Categories
ಸಿನಿ ಸುದ್ದಿ

ಬಿಗ್ ಬಾಸ್‌‌ ಸೀಸನ್‌ 8 ಗೆ ಸುರಪುರ ಶಾಸಕ ರಾಜುಗೌಡ ?

ಕಿರುತೆರೆ ಬಹು ನಿರೀಕ್ಷಿತ ರಿಯಾಲಿಟಿ ಶೋ “ಬಿಗ್‌ ಬಾಸ್‌ ಸೀಸನ್‌ ೮ʼ ರ ಶುರುವಿಗೆ ದಿನಗಣನೆ ಶುರುವಾಗಿದೆ. ಇನ್ನೇನು ಎರಡು ದಿನ ಮಾತ್ರ ಬಾಕಿ ಇವೆ. ಕಲರ್ಸ್‌ ಕನ್ನಡದ ಈ ಶೋ ನೋಡಲು ಕಿರುತೆರೆಯ ವೀಕ್ಷಕ ವಲಯ ತುದಿಗಾಲ ಮೇಲೆ ನಿಂತಿದೆ. ಸೀಸನ್‌ ೮ ರಲ್ಲಿ ಯಾರೆಲ್ಲ ಇರುತ್ತಾರೆನ್ನುವ ವೀಕ್ಷಕರ ಕುತೂಹಲಕ್ಕೆ ಈಗಾಗಲೇ ಒಂದಷ್ಟು ಕ್ಲೂ ಸಿಕ್ಕಿವೆಯಾದರೂ, ಅವೇ ಸತ್ಯ ಅಂತ ನಂಬೋ ಹಾಗಿಲ್ಲ. ಶೋ ಗೆ ಎಂಟ್ರಿಯಾದಾಗಲೇ ಯಾರೆಲ್ಲ ಇರುತ್ತಾರೆನ್ನುವುದು ಗ್ಯಾರಂಟಿ. ಉಳಿದಂತೆ ಈ ಬಾರಿಯ ಸೀಸನ್‌ ನಲ್ಲಿ ರಾಜಕಾರಣಿಯೊಬ್ಬರು ಎಂಟ್ರಿ ಆಗುತ್ತಿದ್ದಾರೆ.ಅವರು ನಟ ಕಿಚ್ಚ ಸುದೀಪ್‌ ಅವರಿಗೆ ಪರಿಚಯ ಇದ್ದವರು ಅಂತ ಸುದ್ದಿ ಗೋಷ್ಟಿಯಲ್ಲೆ ಕಲರ್ಸ್‌ ಕನ್ನಡದ ಬಿಸಿನೆಸ್‌ ಹೆಡ್‌ ಪರಮೇಶ್‌ ಗುಂಡ್ಕಲ್‌ ಬಹಿರಂಗಪಡಿಸಿದ್ದಾರೆ.

ಹಾಗಂತ ಅವರು ಯಾರು ಎನ್ನುವುದನ್ನು ಅವರು ಹೇಳಿಲ್ಲ. ಅದು ನಿಗೂಡ ಅಂತಲೂ ಹೇಳಿದ್ದಾರೆ. ಕುತೂಹಲ ಇರೋದಉ ಆ ರಾಜಕಾರಣಿ ಯಾರು ಅಂತ. ರಾಜಕಾರಣಿ ಇರ್ತಾರೆ ಅಂತ ಹೊರಟರೆ ಅವರು ಯಾರು ಅಂತ ಊಹೆ ಮಾಡುವುದು ತುಂಬಾ ಕಷ್ಟ. ಆದರೆ ಅವರು ನಟ ಕಿಚ್ಚ ಸುದೀಪ್‌ ಅವರಿಗೂ ತುಂಬಾ ಪರಿಚಯ ಇದ್ದವರೂ ಎನ್ನುವ ಸುಳಿವಿನ ಮೇರೆಗೆ ನೋಡುತ್ತಾ ಹೋದರೆ ಮೊದಲು ನೆನಪಾಗುವುದು ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ.

ನಟ ಸುದೀಪ್‌ ಹಾಗೂ ಶಾಸಕ ರಾಜು ಗೌಡ ತುಂಬಾ ಆಪ್ತರು. ಅನೇಕ ವೇದಿಕೆಗಳಲ್ಲಿ ಅವರು ಒಂದಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಟ ಸುದೀಪ್‌, ಸುರಪುರ ಅಭ್ಯರ್ಥಿಯಾಗಿದ್ದ ರಾಜು ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಹಾಗೆಯೇ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲೂ ಅವರಿಬ್ಬರು ಭಾಗವಹಿಸಿದ್ದರು.

ಸುದೀಪ್‌ ಅವರ ಫ್ಯಾಮಿಲಿ ಕಾರ್ಯಕ್ರಮಗಳಲ್ಲೂ ರಾಜು ಗೌಡ ಪಾಲ್ಗೊಂಡಿದ್ದರು ಕೂಡ ಎಲ್ಲರಿಗೂ ಗೊತ್ತು. ಒಂದೇ ಸಮುದಾಯದವರು ಅನ್ನೋದು ಇದಕ್ಕಿದ್ದ ಕಾರಣ. ಈಗ ಅದೇ ಸ್ನೇಹ, ಒಡನಾಟದಲ್ಲಿ ಬಿಗ್‌ ಬಾಸ್‌ ಸೀಸನ್‌ 8 ರಲ್ಲಿ ಶಾಸಕ ರಾಜುಗೌಡ ಪಾಲ್ಗೊಳ್ಳುತ್ತಿದ್ದಾರೆನ್ನುವುದನ್ನು ಅಲ್ಲಗಳೆಯುವಂತಿಲ್ಲ.

Categories
ಸಿನಿ ಸುದ್ದಿ

ಚುಟು ಚುಟು ಹುಡುಗಿ ಆಶಿಕಾ ರಂಗನಾಥ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗೋದು ನಿಜವಾ?

