ರಾಜ್‌ಮೌಳಿ ‘ಆರ್‌ಆರ್‌ಆರ್‌’ ದಸರಾಗೆ!

ರಾಮ್‌ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ಅಭಿನಯದ ದಕ್ಷಿಣ ಭಾರತದ ಬಹುನಿರೀಕ್ಷಿತ ಮೆಗಾ ಸಿನಿಮಾ ಬಿಡುಗಡೆ ದಿನ ಘೋಷಣೆಯಾಗಿದೆ.


‘ಬಾಹುಬಲಿ’ ಸರಣಿ ಸಿನಿಮಾಗಳೊಂದಿಗೆ ನಿರ್ದೇಶಕ ರಾಜ್‌ಮೌಳಿ ಭಾರತದಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು. ಆನಂತರ ಅವರು ಕೈಗೆತ್ತಿಕೊಂಡಿದ್ದ ಸಿನಿಮಾ ‘ಆರ್‌ಆರ್‌ಆರ್‌’. ಸಹಜವಾಗಿಯೇ ಇದು ಸಿನಿಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ. ರಾಮ್‌ಚರಣ್‌ ತೇಜಾ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ನಟನೆಯ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರವಿದು. ಇಂದು ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಿದ್ದು, ಇದೇ ವರ್ಷ ದಸರಾಗೆ ಅಕ್ಟೋಬರ್‌ 13ರಂದು ಸಿನಿಮಾ ತೆರೆಕಾಣಲಿದೆ. ಹೀರೋಗಳಿಬ್ಬರೂ ಟ್ವಿಟರ್‌ನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡು ಸಂತಸ ಹಂಚಿಕೊಂಡಿದ್ದಾರೆ.

“ಬೆಂಕಿ ಮತ್ತು ನೀರು ಒಟ್ಟಿಗೇ ನುಗ್ಗಿ ಬರಲಿದ್ದು, ಹಿಂದೆಂದೂ ಕಂಡಿರದ ಸನ್ನಿವೇಶಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ಭಾರತೀಯ ಸಿನಿಮಾರಂಗದಲ್ಲೇ ಇದೊಂದು ವಿಶಿಷ್ಟ ಅನುಭವ ನೀಡುವ ಪ್ರಯೋಗವಾಗಲಿದೆ” ಎಂದು ನಟರಾದ ರಾಮ್‌ಚರಣ್ ತೇಜಾ, ಜ್ಯೂನಿಯರ್ ಎನ್‌ಟಿಆರ್‌ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನ ಅದ್ಧೂರಿ ಸೆಟ್‌ನಲ್ಲಿ ಚಿತ್ರದ ಕ್ಲ್ಯೈಮ್ಯಾಕ್ಸ್‌ ಚಿತ್ರಿಸಲಾಗಿತ್ತು. ಕ್ಲೈಮ್ಯಾಕ್ಸ್‌ ಸನ್ನಿವೇಶಗಳಲ್ಲಿ ಪಾಲ್ಗೊಂಡ ನಂತರ ಚಿತ್ರದ ನಟರಿಬ್ಬರೂ ತಮ್ಮ ರಕ್ತಸಿಕ್ಕ ಹಸ್ತಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿ ಚರ್ಚೆಗೆ ಆಸ್ಪದ ನೀಡಿದ್ದವು.

‘ಆರ್‌ಆರ್‌ಆರ್‌’ ನಿರ್ಮಾಪಕ ಡಿ.ವಿ.ವಿ. ದಾನಯ್ಯ ತಮ್ಮ ಹೇಳಿಕೆಯಲ್ಲಿ, “ಚಿತ್ರೀಕರಣ ಪೂರ್ಣಗೊಳಿಸಿದ್ದು, ಪ್ರೇಕ್ಷಕರ ಮುಂದೆ ಬರಲು ಕಾತುರರಾಗಿದ್ದೇವೆ. ಥಿಯೇಟರ್‌ಗಳಲ್ಲಿ ಜನರೊಂದಿಗೆ ದಸರಾ ಆಚರಣೆ ಜೋರಾಗಿರುತ್ತದೆ” ಎಂದಿದ್ದಾರೆ. ಈ ಮೊದಲು 2020ರ ಜುಲೈ 30ರಂದು ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿತ್ತು. ಚಿತ್ರೀಕರಣದ ವೇಳೆ ಹೀರೋಗಳು ಗಾಯಗೊಂಡಿದ್ದು ಹಾಗೂ ಕೊರೋನಾ ಹಾವಳಿಯಿಂದಾಗಿ ಶೂಟಿಂಗ್ ಮುಂದಕ್ಕೆ ಹೋಯ್ತು. ಇದೀಗ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಅಂತಿಮ ಹಂತದ ಕೆಲಸಗಳನ್ನು ಕೈಗೆತ್ತಿಕೊಂಡಿದೆ.

1920ರ ಅವಧಿಯ ಬ್ರಿಟಿಷ್‌ ಆಡಳಿತದ ಅವಧಿಯ ಕಥಾನಕವಿದು. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ಚಿತ್ರಕ್ಕಾಗಿ ಅಲ್ಲೂರಿ ಸೀತಾರಾಮರಾಜು (ರಾಮ್‌ಚರಣ್‌ ತೇಜಾ) ಮತ್ತು ಕೋಮಾರಮ್ ಭೀಮ್‌ (ಜ್ಯೂನಿಯರ್ ಎನ್‌ಟಿಆರ್‌) ತೆಲುಗು ಬುಡಕಟ್ಟು ನಾಯಕರ ಪಾತ್ರಗಳನ್ನು ಸೃಷ್ಟಿಸಿ ಕತೆ ಹೆಣೆದಿದ್ದಾರೆ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದು, ಬಾಲಿವುಡ್‌ ನಟಿ ಅಲಿಯಾ ಭಟ್‌ ನಾಯಕಿ. ಇದು ದಕ್ಷಿಣದಲ್ಲಿ ಅವರ ಮೊದಲ ಸಿನಿಮಾ. ಅಜಯ್ ದೇವಗನ್‌, ಸಮುದ್ರಕನಿ, ಒಲಿವಿಯಾ ಮೋರಿಸ್‌, ರೇ ಸ್ಟೀವನ್‌ಸನ್‌, ಶ್ರಿಯಾ ಶರಣ್‌ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.

Related Posts

error: Content is protected !!