– ಧ್ರುವ ಅಂದವರಿಗೆ ನನ್ ಸಿನ್ಮಾ ನೆನಪಾಗಬೇಕು
– ಕಂಟೆಂಟ್ ಆಧಾರಿತ ಸಿನ್ಮಾ ಮಾಡ್ಬೇಕೆನ್ನೋದು ನನ್ನ ಟಾರ್ಗೆಟ್
– ನಂಗೆ ಯೂನಿವರ್ಷಲ್ ಆದ ಕಾಡಿಸುವ ಕತೆ ಬೇಕು
– ಪೊಗರು ಅಂದ್ರೆ ಬರೀ ಗಡ್ಡ ಬಿಟ್ಟ ಧ್ರುವ ಮಾತ್ರ ಇಲ್ಲ
– ಸಣ್ಣ ಆಗುವುದು, ದಪ್ಪ ಆಗುವುದಂದ್ರೆ ತಮಾಷೆ ಅಲ್ಲ
ʼಪೊಗರುʼ ರಿಲೀಸ್ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಜತೆಗೆ ಸಿನಿ ಲಹರಿ ನಡೆಸಿದ ಎಕ್ಸ್ ಕ್ಲೂಸಿವ್ ಸಂದರ್ಶನ ಇಲ್ಲಿದೆ..
– ಮೂರು ವರ್ಷದ ಬಳಿಕ ತೆರೆ ಮೇಲೆ ಬರ್ತೀದ್ದೀರಿ, ಆದ್ರೆ ಬೇಡಿಕೆಯುಳ್ಳ ಒಬ್ಬ ಸ್ಟಾರ್ ದೃಷ್ಟಿಯಲ್ಲಿ ಇದು ದೊಡ್ಡ ಗ್ಯಾಪ್ ಅಲ್ವಾ?
ನಿಜ, ಅದ್ರೆ ಅದಕ್ಕೆ ಸಾಕಷ್ಟು ಕಾರಣ ಇವೆ. ಒಬ್ಬ ಆಕ್ಟರ್ ಆಗಿ ನಾನೇನು ಹೇಳೋದಿಕ್ಕೆ ಬಯಸುತ್ತೇನೆಂದ್ರೆ, ನಾವೇನು ಮಾಡ್ತೀವಿ ಅಂತಂದುಕೊಳ್ಳುತ್ತೇವೋ, ಅದಕ್ಕೆ ನಾನಿದ್ದೀನಿ ಅಂತ ಹೇಳೋ ತಂಡಬೇಕು. ಅಂತಹ ಸಪೋರ್ಟ್ ಈ ಸಿನಿಮಾ ಟೀಮ್‌ನಲ್ಲಿತ್ತು. ಮೇಲಾಗಿ, ನನ್ನ ಪಾತ್ರಕ್ಕಿಲ್ಲಿ ಸಾಕಷ್ಟು ಶೇಡ್ಸ್ ಇವೆ. ಸಣ್ಣ ಆಗಿದ್ದರಿಂದ ಹಿಡಿದು, ಮತ್ತೆ ದಪ್ಪ ಆಗುವುದಂದ್ರೆ ಅದು ಸುಮ್ನೆ ಅಲ್ಲ. ಅದಕ್ಕೆ ಒಂದಷ್ಟು ಟೈಮ್ ಹಿಡಿತು. ಜತೆಗೆ ಯಾರನ್ನಾದ್ರೂ ಆಚೆ ಕಡೆಯಿಂದ ಕರೆಸಿಕೊಳ್ಳುವುದಕ್ಕೂ ತುಂಬಾ ಪ್ರೊಸಿಜರ್ ಇದ್ವು. ಅದಕ್ಕೂ ಒಂಷ್ಟು ಸಮಯ ಬೇಕಾಯಿತು. ತುಂಬಾ ಎಕ್ಸ್‌ಕ್ಲೂಸಿವ್ ಸೀನ್ಸ್ ಈ ಸಿನಿಮಾದಲ್ಲಿದೆ. ಬರೀ ಗಡ್ಡ ಬಿಟ್ಕೊಂಡು ನಾನಿಲ್ಲಿ ಕಾಣಿಸಿಕೊಂಡಿಲ್ಲ, ಅದರಾಚೆ, ಆಡಿಯನ್ಸ್‌ಗೆ ಇಷ್ಟ ಆಗುವಂತಹ ಎಲಿಮೆಂಟ್ಸ್ ಸಾಕಷ್ಟಿವೆ. ಜತೆಗೆ ಕ್ವಾಂಟಿಟಿಗಿಂತ ಕ್ವಾಲಿಟಿ ಇಂಪಾರ್ಟೆಂಟ್ ನಂಗೆ.