ಇದು ನಿಜವಾ? ಗೊತ್ತಿಲ್ಲ. ಆದರೂ ಚುಟು ಚುಟು ಖ್ಯಾತಿಯ ಮೋಹಕ ನಟಿ ಆಶಿಕಾ ರಂಗನಾಥ್‌ ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ಗೊತ್ತಿಲ್ಲ. ಈ ಬಗ್ಗೆ ನಟಿ ಆಶಿಕಾ ರಂಗನಾಥ್‌ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಬಿಗ್‌ ಬಾಸ್‌ ಸೀಸನ್‌ ೮ ಶುರುವಾಗುವುದಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಯಾವುದಕ್ಕೂ( ಫೆ.28)ಭಾನುವಾರ ಸಂಜೆ ಗೊತ್ತಾಗಿದೆ. ಆದರೆ ಆಶಿಕಾ ರಂಗನಾಥ್‌ ಅವರ ಬಗ್ಗೆ ಕುತೂಹಲ ಇರೋದು, ಸಿನಿಮಾದಲ್ಲೇ ಸಿಕ್ಕಾಪಟ್ಟೆ ಸ್ಟಾರ್‌ ವ್ಯಾಲೂ ಹೊಂದಿರುವ ಆಶಿಕಾ ರಂಗನಾಥ್‌, ಬಿಗ್‌ ಬಾಸ್‌ ಮನೆಗೆ ಯಾಕೆ ಹೋಗ್ತಾರೆ ?

ಹೌದು, ಚುಟು ಚುಟು ಹುಡುಗಿ ಆಶಿಕಾ ರಂಗನಾಥ್‌ ಸದ್ಯಕ್ಕೀಗ ಕನ್ನಡದ ಬಹು ಬೇಡಿಕೆ ನಟಿ. ಸ್ಟಾರ್‌ ನಟರ ಸಿನಿಮಾಗಳಲ್ಲೇ ನಾಯಕಿ ಆಗಿ ಅಭಿನಯಿಸುತ್ತಾ ಬೆಳ್ಳಿತೆರೆಯಲ್ಲಿ ಕಮಾಲ್‌ ಮಾಡುತ್ತಿರುವುದು ನಿಮಗೂ ಗೊತ್ತು.ʼರಾಂಬೋ -2ʼ , ʼತಾಯಿಗೆ ತಕ್ಕ ಮಗʼ, ʼರಾಜು ಕನ್ನಡ ಮೀಡಿಯಂʼ, ʼಮುಗುಳು ನಗೆʼ ಸ್ಟಾರ್‌ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಈಗಲೂ ಸ್ಟಾರ್‌ ಸಿನಿಮಾಗಳಲ್ಲಿ ಆಶಿಕಾ ನಾಯಕಿ ಆಗಿ ಅಭಿನಯಿಸಿದ್ದು ಮಾತ್ರವಲ್ಲ, ಈಗಲೂ ಸಾಲು ಸಾಲು ಸಿನಿಮಾಗಳ ರಿಲೀಸ್‌ ನಿರೀಕ್ಷೆಯಲ್ಲಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ʼಕೋಟಿಗೊಬ್ಬ 3  ʼ, ಶರಣ್‌ ಅಭಿನಯದ “ಅವತಾರ ಪುರುಷʼ, ಶ್ರೀ ಮುರಳಿ ಅಭಿನಯದ ʼಮದಗಜʼ ಚಿತ್ರಗಳ ಜತೆಗೆ ʼಗರುಡʼ ಹಾಗೂ ಮತ್ತೊಂದು ಹೆಸರಿಡದ ಚಿತ್ರಗಳು ಈಗ ಬಿಡುಗಡೆಗೆ ರೆಡಿ ಇವೆ.

ಈಗಾಗಲೇ ತಮ್ಮ ಗ್ಲಾಮರಸ್‌ ನೋಟದೊಂದಿಗೆ ಪಡ್ಡೆ ಹುಡುಗರ ಮನಗೆದ್ದಿರುವ ಆಶಿಕಾ ರಂಗನಾಥ್‌, ಈಗ ಮತ್ತೆ ಸ್ಟಾರ್‌ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ತವಕದಲ್ಲಿದ್ದಾರೆ. ಸಿನಿಮಾ ಚಟುವಟಿಕೆಗಳಲ್ಲಿ ಸದಾ ಬ್ಯುಸಿ ಆಗಿದ್ದರೂ, ಸೋಷಲ್‌ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಆಗಾಗ ಅಂದ-ಚಂದದ ಪೋಟೋಗಳನ್ನು ಹಾಕುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸುವುದು ಮಾಮೂಲು. ಅಂತಹದೇ ಪೋಟೋಗಳು ಸೋಷಲ್‌ ಮೀಡಿಯಾದಲ್ಲಿ ಹರಿದಾಡುವುದು ನಿಮಗೂ ಗೊತ್ತು. ಅಂತಹದೇ ಪೋಟೋಗಳು ಈಗ ಆಕರ್ಷಣೆ ಹುಟ್ಟಿಸಿದ್ದು ಈ ಪೋಟೋ ಝಲಕ್‌ ಇಲ್ಲಿದೆ.

