥಿತಿಯನ್ನು ಜನಕ್ಕೆ ತೋರಿಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಬಿಡುತ್ತಾರೋ ಅನ್ನುವ ಭಯ ಅವರಿಗೆ’ ಅಂದರು. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ‘ಕಸ್ತೂರಿ ನಿವಾಸದ’ ಕೊನೆಯ ದೃಶ್ಯ.

ಇಷ್ಟು ಬರೆದು ಶ್ರೀರಂಗ‌ಅವರಿಗೆ ಆತ್ಮೀಯರು ನೆರವಾಗುವಂತೆ ಮನವಿ‌ಮಾಡಿದ್ದಾರೆ. ಹಾಗೆಯೇ ಬ್ಯಾ‌ಂಕ್ ವಿವರ ಕೂಡ ಕೊಟ್ಟಿದ್ದಾರೆ.ಅದರ ವಿವರ ಇಂತಿದೆ.

Name- sree ranga
state bank of india
Chandar layout branch
Ifsc SBIN 0004051

A/c no 64145797446

ಸಪರ್ಕಕ್ಕೆ, ಗಿರೀಶ್ – 98866-40906.

Related Posts

error: Content is protected !!