– ಒಬ್ಬ ಆರ್ಟಿಸ್ಟ್ ಮೂರು ವರ್ಷ ಒಂದೇ ಪಾತ್ರದಲ್ಲೇ ತೊಡಗಿಸಿಕೊಳ್ಳುವುದಂದ್ರೆ, ಕಷ್ಟ ಅನಿಸೋದಿಲ್ವಾ?
ನಾನೇ ಅಂತಲ್ಲ, ಯಾವುದೇ ಆಕ್ಟರ್‌ಗೂ ಇರಬಹುದಾದ ಅಂತಿಮ ಉದ್ದೇಶ ಆಡಿಯನ್ಸ್‌ಗೆ ರೀಚ್ ಆಗ್ಬೇಕು ಅನ್ನೋದು. ಅದರಿಂದ ನಾನೂ ಕೂಡ ಹೊರತಾಗಿಲ್ಲ. ಜತೆಗೆ ಒಂದು ಪಾತ್ರ ಏನು ಕೇಳುತ್ತೋ, ಅದಕ್ಕೆ ತಕ್ಕಂತೆ ನಾವು ಕೂಡ ತೊಡಗಿಸಿಕೊಂಡಾಗಲೇ ಆ ಪಾತ್ರಕ್ಕೆ ಜೀವ ತುಂಬುವುದಕ್ಕೆ ಸಾಧ್ಯ. ಸಣ್ಣವರಿರಲಿ, ದೊಡ್ಡವರಿರಲಿ ಅದನ್ನು ತಲೆಯಲ್ಲಿ ಇಟ್ಕೊಂಡು ಸಿನಿಮಾ ಮಾಡಿದ್ರೇ ಅದೆಲ್ಲ ಕಷ್ಟ ಅಂತ ಎನಿಸುವುದೇ ಇಲ್ಲ.
– ಅದು ಸರಿ, ಪಾತ್ರದಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದರ ಆಚೆ ನೀವು, ನಿಮ್ಮ ಖರ್ಚು-ವೆಚ್ಚಗಳ ಲಾಭ-ನಷ್ಟದ ಬಗ್ಗೆ ಯೋಚಿಸೋದಿಲ್ವಾ?
ನೀವು, ಏನೇ ಕಟ್ಟಬೇಕಾದ್ರೂ ಗಟ್ಟಿಯಾದ ಅಡಿಪಾಯ ಇಂಪಾರ್ಟೆಂಟ್. ಯುಟಿಲಿಟಿ ಬಿಲ್ಡಿಂಗ್ ಕಟ್ಟಬೇಕಾದ್ರೂ ಅದಕ್ಕೆ ಗಟ್ಟಿ ಅಡಿಪಾಯ ಬೇಕು. ಆಗಲೇ ಗಟ್ಟಿಯಾದ ಒಂದು ಮಲ್ಟಿಸ್ಟೋರ್ ಬಿಲ್ಡಿಂಗ್ ಎದ್ದು ನಿಲ್ಲುತ್ತದೆ. ನಂಗೂ ಅಷ್ಟೆ. ಧ್ರುವ ಯಾರು ಅಂತ ಕೇಳಿದ್ರೆ ಅದು, ಇದು ಎನ್ನುವುದಕ್ಕಿಂತ ನಾನು ಮಾಡಿರುವ ಸಿನಿಮಾ ನೆನಪಾಗಬೇಕು. ಆ ಮೂಲಕ ಅವರಿಗೂ ಒಂದು ನಂಬಿಕೆ ಬರಬೇಕು. ಆ ಮೇಲೆ ಇದ್ದಿದ್ದೇ, ಹೈ ಸ್ಪೀಡ್ ಜರ್ನಿ! ಅದನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಇದು. ಇದು ಮಾತ್ರವಲ್ಲ ಹಿಂದಿನ ಸಿನಿಮಾಗಳು ಕೂಡ. ಕಂಟೆಂಟ್ ಅಧಾರಿತ ಸಿನಿಮಾ ಮಾಡ್ಬೇಕು ಅನ್ನೋದಿತ್ತು, ಅದಕ್ಕಾಗಿಯೇ ಈ ಟೈಮ್ ತಗೊಂಡೆ.