Categories
ಸಿನಿ ಸುದ್ದಿ

‘ಮುಂಬಯಿ ಸಾಗಾ’ ಟ್ರೇಲರ್ ಔಟ್; ಭೂಗತ ಪಾತಕಿ ಜಾನ್, ಪೊಲೀಸ್ ಅಧಿಕಾರಿ ಹಶ್ಮಿ

ಸಂಜಯ್ ಗುಪ್ತಾ ನಿರ್ದೇಶನದ ‘ಮುಂಬಯಿ ಸಾಗಾ’ ಕ್ರೈಂ-ಥ್ರಿಲ್ಲರ್ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 80, 90ರ ದಶಕದ ಸಂದರ್ಭವನ್ನು ಸೃಷ್ಟಿಸಿ ಕತೆ ಹೇಳಿದ್ದಾರೆ. ಜಾನ್ ಅಬ್ರಹಾಂ ಭೂಗತ ಪಾತಕಿ ‘ಅಮರ್ತ್ಯ ರಾವ್‌’ ಪಾತ್ರದಲ್ಲಿದ್ದು, ಮುಂಬಯಿ ಆಳುವುದು ಆತನ ಉದ್ದೇಶ. ಇದಕ್ಕೆ ತಡೆಗೋಡೆಯಾಗಿ ನಿಂತ ಖಡಕ್ ಪೊಲೀಸ್ ಅಧಿಕಾರಿಯಾಗಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಜಾಕಿ ಶ್ರಾಫ್‌, ಸುನೀಲ್ ಶೆಟ್ಟಿ, ಅಮೋಲ್ ಗುಪ್ತೆ, ಪ್ರತೀಕ್ ಬಬ್ಬರ್, ಗುಲ್ಶನ್ ಗ್ರೋವರ್‌, ರೋಹಿತ್ ರಾಯ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭರಪೂರ ಆಕ್ಷನ್ ಇದ್ದು ಇದೊಂದು ಸಾಹಸಪ್ರಧಾನ ಕ್ರೈಂ-ಥ್ರಿಲ್ಲರ್ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಜಾನ್ ಅಬ್ರಹಾಂ ಪಾತ್ರವನ್ನು, ‘ಬಾಂಬೆ ರಸ್ತೆಗಳಲ್ಲಿ ಬೆಳೆದವನು ಮುಂಬಯಿ ಆಳಲು ಹೊರಟಿದ್ದಾನೆ’ ಎನ್ನುವ ಒಕ್ಕಣಿ ಇತ್ತು. ಈ ಚಿತ್ರದ ನಿರ್ದೇಶಕ ಸಂಜಯ್ ಗುಪ್ತಾ ‘ಶೂಟ್‌ಔಟ್ ಅಟ್‌ ಲೋಖಂಡ್‌ವಾಲಾ’, ಜಝ್ಬಾ, ಕಾಬಿಲ್‌, ಮುಸಾಫಿರ್‌, ಜಿಂದಾ… ಹಿಂದಿ ಚಿತ್ರಗಳ ಮೂಲಕ ಜನರಿಗೆ ಪರಿಚಿತರು. ಹಾಗೆ ನೋಡಿದರೆ ಕಳೆದ ವರ್ಷ ಜೂನ್‌ನಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಯ್ತು. ಕೊನೆನೆ ಓಟಿಟಿಯಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದ ನಿರ್ಮಾಪಕರು ಈಗ ಥಿಯೇಟರ್‌ನಲ್ಲೇ ಮಾರ್ಚ್‌ 19ರಂದು ರಿಲೀಸ್ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಸಾಹಿತ್ಯದತ್ತ ಶಿವಕುಮಾರ ಮಾವಲಿ, ವೈರಲ್‌ ಆಗುತ್ತಿದೆ ಮುತ್ತುರಾಜನ ಹಾಡು !

ಯುವ ಬರಹಗಾರ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯದತ್ತ ಹೆಚ್ಚು ಒಲವು ತೋರಿದ್ದಾರೆ. “ಅವ್ಯಕ್ತʼ ಚಿತ್ರಕ್ಕೆ ಕಥೆ, ಸಂಭಾಷಣೆ ಜತೆಗೆ ಸಾಹಿತ್ಯ ಬರೆದ ನಂತರವೀಗ ʼಮುತ್ತುರಾಜʼ ಹೆಸರಿನ ಕಿರುಚಿತ್ರವೊಂದಕ್ಕೆ ಸೊಗಸಾದ ಸಾಹಿತ್ಯ ಬರೆದಿದ್ದು, ಅದೀಗ ಯುಟ್ಯೂಬ್‌ ನಲ್ಲಿ ರಿಲೀಸ್‌ ಆಗಿ ಸಕತ್‌ ಸುದ್ದಿ ಮಾಡುತ್ತಿದೆ. ಸುಮಾರು ೨೦ ನಿಮಿಷಗಳ ಅವದಿಯ ಈ ಕಿರುಚಿತ್ರ ʼಮುತ್ತುರಾಜʼ ಹೆಸರಿನ ಒಬ್ಬ ವ್ಯಕ್ತಿಯ ಸುತ್ತ ನಡೆಯುವ ಕಥೆ ಹೊಂದಿದೆ. ” ಯಾವ ದೂರವೂ ದೂರವಲ್ಲ, ಸನಿಹ ಇರದ ಸಲುಗೆ ಬಲು ದೂರ ʼ ಎನ್ನುವ ತಿರುಳ ಮೇಲೆ ಸಾಗುವ ಕಥಾ ಹಂದರ ಹೊಂದಿದ್ದು, ಮನುಷ್ಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.

ಕತೆಯ ಇದೇ ಸಾರಕ್ಕೆ ತಕ್ಕಂತೆ ಬರಹಗಾರ ಶಿವಕುಮಾರ ಮಾವಲಿ ಬರೆದ ” ಕಳೆದ ಹೋದ ನಿನ್ನೆಯನು..ʼ. ಎನ್ನುವ ಗೀತೆ ರೆಟ್ರೋ ಶೈಲಿಯಲ್ಲಿ ಮೂಡಿ ಬಂದರೂ, ಎಲ್ಲರೊಳಗೂ ಮನುಷ್ಯ ಸಂಬಂಧಗಳ ಭಾವಗಳನ್ನು ಮೀಟುತ್ತಾ ಹೋಗುವುದೇ ವಿಶೇಷ. ಸದ್ಯ ಬೆಂಗೂರಿನ ಕಾಲೇಜ್‌ವೊಂದರಲ್ಲಿ ಸಿನಿಮಾ ಮೇಕಿಂಗ್‌ ಕೋರ್ಸ್‌ ಅಭ್ಯಾಸ ಮಾಡುತ್ತಿರುವ ಶಕ್ತಿ ಪ್ರಸಾದ್‌ ಎಂಬ ಯುವ ಪ್ರತಿಭೆ ” ಮುತ್ತುರಾಜʼ ಕಿರುಚಿತ್ರದ ನಿರ್ದೇಶಕ. ಹಾಗೆಯೇ ಅವರಂತೆಯೇ ಸಿನಿಮಾ ಮೇಕಿಂಗ್‌ ಮೇಲೆ ಅಸಕ್ತಿ ಹೊಂದಿದ ಒಂದಷ್ಟು ಯುವಕರೂ ಕೂಡ ಈ ಕಿರುಚಿತ್ರ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಪಾಪರ್‌ ಫಿಲಂಸ್‌ ಮೂಲಕ ಈ ಕಿರುಚಿತ್ರ ನಿರ್ಮಾಣಗೊಂಡಿದೆ. ಈ ಕಿರುಚಿತ್ರದ ತಾರಾಗಣದಲ್ಲೂ ಹೊಸ ಪ್ರತಿಭೆಗಳೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಾಮರಾಜ ನಗರ ಸುತ್ತ ಮುತ್ತ ಕಿರುಚಿತ್ರ ಚಿತ್ರೀಕರಣಗೊಂಡಿದೆ.

ಸಾಹಿತ್ಯ ರಚನೆಯ ಮೂಲಕ ಈ ಹೊಸ ಪ್ರತಿಭೆಗಳಿಗೆ ಬೆಂಬಲವಾಗಿ ನಿಂತಿರುವ ಯುವ ಬರಹಗಾರ ಶಿವಕುಮಾರ ಮಾವಲಿ, ಆ ಮೂಲಕ ಸಿನಿಮಾ ಸಾಹಿತ್ಯಕ್ಕೆ ಒಲವು ತೋರಿರುವುದು ಇನ್ನೊಂದು ವಿಶೇಷ. ಕನ್ನಡದ ಹೊಸ ತಲೆಮಾರಿನ ಯುವ ಬರಹಗಾರರಲ್ಲಿ ಶಿವಕುಮಾರ್‌ ಮಾವಲಿ ಅವರದ್ದು ಮುಂಚೂಣಿಯ ಹೆಸರು. ವೃತ್ತಿಯಲ್ಲಿ ಇಂಗ್ಲಿಷ್‌ ಉಪನ್ಯಾಸಕರಾದರೂ, ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇಟ್ಟುಕೊಂಡವರು ಶಿವಕುಮಾರ ಮಾವಲಿ. ಹಾಗೆಯೇ ರಂಗಭೂಮಿಯಲ್ಲೂ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ “ದೇವರು ಅರೆಸ್ಟ್ ಆದʼ, “ಟೈಪಿಸ್ಟ್ ತಿರಸ್ಕರಿಸಿದ ಕಥೆʼ, “ಸುಪಾರಿ ಕಿಲ್ಲರ್” ಎಂಬ ಪುಸ್ತಕಗಳಿಂದ ಕಥೆಗಾರರಾಗಿಯೂ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

ಯಟ್ಯೂಬ್ ನಲ್ಲಿ ಭಾನುವಾರವಷ್ಟೇ ರಿಲೀಸ್ ಆಗಿರುವ ” ಕಳೆದು ಹೋದ ನಿನ್ನೆಯನು ..ಈ ವೀಡಿಯೋ ಸಾಂಗ್ ಅರ್ಥಗರ್ಭೀತ ಸಾಹಿತ್ಯದ ಜತೆಗೆ ಅದರ ಚಿತ್ರೀಕರಣವೂ ವಿಶೇಷವಾಗಿದ್ದು ,ಮೂರು ನಿಮಿಷದ ಈ ಹಾಡಿನಲ್ಲಿ‌ ಪ್ರತಿಯೊಂದು ಸಾಲುಗಳೂ ಮಾರ್ಮಿಕವಾಗಿವೆ. ‘ನೀರ ಮೇಲಿನ ಮರಳ ಮನೆಯಂತೆ ಒಲವು ಕಟ್ಟಿದ ನೆನಪು … ಕಟ್ಟುತ್ತಲೇ ಕೆಡಗುವುದು ಎಲ್ಲಾ ಒಲವ ರೂಪು… ವಿರಹವನು ಗೆದ್ದವನ ಸಾವು ಉಂಟೇನು?  ಸಲುಗೆ ಇರದ ಸನಿಹ ಬಲು ದೂರ ‘ ಎಂಬ ಸಾಲುಗಳಲ್ಲಿ ಏನೋ ಹೊಸತನ್ನು ಹೇಳುವ ಹಾಗೆ ಕಾಣುತ್ತಿದ್ದಾರೆ. ನಾರಾಯಣ ಶರ್ಮ ಕಂಪೋಸ್ ಮಾಡಿ ಹಾಡಿದ್ದಾರೆ. ಮೂರು ನಿಮಿಷಗಳ ಹಾಡಾದರೂ ಫ್ರೆಷ್ ಅನ್ನಿಸುವ ಭಾವ ಮೂಡಿಸುತ್ತದೆ. ಈ ಹಿಂದೆ ಸಂಚಾರಿ ವಿಜಯ್ ಅವರ ನಟನೆಯಲ್ಲಿ ಮೂಡಿಬಂದ ʼಅವ್ಯಕ್ತʼ ಕಿರುಚಿತ್ರದಲ್ಲಿಯೂ ಶಿವಕುಮಾರ್‌ ಮಾವಲಿ ಬರೆದಿದ್ದ, ‘ ಹೆಣ್ಣಿನೊಲವ ಹಾದಿ ಹಿಡಿದು ‘ ಎಂಬ ಹಾಡು ವಿಶೇಷವಾಗಿದ್ದು ಮಾತ್ರವಲ್ಲ, ಸಂಗೀತಾಸಕ್ತರ ಆಕರ್ಷಣೆಗೂ ಕಾರಣವಾಗಿತ್ತು.