– ಅಂದ್ರೆ ಕಂಟೆಂಟ್ ಆಯ್ಕೆ ಮಾಡಿಕೊಳ್ಳುವಾಗಲೇ ಇದು ಎರಡ್ಮೂರು ವರ್ಷ ಆಗುತ್ತೆ ಅಂತ ನೀವೇ ಫಿಕ್ಸ್ ಆಗಿರ್ತೀರಾ?
ಸರ್, ಇವಾಗ ನಾಗರ ಹಾವು ಸಿನಿಮಾವನ್ನೇ ತೆಗೆದುಕೊಳ್ಳಿ, ಆ ಸಿನಿಮಾ ಮಾಡಿದ ಬಹಳಷ್ಟು ಕಲಾವಿದರು ಈಗಿಲ್ಲ. ಆದ್ರೂ ಆ ಸಿನಿಮಾ ನೋಡೋ ಜನ ಇದ್ದಾರೆ. ಯಾಕಂದ್ರೆ ಕತೆ, ಜತೆಗೆ ಕಲಾವಿದರ ಅಭಿನಯ. ಅಂದ್ರೆ ಆ ಸಿನಿಮಾವನ್ನು ಆ ಕಾಲದಲ್ಲೇ ಅಷ್ಟು ಕಷ್ಟಪಟ್ಟು, ಅಷ್ಟು ಮುದ್ದಾಗಿ ಮಾಡಿದ್ದರು. ಅಂದ್ರೆ ಸಿನಿಮಾ ಅಂದ್ರೆ ಕಷ್ಟ ಪಟ್ಟು ಮಾಡ್ಬೇಕು ಅನ್ನೋದನ್ನು ನಂಬಿದವನು ನಾನು. ಯಾರು ಇಲ್ಲ ಅಂದ್ರುನೂ ಸಿನಿಮಾ ಇರುತ್ತೆ. ಸಿನಿಮಾ ನೋಡುವ ಪ್ರೇಕ್ಷಕರು ಇರ್ತಾರೆ. ಅದ್ಕಸ್ಕೋರ ಕಷ್ಟಪಟ್ಟು ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಸಿದ್ದಾಂತ.
– ಅಂದ್ರೆ, ಒಂದು ಕಂಟೆಂಟ್ ಆಧಾರಿತ ಸಿನಿಮಾ ಮಾಡೋದಕ್ಕೆ ಇಷ್ಟು ಟೈಮ್ ಬೇಕು ಅಂತೀರಾ?
ಒಂದು ಪಾತ್ರಕ್ಕೆ ಸಣ್ಣ ಆಗೋದು, ಮತ್ತೆ ದಪ್ಪ ಆಗೋದು ಅಷ್ಟು ಸುಲಭ ಅಲ್ಲ. ಇದೆಲ್ಲ ಲಾಂಗ್ ಪ್ರೊಸೆಸ್. ಅದಕ್ಕೆ ಟೈಮ್ ಬೇಕು. ಹಾಗೆ ಟೈಮ್ ತಗೊಂಡು ಸಿನಿಮಾ ಮಾಡಿದ್ರೇ ಜನರಿಗೆ ಇಷ್ಟ ಆಗುತ್ತೆ. ಆ ರೀತಿಯಲ್ಲಿ ನಾನು ಟೈಮ್ ಬೇಕು ಅನ್ನೋದು.
– ನೀವೇನೋ, ಕಂಟೆಂಟ್ ಆಧಾರಿತ ಸಿನ್ಮಾ ಮಾಡ್ಬೇಕು ಅಂತ ಟೈಮ್ ಬೇಕು ಅಂತೀರಾ ಆದ್ರೆ ಫ್ಯಾನ್ಸ್ ಕೇಳ್ಬೇಕೆ, ವರ್ಷಕ್ಕೆ ಒಂದಾಂದ್ರೂ ಸಿನಿಮಾ ಮಾಡಿ ಅಂತಾರೆ…?