Categories
ಟಾಲಿವುಡ್

ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದ ಸಮಂತಾ; ಈಗಲೂ ಅವರು ಬೇಡಿಕೆಯ ನಟಿ

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಮಂತಾ ಅಕ್ಕಿನೇನಿ ಜನಪ್ರಿಯ ನಟಿ. ಗ್ಲಾಮರಸ್ ನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ಇದೀಗ ಅಪರೂಪದ, ವಿಶಿಷ್ಟ ಕತೆಗಳಲ್ಲಿ ನಟಿಸತೊಡಗಿದ್ದಾರೆ. ಸ್ವತಃ ತಮ್ಮ ಹೆಸರಿನಿಂದಲೇ ಥಿಯೇಟರ್‌ಗೆ ಪ್ರೇಕ್ಷಕರನ್ನು ಕರೆತರುವಷ್ಟು ಖ್ಯಾತಿ ಅವರದಾಗಿದೆ. ಇಂದಿಗೆ ಅವರು ಸಿನಿಮಾ ಪ್ರವೇಶಿಸಿ ಹನ್ನೊಂದು ವರ್ಷ. ತೆಲುಗು ಜನಪ್ರಿಯ ನಟ ನಾಗ ಚೈತನ್ಯ ಪತ್ನಿಯಾಗಿ, ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ವೈಯಕ್ತಿಕ ಬದುಕಿನಲ್ಲೂ ಆಕೆ ಸಂತೃಪ್ತರು.

ಗೌತಮ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ (2010) ತೆಲುಗು ಚಿತ್ರದೊಂದಿಗೆ ಅವರು ಸಿನಿಮಾಗೆ ಪರಿಚಯವಾಗಿದ್ದು. ನಾಗ ಚೈತನ್ಯ ಹೀರೋ ಆಗಿ ನಟಿಸಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈ ಗೆಲುವು ಅವರ ವೃತ್ತಿ ಬದುಕಿಗೆ ಚಿಮ್ಮು ಹಲಗೆಯಾಯ್ತು. ಮುಂದೆ ಅವರು ನಟಿಸಿದ ಸಾಕಷ್ಟು ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ದೂಕುಡು, ಬೃಂದಾವನಂ, ಅತ್ತಾರಿಂಟಿಕಿ ದಾರೇದಿ, ಈಗಾ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಮನಂ, ಸನ್‌ಆಫ್‌ ಸತ್ಯಮೂರ್ತಿ, ಜನತಾ ಗ್ಯಾರೇಜ್‌, ರಂಗಸ್ಥಳಂ, ಮಹಾನಟಿ ಚಿತ್ರಗಳಲ್ಲಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡರು.

ತಮಿಳಿನಲ್ಲೂ ಅವರು ಸಾಕಷ್ಟು ಯಶಸ್ಸು ಕಂಡ ತಾರೆ. ಕತ್ತಿ, ಥೆರಿ, 24, ಮೆರ್ಸಲ್‌, ಸೂಪರ್ ಡಿಲಕ್ಸ್‌ ಕೆಲವು ಉದಾಹರಣೆ. ಅವರ ನಾಯಕಿಪ್ರಧಾನ ಸಿನಿಮಾ ‘ಓಹ್ ಬೇಬಿ’ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಈ ಮೂಲಕ ಹೀರೋ ಇಲ್ಲದೆಯೇ ಸ್ವತಃ ತಮ್ಮ ನಾಮಬಲದಿಂದ ಸಿನಿಮಾ ಗೆಲ್ಲಿಸಬಲ್ಲೆ ಎನ್ನುವುದನ್ನು ಅವರು ಸಾಬೀತು ಮಾಡಿದರು. ಕಳೆದ ವರ್ಷ ಅವರ ‘ಜಾನು’ ಸಿನಿಮಾ ತೆರೆಕಂಡಿತ್ತು. ಈ ವರ್ಷ ‘ದಿ ಫ್ಯಾಮಿಲಿ ಮ್ಯಾನ್‌’ ವೆಬ್‌ ಸರಣಿಯೊಂದಿಗೆ ಅವರು ಓಟಿಟಿಗೂ ಪದಾರ್ಪಣೆ ಮಾಡಿದ್ದಾರೆ. ಸದ್ಯ ತೆಲುಗು ಸಿನಿಮಾ ‘ಶಾಕುಂತಲಂ’ ಮತ್ತು ತಮಿಳು ‘ಕಥುವಾಕುಲ ರೆಂಡು ಕಾಧಲ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದರುವ ಸಮಂತಾಗೆ ಅವರ ತಾರಾ ನಟಿ ಕೀರ್ತಿ ಸುರೇಶ್ ಶುಭ ಹಾರೈಸಿದ್ದಾರೆ.

ಸಮಂತಾಗೆ ನಟಿ ಕೀರ್ತಿ ಸುರೇಶ್ ಅವರಿಂದ ಅಭಿನಂದನೆ
Categories
ಸಿನಿ ಸುದ್ದಿ

ಸೆಟ್ಟೇರಿದ ‘ಶ್ಯಾಮ್ ಸಿಂಘ ರಾಯ್’ ತೆಲುಗು ಸಿನಿಮಾ; ನಟ ನಾನಿ ಇಲ್ಲಿ ಬೆಂಗಾಲಿ ಬಾಬು

ತೆಲುಗು ನಟ ನಾನಿ ಅಭಿನಯದ ಹೊಸ ಸಿನಿಮಾ ‘ಶ್ಯಾಮ್‌ ಸಿಂಘ ರಾಯ್‌’ ಸೆಟ್ಟೇರಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಅವರಿಗೆ ‘ಟ್ಯಾಕ್ಸಿವಾಲಾ’ ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯಾನ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾನಿ ಅವರು ಬೆಂಗಾಲಿ ಮೂಲದ ಯುವಕನ ಪಾತ್ರದಲ್ಲಿರುತ್ತಾರೆ ಎನ್ನವುದು ವಿಶೇ‍ಷ. ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಕನ್ನಡ ಮೂಲದ ‘ಉಪ್ಪೆನ’ ತೆಲುಗು ಸಿನಿಮಾ ಖ್ಯಾತಿಯ ನವನಟಿ ಕೃತಿ ಶೆಟ್ಟಿ ಚಿತ್ರದ ಇಬ್ಬರು ನಾಯಕಿಯರು. ಚಿತ್ರದ ಫಸ್ಟ್‌ ಲುಕ್‌ ಗಮನಿಸಿದರೆ, ಇದು ಸ್ವಾತಂತ್ರ್ಯ ಪೂರ್ವದ ಕಥಾನಕ ಎನ್ನುವುದು ತಿಳಿದುಬರುತ್ತದೆ.

ಚಿತ್ರದಲ್ಲಿ ನಾನಿ ಬೆಂಗಾಲಿ ಮೂಲದ ಯುವಕನಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ದೂರದ ಕೊಲ್ಕೊತ್ತಾದ ಕತೆಯನ್ನು ತೆಲುಗು ನಾಡಿಗೆ ಹೇಗೆ ಕನೆಕ್ಟ್ ಮಾಡುತ್ತಿದ್ದಾರೆ ಎನ್ನುವುದು ಅವರ ಗೊಂದಲ! ಫಸ್ಟ್‌ ಲುಕ್‌ನಲ್ಲಿ ಯುವತಿಯೊಬ್ಬಳು ನಾನಿಯನ್ನು ತಬ್ಬಿ ನಿಂತಿದ್ದು, ಆಕೆಯ ಮುಖ ಮರೆಮಾಚಲಾಗಿದೆ. ಒಟ್ಟಾರೆ ಫಸ್ಟ್‌ಲುಕ್‌ ಪೋಸ್ಟರ್ ಗಮನ ಸೆಳೆಯುವುದರ ಜೊತೆಗೆ ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ. ಈ ಮಧ್ಯೆ ನಾನಿ ಅವರ ‘ಟಕ್ ಜಗದೀಶ್‌’ ಸಿನಿಮಾ ಸಿದ್ಧವಾಗಿದ್ದು, ಏಪ್ರಿಲ್‌ 23ಕ್ಕೆ ತೆರೆಕಾಣುತ್ತಿದೆ.

Categories
ಟಾಲಿವುಡ್

ಯಾರಾಗಲಿದ್ದಾರೆ ‘ಸೀತಾ’? ಅನುಷ್ಕಾ ಅಥವಾ ಕೀರ್ತಿಗೆ ಒಲಿಯಲಿದೆಯೇ ಅದೃಷ್ಟ?

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ದೊಡ್ಡ ಯಶಸ್ಸು ಫ್ಯಾಂಟಸಿ ಐತಿಹಾಸಿಕ ಚಿತ್ರಗಳಿಗೆ ಪ್ರೇರಣೆ ನೀಡಿದೆ. ಮೊನ್ನೆಯಷ್ಟೇ ಬಹುಕೋಟಿ ವೆಚ್ಚದ ‘ಮಹಾವೀರ್ ಕರ್ಣ’ ಸೆಟ್ಟೇರಿತು. ಈಗ ಬಹುಭಾಷಾ ಸಿನಿಮಾ ‘ಸೀತಾ’ಗೆ ಚಾಲನೆ ಸಿಕ್ಕಿದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಚಿತ್ರಕ್ಕೆ ಬಾಹುಬಲಿ, ಮಗಧೀರ, ಭಜರಂಗಿ ಭಾಯಿಜಾನ್‌, ಮಣಿಕರ್ಣಿಕಾ ಚಿತ್ರಗಳಿಗೆ ಚಿತ್ರಕಥೆ ಹೆಣೆದ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಹೆಣೆದಿದ್ದಾರೆ. ಮನೋಜ್ ಮುನ್ಸ್‌ಟಾಶಿರ್‌ ಸಂಭಾಷಣೆ ಬರೆಯುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾರಾಬಳಗದ ಆಯ್ಕೆ ನಡೆಯಲಿದೆ.

ಕೆ.ವಿ.ವಿಜಯೇಂದ್ರ ಪ್ರಸಾದ್

ಹ್ಯೂಮನ್ ಬೀಯಿಂಗ್ ಸ್ಟುಡಿಯೋ ನಿರ್ಮಿಸಲಿರುವ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಗುಲ್ಲು ಎದ್ದಿದೆ. ದಕ್ಷಿಣದಲ್ಲಿ ಈಗಾಗಲೇ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಮತ್ತು ಕೀರ್ತಿ ಸುರೇಶ್‌ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. ‘ಬಾಹುಬಲಿ’ ಚಿತ್ರದೊಂದಿಗೆ ಅನುಷ್ಕಾ ಮತ್ತು ‘ಮಹಾನಟಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್‌ ಪ್ಯಾನ್‌ ಇಂಡಿಯಾ ಹಿರೋಯಿನ್‌ಗಳಾಗಿ ಹೆಸರು ಮಾಡಿದ್ದಾರೆ. ಹಾಗಾಗಿ ಇವರಲ್ಲೊಬ್ಬರು ‘ಸೀತೆ’ಯಾಗುವುದು ಖಚಿತ ಎನ್ನಲಾಗಿದೆ.