ಪ್ರಶ್ನೆ ಇದಿಷ್ಟೇ ಆಗಿದ್ದರೆ ಮುಗಿಯುತ್ತಿತ್ತು, ಅದ್ರೆ ಅದು ಮುಂದುವರೆಯುತ್ತೆ, ಹ್ಯಾಗೆ ಗೊತ್ತಾ? ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡಿ ಎನ್ನುವ ಫ್ಯಾನ್ಸ್, ಒಳ್ಳೆಯ ಸಿನಿಮಾ ಮಾಡಿ ಅಂತಲೂ ಹೇಳ್ತಾರೆ. ಅದು ಕೂಡ ಇಂಪಾರ್ಟೆಂಟ್ ಅಲ್ವಾ? ಅದನ್ನು ನಾನು ತಲೆಯಲ್ಲಿ ಇಟ್ಕೊಂಡು ಸಿನಿಮಾ ಮಾಡ್ಬೇಕು ಅಲ್ವಾ?
– ಖರಾಬು ಹಾಡಿನ ಬಗ್ಗೆ ಕೆಲವು ಕಾಮೆಂಟ್ ಬಂದಿದ್ವು, ನಾಯಕಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಅನ್ನೋದು ಆರೋಪ..
ಅವರಿಗೆ ಹಾಗೆನಿಸಿರಬಹದು, ಆದ್ರೆ ನಮಗೆ ಅದು ಹಾಗೆನಿಸಿಲ್ಲ. ನೆಗೆಟಿವ್ ಕಾಮೆಂಟ್ ಹಾಕಿದವರೆಲ್ಲ ಆ ಹಾಡು ನೋಡಿದ್ದಾರೆ, ಇಷ್ಟ ಪಟ್ಟಿದ್ದಾರೆ. ಅದೇ ಕಾರಣದಿಂದ ಅಲ್ವಾ, ಅದು ಅಷ್ಟು ದೊಡ್ಡ ಸಕ್ಸಸ್ ಕಂಡಿದ್ದು. ನಾನು ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದೇನೆ. ಯಾಕೆ ಗೊತ್ತಾ, ಸಿನಿಮಾ ನೋಡಿದಾಗ ಅದರ ವಾಸ್ತವ ಗೊತ್ತಾಗುತ್ತದೆ. ಅದೇನು ಅಂತ ನಮಗೆ ಗೊತ್ತಿದೆ, ಹಾಗಾಗಿ ನಾನೇನು ಬೇಸರ ಪಟ್ಟುಕೊಂಡಿಲ್ಲ.
– ಸಿನಿಮಾ ಜರ್ನಿ ಶುರುವಾಗಿ ಹತ್ತು ವರ್ಷ, ಇಷ್ಟು ವರ್ಷದಲ್ಲಿ ನೀವು ಮಾಡಿರೋ ಸಿನಿಮಾಗಳ ಸಂಖ್ಯೆ ತುಂಬಾ ಕಮ್ಮಿ, ಆದ್ರೆ, ಸಿನಿಮಾ ಮಾಡ್ಮೇಕು ಅಂತ ಇಷ್ಟು ವರ್ಷದಲ್ಲಿ ಎಷ್ಟು ಕತೆ ಕೇಳಿದ್ದೀರಿ, ಎಷ್ಟು ರಿಜೆಕ್ಟ್ ಮಾಡಿದ್ದೀರಿ?
ನಾನು ಲೆಕ್ಕ ಹೇಳೋದಿಲ್ಲ. ಯಾಕಂದ್ರೆ, ನಾನು ಕೇಳಿದ ಕತೆಗಳೆಲ್ಲವೂ ಅತ್ಯುತ್ತಮ ಕತೆಗಳೆ, ಯಾವುದು ಸರಿ ಇರಲಿಲ್ಲ ಅಂತ ನಂಗಂತೂ ಅನಿಸಿಲ್ಲ. ಆದ್ರೆ, ನನಗೆ ಕಾಡುವ ಕತೆ ಬೇಕು ಅಂತ ನಿರೀಕ್ಷೆ ಮಾಡುತ್ತಿದೆ. ಅಂತಹ ಕತೆಗಳು ಸಿಕ್ಕಾಗ ಸಿನಿಮಾ ಮಾಡ್ತಾ ಬಂದಿದ್ದೇನೆ. ಮುಂದೆ ಕೂಡ ನಂದು ಇದೇ ಪಾಲಿಸಿ.
– ಕತೆ ಕೇಳುವಾಗ ಈಗಲೂ ನಟ ಅರ್ಜುನ್ ಸರ್ಜಾ ಅವರು ಇರ್ತಾರಾ?