Categories
ಸಿನಿ ಸುದ್ದಿ

ವೈರಲ್ ಆಯ್ತು ‘ಊರಿಗೊಬ್ಬ ರಾಜ’ ಸಾಂಗ್; ಪುನೀತ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ

ಪುನೀತ್ ರಾಜಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ‘ಊರಿಗೊಬ್ಬ ರಾಜ’ ಹಾಡು ಕ್ಲಿಕ್ಕಾಗಿದೆ. ನಿನ್ನೆ ಬಿಡುಗಡೆಯಾದ ಹಾಡಿನಲ್ಲಿನ ಪುನೀತ್‌ – ಸಾಯೇಶಾ ಡ್ಯಾನ್ಸ್ ಸ್ಟೆಪ್‌ಗಳು ಮಕ್ಕಳಿಗೂ ಇಷ್ಟವಾಗಿವೆ. ಈ ಹಿಂದಿನ ‘ನಟಸಾರ್ವಭೌಮ’ ಚಿತ್ರದಲ್ಲಿನ ಅಪ್ಪು ಡ್ಯಾನ್ಸ್‌ ಸ್ಟೆಪ್‌ಗಳನ್ನು ಮಕ್ಕಳು ಅನುಕರಿಸಿದ್ದರು. ಈಗ ‘ಯುವರತ್ನ’ ಹಾಡಿನ ಪುನೀತ್ ಡ್ಯಾನ್ಸ್ ಕೂಡ ಅದೇ ರೀತಿ ವೈರಲ್ ಆಗುವ ಸೂಚನೆಗಳಿವೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಗೀತೆ ರಚಿಸಿದ್ದು, ಜಾನಿ ಮಾಸ್ಟರ್‌ ನೃತ್ಯ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆ ತಮನ್ ಅವರದು.

ಉತ್ತಮ ಗಾಯಕರೂ ಆದ ಪುನೀತ್‌ ‘ಊರಿಗೊಬ್ಬ ರಾಜ’ ಹಾಡಿದ್ದು, ಗಾಯಕಿ ರಮ್ಯಾ ಬೆಹರಾ ಅವರಿಗೆ ಜೊತೆಯಾಗಿದ್ದಾರೆ. ವಿಶೇ‍ವೆಂದರೆ ‘ಯುವರತ್ನ’ನ ಈ ಹೊಸ ಹಾಡು ತೆಲುಗಿನಲ್ಲೂ ತೆರೆಕಂಡಿದೆ. ತೆಲುಗಿನಲ್ಲಿ ದಿನಕರ್ ಮತ್ತು ರಮ್ಯಾ ಬೆಹರಾ ಹಾಡಿದ್ದಾರೆ. ನೃತ್ಯವನ್ನು ಬಹುವಾಗಿ ಇಷ್ಟಪಡುವ ತೆಲುಗು ಸಿನಿಪ್ರೇಮಿಗಳಿಗೂ ಪುನೀತ್‌ ರಾಜಕುಮಾರ್ ಅವರ ವಿಶಿಷ್ಟ ಡ್ಯಾನ್ಸ್ ಸ್ಟೆಪ್‌ಗಳು ಇಷ್ಟವಾಗಲಿವೆ. ಈ ಮೂಲಕ ತೆಲುಗು ಚಿತ್ರರಂಗದಲ್ಲೂ ‘ಯುವರತ್ನ’ನ ಹವಾ ಸೃಷ್ಟಿಸುವುದು ಚಿತ್ರತಂಡದ ಯೋಜನೆ. ‘ರಾಜಕುಮಾರ’ ಸೂಪರ್‌ಹಿಟ್ ಚಿತ್ರದ ನಂತರ ಪುನೀತ್‌ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ‘ಯುವರತ್ನ’ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ.

Categories
ಟಾಲಿವುಡ್

‘ಮೋಸಗಲ್ಲು’ ತೆಲುಗು ಸಿನಿಮಾ ಟ್ರೈಲರ್ ಔಟ್; ಇದು ನೈಜ ಘಟನೆ ಆಧರಿಸಿದ ಥ್ರಿಲ್ಲರ್

ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್‌ ನಟನೆಯ ‘ಮೋಸಗಲ್ಲು’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಇಂದು ಟ್ರೈಲರ್‌ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಮೆರಿಕಾದಲ್ಲಿ ನಡೆದ ಬಹುದೊಡ್ಡ ಮೊತ್ತದ ಸೈಬರ್ ಕ್ರೈಂ ದರೋಡೆ ಪ್ರಕರಣ ಆಧರಿಸಿ ಹೆಣೆದ ಕತೆಯಿದು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದೊಂದಿಗೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

ಟ್ರೈಲರ್ ನೋಡಿದಾಗ ಮುಖ್ಯಪಾತ್ರಧಾರಿಗಳಾದ ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್‌ ಹಣಕ್ಕಾಗಿ ಏನು ಬೇಕಾದರೂ ಮಾಡುವವರಂತೆ ಕಾಣುತ್ತಾರೆ! ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟುಮಾಡುವ ಸನ್ನಿವೇಶಗಳಿದ್ದು, ಸಂಭಾಷಣೆಗಳಿಲ್ಲದೆ ಹಿನ್ನೆಲೆ ಸಂಗೀತವಷ್ಟೇ ಇರುವುದು ವಿಶೇ‍ಷ. ಕೆಲವು ಸ್ಟಂಟ್‌ಗಳಿದ್ದು, ಭರಪೂರ ಆಕ್ಷನ್‌ ದೃಶ್ಯಗಳೂ ಇರುತ್ತವೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತವೆ. ಜೆಫ್ರೀ ಗೀ ಚಿನ್‌ ನಿರ್ದೇಶನದ ಈ ಸ್ಟೈಲಿಶ್‌ ಸಿನಿಮಾ ಮುಂದಿನ ತಿಂಗಳಲ್ಲಿ ತೆರೆಕಾಣಲಿದೆ.