ಖಂಡಿತಾ, ಅವರ ಅನುಭವಕ್ಕೆ ನಾನೇನು ಅಲ್ಲ. ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಮೊದಲು ಅಂಕಲ್ ಜತೆಗೆ ಕುಳಿತು ಕತೆ ಕೇಳ್ತೀನಿ. ಆಮೇಲೆ ಸರಿ -ತಪ್ಪು ಯೋಚಿಸಿ ಡಿಸೈಡ್ ಮಾಡ್ತೀವಿ.
– ಮುಂದೆ ನೀವು ನಿರೀಕ್ಷೆ ಮಾಡುವ ಕತೆಗಳ ಆಯ್ಕೆ ಕೂಡ ಕಂಟೆಂಟ್ ಆಧಾರಿತವಾಗಿರುತ್ತಾ?
ಈಗ ಇರೋದೇ ಯೂನಿವರ್ಷನ್ ಸಬ್ಜೆಕ್ಟ್ ಆಧಾರಿತ ಕತೆಗಳು. ಯಾಕಂದ್ರೆ. ಕಾಲಕ್ಕೆ ತಕ್ಕಂತೆ ನಾವೇವಾದ್ರೂ ಮಾಡ್ಬೇಕು ಅಂದ್ರೆ ಅಂತಹ ಕತೆಗಳು ಬೇಕು. ಅಳೋದು, ನಗೋದು ಯುನಿವರ್ಷಲ್ ಅಲ್ವಾ? ಅದಕ್ಕೆ ಭಾಷೆ, ದೇಶದ ಗಡಿ ಇಲ್ಲ. ಅಂತಹ ಕತೆಗಳು ಬಂದ್ರೆ, ಬೇರೆ ಭಾಷೆಯ ಸಿನಿಮಾಗಳ ಹಾಗೆ ಬೇರೆ ಕಡೆ ಕೂಡ ಹೋಗಬಹುದು.
– ʼದುಬಾರಿʼ ಚಿತ್ರದ ಜತೆಗೆ ಮುಂದೆ ಯಾವೆಲ್ಲ ನಿರ್ದೇಶಕರ ಜತೆಗೆ ಸಿನಿಮಾ ಮಾಡ್ತಿದ್ದೀರಿ?
ಸದ್ಯಕ್ಕೀಗ ದುಬಾರಿ. ಮುಂದೆ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಜತೆಗೆ ಒಂದು ಪ್ರಾಜೆಕ್ಟ್ ಇದೆ. ಇದಿಷ್ಟು ಮಾತ್ರ.
– ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ನಿಮ್ಮ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ವಂತೆ ಯಾಕೆ?
ಅದೇನು ನಂಗೆ ಗೊತ್ತಿಲ್ಲ. ಅವರು ಅವರದೇ ಕೆಲಸಗಳಲ್ಲಿ ಬ್ಯುಸಿಯಾಗಿರಬಹುದು. ಮುಂದೆ ಬರಬಹುದು. ಅಷ್ಟೇ ನಂಗೆ ಗೊತ್ತು.
– ಪೊಗರು ಚಿತ್ರದ ಹೈಲೈಟ್ಸ್ ಏನು ?
ಮೊದಲಿಗೆ ಕತೆ. ಅದರ ಜತೆಗೆ ಮೇಕಿಂಗ್. ಉಳಿದಂತೆ ತುಂಬಾ ವಿಷಯ ಇವೆ. ಅದೆಲ್ಲದ್ದಕ್ಕೂ ಸಿನಿಮಾ ನೋಡಿದ್ರೆ ಉತ್ತರ ಸಿಗುತ್ತೆ.
– ಕೊರೋನಾ ಭಯದ ನಡುವೆಯೇ ನಿಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಅಂದಾಗ ಹೇಗನಿಸಿತು?
ಮೊದಲಿಗೆ ಭಯ ಇತ್ತು. ಆಮೇಲೆ ಸಿನಿಮಾ ಮೇಲೆ ನಂಬಿಕೆ ಇತ್ತು. ಜನರಿ ಸಿನಿಮಾ ಇಷ್ಟವಾಗುತ್ತೆ ಎನ್ನುವ ಕಾನ್ಪೆಡೆನ್ಸ್ ಬಂತು. ಈಗ ಓಕೆ.