Categories
ಸಿನಿ ಸುದ್ದಿ

ಕ್ರಿಕೆಟ್‌ ಫೀಲ್ಡ್‌ ನಲ್ಲಿ ಮತ್ತೆ ತುಪ್ಪದ ಬೆಡಗಿ ಹೆಸರು – ಟಿ 10 ಗೆ ಬ್ರಾಂಡ್‌ ಅಂಬಾಸಡರ್‌ ಆದ ರಾಗಿಣಿ ದ್ವಿವೇದಿ

ನಟಿ ರಾಗಿಣಿ ಅವರ ಸೆಕೆಂಡ್‌ ಇನ್ನಿಂಗ್ಸ್‌ ಜೋರಾಗಿದೆ. ಡ್ರಗ್ಸ್‌ ಕೇಸ್‌ ಪ್ರಕರಣದಲ್ಲಿ ಅವರು ಜೈಲು ಪಾಲಾದ ನಂತರ ಅವರ ಕತೆ ಮುಗಿಯಿತು ಅಂತೆಲ್ಲ ಗುನುಗಿಕೊಂಡವರು ಶಾಕ್‌ ಆಗುವ ಹಾಗೆ ಕಲರ್‌ ಫುಲ್‌ ಜಗತ್ತಿನಲ್ಲಿ ಮತ್ತಷ್ಟು ಕಲರ್‌ ಫುಲ್‌ ಆಗಿಯೇ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಒಂದೆಡೆ ಸಿನಿಮಾ ಜರ್ನಿ ಶುರುವಾಗಿದೆ. ಸ್ವರ್ಣಲತಾ ಪ್ರೊಡಕ್ಷನ್‌ ನಲ್ಲಿ ವಿಶಾಲ್‌ ಶೇಖರ್‌ ನಿರ್ದೇಶನದ “ಕರ್ವ 3ʼ ನಲ್ಲಿ ರಾಗಿಣಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅದೀಗ ಅಧಿಕೃತವಾಗಿ ಅನೌನ್ಸ್‌ ಆಗಿದೆ.

ಹಾಗೆಯೇ ರಾಗಿಣಿ ಪೂರ್ಣ ಪ್ರಮಾಣದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಮತ್ತೆರೆಡು ಚಿತ್ರಗಳು ಇಷ್ಟರಲ್ಲಿಯೇ ಅನೌನ್ಸ್‌ ಆಗುವುದು ಕೂಡ ಗ್ಯಾರಂಟಿ ಆಗಿದೆ, ಈ ನಡುವೆಯೇ “ಕರ್ನಾಟಕ ಸ್ಟೇಟ್‌ ಫಿಜಿಕಲಿ ಚಾಲೆಂಜ್ಡ್‌ ಕ್ರಿಕೆಟ್‌ ಅಸೋಷಿಯೇಷನ್‌ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್‌ ಅಂಬಾಸಡರ್‌ ಆಗಿದ್ದಾರೆ.ಸಿನಿಮಾ ಅಚೆ ಸ್ಪೋರ್ಟ್‌ ನಲ್ಲೂ ರಾಗಿಣಿ ಅವರದ್ದು ಮುಂಚೂಣಿಯ ಹೆಸರು. ಈ ಹಿಂದೆ ಸಿಸಿಎಲ್‌ ಗೆ ಬ್ರಾಂಡ್‌ ಅಂಬಾಸಡರ್‌ ಆಗಿದ್ದರು.ಆನಂತರ ಬಳ್ಳಾಗಿ ಟಸ್ಕರ್‌ ಕುಸ್ತಿ ಟೀಮ್‌ ಗೆ ತಾವೇ ಮಾಲೀಕರು ಆಗಿದ್ದರು. 10 ಈಗ ಮತ್ತೆ ಕ್ರಿಡಾಂಗಣಕ್ಕೆ ರಾಗಿಣಿ ಎಂಟ್ರಿ ಆಗಿದ್ದಾರೆ.

“ಕರ್ನಾಟಕ ಸ್ಟೇಟ್‌ ಫಿಜಿಕಲಿ ಚಾಲೆಂಜ್ಡ್‌ ಕ್ರಿಕೆಟ್‌ ಅಸೋಷಿಯೇಷನ್‌ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್‌ ಅಂಬಾಸಡರ್‌ ಆಗಿರುವುದು ಕುತೂಹಲಕಾರಿ ಆಗಿದೆ. ಟಿ  ಕ್ರಿಕೆಟ್‌ ಪಂದ್ಯಾವಳಿ ಮಾರ್ಚ್ 11 ರಿಂದ ಮಾರ್ಚ್‌ 18 ರವರೆಗೆ ನೋಯ್ಡಾದ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. 28 ತಂಡಗಳು ಇದರಲ್ಲಿವೆ. ನಾಳೆ( ಫೆ.26) ಕ್ಕೆ ಟೀಮ್‌ ನ ಎಲ್ಲಾ ವಿವರ ಹೊರ ಬೀಳುತ್ತಿದೆ. ಹಾಗೆಯೇ ಪಂದ್ಯಾವಳಿ ಇನ್ನಷ್ಟು ವಿವರಗಳು ಗೊತ್ತಾಗಲಿವೆ. ಅದಕ್ಕಾಗಿಯೇ ಕೆಎಸ್‌ಪಿಸಿಸಿ ಪತ್ರಿಕಾಗೋಷ್ಟಿ ಕರೆದಿದೆ.

error: Content is protected !!